ಎರಡು ದಶಕಗಳ ಹಿಂದಿನ ಮಾತು. ಮನೋವೈದ್ಯನಾಗಿ ವೃತ್ತಿಯಲ್ಲಿ ತೊಡಗಿಸಿಕೊಂಡ ನನ್ನಲ್ಲಿ ಬರುವ ರೋಗಿಗಳಲ್ಲಿ ಹೆಚ್ಚಾಗಿ ಇಪ್ಪತ್ತೈದು ವಯಸ್ಸಿನವರಿಗಿಂತ ಮೀರಿರುತ್ತಿದ್ದವರೇ ಹೆಚ್ಚು. ವಾರಕ್ಕೆ ಅಥವಾ ತಿಂಗಳಿಗೆ ಒಬ್ಬ ಹರೆಯದ ಅಥವಾ ಮಗುವನ್ನು ಸಲಹೆಗಾಗಿ ಕರೆದುಕೊಂಡು ಬರುತ್ತಿದ್ದರು. ಪ್ರತಿದಿನ ನಾಲ್ಕೈದು ಹರೆಯದವರು ಮತ್ತು ಮಕ್ಕಳು. ಅವರ ಸಮಸ್ಯೆಗಳು ಪೋಷಕರಿಗೆ ಎಷ್ಟು ವಿಚಿತ್ರವೆನಿಸುತ್ತದೆ ಎಂದರೆ ತಾವೇನೋ ತಪ್ಪು ಮಾಡಿದ್ದೇವೆ ಎಂಬ ಪಾಪಪ್ರಜ್ಞೆಗೊಳಗಾಗುವ ಸಂದರ್ಭಗಳನ್ನು ನೋಡಬಹುದು. ಹರೆಯದವರ ಮನೋರಂಗ ಅತ್ಯಂತ ಸಂಕೀರ್ಣವಾದದ್ದು. ಅವರ ಮನೋರಂಗದಲ್ಲಿ ಒಮ್ಮೆ ವಿಹರಿಸದರೆ ಹರೆಯದವರ ಮನೋರಂಗ ಅತ್ಯಂತ ಸಂಕೀರ್ಣವಾದದ್ದು. ಅವರ ಮನೋರಂಗದಲ್ಲಿ ಒಮ್ಮೆ ವಿಹರಿಸಿದರೆ ಹರೆಯದವರ ಮನೋ ಸಾಮಾಜಿಕ ಸಮಸ್ಯೆಗಳು ಮತ್ತು ಅವುಗಳ ಕುರಿತು ಪೋಷಕರ ಪಾತ್ರ ಪೋಷಕರು ವಹಿಸಬಬೇಕಾದ ಜವಾಬ್ದಾರಿ ಏನು ಎಂಬುದು ನಮಗೆ ತಿಳಿಯುತ್ತದೆ.

ಪರಾವಲಂಬಿತನವನ್ನು ತೊರೆದು ಸ್ವಾವಲಂಬಿತನವನ್ನು ಪಡೆಯುವ ಮಧ್ಯಂತರ ಅವಧಿಯೇ ‘ಕೌಮಾರ್ಯ’ ಅಥವಾ ‘ಹರೆಯ’ ಎನ್ನುತ್ತಾರೆ. ಇಂಗ್ಲಿಷಿನಲ್ಲಿ ‘ಟೀನ್’ ಎನ್ನುವ ಈ ಹರೆಯದ ಅವಧಿ ಸುಮಾರು ಹನ್ನರೆಡು ವರ್ಷ ವಯಸ್ಸಿನಿಂದ ಇಪ್ಪತ್ತು ವರ್ಷ ವಯಸ್ಸಿನವರೆಗಿನ ಹಂತ. “ಏನು ಡಾಕ್ಟ್ರೆ, ಎಲ್ಲಾ ಬಿಟ್ಟು ಈ ಹರೆಯದವರ ಬಗ್ಗೆ ನಿಮಗೆ ಏಕೆ ಇಷ್ಟು ಲಕ್ಷ್ಯ?” ಎಂದು ಓದುಗರ ಪ್ರಶ್ನೆ ಸಹಜ. ಒಬ್ಬ ಬಾಲಕ ಒಂದು ನದಿಯನ್ನು ಈಜುತ್ತಾ ಒಂದು ದಡದಿಂದ ಇನ್ನೊಂದು ದಡ ತಲುಪಲು ಪ್ರವಾಹದ ನೀರಿನಲ್ಲಿ ಪ್ರಯತ್ನಿಸುತ್ತಿದ್ದಾನೆ. ನೀರಿಗಿಳಿದು ಈ ದಡವನ್ನು ಬಿಟ್ಟು ಬಿಟ್ಟಿದ್ದಾನೆ. ಮತ್ತೊಂದು ದಡ ತಲುಪಲು ಇನ್ನೂ ಬಹಳ ದೂರ ಈಜಬೇಕಾಗಿದೆ. ಈಗ ಅವನ ಯೋಚನೆ ಹತ್ತು ಹಲವು ಕಡೆ ಹರಿಯುತ್ತಿದೆ. ನೀರಿನ ರಭಸ ಬಹಳ ಇದೆ ಎಂದು ಒಮ್ಮೆ ಅನಿಸಿದರೆ ತನ್ನನ್ನು ಕೊಚ್ಚಿಕೊಂಡು ಹೋದರೆ ಏನು ಮಾಡಲಿ? ಎಂಬ ಭಯ ಇನ್ನೊಂದೆಡೆ. ನೀರಿನ ಸೆಳವಿಯಲ್ಲಿ ಕೈಕಾಲುಗಳು ನಡುಗುವ ಮೊದಲೇ ನಾನು ಹಿಂದಕ್ಕೆ ಹೋಗಿಬಿಡಲೇ ಎಂದು ಒಮ್ಮೆ ಅನಿಸಿದರೆ, ಇಲ್ಲ ನಾನು ಆಚೆದಡವನ್ನು ತಲುಪಲೇಬೇಕು ಎಂಬ ಛಲ ಇನ್ನೊಂದೆಡೆ. ನೀರಿನಲ್ಲಿ ಸುಳಿಗಳಿರುವುದು ಸಹಜ. ಒಮ್ಮೆ ಇಂತಹ ಸುಳಿಗೆ ಸಿಕ್ಕಾಗ ಮನಸ್ಸು ತತ್ತರಿಸಿ ಅಲ್ಲೋಲಕಲ್ಲೋಲವಾಗಬಹುದು. ತಾನು ಈ ಪ್ರವಾಹದಲ್ಲಿ ಒಂಟಿಯಾಗಿದ್ದೇನೆ ಎಂಬ ಭಾವನೆ ಒಂದು ಕಡೆಯಾದರೆ ಯಾರೂ ನನ್ನನ್ನು ಕೇಳುವವರಿಲ್ಲವಲ್ಲಾ ಎಂಬ ಚಿಂತೆ ಮತ್ತೊಂದೆಡೆ. ಮೇಲಿಂದ ಮೇಲೆ ಬರುವ ಅಲೆಗಳನ್ನು ಕಂಡು ನಾನು ಯಾತಕ್ಕಾದರೂ ಈ ನೀರಿಗೆ ಇಳಿದೆನೋ ಎಂಬ ಯೋಚನೆ ಒಮ್ಮೆ ಬಂದರೆ, ಅಲ್ಲಿ ಇತರರು ಮುಂದೆ ಮುಂದೆ ಹೋಗುವುದನ್ನು ಕಂಡು ತಾನು ಹಿಂದುಳಿದಿದ್ದೇನೆ ತಾನು ಕೈಲಾಗದವ ಎಂಬ ಆತಂಕ ಇನ್ನೊಮ್ಮೆ ಬರುತ್ತದೆ.

ಬಾಲಕನ ತುಮುಲವನ್ನು ಕಂಡು ಹತ್ತು ಕಡೆಯಿಂದ ಬರುವ ಕೂಗುಗಳು. ನೀನು ಹೆದರಬೇಡ ಎಂದು ಒಬ್ಬರು ಹೇಳಿದರೆ, ನೀನು ಹಾಗೇ ಹೋಗು, ದಡ ತಲುಪುತ್ತೀಯಾ ಎಂದು ಮತ್ತೊಬ್ಬರು ಹೇಳುತ್ತಾರೆ. ನೀನು ನೀರಿಗೆ ಯಾಕೆ ಇಳಿದೆ? ಎಂದು ಒಬ್ಬರ ಪ್ರಶ್ನೆಯಾದರೆ, ನೀನು ಇನ್ನೂ ವೇಗವಾಗಿ ಎಲ್ಲರಿಗಿಂತ ಮುಂಚೆ ತಲುಪಬೇಕು ಎಂದು ಮತ್ತೊಬ್ಬರ ಒತ್ತಡ. ಮನಸ್ಸನನ್ನು ಘಾಸಿಗೊಳಿಸುವ ನೀರಿನ ಸುಳಿ, ರಭಸ ಪ್ರವಾಹ ಒಂದು ಕಡೆ. ಆದರೆ ದ್ವಂದ್ವವನ್ನು ಮೂಡಿಸುವ ಬೇರೆ ಬೇರೆ ಸಂದೇಶಗಳು ಮತ್ತೊಂದೆಡೆ. ಇವೆಲ್ಲದರ ಫಲ ನೀರಿನಲ್ಲಿ ಈಜುತ್ತಿರುವ ಹರೆಯದವನಿಗೆ ತಾನು ಅಸಹಾಯಕ, ಒಂಟಿ ಎಂಬ ಭಾವನೆಗಳು ಉಂಟಾಗುವುದು ಸಹಜ ತಾನೆ?ನೀರಿನಲ್ಲುಂಟಾಗುವ ಏರಿಳಿತಗಳಿಂದ ತಾನು ದಡ ತಲುಪುತ್ತೇನೇಯೋ ಇಲ್ಲವೋ ಎಂಬ ಸಂಶಯ, ಆತಂಕ. ಮನಸ್ಸು ಹತಾಶೆಯಿಂದ, ನಿಸ್ಸಹಾಯಕತೆಯಿಂದ ಕಾಲು ಬಿಟ್ಟರೆ ತೇಲಿ ಹೋಗುವ ಸಂದರ್ಭಗಳು ಹೆಚ್ಚು. ಒಮ್ಮೆ ಇವೆಲ್ಲವನ್ನೂ ಎದುರಿಸಿ ಆತ್ಮವಿಶ್ವಾಸದಿಂದ ಈಜಿ ಆಚೆ ದಡ ತಲುಪಿದನೆಂದರೆ ಅವನು ಯಾವ ಅಡೆತಡೆಗಳೂ ಇಲ್ಲದೇ ಮುಂದೆ ಯಶಸ್ವೀ ವ್ಯಕ್ತಿಯಾಗಬಹುದು. ಎಲ್ಲರಿಂದಲೂ ಪ್ರಶಂಸೆಗೊಳಗಾಗಬಹುದು.

ಹರೆಯದಲ್ಲಾಗುವ ಬದಲಾವಣೆಗಳು, ಬರುವ ಆತಂಕಗಳು ಅವುಗಳಿಗೆ ದೊರಕುವ ಪೂರ್ಣ ಮಾರ್ಗದರ್ಶನ ಒಬ್ಬ ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುತ್ತವೆ. ಶರವೇಗದಲ್ಲಿ ನೈಸರ್ಗಿಕವಾಗಿ ಉಂಟಾಗುವ ದೈಹಿಕ ಬದಲಾವಣೆಗಳು, ಮನೋವಿಕಾಸದಿಂದ ಪುಟಿದೇಳುವ ಸಾಗರ ಅಲೆಗಳಿಂದ ಪ್ರಶ್ನೆಗಳು, ಸುಳಿಗಳಂತೆ ಬರುವ ಆತಂಕಗಳು ಹರೆಯದವರ ಮನಸ್ಸನ್ನು ಡೋಲಾಯಮಾನ ಸ್ಥಿತಿಯಲ್ಲಿ ಸಿಲುಕಿಸುತ್ತವೆ. ಯುವಕ ಯುವತಿಯರಲ್ಲಿ ಅವರ ಪೋಷಕರು, ಸಮಾಜ ಮಾಡುವ ನಿರೀಕ್ಷೆಗಳು ಅವರನ್ನು ತ್ರಿಶಂಕು ಸ್ಥಿತಿಯಲ್ಲಿಡಬಹುದು. ವಿಕಾಸಗೊಳ್ಳುತ್ತಿರುವ ಲೈಂಗಿಕ ಅಂಗಾಂಗಗಳ ಬದಲಾವಣೆ ಕಂಡುಮನಸ್ಸಿನಲ್ಲಿ ಕುತೂಹಲ ಉಂಟಾಗಬಹುದು. ತನ್ನ ಒಡಹುಟ್ಟಿದವರಲ್ಲಿ ಅಥವಾ ತನ್ನ ಸ್ನೇಹಿತರ ಗುಂಪಿನಲ್ಲಿ ಕೊಂಚ ಕಡಿಮೆ ಎತ್ತರದವರಾಗಿದ್ದರೆ ಎಲ್ಲರೂ ಕುಳ್ಳ ಎಂದು ಕರೆಯಬಹುದು. ಪೋಷಕರು ತಮ್ಮ ಇತರ ಮಕ್ಕಳಿಗೆ ಹೋಲಿಸಿ, ಇವನು ಕುಳ್ಳ ಎಂದು ಬಂದ ಅತಿಥಿಗಳಿಗೆ ಸಹಜವಾಗಿ ಹೇಳಬಹುದು. ಈ ‘ಕುಳ್ಳ’ಎಂಬ ಶಬ್ದ ಹರೆಯದವರ ಮನಸ್ಸಿನಲ್ಲಿ ತಾನು ಇತರರಿಗಿಂತ ಬೇರೆ ಅಥವಾ ಇತರರ ಹಾಗೆ ಇಲ್ಲವಲ್ಲಾ ಎಂಬ ಪಶ್ಚಾತ್ತಾಪದ ಭಾವನೆ ಮೂಡಿಸಬಹುದು.

ತೆಳ್ಳಗಿದ್ದರೆ ಸಣಕಲು, ದಪ್ಪಗಿದ್ದರೆ ‘ಡುಮ್ಮ’ ಎಂದು ಕರೆಯುವ ಸ್ನೇಹಿತರನ್ನು ಕಂಡು ಮನಸ್ಸು ನಾಚಬಹುದು. ಲೈಂಗಿಕ ಬದಲಾವಣೆಗಳು ಕೂಡ ಎಲ್ಲರಲ್ಲೂ ಒಂದೇ ಸಮನೆ ಇರುವುದಿಲ್ಲ. ಹೆಣ್ಣು ಮಕ್ಕಳಲ್ಲಿ ಒಬ್ಬರು ಹನ್ನೊಂದು ವರ್ಷಕ್ಕೆಲ್ಲಾ ಋತುವಾದರೆ, ಮತ್ತೊಬ್ಬರು ಹದಿನಾಲ್ಕು ಹದಿನೈದು ವರ್ಷ ವಯಸ್ಸಿಗೆ ಋತುವಾಗಬಹುದು. ಬೇಗನೇ ಋತುವಾದವರಲ್ಲಿ ತನಗೆ ಮಾತ್ರ ಇಷ್ಟು ಬೇಗ ಬದಲಾವಣೆ ಎಂಬ ಆತಂಕ ಆದರೆ, ತನಗೆ ಇನ್ನೂ ಆಗಿಲ್ಲವಲ್ಲಾ ಎಂಬುದು ಆಗದವರ ಚಿಂತೆ. ಗಂಡು ಮಕ್ಕಳಲ್ಲಿ ವೀರ್ಯೋತ್ಪತ್ತಿ ಒಬ್ಬರಿಗೆ ಹನ್ನೆರಡು ವರ್ಷ ವಯಸ್ಸಿಗೆ ಆಗಬಹುದು. ಮತ್ತೊಬ್ಬರಿಗೆ ಎರಡು ವರ್ಷ ತಡವಾಗಿ ಆಗಬಹುದು. ಬೇಗ ಆದಾಗ ಇದೇನು ನನಗೊಬ್ಬನಿಗೆ ಹೀಗಾಗಿದೆ ಎಂದು ಈ ಯುವಕ ಚಿಂತಿಸಿದರೆ, ಅಯ್ಯೋ ನನಗೆ ಇನ್ನೂ ಆಗಿಲ್ಲವಲ್ಲಾ ಏನು ಮಾಡಲಿ? ಹಾಗಾದರೆ ನಾನು ನಿರ್ವೀರ್ಯನೇ? ನಾನು ಮುಂದೆ ಪುರುಷನಾಗಲಾರೆ ಎಂಬ ಆತಂಕ ಮನಸ್ಸನ್ನು ಕಾಡಬಹುದು. ಇಂತಹ ಬದಲಾವಣೆಗಳೊಂದಿಗೆ ಪೋಷಕರ, ಸ್ನೇಹಿತರ, ಪ್ರಚಾರಮಾಧ್ಯಮಗಳ, ದ್ವಂದ್ವ ಸಂದೇಶಗಳು, ಹರೆಯದವರ ಮನಸ್ಸಿನಲ್ಲಿ ಅತೀವ ಕಳವಳವನ್ನುಂಟು ಮಾಡುವುದು ಸಹಜ. ಇದರ ಫಲ ಎಂದರೆ ಯಾವುದು ಸರಿ? ಯಾವುದು ತಪ್ಪು? ತಾನು ಯಾವುದನ್ನು ಪಾಲಿಸಬೇಕು? ಎಂಬ ಸಂಶಯದ ಅಲೆಗಳು, ಮನೋವಿಕಾಸದಿಂದ ಉದ್ಭವವಾಗುತ್ತವೆ. “ತಾನು ಏನಾಗಬೇಕು, ತನ್ನ ಭವಿಷ್ಯದ ಉದ್ದೇಶವೇನು? ಸಮಾಜದಲ್ಲಿ ತನ್ನ ಸ್ಥಾನಮಾನಗಳೇನು?” ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಆತುರ. ಇವುಗಳೊಂದಿಗೆ ವಿದ್ಯಾಭ್ಯಾಸದ ಗುರುತರ ಜವಾಬ್ದಾರಿ. ಇವೆಲ್ಲಕ್ಕೂ ಮಿಗಿಲಾಗಿ ಹರೆಯದವರಲ್ಲಿ ಕಾಣುವ ಅಂಶವೆಂದರೆ ಮನಸ್ಸು ಬಿಚ್ಚಿ ಮಾತನಾಡಲು ಹಿಂಜರಿಕೆ. ತನ್ನ ಸಂದೇಹಗಳನ್ನು ಬೇರೆಯವರೊಂದಿಗೆ ಕೇಳಿದರೆ ಅವರು ನಗಬಹುದು, ತಾನು ನಗೆಪಾಟಲಾದೇನು ಅಥವಾ ತನ್ನನ್ನು ಬಯ್ಯಬಹುದು ಎಂಬ ಮಾನಸಿಕ ತೊಳಲಾಟ. ಇವೆಲ್ಲಕ್ಕೂ ಪರಿಹಾರ ಎಂಬಂತೆ ಮನಸ್ಸಿನ ಆತಂಕಗಳನ್ನು ತಾತ್ಕಾಲಿಕವಾಗಿ ನೀಗಿಸಿ ಕ್ಷಣಿಕಮುದ ನೀಡುವ ಅನೈತಿಕ ಚಟುವಟಿಕೆಗಳನ್ನು ಅಥವಾ ಮಧ್ಯ, ಮಾದಕ ವಸ್ತುಗಳ ಸೇವನೆಯ ಚಟಗಳಿಗೆ ಶರಣಾಗಬಹುದು. ಸಾಗರದೋಪಾದಿಯಲ್ಲಿ ಬರುವ ಹರೆಯದವರ ಈ ಸಮಸ್ಯೆಗಳಿಗೆ ಪೋಷಕರು, ಸಮಾಜ ಸ್ಪಂದಿಸಿ ಸರಿಯಾಗಿ ಮಾರ್ಗದರ್ಶನ ನೀಡಿದಾಗ ಮಾತ್ರ ಅವರು ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಂಡು ಉಜ್ವಲ ಭವಿಷ್ಯ ಕಾಣಬಹುದು. ಅದಿಲ್ಲದಿದ್ದಲ್ಲಿ ಹರೆಯದವರ ಭವಿಷ್ಯ ಕಗ್ಗಂಟಾಗಬಹುದು.

ವೈದ್ಯಸಾಹಿತಿಯಾಗಿನನ್ನಅನುಭವ
ಅರಿವು ಮೂಡಿಸುವುದು ಮಹತ್ವದ ಕೆಲಸ
– ಡಾ
| ಶ್ರೀಧರ್ ಕೆ.ಆರ್.
ಮನೋವೈದ್ಯರು, ಶಿವಮೊಗ್ಗ

ನಾನು ವೈದ್ಯಕೀಯ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಮಾಡಿ ಪ್ರೋತ್ಸಾಹಿಸಿದವರು ಖ್ಯಾತ ವೈದ್ಯ ಸಾಹಿತಿ ಡಾ| ಹೆಚ್.ಡಿ. ಚಂದ್ರಪ್ಪಗೌಡರು. ಪ್ರತಿದಿನ ನನ್ನ ಪ್ರಾಕ್ಟೀಸ್ ಮುಗಿಸಿ ಮನೆಗೆ ಬರುವಾಗ ರಾತ್ರಿಯಾಗಿರುತ್ತಿತ್ತು. ಕೆಲವು ರೋಗಿಗಳ ವಿಷಯಗಳನ್ನು ನನ್ನ ಮಡದಿ ವಿಜಯಳ ಹತ್ತಿರ ಹೇಳುತ್ತಿದ್ದೆ. ಸ್ವತಃ ಸಾಹಿತಿಯಾದ ಅವಳು “ನೀವು ಇದನ್ನೆಲ್ಲಾ ಬರೆದರೆ ಅದು ಇತರರಿಗೆ ಉಪಯೋಗವಾಗುತ್ತದೆ. ಏಕೆ ಬರೆಯುವುದಿಲ್ಲ?” ಎಂದು ಪ್ರಶ್ನಿಸುತ್ತಿದ್ದಳು. ಅಷ್ಟು ಹೊತ್ತಿಗೆ ಡಾ| ಸಿ.ಆರ್.ಸಿ. ಮನೋರೋಗದ ಕುರಿತು ವಿಪುಲವಾಗಿ ಬರೆದಿದ್ದರು. ಅವರು ನನ್ನ ಆತ್ಮೀಯ ಗೆಳೆಯ. ಒಮ್ಮೆ “ನೀವೆಲ್ಲವನ್ನೂ ಬರೆದಿದ್ದೀರಿ, ನಾನು ಬರೆಯಬೇಕೆಂದರೆ ಏನು ಬರೆಯಲಿ?” ಎಂದುಅ ವರನ್ನೇ ಕೇಳಿದೆ. ಅದಕ್ಕೆ, “ಅಯ್ಯೋ ಶ್ರೀಧರ್ ಬರೆಯುವುದಕ್ಕೆ ಬೇಕಾದಷ್ಟಿದೆ. ನಿಮ್ಮ ಶೈಲಿಯಲ್ಲಿ ನಿಮ್ಮ ಅನುಭವಗಳನ್ನು ಬರೆಯಿರಿ”, ಎಂದು ಸರಳವಾಗಿ ಉತ್ತರಿಸಿದರು. ನನ್ನ ಮೊದಲ ಲೇಖನ ಕಸ್ತೂರಿಯಲ್ಲಿ ಪ್ರಕಟವಾದಾಗ ಸಂತಸವಾಯಿತು. ಅದಕ್ಕೆ ಆರೆಂಟು ಪ್ರತಿಕ್ರಿಯೆಗಳು ಬಂದಾಗ ನನ್ನ ಸಂತೋಷ ಇಮ್ಮಡಿಯಾಯಿತು. ಅಂದಿನಿಂದ ಬರೆಯಲು ಪ್ರಾರಂಭಿಸಿದೆ. ಅದು ಸಾವಿರದ ಒಂಬೈನೂರ ತೊಂಬತ್ತೆರಡನೇ ಇಸವಿ. ಅಂದಿನಿಂದ ವೈದ್ಯಸಾಹಿತ್ಯದಲ್ಲಿ ನನ್ನ ಆಸಕ್ತಿ ಹೆಚ್ಚಾಯಿತು.

ನನ್ನ ಬಳಿ ದಿನವೂ ನೂರಾರು ರೋಗಿಗಳು ಸಲಹೆಗೆಂದು ಬರುತ್ತಾರೆ ನಿಜ. ಆದರೆ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಅವರಿಗೆ ಚಿಕಿತ್ಸೆ ನೀಡುವುದು ಒಬ್ಬೊಬ್ಬ ರೋಗಿಗೆ ಮಾತ್ರ. ಅದೂ ಕಾಯಿಲೆ ಬಂದ ನಂತರ ಬರಹದ ಮೂಲಕ ಜನ ಸಾಮಾನ್ಯರಲ್ಲಿ ಆರೋಗ್ಯದ ಅರಿವು ಮೂಡಿಸುವುದು ಮಹತ್ವದ ಕೆಲಸ. ಅದರಿಂದ ರೋಗ ಬರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಜನಸಾಮಾನ್ಯರು ತೆಗೆದುಕೊಳ್ಳಬಹುದು. ತಪ್ಪುಕಲ್ಪನೆಗಳು ದೂರವಾಗಲು ಲೇಖನಗಳು ಸಹಾಯ ಮಾಡುತ್ತವೆ. ಕಾಯಿಲೆ ಬಂದಾಗ ಪ್ರಾರಂಭದಲ್ಲೇ ಚಿಕಿತ್ಸೆಗೆ ವೈದ್ಯರನ್ನು ಸಂಪರ್ಕಿಸುತ್ತಾರೆ. ಸಮಾಜವನ್ನು ಸುಸ್ಥಿತಿಯಲ್ಲಿಡಲು ವೈದ್ಯ ಸಾಹಿತ್ಯ ಮಹತ್ವದ ಪಾತ್ರ ವಹಿಸುತ್ತದೆ. ಸೃಜನಶೀಲ ಸಾಹಿತ್ಯವು ವೈದ್ಯ ಸಾಹಿತ್ಯವನ್ನು ಬೇರೆಂದು ಎಣಿಸದೇ ಸಮಾನ ಸ್ಥಾನ ಕಲ್ಪಿಸಬೇಕು ಎಂಬುದು ನನ್ನ ಅನಿಸಿಕೆ. ಈ ದಿಕ್ಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕ್ರಮ ತೆಗೆದುಕೊಳ್ಳಬೇಕೆಂದು ನನ್ನ ವಿನಂತಿ.

ಡಾ| ಸಿ.ಆರ್. ಚಂದ್ರಶೇಖರ್ ನನ್ನ ಆತ್ಮೀಯ ಗೆಳೆಯ. ನನ್ನ ಇಬ್ಬರು ಮಕ್ಕಳಿಗೆ ಗುರುವೂ ಹೌದು. ವೈದ್ಯ ಸಾಹಿತ್ಯದಲ್ಲಿ ನನಗೂ ಮಾರ್ಗದರ್ಶಕರು. ಸರಳ ಸಜ್ಜನಿಕೆಯ ಧೀಮಂತ ವ್ಯಕ್ತಿ. ಕೋಟಿ ಕೋಟಿ ಜನಮಾನಸದಲ್ಲಿ ನೆಲೆಸಿದ ಧೀಮಂತ ವೈದ್ಯ ಸಾಹಿತಿ. ತಮ್ಮ ಷಷ್ಠ್ಯಬ್ಧಿಯನ್ನು ವೈದ್ಯಸಾಹಿತ್ಯ ವಿಚಾರಗಳ ಮೂಲಕ ಆಚರಿಸಿದುದು ಅನುಕರಣೀಯ. ಅವರಿಗೆ ಪರಮಾತ್ಮನು ಸಕಲ ಸುಖ ಶಾಂತಿಯನ್ನಿತ್ತು ಶತಾಯುಷಿಯನ್ನಾಗಿ ಮಾಡಲಿ  ಎಂದು ಪ್ರಾರ್ಥಿಸುತ್ತೇನೆ. ಡಾ. ಸಿ.ಆರ್.ಸಿ.ಯವರ ಮಹತ್ವದ ಸಾಧನೆಯಲ್ಲಿ ಅವರ ಮಡದಿ ಶ್ರೀಮತಿ ರಾಜೇಶ್ವರಿಯವರದೂ ಅರ್ಧ ಪಾಲಿದೆ. ಅವರನ್ನು ಅಭಿನಂದಿಸಲೇಬೇಕು. ಇಬ್ಬರನ್ನೂ ದೇವರು ಸುಖವಾಗಿಡಲಿ ಎಂದು ಪ್ರಾರ್ಥಿಸಿ ಅವರಿಗೆ ಶುಭ ಹಾರೈಸುತ್ತೇನೆ.

* * *