ವಯಸ್ಸು ಮಾಗಿದಂತೆ ದೇಹದ ಶಕ್ತಿ ಕುಗ್ಗತ್ತದೆ. ವೃದ್ಧಾಪ್ಯದಲ್ಲಿ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವವೆ. ಅವುಗಳನ್ಣೇ ದೊಡ್ಡದಾಗಿ ಮಾಡಿ, ಮನೆಯ ಶಾಂತಿ ಸಮಧಾನಗಳಿಗೆ ಆತಂಕ ಉಂಟು ಮಾಡುವುದು ಸರಿಯಲ್ಲ. ಸರಿಯಾದ ವೈದ್ಯಕೀಯ ಚಿಕಿತ್ಸೆ ಸಲಹೆಗಳ ಮೂಲಕ, ಶಾರೀರಿಕ, ಮಾನಸಿಕ ಸಮಸ್ಯೆಗಳನ್ನು ಪರಿಹರಿಸಕೊಳ್ಳಬೇಕು.

ಹಿರಿಯರಲ್ಲಿ ಸಾಮಾನ್ಯವಾಗಿ ಪ್ರತಿಯೊಂದು ವಿಷಯಕ್ಕೂ ಕೋಪಗೊಳ್ಳುವ, ಸದಾ ಸಿಡಿಮಿಡಿಗೊಳ್ಳುವ ಪ್ರವೃತ್ತಿ ಕಂಡುಬರುತ್ತದೆ. ವಯಸ್ಸಿನ ದೃಷ್ಟಿಯಿಂದ ನೋಡುವುದಾದರೆ ೪೫ ರಿಂದ ೫೫ ವರ್ಷ ಅತಿ ಹೆಚ್ಚೇನಲ್ಲ. ಆದರೆ ಇದುವರೆಗೂ ಇರದಿದ್ದಕ್ಕೆ ಕಾಲು ನೋವು, ಎದೆನೋವು, ಸೊಂಟನೋವು ಕಾಣಿಸಿಕೊಳ್ಳುತ್ತದೆ. ಹಸಿವು ಸರಿಯಾಗಿ ಆಗುವುದಿಲ್ಲ. ಸದಾಕಾಲ ಏನಾದರೊಂದು ಕಾಯಿಲೆ ಇದೆ ಎನಿಸುತ್ತದೆ. ಹೆಂಡತಿ ಪ್ರೀತಿಯಿಂದ ಬಳಿ ಬಂದು, “ಏನ್ರೀ ಈ ವಿಷಯಗೊತ್ತೆ?” ಎಂದು ಕೇಳಿದರೆ, “ಏನದು ಮಾತು? ಬೇಗನೇ ಹೇಳಿ ಜಾಗ ಖಾಲಿ ಮಾಡು…” ಎನ್ನುತ್ತಾರೆ. “ಯಾಕ್ರಿ ಹಾಗೆ ಸಿಟ್ಟಾಗ್ತೀರಿ? ನಾನೇನೆಂದೆ ಈಗ?” ಎಂದರೆ, ಕೋಪ ಹೆಚ್ಚಾಗಿ, “ಅದೆಲ್ಲಾ ನಿನಗೇಕೆ? ಮೊದಲು ಜಾಗ ಖಾಲಿ ಮಾಡು” ಎಂದು ಗದರಿಸುತ್ತಾರೆ.

ಹೀಗೆ ಸಿಡಿಮಿಡಿಗೊಳ್ಳುವ ಜನರಲ್ಲಿ ಸಿಹಿಮೂತ್ರ ರೋಗ, ರಕ್ತದೊತ್ತಡ, ಇವೆಯೆಂದು ಭಾವಿಸುತ್ತೇವೆ. ಆದರೆ ನಾವಂದುಕೊಂಡಂತೆ ಅವರಲ್ಲಿ ಅವುಗಳು ಇರುವುದಿಲ್ಲ. ಸುಮಾರು ಐವತ್ತು ವರ್ಷಗಳನ್ನು ದಾಟಿದ ಪುರುಷರಲ್ಲಿ ಮುಖ್ಯವಾಗಿ ಟೆಸ್ಟೋಸ್ಟಿರಾನ್ ಹಾರ್ಮೋನ್ ಹಾಗೂ ಇತರೆ ಹಾರ್ಮೋನ್‌ಗಳ ಉತ್ಪತ್ತಿ ಕಡಿಮೆಯಾಗುತ್ತದೆ. ಇಂಥ ಮಾನಸಿಕ ಸ್ಥಿತಿ ಕೆಲವರಿಗೆ ಉಂಟಾಗುತ್ತದೆ.

ಕೆಲವರಿಗೆ ಕೆಲಸದಿಂದ ನಿವೃತ್ತಿ ಹೊಂದಿದ ನಂತರ ನಾನಾ ರೀತಿಯ ಬಾಧೆಗಳುಂಟಾಗುತ್ತವೆ. ಮಕ್ಕಳು ಓದು ಮುಗಿದಿರುತ್ತದೆ. ಅವರೆಲ್ಲರ ಮದುವೆ ಸಹ ಆಗಿರುತ್ತದೆ. ಯಾವುದೇ ರೀತಿಯ ಹಣಕಾಸಿನ ತೊಂದರೆ ಇರುವುದಿಲ್ಲ. ಆದರೂ ಮಾನಸಿಕವಾಗಿ ತುಂಬಾ ಭಯಗೊಂಡಿರುತ್ತಾರೆ. ಆರೋಗ್ಯ ಸರಿಯಾಗಿಲ್ಲವೆಂದು ಹೇಳುತ್ತಿರುತ್ತಾರೆ. ವೈದ್ಯರಲ್ಲಿಗೆ ಹೋಗಿ ನಾನಾ ರೀತಿಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಾರೆ. ಆದರೆ ಯಾವುದೇ ಕಾಯಿಲೆಯ ಲಕ್ಷಣಗಳು ಕಂಡುಬರುವುದಿಲ್ಲ. ಈ ಶಾರೀರಿಕ ಮಾನಸಿಕ ಬಾಧೆಗಳು ಒಂದು ಬೃಹತ್ ಪ್ರಶ್ನೆಯಾಗಿಯೇ ಉಳಿಯುತ್ತವೆ. ಹೀಗೇಕೆ?

ಕೆಲವರು ಮೇಲೆ ಹೇಳಿದ ಹಾಗೆ ಇರುತ್ತಾರೆ. ಇನ್ನು ಕೆಲವರು ಎಪ್ಪತ್ತು ವರ್ಷಗಳ ನಂತರವೂ ಮಾನಸಿಕವಾಗಿ ಶಾರೀರಿಕವಾಗಿ ಶಕ್ತಿವಂತರಾಗಿರುತ್ತಾರೆ. ಹೀಗೇಕೆ?

ಪುರುಷರಲ್ಲಿ ೫೦ರಿಂದ ೬೦ ವರ್ಷಗಳ ನಂತರ ಟೆಸ್ಟೊಸ್ಟೀರಾನ್ ಹಾರ್ಮೋನ್ ಉತ್ಪತ್ತಿ ಕಡಿಮೆಯಾಗಿ ಕ್ರಿಟಿಕಲ್ ಏಜ್ ಉಂಟಾಗುತ್ತದೆ. ಆಗ ಅರ್ಥವಾಗದಂಥ ಅನೇಕ ಭಾವನೆಗಳು ಬಾಧೆಗಳು ಕಾಣಿಸಿಕೊಳ್ಳುತ್ತವೆ. ಕೆಲ ವೇಳೆ ಕೆಲವು ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಕಡಿಮೆಯಾಗುತ್ತದೆ. ಅಂದವಾದ ಹೆಂಡತಿ ಇದ್ದರೂ ಏನೂ ಮಾಡಲಾಗದ ಪರಿಸ್ಥಿತಿ ಉಂಟಾಗುತ್ತದೆ. ಇದರಿಂದ ಮಾನಸಿಕ ನೋವು, ಕೀಳರಿಮೆ ಉಂಟಾಗುತ್ತದೆ. ಆಗ ಪ್ರತಿಯೊಂದು ಸಣ್ಣ ವಿಷಯಕ್ಕೂ ಸಿಟ್ಟಾಗುವುದು ಸಿಡುಕುವುದು ಇರುತ್ತದೆ. ಕೆಲವರಲ್ಲಿ ನಿರಾಸೆ, ಅಂತರ್ಮುಖಿಗಳಾಗಿರುವ ಲಕ್ಷಣಗಳು ಕಂಡುಬರುತ್ತದೆ.

ಇಂಥವರಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯ. ಅದರಲ್ಲೂ ಮಾನಸಿಕ ದೈಹಿಕ ಚಿಕಿತ್ಸೆಳೆರಡೂ ಅಗತ್ಯ.

ಮಹಿಳೆಯರ ಸಮಸ್ಯೆ:

ನಲವತ್ತೈದು ಐವತ್ತು ವರ್ಷ ವಯಸ್ಸಾದ ಮಹಿಳೆಯರಲ್ಲಿ ಪುರುಷರಗಿಂತ ಭಿನ್ನವಾದ ಅಧಿಕ ಸಮಸ್ಯೆಗಳು ಉಂಟಾಗುತ್ತವೆ. ದಿನಕ್ಕೆ ಎರಡು ಮೂರು ಬಾರಿ ಆಗಿಂದಾಗ್ಗೆ ಬೆವರು ಹೆಚ್ಚಾಗಿ ಹರಿಯುತ್ತದೆ. ಕೆಲವೊಮ್ಮೆ ಗಂಟೆಗೆ ಮೂರುನಾಲ್ಕು ಸಲ ಈ ರೀತಿ ಆಗಬಹುದು. ರಾತ್ರಿ ವೇಳೆ ಮಲಗಿದಾಗಲೂ ಈ ರೀತಿ ಬೆವರುವುದರಿಂದ ನಿದ್ರಾಭಂಗ ಆಗುತ್ತದೆ. ಸ್ತ್ರೀಯರು ಅಂತರ್ಮುಖಿಗಳಾಗುತ್ತಾರೆ. ಮಾತು ಮಾತಿಗೂ ನಾನಿನ್ನು ಬದುಕಿರಬಾರದು, ಸಾಯಬೇಕು ಎನ್ನುತ್ತಾರೆ. ಇಂತಹ ಮಾನಸಿಕ ಬದಲಾವಣೆಗಳಿಂದ ಮನೆಯಲ್ಲಿ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಪ್ರತಿಯೊಂದು ಸಣ್ಣಪುಟ್ಟ ವಿಷಯಕ್ಕೂ ಜಗಳ ಕದನ ನಡೆಯುತ್ತದೆ. ಕೆಲವು ಸ್ತ್ರೀಯರಲ್ಲಿ ಕೀಲುನೋವು, ಮಾಂಸಖಂಡಗಳಲ್ಲಿ ನೋವು ಹೆಚ್ಚಾಗುತ್ತದೆ. ಕಾಲು ಕೈಗಳು ಭಾರ ಎನಿಸುತ್ತವೆ. ಕಿವಿಗಳಲ್ಲಿ ನಾನಾ ರೀತಿ ಶಬ್ದಗಳು ಕೇಳಿಸುತ್ತಿವೆಯೆಂದು ವಿಚಿತ್ರವಾಗಿ ವರ್ತಿಸುತ್ತಾರೆ.

ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಋತುಚಕ್ರ ಸಂಪೂರ್ಣ ನಿಂತು ಬಿಡುವುದು. ಋತು ಚಕ್ರನಿಂತ ತಕ್ಷಣ ಕೆಲವರಿಗೆ ಈ ರೀತಿಯ ಮಾನಸಿಕ, ಶಾರೀರಿಕ ಸಮಸ್ಯೆಗಳು ಉಂಟಾಗುತ್ತವೆ. ನಲವತ್ತೈದು ಐವತ್ತು ವರ್ಷ ವಯಸ್ಸಿನಲ್ಲಿ ಅಂಡಾಶಯಗಳು ಕೆಲಸನಿಲ್ಲಿಸಿಬಿಡುತ್ತವೆ. ಆಗ ಅವರಲ್ಲಿ ಈಸ್ಟ್ರೋಜನ್ ಹಾರ್ಮೋನ್ ಬಿಡುಗಡೆಯಾಗುವುದಿಲ್ಲ. ಅಕಸ್ಮಾತ್ ಆಗಿ ಈ ಹಾರ್ಮೋನ್ ಉತ್ಪತ್ತಿ ನಿಂತುಹೋಗುವುದರಿಂದ ಶರೀರದಲ್ಲಿ ಈ ರೀತಿಯ ಬದಲಾವಣೆಯಾಗುತ್ತವೆ. ಮುಟ್ಟು ನಿಂತುಹೋದ ನಂತರ ಬರುವ ಈ ಪರಿಸ್ಥಿತಿಯನ್ನು ಮೆನೋಪಾಸಲ್ ಸಿಂಡ್ರೋಮ್ ಎನ್ನುತ್ತಾರೆ.

ಮುಟ್ಟು ನಿಂತ ಬಳಿಕ ಬರುವ ಈ ಬಾಧೆಗಳು ಕೆಲವು ದಿನಗಳಿಂದ ಹಿಡಿದು ಎರಡು ಮೂರು ವರ್ಷಗಳವರೆಗೂ ಇರಬಹುದು. ಕೆಲವರಲ್ಲಿ ಒಂದು ವಾರ ಅಥವಾ ಎರಡು ವಾರ ಇದ್ದರೆ ಕೆಲವರಲ್ಲಿ ಒಂದೆರಡು ತಿಂಗಳು, ಇನ್ನೂ ಕೆಲವರಲ್ಲಿ ಒಂದೆರಡು ವರ್ಷಗಳು, ಹೀಗೆ ನಾನಾ ರೀತಿಯಲ್ಲಿರುತ್ತವೆ. ನೋವು ಕಡಿಮೆ ಇದ್ದವರು ಚಿಂತಿಸುವ ಅಗತ್ಯವಿಲ್ಲ. ಆದರೆ ನೋವು ಅಧಿಕವಾಗಿದ್ದರೆ ಈಸ್ಟ್ರೋಜನ್ ಹಾರ್ಮೋನ್‌ಗೆ ಸಂಬಂಧಿಸಿದ ಮಾತ್ರೆ ಮತ್ತು ಚುಚ್ಚುಮದ್ದುಗಳನ್ನು ವೈದ್ಯರ ಕೂಲಂಕಷ ಪರೀಕ್ಷೆ ನಂತರ ಪಡೆಯಬೇಕು.

ವಯಸ್ಸು ಮಾಗಿದಂತೆ ದೇಹದ ಶಕ್ತಿ ಕುಗ್ಗುತ್ತದೆ. ವೃದ್ಯಾಪ್ಯದಲ್ಲಿ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನೇ ದೊಡ್ಡದಾಗಿ ಮಾಡಿ ಮನೆಯ ಶಾಂತಿ ಸಮಾಧಾನಗಳಿಗೆ ಆತಂಕ ಉಂಟು ಮಾಡುವುದು ಸರಿಯಲ್ಲ. ಸರಿಯಾದ ವೈದ್ಯಕೀಯ ಚಿಕಿತ್ಸೆ, ಸಲಹೆಗಳ ಮೂಲಕ, ಶಾರೀರಿಕ ಮಾನಸಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಮನೆಯ ಹಿರಿಯರ ಈ ರೀತಿಯ ವರ್ತನೆಗಳನ್ನು ಕಿರಿಯ ಸದಸ್ಯರು ಇದೆಲ್ಲ ಮಾಮೂಲಿ ದಿನೂ ಇರುವಂಥದ್ದೇ… ಎಂದು ನಿರ್ಲಕ್ಷಿಸಬಾರದು. ಎಲ್ಲಾ ಸದಸ್ಯರ ಸಹಕಾರದಿಂದ ಮನೆಯಲ್ಲಿ ಶಾಂತಿ ಸಮಾಧಾನ ಸುಖ ನೆಲೆಸಲು ಸಾಧ್ಯವಾಗುತ್ತದೆ.

ವೈದ್ಯಸಾಹಿತಿಯಾಗಿನನ್ನಅನುಭವ
ದೊಡ್ಡ ಬಾಣಲೆಯಲ್ಲಿ ಊಟ ಮಾಡುವಿರಾ?”
ಡಾ| ಎಸ್.ರವಿಕುಮಾರ್, ರಾರಾವಿವೈದ್ಯ ಸಾಹಿತ್ಯಕ್ಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರೋತ್ಸಾಹ ಹಾಗೂ ಬೆಂಬಲ ಸಿಗುತ್ತದೆ. ನಾನು ಆರಂಭದಲ್ಲಿ ಬರೆಯಲು ಹಿಂದೇಟು ಹಾಕಿದ್ದು ನಿಜ. ಆಗ ನನ್ನ ಗೆಳೆಯರು ಹುಮ್ಮಸ್ಸು ತುಂಬಿದರು. ಪತ್ರಿಕೆಗಳೂ ಲೇಖನಗಳನ್ನು ಪ್ರಕಟಿಸಿ. ಬರೆಯಲು ಮತ್ತಷ್ಟು ಉತ್ಸಾಹ ಮೂಡಿಸಿದವು. ಈ ಹಂತದಲ್ಲಿ ಡಾ| ಸಿ.ಆರ್. ಚಂದ್ರಶೇಖರ್ ರವರು ಬರವಣಿಗೆಯ ಮೂಲ ಮಂತ್ರವನ್ನು ತಿಳಿಸಿದರು.

ಅಲ್ಲಿಂದ ನಿರಂತರ ಬರವಣಿಗೆ ಆರಂಭವಾಯಿತು. ಡಾ| ಸಿ.ಆರ್. ಚಂದ್ರಶೇಖರ್‌‌ರವರ ಮಾರ್ಗದರ್ಶನದಂತೆ ಮುಂದುವರೆದಂತೆ ಜನರಿಂದ (ಓದುಗರಿಂದ) ಅಭೂತಪೂರ್ವ ಪ್ರತಿಕ್ರಿಯೆ ಬಂತು. ರಾಜ್ಯದ ನಾನಾ ಭಾಗಗಳಿಂದ ದೂರವಾಣಿ ಮೂಲಕ, ಪತ್ರಗಳ ಮೂಲಕ ಖುದ್ದಾಗಿ ಜನರು ಸಂಪರ್ಕಿಸಲಾರಂಭಿಸಿದರು.

ಪತ್ರಿಕೆಯಲ್ಲಿ ಲೇಖನ ಬಂದ ದಿನವಂತೂ ನೂರಾರು ಜನರಿಂದ ಫೋನ್‌ಕಾಲ್‌ಗಳು ಬರುತ್ತವೆ. ಅವರೆಲ್ಲರಿಗೂ ಭೇಟಿ ಮಾಡಲು, ಚಿಕಿತ್ಸೆ ನೀಡಲು, ದಿನಾಂಕಗಳನ್ನು ನಿಗದಿಗೊಳಿಸಿ, ತಿಳಿಸುವಾಗ ಹೆಮ್ಮೆ ಎನಿಸುತ್ತದೆ. ಸಾರ್ಥಕತೆಯ ಭಾವನೆಯೂ ಮೂಡುತ್ತದೆ.

ಪತ್ರಿಕೆಯಲ್ಲಿ ಲೇಖನ ಪ್ರಕಟವಾದಾಗ ಕೆಲವೊಮ್ಮೆ ವಿಚಿತ್ರ ಹಾಗೂ ಹಾಸ್ಯ ಪ್ರಸಂಗಗಳೂ ನಡೆಯುತ್ತವೆ. ಉದಾಹರಣೆ ‘ಅತಿಭೋಜನಂ ವ್ಯಾಧಿ ಲಕ್ಷಣಂ’ ಲೇಖನ ಪ್ರಜಾವಣಿ ಪತ್ರಿಕೆಯಲ್ಲಿ ಪ್ರಕಟವಾದಾಗ, ಲೇಖನದೊಂದಿಗೆ ಧಡೂತಿಯೊಬ್ಬ ದೊಡ್ಡ ಬಾಣಲೆ ಮುಂದಿಟ್ಟುಕೊಂಡು ಊಟ ಮಾಡುತ್ತಿರುವ ಫೋಟೋ ಹಾಕಿದ್ದರು. ಆ ಧಡೂತಿ ವ್ಯಕ್ತಿ (ಚಿತ್ರದಲ್ಲಿ) ನಾನೇ ಎಂದು ಜನರು ತಿಳಿದುಕೊಮಡು, ಸಾವಿರಾರು ಜನರು ಫೋನ್‌ಮೂಲಕ, ಯಾವುದೋ ಅದ್ಭುತ ಕಂಡವರಂತೆ ವಿಚಾರಿಸಿಕೊಂಡರು. ಇನ್ನೂ ಕೆಲವರು ಸ್ವತಃ ನೋಡಲು ಬಂದರು. ನನಗಂತೂ ಪ್ರತಿಯೊಬ್ಬರಿಗೂ ‘ಅದು ನನ್ನ ಫೋಟೋ ಅಲ್ಲ’ ಎಂದು ಹೇಳಿ ಹೇಳಿ ಸಾಕಾಯಿತು. ಪ್ರಾಥಮಿಕ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳು ಫೋನ್ ಮಾಡಿ, “ನಾವೂ ನಿನ್ನಂತೆ ಆಗಲು ಏನು ತಿನ್ನಬೇಕು?” ಎಂದು ಕೇಳಿ ಕೇಳಿ ತಲೆ ಕೆಡಿಸುತ್ತಿದ್ದರು. ಇಂದಿಗೂ ಮಕ್ಕಳಿಂದ ಆ ರೀತಿಯ ಕಾಲ್‌ಗಳು ಬರುತ್ತವೆ ಇವೆ.

ನನ್ನ ಬರವಣಿಗೆಯಿಂದ ನಮ್ಮ ಜನರಿಗೆ ಪ್ರಯೋಜನ ಆಗುತ್ತಿರುವುದನ್ನು ನೋಡಿ ಹೆಮ್ಮೆ ಸಂತೋಷ, ಸಾರ್ಥಕತೆ ಉಂಟಾಗಿದೆ. ಈಗಾಗಲೇ ಮಕ್ಕಳಿಲ್ಲದ ದಂಪತಿಗಳು ನನ್ನ ಬರಹ ನೋಡಿ, ಬಂದು ಚಿಕಿತ್ಸೆ ಪಡೆದು ಮಕ್ಕಳನ್ನು ಪಡೆದಿದ್ದಾರೆ. ಅವರು ತೋರಿಸುವ ಪ್ರೀತಿ, ವಿಶ್ವಾಸ ಕಂಡಾಗ ಹೃದಯ ತುಂಬಿಬರುತ್ತದೆ. ದೂರ, ದೂರದ ಊರುಗಳಿಂದ ಬಂದು, ಚಿಕಿತ್ಸೆ ಪಡೆದು, ಗುಣಮುಖರಾದವರ ಮಾತುಗಳನ್ನು ಕೇಳಿದಾಗ, ನನ್ನ ಬರವಣಿಗೆ ಸಾರ್ಥಕ ಎನಿಸುತ್ತದೆ.

* * *