ನನ್ನ ಮೊದಲ ಕನ್ನಡ ಕೃತಿಯನ್ನು ರಚಿಸುವ ಮುನ್ನ, ಎಂಥ ಕೃತಿಯನ್ನು ರಚಿಸಬಹುದು? ಏಕೆ? ಎಂಬ ಪ್ರಶ್ನೆ ಬಹುಕಾಲದವರೆಗೆ ಕಾಡಿತು.

ಮನಸ್ಸನ್ನು ಮುದಗೊಳಿಸುವ, ಹೃದಯವನ್ನು,  ಸಂಸ್ಕರಿಸುವ, ಸೃಜನ ಪ್ರಧಾನ ಸಾಹಿತ್ಯ ಗ್ರಂಥ ರಚಿಸಿದರೆ ಓದುಗರಿಗೆ ಆಸಕ್ತಿ ತರುವುದೇ?

ದೃಷ್ಟಿಯನ್ನು ವಿಸ್ತರಿಸುವ, ಪುಷ್ಟಿಗೊಳಿಸುವ ಚಿಂತನ ಪ್ರಧಾನ ವೈಚಾರಿಕ ಸಾಹಿತ್ಯ ಜನರಿಗೆ ಉಪಯುಕ್ತವಾಗಬಲ್ಲದೆ?

ಮನುಷ್ಯನ ಸಮಗ್ರ ಬದುಕಿಗೆ ಪೂರ್ಣತೆ ತಂದುಕೊಡುವ ಅವನ ಬೌದ್ಧಿಕ ಹಾಗೂ ಸಂಶೋಧನಾ ಚಟುವಟಿಕೆ ಹಾಗೂ ಸಾಧನೆಗಳನ್ನು ಪರಿಚಯಿಸುವ ಸಾಹಿತ್ಯ ರಚಿಸುವ ಅಗತ್ಯ ಇದೆಯೆ?

ಅನೇಕ ತಿಂಗಳ ಚಿಂತನೆಯಿಂದ ಮೇಲೆ ತಿಳಿಸಿದ ಉದ್ದೇಶವಿರುವ ಕನ್ನಡದಲ್ಲಿ ಸರಳವಾಗಿ, ಸ್ಪಷ್ಟವಾಗಿ, ಆಸಕ್ತಿಯಿಂದ ಓದಿಸಿಕೊಂಡು ಹೋಗುವಂತಹ ಕೃತಿ ರಚಿಸಲು ತೀರ್ಮಾನಿಸಿ ಓದುಗರಿಗೆ ತಲುಪಿಸಿದ್ದೇನೆ.

ಗಹನ ವಿಷಯವನ್ನು ಅಭಿವ್ಯಕ್ತಗೊಳಿಸಲು ಕನ್ನಡ ಸರ್ವಸಮರ್ಥವಾಗಿದೆ. ವಿದ್ಯಾರ್ಥಿಗಳ ಮತ್ತು ಶಿಕ್ಷಣಾರ್ಥಿಗಳ ಜ್ಞಾನವಿಕಾಸಕ್ಕೆ ಇಂಬುಕೊಡುವ ಕೃತಿಗಳ ರಚನೆ ಗಮನ ಸೆಳೆಯುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಒದಗಿಸಲಾಗುವ ಪಠ್ಯ ವಿಷಯಗಳಿಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ಮಾತ್ರವಲ್ಲದೆ. ಹಿರಿಯರಾದವರಿಗೂ ಸಹ ಮೂಲಭೂತ ವಿಷಯಗಳ ಜ್ಞಾನ ಒದಗಿಸಿಕೊಡುವಲ್ಲಿ ಸಹಕಾರಿಯಾಗಿದ್ದೇನೆ.

ಸರ್ವರಿಗೂ ಸಂಪೂರ್ಣ ಆರೋಗ್ಯಕ್ಕಾಗಿ ಅಲೋಪತಿ ಅಲ್ಲದೆ ಆಯುರ್ವೇದ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಪದ್ಧತಿಗಳನ್ನು ಯಾವ ರೀತಿ ಅಳವಡಿಸಿಕೊಂಡರೆ ಸೂಕ್ತ ಎಂಬುದನ್ನು ವಿಶದವಾಗಿ, ಸರಳವಾಗಿ ಓದುಗರಿಗೆ ತಲುಪಿಸಿದ್ದೇನೆ. ಗುರುತರ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲು ಪ್ರಯತ್ನಿಸಿದ್ದೇನೆ. ಜ್ಞಾನ ಸಂಸ್ಕೃತಿ ಪ್ರಸಾರಕ್ಕಾಗಿ ಶ್ರಮಿಸಿದ್ದೇನೆ. ಸೂಕ್ತ ತಿಳಿವಳಿಕೆ, ಸಕಾರಾತ್ಮಕ ಧೋರಣೆ ಹಾಗೂ ಬದುಕಿನ ಸಮಸ್ಯೆಗಳಿಗೆ ಪರಿಹಾರ ಕ್ರಮಗಳ ಅಗತ್ಯವಿರುವುದರಿಂದ ಕನ್ನಡ ಆಧುನಿಕ ಸಾಹಿತ್ಯ ಪ್ರೇರಕವಾಗಬೇಕೆಂದು ಮನವರಿಕೆ ಆಗಿದೆ.

ಇವೆಲ್ಲಾ ಸಾಧನೆಗಳಿಗೆ ನನ್ನ ಜೀವನದಲ್ಲಿ ಡಾ|| ಸಿ.ಆರ್. ಚಂದ್ರಶೇಖರ್, ಮನೋವೈದ್ಯ ವಿಜ್ಞಾನಿಗಳು ನನಗೆ ಕನ್ನಡ ಸಾಹಿತ್ಯ ಗುರುಗಳೆಂಬುದರಲ್ಲಿ ಯಾವ ಸಂಶಯವೂ ಇಲ್ಲ.

* * *