ಇಸಬು ಅಥವಾ ಎಕ್ಸಿಮ (Eczema) ಒಂದು ಪ್ರಮುಖ ಚರ್ಮರೋಗ. ಎಕ್ಸಿಮ ಎಂದರೆ ಬೊಬ್ಬೆಯೇಳುವುದು ಎಂದರ್ಥ. ಎಕ್ಸಿಮ, ಗುಳ್ಳೆಗಳು ಮತ್ತು ನೀರ್ಗುಳ್ಳೆಗಳು ಸೇರಿ ಆಗಿರುವ ಒಂದು ಚರ್ಮತೊಂದರೆ. ಈ ಗುಳ್ಳೆಗಳಿಂದ ನೀರು ಹೊರಸೂಸುತ್ತದೆ. ಎಕ್ಸಿಮವನ್ನು ಡರ್ಮಟೈಟೆಸ್ (Dermatites) ಎಂತಲೂ ಕರೆಯುತ್ತಾರೆ ಆದರೆ ಡರ್ಮಟೈಟಿಸ್ ಎಲ್ಲಾ ಬಗೆಯ ಚರ್ಮದುರಿತಗಳನ್ನೂ ಸೂಚಿಸುತ್ತದೆ. ಹಾಗಾಗಿ, ಎಲ್ಲಾ ಎಕ್ಸಿಮಗಳೂ ಡರ್ಮಟೈಟಿಸ್ ಆದರೂ, ಎಲ್ಲ ಡರ್ಮಟೈಟಿಸ್‌ಗಳೂ ಎಕ್ಸಿಮಗಳಲ್ಲ. ಎಕ್ಸಿಮದ ಗುಳ್ಳೆಗಳು ಸೇರಿಕೊಂಡು, ಚಿಕ್ಕ ಕಲೆಗಳಾಗುತ್ತವೆ. ಇವು ಬಹಳ ಗಟ್ಟಿಯಾಗಿ ತುರಿಸುತ್ತವೆ. ರೋಗಿಯ ಕೆರೆಯುತ್ತಾ ಹೋದರೆ, ಅವು ಕಪ್ಪು ಬಣ್ಣಕ್ಕೆ ತಿರುಗಿ, ಗಟ್ಟಿಯಾಗಿ ಪಾಚಿ ಕಟ್ಟಿದಂತೆ ಕಾಣುತ್ತವೆ.

ಎಕ್ಸಿಮವನ್ನು ಅದು ಉಂಟಾಗುವ ಕಾರಣದಿಂದ ಎರಡು ರೀತಿಗಳಲ್ಲಿ ವಿಂಗಡಿಸಬಹುದು. ಒಂದು, ಹೊರಜನಿತ ಮತ್ತು ಇನ್ನೊಂದು ಒಳಜನಿತ. ಹೊರಜನಿತ ಎಕ್ಸಿಮ ಪರಿಸರದ ಅಂಶಗಳಿಂದ ಉಂಟಆಗುತ್ತದೆ. ಇದರ ಉದಾಹರಣೆಗಳೆಂದರೆ, ಅಲರ್ಜಿಯ ಸ್ಪರ್ಶದುರಿತ (Allergic Contact dermatites) ಸೂರ್ಯನ ಬೆಳಕಿಗೆ ಉರಿತ (Photodermatitis), ಸೋಂಕಿನಿಂದಾಗುವ ಉರಿತ

ಒಳಜನಿತ ಎಕ್ಸಿಮ ದೇಹದೊಳಗಿನ ಅಂಶಗಳಿಂದ ಉಂಟಾಗುತ್ತದೆ. ಇದರ ಉದಾಹರಣೆಗಳೆಂದರೆ, ಏಟೋಪಿಕ್ ಡರ್ಮಟೈಟಿಸ್, ಸೆಬೋರಿಕ್ ಡರ್ಮಟೈಟಿಸ್, ನುಮುಲಾರ್ ಎಕ್ಸಿಮ, ಒಣಚರ್ಮದ ಎಕ್ಸಿಮ, ಪಾಂಫೋಲಿಕ್ಸ್ ಮೊದಲಾದವು.

ಕೆಲವರ ಚರ್ಮ ಸೂರ್ಯನ ಬಿಸಿಲಿಗೆ ಮತ್ತು ಬೆಳಕಿಗೆ ಒಗ್ಗುವುದಿಲ್ಲ. ಕೆಲವರಲ್ಲಿ ಈ ಒಗ್ಗದಿರುವಿಕೆ ಔಷಧಿಗಳ ಸೇವನೆ, ಕೂದಲಿಗೆ ಬಣ್ಣ ಹಚ್ಚುವುದು, ಮೊದಲಾದ ಕಾರಣಗಳಿಂದ ಹೆಚ್ಚುತ್ತದೆ. ಅಂತಹವರು ಸೂರ್ಯನ ಬೆಳಕಿಗೆ ತೋರಿಸಿರುವ ಚರ್ಮದಲ್ಲಿ ಅಂದರೆ ಮುಖ, ಕತ್ತು, ಕೈಗಳು, ಬೆನ್ನು ಮೊದಲಾದ ಕೆಲವಡೆಗಳಲ್ಲಿ ತೊಂದರೆ ಅನುಭವಿಸುತ್ತಾರೆ. ಗುಳ್ಳೆಗಳು, ಬಣ್ಣದ ಕಲೆಗಳು ಮೊದಲಾದ ಕೆಲವು ಗಾಯಗಳಾಗುತ್ತವೆ. ಇವು ತುರಿಸುತ್ತವೆ. ಈ ಗಾಯಗಳ ಚಿಕಿತ್ಸೆಗೆ ವೈದ್ಯರ ನಿರ್ದೇಶಾನುಸಾರವಾಗಿ ಅಲ್ಪಕಾಲಾವಧಿಯವರೆಗೆ ಸ್ಟಿರಾಯ್ಡ್ ಮುಲಾಮುಗಳನ್ನು ಬಳಸಬೇಕು. ಸೂರ್ಯನ ಬೆಳಕಿಗೆ ಒಡ್ಡುವ ಚರ್ಮವನ್ನು ಸೂರ್ಯರಕ್ಷಕ (Sun Screen) ಮುಲಾಮುಗಳಿಂದ ಸವರಿಕೊಳ್ಳಬೇಕು. ಸೂರ್ಯನ ಬೆಳಕಿಗೆ ಹೋಗುವ ಮುನ್ನ ಇವನ್ನು ಲೇಪಿಸಿಕೊಂಡು ಹೋಗಬೇಕು.

ಸ್ಪರ್ಶದುರಿತ (Contact Dermatitis) ಚರ್ಮದ ವಿಶೇಷ ರೋಗ. ಪರಿಸರದಲ್ಲಿರುವ ವಿವಿಧ ವಸ್ತುಗಳನ್ನು ಮುಟ್ಟುವುದರಿಂದ ಚರ್ಮದುರಿತವಾಗುತ್ತದೆ. ವಸ್ತುಗಳ ಒಗ್ಗದಿರುವಿಕೆ (Allergy) ಇರುವವರಿಗೆ ಹೀಗಾಗುತ್ತದೆ. ಸ್ಪರ್ಶದುರಿತ ಉಂಟು ಮಾಡುವ ಸಾಮಾನ್ಯ ವಸ್ತುಗಳು ಹಾಗೂ ಅವುಗಳ ರಾಸಾಯನಿಕಗಳ ಬಗ್ಗೆ ಕೆಳಗಿನ ಕೋಷ್ಟಕಗಳಿಂದ ತಿಳಿಯಬಹುದು.

ಸ್ಪರ್ಶದ ಡರ್ಮಟೈಟಸ್ ಆಗಲು ಕಾರಣವಾಗುವ ವಸ್ತುಗಳು ಹಾಗೂ ಆಗುವ ಪ್ರದೇಶಗಳು

ಸಂಖ್ಯೆ

ವಸ್ತು

ಪ್ರದೇಶ

೧. ಕಾಲುಚೀಲ ಷೂ, ಚಪ್ಪಲಿ ಪಾದ, ಕಾಲುಗಳು
೨. ಬಟ್ಟೆ ಕಾಲುಗಳು, ದೇಹ ಕಾಲುಗಳು, ದೇಹ
೩. ಗಿಡಗಳು, ತರಕಾರಿಗಳು, ಸಾಬೂನು ಹಾಗೂ ಸಾಬೂನುಪುಡಿ, ಸೀಮೆಎಣ್ಣೆ ಕೈಗಳು
೪. ವಾಸನಾಹಾರಿ (Deodorant) ಕಂಕುಳು
೫. ಸರ ಕತ್ತು
೬. ಲಿಪ್‌ಸ್ಟಿಕ್ ತುಟಿಗಳು
೭. ಮೂಗಿನ ಹನಿಗಳು ಮೂಗು ಮತ್ತು ಅದರ ಸನಿಹ
೮. ಕನ್ನಡಕ ಕಣ್ಣುಸುತ್ತಮುತ್ತ
೯. ಅಂಗರಾಗ, ಬ್ಲೇಡು, ರೇಜರ್ ಮುಖ
೧೦. ಕಿವಿ ಆಭರಣಗಳು ಕಿವಿಯ ಹಾಲೆಗಳು
೧೧. ಕಣ್ಣುಕಪ್ಪು ಇತ್ಯಾದಿ ಕಣ್ಣಿನ ಅಂಗಾರಗಳು ಕಣ್ಣುಗುಡ್ಡೆ ಕಣ್ಣುಗಳ ಸುತ್ತಮುತ್ತ
೧೨. ಕೂದಲಿಗೆ ಹಚ್ಚುವ ಬಣ್ಣ (ಡೈ) ತಲೆ, ಹಣೆ, ತಲೆಅಂಚು

ಕೆಲವು ದಿನಬಳಕೆಯ ವಸ್ತುಗಳು, ಅವುಗಳಲ್ಲಿರುವ ರಸಾಯನಿಕ, ಲೋಹ ಇತ್ಯಾದಿ ಅಲರ್ಜಿಕಾರಕಗಳು

ಸಂಖ್ಯೆ

ರಾಸಾಯನಿಕವಸ್ತು ಲೋಹ ಮುಂತಾದ ಅಲರ್ಜಿಕಾರಕಗಳು

ದಿನಬಳಕೆಯ ವಸ್ತುಗಳು

೧. ನಿಕಲ್ ಆಭರಣಗಳು, ಜೀನ್ಸ್, ಗುಂಡಿಗಳು, ಬ್ರಾಕ್ಲಿಪ್ಲುಗಳು
೨. ಡೈಕ್ರೋಮೇಟ್ ಸೀಮೆಂಟ್, ತೊಗಲು, ಬೆಂಕಿಕಡ್ಡಿಗಳು
೩. ರಬ್ಬರ್ ರಾಸಾಯನಿಕಗಳು ಬಟ್ಟೆ, ಷೂ, ಚಕ್ರಗಳು, (ಟೈರ್‌ಗಳು)
೪. ಕೋಲೋಪೋನಿ ಅಂಟಿಸುವ ಪ್ಲಾಸ್ಟರ್, ಕೊಲೋಡೈಯಾನ್
೫. ಪ್ಯಾರಾಫೀನೈಲಿನಿಡೈಯಮೀನ್(Pauaphenylenediamine) ಕೂದಲಿಗೆ ಹಚ್ಚುವ ಬಣ್ಣ (ಡ್ರೈ), ಪೌಡರ್‌ಗಳು ಸಿಟ್ರಸ್ ಹಣ್ಣುಗಳು (ನಿಂಬೆ, ಕಿತ್ತಳೆ, ನೆಲ್ಲಿಕಾಯಿ, ಮೂಸಂಬಿ ಇತ್ಯಾದಿ)
೬. ನಿಯೊಮೈಸಿನ್ ಬೆನ್‌ಜೋಕೇನ್ (Neomycin benzocaine) ಚರ್ಮ ಗಾಯಗಳಿಗೆ ಹಚ್ಚುವ ಮುಲಾಮುಗಳು, ಅಂಗರಾಗಗಳು ಹಾಗೂ ಕ್ರೀಮ್‌ಗಳಲ್ಲಿರುವ ರಕ್ಷಣಾತ್ಮಕ ವಸ್ತು (Preservative)
೭. ಉಣ್ಣೆ ಆಲ್ಕೋಹಾಲ್ (Wool Alcohol) ಲೆನೋಲಿನ್, ಅಂಗರಾಗಳು, ಕ್ರೀಮ್‌ಗಳು
೮. ಎಪ್ರೋಕ್ಸಿ ರೆಸಿನ್ ರೆಸಿನ್ ಅಂಟುಗಳು

ಇನ್ನು ಸೋಂಕಿನಿಂದಾಗುವ ಉರಿತ, ಬ್ಯಾಕ್ಟೀರಿಯ, ಶಿಲೀಂದ್ರ ಮೊದಲಾದ ರೋಗಾಣುಗಳಿಂದುಂಟಾಗುತ್ತದೆ. ಉದಾಹರಣೆಗೆ ಕಿವಿಯಲ್ಲಿ ಸ್ರವಿಕೆಯಾಗಿ, ಒಣಗಿ ಗಾಯಗಳಾಗುತ್ತವೆ. ಕಿವಿಯಲ್ಲಿ ಮತ್ತು ಕಿವಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಚರ್ಮವು ಊದಿಕೊಂಡು ಕೆಂಪಾಗುತ್ತದೆ. ಇದು ತುರಿಸುತ್ತದೆ ಕೂಡ. ಸಾಮಾನ್ಯವಾಗಿ ಸ್ಟೆಫೈಲೋಕಾಕಸ್ ಬ್ಯಾಕ್ಟೀರಿಯ ಇದಕ್ಕೆ ಕಾರಣವಾಗುತ್ತದೆ. ಇದನ್ನು ಜೀವನಿರೋಧಕ ಔಷಧಿಗಳಿಂದ ಗುಣಪಡಿಸಲಾಗುತ್ತದೆ. ಇನ್ನೊಂದು ಬಗೆಯೆಂದರೆ, ಚರ್ಮದ ಸಂಯೋಗ ಸ್ಥಳಗಳಲ್ಲಿ ಅಂದರೆ ಕಂಕುಳು, ತೊಡೆಗಳ ಸಂದಿಗಳು, ಕಾಲ್ಬೆರಳುಗಳ ಸಂದಿಗಳು ಇಂಥ ಪ್ರದೇಶಗಳಲ್ಲಿ ಬೆವರುವುದು ಹೆಚ್ಚಾಗಿರುವುದರಿಂದ, ತೇವಾಂಶ ದೊರೆತು, ಸೋಂಕಿಗೆ ಅವಕಾಶ ದೊರೆಯುತ್ತದೆ. ಈ ಸೋಂಕಿನ ಉರಿತಗಳು ತುರಿಸುತ್ತವೆ. ಇವುಗಳನ್ನೂ ಸೂಕ್ತ ಶಿಲೀಂಧ್ರ ನಿರೋಧಕ, ಜೀವನಿರೋಧಕಗಳಿಂದ ಚಿಕಿತ್ಸೆ ಮಾಡಬೇಖು ಹಾಗೂ ಬೊಜ್ಜು, ಮಧುಮೇಹಗಳನ್ನು ನಿಯಂತ್ರಿಸಬೇಕು. ಇವುಗಳಲ್ಲಿ ಈ ಸೋಂಕುಗಳ ಸಾಧ್ಯತೆ ಹೆಚ್ಚು.

ಏಟೋಪಿಕ್ ಡರ್ಮಟೈಟಿಸ್ (Atopic Dermatitis)  ರೋಗಬಾಧಿತ ವ್ಯಕ್ತಿಗೆ ಅಥವಾ ಅವನ ವಂಶಸ್ಥರಿಗೆ (ತಂದೆ, ತಾಯಿ, ಇತ್ಯಾದಿ) ಏಟೋಪಿ ಅಥವಾ ಅಲರ್ಜಿಯಾಗುವ ಸಾಧ್ಯತೆಗಳಿರುವಾಗ ಉಂಟಾಗುವ ಚರ್ಮದುರಿತವೇ ಏಟೋಪಿಯ ಚರ್ಮದುರಿತ. ಸಾಮಾನ್ಯವಾಗಿ, ಗೂರಲು ಉಬ್ಬಸ ರೋಗ (ಅಸ್ತಮಾ) ಅಥವಾ ಅಲರ್ಜಿಯ ನೆಗಡಿ (Allergic Rhinitis)  ಇರುವವರರಲ್ಲಿ ಈ ಚರ್ಮರೋಗ ಉಂಟಾಗುತ್ತದೆ. ಅವರಿಗೆ ಅಸ್ತಮಾ ಬರಬೇಕೆಂದೇನೂ ಇಲ್ಲ; ಆದರೆ ಅಂತಹ ಇನ್ನಾವುದಾದರೂ ಅಲರ್ಜಿಯಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಉದಾಹರಣೆಗೆ ನೆಗಡಿ ಅಥವಾ ಚರ್ಮದುರಿತ ಉಂಟಾಗಬಹುದು.

ಈ ಚರ್ಮದುರಿತ, ಮೂರು ಹಂತಗಳಲ್ಲಿ ಕಾಣಿಸಿಕೊಳ್ಳುತ್ತದೆ. ಒಂದು; ಶಿಶುಗಳಲ್ಲಿ ಕಂಡುಬರುವುದು. ಸಾಮಾನ್ಯವಾಗಿ ಮೂರು ತಿಂಗಳ ಅಥವಾ ಮೂರು ತಿಂಗಳು ಮೀರಿದ ಶಿಶುಗಳಲ್ಲಿ ಕಂಡುಬರುತ್ತದೆ. ಆಗ, ಕೆನ್ನೆಗಳ ಮೇಲೆ ಆರಂಭವಾಗುವ ಕೆಂಪು ಕಲೆಗಳು, ಕ್ರಮೇಣ ತಲೆ, ಎದೆ, ಕಾಲುಗಳ ಹೊರಭಾಗಗಳಿಗೆ ಹರಡುತ್ತದೆ. ಕ್ರಮೇಣ ಈ ಕಲೆಗಳ ಮೇಲೆ ಗುಳ್ಳೆಗಳೂ ನೀರ್ಗುಳ್ಳೆಗಳೂ ಉಂಟಾಗುತ್ತವೆ. ಇವು ತುರಿಸಿದರೂ ಮಗುವು ಮೊದಲ ಮೂರು ತಿಂಗಳು ಕೆರೆಯುವುದಿಲ್ಲ. ಅನಂತರ, ಅದು ಉಜ್ಜಲು ಕೆರೆಯಲು ಮೊದಲು ಮಾಡುತ್ತದೆ.

ಸಾಮಾನ್ಯವಾಗಿ, ಅನೇಕ ಶಿಶುಗಳು ಈ ರೋಗದಿಂದ ಮುಕ್ತರಾಗುತ್ತಾರೆ. ಆದರೆ ಕೆಲವರಲ್ಲಿ ಇದು ವಾಸಿಯಾದರೂ, ಪುನಃ ಬಾಲ್ಯದಲ್ಲಿ ಇದು ಕಾಣಿಸಿಕೊಳ್ಳುತ್ತದ.ಎ ಬಾಲ್ಯದ ಹಂತವೆನ್ನಲಾಗುವ ಇದು ಚರ್ಮದ ಮಡಿಕೆಗಳಲ್ಲಿ ಉದಾಹರಣೆಗೆ, ಮೊಣಕೈಗಳ ಮುಂಭಾಗ, ಮಂಡಿಗಳ ಹಿಂಭಾಗದಲ್ಲಿ ಸಾಮಾನ್ಯ. ಮೂರನೆಯದಾದ ವಯಸ್ಕ ಹಂತ, ಯುವಕರಲ್ಲೂ ಚಿಕ್ಕವಯಸ್ಸಿನ ವಯಸ್ಕರಲ್ಲೂ ಕಾಣಿಸಿಕೊಳ್ಳುತ್ತದೆ. ಆಗ ಇದು, ಮುಖ, ಕತ್ತು, ಚರ್ಮದ ಮಡಿಕೆಗಳು ಈ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆಗ ಒಣಗಿದ ಗಟ್ಟಿಯಾದ ಕಲೆಗಳು ಸಾಮಾನ್ಯ.

ತುರಿಕೆ, ಈ ರೋಗದ ಪ್ರಮುಖ ಲಕ್ಷಣ. ಈ ರೋಗಕ್ಕೆ ವೈದ್ಯರ ನಿರ್ದೇಶಾನುಸಾರ ಸ್ಟಿರಾಯ್ಡ್ ಮುಲಾಮುಗಳನ್ನು ಬಳಸುವುದು ಮುಕ್ಯ ಚಿಕಿತ್ಸೆ. ಇದಲ್ಲದೆ, ಅನೇಕ ಪರಿಸರದ ಅಂಶಗಳು ಈ ರೋಗವನ್ನು ಉಲ್ಬಣಗೊಳಿಸುವುದರಿಂದ, ಅವುಗಳನ್ನು ನಿವಾರಿಸಬೇಕು. ಕೆಲವು ಸಾಬೂನುಗಳು, ಬೀಡಿ ಸಿಗರೇಟ್‌ಗಳ ಹೊಗೆ, ಮನೆಯ ಧೂಳು, ಹಾಲು, ಮೊಟ್ಟೆ, ಮೀನು, ಸೋಯಾಬೀನ್‌ಗಳು ಮೊದಲಾದ ಕೆಲವು ಆಹಾರ ಪದಾರ್ಥಗಳು ರೋಗವನ್ನು ಉಲ್ಬಣಗೊಳಿಸಬಹುದು. ಆದ್ದರಿಂದ ಇದನ್ನು ನಿವಾರಿಸಬೇಕು. ಗರ್ಭಧಾರಣೆ, ಮುಟ್ಟಾಗುವುದು, ಹೆರಿಗೆ ಮತ್ತು ಮುಟ್ಟಿನ ಅಂತ್ಯ. ಈ ಸಂದರ್ಭಗಳಲ್ಲಿ ರಸದೂತ (ಹಾರ್ಮೋನ್‌)ಗಳ ವ್ಯತ್ಯಾಸದಿಂದ ಈ ರೋಗವು ಉಲ್ಬಣಗೊಳ್ಳಬಹುದು. ಆತಂಕ, ಮಾನಸಿಕ ಒತ್ತಡ ಮೊದಲಾದ ಮಾನಸಿಕ ಅಂಶಗಳಿಂದಲೂ ರೋಗವು ಉಲ್ಬಣಿಸಬಹುದು.

ಏಟೋಪಿಯ ಚರ್ಮದುರಿತದಲ್ಲಿ ಚರ್ಮವು ಒಣಗಿರುತ್ತದೆ. ಹಾಗಾಗಿ ಸೌಮ್ಯ ಸಾಬೂನನ್ನು ಉಪಯೋಗಿಸಿ ನಿತ್ಯವೂ ಸ್ನಾನ ಮಾಡುವುದು, ಚರ್ಮದ ತೇವಾಂಶ ಹೆಚ್ಚಿಸುವುದಕ್ಕಾಗಿ ವ್ಯಾಸಲೀನ್‌ನಂಥ ಮುಲಾಮಗಳನ್ನು ಬಳಸುವುದು, ರೋಗಲಕ್ಷಣಗಳನ್ನುನಿವಾರಿಸುವಲ್ಲಿ ಬಹಳ ಸಹಾಯಕರ.

ಸೆಬೋರಿಕ್ ಚರ್ಮದುರಿತ (Seborrhoeic Dermatitis):

ಚರ್ಮ ತೈಲಗ್ರಂಥಿಗಳು (Seborrhoeic Dermatitis) ಹೆಚ್ಚಾಗಿ ತೈಲವನ್ನುತ್ಪಾದಿಸುವುದರಿಂದ ಈ ರೋಗ ಕಾಣಿಸಿಕೊಳ್ಳುತ್ತದೆಂದು ಕೆಲವರು ಹೇಳುತ್ತಾರೆ. ಆದರೆ ತೈಲದ ಉತ್ಪಾದನೆ ಹೆಚ್ಚಿರುವ ಎಲ್ಲರಲ್ಲೂ ಈ ರೋಗ ಕಂಡುಬರುವುದಿಲ್ಲ. ಆದರೆ ಈ ರೋಗ, ತೈಲೋತ್ಪಾದನೆ ಮಾಡುವ ಗ್ರಂಥಿಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಂಡುಬರುವ ಒಂದು ಚರ್ಮದುರಿತ. ಮುಖ್ಯವಾಗಿ ಇದು ಕಲೆ, ಮುಖ, ಎದೆ, ಬೆನ್ನು ಮತ್ತು ಚರ್ಮದ ಮಡಿಕೆ ಪ್ರದೇಶಗಳಲ್ಲಿ ಕಂಡುಬರುತ್ತದೆ. ಪಿಟಿರೋಷ್ಟೋರಂ ಒವೇಲ್ ಎಂಬ ಶಿಲೀಂಧ್ರವೂ (Fungus) ಇದಕ್ಕೆ ಕಾರಣವಾಗುತ್ತದೆ. ಅತಿಯಾದ ಬೆವರುವಿಕೆ, ಹಾರ್ಮೋನು, ವ್ಯತ್ಯಾಸಗಳು, ಅನುವಂಶಿಕತೆ, ಪರಿಸರದಲ್ಲಿ ತಾವಾಂಶದ ಹೆಚ್ಚಳ, ಮಾನಸಿಕ ಒತ್ತಡ, ಮೊದಲಾದ ಅಂಶಗಳೂ ಈ ರೋಗಕ್ಕೆ ಕಾರಣವಾಗಬಲ್ಲವು. ರೋಗನಿರೋಧಕ ಶಕ್ತಿ ಕುಂದಿರುವವರಲ್ಲಿ, ಉದಾಹರಣೆಗೆ ಏಡ್ಸ್ ರೋಗಿಗಳಲ್ಲಿ ಈ ರೋಗ ತೀವ್ರ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.

ಈ ರೋಗವು ಮೂರು ತಿಂಗಳ ಶಿಶುಗಳಲ್ಲೂ ಕಾಣಿಸಿಕೊಳ್ಳಬಹುದು. ಕೆಲವರು, ಇದು ಶಿಶುಗಳಿಗೆ ಜನನಾಂಗಗಳನ್ನು ಮುಚ್ಚಲು ಹಾಕುವ ವಸ್ತ್ರದಿಂದ ಉಲ್ಬಣಗೊಳ್ಳಬಹುದೆಂದೂ, ಏಟೋಪಿಯಿಂದ ಉಲ್ಭಣಗೊಳ್ಳಬಹುದೆಂದೂ ಹೇಳುತ್ತಾರೆ. ಸಾಮಾನ್ಯವಾಗಿ ಶಿಶುಗಳಲ್ಲಿ ಮೊದಲು ಜನನಾಂಗಗಳ ಮತ್ತು ತಲೆಯ ಪ್ರದೇಶದಲ್ಲಿ ಲಕ್ಷಣಗಳುಂಟಾಗಿ ನಂತರ, ಮುಖ, ಕಿವಿಯ ಹಿಂದೆ, ಹಣೆ, ಹುಬ್ಬು, ಕಣ್ಣುರೆಪ್ಪೆ. ಕತ್ತು, ಕಂಕುಳಗಳಲ್ಲಾಗುತ್ತವೆ. ಮಗುವು ಯಾವ ತೊಂದರೆಗೊಳಪಡದೆ ನೆಮ್ಮದಿಯಾಗಿರಬಹುದು.

ವಯಸ್ಕರಲ್ಲಿ ಕೂದಲು ಹೆಚ್ಚಾಗಿರುವ ಸ್ಥಳಗಳಲ್ಲಿ ಅಂದರೆ, ತಲೆ, ಹುಬ್ಬು, ಗಡ್ಡ, ಮೀಸೆಗಳು, ಮೂಗಿನ ಸನಿಹ, ಕಿವಿಯ ಹಿಂದೆ, ಎದೆ, ಬೆನ್ನು, ಕಂಕುಳು, ತೊಡೆಸಂದು, ಹೊಕ್ಕಳು ಮೊದಲಾದ ಪ್ರದೇಶಗಳಲ್ಲಾಗುತ್ತದೆ. ಮೊದಮೊದಲು ಕೂದಲಲ್ಲಿ ಹೊಟ್ಟು ಎಂದು ಕರೆಯಲಾಗುವ ಸಣ್ಣ ಬಿಳಿ ಪುಡಿ ಉದುರುತ್ತದೆ. ಇತರೆಡೆಗಳಲ್ಲಿ ಕೆಂಪಾಗಿ, ಸತ್ತ ಚರ್ಮಪದರ ಪದರವಾಗಿ ಉದರುತ್ತಿರುತ್ತದೆ. ಗಾಯಗಳು ಬಹಳ ತುರಿಸುತ್ತವೆ.

ಈ ರೋಗವನ್ನು ಕಿಟೋಟೋನಜೋಲ್‌ನಂತಹ ಶಿಲೀಂದ್ರ ನಿವಾರಕ ದ್ರಾವಣದ ತಲೆ ಸ್ನಾನ ಮತ್ತು ಮುಲಾಮುಗಳ ಬಳಕೆಯಿಂದ ನಿವಾರಿಸಬಹುದು.

ಒಣ ಚರ್ಮದ ಇಸಬು Asteatotic Eczema: ಇದು ವಯಸ್ಕರಲ್ಲಿ ಕಂಡುಬರುತ್ತದೆ. ಚರ್ಮದಲ್ಲಿ ಕೊಬ್ಬಿನಂಶ ಕಡಿಮೆಯಾಗುವುದರಿಂದ ಅದು ಒಣಗುತ್ತದೆ. ಅಲ್ಲದೆ ಅದು ನೀರನ್ನು ಹೆಚ್ಚು ಹೆಚ್ಚಾಗಿ ಕಳೆದುಕೊಳ್ಳುತ್ತದೆ. ತಣ್ಣನೆಯ ಗಾಳಿ ಬೀಸಿದರೆ ಅದು ಇನ್ನಷ್ಟು ಒಣಗುತ್ತದೆ. ಪರಿಸರದಲ್ಲಿ ತೇವಾಂಶ ಕಡಿಮೆಯಾಗುವುದರಿಂದಲೂ ಚರ್ಮ ಒಣಗುತ್ತದೆ. ಹೀಗಾಗಿ, ಈ ಇಸಬು ಚಳಿಗಾಲದಲ್ಲಿ ಇಸಬು (Winter Eczema)ಎಂದೂ ಕರೆಯುತ್ತಾರೆ. ಇದು ಪ್ರಮುಖವಾಗಿ, ಕಾಲುಗಳ ಹೊರಭಾಗದಲ್ಲಿ ಉಂಟಾಗುತ್ತದೆ. ತೋಳುಗಳೂ ಕೈಗಳೂ ಬಾಧೆಗೊಳಗಾಗಬಹುದು. ಚರ್ಮ ಒಣಗಿ ಒಡೆದಿರುತ್ತದೆ. ಒಂದು ಬಗೆಯ ವಿನ್ಯಾಸದಂತಿರುತ್ತದೆ. ಸತ್ತ ಚರ್ಮ ಪದರಗಳಾಗುತ್ತದೆ.

ರೋಗಿಗೆ ತೇವಾಂಶ ಹೆಚ್ಚಿಸುವ ವ್ಯಾಸಲೀನ್ ಮೊದಲಾದ ಮುಲಾಮುಗಳಿಂದ ಚಿಕಿತ್ಸೆ ಮಾಡಲಾಗುತ್ತದೆ. ತಣ್ಣಗಿನ ಗಾಳಿಯಿಂದ ಅವನು ರಕ್ಷಣೆ ಪಡೆಯಬೇಕು. ಉಣ್ಣೆಯ ಬಟ್ಟೆ ತೊಂದರೆ ನೀಡಬಹುದಾದುದರಿಂದ, ಹತ್ತಿ ಬಟ್ಟೆ ಧರಿಸಿ ಅದರ ಮೇಲೆ ಉಣ್ಣೆಯ ಬಟ್ಟೆ, ಧರಿಸುವುದು ಉತ್ತಮ, ಸಾಬೂನಿನಿಂದ ಸ್ನಾನ ಮಾಡುವ ಬದಲಿಗೆ ಕಡಲೆಹಿಟ್ಟು ಬಳಸಿ ಸ್ನಾನ ಮಾಡುವುದು ಉತ್ತಮ. ಅತಿಯಾದ ಬಿಸಿ ನೀರನ್ನು ಬಳಸಬಾರದು. ಸ್ನಾನವಾದ ಕೂಡಲೇ ತೇವಾಂಶದ ಮುಲಾಮನ್ನು ಸವರಿಕೊಳ್ಳುವುದೊಳ್ಳೆಯದು.

ಇತರ ಇಸಬುಗಳು: ಕೆಲವು ಜನರಲ್ಲಿ, ಕಾಲಿನ ಅಭಿಧಮನಿಗಳು (Veins) ಹಿಗ್ಗಿ, ತಿರುಚಿಕೊಂಡಿರುತ್ತವೆ. ಇವನ್ನು ವೇರಿಕೋಸ್ ವೇಯ್ನ್ (Varicose Venis) ಗಳೆನ್ನುತ್ತಾರೆ. ಸದಾ ನಿಂತೇ ಕೆಲಸ ಮಾಡುವವರಲ್ಲಿ ಈ ತೊಂದರೆ ಹೆಚ್ಚು. ಈ ತೊಂದರೆಯಿರುವವರಲ್ಲಿ ರಕ್ತವು ಸುಲಭವಾಗಿ ಮೇಲೆ (ಹೃದಯದೆಡೆಗೆ) ಚಲಿಸದೆ ಹೆಚ್ಚು ಹೊತ್ತು ಅಭಿಧಮನಿಗಳಲ್ಲೇ ನಿಂತಿರುತ್ತದೆ. ಇದರಿಂದ ಕೆಲವು ಹಾನಿಕಾರಕ ಅಂಶಗಳು ಬಿಳಿರಕ್ತಕಣಗಳಿಂದ ಹೊರಬಂದು ಚರ್ಮದಡಿಯ ಅಂಗಾಂಶವನ್ನು ನಾಶಪಡಿಸುತ್ತವೆ. ಇದರಿಂದ ಕಾಲಿನ ಚರ್ಮದಲ್ಲಿ ತುರಿಕೆಯಿಂದ ಕೂಡಿದ, ಕೆಂಪು ನೀಲಿ ಬಣ್ಣದ ಗುಳ್ಳೆಗಳಾಗುತ್ತವೆ. ಇವೆಲ್ಲಾ ಸೇರಿ ಗಾಯಗಳಾಗಿ ಇಸಬಾಗುತ್ತದೆ. ಮುಲಾಮುಗಳಿಂದ ಇಸಬನ್ನು ಸರಿಪಡಿಸಿ, ವೇರಿಕೋಸ್ ಅಭಿಧಮನಿಗಳನ್ನು ಶಸ್ತ್ರ ಚಿಕಿತ್ಸೆಯಿಂದ ಸರಿಪಡಿಸಬೇಕು.

ಕೈಕಾಲುಗಳ ಇಸಬು (Hand and Foot Eczema):

ಕೈಕಾಲುಗಳಲ್ಲೇ ಪ್ರಮುಖವಾಗಿ ಇಸಬಾಗುವುದಕ್ಕೆ ಹೀಗೆ ಹೇಳುತ್ತಾರೆ. ಇದಕ್ಕೆ ಹಲವಾರು ಕಾರಣಗಳಿರುತ್ತವೆ. ಏಟೋಪಿ ಒಂದು ಮುಖ್ಯ ಕಾರಣ. ಒಗ್ಗದಿರುವ ವಸ್ತುಗಳ ಸ್ಪರ್ಶ ಇನ್ನೊಂದು ಕಾರಣ. ನಿಕಲ್, ಕ್ರೋಮಿಯಂ ಮೊದಲಾದ ವಸ್ತುಗಳನ್ನು ಆಹಾರದ ಮೂಲಕ ಸೇವಿಸುವುದರಿಂದ ಅವುಗಳಿಗೆ ಅಲರ್ಜಿಯುಂಟಾಗಿ ಈ ತೊಂದರೆ ಕಾಣಿಸಿಕೊಳ್ಳಬಹುದು.

ಕೆಲವು ಸಂದರ್ಭಗಳಲ್ಲಿ ಅಂಗೈನಲ್ಲಿ ಚರ್ಮವು ಗಟ್ಟಿಯಾಗಿ, ಪದರಗಳು ಕಿತ್ತು ಬರುತ್ತವೆ. ಇಂಥವರಲ್ಲಿ ಪರೀಕ್ಷೆ ನಡೆಸಿದಾಗ, ತರಕಾರಿ, (ಈರುಳ್ಳಿ, ಬೆಳ್ಳುಳ್ಳಿ), ಸಾಬೂನುಗಳು, ನಿಕಲ್‌ನಂಥ, ಲೋಹಗಳು, ರಬ್ಬರ್, ಪ್ಲಾಸ್ಟಿಕ್, ಔಷಧಿಗಳು ಮೊದಲಾದ ವಸ್ತುಗಳಿಗೆ ಸ್ಪರ್ಶದ ಅಲರ್ಜಿಯಿರುವುದು ತಿಳಿದುಬಂದಿದೆ.

ಗೃಹಿಣಿಯರ ಇಸಬು (Housewives Eczema): ಗೃಹಿಣಿಯರ ಇಸಬು ಬಹುಸಾಮಾನ್ಯ ತೊಂದರೆ. ಇದು ಕೈಗಳ ಇಸಬು. ಇದು ಸಾಬೂನು ಉಪಯೋಗಿಸಿ ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ತರಕಾರಿ ಹಚ್ಚುವುದು ಮೊದಲಾದ ಮನೆಗೆಲಸ ಮಾಡುವ ಗೃಹಿಣಿಯರಲ್ಲಿ ಕಂಡುಬರುತ್ತದೆ. ಗೃಹಿಣಿಯರಲ್ಲಷ್ಟೇ ಅಲ್ಲದೆ, ಅಗಸರಲ್ಲೂ, ಉಪಹಾರ ಮಂದಿರಗಳಲ್ಲಿ ಕೆಲಸ ಮಾಡುವವರಲ್ಲೂ ಕಂಡುಬರುತ್ತದೆ. ವಿವಿಧ ವಸ್ತುಗಳ ಸ್ಪರ್ಶದೊಂದಿಗೆ ಶೀತ, ಉಷ್ಣ, ಏಟು, ಒತ್ತಡ ಮೊದಲಾದ ಅಂಶಗಳೂ ಇಲ್ಲಿ ಪ್ರಭಾವ ಬೀರುತ್ತವೆ. ಸಾಮಾನ್ಯವಾಗಿ ಹೆಂಗಸರು ಮದುವೆಯಾದ ಬಳಿಕ, ಮನೆಗೆಲಸ ಹೆಚ್ಚುವುದರಿಂದ ಈ ಬಾಧೆಗೆ ಒಳಗಾಗುತ್ತಾರೆ. ಮುಟ್ಟಂತ್ಯದಲ್ಲೂ, ಚರ್ಮ ಒಣಗುವುದರಿಂದ, ಈ ತೊಂದರೆ ಹೆಚ್ಚು. ಈ ತೊಂದರೆ ಸಾಮಾನ್ಯವಾಗಿ ಅಂಗೈಗಳಲ್ಲೂ, ಕೈಗಳ ಮೇಲ್ಭಾಗದಲ್ಲೂ ಆಗುತ್ತದೆ. ಚರ್ಮವು ಒಣಗಿ ಒಡೆಯುತ್ತದೆ. ಇಂಥವರು ಕೆಲಸ ಮಾಡುವಾಗ ಕೈಗ್ಲೌಸುಗಳನ್ನು ಧರಿಸಿ ಕೆಲಸ ಮಾಡುವುದೊಳ್ಳೆಯದು.

ಉಂಗುರ ಇಸಬು(Ring Eczema): ಇದು, ಉಂಗುರ ಧರಿಸುವ ಬೆರಳಿನಲ್ಲಿ ಉಂಟಾಗುತ್ತದೆ. ಉಂಗುರದ ಕೆಳಗೆ ಸಾಬೂನಿನ ಬುರುಗು ಬಂದು ಶೇಖರಣೆಯಾಗಿ ಚರ್ಮದಲ್ಲಿ ಒತ್ತಡ ಮತ್ತು ಉಜ್ಜುವಿಕೆಯಿಂದ ಕೆಂಪು ಕಲೆಯಾಗುತ್ತದೆ. ಇದು ಸಾಮಾನ್ಯವಾಗಿ ಹೆಂಗಸರಲ್ಲಿ ಅದರಲ್ಲೂ ಮದುವೆಯಾದ ಬಳಿಕ ಉಂಟಾಗುತ್ತದೆ.

ನಮ್ಯೂಲಾರ್ ಇಸಬು (Nummular Eczema): ಇದರಲ್ಲಿ ದುಂಡನೆಯ, ನಾಣ್ಯಕಾರದ ಇಸಬಿನ ಕಲೆಗಳಾಗುತ್ತವೆ. ಇದು ಸಾಮಾನ್ಯವಾಗಿ ವಯಸ್ಕರಲ್ಲಿ, ಐವತ್ತು ವರ್ಷ ವಯಸ್ಸು ಮೀರಿದವರಲ್ಲಾಗುತ್ತದೆ. ಸಾಮಾನ್ಯವಾಗಿ ಕೈಕಾಲುಗಳಲ್ಲಾಗುವ ಇದು, ಒಣ ಚರ್ಮದಲ್ಲಿ ಹೆಚ್ಚಾಗಿ ಉಂಟಾಗುತ್ತದೆ. ಬ್ಯಾಕ್ಟೀರಿಯ ರೋಗಾಣುಗಳು ಈ ಕಲೆಗಳಲ್ಲಿರುವುದು ಕಂಡು ಬಂದಿದೆ. ಆದರೆ ಇನ್ನೂ ಈ ರೋಗದ ಸ್ಪಷ್ಟ ಕಾರಣ ತಿಳಿಯಲಾಗಿಲ್ಲ.

ಪಾಂಫೋಲಿಕ್ಸ್(Pompholyx) ಇದು ಅಂಗೈ ಮತ್ತು ಅಂಗಾಲುಗಳುಂಟಾಗುವ ನೀರ್ಗುಳ್ಳೆಗಳ ಇಸಬು. ಇದು ವಿಪರೀತ ತುರಿಸುತ್ತದೆ. ಇದು ಏಕೆ ಉಂಟಾಗುತ್ತದೆಂದು ಸ್ಪಷ್ಟವಾಗಿ ತಿಳಿಯಲಾಗಿಲ್ಲ. ಕೆಲವರಲ್ಲಿ ಏಟೋಪಿಯಾ, ಕೆಲವರಲ್ಲಿ ಸ್ಪರ್ಶದ ಅಲರ್ಜಿಯೂ ಕಂಡಬಂದಿದೆ.

ಇಸಬನ್ನು ನೋಡುವುದರಿಂದಲೂ, ರೋಗಿಯ ಚರಿತ್ರೆಯನ್ನು ಕೇಳುವುದರಿಂದಲೂ ಗುರುತಿಸಬಹುದು. ಕೆಲವೊಮ್ಮೆ, ಯಾವ ವಸ್ತುವಿನ ಪ್ರಭಾವ ಅಥವಾ ಅಲರ್ಜಿಯಿಂದ ಇಸುಬಾಗಿದೆಯೆಂದು ತಿಳಿಯಲು ಪಟ್ಟಿ ಪರೀಕ್ಷೆ (Patchtest) ಯನ್ನು ಮಾಡಲಾಗುತ್ತದೆ. ಅನುಮಾನಿಸಿದ ಅಲರ್ಜಿಯುಂಟು ಮಾಡುವ ವಸ್ತುಗಳನ್ನು ಒಂದು ಪಟ್ಟಿಯಲ್ಲಿರುವ ಖಾಲಿ ಸ್ಥಳಗಳಲ್ಲಿ ಚರ್ಮದ ಮೇಲೆ ಹಚ್ಚಲಾಗುತ್ತದೆ. ನಲವತ್ತೆಂಟು ಗಂಟೆಗಳ ಬಳಿಕ ಇಲ್ಲಿ ಉಂಟಾದ ಪ್ರತಿಕ್ರಿಯೆಯನ್ನು ಗಮನಿಸಲಾಗುತ್ತದೆ. ನಲವತ್ತೆಂಟು ಗಂಟೆಗಳ ಬಳಿಕ ಇಲ್ಲಿ ಉಂಟಾದ ಪ್ರತಿಕ್ರಿಯೆಯನ್ನು ಗಮನಿಸಲಾಗುತ್ತದೆ. ಯಾವ ವಸ್ತುವಿಗಾದರು ಅಲರ್ಜಿಯಿದ್ದರೆ ಆ ವಸ್ತುವನ್ನು ಹಚ್ಚಿದ ಸ್ಥಳದಲ್ಲಿ ಕೆಂಪು ಗಂಧೆಯಾಗುತ್ತದೆ. ಈ ಪರೀಕ್ಷೆಯನ್ನು ಹೆಚ್ಚಾಗಿ ಸ್ಪರ್ಶದ ಉರಿತಕ್ಕೆ ಮಾಡಲಾಗುತ್ತದೆ.

ಗಮನಿಸಿ: ಇಸಬಿಗೆ ವೈದ್ಯರ ಮಾರ್ಗದರ್ಶನದಲ್ಲೇ ಚಿಕಿತ್ಸೆ ಮಾಡಿ. ಸಿಕ್ಕ ಸಿಕ್ಕ ಮುಲಾಮುಗಳನ್ನೆಲ್ಲಾ ಹಚ್ಚಬೇಡಿ.

ವೈದ್ಯಸಾಹಿತಿಯಾಗಿನನ್ನಅನುಭವ
ತಮ್ಮದೇ ಭಾಷೆಯಲ್ಲಿ ದೊರೆತಾಗ ಸಂತೋಷವಾಗುತ್ತದೆ
– ಡಾ|| ಬಿ.ಆರ್. ಸುಹಾಸ್ನನಗೆ ಸಾಹಿತ್ಯದ ಅಭಿರುಚಿ ಉಂಟಾದದ್ದು ನನ್ನ ತಂದೆಯರಿಂದ ಹಾಗೂ ಮನೆಯ ವಾತಾವರಣದಿಂದ ಎನ್ನಬಹುದು. ಸಾಹಿತಿಗಳಾದ ನನ್ನ ತಂದೆಯವರು ಮನೆಯಲ್ಲಿ ಸಂಗ್ರಹಿಸಿರುವ ಅನೇಕ ಪುಸ್ತರಕಗಳನ್ನೂ, ಮನೆಗೆ ಬರುತ್ತಿದ್ದ ಅನೇಕ ವೃತ್ತಪತ್ರಿಕೆಗಳನ್ನೂ ಚಿಕ್ಕವಯಸ್ಸಿನಿಂದ ಓದುತ್ತಾ ಸಾಹಿತ್ಯಾಸಕ್ತಿ ಮತ್ತು ಅದರಿಂದ ದೊರೆಯುವ ಆನಂದದ ಅನುಭವ ಉಂಟಾದವು. ಆದರೆ ಅದಕ್ಕಿಂತ ಹೆಚ್ಚಿನ ಆನಂದ, ನಾನು ಓದಿದ ಕತೆಗಳು ಮತ್ತು ವಿಚಾರಗಳನ್ನು ಶಾಲೆಯಲ್ಲಿನ ಗೆಳೆಯರಿಗೆ ಹೇಳುತ್ತಿದ್ದಾಗ ಆಗುತ್ತಿತ್ತು! ಮುಖ್ಯವಾಗಿ ಕಥೆಗಳನ್ನು ವರ್ಣಿಸಿ ಹೇಳುವುದು ನನಗೆ ಪ್ರಿಯವಾಗಿತ್ತು. ಈ ‘ಹೇಳುವುದನ್ನೇ’ ಬರೆಯಲು ಆರಂಭಿಸಿದೆ. ಇಂಗ್ಲಿಷ್‌ನಲ್ಲಿರುವುದನ್ನು ಕನ್ನಡಕ್ಕೂ, ಕನ್ನಡದಲ್ಲಿರುವುದನ್ನು ಇಂಗ್ಲೀಷ್‌ಗೂ ಅನುವಾದಿಸತೊಡಗಿದೆ. ಕೆಲವೊಮ್ಮೆ ಪುಟ್ಟದಾದ ಸ್ವತಂತ್ರ ಕಥೆಗಳನ್ನೂ ಬರೆಯುತ್ತಿದ್ದೆ. ಇವುಗಳಿಗೆ ನನಗೆ ಮನೆಯಲ್ಲೂ ಶಾಲೆಯಲ್ಲೂ ಪ್ರೋತ್ಸಾಹ ದೊರೆಯಿತು. ಹತ್ತನೇ ತರಗತಿಗಳಿಗೆ ಬಂದಾಗ, ನಾನೇ ಧೈರ್ಯಮಾಡಿ ಕೆಲವು ಮಕ್ಕಳ ಕಥೆಗಳನ್ನೂ ಲೇಖನಗಳನ್ನೂ ರಚಿಸಿ ಪತ್ರಿಕೆಗಳಿಗೆ ಕಳಿಸಿದೆ. ಅವು ಪ್ರಕಟವಾದಾಗ ನನಗೆ ಆದ ಸಂತೋಷ ಅಷ್ಟಿಷ್ಟಲ್ಲ.

ಮುಂದೆ, ಎಂ.ಬಿ.ಬಿ.ಎಸ್ ವಿದ್ಯಾರ್ಥಿಯಾದಾಗ ನನಗೆ ಬರೆಯಲು ಅಷ್ಟಾಗಿ ಸಮಯ ಸಿಗಲಿಲ್ಲ. ಎಂ.ಬಿ.ಬಿ.ಎಸ್ ವಿದ್ಯಾಭ್ಯಾಸ ಮುಗಿಸಿದಾಗ, ನನ್ನ ತಂದೆಯವರೇ ನನಗೆ ಬಿಡುವಿನ ವೇಳೆಯಲ್ಲಿ ವೈದ್ಯಕೀಯ ವಿಷಯಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಕನ್ನಡದಲ್ಲಿ ಸರಳವಾಗಿ ಬರೆಯುವಂತೆ ಸಲಹೆಯಿತ್ತು. ಕೆಲವು ಪ್ರಕಾಶಕರನ್ನು ಪರಿಚಯಸಿದರು. ಈ ರೀತಿಯ ಪುಸ್ತಕಗಳು ಬರುತ್ತಿದ್ದುದನ್ನು ನಾನೂ ನೋಡಿದ್ದೆನಾದ್ದರಿಂದ ಈ ಸಲಹೆ ನನಗೆ ಹಿಡಿಸಿತು. ಮೊದಲನೆಯದಾಗಿ ‘ಮಕ್ಕಳ ಕಾಯಿಲೆಗಳು’ ಎಂಬ ಚಿಕ್ಕ ಪುಸ್ತಕ ಬರೆಯತೊಡಗಿದೆ. ವೈದ್ಯಕೀಯ ಪದಗಳಿಗೆ ಕನ್ನಡದ ಸಮಾನಾರ್ಥ ಪದಗಳಿಗೆ, ಜನಪ್ರಿಯ ವೈದ್ಯಸಾಹಿತಿಗಳಾದ ಡಾ|| ಡಿ.ಎಸ್.ಶಿವಪ್ಪನವರ ವೈದ್ಯಪದಕೋಶ ಎಂಬ ನಿಘಂಟನ್ನೂ, ಜನಪ್ರಿಯ ವೈದ್ಯಸಾಹಿತಿಗಳಾದ ಡಾ|| ಸಿ.ಆರ್. ಚಂದ್ರಶೇಖರ್, ಡಾ. ಅನುಪಮಾ ನಿರಂಜನ, ಡಾ|| ಸಿ. ಅನ್ನಪೂರ್ಣಮ್ಮ ಮೊದಲಾದವರ ಕೃತಿಗಳನ್ನೂ ಓದಿದೆ. ಈ ಸಂದರ್ಭದಲ್ಲಿ ಅನೇಕ ಕಾಯಿಲೆಗಳನ್ನೂ ಅಂಗಾಗಗಳ ಹೆಸರುಗಳನ್ನೂ ಬಹಳ ಕಾಲದಿಂದ ಕನ್ನಡದಲ್ಲಿ ಗುರುತಿಸಿಕೊಂಡು ಬಂದಿರುವುದೂ, ಬಹಳ ಹಿಂದೆಯೇ ಇವನ್ನು ಸಂಸ್ಕೃತದ ಆಯುರ್ವೇದ ಗ್ರಂಥಗಳಲ್ಲಿ ಬಳಸಿರುವುದು, ನಮ್ಮ ದೇಶದ ಈ ವೈದ್ಯಪದ್ಧತಿಯೇ ಪ್ರಪಂಚದ ಅತ್ಯಂತ ಪ್ರಾಚೀನ ಪದ್ಧತಿಯೆಂದೂ ತಿಳಿಯಿತು! ಹೀಗಾಗಿ, ಜ್ವರ, ಅಪಸ್ಮಾರ, ವಿಷಮಶೀತಜ್ವರ, ಸಂಧಿವಾತ, ಅತಿಸಾರ, ಮೊದಲಾದ ಪದಗಳನ್ನು ಸರಾಗವಾಗಿ ಬಳಸುವುದನ್ನು ಕಲಿತೆ. ಅಂತೂ ಒಂದು ತಿಂಗಳಲ್ಲಿ ಹೌಸ್ ಸರ್ಜನ್ಸಿ ಮಾಡುತ್ತಿದ್ದಾಗ ಈ ಪುಸ್ತಕ ಬರೆದು ಮುಗಿಸಿದೆ. ಆನಂತರ ಮೂರು ತಿಂಗಳಗಳಲ್ಲಿ ‘ಪರಾವಲಂಬಿಗಳು’ ಮತ್ತು ‘ಏಡ್ಸ್’ಎಂಬು ಕಿರುಪುಸ್ತಕಗಳನ್ನೂ ಬರೆದೆ, ಕ್ರಮೇಣ, ಮೂರೂ ಪ್ರಕಟವಾದವು. ಹೌಸ್ ಸರ್ಜನ್ಸ್ ಮುಗಿಯುವ ಹೊತ್ತಿಗೆ, ಈ ಪುಸ್ತಕಗಳನ್ನು ನನ್ನ ಗುರುಗಳಾದ ಡಾ|| ಎಂ.ಎಸ್.ರಾಜಣ್ಣನವರಿಗೆ ತೋರಿಸಿದೆ; ಬಹಳ ಸಂತೋಷಗೊಂಡ ಅವರು ಈ ಕೆಲಸದಲ್ಲಿ ಮುಂದುವರೆಯುವಂತೆ ನನ್ನನ್ನು ಪ್ರೋತ್ಸಾಹಿಸಿದರು.

ಒಬ್ಬ ಕಿರಿಯ ವಿದ್ಯಾರ್ಥಿಯೊಬ್ಬನಿಂದ ನನಗೆ ಒಂದು ಫೋನ್ ಕರೆ ಬಂದಿತು. ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಸಾಹಿತ್ಯದ ವಿಷಯವಾಗಿ ಒಂದು ಸಮಾರಂಭವನ್ನಿಟ್ಟುಕೊಂಡಿರುವುದಾಗಿಯೂ ನಾನು ಅದರಲ್ಲಿ ಭಾಗವಹಿಸಬೇಕೆಂದೂ ಹೇಳಿದ. ನಾನು ಅಲ್ಲಿಗೆ ಹೋದಾಗ ಡಾ|| ಸಿ.ಆರ್. ಚಂದ್ರಶೇಖರ್, ಡಾ|| ಲೀಲಾವತಿ ದೇವದಾಸ್, ಶ್ರೀ.ಎನ್. ವಿಶ್ವರೂಪಾಚಾರ್, ಡಾ|| ವಸುಂಧರಾ ಭೂಪತಿ ಮೊದಲಾದ ವೈದ್ಯಸಾಹಿತ್ಯದ ದಿಗ್ಗಜರು ವೈದ್ಯಕೀಯ ವಿದ್ಯಾರ್ಥಿಗಳನ್ನುದ್ದೇಶಿಸಿ ವೈದ್ಯಸಾಹಿತ್ಯ ರಚನೆಯನ್ನು ಹೇಗೆ ಮಾಡುವುದು ಎಂಬ ವಿಷಯದ ಬಗ್ಗೆ ಮಾತನಾಡುತ್ತಿದ್ದರು. ಅದು ಮುಗಿದಾಗ ಡಾ|| ಎಂ.ಎಸ್. ರಾಜಣ್ಣನವರು ನನ್ನನ್ನು ಕಿರಿಯ ವೈದ್ಯಸಾಹಿತಿಯೆಂದು ಸಭೆಗೆ ಪರಿಚಯಿಸಿ ಹೂವಿನ ಬೊಕೆಯನ್ನು ಕೊಡಿಸಿದರು. ಮೊದಲ ಸನ್ಮಾನವಾಗಿದ್ದ ನನಗೆ ಅದು ಬಹಳ ಪ್ರೋತ್ಸಾಹ ಮತ್ತು ಸಂತೋಷ ನೀಡಿತು. ಆ ಸಂದರ್ಭದಲ್ಲಿ ಮೇಲೆ ಹೇಳಿದ ವೈದ್ಯ ಸಾಹಿತಿಗಳ ಪರಿಚಯವೂ ಆಯಿತು. ವೈದ್ಯ ಸಾಹಿತ್ಯ ಪರಿಷತ್ ಎಂಬ ಸಂಸ್ಥೆಯ ಬಗ್ಗೆ ತಿಳಿದು, ನಾನೂ ಅದರ ಸದಸ್ಯನಾದೆ. ವೈದ್ಯಕೀಯ ವಿಚಾರಗಳನ್ನು ಜನಸಾಮಾನ್ಯರಿಗೆ ಪ್ರಚಾರ ಮಾಡುವ ಈ ಪರಿಷತ್ತಿನ ಕಾರ್ಯ ಶ್ಲಾಘನೀಯವಾಗಿದೆ. ಅಂತೆಯೇ ಇದರಿಂದ, ಆರೋಗ್ಯ, ಅನುರಾಗ, ಜೀವನಾಡಿ ಮೊದಲಾದ ಆರೋಗ್ಯಪತ್ರಿಕೆಗಳ ಮತ್ತು ಇತರ ಪ್ರಕಾಶಕರ ಪರಿಚಯವಾಗಿ ಬರವಣಿಗೆ ಮುಂದುವರೆಸಲು ನನಗೆ ಒಳ್ಳೆಯ ಅವಕಾಶಗಳು ದೊರೆತವು.

ಎಂ.ಬಿ.ಬಿ.ಎಸ್. ಮುಗಿಸಿದ್ದ ನಾನು ಆಗ ಸ್ನಾತಕೋತ್ತರ ಪದವಿಯ ಪ್ರವೇಶ ಪರೀಕ್ಷೆಗೆ ಓದುತ್ತಿದ್ದೆ. ಬಿಡುವಾದಾಗ ಕೆಲವು ಲೇಖನಗಳನ್ನೂ, ಕಿರುಪುಸ್ತಕಗಳನ್ನೂ ಬರೆಯುತ್ತಿದ್ದೆ. ಇವುಗಳನ್ನು ಓದಿ, ಪ್ರಕಾಶಕರಿಂದ ನನ್ನ ವಿಳಾಸವನ್ನು ತಿಳಿದುಕೊಂಡು ಕೆಲವು ಜನರು ಚಿಕಿತ್ಸೆಗಾಗಿ ನನ್ನ ಬಳಿಗೆ ಬರತೊಡಗಿದರು. ಇದೂ ನನಗೆ ಬಹಳ ಪ್ರೋತ್ಸಾಹ ಸಂತೋಷಗಳನ್ನು ಕೊಟ್ಟಿತು.

ನಮಗೆ ತಿಳಿದಿರುವ ಯಾವುದೇ ವಿಷಯವನ್ನು ಇತರರಿಗೆ ತಿಳಿಸಲು ಸಹಜವಾಗಿಯೇ ಇಷ್ಟವಾಗುತ್ತದೆ. ಆದರೆ ಸರಿಯಾದ ಮಾತುಗಾರಿಕೆ ಇಲ್ಲದಿರುವುದು, ಸಮಯಾಭಾವ, ಕೇಳುಗರಿಗೆ ತಾಳ್ಮೆಯಿಲ್ಲದಿರುವುದು, ಇವುಗಳಿಂದ ಇದು ಕೆಲವೊಮ್ಮೆ ಕಷ್ಟವಾಗುತ್ತದೆ. ಆದ್ದರಿಂದ ಇದಕ್ಕೆ ಸಾಹಿತ್ಯ ಒಳ್ಳೆಯ ಮಾರ್ಗವೆಂದು ನನ್ನ ಅನಿಸಿಕೆ. ಸಾಹಿತ್ಯದಿಂದ ನಾವು ಯಾರನ್ನೂ ಬಲವಂತಪಡಿಸುವುದಿಲ್ಲ; ಅವರಿಗೆ ಬೇಕಾದ್ದನ್ನು ತೆಗೆದುಕೊಳ್ಳಲು ಅವಕಾಶ ಕಲ್ಪಿಸಿಕೊಡುತ್ತೇವಷ್ಟೆ, ಜನರಿಗೆ ಬೇಕಾದ ಅನೇಕ ವಿಚಾರಗಳು ಅವರಿಗೆ ಅನೇಕ ಬಾರಿ ಸಿಗುವುದಿಲ್ಲ. ಅವು ಅವರಿಗೆ ತಮ್ಮದೇ ಭಾಷೆಯಲ್ಲಿ ದೊರೆತಾಗ ಅವರಿಗೆ ಸಂತೋಷವಾಗುವುದರಲ್ಲಿ ಸಂದೇಹವೇ ಇಲ್ಲ. ಈ ದೃಷ್ಟಿಯಿಂದ ಜನಸಾಮಾನ್ಯರು ಅಗತ್ಯವಾಗಿ ತಿಳಿದುಕೊಳ್ಳಬೇಕಾದ ಕೆಲವು ಆರೋಗ್ಯಪರ, ವೈದ್ಯಕೀಯ ವಿಚಾರಗಳನ್ನು ನನ್ನದೇ ಆದ ಶೈಲಿಯಲ್ಲಿ ಕನ್ನಡದಲ್ಲಿ ಬರೆದಿರುವುದು, ಬರೆಯುತ್ತಿರುವುದು ನನಗೆ ಬಹಳ ಸಂತೋಷ ಕೊಟ್ಟಿದೆ.

* * *