ಗರ್ಭಚೀಲ ಜಾರಿತೆಂದು ಬೆಳವಲವನ್ನು ಗರ್ಭಕ್ಕೆ ಸೇರಿಸಿದ್ದಳು ಆ ಹಳ್ಳಿಯಾಕೆ. ಅಂಗೈ ಅಗಲದ ಆ ಕಾಯಿಯನ್ನು ಗರ್ಭಚೀಲದ ಬಾಯಿಗೆ ನೂಕಿ ಕೂರಿಸುವುದೇ ಅಮಾನುಷ ಪದ್ಧತಿ. ಒಮದು ದಶಕದವರೆಗೂ ಅವಳ ಗರ್ಭದಲ್ಲಿಯೇ ಇದ್ದ ಬೆಳವಲ ಕಾಯಿಯನ್ನು ಆಚೆ ತೆಗೆಯಲು ಬಿಡಲೇ ಇಲ್ಲ. ಕೊನೆಗೂ ಅವಳ ಹಟ, ಅಜ್ಞಾನವೇ ಗೆದ್ದಿತು.

ಬೆಳವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ ಕನ್ನಡ ಚಿತ್ರಗೀತೆ ನೀವು ಕೇಳಿದ್ದೀರಲ್ಲ?

ಒಂದೊಂದು ಬೆವರ ಹನಿ ಮುತ್ತಾಯ್ತದೊ. ಆದರೆ ಮಡಿಲು ಸೇರಿದ ಬೆಳವಲದ ಕಾಯಿ ವೈದ್ಯವೃಂದಕ್ಕೆ ಬೆವರಿಳಿಸಿದ ಒಂದು ಸ್ವಾರಸ್ಯದ ಕತೆ ಓದುವಿರಾ?

ಸಣ್ಣಮ್ಮನಿಗೆ ಸುಮಾರು ೫೫ರ ಹರೆಯ. ಹೆಸರಿಗೆ ತಕ್ಕ ಹಾಗೆ ಸಣಕಲ ಶರೀರ. ಹೆಸರಘಟ್ಟದ ಹತ್ತಿರದ ಒಂದು ತಪಾಸಣೆ ಜರುಗಿತು. ಸ್ತ್ರೀರೋಗ ತಜ್ಞೆ ಮೊದಲು ಪರೀಕ್ಷೆಮಾಡಿದರು. ಸಣ್ಣಮ್ಮನ ತಿಂಗಳ ರಜೆ ಹತ್ತು ವರ್ಷಗಳ ಹಿಂದೆ ಶಾಶ್ವತವಾಗಿ ನಿಂತುಹೋಗಿತ್ತು ಎಂಬ ಅಂಶ ತಿಳಿಯಿತು. ಹಾಗೂ ಹೀಗೂ ಕೆಲವು ಪರೀಕ್ಷೆಮಾಡಿದ ಆ ತಜ್ಞೆ ಈ ಕೇಸು ತನಗೆ ಸಂಬಂಧಿಸಿಲ್ಲ ಎಂದರು. ಅನಂತರ ಶಸ್ತ್ರವೈದ್ಯರ ಸರದಿ. ಅವರೂ ಕೆಲವು ಪರೀಕ್ಷೆ ನಡೆಸಿದರು. ಏನೂ ತಿಳಿಯದಾಯಿತು. ಸಣ್ಣಮ್ಮನ ಹೊಟ್ಟೆನೋವು ಹೋಗಲಿಲ್ಲ. ವೈದ್ಯರು ತೀರಾ ಖಾಸಗಿಯಾಗಿ ಕೇಳಿದಾಗ ಸಣ್ಣಮ್ಮನಿಗೆ ಈ ಸಂಗತಿ ನೆನಪಾಯಿತು. ಅದೆಂದೇ ಎಲ್ಲರೂ ಭಾವಿಸಿದರು. ಉದರದ ವಿಶೇಷತಜ್ಞರ ಅಭಿಪ್ರಾಯ ಪಡೆದರು. ಕರುಳಿನ ತೊಂದರೆ ಊಹಿಸಿ ಆಂಟಿಬಯಾಟಿಕ್ ಸಲಹೆ ನೀಡಿದರು. ನಾಲ್ಕಾರು ದಿನದಲ್ಲಿ ಸಣ್ಣಮ್ಮ ಚೇತರಿಸಿಕೊಂಡರು. ಊರಿಗೆ ಮರಳಿದರು.

ಮೂರು ತಿಂಗಳು ಕಳೆಯಿತು. ಆಕೆ ಪುನಃ ಅದೇ ತೊಂದರೆಗೆ ಅದೇ ಶುಶ್ರೂಷಾಲಯಕ್ಕೆ ಬಂದರು. ಇದೀಗ ದಿಗಿಲು ಹತ್ತಿದ ವೈದ್ಯ ತಂಡ ಏನಿದು ತೊಂದರೆ ಎಂದು ಎಲ್ಲರೂ ಕಲೆತು ಚರ್ಚಿಸಿ ಉದರಭಾಗದಲ್ಲಿ ಸಂಪೂರ್ಣ ಸ್ಕ್ಯಾನಿಂಗ್ ಸಲಹೆ ನೀಡಿದರು. ಉದರಭಾಗದಲ್ಲಿ ಏನೇನೂ ತೊಮದರೆ ಇರಲಿಲ್ಲ. ಏನೇ ಆಗಲಿ ಎಂದು ಟೊಂಕದ ಪೆಲ್ವಿಸ್ ಭಾಗದ ಉದರದರ್ಶನ ಮಾಡಿದರೆ ಕ್ರಿಕೆಟ್ ಚೆಂಡಿನ ಗಾತ್ರದ್ದು ಏನೋ ಗೋಚರಿಸಿತು. ವೈದ್ಯ ತಂಡಕ್ಕೆ ದಿಗಿಲು. ಕೂಡಲೇ ಕ್ಷಕಿರಣ ನಡೆಸಿ ದೃಢೀಕರಿಸಿ ನೋಡುತ್ತಾರೆ. ಹೌದು ಚೆಂಡು. ಆ ಚೆಂಡು ಏನೆಂದು ಎಲ್ಲರಿಗೂ ಗೊಂದಲ, ಗಲಿಬಿಲಿ.

ಸಣ್ಣಮ್ಮನಿಗೆ ತುಂಬಾ ನಾಚಿಕೆಯ ಸ್ವಭಾವ. ಒಬ್ಬಳನ್ನೇ ಕೂರಿಸಿ ಕರೆಸಿ ಕೇಳಿದಾಗ ನಿಜ ತಿಳಿಯಿತು.

ಹತ್ತು ವರ್ಷಗಳ ಹಿಂದೆ ನಡೆದ ಕತೆ ಇದು. ಓದಿ ಹೌಹಾರದಿರಿ. ಸಣ್ಣಮ್ಮ ಹಳ್ಳಿಯ ಹೆಂಗಸು. ಆಳ ಬಾವಿಯಿಂದ ದಿನಕ್ಕೆ ಹತ್ತಾರು ಬಿಂದಿಗೆ ನೀರು ಹೊತ್ತುಹಾಕುವ ಶ್ರಮಜೀವಿ. ನಾಲ್ಕು ಮಕ್ಕಳ ತಾಯಿ. ಒಮ್ಮೆ ಅದೇನೋ ಗುಪ್ತ ಭಾಗದಿಂದ ಹೊರಕ್ಕೆ ಜೋತಾಡಿತಂತೆ. ಆಕೆಗೆ ಗಾಬರಿ.

ಯಾರಿಗೆ ಹೇಳಿದರೂ ಪ್ರಯೋಜನವಿಲ್ಲ ಎಂದು ಆಕೆಗೆ ಖಾತರಿ. ಏಕೆಂದರೆ ಕಿತ್ತು ತಿನ್ನುವ ಬಡತನ. ಒಪ್ಪೊತ್ತಿನ ಕೂಳಿಗೂ ತತ್ವಾರ. ಇನ್ನು ವೈದ್ಯಕೀಯ ನೆರವು ಪರೀಕ್ಷೆಯ ಮಾತೆಲ್ಲಿಯದು. ಸಣ್ಣಮ್ಮನ ಮೈಹೊರಬಂದಿರುವ ತೊಂದರೆಗೆ ಯಾರೋ ಒಂದು ತಾತ್ಕಾಲಿಕ ಪರಿಹಾರ ಒದಗಿಸಿದರು. ಆಗ ನಡೆದ ಸಂಗತಿ ಇಷ್ಟೆ.

ಮೈ ಜಾರಿದ ಭಾಗವನ್ನು ಅರ್ಥಾತ್ ಜಾರಿದ ಗರ್ಭಕೋಶವನ್ನು ಒಳಕ್ಕೆ ತಳ್ಳಿ ಒಂದು ಬೇಲದ ಕಾಯಿಯನ್ನು ಇರಿಸಲಾಯಿತು. ಮತ್ತೆ ಆ ಚೀಲ ಜಾರದಂತೆ ಕಾಯಿ ತಡೆಯಿತು. ಸಣ್ಣಮ್ಮನ ಮಡಿಲಿನಲ್ಲಿ ಹತ್ತು ವರ್ಷ ಈ ಬೇಲದ ಕಾಯಿಗೆ ವಾಸ. ಅದು ಕೊಳೆಯಲಿಲ್ಲ. ಉರುಳಲಿಲ್ಲ.

ಲಂಬೋದರನಿಗೆ ಕಪಿತ್ವಜಂಬೋ ಫಲ ಸಾರ ಭಕ್ಷಿತಂ ಎನ್ನುತ್ತೇವಲ್ಲ. ಆನೆ ಕಪಿತ್ಥ ಅಂದರೆ ಬೇಲದ ಹಣ್ಣು ತಿಂದು ಇಡಿಯ ಹಣ್ಣು ಪುಡಿಯಾಗಿಸದೆ ಸಾರ ಅರಿಗಿಸುವುದಂತೆ. ಆನೆ ಪ್ರೀತಿಸುವ ಇದಕ್ಕೆ ಎಲಿಫೆಂಟ್ ಆಪಲ್ ಎಂಬ ಹೆಸರಿದೆ. ಹಾಗೆ ಆನೆ ಮೊಗದ ಗಣಪನಿಗೆ ಈ ಹಣ್ಣಿನ ನೈವೇದ್ಯ. ರಾಮನವಮಿಗೆ ಪಾನಕದ ಸೌಭಾಗ್ಯ. ಗಟ್ಟಿ ಕವಚದ ಈ ಹಣ್ಣು ಈ ಮಹಾತಾಯಿಯ ಉದರದಲ್ಲಿ ಕಿವಿಚಿ ದ್ವಿತೀಯ ಹಂತದ್ದು ಆಗಿದ್ದರೆ ಅದನ್ನು ವೈದ್ಯಕೀಯ ವಲಯದಲ್ಲಿ ಪುರಂದರೆ ವಿಧಾನ ಎಂಬ ಲಘು ಶಸ್ತ್ರಚಿಕಿತ್ಸೆ ಮೂಲಕ ಎಳೆದು ಇರಿಸಿ ಹೊಲಿಗೆ ಹಾಕುವ ವಿಧಾನವಿದೆ. ಅಂದಹಾಗೆ ಪುರದಂರೆ ವಿಧಾನವನ್ನು ಕನ್ನಡದ ವೈದ್ಯರು ಹುಟ್ಟುಹಾಕಿದ್ದು. ಇಂದು ಆ ವೈದ್ಯರು ಬೆಳಗಾವಿ ಬಿಟ್ಟುಮುಂಬೈ ಸೇರಿದ್ದಾರೆ. ಆದರೂ ಆ ವಿಧಾನ ಪ್ರಚಲಿತ. ಬೆಳವಲದ ಬೆಳಗಾವಿ ಬಿಟ್ಟು ಮುಂಬೈ ಸೇರಿದ್ದಾರೆ. ಆದರೂ ಆ ವಿಧಾನ ಪ್ರಚಲಿತ. ಬೆಳವಲದ ಕಾಯಿಯನ್ನು ಒಳತಳ್ಳುವುದೆಂದರೆ ವಾಸ್ತವವಾಗಿ ಇದೇ ವಿಧಾನದ ಪಡಿನೆರಳು ಎನ್ನಬಹುದಾದರೂ ಜನಪದರ ಈ ಅತಿಮಾನುಷ ಚಿಕಿತ್ಸೆಯಲ್ಲಿ ಅಪಾಯದ ಕರಿಛಾಯೆ ಇದೆ ಎನ್ನುತ್ತಾರೆ. ತುಮಕೂರು ಸಿದ್ಧಾರ್ಥ ಮೆಡಿಕಲ್ ಕಾಲೇಜು ಪ್ರಾಧ್ಯಾಪಕ ಡಾ.ಸಿ.ಎಸ್.ಬೆಳಗಾವಿ. ನನಗೆ ಇಂಥ ವಿಷಯ ತಿಳಿಸಿದರು, ಈ ವೃತ್ತಾಂತದ ಮೂಲ ಮಾಹಿತಿದಾರರೂ ಅವರೇ.

ವಿಷಾದದ ಸಂಗತಿ ಎಂದರೆ ಸಣ್ಣಮ್ಮ ಮಾತ್ರ ಆ ಹಣ್ಣು ತೆಗೆಸಲು ಕೊನೆಗೂ ಒಪ್ಪಲಿಲ್ಲ. ಡಾ.ಬೆಳಗಾವಿ ಅರ ಮಡದಿ ಮಾರುಕಟ್ಟೆಯಿಂದ ಪ್ರಾತ್ಯಕ್ಷಿಕೆಗೆಂದೇ ಈ ಹಣ್ಣು ಖರೀದಿಸಿ ತಂದು ಇತರ ವೈದ್ಯರಿಗೆ ತೋರಿಸಿದರು. ಅನಂತರವೇ ಇತರರೆಲ್ಲ ನಂಬಿದರಂತೆ.

ಆದರೆ ಹಣ್ಣು ತೆಗೆಯಲು ಹೆಣ್ಣಿನ ಮನವೊಲಿಸಲು ಆಗದ್ದು ವೈದ್ಯರ ತಂಡಕ್ಕೂ ಅವಮಾನದ ಸಂಗತಿ ಎನಿಸಿತು. ಆದರೆ ನಮ್ಮ ಮೌಢ್ಯಕ್ಕೆ ಸಹ ಕೊನೆ ಮೊದಲಿಲ್ಲ. ಅಷ್ಟೇ ಅಲ್ಲ. ಇಂಥ ವಿಧಾನಗಳ ನಿರಪಾಯಕತೆ ಅಳೆಯುವ ಸಾಧನ ಸವಲತ್ತು ಸಹ ನಮ್ಮಲ್ಲಿಲ್ಲ. ಇದು ಅಪಾಯದ ಉಪಾಯವಲ್ಲ ಎಂದು ರುಜುವಾತು ಪಡಿಸಲು ಮುಂದೆ ಬರುವವರಿಲ್ಲ. ಸಣ್ಣಮ್ಮನ ಸರಳ ವಾದಕ್ಕೆ ನಮ್ಮ ಬಳಿ ಉತ್ತರವಿಲ್ಲ. ಸ್ವಾಮಿ, ನನಗೇನೂ ಆ ಕಾಯಿಲೆಯಿಂದ ತೊಂದರೆ ಇಲ್ಲ. ಹತ್ತುವರ್ಷ ಹಾಯಾಗಿದ್ದೇನೆ. ನಾನೇಕೆ ತೆಗೆಸಲಿ? ಎಂದಳಾಕೆ. ಯಾರು ಸರಿ? ನೀವೇ ಹೇಳುವಿರಾ?

ವೈದ್ಯಸಾಹಿತಿಯಾಗಿನನ್ನಅನುಭವ
ಸಂಪಾಕರೆ ಕೃತಿಚೌರ್ಯವನ್ನು ಮಾಡಿದರೆ!?
– ಡಾ. ಸತ್ಯನಾರಾಯಣ ಭಟ್

ಪ್ರತಿಫಲ ಇಲ್ಲದ ಶ್ರಮವಿದು. ಆದರೂ ನಮ್ಮ ಹುಟ್ಟಿನಿಂದ ಅಂಟಿದ ಚಟವನ್ನು ಬಿಡುವುದು ಕಷ್ಟ ಪ್ರತಿಷ್ಠಿತ ದಿನಪತ್ರಿಕೆಗಳು ಇಸಂ/ಮರ್ಜಿಗಳತ್ತ ದೃಷ್ಟಿ ನೆಟ್ಟಿರುತ್ತವೆ. ಒಮ್ಮೆ ಹೀಗಾಯಿತು. ಮಧುಮೇಹ ದಿನಾಚರಣೆಯಂತ ಸಂದರ್ಭವದು. ಬಹಳ ಮುಂಚಿತವಾಗಿಯೇ ದಿನಪತ್ರಿಕೆಯ ಮೇಲೆ ನಂಬಿಕೆ ಇರಿಸಿ ವಿಶೇಷ ಲೇಖನ ಬರೆದು ಕಳುಹಿಸಿದೆ. ಆ ದಿನದಂದು ಅದೇ ವಿಷಯದ ಮೇಲೆ ಇನ್ನೊಬ್ಬರ ಲೇಖನ ಪ್ರಕಟವಾಗಿ ‘ಶಾಕ್’ ಆಯಿತು. ಮೂಲ ಲೇಖನದ ಆಶಯ, ಪ್ರಸ್ತುತತೆ ಎಲ್ಲವೂ ವ್ಯರ್ಥವಾಯಿತು. ಸಂಪಾದಕನ ಬಗ್ಗೆ ಅನುಕಂಪವಾಯಿತು. ಏನೊಂದೂ ನುಡಿಯದೆ ಸುಮ್ಮನಾಗಿಬಿಟ್ಟೆ, ಮತ್ತೊಂದು ಅಂಥದೇ ಸಂದರ್ಭದಲ್ಲಿ ನ್ನನ ಮೂಲಲೇಖನದ ಆಧಾರದ ಮೇಲೆ ಸ್ವತಃ ಸಂಪಾದಕನೇ ಅದೇ ಸಂಗತಿ ಮೇಲೆ ಹೊಸ ಲೇಖನ ಬರೆದು ತನ್ನ ಹೆಸರು ಸಹಿತ ಪ್ರಕಟಿಸಿಯೇ ಬಿಟ್ಟ! ಇಂತಹ ಆ ‘ಚಾತುರ್ಯ’ ಆಗಾಗ ಸಂಭವಿಸುತ್ತವೆ. ಮೈಚರ್ಮ ಒರಟು ಮಾಡಿಕೊಳ್ಳುವುದೊಂದೇ ಹಾದಿ. ಕೃತಿ ಪ್ರಕಟಿಸ ಹೊರಟರೆ ಮತ್ತಷ್ಟು ಪ್ರಮಾದ. ಹಣ, ಸಮಯ, ಸಂಪನ್ಮೂಲ ವ್ಯರ್ಥ, ಹಾಗಾಗಿ ಆದ(ದೊ)ಡ್ಡತನಕ್ಕಿಂತ ನಮ್ಮ ಕೃತಿ ಪ್ರಕಾಶನಿಗೆ ಧಾರಿ (ಮಾರಿ) ಬಿಡುವುದೇ ಕ್ಷೇಮ. ಕೆಲವರು ಶೇಕಡಾ ಹತ್ತರ ರಾಯಧನ ಭಿಕ್ಷೆ ನೀಡುತ್ತಾರೆ. ಉಳಿದವರು ಅದೇ ಮೊತ್ತದೆ ಪುಸ್ತಕ ‌ಪ್ರತಿ ನೀಡುತ್ತಾರೆ. ಅದನ್ನು ಮಾರಿ ಹಣ ಪಡೆಯಲಾದೀತೆ ನೀವೇ ಹೇಳಿ. ಸವಾಲು ಒಂದೇ-ಒಂದು ಬರೆಯುವುದು ಅಥವಾ ಸುಮ್ಮನಿರುವುದು.

* * *