ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಗತಿಯಿಂದ ಮತ್ತು ಅದು ಹೆಚ್ಚು ಜನರಿಗೆ ಸುಲಭವಾಗಿ ದೊರೆಯುತ್ತಿರುವುದರಿಂದ ಜನತೆಯ ಆಯುಸ್ಸು ಹೆಚ್ಚಾಗುತ್ತಿದೆ. ಮುಪ್ಪನ್ನು ತಡೆಯುವುದು ಅಸಾಧ್ಯವಾದ್ದರಿಂದ, ನಮ್ಮ ಆಯುಸ್ಸು ಹೆಚ್ಚಾದಾಗ, ನಾವು ವೃದ್ಧಾಪ್ಯ (ಇಳಿ ವಯಸ್ಸು)ದಲ್ಲಿ ಹೆಚ್ಚು ಕಾಲ ಜೀವಿಸಬೇಕಾಗುತ್ತದೆ. ಈ ಸಮಯದಲ್ಲಿ ಅನೇಕ ದೈಹಿಕ ಮತ್ತು ಮನೋಸಾಮಾಜಿಕ ಬದಲಾವಣೆಗಳು ಆಗುವುದರಿಂದ, ಜೀವನ ಸುಗಮವಾಗಿ ಸಾಗಲು ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

ವೃದ್ಧಾಪ್ಯದಲ್ಲಿ ಆಗುವ ಬದಲಾವಣೆಗಳು

ದೈಹಿಕ ಖಾಯಿಲೆಗಳು:- ಇಳಿ ವಯಸ್ಸಿನಲ್ಲಿ ರಕ್ತದ ಒತ್ತಡ, ಸಕ್ಕರೆ ಕಾಯಿಲೆ, ಹೃದಯಾಘಾತ, ಪಾರ್ಶ್ವವಾಯು, ಪ್ರಾಸ್ಟ್ಟೇಟ್ ಗ್ರಂಥಿಯ ತೊಂದರೆ, ಕಿವುಡುತನ, ಕುರುಡುತನ ಮತ್ತು ಮೂಳೆ ಮುರಿತ ಇಂತಹ ಕಾಯಿಲೆಗಳು ಬರುವ ಸಂಭವ ಹೆಚ್ಚು. ಇವುಗಳಿಂದ ಜೀವನಕ್ಕೆ ನಾನಾ ತರಹದ ಅಡಚಣೆಗಳು ಆಗುತ್ತವೆ. ಸೇವಿಸಬೇಕಾಗಿರುವ ಔಷಧಿಗಳ ಸಂಖ್ಯೆಗಳು ಹೆಚ್ಚಾಗಿ, ಅವುಗಳ ಅಡ್ಡಪರಿಣಾಮಗಳನ್ನೂ ಅನುಭವಿಸಬೇಕಾಗುತ್ತದೆ. ಹೆಂಗಸರಲ್ಲಿ ಮುಟ್ಟಿನ ಏರುಪೇರು ಸಾಮಾನ್ಯ. ಹಸಿವು, ನಿದ್ದೆ ಮತ್ತು ಲೈಂಗಿಕಕ್ರಿಯೆಯಲ್ಲಿ ಆಸಕ್ತಿ ಕಡಿಮೆ ಆಗುತ್ತದೆ. ಮಲಮೂತ್ರ ವಿಸರ್ಜನೆಯ ಮೇಲೆ ಹತೋಟಿ ತಪ್ಪಬಹುದು.

ಮಾನಸಿಕ ತೊಂದರೆಗಳು: ಮುಪ್ಪಿನಲ್ಲಿ ಮಾನಸಿಕ ಪ್ರಕ್ರಿಯೆಗಳು ನಿಧಾನವಾಗಿ ನೆನಪು ಕುಂದುತ್ತದೆ. ಹೊಸ ಕಲಿಕೆಯ ಸಾಮರ್ಥ್ಯ ಮತ್ತು ಏಕಾಗ್ರತೆ ಕಡಿಮೆಯಾಗುತ್ತದೆ. ಲೆಕ್ಕಾಚಾರ ಮಾಡುವುದು ಕಷ್ಟವಾಗುತ್ತದೆ. ಇವುಗಳಿಂದ ಆತಂಕ, ಖಿನ್ನತೆ ಮತ್ತು ಮುಂಗೋಪದಂತಹ ಭಾವನೆಗಳು ಮೂಡುತ್ತವೆ.

ನಿವೃತ್ತಿ: ನೌಕರಿಯಲ್ಲಿ ಇದ್ದವರು ನಿವೃತ್ತಿ ಆಗಲೇಬೇಕು. ಆಗ ತಾನು ನಿಷ್ಪ್ರಯೋಜಕ ಎನ್ನಿಸಿ ಬೇಜಾರು ಆಗಬಹುದು. ಹಣಕಾಸಿನ ಸ್ವಾತಂತ್ಯ್ರ ಕಡಿಮೆಯಾಗಿ ತಾನು ಪರಾವಲಂಬಿ ಎಂಬ ಭಾವನೆ ಬರಬಹುದು. ಒಮ್ಮೆಲೇ ದೊರಕಿದ ಹೆಚ್ಚು ಸಮಯವನ್ನು ಹೇಗೆ ಕಳೆಯುವುದು ಎಂಬ ಸಮಸ್ಯೆ ತಲೆ ತಿನ್ನಬಹುದು.

ಒಂಟಿತನ: ಸಂಗಾತಿಯ ಅಥವಾ ಸ್ನೇಹಿತರ ಸಾವಿನಿಂದ ಒಂಟಿತನ ಕಾಡುತ್ತದೆ. ತನ್ನ ಸಾವಿನ ಬಗೆಗೂ ಭಯ ಶುರುವಾಗುತ್ತದೆ.

ತಲೆಮಾರಿನ ಅಂತರ: ಜೀವನದಲ್ಲಿ ಹೊಸಬರ (ಸೊಸೆ, ಅಳಿಯ, ಮೊಮ್ಮಕ್ಕಳು) ಪ್ರವೇಶವಾಗುತ್ತದೆ. ಅವರು ಯೋಚಿಸುವ ರೀತಿ, ಅವರ ಅಭಿರುಚಿಗಳು ಮತ್ತು ಮೌಲ್ಯಗಳು ಭಿನ್ನವಾಗಿರುವುದರಿಂದ, ವಾದ ವಿವಾದಗಳಾಗಿ, ಮನಸ್ಸು ಕೆಡಬಹುದು.

ಈ ಮೇಲಿನ ಪರಿಸ್ಥಿತಿಗಳಿಗೆ ಹೊಂದಾಣಿಕೆ ಹೇಗೆ?

ವೃದ್ಧರ ಪಾತ್ರ

ಮುಪ್ಪಿನ ಜೀವನಕ್ಕೆ ತಯಾರಿ: ಇಳಿವಯಸ್ಸಿನ ಜೀವನಕ್ಕೆ ಮೊದಲಿನಿಂದಲೇ ಕಾರ್ಯತಂತ್ರ ರೂಪಿಸಿಕೊಳ್ಳಬೇಕು. ಜೀವನದ ಜವಾಬ್ದಾರಿಗಳನ್ನು ಕಡಿಮೆ ಮಾಡಿಕೊಳ್ಳುತ್ತಾ ಬರಬೇಕು. ಎಲ್ಲವನ್ನೂ ನಾನೇ ಮಾಡುತ್ತೇನೆ, ಎಲ್ಲವೂ ನನ್ನಂತೆಯೇ ನಡೆಯಬೇಕು ಎಂಬ ದರ್ಪದ ಭಾವನೆ ಸಲ್ಲದು. ಮಕ್ಕಳೂ ದೊಡ್ಡವರಾಗಿದ್ದಾರೆ, ಅವರಿಗೂ ಸಾಮರ್ಥ್ಯ ಇದೆ ಎಂದು ಅರಿತು. ತಕ್ಕಂತೆ ಜವಾಬ್ದಾರಿಗಳನ್ನು ಹಂಚಿಕೊಳ್ಳಬೇಕು. ಆರ್ಥಿಕ ಪರಾವಲಂಬನೆ ಬರದಂತೆ ಸರಳ ಜೀವನಕ್ಕೆ ಬೇಕಾದ ಹಣಕಾಸಿನ ವಿಷಯಗಳಿಗೆ ಹೊಂದಿಕೊಳ್ಳಬೇಕು.

ನಮ್ಮ ಕಾಲದಲ್ಲಿ ಹಾಗಿತ್ತು. ಹೀಗಿತ್ತು ಎಂದು ಗೊಣಗುತ್ತಾ ಕೂರುವ ಬದಲು ಬದಲಾದ ಪರಿಸ್ಥಿತಿಯ ಒಳ್ಳೆಯ ವಿಷಯಗಳಿಗೆ ಹೊಂದಿಕೊಳ್ಳಬೇಕು.

ನಿವೃತ್ತಿಯ ನಂತರ ಲಭ್ಯವಾಗುವ ಹೆಚ್ಚಿನ ಸಮಯ ಕಳೆಯಲು ಇತರೆ ಉಪಯುಕ್ತ ಕೆಲಸ ಕಾರ್ಯಗಳಲ್ಲಿ ತೊಡಗಬೇಕು. ಉದಾಹರಣೆಗೆ-ಮನೆಯ ಕೆಲಸ, ಆರೋಗ್ಯಕರ ಹವ್ಯಾಸ, ಸ್ನೇಹಿತರ ಒಡನಾಟ, ಪ್ರಾರ್ಥನೆ ಮತ್ತು ಆಧ್ಯಾತ್ಮಿಕ ಚಿಂತನೆ. ತಮ್ಮ ಸಾಮರ್ಥ್ಯಕ್ಕೆ ತಕ್ಕಂತ ಚಟುವಟಿಕೆಗಳಿಂದ ತಾನು ಇನ್ನೂ ಒಬ್ಬ ಉಪಯುಕ್ತ ವ್ಯಕ್ತಿ ಎಂಬ ಭಾವನೆ ಉಳಿದಿರುತ್ತದೆ.

ನಮ್ಮದೆಲ್ಲಾ ಮುಗಿಯಿತು ಎಂದು ಹೊರ ಪ್ರಪಂಚದ ಸಂಪರ್ಕ ಕಳೆದುಕೊಂಡು ಹಿಂದಿನ ನೆನಪುಗಳಲ್ಲಿ ಮುಳುಗಬಾರದು.

ವೈದ್ಯರ ಮಾರ್ಗದರ್ಶನದಲ್ಲಿ ಶರೀರದಲ್ಲಿ ಆರೋಗ್ಯ ಮತ್ತು ಶಕ್ತಿಯನ್ನು ಎಷ್ಟು ಸಾಧ್ಯವೋ ಅಷ್ಟು ಕಾಪಾಡಿಕೊಳ್ಳಬೇಕು. ಬೆನ್ನು ಹತ್ತುವ ನ್ಯೂನತೆಗಳನ್ನು ಸಮಚಿತ್ತದಿಂದ ಒಪ್ಪಿಕೊಳ್ಳಬೇಕು.

ಸಾವಿನ ಬಗಗೆ ಅನಾವಶ್ಯಕವಾದ ಆತಂಕ ಸಲ್ಲದು. ಸಾವು ತಪ್ಪಿಸಲು ಸಾಧ್ಯವಿಲ್ಲವಾದಂತಹುದು. ಸಾವು ಬಂದಾಗ ಅದನ್ನು ಎದುರಿಸಲು ಮಾನಸಿಕ ಸಿದ್ಧತೆ ಮಾಡಿಕೊಂಡಿರಬೇಕೇ ಹೊರತು, ಸಾವನ್ನು ಎದುರು ನೋಡುತ್ತಾ ಕೂರಬಾರದು.

ಸಂಬಂಧಿಕರ ಮತ್ತು ಸಮಾಜದ ಪಾತ್ರ

ವೃದ್ಧರನ್ನು ಗೌರವದಿಂದ ಕಾಣಬೇಕು. ನಿಮ್ಮ ಕಾಲ ಮುಗಿಯಿತು. ಈಗ ಸುಮ್ಮನೆ ಕುಳಿತಿರಿ ಎಂದು ಅವರನ್ನು ಮೂಲೆಗುಂಪು ಮಾಡಬಾರದು. ಅವರ ಸಾಮರ್ಥ್ಯಕ್ಕೆ ತಕ್ಕ ಕೆಲಸಗಳನ್ನು ನೀಡಿ ಅವರಲ್ಲಿ ತಾನೂ ಒಬ್ಬ ಉಪಯುಕ್ತ ವ್ಯಕ್ತಿ ಎಂಬ ಭಾವನೆ ಮೂಡಿಸಬೇಕು. ಸಮಸ್ಯೆಗಳ ನಿವಾರಣೆಗಾಗಿ ಹಿರಿಯರ ಸಲಹೆ ಪಡೆದು ಅವರ ಅನುಭವದ ಖಜಾನೆಯನ್ನು ಉಪಯೋಗಿಸಿಕೊಳ್ಳಬೇಕು. ಅವರ ಆಲೋಚನೆಗಳನ್ನು ಭಾವನೆಗಳನ್ನು ಗೌಣವಾಗಿ ಕಂಡು ಅವಹೇಳನ ಮಾಡಬಾರದು. ನಡೆನುಡಿಗಳಲ್ಲಿ, ಆಚಾರ ವಿಚಾಗಳಲ್ಲಿ ಭಿನ್ನಾಭಿಪ್ರಾಯ ಬಂದಾಗ ವಾದವಿವಾದಗಳಿಗೆ ಎಡೆ ಮಾಡಿಕೊಡದೆ, ಒಟ್ಟಾಗಿ ಕುಳಿತು ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕು. ವೃದ್ಧರ ಆರೋಗ್ಯದ ಬಗೆಗೆ ಕಾಳಜಿ ವಹಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಚಿಕ್ಕವರನ್ನು ಹಿರಿಯರ ಸೇವೆಯಲ್ಲಿ ಪಾಲುದಾರರನ್ನಾಗಿ ಮಾಡಬೇಕು.

ಸಂಬಂಧಪಟ್ಟ ಎಲ್ಲರೂ ತಮ್ಮ ಪಾತ್ರಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ ಹೊಂದಾಣಿಕೆ ಸುಲಭ.

ವೈದ್ಯಸಾಹಿತಿಯಾಗಿಅನುಭವ
ನಾನು ಬರೆದದ್ದು ಸಾರ್ಥಕವಾಯಿತು
ಡಾ|| ಸಿ.ವೈ.ಸುದರ್ಶನ್ವೈದ್ಯರಾಗಿ ನಮ್ಮ ಜವಾಬ್ದಾರಿ ಕೇವಲ ರೋಗಗಳನ್ನು ವಾಸಿ ಮಾಡುವುದಿಲ್ಲ, ರೋಗಗಳನ್ನು ಬರದಂತೆ ವಹಿಸಬೇಕಾದ ಮುನ್ನಚ್ಚೆರಿಕೆ ಕ್ರಮಗಳು ಮತ್ತು ಆರೋಗ್ಯ ವೃದ್ಧಿಸಿಕೊಳ್ಳಲು ಅವಶ್ಯಕವಾದ ಜೀವನ ಶೈಲಿಯ ಬಗ್ಗೆ ಮಾಹಿತಿ ನೀಡುವುದೂ ಸಹ ವೈದ್ಯರ ಕರ್ತವ್ಯ. ಈ ನಿಟ್ಟಿನಲ್ಲಿ ವೈದ್ಯ ಸಾಹಿತ್ಯದ ಪಾತ್ರ ಬಹಳ ಮುಖ್ಯ. ವೈದ್ಯ ಸಾಹಿತ್ಯವನ್ನು ಜನಸಾಮಾನ್ಯರು ಬಯಸುತ್ತಾರೆ ಮತ್ತು ಓದಿದ್ದನ್ನು ಚರ್ಚೆ ಮಾಡಲು ಇಷ್ಟಪಡುತ್ತಾರೆ. ಓದಿದವರು ಬಂದು ಚರ್ಚೆ ಮಾಡಿದಾಗ ನಾನು ಬರೆದಿದ್ದು ಸಾರ್ಥಕವಾಯಿತು ಅನಿಸುತ್ತದೆ. ವೈದ್ಯರನ್ನು ಮುಖತಃ ಭೇಟಿಯಾಗಲು ಸಾಧ್ಯವಿಲ್ಲದವರಿಗೂ ಅನ್ವಯಗೊಳಿಸಿಕೊಳ್ಳುವ ಸಾಧ್ಯತೆ ಇರುವುದರಿಂದ, ವೈದ್ಯಕೀಯ ಲೇಖನಗಳಲ್ಲಿ, ರೋಗ ಲಕ್ಷಣಗಳು ಮತ್ತು ಚಿಕಿತ್ಸಾ ವಿಧಾನಗಳಿಗಿಂತ, ಮುನ್ನೆಚ್ಚೆರಿಕ ಕ್ರಮಗಳು ಮತ್ತು ಆರೋಗ್ಯಕರ ಜೀವನಶೈಲಿಯ ಬಗ್ಗೆ ಒತ್ತು ಕೊಡಬೇಕು. ವೈದ್ಯ ಲೇಖಕನಾಗಿ ಪತ್ರಿಕೆಗಳ ಸಂಪಾದಕರ ಗಮನ ಸೆಳೆಯುವುದು ಕಷ್ಟದ ಕೆಲಸ. ಅನೇಕ ಬಾರಿ ನಾನು ಅದರಲ್ಲಿ ವಿಫಲನಾಗಿದ್ದೇನೆ. ಆದರೂ ಬರೆಯುವ ಚಾಳಿ ಮಾತ್ರ ಬಿಟ್ಟಿಲ್ಲ!.

* * *