ಮನುಷ್ಯ ಬದುಕಿನಲ್ಲಿ ಅವನ ಸ್ವಭಾವ, ಸ್ವಭಾವದಲ್ಲಿ ಅವನ ಬೇಕು ಬೇಡಗಳ ಆಟ ಬ್ರಹ್ಮಾಂಡದಷ್ಟೇ ನಿಗೂಢ. ಕಾಣಿಸುವುದು ಒಂದಾದರೆ, ಇರುವುದು ಇನ್ನೊಂದು. ನಮ್ಮ ಬೇಕುಗಳಿಗೆ ಅಂತ್ಯವೇ ಇಲ್ಲ ಎಂಬಂತೆ ಕಾಣಿಸಿದರೂ ಅದಕ್ಕೆ ಹಲವಾರು ಅವ್ಯಕ್ತ ಎಲ್ಲೆಗಟ್ಟುಇರುತ್ತದೆ. ಏನೇನೋ ಬೇಕು ನಿಜ. ಅದು ಹೀಗಿರಬೇಕು, ಹಾಗಿರಬೇಕು ಎಂಬ ಬೇಡಗಳು ಆದರೆ ಗರ್ಭದೊಳಗಿರುತ್ತವೆ.

ಕೆಲವೊಮ್ಮೆ ಬೇಕುಗಳು ಎದುರಿಗೆ ಸಿಕ್ಕಾಗ ಅದು ಬೇಡವೆನಿಸುತ್ತದೆ. ಇಲ್ಲವೋ ಅದು ಬೇಡ ಇನ್ನೊಂದು ಬೇಕು ಎನಿಸುತ್ತದೆ. ಹಾಗೆಯೇ ನಮ್ಮ ಬೇಡಗಳೂ ವಿಚಿತ್ರವಾಗಿರುತ್ತವೆ.

ಎಂದೋ ಬೇಡ ಎಂದು ಅಂದುಕೊಂಡಿದ್ದು ಎದುರಿಗೆ ಬಂದಾಗ ಬೇಕೇ ಬೇಕು, ಅದಿಲ್ಲದೇ ಬದುಕಿರಲಾರೆ ಎಂದೆನಿಸಿಬಿಡುತ್ತದೆ. ಹಾಗೆಯೇಒಂದನ್ನು ಬೇಡವೆಂದಾಗ, ಅದರಿಂದ ಅವ್ಯಕ್ತವಾಗಿ ಇಲ್ಲವೇ ಅಪ್ರತ್ಯಕ್ಷವಾಗಿ ಇನ್ನೊಂದಷ್ಟು ಬೇಡವಾಗಿಬಿಡುತ್ತವೆ. ಈ ಬುದ್ಧಿ, ಮನಸ್ಸಿನ ಆಟದಲ್ಲಿ ಒಂದನ್ನು ಬೇಡವೆಂದು ಮನಸ್ಸು ಹತ್ತಿಕ್ಕಿದಾಗ, ಕೆಲವು ಬೇಕಾದವುಗಳು ಹತ್ತಿಕ್ಕಲ್ಪಟ್ಟು ಆಗಬೇಕಾಗಿರುವುದು ಆಗದೇನೇ ಹೋಗಬಹುದು.

ಎಲ್ಲವೂ ಒಗಟಿನ ರೀತಿಯಲ್ಲಿವೆಯಲ್ಲವೆ? ಹೌದು ನಮ್ಮ ಮನಸ್ಸಿನ ಅಂತರಾಳದಲ್ಲಿ ನಮಗೆ ಗೊತ್ತಿಲ್ಲದೆ ನಡೆಯುವ ಬೇಕು ಬೇಡಗಳ ಜೂಟಾಟವು ನನ್ನ ಮಟ್ಟಿಗೆ ಯಾವಾಗಲೂ ಒಂದು ಒಗಟಿನ ರೀತಿಯಲ್ಲೇ ಇದೆ. ನಾನು ತಿಳಿದಷ್ಟು ಅದು ತಿಳಿಯಾಗುವುದರ ಬದಲಿಗೆ ಅಭೇದ್ಯವಾಗಿದೆ.

ಈ ಒಗಟನ್ನು ಒಂದು ಹಂತದವರೆಗೆ ನನ್ನ ಅರ್ಥವಾಗದಂತೆ ಮಾಡಿದ ಒಂದು ಪ್ರಕರಣವನ್ನು ನಿಮ್ಮ ಮುಂದಿಡುತ್ತಿದ್ದೇನೆ.

ಆಕೆ ನನ್ನ ಬಳಿಗೆ ಬಂದಾಗ ಅವಳ ಬಳಿ ಎಲ್ಲವೂ ಇತ್ತು. ಅವಳಿಗೆ ತಾಯಿಯಾಗಬೇಕಿತ್ತು.

ಆಕೆ ತಾಯಿಯಾಗಬೇಕಾದರೆ ಇರಬೇಕಾದ ಎಲ್ಲವೂ ಇತ್ತು. ಮೇಲ್ನೋಟಕ್ಕೆ ಯಾವುದೇ ರೀತಿಯ ನ್ಯೂನತೆ ಇರಲಿಲ್ಲ. ಅವಳು ಮಾಡಿಸದ ಟೆಸ್ಟ್‌ಗಳಿರಲಿಲ್ಲ, ಆಕೆಯಲ್ಲಾಗಲೀ ಅವಳ ಪತಿಯಲ್ಲಾಗಲೀ ಯಾವುದೇ ದೈಹಿಕ ಕೊರತೆ ಇರಲಿಲ್ಲ. ವಿಶೇಷ ಏನೆಂದರೆ ಅದನ್ನು ತಿಳಿದುಕೊಳ್ಳುವುದಕ್ಕೆ ಅವರಿಗೆ ಇನ್ನೊಬ್ಬರ ಸಹಾಯ ಬೇಕಾಗಿರಲಿಲ್ಲ. ಏಕೆಂದರೆ ಅವಳು ವಯದ್ಯೆ. ಅವಳ ಗಂಡನೂ ವೈದ್ಯ. ಅವರ ಕುಟುಂಬದಲ್ಲೂ ವೈದ್ಯರಿದ್ದರು. ಆದರೂ ೨೫ರ ಹರೆಯದ ಅವಳಿಗೆ ಮದುವೆಯಾಗಿ ನಾಲ್ಕು ವರ್ಷವಾಗಿದ್ದರು ಜೊತೆಗೆ ಔಷಧೋಪಚಾರಗಳಿದ್ದರೂ ಮಕ್ಕಳಾಗಿರಲಿಲ್ಲ. ಅವರಿಬ್ಬರದೂ ಪ್ರೇಮವಿವಾಹ. ಒಂದೇ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ಪರಸ್ಪರ ಆಕರ್ಷಿತರಾಗಿ ತಂದೆ ತಾಯಂದಿರ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದರು. ಅವಳ ಪತಿಯ ಸ್ಪರ್ಮ್ ಕೌಂಟ್ ಕೂಡಾ ನಾರ್ಮಲ್ಲಾಗಿತ್ತು. ಬೆಂಗಳೂರಿನ ಪ್ರಸಿದ್ಧ ಗರ್ಭಶಾಸ್ತ್ರತಜ್ಞರು ಈ ದಂಪತಿಗಳ ಸಮಸ್ಯೆಗೆ ಪರಿಹಾರ ಕೊಡಲಾಗಿರಲಿಲ್ಲ. ಅವರ ಹಾರ್ಮೋನ್‌ಗಳ ಸ್ಥಿತಿಗತಿಯ ಅಧ್ಯಯನದ ಜೊತೆಗೆ ಮತ್ತಷ್ಟು ಟೆಸ್ಟ್‌ಗಳು ಮಾಡಿಸಿದರೂ ಕಾರಣ ಪತ್ತೆಯಾಗಿರಲಿಲ್ಲ. ಸಾಲದ್ದಕ್ಕೆ ಕೃತಕ ಗರ್ಭಧಾರಣೆ ಕ್ರಮಗಳನ್ನೂ ಪ್ರಯತ್ನಿಸಲಾಗಿತ್ತು. ಹಣ ಖರ್ಚಾಯಿತೇ ವಿನಾಃ ಫಲ ಸಿಕ್ಕಿರಲಿಲ್ಲ. ಹಣಕ್ಕಿಂತ ಆಕೆಯ ಮಾಸಿಕ ಚಕ್ರದ ವಿಷಯದ ಅವಲೋಕನ. ಅದೂ ಓವ್ಯುಲೇಶನ್ ಸಂದರ್ಭದಲ್ಲಿ ನಡೆಯಬೇಕಾಗಿದ್ದು ಆ ಸಂದರ್ಭದಲ್ಲಿ ಅವಳು ತೀವ್ರ ಮಾನಸಿಕ, ದೈಹಿಕ ಒತ್ತಡಕ್ಕೆ ಒಳಗಾಗಬೇಕಾಗಿತ್ತು. ಜೊತೆಗೆ ಪ್ರಯತ್ನದ ಫಲವಾಗಿ ವೈಫಲ್ಯ ಎದುರಾದಾಗ ಉಂಟಾಗುವ ನಿರಾಸೆ ತರುವ ಬೇಸರ, ವಿವಂಚನೆ, ವಿವಶತೆ ಯಾರಿಗೇ ಆಗಲಿ ತ್ರಾಸದಾಯಕ.

ಹೇಗೆ ನೋಡಿದರೂ ಎಷ್ಟು ಹುಡುಕಿದರೂ, ಆಕೆ ತಾಯಿಯಾಗದಿರಲು ಕಾರಣ ಕಾಣಸಲಿಲ್ಲ. ಮೇಲ್ನೋಟಕ್ಕೆ ಕಾಣುವ ಕಾರಣಗಳು ಇಲ್ಲದಿರುವ ಸಂದರ್ಭದಲ್ಲಿ ಆಳವಾದ ಹುಡುಕಾಟ ಅಗತ್ಯ ಎನಿಸಿತು. ಜೊತೆಗೆ ಹೋಮಿಯೋಪಥಿಯ ಜನಕ ಡಾ. ಹಾನಿಮನ್ನರ ಒಂದು ಸೂಕ್ತಿ ನೆನಪಿಗೆ ಬಂತು. ನಿರಂತರವಾದ ಆತಂಕ, ದುಗುಡ, ಚಿಂತೆ, ಮಾನಸಿಕ ಕಿರುಕುಳ ಭಯ ಇತ್ಯಾದಿಗಳು ದೈಹಿಕ ಆರೋಗ್ಯದ ಒಳಹೊಕ್ಕು ಬೀರಬಲ್ಲ ಪರಿಣಾಮಗಳ ಬಗ್ಗೆ ವೈದ್ಯನಿಗೆ ಅರಿವಿರಬೇಕು. ಮಾನಸಿಕ ಕಾರಣದಿಂದ ಪ್ರಚೋದಿತ ದೈಹಿಕ ತೊಂದರೆಗಳ ಸಂದರ್ಭದಲ್ಲಿ ಸೂಕ್ತ ಹಿತೋಕ್ತಿಗಳಿಂದ ಮಾನಸಿಕ ಚಿಕಿತ್ಸೆಯ ಜೊತೆಗೆ ಸಿಮಿಲಿಮಂ ಚಿಕಿತ್ಸೆ ಪರಿಣಾಮಕಾರಿಯಾಗುತ್ತದೆ.

ಅವಳ ಪೂರ್ವಚರಿತ್ರೆಯ ಪುನರಾವಲೋಕನದಲ್ಲಿ ಅವಳ ಮನಸ್ಸಿನ ಮೇಲೆ ಪ್ರಭಾವ ಬೀರಿದ ಕಳಚಿಕೊಂಡಿರುವ ಎಳೆಯನ್ನು ಹುಡುಕಿ ತೆಗೆಯಬೇಕಿತ್ತು. ನಿಧಾನವಾಗಿ ಅವಳ ಬದುಕಿನ ಪುಟಗಳು ಬಿಚ್ಚಿ ತೋರಿಸುವಂತೆ ಮಾಡಿದೆ.

ಮೊದಲೇ ಹೇಳಿದಂತೆ ಅವಳು ಮೆಡಿಕಲ್ ಕಲಿಯುತ್ತಿದ್ದಾಗ ತನ್ನ ಸಹಪಾಠಿಯಾಗಿದ್ದವನನ್ನು ಪ್ರೀತಿಸಿ ಮದುವೆಯಾಗಿದ್ದಳು. ಕಾಲೇಜಿನಲ್ಲಿದ್ದ ಐದು ವರ್ಷ ಅವಧಿಯಲ್ಲಿ ಆಟಪಾಠಗಳಲ್ಲಿ ಮುಂದೆ ಇದ್ದದ್ದ ಮಾತ್ರವಲ್ಲದೆ ಕಾಲೇಜಿನ ಬ್ಯೂಟಿ ಕ್ವೀನ್ ಎನಿಸಿಕೊಂಡಿದ್ದ ಅವಳನ್ನು ಮದುವೆಯಾಗುವುದಕ್ಕೆ ಹಾತೊರೆಯುತ್ತಿದ್ದವರು ಬಹಳ ಜನ ಇದ್ದರು. ಅವರಲ್ಲಿ ತಾನು ಇಷ್ಟಪಟ್ಟವನನ್ನು ತನ್ನ ಷರತ್ತುಗಳಿಗೆ ಒಪ್ಪಿದ ಮೇಲೆಯೇ ಮದುವೆಗೆ ಒಪ್ಪಿದ್ದಳು.

ಹೈದರಾಬಾದ್ ಕರ್ನಾಟಕದಿಂದ ಬಂದಿದ್ದ ಅವನು ಬೆಂಗಳೂರಿನಲ್ಲಿಯೇ ಸಂಸಾರ ಮಾಡಬೇಕು. ಯಾವುದೇ ಕಾರಣಕ್ಕೆ ತನ್ನ ಸ್ವಂತ ಊರಿಗೆ ಮರಳುವ ಮಾತಾಡಬಾರದು ಎಂದವಳು ಕಂಡೀಷನ್ ಹಾಕಿದಾಗ ಅವನು ಒಪ್ಪಿಕೊಂಡಿದ್ದ. ಮದುವೆ ಮುಗಿದು ಹುಚ್ಚು ಇಳಿದ ಮೇಲೆ ಅವನಿಗೆ ಊರ ಕಡೆ ಸೆಳೆತ ಆರಂಭವಾಯಿತು. ಏಕೆಂದರೆ ಅವನು ಬೆಂಗಳೂರಿನಲ್ಲಿ ಪ್ಯ್ರಾಕ್ಟೀಸ್ ಮಾಡುವ ಪ್ರಯತ್ನ ಯಶಸ್ವಿಯಾಗಲಿಲ್ಲ. ಸುಮ್ಮನೆ ಎಷ್ಟು ದಿನ ನೊಣ ಹೊಡೆಯುವುದು. ಊರಲ್ಲಿ ತಂದೆ ಮಾಡಿಟ್ಟ ಆಸ್ತಿಪಾಸ್ತಿ ಜೊತೆಗೆ ಒಂದು ನರ್ಸಿಂಗ್ ಹೋಂ ಕೂಡ ಇತ್ತು. ಅವುಗಳನ್ನು ನೋಡಿಕೊಂಡಿದ್ದರೆ ಸಾಕಿತ್ತು. ಅವನು ನಿಧಾನವಾಗಿ ಅಂದರೆ ಮೊದಲು ತಂದೆ ಮೈಗೆ ಆರಾಮಿಲ್ಲ. ನೋಡಿಕೊಂಡು ಬರುತ್ತೇನೆ ಎಂಬ ರೀತಿಯ ನೆವ ಹೇಳಿಕೊಂಡು ತನ್ನೂರಲ್ಲಿ ಹೆಚ್ಚು ಕಾಲ ಇರುವುದಕ್ಕೆ ಆರಂಭಿಸಿದ. ತುಂಬಾ ಹಿಂದುಳಿದ ಪ್ರದೇಶವಾಗಿದ್ದ ಅವನೂರಿಗೆ ಒಮ್ಮೆ ಸುಮ್ಮನೆ ನೋಡಲೆಂದು ಹೋಗಿದ್ದ ಅವಳು ವಾಕರಿಸಿಕೊಂಡು ವಾಪಸ್ಸು ಬಂದಿದ್ದಳು. ಗಂಡ ಎಷ್ಟು ಹೇಳಿದರೂ ಅವನ ಜೊತೆ ಮರಳಲು ಒಪ್ಪಲಿಲ್ಲ. ಬದಲಿಗೆ ಗಂಡ ಹೆಂಡತಿಯರ ನಡುವೆ ಜಗಳ ಹೆಚ್ಚಾಯಿತು. ಸಾಲದು ಎಂಬಂತೆ ಪ್ಯ್ರಾಕ್ಟೀಸ್ ಮಾಡಿಕೊಂಡು ತನ್ನ ಕಾಲ ಮೇಲೆ ನಿಂತು ಬದುಕು ರೂಪಿಸಿಕೊಳ್ಳಬೇಕೆಂದು ಅವಳು ಮಾಡಿದ ಪ್ರಯತ್ನ ಕೂಡ ಕೈಗೊಡಲಿಲ್ಲ. ಕಾಲೇಜಿನ ದಿನಗಳಲ್ಲಿ ತನ್ನ ಸಹಪಾಠಿಗಳ ಮತ್ತು ಗುರುಗಳ ಮೆಚ್ಚುಗೆಗೆ ಪಾತ್ರವಾಗಿದ್ದ, ಬುದ್ದಿವಂತಿಕೆ ಎಷ್ಟೋ ಸಲ ಪ್ರಯೋಜನಕ್ಕೆ ಬರುವುದಿಲ್ಲ. ಅದಕ್ಕೆ ಬೇಕಾಗಿರುವುದು ಬೇರೆಯೇ. ಕೆಲವರು ಅದನ್ನು ಅದೃಷ್ಟ ಎನ್ನುತ್ತಾರೆ ಎನ್ನುವುದು ಅವಳ ಅನುಭವಕ್ಕೆ ಬಂದಿತ್ತು. ಕೊಟ್ಟ ಮಾತಿಗೆ ತಪ್ಪಿದ್ದು ಮಾತ್ರವಲ್ಲದೆ ಎಕ್ಸ್‌ಪ್ರೆಸ್ ರೈಲಿನಂತೆ ಹೋಗುತ್ತಿದ್ದ ತನ್ನ ಬದುಕಿನ ಬಂಡಿ ದಾರಿ ತಪ್ಪಿಸಿದ್ದು ಅವಳಲ್ಲಿ ತನ್ನ ಗಂಡನ ಬಗ್ಗೆ ಕೋಪ. ಅಸಹನೆ ಸಹಿಸಿಕೊಳ್ಳುವುದು ಕಷ್ಟವಾಗಿತ್ತು. ಅವಳ ಗಂಡ ಮಾಡಿದ್ದು ಯಾವುದೇ ಇರಲಿ, ಅವಳ ಮನಸ್ಸಿಗೆ ಒಪ್ಪಿಗೆಯಾಗದಿದ್ದಾಗ ಅವಳ ದೇಹ ಅವನ ವೀರ್ಯವನ್ನು ಒಪ್ಪಿಕೊಳ್ಳುತ್ತಿಲ್ಲ. ಅದರಿಂದ ಅವಳ ಗರ್ಭಧಾರಣೆ ಸಾಧ್ಯವಾಗುತ್ತಿಲ್ಲ ಎಂದೆನಿಸಿತು.

ಅವಳಲ್ಲಿ ಅಸಹನೆ ಮತ್ತು ವಿರಸ ಮಡುಗಟ್ಟಿ ಗಂಡನಿಂದ ಬರುವ ಯಾವುದೇ ಒಂದಕ್ಕೆ ಅವಳಲ್ಲಿ ಪ್ರವೇಶವಿಲ್ಲದ ರೀತಿ ಗೋಡೆಯನ್ನು ಕಟ್ಟಿತು. ಜೊತೆಗೆ ಅವಳು ಮೊದಲಿನಿಂದಲೂ ತನಗೆ ಒಪ್ಪಿಗೆಯಾಗದ ಏನನ್ನೂ ಒಪ್ಪುತ್ತಿರಲಿಲ್ಲ. ತಾನು ಹಾಕಿದ ಗೆರೆ ಒಳಗೆ ತನ್ನ ಗಂಡನ ಜೊತೆ ತನ್ನ ಬದುಕನ್ನು ರೂಪಿಸಿಕೊಳ್ಳಲಾಗದ ಸ್ಥಿತಿ ಅವಳು ಬೆಳೆಸಿಕೊಂಡು ಬಂದಿದ್ದ ಅಹಂ ಗೆ ದೊಡ್ಡಗಾಯ ಮಾಡಿತ್ತು. ಅವಳ ನೇಟ್ರಿಂಮ್ಯುರ್ ವ್ಯಕ್ತಿತ್ವವವನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತಿ ಹದಿನೈದು ದಿನಕ್ಕೊಮ್ಮೆ ಔಷಧಿಯನ್ನು ಅವಳಿಗೆ ಕೊಡಲಾರಂಭಿಸಿದೆ. ಅವಳ ವ್ಯಕ್ತಿತ್ವದಲ್ಲಿ ಬದಲಾವಣೆಯಾಗುವುದರ ಜೊತೆಗೆ ನಾಲ್ಕು ತಿಂಗಳಲ್ಲಿ ಅವಳ ಮುಟ್ಟು ನಿಂತಿತ್ತು. ಮುಂದೆ ಒಂದು ಆರೋಗ್ಯವಂತ ಗಂಡು ಮಗುವಿನ ತಾಯಿಯಾದಳು. ಮಾತ್ರವಲ್ಲ ತನ್ನ ಗಂಡನ ಜೊತೆ ಅವನದೇ ಊರಿನಲ್ಲಿ ವಾಸಿಸುವುದಕ್ಕೆ ತೊಡಗಿ ಇಂದಿಗೆ ನಾಲ್ಕು ವರ್ಷಗಳಾಗಿವೆ.

ಒಂದು ಹೆಣ್ಣಿಗೆ ಮಹತ್ತ್ವಪೂರ್ಣವಾದ ತಾಯ್ತತನದ ಅನುಭವವನ್ನು ಒದಗಿಸಿದ್ದರ ಜೊತೆಗೆ ಅವಳ ಬದುಕಿನ ಭಾರ ಇಳಿಸಿದ್ದು ಹೋಮಿಯೋಪಥಿಯ ದೊಡ್ಡ ಸಾಧನೆ. ಇದರಿಂದ ಮಕ್ಕಳಾಗದಿರಲು ಬರೀ ಮಾನಸಿಕ ಕಾರಣಗಳಿರುತ್ತವೆ ಎಂದಾಗಲೀ, ಹೋಮಿಯೋಪಥಿಯು ಬರೀ ಮಾನಸಿಕ ಅಡಚಣೆಗಳಿದ್ದರೆ ಮಾತ್ರ ಪರಿಣಾಮಕಾರಿ ಎಂದು ಯಾರೂ ಅಂದುಕೊಳ್ಳಬೇಕಾಗಿಲ್ಲ.

ವೈದ್ಯಸಾಹಿತಿಯಾಗಿನನ್ನಅನುಭವ
ಓದುಗನನ್ನು ಎತ್ತರೆತ್ತರಕ್ಕೆ ಬೆಳೆಸಬೇಕು
– ಡಾ
. ಬಿ.ಟಿ. ರುದ್ರೇಶ್ವೈದ್ಯ ಸಾಹಿತಿಯಾಗಿ ನನ್ನ ಅನುಭವ ಎಂಬ ಲೇಖನ ಬರೆಯಲು ಪ್ರಾರಂಭಿಸಿದಾಗ ಕೆಲವು ಪ್ರಶ್ನೆಗಳು ಸಹಜವಾಗಿ ಮೂಡಿದವು. ನಾನು ವೃತ್ತಿಯಿಂದ ವೈದ್ಯ. ನನಗಿರುವ ಬೇರೆ ಬೇರೆ ಪ್ರವೃತ್ತಿಗಳಲ್ಲಿ ಬರೆಯುವುದು ಕೂಡಾ ಒಂದು. ಬರೆಯುವುದು ಎಂದಾಗ ನನಗೆ ತೋಚಿದ್ದನ್ನು ಅನಿಸಿದ್ದನ್ನು, ಕಂಡದ್ದನ್ನು, ಅರ್ಥಮಾಡಿಕೊಂಡಿದ್ದನ್ನು, ನನಗೆ ಸಂತೋಷ ಅಥವಾ ಬೇಸರ, ಮುಖ್ಯವಾಗಿ ನನ್ನ ಭಾವನೆಗಳನ್ನು ಮೀಟಿರುವ ಸಂಗತಿಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ನನ್ನ ಬರಹದ ಉದ್ದೇಶ, ಅಂದಮಾತ್ರಕ್ಕೆ ನಾನು ಸಾಹಿತಿಯಾಗಿದ್ದೇನೆ ಎಂದು ತಿಳಿದುಕೊಂಡಿಲ್ಲ ಎಂದು ಮೊದಲಿಗೆ ಸ್ಪಷ್ಟಪಡಿಸಬಯಸುತ್ತೇನೆ.

ಆದರೆ ಸಾಹಿತಿ ಎಂದು ಗುರುತಿಸಿಕೊಳ್ಳಬೇಕೆನ್ನುವ ಅಥವಾ ಸಾಹಿತಿ ಆಗಬೇಕೆನ್ನುವ ಹಂಬಲ ನನ್ನಲ್ಲಿದೆ ಎಂದು ಪ್ರಾಂಜಲವಾಗಿ ಒಪ್ಪಿಕೊಳ್ಳುತ್ತೇನೆ. ಸಾಹಿತ್ಯ ಎನ್ನುವ ವಿಚಾರದಲ್ಲಿ ನನ್ನದೇ ಆದ ಕೆಲವು ಪರಿಕಲ್ಪನೆಗಳಿವೆ. ಸಾಹಿತ್ಯ ಯಾವುದೇ ಇರಲಿ ಮೊದಲಿಗೆ ಅದು ಓದುಗರಿಗೆ ಮುದ ನೀಡಬೇಕು, ನಂತರ ಅಷ್ಟೇ ಮುಖ್ಯವಾಗಿ ಓದುವವರನ್ನು ಎತ್ತರಿಸಬೇಕು. ಅವರ ದೃಷ್ಟಿಯನ್ನು ವಿಸ್ತರಿಸಬೇಕು, ಅವರ ಬದುಕನ್ನು ಬೆಳಗಿಸಬೇಕು. ಈ ಹಿನ್ನೆಲೆಯಲ್ಲಿ ನಾನು ಎಷ್ಟರ ಮಟ್ಟಿಗೆ ಸಾಹಿತಿಯಾಗಿದ್ದೇನೆ ನನಗೆ ಗೊತ್ತಿಲ್ಲ. ಆದರೆ ನನ್ನ ಪ್ರಯತ್ನ ಸದಾ ಈ ನಿಟ್ಟಿನಲ್ಲಿರುತ್ತದೆ.

ನನ್ನ ಬರಹದಲ್ಲಿ ಮುಖ್ಯವಾಗಿ ನಾನು ವೃತ್ತಿ ಜೀವನದಲ್ಲಿ ಕಂಡದ್ದನ್ನು, ನನ್ನ ಬಳಿ ಬರುವ ರೋಗಿಗಳ ದೈಹಿಕ, ಮಾನಸಿಕ ಸ್ಥಿತಿ-ಗತಿಗಳ ಬಗ್ಗೆ ಅವರ ಬದುಕಿನ ರೀತಿ-ನೀತಿಗಳ ಬಗ್ಗೆ ನಾನು ತಿಳಿದುಕೊಂಡದ್ದು ಅಥವಾ ಅರ್ಥ ಮಾಡಿಕೊಂಡಿದ್ದನ್ನು ಇತರರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿ ನಾನು ಬರಹಗಾರನಾಗಿದ್ದೇನೆ. ಹೋಮಿಯೋಪತಿ ಪದ್ಧತಿಯಲ್ಲಿನ ಮೂಲ ಎಳೆಯಾದ ಮಾನವೀಯ ಅಂತಃಕರಣ ಹಾಗೂ ಕರುಣೆ, ಅಪ್ತರಾಗಿ ಬಂದವರಿಗೆ ಸುಲಭವಾಗಿ ಪರಿಹಾರ ನೀಡಬೇಕೆನ್ನುವ ನಿರಂತರ ಪ್ರಯತ್ನದ ಹಿಂದಿರುವ ಸದ್ಭಾವನೆಗಳು ನನ್ನ ಬದುಕನ್ನು ಮಾತ್ರವಲ್ಲ, ಬರಹವನ್ನು ರೂಪಿಸಿದೆ. ನನ್ನ ಬರಹಗಳಲ್ಲಿ ನನ್ನ ಅನುಭವ ಬಿಟ್ಟರೆ ಬೇರೆಯವರ ವಿಚಾರ, ಸಂಶೋಧನೆಗಳ ತಂಟೆಗೆ ನಾನುಹೋಗಿಲ್ಲ. ನಾನು ಕಲಿತತದ್ದನ್ನು ಇತರರೊಂದಿಗೆ ಹಂಚಿಕೊಂಡು ಅದರ ಲಾಭ ಎಲ್ಲರಿಗೂ ಸಿಗುವಂತಾಗಲಿ ಎನ್ನುವ ದೃಷ್ಟಿಯಿಂದ ಒಬ್ಬ ವೈದ್ಯ ಸಾಹಿತಿಯಾಗಿ ಗುರುತಿಸಿಕೊಳ್ಳಬಯಸುತ್ತೇನೆ. ಈ ಪ್ರಯತ್ನದಲ್ಲಿ ಇನ್ನೂ ಕಲಿಯುವುದು ಬೇಕಾದಷ್ಟು ಇದೆ ಎನ್ನುವ ಪ್ರಜ್ಞೆಯನ್ನು ಉಳಿಸಿಕೊಂಡೇ ಹೋಗುವ ರೀತಿಯಲ್ಲಿ ಬದುಕು ನನಗೆ ಪಾಠ ಕಲಿಸಿದೆ.

ಇನ್ನೂ ಸಾಹಿತ್ಯದ ವಿದ್ಯಾರ್ಥಿಯಾಗಿರುವ ಸಾಹಿತಿ ಎಂದು ಹೇಳಿಕೊಳ್ಳುವ ಮಟ್ಟ ತಲುಪಿಲ್ಲ ಎಂದು ಸ್ಪಷ್ಟಪಡಿಸಿ, ವಿರಮಿಸುತ್ತೇನೆ.

* * *