ಅಲರ್ಜಿ ಅಥವಾ ಒಗ್ಗದಿಕೆ ಸಾಮಾನ್ಯವಾದ ಕಾಯಿಲೆ, ಹಲವರಿಗೆ ಕೆಲವು ಪದಾರ್ಥಗಳನ್ನು ತಿಂದಾಗ, ವಾಸನೆ ತೆಗೆದುಕೊಂಡಾಗ, ಕೆಲವು ವಸ್ತುಗಳನ್ನು ಮುಟ್ಟಿದಾಗ ಶರೀರದಲ್ಲಿ ವಿಕೃತ ಪ್ರತಿಕ್ರಿಯೆಯಾಗುತ್ತದೆ. ಈ ಪ್ರತಿಕ್ರಿಯೆಯಲ್ಲಿ ದೇಹದ ಬೇರೆ ಬೇರೆ ಅಂಗಾಂಗಗಳಾದ ಚರ್ಮ, ರಕ್ತನಾಳ, ಶ್ವಾಸಕೋಶ, ಮೂಗು ಪಾತ್ರಗೊಳ್ಳುತ್ತದೆ. ಅಂತಹ ವ್ಯಕ್ತಿ ಇಸುಬು, ಅಸ್ತಮಾ ನೆಗಡಿ ಇವುಗಳಿಂದಲೂ ನರಳಬಹುದು.

ಮೂಗಿನ ಅಲರ್ಜಿಗೆ ಕಾರಣಗಳು

ಮೂಗಿನ ಅಲರ್ಜಿ ಮೂಗಿಗೆ ಒಗ್ಗದ ಕೆಲವು ಅಲರ್ಜಿಗಳು ದೇಹವನ್ನು ಸೇರಿದಾಗ, ಎದುರು ಕಂಟುಗಳು ಉತ್ಪನ್ನವಾಗುತ್ತವೆ. ಆಗ ಅಂಟಿಜನ್ ಕಂಟಕಗಳ ಕ್ರಿಯೆಯಿಂದ ಹಿಸ್ಟಮಿನ್ ಉತ್ಪತ್ತಿಯಾಗಿ ನೆಗಡಿ, ಸೀನು, ಮೂಗು ಕಟ್ಟುವುದು ಉಂಟಾಗುತ್ತದೆ. ಮೂಗಿನ ಅಲರ್ಜಿ ಇರುವವರಿಗೆ ಕೆಲವು ಪದಾರ್ಥಗಳು ಒಗ್ಗುವುದಿಲ್ಲ. ಅವುಗಳೆಂದರೆ ಮನೆಧೂಳು, ಡೀಸೆಲ್ ಹೊಗೆ, ಹಾಲು, ಮೀನು, ಮೊಟ್ಟೆ, ಕೆಲವರಿಗೆ ಕೃತಕ ಬಟ್ಟೆ, ಬೆಂಗಳೂರಿನಲ್ಲಿ ವಿಪರೀತವಾಗಿ ಬೆಳೆದಿರುವ ಪಾರ್ಥೇನಿಯಂ ಹುಲ್ಲು, ರಸಾಯನಿಕ ವಸ್ತುಗಳಿಂದ ತಯಾರಾದ ಸೌಂದರ್ಯ ಸಾಧನಗಳು. ಇವುಗಳು ಅಲರ್ಜಿಗೆ ಕಾರಣ. ಈಕಾಯಿಲೆಯನ್ನು ಗುರುತಿಸುವುದು ಸುಲಭ. ರೋಗಿಗಳೇ ಬಂದು ಮೂಗಿನ ಅಲರ್ಜಿ ಇದೆ ಎಂದು ಹೇಳುತ್ತಾರೆ. ಅವರಿಗೆ ನೆಗಡಿ, ಸೀನು ಹಾಗೂ ಮೂಗು ಕಟ್ಟುವುದರಿಂದ ಯಾವ ಕಾರ್ಯದಲ್ಲೂ ಆಸಕ್ತಿ ಇರುವುದಿಲ್ಲ. ಮೂಗಿನ ಕಾಯಿಲೆಗೆ ಕಾರಣವಾದ ಅಲರ್ಜಿಯನ್ನು ಕಂಡುಹಿಡಿಯುವುದು ಸುಲಭವಲ್ಲ.

ಪರಿಹಾರ

ಈಗ ನಮಗೆ ತಿಳಿದಿರುವ ಅಲರ್ಜಿಗಳನ್ನು ಅಲ್ಪ ಪ್ರಮಾಣದಲ್ಲಿ ಚುಚ್ಚುಮದ್ದಿನ ಮೂಲಕ ಚರ್ಮಕ್ಕೆ ಕೊಟ್ಟು ಯಾವುದಕ್ಕೆ ಪ್ರತಿಕ್ರಿಯೆ ಉಂಟಾಗುತ್ತದೆ ಎಂದು ತಿಳಿದುಕೊಳ್ಳಬೇಕು. ಅಂತಹ ಜನಕ (ಅಂಟಿಜನ್‌)ಗಳನ್ನು ಸ್ವಲ್ಪ ಸ್ವಲ್ಪವಾಗಿ ದೇಹದಲ್ಲಿ ಸೇರಿಸಿ ಪ್ರತಿಕ್ರಿಯೆ ಆಗದಂತಹ ಸ್ಥಿತಿಗೆ ತರಬೇಕು. ಇದಕ್ಕೆ ಡಿಸೆನ್ಸಿಟೈಸೇಶನ್ ಎಂದು ಹೆಸರು. ಇದರ ಬಹಳ ವಿಷಾದದ ಸಂಗತಿ ಎಂದರೆ ಈ ಚಿಕಿತ್ಸೆ ಎಲ್ಲರಿಗೂ ಒಂದೇ ರೀತಿಯ ಫಲ ಕೊಡುವುದಿಲ್ಲ. ಈ ಪತಿಕ್ರಿಯೆ ಹಿಸ್ಟಾಮಿನ್‌ನಿಂದ ಆಗುವುದರಿಂದ ಹಿಸ್ಟಾಮಿನ್ ನಿರೋಧಕ ಅಂದರೆ ಆಂಟಿ ಹಿಸ್ಟಾಮಿನ್ ಮಾತ್ರೆಗಳಿಂದ ಮೂಗಿನ ಅಲರ್ಜಿಯನ್ನು ಉಪಶಮನ ಮಾಡಬಹುದು. ಪ್ರಾಣಾಯಾಮ ಹಾಗೂ ವ್ಯಾಯಾಮಗಳಿಂದ ಈ ಕಾಯಿಲೆಯನ್ನು ಬಹಳಷ್ಟು ಸ್ಥಿಮಿತದಲ್ಲಿಟ್ಟುಕೊಳ್ಳಬಹುದು. ಕೆಲವರಿಗೆ ವಿಡಿಯನ್ ನ್ಯೂರಿಕ್ಷಮಿ ಶಸ್ತ್ರಚಿಕಿತ್ಸೆ ಅನುಕೂಲವಾಗುತ್ತದೆ. ಕೆಲವರಿಗೆ ಅವರ ವಾಸಸ್ಥಳವನ್ನು ಬದಲಾಯಿಸುವುದರಿಂದ ಅನುಕೂಲವಾಗುತ್ತದೆ. ಸ್ಟಿರಾಯಿಡ್ ಔಷಧಿ ತೀಕ್ಷ್ಣ; ಗುಣ ಕೊಟ್ಟರೂ ಇದನ್ನು ಬಹಳ ಉಪಯೋಗಿಸುವುದು ಕ್ಷೇಮವಲ್ಲ.

ಎರಡನೇ ತರಹದ ಚಿಕಿತ್ಸೆ

ಒಗ್ಗದ ವಸ್ತುವಿಗೆ ದೇಹವು ಒಗ್ಗಿಕೊಳ್ಳುವಂತೆ ಮಾಡುವುದು. ಒಗ್ಗದ ವಸ್ತು ಯಾವುದೆಂದು ಪತ್ತೆ ಹಚ್ಚಿದ ನಂತರ ಅದನ್ನೇ ಹೊಂದಿದ ದ್ರಾವಣವನ್ನು ಪ್ರತಿವಾರ ಅಥವಾ ೨ ವಾರಗಳಿಗೊಮ್ಮೆ ಕಡಿಮೆ ಪ್ರಮಾಣದಿಂದ ಜಾಸ್ತಿ ಪ್ರಮಾಣದವರೆಗೆ ಚುಚ್ಚು ಮದ್ದಿನಿಂದ ದೇಹದ ಒಳಗೆ ಸೇರಿಸಿದಾಗ ಕ್ರಮೇಣ ದೇಹವು ಆ ವಸ್ತುವಿಗೆ ಒಗ್ಗುತ್ತದೆ.

ಮೂಗಿನ ಹಲಪದಿಗಳು (ನೇಸಲ್ ಪಾಲಿಪ್ಸ್)

ಈ ಕಾಯಿಲೆಯಲ್ಲಿ ಮೂಗಿನ ಅದಕ್ಕೂ ಮಿಗಿಲಾಗಿ ಎಥ್‌ಮಾಯಿಡ್ ಕುಹರದ ಹಾಗೂ ಮ್ಯಾಕ್ಸಿಲರಿ ಕುಹರದ ಲೊಳ್ಪರೆ ಉರಿತದಿಂದಾಗಿ ದಪ್ಪವಾಗಿ ಊದಿಕೊಂಡು ಅವುಗಳಿಂದ ಹೊರಬಂದು ಮೂಗಿನ ಕೋಣೆಯನ್ನಾವರಿಸಿ ಉಸಿರಾಡಲು ತೊಂದರೆಯುಂಟು ಮಾಡುತ್ತದೆ. ಅದಕ್ಕನುಗುಣವಾಗಿ ಮೂಗಿನ ಹಲಪದಿಗಳನ್ನು ೧) ಎಥ್‌ಮಾಯಿಡ್ ಹಲಪದಿ ಹಾಗೂ ೨) ಆಂಟ್ರೋಕೋವಾಯಿನಲ್ ಹಲಪದಿಗಳೆಂದು ಎರಡು ವಿಧವಾಗಿ ಪರಿಗಣಿಸಬಹುದು. ಈ ಎರಡು ತರಹದ ಹಲಪದಿಗಳನ್ನು ಈ ಕೆಳಗಿನ ಲಕ್ಷಣಗಳಿಂದ ಗುರುತಿಸಬಹುದು:

ಎಥ್‌ಮಾಯಿಡ್ ಹಲಪದಿ ಆಂಟ್ರೋಕೊಯಿನಲ್ ಹಲಪದಿ
೧. ಎಥ್‌ಮಾಯಿಡ್ ಕುಹರದ ಲೋಳ್ಪರೆಯಿಂದ ಜನಿಸುತ್ತದೆ. ಮ್ಯಾಕ್ಸಿಲರಿ ಕುಹರದಿಂದ ಜನಿಸುತ್ತದೆ.
೨. ವಯಸ್ಕರಲ್ಲಿ ಜಾಸ್ತಿ ಕಂಡು ಬರುತ್ತದೆ ಹರೆಯದವರಲ್ಲಿ ಜಾಸ್ತಿ  ಕಂಡು ಬರುತ್ತದೆ.
೩. ಜಾಸ್ತಿಯಾಗಿ ಎರಡೂ ಮೂಗಿನ ಕೋಣೆಗಳಲ್ಲಿ ಒಮ್ಮೆಗೆ ಗೋಚರವಾಗುತ್ತದೆ. ಬಹಳಷ್ಟು ಒಂದೇ ಕಡೆಯ ಕೋಣೆಯನ್ನು ತುಂಬಿರುತ್ತದೆ.
೪. ದ್ರಾಕ್ಷಿ ಗೊಂಚಲನ್ನೆ ಹೋಲುತ್ತದೆ. ಒಂದೇ ಒಂದು ನಿಂಬೆ ಗಾತ್ರದಷ್ಟು ಇರುತ್ತದೆ.
೫. ಮುಖ್ಯ ಕಾರಣ ಮೂಗಿನ ಒಗ್ಗದಿಕೆ ಮುಖ್ಯ ಕಾರಣ ಸರಿಯಾಗಿ ಔಷಧೋಪಚಾರವಿಲ್ಲದ ಕುಹರದ ಸೋಂಕು
೬. ಮೂಗಿನ ಮುಂಭಾಗಕ್ಕೆ ಬೆಳೆಯುತ್ತದೆ. ಮೂಗಿನ ಹಿಂಭಾಗಕ್ಕೆ ಬೆಳೆಯುತ್ತದೆ.

ಹಲಪದಿ ಕಾಯಿಲೆ ಇರುವ ರೋಗಿಯು ಮೂಗು ಕಟ್ಟುವುದು, ಉಸಿರಾಡಲು ತೊಂದರೆಯಾಗುವುದು, ಮುಂಭಾಗದ ತಲೆನೋವು ಬರುವುದು. ಮೂಗಿನಿಂದ ಒಂದೇ ಸಮನೆ ನೀರು ಸೋರುವುದು, ಅಥವಾ ಮೂಗಿನಿಂದ ಗಡ್ಡೆ ಹೊರಬರುವ ತೊಂದರೆಗಳಿಲಗೆ ವೈದ್ಯರ ಹತ್ತಿರ ಬರುವುದು ಸಾಮಾನ್ಯ. ಪರೀಕ್ಷೆ ಮಾಡಿದಾಗ ಮೂಗಿನ ಕೋಣೆಯಲ್ಲಿ ಬಿಳಿ ಬೂದು ಬಣ್ಣದ ಈ ಹಲಪದಿಗಳು ಕಾಣುತ್ತವೆ.

ಚಿಕಿತ್ಸೆ

೧. ಬಹಳಷ್ಟು ಶುರುವಾತಿನ ವೇಳೆಯಲ್ಲಿ ಎಥ್‌ಮಾಯಿಡ್ ಹಲಪದಿಗಳನ್ನು ಕಂಡು ಹಿಡಿದಲ್ಲಿ ಹಿಸ್ಟಮಿನ್ ನಿರೋಧಕ ಮಾತ್ರೆ ಹಾಗೂ ಮೂಗಿನ ಡಿಕಂಜೆಸ್ಟೆಂಟ್ ಹನಿಗಳಿಂದ ಕಡಿಮೆ ಮಾಡಬಹುದು.

೨. ಆದರೆ ನಮ್ಮ ದೇಶದಲ್ಲಿ ರೋಗಿಗಳು ವೈದ್ಯರ ಹತ್ತಿರ ಬರುವ ವೇಳೆಗೆ ಎಷ್ಟು ತಡವಾಗಿರುತ್ತದೆಂದರೆ ಅದಕ್ಕೆ ಶಸ್ತ್ರಚಿಕಿತ್ಸೆಯೊಂದೇ ಮಾರ್ಗ.

೩. ವೃದ್ಧರಲ್ಲಿ ಈ ಕಾಯಿಲೆ ಬಂದಾಗ ತೆಗೆದ ಹಲಪದಿಗಳನ್ನು ಬೈಯಾಪ್ಸಿ (ಸೂಕ್ಷ್ಮ ದರ್ಶಕ ಪರೀಕ್ಷೆಗೆ) ಕಳುಹಿಸಿ ಕ್ಯಾನ್ಸರ್ ಕಾಯಿಲೆ ಇದೆಯೋ ಇಲ್ಲವೋ ಎಂದು ಸ್ಪಷ್ಟಪಡಿಸಬೇಕು.

೪. ಎಥ್‌ಮಾಯಿಡ್ ಹಲಪದಿಗಳನ್ನು ಪೂರ್ಣವಾಗಿ ತೆಗೆಯಲು ಫಂಕ್‌ಶನಲ್ ಎಂಡೋಸ್ಕೋಪಿಕ್ ಸರ್ಜರಿ ಉತ್ತಮ ಶಸ್ತ್ರಚಿಕಿತ್ಸೆಯಾಗಿದೆ.

* * *