ಮೃತ್ಯುವನ್ನು ಗೆಲ್ಲಲು ಮಾನವ ಅನೇಕ ಶತಮಾನಗಳಿಂದ ಪ್ರಯತ್ನಿಸುತ್ತಲೇ ಇದ್ದಾನೆ. ತನಗೆ ಬರುವ ಜಾಡ್ಯಗಳನ್ನು ಚುಚ್ಚುಮದ್ದುಗಳಿಂದ, ದೇಹಕ್ಕೆ ತೊಂದರೆ, ಅಪಘಾತವಾದಾಗ, ಅದಕ್ಕೆ ತಕ್ಕುದಾದ ಶಸ್ತ್ರಕ್ರಿಯೆಯಿಂದ ಊನವಾದ, ನಾಶವಾದ ಅವಯವಗಳಿಗೆ ಕೃತಕ ಉಪಕರಣಗಳನ್ನು ಜೋಡಿಸಿಕೊಂಡು ದೀರ್ಘಾಯುವಾಗಲೂ ಬಯಸುತ್ತಾನೆ. ಕೃತಕ ಹಲ್ಲಿನ ಸೆಟ್ಟು, ಕೆಟ್ಟ ಕಿವಿಗೆ ಶ್ರವಣಯಂತ್ರ, ಮಬ್ಬು ಕಣ್ಣಿಗೆ ಮಸೂರ, ಹೀಗೆ ನಾನಾ ತರಹದ ಉಪಕರಣಗಳನ್ನು ಅಳವಡಿಸಿಕೊಂಡು ದೀಘಾಯು ಮಾತ್ರವಲ್ಲ, ಸುಂದರನಾಗಿಯೂ ಸದೃಢನಾಗಲೂ ಪ್ರಯತ್ನಿಸುತ್ತಾನೆ.

ಆದರೆ ಇದಕ್ಕೆ ಕೆಲವು ಅಡ್ಡಿ-ಆತಂಕಗಳು ಇವೆ. ಮಧುಮೇಹ ರೋಗಿ ಇನ್ಸುಲಿನ್ ತೆಗೆದುಕೊಂಡು ಜೀವದಿಂದ ಇದ್ದರೆ, ಅಸ್ತಮಾ ಇದ್ದವರು ಮಾತ್ರೆ, ಮದ್ದುಗಳಿಂದ ಜೀವಹಿಡಿದಿದ್ದರೆ, ರಕ್ತದೊತ್ತಡ ಇದ್ದವರು ಗುಳಿಗೆಗಳಿಂದ ಒತ್ತಡ ನಿಯಂತ್ರಿಸಿಕೊಂಡು ದೀರ್ಘಾಯುವಾಗಿ ಬದುಕುತ್ತಾರೆ.

ಈ ತರಹ ಬೇರೆ-ಬೇರೆ ತರಹದ ಮಾತ್ರೆ- ಮದ್ದುಗಳಿಂದ ಮಧುಮೇಹ, ಅಸ್ತಮಾ, ಕ್ಯಾನ್ಸರ, ರಕ್ತದೊತ್ತಡ ಮುಂತಾದವುಗಳನ್ನು ನಿವಾರಿಸಿಕೊಳ್ಳುವ ಬದಲು, ನಮ್ಮ ದೇಹದಲ್ಲಿಯೇ ಇನ್ಸುಲಿನ್ ಹುಟ್ಟುವಂತೆ, ಕ್ಯಾನ್ಸರದ ರಕ್ತದೊತ್ತಡ ನಿಯಂತ್ರಿಸುವ ಕಿಣ್ವಗಳೋ, ರಸದೂತಗಳೋ ಹುಟ್ಟಿದರೆ ಎಷ್ಟು ಒಳ್ಳೆಯದು. ಅನುದಿನವೂ ಚುಚ್ಚುಮದ್ದನ್ನು ತೆಗೆದುಕೊಳ್ಳುವ, ಮಾತ್ರೆ ನುಂಗುವ ಅಥವಾ ಶಸ್ತ್ರಕ್ರಿಯೆಯನ್ನು ಮಾಡಿಸಿಕೊಳ್ಳುವ ಪ್ರಮೇಯವಿಲ್ಲ. ಈಗ ಇಂತಹ ಎಲ್ಲ ವಿಚಾರಗಳಿಗೆ ಕಾಲ ಕೂಡಿಬಂದಿದೆ.

ಇದೇ ‘ಪುನರ್ಜನ್ಮ’ ಅಥವಾ ‘ಕಾಯಕಲ್ಪ’ ಇದರಲ್ಲಿ ನಮ್ಮ ದೇಹಕ್ಕೆ ಏನಾದರೂ ಗಾಯವಾದಾಗ, ಜಾಡ್ಯ ಬಂದಾಗ, ಮಧುಮೇಹ ಬಂದಾಗ ಅದು ನಮ್ಮ ದೇಹದ ಬ್ರಹ್ಮ ಕೋಶಗಳಿಂದ ರಿಪೇರಿಯಾಗುತ್ತದೆ. ಇದರಿಂದ ಕಹಿ ಔಷಧಿ ಕುಡಿಯುವ, ಮಾತ್ರೆ ನುಂಗುವ ಬೇಸರವಿಲ್ಲ. ದೇಹ ಕೊಯ್ಸಿಕೊಳ್ಳುವ ಹೆದರಿಕೆ ಯಾವುದೂ ಇಲ್ಲ.

ಹಾಗಾದರೆ ನಮ್ಮ ದೇಹದಲ್ಲಿಯೇ ನಮ್ಮ ರಿಪೇರಿಗೆ ಬೇಕಾಗುವ ಈ ಬ್ರಹ್ಮ ಕೋಶಗಳನ್ನು ಹೇಗೆ ಸೃಷ್ಟಿಬೇಕು ಎಂಬುದೊಂದು ಪ್ರಶ್ನೆ. ಈ ಬ್ರಹ್ಮಕೋಶಗಳಿಗೆ “Stem cells” ಅಂತ ಅನ್ನುತ್ತಾರೆ. ಈ ಕೋಶಗಳಿಗೆ ಮೂಲಕೋಶಗಳು ಎಂತಲೂ ಅನ್ನಬಹುದು. ತಾಯಿಯಿಂದ ಬಂದ ಅಂಡ, ತಂದೆಯಿಂದ ಬಂದ ಪುಂಬೀಜದ ಜೊತೆಗೆ ಮಿಳಿತವಾಗಿ ಅದು ಭ್ರೂಣವಾಗುತ್ತದೆ. ಈ ಭ್ರೂಣ ಮುಂದೆ ಅನೇಕ ತರಹದ ಕೋಶಗಳನ್ನು ಹುಟ್ಟಿಸುತ್ತದೆ. ಈ ಭ್ರೂಣದಲ್ಲಿಯ ಕೋಶಗಳು ವಿಭಜನೆಗೊಳ್ಳುತ್ತ ಹೋಗಿ ದಾಳಿಂಬೆಯ ತರಹ ಆಗುತ್ತದೆ. ಇದಕ್ಕೆ blastula ಅಂತ ಅನ್ನುತ್ತಾರೆ. ಈ ಕೋಶಗಳು ತರುವಾಯ ಮಾಸು, ಕರುಳುಬಳ್ಳಿ ಹಾಗೂ ಶಿಶುವನ್ನು ಮಾಡುತ್ತವೆ. ಈ ಕೋಶಗಳಿಗೆ  “Totipotent cells” ಅನ್ನುತ್ತಾರೆ. ಕೇವಲ ಶಿಶುವನ್ನು  ಮಾಡುವ ಕೋಶಗಳಿಗೆ Pluri Potent cells ಅಂತಲೂ, ರಕ್ತದ ವಿವಿಧ ಕೋಶಗಳನ್ನು ಹುಟ್ಟಿಸುವ ಕೋಶಗಳಿಗೆ multi potent cells ಅಂತಲೂ ಮತ್ತು ಒಂದೇ ತರಹದ ಕೋಶಗಳನ್ನು ಹುಟ್ಟಿಸುವ Uni potent cells ಕೋಶಕ್ಕೆ ಅಂತಲೂ ಅನ್ನುತ್ತಾರೆ. ಉದಾ: ಪುಂ ಬೀಜದ ಕೋಶಗಳು.

ಈ ಮೂಲಕೋಶಗಳು ೨೦೦ಕ್ಕೂ ಹೆಚ್ಚು ತರಹದ ಕೋಶಗಳಾಗಿ ಮಾರ್ಪಡುತ್ತವೆ. ಒಂದು ಸಲ ಒಂದು ಮೂಲ ಕೋಶ ಒಂದು ತರಹದ ಕೋಶವಾಗಿ  ಮಾರ್ಪಟ್ಟರೆ ತಿರುಗಿ ಮತ್ತೆ ಹಿಂದಿನ ಕೋಶವಾಗಿ ಆಗಲಾರದು ಉದಾ: ಪಿತ್ತಕೋಶವಾಗಿ ಒಂದು ಸಲ ಮಾರ್ಪಟ್ಟರೆ ಮತ್ತೆ ತಿರುಗಿ ಮೂಲಕೋಶವಾಗದು. ಆದರೆ ಮೂಲಕೋಶವು ಹೃದಯದಲ್ಲಿರುವ ಕೋಶವಾಗಿ ಕೆಲವು ಪ್ರಸಂಗಗಳಲ್ಲಿ ಇನ್ಸುಲಿನ್ ಉತ್ಪಾದಿಸುವ, ಮೇದೋಜಿರಕವಾಗಿ, ಚರ್ಮದ ಕೋಶಗಳಾಗಿ, ಮಿದುಳಿನ ಕೋಶವಾಗಿ ಮಾರ್ಪಡಬಲ್ಲದು. ವೃದ್ಧಿಗೊಳ್ಳಬಲ್ಲದು. ಎಲ್ಲೆಲ್ಲಿ ಕೊರೆತಯಿದೆಯೋ ಅಲ್ಲಲ್ಲಿ ಈ ಕೋಶಗಳು ಮಾರ್ಪಡಬಲ್ಲದು. ಈ ತರಹ ಮಾರ್ಪಾಡಾಗುವುದು ಸಾಮಾನ್ಯವಾಗಿ ಆಗುವುದಿಲ್ಲ. ಆದರೆ ಪ್ರಚೋದಿಸಿದರೆ ಇದು ಸಾಧ್ಯ.

ಈ ಮೂಲಕೋಶಗಳು ತಾವಾಗಿಯೇ ರಕ್ತವನ್ನು ಹೀರುವ, ಪಂಪು ಮಾಡುವ, ಸಂದೇಶ ವಾಹಕದ ಕೆಲಸ ಮಾಡುವುದಿಲ್ಲ. ಆದರೆ ಈ ಕೋಶಗಳನ್ನು ವಿಶಿಷ್ಟ ವಾತಾವರಣದಲ್ಲಿ ಬೆಳೆಸಿದಾಗ ಅದು ವಿಶಿಷ್ಟ ಕೋಶಗಳಾಗಿ ಮಾರ್ಪಡುತ್ತದೆ. ಈ ತರಹದ ಕೋಶಗಳು ನಮ್ಮ ದೇಹದಲ್ಲಿ ಇದ್ದೇ ಇರುತ್ತದೆ. ಪಿತ್ತಕೋಶದ ಕೆಲವು ಕೋಶಗಳು ನಾಶವಾದಾಗ ಅವು ಹುಟ್ಟಿಸಬಲ್ಲವು, ಹೃದಯಾಘಾತವಾದಾಗ ಸಹ ಅದೇ ತರಹ ರಿಪೇರಿ ಮಾಡಬಲ್ಲವು. ಆದರೆ ಅದಕ್ಕೂ ಮೀರಿ ಬಂದಾಗ ಈ ಕೋಶಗಳಿಗೆ ಸತ್ತುಹೋದ ಅಷ್ಟೂ ಕೋಶಗಳಿಗೆ ಮರುಜನ್ಮ ಕೊಡಲಾರವು. ಆಗ ಈ ಮೂಲಕೋಶಗಳ ಚಿಕಿತ್ಸೆ ಬೇಕಾಗುತ್ತದೆ. ಇವನ್ನು ಕೊಟ್ಟ ನಂತರ ಪಿತ್ತಕೋಶದಲ್ಲಿ ಹೊಸ ಕೋಶಗಳು ಹುಟ್ಟುತ್ತವೆ. ಹೃದಯದಲ್ಲಿ ಮೇದೋಜೀರಕದಲ್ಲಿ ಹುಟ್ಟುತ್ತವೆ ಇನ್ಸುಲಿನ್ ಉತ್ಪಾದಿಸುವ ಕೋಶಗಳು ಚಿಗುರಿ ಅವರಿಗೆ ಚುಚ್ಚುಮದ್ದೇ ಬೇಕಾಗಲಿಕ್ಕಿಲ್ಲ, ನರಮಂಡಲದ ಕೋಶ ಹುಟ್ಟಿ ತಲೆಯು ಸರಿಯಾಗಬಹುದು. ಪಾರ್ಕಿನ್‌ಸನ್ ಕಾಯಿಲೆ, ಬೆನ್ನುಮೂಳೆಯಲ್ಲಿರುವ ಬೆನ್ನುಹುರಿ. ಸಹ ನಾಶವಾದದ್ದು ಸರಿಯಾಗಬಹುದು. ಇದಕ್ಕೆ ಉದಾ:- ‘ಸುಪರ್‌ಮ್ಯಾನ್’ ಚಿತ್ರದ ನಾಯಕ ಕ್ರಿಷ್ಟೋಫರ್ ರೀಡ್‌ನಿಗೆ ಮಿದುಳಿಗೆ ಗಾಯವಾಗಿ ನಡೆದಾಡಲು, ಮಾತನಾಡಲು ಬರುತ್ತಿರಲಿಲ್ಲ. ಈ ಮೂಲಕೋಶಗಳನ್ನು ಕೊಟ್ಟ ನಂತರ ಆತನಿಗೆ ಮಾತನಾಡಲು ಬಂದಿತು.

ಈ ಕೋಶಗಳನ್ನು ಬೆಳೆಸಿ ಆಲ್‌ಝೀಮರನ ಕಾಯಿಲೆ, ವಿಲೀನವಾಗದ ಮೂಳೆಗಳ ಜೋಡಣೆಗೆ, ಚಿಕಿತ್ಸೆಗೆ ಒಗ್ಗದ ಪಾಂಡುರೋಕ್ಕೆ, ಮಧುಮೇಹ, ರುಮೆಟಾಯ್ಡ್ ಆರ್ಥ್ರೈಟಿಸ್‌ಗೆ, ಥ್ಯಾಲಿಸೀಮಿಯಾ ಕಾಯಿಲೆ ಮುಂತಾದವುಗಳನ್ನು ನಿವಾರಿಸಬಹುದು.

ಕ್ಯಾನ್ಸರ್ ಕಾಯಿಲೆಗೆ ಬೇಕಾಗುವ ಮಾತ್ರೆಗಳನ್ನು ಮೊದಲು ಪ್ರಾಣಿಗಳಿಗೆ ಕೊಟ್ಟು, ಅದರ ಪರಿಣಾಮ ನೋಡಿ ನಂತರ ಅದನ್ನು ಮನುಷ್ಯನಿಗೆ ಕೊಡಲಾಗುತ್ತದೆ. ಅದರಲ್ಲಿ ಪ್ರಾಣಿಗೆ ತೊಂದರೆಯಾದರೆ, ಅದನ್ನು ಮನುಷ್ಯರಿಗೆ ಕೊಡುವುದಿಲ್ಲ. ಇದರ ಬದಲು ಪ್ರಯೋಗಶಾಲೆಯಲ್ಲಿ ಮನುಷ್ಯರ ಕೋಶಗಳನ್ನು ಬೆಳೆಯಿಸಿ, ಅಲ್ಲಿ ಮಾತ್ರೆಯ ಪರಿಣಾಮ ನೋಡಲು ಅನುಕೂಲವಾಗಿವೆ. ಆ ಭಯಂಕರ ಪರಿಣಾಮ ಕೇವಲ ಕೋಶಗಳಲ್ಲಿ ನಾವು ನೋಡಿದರೆ, ಮುಂದೆ ಮನುಷ್ಯರಿಗೆ ಕೊಡುವುದನ್ನು ನಿಲ್ಲಿಸಬಹುದು. ಏಕೆಂದರೆ ಪ್ರಾಣಿಗಳೂ ಬೇರೆಯೇ, ಮನುಷ್ಯರೂ ಬೇರೆಯೇ. ಪ್ರಾಣಿಗಳಲ್ಲಿ ಕಂಡುಬರದ ಕೆಲವು ಭಯಂಕರ ಪರಿಣಾಮ ಮನುಷ್ಯರಲ್ಲಿ ಕಂಡುಬರಬಹುದು.

ಈ ಕೋಶಗಳನ್ನು ಎಚ್.ಐ.ವಿ. ರೋಗಿಗಳಿಗೆ ರಕ್ತದ ಗೋಲಕಗಳನ್ನು ವೃದ್ಧಿಸಲು ಪುಂಬೀಜ. ಕೊರತೆಯಿರುವ ಗಂಡಸರಲ್ಲಿ ಅದನ್ನು ಹೆಚ್ಚಿಸಲು, ಬೇಗ ಮುಟ್ಟುನಿಂತ ಹೆಂಗಸರಲ್ಲಿ, ಮಕ್ಕಳು ಬೇಕೆನ್ನುವವರಲ್ಲಿ ಈ ಕೋಶಗಳ ಚಿಕಿತ್ಸೆಯನ್ನು ಕೊಡಬಹುದು. ಈವರೆಗೆ ಯಾರಿಗಾದರೂ ರಕ್ತದ ಕ್ಯಾನ್ಸರ ಬಂದರೆ ಅವರ ದೇಹಕ್ಕೆ ಮಿಳಿತವಾಗುವ ಅವರ ಸಂಬಂಧಿಕರ ಅಥವಾ ಸಹೋದರರ ಮೂಳೆಯಲ್ಲಿರುವ ಮಜ್ಜನ್ನು ತೆಗೆದು ಇವರಿಗೆ ಹಾಕುತ್ತಿದ್ದರು. ಇದರಲ್ಲಿ ಮಜ್ಜನ್ನು ತೆಗೆಯುವಾಗ ಆಗುವ ಗಾಯ ಮತ್ತು ಪ್ರತಿಸಲ ಮೂಳೆಯಲ್ಲಿ ತೂತುಮಾಡುವ, ಅವರ ದೇಹಕ್ಕೆ ಸರಿಹೊಂದುವರನ್ನು ಹುಡುಕುವ ಯಾವ ತಾಪತ್ರವವಿಲ್ಲ. ಏಕೆಂದರೆ ಈ ಮೂಲಕೋಶಗಳು ಅವರದ್ದೇ ಇರುವುದರಿಂದ ಯಾವ ತಾಪತ್ರಯವಿಲ್ಲ.

ಹಾಗಾದರೆ ಈ ಮೂಲಕೋಶಗಳನ್ನು ಎಲ್ಲಿಂದ ಸಂಗ್ರಹಸಿಬೇಕು. ಕೆಡದ ಹಾಗೆ ಹೇಗೆ ಇಡಬೇಕು ಎಂಬ ಪ್ರಶ್ನೆಗಳು ಬರುತ್ತವೆ. ಈ ಮೂಲಕೋಶಗಳು ಶಿಶುವಿನ ಕರುಳುಬಳ್ಳಿಯಲ್ಲಿ, ನಮ್ಮ ದೇಹದಲ್ಲಿ ಹರಿಯುವ ರಕ್ತದಲ್ಲಿ ಹಾಗೂ ಭ್ರುಣದಲ್ಲಿ ಇರುತ್ತವೆ. ಈ ಮೂರರಲ್ಲಿ ಕರುಳುಬಳ್ಳಿಯಿಂದ ರಕ್ತತೆಗೆಯುವುದು ಸುಲಭ.

ನವಜಾತ ಶಿಶುವಿನ ಕರುಳುಬಳ್ಳಿಯನ್ನು ಬಿಸಾಡುವುದರ ಬದಲು ಅದರಲ್ಲಿರುವ ರಕ್ತವನ್ನು ಸಂಗ್ರಹಿಸಿಟ್ಟು, ನಂತರ ಆ ಶಿಶುವು ಬೆಳದ ಮೇಲೆ ಅದಕ್ಕೆ ಏನಾದರೂ ಈ ಮೂಲಕೋಶಗಳು ಬೇಕಾಗಿದ್ದರೆ, ಅದನ್ನು ತಿರುಗಿ ಬಳಸಬಹುದು, ಇಲ್ಲವೇ ಮುಂದೆ ಈ ಶಿಶುವು ದೊಡ್ಡದಾದಾಗ ತನಗೆ ಬೇಡವಾದರೆ, ಮುಂದೆ ಯಾರಿಗಾದರೂ ದಾನಮಾಡಬಹುದು.ಈ ಕೋಶಗಳನ್ನು ಈಗ ‘ಬ್ಯಾಂಕ್’ ನಲ್ಲಿಡಲಾಗುತ್ತದೆ. ಕಣ್ಣಿನ ಬ್ಯಾಂಕ್, ಎದೆಹಾಲಿನ ಬ್ಯಾಂಕ್, ಧಾತುವಿನ ಬ್ಯಾಂಕ್, ರಕ್ತದ ಬ್ಯಾಂಕ್ ಈ ಎಲ್ಲದರ ಜೊತೆಗೆ ಈಗ ಈ `Stem cell bank’ ಬಂದಿದೆ. ಅಮೇರಿಕಾ ಇಂಗ್ಲೇಂಡ್ ಮುಂತಾದ ಮುಂದುವರೆದ ರಾಷ್ಟ್ರಗಳಲ್ಲಿ ಈ ಕೋಶಗಳನ್ನು ೧೦೦ ವರ್ಷ, ಅಂದರೆ ಒಬ್ಬ ಮನುಷ್ಯನ ಜೀವಮಾನದವರೆಗೆ ಇಡುವ ವ್ಯವಸ್ಥೆ ಇಡುವ ವ್ಯವಸ್ಥೆ ಇದೆ. ಸದ್ಯಕ್ಕೆ ನಮ್ಮ ದೇಶದಲ್ಲಿ ೩೦ ವರ್ಷಗಳವರೆಗೆ ಇಡುವ ವ್ಯವಸ್ಥೆಯಿದೆ. ಹೀಗೆ ಇಡಲು ಸ್ವಲ್ಪ ಹಣ ಕೊಡಬೇಕಾಗುತ್ತದೆ. ಶಿಶುವು ದೊಡ್ಡದಾಗುವ ತನಕ ಈ ಕೋಶಗಳ ಮೇಲೆ ತಂದೆ ತಾಯಿಗಳ ಹಕ್ಕು ಇರುತ್ತದೆ. ನಂತರ ಶಿಶುವು ದೊಡ್ಡದಾದಾಗ ಅದಕ್ಕೆ ಹಕ್ಕು ಬರುತ್ತದೆ. ಪ್ರೌಢ ವ್ಯಕ್ತಿ ಇವನ್ನು ಬೇಕಾದರೆ ಇಟ್ಟುಕೊಳ್ಳಬಹುದು. ಇಲ್ಲವಾದರೆ ಹೆರವರಿಗೆ ಕೊಡಬಹುದು.

ಈ ಕೋಶಗಳಿಗೆ ನಮಗೆ ಬೇಕಾದ ಕೋಶಗಳನ್ನು ಸಂಪರ್ಕ ಬರುವಂತೆ ಪ್ರಯೋಗಶಾಲೆಯಲ್ಲಿ ಇರಿಸಿ, ಹೃದಯದ ಕೋಶ, ಮಿದುಳಿನ, ಚರ್ಮದ, ಪಿತ್ತಕೋಶ, ರಕ್ತ, ಮೂಳೆಯ ಕೋಶಗಳನ್ನು ಹುಟ್ಟಿಸಬಹುದು. ಹಾಗಾದರೆ ಇಷ್ಟೊಂದು ಉಪಯೋಗವಿರುವ ಈ ಕರುಳುಬಳ್ಳಿಯ ರಕ್ತವನ್ನು ಹುಟ್ಟಿದ ಎಲ್ಲ ಶಿಶುಗಳಿಂದ ತೆಗೆಯಬೇಕೆ? ಈ ಪ್ರಶ್ನೆಗೆ, ಉತ್ತರವೇನೆಂದರೆ ಯಾರ ಭವಿಷ್ಯದಲ್ಲಿ ಮುಂದೆ ಯಾವ ತರಹದ ಆಪತ್ತು ಬರುತ್ತದೆಯೋ ಗೊತ್ತಿಲ್ಲ. ಸಾಧ್ಯವಾದರೆ ಇಡಬೇಕು. ಆದರೆ ಕೆಲವರಲ್ಲಿ ಮಾತ್ರ ಈ ಕೋಶಗಳನ್ನು ಸಂಗ್ರಹಿಸಿ ಇಡಲೇಬೇಕು. ಅದು ಎಲ್ಲಿಯೆಂದರೆ, ಟೆಸ್ಟ್ ಟ್ಯೂಬ್ ಬೇಬಿಯೆಂದು ಹುಟ್ಟಿದ ಶಿಶು, ಥ್ಯಾಲಸೇಮಿಯಾ ಕಾಯಿಲೆಯವರು ಮಂಗೋಲೆಂದು ಹುಟ್ಟಿದ ಶಿಶು. ಅತ್ಯಂತ ಅಪರೂಪವಾಗಿ ಹುಟ್ಟಿದ ಶಿಶು ಅಂದರೆ ಮೇಲಿಂದ ಮೇಲೆ ಗರ್ಭಪಾತವಾಗಿ ನಂತರ ಹುಟ್ಟಿದ ಶಿಶು ಅಥವಾ ಮೊದಲಿನ ೩-೪ ಮಕ್ಕಳು ಸತ್ತು ನಂತರ ಹುಟ್ಟಿದ ಶಿಶು. ಈ ಮೂಲಕೋಶಗಳನ್ನು ಕರುಳು ಬಳ್ಳಿಯಿಂದ ತೆಗೆದ ನಂತರ ಅದನ್ನು ಶೈತ್ಯೀಕರಿಸಿ ಇಡಬೇಕಾಗುತ್ತದೆ. ಈ ತರಹ ತೆಗೆದು ಇಡಬೇಕಾದರೆ ತಾಯಂದಿರಿಗೆ ಈ ವಿಷಯದ ಬಗ್ಗೆ ಮೊದಲೇ ತಿಳಿವಳಿಕೆ ನೀಡಬೇಕು. ಅವರಿಗೆ ಎಷ್ಟು ತರಹದ ರಕ್ತದ ಪರೀಕ್ಷೆ, ಬೇರೆ ಬೇರೆ ಕಾಯಿಲೆಗಳಿವೆಯೇ, ಅದರ ಪರೀಕ್ಷೆ ಮಾಡಬೇಕು. ಏಕೆಂದರೆ ಹುಟ್ಟಿದ ಶಿಶುವಿಗೆ ಕಾಯಿಲೆಯಿದ್ದರೆ, ಅದಕ್ಕೆ ಇದು ಉಪಯೋಗವಾಗುವುದಿಲ್ಲ.

ಈ ಮೂಲಕೋಶ ಮತ್ತೆ ಅನೇಕ ತರಹದ ಕಾಯಿಲೆಗಳಿಗೆ ಉಪಯೋಗವಿದೆಯೆಂದು ದಿನಾಲು ಹೊಸ ಹೊಸ ಸಂಶೋಧನೆಗಳ ಫಲಿತಾಂಶದಿಂದ ಕಂಡುಬರುತ್ತಿದೆ. ಈ ಕೋಶಗಳ ಉಪಯೋಗ ಹೆಚ್ಚಿದಂತೆ ಈ ಕೋಶಗಳ ದುರುಪಯೋಗ ಕೂಡ ಹೆಚ್ಚಾಗುತ್ತಿದೆ. ಹಣಕ್ಕಾಗಿ ಜನ ಗರ್ಭಪಾತ ಮಾಡಿಸಿಕೊಳ್ಳುತ್ತಾ. ಯಾರಿಗೆ ಬೇಕೋ ಅವರಿಗೆ ಅದನ್ನು ಮಾರಿ ಹಣವಂತರಾಗಬಹುದು, ಇದನ್ನು ವ್ಯಾಪಾರ ಎಂದು ಮಾಡಬಹುದು. Plur potent cellsಗಳು ದೇಹದ ಒಳ ಹಾಗೂ ಹೊರಚರ್ಮ ಕಿವಿ, ಕಣ್ಣು, ಹೃದಯ, ಪುಪ್ಪುಸ, ಸ್ನಾಯು, ನರಮಂಡಲ ಹೀಗೆ ದೇಹದ ಎಲ್ಲ ಭಾಗಗಳನ್ನು ಹುಟ್ಟಿಸಬಲ್ಲವು. Multi potent cells ಕೋಶಗಳು ದೇಹದ ಕೆಲವಡೆಯಿದ್ದು ಕೆಲವೇ ತರಹದ ಕೋಶಗಳನ್ನು ಹುಟ್ಟಿಸಬಲ್ಲವು. ಅಂದರೆ ಮೂಳೆಯಲ್ಲಿರುವ ಮಜ್ಜೆಯು Haemopoietic ಅಂದರೆ ರಕ್ತಕಣ ಬಿಳಿಯ ಗೋಲಕ ತಟ್ಟೆಯ ಕೋಶ (Platelets) ಗಳು ಹುಟ್ಟಿಸಬಲ್ಲದು. ಅದಕ್ಕೆ ಯಾರಾದರೂ ಮೈಸುಟ್ಟುಕೊಂಡು, ಚರ್ಮ ಸುಟ್ಟು ಹೋದಾಗ ಈ ಕೋಶಗಳಿಂದ ಚರ್ಮ ತಯಾರಿಸುವಂತೆ ಮಾಡಬಹುದು. ಇಲ್ಲಿಯವರೆಗೆ ಚರ್ಮ ಬೇಕಾದರೆ ಅದೇ ವ್ಯಕ್ತಿಯ ಚರ್ಮ ಅಧ್ ದಪ್ಪದಷ್ಟು ಕೊಯ್ದು ಅವರಿಗೆ, ಎಲ್ಲಿ ಚರ್ಮ ಹಾಕಬೇಕಾಗಿದೆಯೋ ಅಲ್ಲಿ ಹಾಕಲಾಗುತ್ತಿತ್ತು.

ಈ ಕೋಶಗಳು ಒಂದು ತರಹ ಸಂಜೀವಿನಿ ಔಷಧಿ ಇದ್ದಹಾಗೆ. ಹೊಸ ಹೊಸ ಕೋಶಗಳನ್ನು ಹುಟ್ಟಿಸಿ ದೇಹಕ್ಕೆ ಪುನರ್ಜನ್ಮ ನೀಡಬಲ್ಲವು. ಪುರಾಣದಲ್ಲಿ ಬ್ರಹ್ಮ ವಿಷ್ಣುವಿನ ಹೊಕ್ಕಳದಿಂದ ಹುಟ್ಟಿದ. ಇದು ಕೇವಲ ಕಥೆಯೋ ಅಥವಾ ಹೊಕ್ಕಳ ಬಳ್ಳಿಯ ಮೂಲಕೋಶಗಳಿಂದ ಬ್ರಹ್ಮನನ್ನು ವಿಷ್ಣು ಹುಟ್ಟಿಸಿದ. ಎಲ್ಲ ಮಾನವರ ಹಣೆಯ ಬರಹವನ್ನು ಬರೆಯುವ ಈ ಬ್ರಹ್ಮ ಕೂಡಾ ಈ ಕೋಶದಿಂದ ಹುಟ್ಟಿದ್ದನೆ? ಈ ಮೂಲಕೋಶ ಅಥವಾ ಬ್ರಹ್ಮಕೋಶಗಳು ಕಾಯಿಲೆಯವರಿಗೆ ವಾಸಿಮಾಡುವ ಕ್ಯಾನ್ಸರ್ ರೋಗಿಗಳಿಗೆ, ಕಾಯಿಲೆ ಗುಣಡಿಸುವ ಮಕ್ಕಳಿಲ್ಲದವರಿಗೆ ಅಂಡಕೊಡುವ ಗಂಡಸರಲ್ಲಿ ಧಾತು ಮಾಡುವ ಹೀಗೆ ಎಲ್ಲರಿಗೂ ರೋಗದಿಂದ ನರಳುವವರಿಗೂ ಆಶಾದಾಯಕವಾಗಬಲ್ಲವೋ, ಪುನರ್ಜನ್ಮ ಕೊಡುವ ಬ್ರಹ್ಮ ಕೋಶಗಳಾಗುವವೋ, ಸಂಜೀವಿನಿಯಾಗಬಲ್ಲವೋ, ಅಥವಾ ಹಣದ ದಾಹಕ್ಕೆ ತಮ್ಮ ಮಕ್ಕಳನ್ನೇ ಮಾರಿಕೊಳ್ಳುವ, ಗರ್ಭಪಾತ ಮಾಡಿಸಿಕೊಳ್ಳುವ, ಕರುಳು ಬಳ್ಳಿಯ ಕೋಶಗಳನ್ನು ಮಾರಿಕೊಳ್ಳುವ ಜನರಿಗೆ ವ್ಯಾಪಾರಕ್ಕೆ ನಾಂದಿ ಹಾಡುವವೋ ಎಂಬುದನ್ನು ನಾವೆಲ್ಲ ಕಾದು ನೋಡಬೇಕು.

ವೈದ್ಯಸಾಹಿತಿಯಾಗಿನನ್ನಅನುಭವ
ವೈದ್ಯಕೀಯ ಸಾಹಿತ್ಯ ಹಿರಿಯರ ಕೆಲಸವನ್ನು ಮಾಡುತ್ತದೆ
– ಡಾ| ಸುನಂದಾ ಕುಲಕರ್ಣಿವೈದ್ಯಸಾಹಿತಿಯಾಗಿ ನನ್ನ ಅನುಭವ ಹೇಳುವ ಮೊದಲು ನಾನು ಹೇಗೆ ವೈದ್ಯ ಸಾಹಿತ್ಯ ಬರೆಯಲು ಶುರು ಮಾಡಿದೆಯೆಂಬುದನ್ನು ನೆನಪಿಸಿಕೊಳ್ಳುತ್ತೇನೆ. ಸುಮಾರು ೩೦ ವರ್ಷಗಳ ಹಿಂದಿನ ಮಾತು, ನಾನು ಅಕ್ಯುಪಂಕ್ಚರದಿಂದ ತುಂಬ ಆಕರ್ಷಿತಳಾಗಿದ್ದೆ. ಅದರ ಬಗ್ಗೆ ಓದಿ ತಿಳಿದುಕೊಂಡಿದ್ದೆ. ಆಗ ಟಿ.ವಿ. ಇರಲಿಲ್ಲ. ಪುಸ್ತಕ, ಮ್ಯಾಗಝಿನ್‌ಗಳನ್ನು ಜನ ಕಾತರದಿಂದ ನಿರೀಕ್ಷಿಸುತ್ತಿದ್ದರು, ಓದುತ್ತಿದ್ದರು. ಆಗ ನಾನು ನನಗೆ ಕಂಡಹಾಗೆ “ಅಕ್ಯುಪಂಕ್ಚರ್” ದ ಮೇಳೆ ಒಂದು ಲೇಖನ ಬರೆದಿದ್ದೆ. ನಮ್ಮ ಮನೆಯಲ್ಲಿ ಓಣಿಯಲ್ಲಿ, ಆಗ ಎಲ್ಲರೂಕರ್ಮವೀರ, ಕಸ್ತೂರಿಗಳನ್ನು ತಪ್ಪದೇ ಓದುತ್ತಿದ್ದರು. ಈಗಿನ ಹಾಗೆ ಆವಾಗ್ಗೆ ಓದಲು ಬಹಳ ವಾರಪತ್ರಿಕೆಗಳೂ ಇರಲಿಲ್ಲ. ನಾನು ಬರೆದ ಲೇಖನದ ಪೇಪರುಗಳು ಅಲ್ಲೊಂದು ಇಲ್ಲೊಂದು ಹಾರಾಡುತ್ತಿದ್ದವು. ಆಗ ನಮ್ಮ ತಾಯಿ ಆ ಎಲ್ಲ ಪೇಪರುಗಳನ್ನು ಜೋಡಿಸಿಟ್ಟು “ಈ ಲೇಖನವನ್ನುಕಸ್ತೂರಿಗೆ ಏಕೆ ಕಳುಹಿಸುವುದಿಲ್ಲ?” ಎಂದರು. ಕಸ್ತೂರಿಯೆಂದರೆ ಕನ್ನಡದ ರೀಡರ್ಸ್ ಡೈಜೆಸ್ಟ್. ಅದರಲ್ಲಿ ಉತ್ತಮ ಬರಹಗಾರರ ಲೇಖನ ಹಾಕುತ್ತಾರೆ. ನನ್ನದು ಇದು ಮೊದಲ ಲೇಖನ. ಇದನ್ನುಯಾರು ಪ್ರಕಟಿಸುತ್ತಾರೆ? ಎಂದು ನನಗೆ ಅಳುಕಿತ್ತು. ಆದರೆ ನಮ್ಮ ತಾಯಿಯ ಒತ್ತಾಯದ ಮೇರೆಗೆ ನಾನು ಅದನ್ನು ಕಸ್ತೂರಿಗೆ ಕಳುಹಿಸಿದೆ. ಆದರೆ ಆ ಲೇಖನ ಪ್ರಕಟವಾಯಿತು. ಆಗ ನನಗೆ ಬಹಳ ಸಂತೋಷವಾಯಿತು. ಇದರಿಂದ ಸ್ಫೂರ್ತಿಗೊಂಡು ನಾನು ಮುಂದೆ ಅನೇಕ ಲೇಖನಗಳನ್ನು ಬರೆದೆ.

ಹೀಗೆ ಸುಮಾರು ಲೇಖನ ಬರೆದ ನಂತರ ಸಾಗರದಿಂದ ಒಂದು ಪತ್ರ ಬಂದಿತು. ಅದರಲ್ಲಿ ಅವರು ನಾನು ಲೇಖನಗಳ ಪಟ್ಟಿಯನ್ನು ಒಬ್ಬರು ಕೇಳಿದ್ದರು. ನನ್ನ ಲೇಖನದ ಪಟ್ಟಿಯನ್ನು ಓದಿ ಅವರು “ನೀವು ಇಷ್ಟೊಂದು ಲೇಖನ ಬರೆದರೂ ಒಂದು ಪುಸ್ತಕ ಬರೆಯದಿದ್ದದ್ದು ಬಹಳ ಆಶ್ಚರ್ಯ” ಎಂದರು. ಅವರು ಕನ್ನಡ ವೈದ್ಯಕೀಯ ಲೇಖಕರ ಪಟ್ಟಿ ಮಾಡಿದರು. ಇದರಿಂದ ಹುರುಪುಗೊಂಡು ನಾನು ಪುಸ್ತಕ ಬರೆಯಲು ಶುರುಮಾಡಿದೆ. ಪುಸ್ತಕಗಳನ್ನೆಷ್ಟೇ ಬರೆದರೂ ಜನ ಟಿವಿ ನೋಡಿ ಮಾಹಿತಿಯನ್ನು ತೆಗೆದುಕೊಳ್ಳುತ್ತಾರೆ. ಕಂಪ್ಯೂಟರ್‌ದಿಂದ ಮಾಹಿತಿ ಪಡೆಯುತ್ತಾರೆ. ರೇಡಿಯೋದಲ್ಲಿ ಮಾಹಿತಿ ಕೇಳಿಕೊಳ್ಳುತ್ತಾರೆ. ಆದರೆ ಈ ಕನ್ನಡ ಪುಸ್ತಕಗಳನ್ನು ಯಾರು ಓದುತ್ತಾರೆ ಎಂಬ ಕುತೂಹಲ ನನಗೆ ಇತ್ತು.

ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನನಗೆ ಈಗ ಸಿಕ್ಕಿತು. ಪುಸ್ತಕ, ಲೇಖನ ಪ್ರಕಟವಾದ ನಂತರ ನನಗೆ ದೂರದೂರದಿಂದ ಜನ ದೂರವಾಣಿಯ ಮೂಲಕ ತಮ್ಮ ಪ್ರಶ್ನೆ ಕೇಳುತ್ತಾರೆ. ಯಾರಲ್ಲಿಯೂ ಹೇಳಿಕೊಳ್ಳದಂತಹ ಗುಪ್ತಸಂಗತಿಯನ್ನು ಹೇಳುತ್ತಾರೆ. ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಉತ್ತರಕ್ಕಾಗಿ ಕಾಯುತ್ತಾರೆ. ಉತ್ತರ ಬರೆಯಲಿಕ್ಕೆ ಪಾಕೀಟ್ ಒಳಗಡೆಯೇ ಇನ್ನೊಂದು ವಿಳಾಸ ಬರೆದು ಪಾಕೀಟು ಇಟ್ಟಿರುತ್ತಾರೆ. ಅವರ ನೋವು ನನಗೆ ಈಗ ಅರ್ಥವಾಗಿದೆ. ಯಾರಿಗೂ ತಿಳಿಯದ ಹಾಗೆ ಅವರ ದುಃಖಕ್ಕೆ ಒಂದು ಆಶಾದಾಯಕ ಉತ್ತರ ಅಪೇಕ್ಷಿಸುತ್ತಿರುತ್ತಾರೆ. ಎಷ್ಟೋ ಸಲ ದೂರದ ಊರಿಂದ ಬಂದ ತಮ್ಮನ್ನು ತೋರಿಸಿಕೊಂಡು ಹೋಗುತ್ತಾರೆ. ಇವರೆಲ್ಲಾ ಅಮಾಯಕ ಜನರು, ಮುಗ್ದರು.

ಇನ್ನು ಕೆಲವು ಜನರಿಗೆ ಈ ವೈದ್ಯಕೀಯ ವಿಷಯವನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ. ಈ ಜನರು ಸಣ್ಣ ಸಣ್ಣ ಪುಸ್ತಕ ತೆಗೆದುಕೊಂಡು ಓದಿಕೊಳ್ಳುತ್ತಾರೆ. ಬಸ್ಸಿನಲ್ಲಿ, ರೈಲಿನಲ್ಲಿ ಹೋಗಬೇಕಾದರೆ, ಯಾರಾದರೂ ವೈದ್ಯರು ಸಿಕ್ಕರೆ, ಅವರಲ್ಲಿ ತಮ್ಮ ಸಂಶಯಗಳನ್ನು ಪರಿಹರಿಸಿಕೊಳ್ಳುತ್ತಾರೆ.

ವೈದ್ಯಕೀಯ ವಿಷಯ ಕೆಲವರಿಗೆ ತಿಳಿದುಕೊಳ್ಳಬೇಕೆಂಬ ಹಂಬಲವಿದ್ದರೆ, ಇನ್ನು ಕೆಲವರಿಗೆ ತಮ್ಮ ತೊಂದರೆಗಳನ್ನು ನಿವಾರಿಸಿಕೊಳ್ಳುವ ಒಂದು ವಿಧಾನವಾಗಿದೆ.

ಈಗ ಈ ಜನರ ದಾಹ ತಣಿಸಲು ಅನೇಕ ವೈದ್ಯಕೀಯ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಬರುತ್ತಿವೆ. ಪ್ರತಿಯೊಂದು ವಿಷಯದ ಮೇಲೆ ಬರುತ್ತಿವೆ. “ಓದುಗರ ಪ್ರಶ್ನೆಗೆ ಉತ್ತರ’ ಎಂಬ ಅಂಕಣಗಳಿವೆ.

ವೈದ್ಯಕೀಯ ಸಾಹಿತ್ಯ ಈಗ ಬೆಳೆದು ಜನಪ್ರಿಯವಾಗಿದೆ. ಕನ್ನಡದಲ್ಲಿ ವೈದ್ಯ ಸಾಹಿತ್ಯ ಬರೆಯಲು ವೈದ್ಯ ವಿದ್ಯಾರ್ಥಿಗಳಿಗೆ ಎಷ್ಟು ಇಂಗ್ಲಿಷದಲ್ಲಿ ಹೇಳಿಕೊಡ ಬಹುದೋ, ಅಷ್ಟನ್ನು ಕನ್ನಡದಲ್ಲಿ ಹೇಳಿಕೊಡಬಹುದಾಗಿದೆ, ಈ ವೈದ್ಯಕೀಯ ಲೇಖನಗಳು ಹಳ್ಳಿಯ ಜನರಿಗೆ ವರಪ್ರದಾಯವಾಗಿದೆ. ಶಾಲೆಗಳಲ್ಲಿಯೂ ಸಹ ಅವರಿಗೆ ಎಷ್ಟೇ ಬೇಕೋ ಅಷ್ಟನ್ನು ಶುದ್ಧ ಕನ್ನಡದಲ್ಲಿ ಅವರ ಪಠ್ಯಪುಸ್ತಕಗಳಲ್ಲಿ ಅಳವಡಿಸಲಾಗಿದೆ.

ಇದರಿಂದ ವೈದ್ಯಕೀಯ ಸಾಹಿತ್ಯ ಎಲ್ಲ ಕಡೆಗೂ ಬೇಕಾದಷ್ಟು ಪ್ರಚಾರವಾಗಿ, ಜನಸಾಮಾನರಲ್ಲಿ ನೀರಿನ ಶುದ್ಧತೆ ಮತ್ತು ಅದರಿಂದ ಬರುವ ರೋಗಗಳು, ಆಹಾರದ ಶುಚಿತ್ವದ ಬಗ್ಗೆ, ಏನು ತಿನ್ನಬೇಕು, ಯಾವಾಗ ಹೇಗೆ ಎಷ್ಟು ತಿನ್ನಬೇಕು, ಯಾರು ಎಷ್ಟು ತಿನ್ನಬೇಕು. ಮಕ್ಕಳ ತೊಂದರೆಗಳೇನು? ಎಂಬುದೆಲ್ಲ ತಿಳಿದಿದೆ. ಒಂದು ಕಾಲಕ್ಕೆ ಮಕ್ಕಳನ್ನು ಹೇಗೆ ಬೆಳೆಸಬೇಕು, ಹೆರಿಗೆಯ ಬಗ್ಗೆ ಋತುಸ್ರಾವದ ಬಗ್ಗೆ, ಅವಿಭಕ್ತ ಕುಟುಂಬಗಳಲ್ಲಿ ಹಿರಿಯರು ಹೇಳಿಕೊಡುತ್ತಿದ್ದರು. ಆದರೆ ಆಗ ವಿಭಕ್ತ ಕುಟುಂಬಗಳಲ್ಲಿ ಈ ವೈದ್ಯಕೀಯ ಸಾಹಿತ್ಯ ಹಿರಿಯರ ಕೆಲಸ ಮಾಡುತ್ತಿದೆ.

* * *