ತಲೆಯೊಳಗೆ ನೆರೆದಿಹವು ನೂರಾರು ಹಕ್ಕಿಗಳು!
ಗಿಳಿಗಣ್ಣಿಗೆ ಕಾಗೆ ಕೋಗಿಲೆ ಹದ್ದು ನವಿಲು ||
ಕಿಲಕಿಲನೆ ಗೊರಗೊರನೆ ಕಿರುಚಿ ಕೂಗುತ್ತಿಹವು|
ನೆಲೆಯಲ್ಲಿ ನಿದ್ದೆಗೆಲೋ? – ಮಂಕುತಿಮ್ಮ ||

ಬದುಕಿನಲ್ಲಿ ಎದುರಾಗುವ ಅನೇಕ ಬಾಹ್ಯ ಘಟನೆಗಳು ಆಂತರಿಕವಾಗಿ ನೆಲೆಗೊಂಡ ಅನೇಕ ನಕಾರಾತ್ಮಕ ಭಾವನೆಗಳನ್ನು ಬಡಿದೆಬ್ಬಿಸಿ, ಮನಸ್ಸೆಂಬ ತಿಳಿಗೊಳವನ್ನು ಬಗ್ಗಡ ಮಾಡಿ, ಅಶಾಂತಿಗೆ ಕಾರಣವಾಗುತ್ತವೆ. “ಅಶಾಂತಸ್ಸ ಕುತಃ ಸುಖಂ” ಎಂಬ ಶ್ರೀಕೃಷ್ಣನ ವಾಣಿಯಂತೆ ಅಶಾಂತ ಮನಸ್ಸಿನವನು ಎಂದಿಗೂ ಅಸುಖಿಯೇ ಆಗಿರುತ್ತಾನೆ. ಶಾಂತ, ನೆಮ್ಮದಿಯ ಜೀವನವನ್ನು ನಡೆಸುವುದೇ ಪ್ರತಿಯೊಬ್ಬನ ಗುರಿಯಾಗಿದೆ. ನೆಮ್ಮದಿ, ಸಂತೋಷಗಳು ಕೇವಲ ಸ್ವಚ್ಛ ತಿಳಿಯಾದ ಮನಸ್ಸಿನಿಂದಲೇ ಸಾಧ್ಯ. ಅಶಾಂತಿಗೆ ಕಾರಣವಾದ ಬಗ್ಗಡವನ್ನು ನಾಶ ಮಾಡಿ ಮನಸ್ಸನ್ನು ಪ್ರಶಾಂತವಾಗಿರಿಸುವುದು ನಿಜವಾದ ಬದುಕಿನ ಕಲೆಯೇ ಆಗಿದೆ.

ಅಂತಹ ಪ್ರಶಾಂತವಾದ ಮನಸ್ಸನ್ನು ಹೊಂದಲು ನೆರವಾಗುವ ಅನೇಕ ಸರಳ ಸೂತ್ರಗಳನ್ನು ಒಳಗೊಂಡಿರುವುದೇ ಖ್ಯಾತ ಮನಶ್ಶಾಸ್ತ್ರಜ್ಞರಾದ ಡಾ|| ಸಿ.ಆರ್. ಚಂದ್ರಶೇಖರ್‌ರವರ ವ್ಯಕ್ತಿ ವಿಕಸನ ಮಾಲೆಯ “ಮನಸ್ಸೇ” ನೀ ಪ್ರಶಾಂತವಾಗಿರು” ಎಂಬ ಕಿರುಹೊತ್ತಿಗೆ ಯಾವುದೇ ರೀತಿಯ ದ್ವಂದ್ವ ತೊಡಕುಗಳಿಲ್ಲದೆ, ಸರಳ ನೇರ ನಿರೂಪಣೆ, ಕ್ಲಿಷ್ಟ ವೈದ್ಯಕೀಯ ವೈಜ್ಞಾನಿಕ ಪರಿಭಾಷೆಯಿಂದ ದೂರವಾದ ಸರಳ ಭಾಷೆ, ಶೈಲಿ ಈ ಹೊತ್ತಿಗೆಯ ವಿಶೇಷತೆಯಾಗಿದೆ. ಘಟನೆಗಳನ್ನು ನೋಡುವ ದೃಷ್ಟಿಯನ್ನು ಬದಲಿಸಿಕೊಂಡು ಮಾನಸಿಕ ಪ್ರಶಾಂತತೆಯನ್ನು ಕಂಡುಕೊಳ್ಳಲು ನೆರವಾಗುವ ಸರಳ ಮಾರ್ಗೋಪಾಯಗಳನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ನಿರೂಪಿಸಿದ್ದಾರೆ.

ಕಾಮ, ಕೋಪ, ಮತ್ಸರ, ಕೀಳರಿಮೆ, ಅಹಂಭಾವ ಮುಂತಾದ ನಕಾರಾತ್ಮಕ ಭಾವನೆಗಳಿಂದ, ಉಂಟಾಗುವ ಪರಿಣಾಮಗಳು; ಅಂತೆಯೇ ಅಲ್ಪ ಆದಾಯ, ಆತಂಕ ದ್ವಂದ್ವಗಳು ಅನುಮಾನ, ಪರರ ಮೋಸ, ವಂಚನೆ, ಪೂರೈಸಿಕೊಳ್ಳಲಾಗದ ಆಸೆ, ಆಕಾಂಕ್ಷೆಗಳು, ಮುಪ್ಪು ಕಾಯಿಲೆ, ಸಾವಿನ ಭಯ ಮುಂತಾದವುಗಳನ್ನು ನಿಭಾಯಿಸುವ ಸರಳ ಸೂತ್ರಗಳು ಅನುಕರಣಿಯವಾಗಿವೆ. ಮನನ ಯೋಗ್ಯವಾಗಿವೆ. ಪುರಾಣ, ಪುಣ್ಯ ಪುರುಷರು ಅಂತಹ ಸಮಸ್ಯೆಗಳನ್ನು ಎದುರಿಸಿದ ಪ್ರಸಿದ್ಧ ದೃಷ್ಟಾಂತಗಳು, ಅದರಿಂದ ಅವರಿಗುಂಟಾದ ಜಯಾಪಜಯಗಳ ನಿರೂಪಣೆಯು ಮನಸ್ಸನ್ನು ಬೇಗ ತಟ್ಟುತ್ತವೆ. ಕಷ್ಟಕೋಟಲೆಗಳು ಕೇವಲ ಸಾಮಾನ್ಯರಿಗೆ ಮಾತ್ರ ಮೀಸಲಿಲ್ಲ ಎಂಬುದನ್ನೂ ಹಾಗೆಯೇ ಪುರಾಣ, ಪ್ರಸಿದ್ಧ ಪುರುಷರ ಜೀವನ ಚರಿತ್ರೆಗಳ ಅಧ್ಯಯನವು ಕೇವಲ ಮನರಂಜನೆಗಾಗಿ ಅಲ್ಲದೆ ಮನಶ್ಶಾಸ್ತ್ರೀಯವಾಗಿಯೂ ಉಪಯುಕ್ತವಾದುದು ಎಂಬುದನ್ನು ತಿಳಿಸಿಕೊಡುತ್ತದೆ. ಉದಾಹರಣೆಗಾಗಿ ಅರ್ಜುನನ ಶಸ್ತ್ರಾಭ್ಯಾಸದ ರೀತಿ, ಆಂಜನೇಯ, ಅಭಿಮನ್ಯು, ಸಿಂಡ್ರೋಮ್‌ಗಳು ಇತ್ಯಾದಿ.

ಪೂರೈಸಿಕೊಳ್ಳಲಾಗದ ಆಸೆ, ಆಕಾಂಕ್ಷೆಗಳಿಗೆ ಬದಲೀ ಆಕಾಂಕ್ಷೆಗಳು, ಆದಾಯಕ್ಕೆ ಹೊಂದಿಕೊಂಡಂತಹ ಜೀವನ; ಕೋಪ, ಅಗಲಿಕೆಗಳನ್ನು ನಿರ್ವಹಿಸಲು ಸೂಚಿಸಿರುವ ಸೂತ್ರಗಳು ಅನುಸರಣೀಯವಾಗಿವೆ. ‘ಆನಂದ, ಎಲ್ಲಿ? ಹೇಗೆ?’ ಎಂಬ ಅಧ್ಯಾಯವಂತೂ ಮಗುವಿನ ಮುಗ್ಧತೆಯನ್ನು ಕಳೆದುಕೊಂಡು ಗಡಿಬಿಡಿಯ ಜೀವಿಸುತ್ತಿರುವ ಇಂದಿನವರಿಗೆ ಕಣ್ಣುತೆರೆಸುವಂತಿದೆ. ಯಾವುದೇ ಭೋಗಭಾಗ್ಯಗಳು ತರುವ ಆನಂದಕ್ಕಿಂತ ಮಗುವಿನ ಮುಗ್ಧತೆಯಂತಹ ಮನಸ್ಸಿನಿಂದ ಅಮಿತಾನಂದವುಂಟಾಗುವುದು ಎಂಬ ಸತ್ಯವನ್ನು ನಿರೂಪಿಸಿದ್ದಾರೆ. ಹಿತಮಿತ ಆಹಾರ, ವ್ಯಾಯಾ, ಸಕಾರಾತ್ಮಕ ಆಲೋಚನೆ, ‘ಅತಿ’ಗಳಿಂದ ದೂರವಿರುವಿಕೆ ಮುಂತಾದವು ನೆಮ್ಮದಿಯ ಜೀವನಕ್ಕೆ ಅಡಿಪಾಯ ಎಂಬುದನ್ನು ಎಲ್ಲರೂ ತಿಳಿಯಬೇಕಾದ ಅಗತ್ಯವಿದೆ.

ಕಷ್ಟಕೋಟಲೆಗಳೆಂಬ ಪಾಕದಿಂದ ಮಾತ್ರವೇ ಮನಸ್ಸು ಪರಿಪಕ್ವವಾಗುವುದೆಂಬ ಸತ್ಯವನ್ನು ಅರಿತು ಜೀವಿಸಬೇಕು. “ತಿದ್ದಿಕೊಳ್ಳೋ ನಿನ್ನ ನೀಂ; ಜಗವ ತಿದ್ದುವುದಿರಲಿ” ಎಂಬ ಜೀವನವೆಂಬ ಕಲೆಯನ್ನು ಅರಿಯುವ ಅರಿತು ಅನುಸರಿಸುವ ಅಗತ್ಯ ಎಂದಿಗಿಂತ ಇಂದು ಹೆಚ್ಚಾಗಿರುವಾಗ, ಈ ನಿಟ್ಟಿನ ಹೆಜ್ಜೆ ಸಾರ್ಥಕವಾದುದು.

* * *