ರಕ್ತವು ಜೀವದ್ರವ, ಬೆರ್ನಾರ್ಡ್‌ ಸೀಮನ್ ಎನ್ನುವ ವೈದ್ಯನು ೧,೧೨,೦೦೦ ಕಿ.ಮೀ. ಉದ್ದದ ರಕ್ತನಾಳಗಳಲ್ಲಿ ಹರಿಯುವ ರಕ್ತವನ್ನು ಜಗತ್ತಿನ ಅತ್ಯಂತ ದೊಡ್ಡ ಜೀವನದಿ ಎಂದು ಕರೆದಿದ್ದಾನೆ. ಈ ಮಾತಿನಲ್ಲಿ ಅತಿಶಯೋಕ್ತಿ ಇಲ್ಲ ಎಂದು ನನ್ನ ಭಾವನೆ.

ನಮ್ಮ ದೇಹದಲ್ಲಿ ಸುಮಾರು ೫ ಲೀಟರ್ ರಕ್ತವಿರುತ್ತದೆ. ಇದರಲ್ಲಿ ಶೇ. ೫೫ ಭಾಗವು ದ್ರವದಿಂದ ಆಗಿದ್ದು ಉಳಿದ ಶೇ. ೪೫ ಭಾಗವು ಕಣದಿಂದಾಗಿದೆ.

ದ್ರವಭಾಗವು ಸರಿಸುಮಾರು ಸಮುದ್ರನೀರನ್ನು ಹೋಲುತ್ತದೆ. ದ್ರವಭಾಗ ಅತ್ಯಂತ ಸಂಕೀರ್ಣದ ಭಾಗ. ಇದರಲ್ಲಿ ಅನಿಲಗಳು, ಹಾರ್ಮೋನುಗಳು, ಆಹಾರ ಪದಾರ್ಥಗಳು, ಕಿಣ್ವಗಳು, ಖನಿಜ ಲವಣಾದಿಗಳು ಇರುತ್ತವೆ.

ಕಣಭಾಗದಲ್ಲಿ ಕೆಂಗಣ (ರೆಡ್‌ ಬ್ಲಡ್‌ ಕಾರ್ಪಸಲ್ಸ್), ಬಿಳ್ಕಣ (ವೈಟ್ ಬ್ಲಡ್ ಕಾರ್ಪಸಲ್ಸ್) ಹಾಗೂ ಕಿರಿಬಿಲ್ಲೆ (ಪ್ಲೇಟ್‌ಲೆಟ್ಸ್) ಪ್ರಮುಖವಾಗಿರುತ್ತವೆ. ಕೆಂಗಣಗಳು ಆಮ್ಲಜನಕವನ್ನು ಶ್ವಾಸಕೋಶಗಳಿಂದ ಹೃದಯಕ್ಕೆ, ಅಲ್ಲಿಂದ ಇಡೀ ದೇಹದ ಪ್ರತಿಯೊಂದು ಜೀವಕೋಶಕ್ಕೆ ರವಾನಿಸುತ್ತವೆ. ಬಿಳ್ಕಣಗಳು ನಮ್ಮ ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತವೆ ಹಾಗೂ ಕಿರಿಬಿಲ್ಲೆಗಳು ರಕ್ತ ಹೆಪ್ಪುಗಟ್ಟಲು ನೆರವಾಗುತ್ತವೆ.

ಕೆಂಗಣಗಳಲ್ಲಿ ಹಿಮೊಗ್ಲೊಬಿನ್ ಎನ್ನುವ ಕಬ್ಬಿಣ ಸಂಯುಕ್ತವಿರುತ್ತದೆ. ಈ ಕಬ್ಬಿಣ ಸಂಯುಕ್ತವು ಆಮ್ಲಜನಕವನ್ನು ಸಾಗಿಸುತ್ತದೆ. ಒಬ್ಬ ವ್ಯಕ್ತಿಯಲ್ಲಿ ಹಿಮೋಗ್ಲಾಬಿನ್ನಿನ ಪ್ರಮಾಣ ನಿರ್ದಿಷ್ಟ ವ್ಯಾಪ್ತಿಯಲ್ಲಿರಬೇಕು. ಇದು ಈ ವ್ಯಾಪ್ತಿಗಿಂತಲೂ ಕಡಿಮೆಯಿದ್ದರೆ ರಕ್ತಹೀನತೆ (ಅನೀಮಿಯ) ತಲೆದೋರುತ್ತದೆ. ಈ ಕೆಳಗಿನ ಪಟ್ಟಿಯಲ್ಲಿ ಹಿಮೋಗ್ಲಾಬಿನ್ನಿನ ಸಹಜ ಪ್ರಮಾಣ ಹಾಗೂ ರಕ್ತಹೀನತೆಯಲ್ಲಿ ಕಂಡು ಬರುವ ಪ್ರಮಾಣಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

ಪುರುಷ

ಸ್ತ್ರೀ

ನವಜಾತ ಶಿಶು

೬ ತಿಂಗಳು ವರ್ಷ

೬ ವರ್ಷ-೧೨ ವರ್ಷ

ಸಹಜ ಹಿಮೋ ಗ್ಲಾಬಿನ್ ಗ್ರಾಂ/೧೦೦ ಮಿಲಿಮೀಟರ್‌

೧೩-೧೪

೧೨-೧೫

೨೦

ರಕ್ತಹೀನತೆ

<೧೩

<೧೨

<೧೧

<೧೨

ಕಾರಣಗಳು:

ರಕ್ತಹೀನತೆಗೆ ನಾನಾ ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದ ಕೆಲವು ಕಾರಣಗಳನ್ನು ಗಮನಿಸೋಣ.

 • ಕೆಂಗಣ ಉತ್ಪಾದನೆಯಾಗಲು ಅಗತ್ಯವಿರುವ ವಸ್ತುಗಳ ಕೊರತೆ; ಹಿಮೋಗ್ಲೊಬಿನ್ ನಿರ್ಮಾಣಕ್ಕೆ ಕಬ್ಬಿಣದ ಅಂಶ ಮುಖ್ಯ. ನಮ್ಮ ಆಹಾರದಲ್ಲಿ ಅಗತ್ಯ ಪ್ರಮಾಣದ ಕಬ್ಬಿಣಾಂಶವು ದೊರೆಯದೇ ಹೋದಲ್ಲಿ ರಕ್ತಹೀನತೆ ತಲೆದೋರಬಹುದು. ವಿಟಮಿನ್ ಬಿ-೧೨ ಹಾಗೂ ಫೋಲಿಕ್ ಆಮ್ಲಗಳ ಕೊರತೆಯು ರಕ್ತಹೀನತೆಗೆ ಕಾರಣವಾಗಬಹುದು. ಇದು ನಮ್ಮ ದೇಶದಲ್ಲಿ ಕಂಡುಬರುವ ಸರ್ವೇಸಾಮಾನ್ಯ ರಕ್ತಹೀನತೆ.
 • ವಿವಿಧ ಕಾರಣಗಳಿಂದ ಕೆಂಗಣಗಳ ನಾಶ; ಕೆಲವು ರೋಗಗಳಲ್ಲಿ ಕೆಂಗಣಗಳು ಅಸಹಜ ಪ್ರಮಾಣದಲ್ಲಿ ನಾಶವಾಗುತ್ತವೆ. ಅವನ್ನು ನಿಖರವಾಗಿ ಗುರುತಿಸಿ ಸೂಕ್ತ ಚಿಕಿತ್ಸೆಯ ಮೂಲಕ ರಕ್ತಹೀನತೆಯನ್ನು ತಡೆಗಟ್ಟಬೇಕಾಗುತ್ತದೆ.
 • ರಕ್ತನಷ್ಟ: ನಮ್ಮ ದೇಶದಲ್ಲಿ ರಕ್ತಹೀನತೆಗೆ ಒಂದು ಪ್ರಮುಖ ಕಾರಣ. ಕರುಳಿನಲ್ಲಿ ವಾಸವಾಗಿರುವ ಕೊಕ್ಕೆ ಹುಳು ಅದು ದಿನಕ್ಕೆ ೦.೨ ಎಮ್.ಎಲ್. ನಷ್ಟು ರಕ್ತವನ್ನು ಹೀರಬಲ್ಲದು. ನಮ್ಮ ದೇಶದಲ್ಲಿ ಕೊಕ್ಕೆ ಹುಳು ಸರ್ವೇಸಾಮಾನ್ಯ ರೋಗವಾಗಿದೆ. ಮೂಲವ್ಯಾಧಿಯಿರುವವರಲ್ಲಿ ರಕ್ತನಷ್ಟವಾಗುತ್ತದೆ. ಋತು ಸಮಸ್ಯೆ ಇರುವವರಲ್ಲಿ ರಕ್ತವು ಮಿತಿಮೀರಿದ ಪ್ರಮಾಣದಲ್ಲಿ ಸ್ರಾವವಾಗಿ ರಕ್ತಹೀನತೆಯಾಗಬಹುದು. ಹೆರಿಗೆಯಲ್ಲೂ ರಕ್ತಸ್ರಾವ ತೀವ್ರವಾಗಿ ಅಗಬಹುದು. ಮೂಗಿನಲ್ಲಿ ರಕ್ತ ಹೆಚ್ಚು ಸೋರುತ್ತಿದ್ದರೂ ಅದು ರಕ್ತಹೀನತೆಗೆ ಕಾರಣವಾಗಬಹುದು.
 • ದೀರ್ಘಾವಧಿ ಕಾಯಿಲೆಗಳು : ವಿವಿದ ಸೋಂಕು ರೋಗಗಳಲ್ಲಿ, ಯಕೃತ್‌ಕಾಯಿಲೆಗಳಲ್ಲಿ ಹಾಗೂ ಮೂತ್ರಪಿಂಡದ ಕಾಯಲೆಗಳಲ್ಲಿ ರಕ್ತಹೀನತೆ ಕಾಣಿಸಿಕೊಳ್ಳಬಹುದು.
 • ಅಸ್ತಿಮಜ್ಜೆಯ ದೋಷಗಳು: ಅಸ್ತಿಮಜ್ಜೆ ದೋಷಗಳೂ ಅಪರೂಪಕ್ಕೆ ಕಂಡುಬರುತ್ತವೆ. ಹೀಗಾದಾಗ ಕೆಂಗಣಗಳ ಕೊರತೆಯ ಜೊತೆಗೆ ಇತರ ಕಣಗಳ ಕೊರತೆಯೂ ಕಂಡುಬರುತ್ತದೆ. ಅಂತಹ ಸಮಯದಲ್ಲಿ ‘ಅಸ್ಥಿಮಜ್ಜೆ ಬದಲೀಜೋಡಣೆ”ಯಂತಹ ಗಂಭೀರ ಸ್ವರೂಪದ ಚಿಕಿತ್ಸೆಯೂ ಬೇಕಾಗಬಹುದು.

ಪ್ರಮಾಣ :

ಕರ್ನಾಟಕದ ಮಹಿಳಾ ಅಭಿವೃದ್ಧಿ ಕ್ರಿಯಾ ಯೋಜನೆಯು ಒಂದು ವರದಿಯನ್ನು ಸಲ್ಲಿಸಿದೆ. ಇದರ ಅನ್ವಯ ಕರ್ನಾಟಕದಲ್ಲಿ ಸುಮಾರು ಶೇ. ೪೨ ಜನರು (ಗ್ರಾಮೀಣ ಕರ್ನಾಟಕ-ಶೇ. ೬೭ ನಗರ ಕರ್ನಾಟಕ-ಶೇ. ೧೭) ರಕ್ತಹೀನತೆಗೆ ತುತ್ತಾಗಿದ್ದರೆ, ಇವರಲ್ಲಿ ಬಹುಪಾಲು ಜನರು ಕಬ್ಬಿಣಾಂಶ ಹಾಗೂ ವಿಟಮಿನ್ ಬಿ-೧೨ ಮತ್ತು ಪೋಲಿಕ್ ಆಮ್ಲದ ಕೊರತೆಯ ಕಾರಣದ ರಕ್ತಹೀನತೆಯನ್ನು ಹೊಂದಿದ್ದಾರೆ.

ಲಕ್ಷಣಗಳು:

ಆಯಾಸ, ಕೆಲಸ ಮಾಡಿದಾಗ ಬೇಗ ಸುಸ್ತಾಗುವುದು, ಸ್ವಲ್ಪ ದೂರ ನಡೆದರೂ ಉಸಿರಾಡಲು ಕಷ್ಟವಾಗುವುದು, ಎದೆಬಡಿತ ಕೇಳುವುದು, ಕೈಬೆರಳುಗಳು ಜುಮ್ಮೆನ್ನುವುದು, ಉಗುರುಗಳು ಬಿಳಚಿಕೊಳ್ಳುವುದು ಮತ್ತು ನುಣುಪಾಗಿ ಚಮಚದಂತೆ ಹಳ್ಳ ಬೀಳುವುದು, ಕಣ್ಣು, ನಾಲಿಗೆ, ಚರ್ಮ ಬಿಳಚಿಕೊಳ್ಳುವುದು, ಹಸಿವಿಲ್ಲದಿರುವುದು, ಬೆಳಗ್ಗೆ ಎದ್ದಾಗ ಮುಖ ಊದಿಕೊಳ್ಳುವುದು ಇತ್ಯಾದಿ.

ದುಷ್ಪರಿಣಾಮಗಳು:

ಯಕೃತ್ತು, ಗುಲ್ಮ ಊದಿಕೊಳ್ಳಬಹುದು. ಹೃದಯ ವೈಫಲ್ಯಕ್ಕೆ ಎಡೆಕೊಡಬಹುದು. ಉದರ ಮತ್ತು ಕಾಲುಗಳಲ್ಲಿ ನೀರು ತುಂಬಿಕೊಳ್ಳಬಹುದು. ಉಸಿರಾಡಲು ಕಷ್ಟವಾಗಬಹುದು, ಆಯಾಸವಾಗಬಹುದು. ತಿಂಗಳ ಮುಟ್ಟು ಕಾಲಕ್ಕೆ ಸರಿಯಾಗಿ ಆಗದಿರಬಹುದು. ಗರ್ಭಿಣಿಗೆ ರಕ್ತಹೀನತೆಯಿದ್ದಲ್ಲಿ ಆಕೆಗೆ ಗರ್ಭಪಾತವಾಗಬಹುದು. ಮಗುವು ಅವದಿಗೆ ಮೊದಲೇ ಹುಟ್ಟಬಹುದು. ಹುಟ್ಟುವ ಮಗುವಿನ ತೂಕ ಕಡಿಮೆಯಿರಬಹುದು. ಹೆರಿಗೆಯ ಅವಧಿಯಲ್ಲಿ ಹಾಗೂ ನಂತರ ನಾನಾ ತೊಂದರೆಗಳಾಗಬಹುದು. ಹಾಗಾಗಿ ರಕ್ತಹೀನತೆಯನ್ನು ನಿವಾರಿಸಬೇಕಾಗುತ್ತದೆ.

ರಕ್ತಹೀನತೆಗೆ ಚಿಕಿತ್ಸೆಯು, ಹೀನತೆಗೆ ಕಾರಣವಾಗಿರುವ ಅಂಶವನ್ನು ಅವಲಂಭಿಸಿರುತ್ತದೆ. ಯಾವುದೇ ಕಾರಣದಿಂದ ರಕ್ತಹೀನತೆ ತಲೆದೋರಲಿ, ಅದು ತೀವ್ರ ಮಟ್ಟದಲ್ಲಿದ್ದಾಗ ರಕ್ತಪೂರಣವನ್ನು (ಬ್ಲಡ್ ಟ್ರಾನ್ಸ್ ಪ್ಯೂಶನ್) ಮಾಡಬೇಕಾಗುತ್ತದೆ. ನಮ್ಮ ದೇಶದಲ್ಲಿ ಸರ್ವೆ ಸಾಮಾನ್ಯವಾಗಿ ಕಂಡುಬರುವ ರಕ್ತಹೀನತೆಗೆ ಕಬ್ಬಿಣ ಹಾಗೂ ವಿಟಮಿನ್ನುಗಳ ಕೊರತೆ ಕಾರಣವಾಗಿರುತ್ತದೆ. ಹಾಗಾಗಿ ಇದನ್ನು ನಮ್ಮ ದೈನಂದಿನ ಆಹಾರ ಪದಾರ್ಥಗಳ ಮೂಲಕ ಹೇಗೆ ಸರಿಪಡಿಸಬಹುದು ಎಂಬುದನ್ನು ನೋಡೋಣ.

ಆಹಾರಾಂಶ

ಕಬ್ಬಿಣಾಂಶ

ಆಹಾರಾಂಶ

ಕಬ್ಬಿಣಾಂಶ

೧೦೦ ಗ್ರಾಂಗಳಿಗೆ ಮಿಲಿಗ್ರಾಂ ೧೦೦ ಗ್ರಾಂಗಳಿಗೆ ಮಿಲಿಗ್ರಾಂ
ಕೊತ್ತಂಬರಿ ಮೆಂತ್ಯ ಸೊಪ್ಪು ೧೭.೨
ಪುದಿನ ೧೯ ಸಜ್ಜೆ ೧೪.೩
ಗೋಧಿ ೧೧.೫ ಎಳ್ಳು ೧೦.೫
ಚಕ್ರಮುನಿ ೨೩ ನುಗ್ಗೆಸೊಪ್ಪು ೧೬
ಬಸಳೆ ಸೊಪ್ಪು ೧೦ ಬಾದಾಮಿ ೪.೪

ಕಬ್ಬಿಣಾಂಶ ಹೆಚ್ಚಿರುವ ಕೆಲವು ಆಹಾರ ಪದಾರ್ಥಗಳು

 • ನಮ್ಮ ದೇಶದಲ್ಲಿ ಜಂತುಹುಳುವಿನ ಕಾಟ ಸಾಮಾನ್ಯ. ಹಾಗಾಗಿ ರಕ್ತಹೀನತೆಗೆ ಚಿಕಿತ್ಸೆ ನೀಡುವ ಮೊದಲು ಹುಳುಗಳಿಗೆ ಔಷಧವನ್ನು ತೆಗೆದುಕೊಳ್ಳಬೇಕಾಗುತ್ತದೆ. ವಾಯುವಿಳಂಗ ಕಷಾಯವನ್ನು ಮಾಡಿ ಕುಡಿಯಬಹುದು. ವಿಡಗಾಸವ ಅಥವಾ ವಿಡಂಗಾರಿಷ್ಟವನ್ನೂ ಸೇವಿಸಬಹುದು. ಮನೆಯಿಂದ ಹೊರಗೆ ಓಡಾಡುವಾಗ ಚಪ್ಪಲಿಯನ್ನು ಧರಿಸುವುದು ಮುಖ್ಯ.
 • ಕೊತ್ತಂಬರಿ ಸೊಪ್ಪನ್ನು ತೊಳೆದು ಅದರ ರಸ ತೆಗೆದು, ಜೇನುತುಪ್ಪ ಸೇರಿಸಿ ಮಕ್ಕಳಿಗೆ ಕೊಡಬಹುದು. ಚಟ್ನಿ ಮಾಡಬಹುದು, ದೋಸೆಹಿಟ್ಟಿನಲ್ಲಿ ಬೆರೆಸಿ ದೋಸೆ ಮಾಡಬಹುದು, ಚಪಾತಿ ಮಾಡಬಹುದು.
 • ಮೆಂತ್ಯದ ಸೊಪ್ಪನ್ನು ಹಚ್ಚಿ, ಉಪ್ಪು, ನಿಂಬೆರಸ ಬೆರೆಸಿ ಸಲಾಡ್ ಮಾಡಿ ಚಪಾತಿಯೊಂದಿಗೆ ತಿನ್ನಬಹುದು.
 • ಪುದಿನದಿಂದ ಚಟ್ನಿ, ಚಿತ್ರಾನ್ನ, ಶರಬತ್ ಮಾಡಬಹುದು.
 • ಪುಂಡಿ ಸೊಪ್ಪಿನ ಪಲ್ಯ ಮಾಡಬಹುದು.
 • ಚಕ್ರಮುನಿ ಸೊಪ್ಪಿನಿಂದ ಪಲ್ಯ, ತೊವ್ವೆ, ಸಾರು, ಇಡ್ಲಿ, ದೋಸೆ, ಚಟ್ನಿ, ತಂಬುಳಿ, ವಡೆ ಇತ್ಯಾದಿಗಳನ್ನು ಮಾಡಬಹುದು.
 • ಬಸಳೆಯಿಂದ ದೋಸೆ, ಸಾಂಬಾರ್‌, ಕೂಟು, ಇಡ್ಲಿ, ಉದುರು ಪಲ್ಯ, ಬೇಳೆಪಲ್ಯ ಮಾಡಬಹುದು.
 • ನುಗ್ಗೆಸೊಪ್ಪಿನಿಂದ ಪಲ್ಯ, ಸಾರು ಮಾಡಬಹುದು. ಎಳೇ ಸೊಪ್ಪು, ಹಾಗೂ ಹೂವಿನ ರಸ ತೆಗೆದು ಉಪ್ಪು ಬೆರೆಸಿ ಕುಡಿಯಬಹುದು.
 • ಸಜ್ಜೆಯಿಂದ ರೊಟ್ಟಿ, ಹುರಿಹಿಟ್ಟನ್ನು ಮಾಡಬಹುದು.
 • ಗೋಧಿ ಹಿಟ್ಟನ್ನು ಹುರಿದು ಅದಕ್ಕೆ ಬೆಲ್ಲ, ತುಪ್ಪ ಬೆರೆಸಿ ತಿನ್ನಬಹುದು.
 • ಅಶ್ವಗಂಧದ ಬೇರನ್ನು ಕುಟ್ಟಿಪುಡಿ ಮಾಡಿ ಹಾಲಿನಲ್ಲಿ/ ಜೇನುತುಪ್ಪದಲ್ಲಿ ಬೆರೆಸಿ ಕುಡಿಯಬೇಕು.
 • ಅಡುಸೋಗೆ ರಸಕ್ಕೆ ಜೇನುತುಪ್ಪ ಬೆರೆಸಿ ಕುಡಿಯಬಹುದು.
 • ಹಿಪ್ಪಲಿಗೆ ಜೇನುತುಪ್ಪ ಸೇರಿಸಿ ತಿನ್ನಬಹುದು.
 • ಕರಿ ಎಳ್ಳನ್ನು ನೀರಿನಲ್ಲಿ ನೆನೆಯಿಸಿ, ನಂತರ ಅದನ್ನು ಅರೆಯಿರಿ. ಅದಕ್ಕೆ ಹಾಲು ಮತ್ತು ಬೆಲ್ಲ ಬೆರೆಸಿ ಕುಡಿಯಿರಿ.
 • ಎಳ್ಳುಂಡೆಯನ್ನು ಮಾಡಿ ಪ್ರತಿದಿನ ತಿನ್ನಿ.
 • ಸಕ್ಕರೆ ಬಳಸಬಹುದಾದ ಎಲ್ಲ ಕಡೆ ಬೆಲ್ಲ ಬಳಸಿ.
 • ಬೀಟ್ರೂಟ್, ಕ್ಯಾರಟ್, ಬದನೆ, ನುಗ್ಗೆ, ಗೋರಿಕಾಯಿ, ಈರುಳ್ಳಿ, ಮೂಲಂಗಿಗಳಲ್ಲಿ ಕಬ್ಬಿಣಾಂಶವಿರುತ್ತದೆ.
ವೈದ್ಯಸಾಹಿತಿಯಾಗಿನನ್ನಅನುಭವ
ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಯಿತು
– ಡಾ
|| ವಸುಂಧರಾ ಭೂಪತಿಆಯುರ್ವೇದ ಕಾಲೇಜಿನಲ್ಲಿದ್ದಾಗ ನಾನು ಬರೆದ ಕವನವೊಂದನ್ನು ಸಮಾರಂಭವೊಂದರಲ್ಲಿ ಪ್ರಾಂಶುಪಾಲರು ಓದಿ ಪ್ರಶಂಸಿಸಿದಾಗ ಮತ್ತು ಅದನ್ನು ಕೇಳಿ ವಿದ್ಯಾರ್ಥಿಗಳೆಲ್ಲ ಚಪ್ಪಾಳೆ ತಟ್ಟಿದಾಗ ‘ನಾನೂ ಬರೆಯಬಲ್ಲೆ’ ಎಂಬ ವಿಶ್ವಾಸ ಮೂಡಿತ್ತು. ನಂತರ ಅನೇಕ ವರ್ಷಗಳು ವೃತ್ತಿ, ಕುಟುಂಬಗಳ ಮಧ್ಯೆ ಕಳೆದುಹೋದುದೇ ತಿಳಿಯಲಿಲ್ಲ. ಓದುವ ಹವ್ಯಾಸವಿರಿಸಿಕೊಂಡಿದ್ದ ನನಗೆ ಡಾ|| ಅನುಪಮಾ ನಿರಂಜನ ಮತ್ತು ಡಾ|| ಸಿ.ಆರ್. ಚಂದ್ರಶೇಖರ್‌ರವರ ಪುಸ್ತಕಗಳು ಪ್ರಭಾವ ಬೀರಿದ್ದು ಅಪಾರ. ಆಯುರ್ವೇದದ ವಿಷಯಗಳನ್ನು ಹೀಗೇ ಸರಳವಾಗಿ ಬರೆಯಬೇಕೆಂಬ ಹಂಬಲ ಮೂಡಿ ಬರವಣಿಗೆ ಆರಂಭಿಸಿದೆ. ೧೯೯೪ರಲ್ಲಿ ಕರ್ಮವೀರ ಪತ್ರಿಕೆಯಲ್ಲಿ ಪ್ರಕಟವಾದ ಪ್ರಪ್ರಥಮ ಲೇಖನದಿಂದ ಬರಹಯಾನ ಆರಂಭಗೊಂಡಿದ್ದು, ‘ವೈದ್ಯಲೋಕ’ ಆರೋಗ್ಯ ಮಾಸಪತ್ರಿಕೆಯ ಸಂಪಾದಕಿಯಾಗುವವರೆಗೆ ಮತ್ತು ಎಚ್‌ಐವಿ / ಏಡ್ಸ್ ಲೇಖನಕ್ಕೆ ೨೦೦೭ರ ಸಾಲಿನ ‘ಯೂನಿಸೆಫ್‌ ಅಂತರರಾಷ್ಟ್ರೀಯ ಪ್ರಶಸ್ತಿ’ ಪಡೆಯುವವರೆಗೆ ಬೆಳೆದು ನಿಂತಿದೆ ನನ್ನ ಹಾಗೂ ವೈದ್ಯಸಾಹಿತ್ಯದ ಅವಿನಾಭಾವ ಸಂಬಂಧ. ವೈದ್ಯಸಾಹಿತ್ಯದಲ್ಲಿ ಡಾ|| ಸಿ.ಆರ್. ಚಂದ್ರಶೇಖರ್‌ರವರು ನನ್ನ ಮಾನಸ ಗುರುಗಳು.

ಬರವಣಿಗೆ ನನಗೆ ಸಂತೋಷ ಮತ್ತು ಯಶಸ್ಸನ್ನು ತಂದುಕೊಟ್ಟಿದೆ. ಅನೇಕ ಹಿರಿಯ ಸಾಹಿತ್ಯಗಳ ಮಹನೀಯರ, ಒಡನಾಟ ಲಭಿಸಿ ಜೀವನದ ಬಗೆಗಿನ ಒಳನೋಟವನ್ನು ಅರಿಯುವಲ್ಲಿ, ಸಹಕಾರಿಯಾಗಿದೆ. ಶ್ರೀಯುತರಾದ ದಿ.ಎ.ಎನ್. ಮೂರ್ತಿಯರಾಯರು, ದಿ. ನಿಟ್ಟೂರು ಶ್ರೀನಿವಾಸರಾಯರು, ದಿ.ಕೆ.ಎಸ್. ನರಸಿಂಹಸ್ವಾಮಿ, ದಿ. ಕರೀಂಖಾನ್, ದಿ. ಜಿ.ವಿ.ಅಯ್ಯರ್‌ಮುಂತಾದವರನ್ನು ಸಂದರ್ಶಿಸುವ ಸದವಕಾಶ ದೊರಕಿ ಜೀವನ ಧನ್ಯ ಎನಿಸಿದೆ. ವೈದ್ಯಸಾಹಿತ್ಯ ರಚನೆ ನನ್ನ ವ್ಯಕ್ತಿತ್ವ ವಿಕಾಸನಕ್ಕೆ ಕಾಋಣವಾಗಿರುವುದಲ್ಲದೆ ಸಾಮಾಜಿಕವಾಗಿ ನನ್ನನ್ನು ತೊಡಗಿಸಿಕೊಳ್ಳಲು ಸಾಧ್ಯವಾಗುವಂತೆ ಮಾಡಿದೆ. ನನ್ನ ಜ್ಞಾನದ ಹರಹು ವಿಸ್ತರಿಸಿರುವುದಲ್ಲದೇ ಓದುವ, ಅರಿತುಕೊಳ್ಳುವ ಹಂಬಲ ಹೆಚ್ಚಾಗಿದೆ. ನನ್ನ ಲೇಖನಗಳನ್ನು, ಪುಸ್ತಕಗಳನ್ನು ಓದಿ ಅನೇಕರು ಅದರಿಂದ ತಮಗೆ ಪ್ರಯೋಜನವಾಗಿದೆಯೆಂದಾಗ ಬರೆದದ್ದು ‘ಸಾರ್ಥಕ’ ಎನಿಸಿದೆ. ಇನ್ನಷ್ಟು ಓದಬೇಕು, ಮತ್ತಷ್ಟು ಉಪಯುಕ್ತ ಪುಸ್ತಕಗಳನ್ನು ರಚಿಸಬೇಕು ಎಂಬ ಆಶಯ ನನ್ನದು.

* * *