೧೯೭೨ರಿಂದ ಇಲ್ಲಿಯವರೆಗೆ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಸಾವಿರಕ್ಕೂ ಹೆಚ್ಚು ಲೇಖನಗಳು ಅಂಕಣಗಳು ಮತ್ತು ಸುಮಾರು ೧೬೦ ಪುಸ್ತಕಗಳನ್ನು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬರೆದು ಮನೋವಿಜ್ಞಾನದ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ ಈ ಕೃತಿಗಳಲ್ಲಿ ೧೯೮೬ರಲ್ಲಿ ಪ್ರಕಟವಾದ ‘ಸೃಷ್ಟಿಯ ಅದ್ಭುತ: ಮಿದುಳು’ ಎಂಬ ಸಂಕಲನ ಗ್ರಂತವೂ ಒಂದು.

‘ಚಿಂತನಶಕ್ತಿ’ಯೇ ಸೃಷ್ಟಿಯ ಅಸಂಖ್ಯ ಜೀವರಾಶಿಗಳಿಂದ ಮನುಷ್ಯನನ್ನು ಪ್ರತ್ಯೇಕಿಸುವ ಪ್ರಧಾನ ಮಾನದಂಡ. ಈ ಶಕ್ತಿಯ ಉಗಮಕ್ಷೇತ್ರವೇ ಮಿದುಳು’. ಆದರೆ ಬಹುಮಟ್ಟಿನ ಜನ ಮಿದುಳಿನ ಬಗ್ಗೆ ಏನೂ ತಿಳಿಯದ ಮುಗ್ಧರೇ ಆಗಿದ್ದಾರೆ. ಇಂತಹ ಅಮೂಲ್ಯ ವಿಷಯದ ಮೇಲೆ ಬೆಳಕು ಚೆಲ್ಲುವ ವಿಶಿಷ್ಟ ಕೃತಿಯೇ ಸೃಷ್ಟಿಯ ಅದ್ಭುತ: ಮಿದುಳು ಎಂಬ ಕೃತಿ.

೨೨೫. ಪುಟಗಳಿರುವ ಈ ಕೃತಿಯಲ್ಲಿ ‘ನರಮಂಡಲ ಮನೋವ್ಯಾಪಾರ ಮತ್ತು ಕಾಯಿಲೆ ಚಿಕಿತ್ಸೆ’ ಎಂಬ ಮೂರು ಭಾಗಗಳಿವೆ.

ನರಮಂಡಲ ಎಂಬ ಮೊದಲನೇ ಭಾಗವೇ ಕೃತಿಯ ಶೀರ್ಷಿಕೆಗೆ ಸಂಬಂಧಪಟ್ಟ ಭಾಗ. ಇದರಲ್ಲಿ ಏಳು ಅಧ್ಯಾಯಗಳಿವೆ. ಮೊದಲ ಮೂರು ಅಧ್ಯಾಯಗಳು ಮಿದುಳಿನ ಸ್ವರೂಪ, ಅದರ ವಿವಿಧ ಭಾಗಗಳು, ಕಾರ‍್ಯವೈಖರಿ ಮತ್ತು ಮಿದುಳಿಗೂ ದೇಹದ ಉಳಿದ ಭಾಗಗಳಿಗೂ ಸಂಬಂಧ ಕಲ್ಪಿಸುವ ನರವಾಹಕಗಳ ಬಗ್ಗೆ ಸಚಿತ್ರ ವಿವರಣೆ ನೀಡುತ್ತದೆ. ಉಳಿದ ನಾಲ್ಕು ಅಧ್ಯಾಯಗಳು ಮಿದುಳಿಗೆ ಸಂಬಂಧಪಟ್ಟ ಜನರಿಗೆ ಚಿರಪರಿಚಿತವಾಗಿರುವ ರೇಬಿಸ್, ಮೂರ್ಛೆರೋಗ, ಪಾರ್ಶ್ವವಾಯು ಮತ್ತು ಬುದ್ಧಿಮಾಂದ್ಯಗಳ ಬಗ್ಗೆ ವಿವರಿಸುತ್ತವೆ. ಕಲ್ಪಿತ ದೃಷ್ಟಾಂತಗಳೊಂದಿಗೆ ಆರಂಭಿಸಿ, ಕಾಯಿಲೆಯ ಲಕ್ಷಣಗಳು ಅವುಗಳು ಬರಲು ಕಾರಣಗಳು, ಚಿಕಿತ್ಸೆ ಮತ್ತು ಬರದಂತೆ ತಡೆಗಟ್ಟಲು ಅನುಸರಿಸಬೇಕಾದ ಮುಂಜಾಗ್ರತೆಯ ಕ್ರಮಗಳನ್ನು ವಿವರಿಸುತ್ತಾರೆ.

ಮನೋವ್ಯಾಪಾರದಲ್ಲಿ ೧೦ ಅಧ್ಯಾಯಗಳಿವೆ. ಎಲ್ಲಾ ಅಧ್ಯಾಯಗಳು ಮನಸ್ಸನ್ನೇ ಕೇಂದ್ರೀಕರಿಸಿದರೂ, ವಿಷಯಗಳು ವಾದವಿವಾದಗಳು ಮತ್ತು ಚರ್ಚೆಗಳ ವಿವರಗಳು ಪ್ರೌಢವಾಗಿದ್ದರೂ ನಿರೂಪಣಾ ವಿಧಾನದಲ್ಲಿ ಆತ್ಮೀಯತೆಯನ್ನು ಹೊಂದಿದೆ. ಓದುಗರಿಗೆ ಸುಲಭವಾಗಿ ಅರ್ಥವಾಗುತ್ತವೆ. ಕೈಮದ್ದು ಮೊದಲಾದ ಅವೈಜ್ಞಾನಿಕ ಆಚರಣೆಗಳ ಮೇಲೆ ವೈಜ್ಞಾನಿಕ ಬೆಳಕನ್ನು ಬೀರಿ, ಜನತೆಯನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯಲು ಸಹಕಾರಿಯಾಗಿವೆ.

ಕಾಯಿಲೆ ಚಿಕಿತ್ಸೆ ಎಂಬ ಮೂರನೇ ಭಾಗದಲ್ಲಿ ಆರು ಅಧ್ಯಾಯಗಳಿವೆ. ಪ್ರತಿಯೊಂದು ವಿಷಯವು ಸೃಷ್ಟಿಯಲ್ಲಿರುವ ಎಲ್ಲ ವ್ಯಕ್ತಿಗಳಿಗೂ ಸಂಬಂಧಪಟ್ಟಿವೆ. ಸಾಮಾನ್ಯ ಮನುಷ್ಯ, ವೈದ್ಯ ಮತ್ತು ಔಷಧಗಳ ಪರಸ್ಪರ ಸಂಬಂಧವನ್ನು ವಿವರಿಸುತ್ತಾರೆ. ನೆಗಡಿ, ಜ್ವರ ಮೊದಲಾದ ಸಾಮಾನ್ಯ ಕಾಯಿಲೆಗಳು ಬಂದಾಗ ಅವುಗಳನ್ನು ಎದುರಿಸುವ ಬಗೆಯನ್ನು ವೈಜ್ಞಾನಿಕವಾಗಿ ವಿವರಿಸಿದ್ದಾರೆ. ಔಷಧಗಳ ಬಗ್ಗೆ ಇರಬೇಕಾದ ಸಾಮಾನ್ಯ ಜ್ಞಾನದ ನಿರೂಪಣೆ ಇದೆ. ವೈದ್ಯರಿಗೂ ಕಿವಿಮಾತು ಹೇಳುವ ಮತ್ತು ಜನರನ್ನು ವೈಜ್ಞಾನಿಕ ಪ್ರವೃತ್ತಿಯ ಕಡೆ ಕರೆದೊಯ್ಯುವ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವುದರಲ್ಲಿ ವೈದ್ಯರ ಪಾತ್ರ ಎಂಬ ಅಧ್ಯಾಯವಂತೂ ರೋಗಿ ಮತ್ತು ವೈದ್ಯರಿಬ್ಬರಿಗೂ ಅತ್ಯಂತ ಉಪಯುಕ್ತವಾಗಿರುವ ಲೇಖನ.

ಹೀಗೆ ಮಿದುಳು ಮತ್ತು ಮನಸ್ಸಿಗೆ ಸಂಬಂಧಿಸಿದ ವೈಜ್ಞಾನಿಕ ವಿಷಯಗಳೊಂದಿಗೆ ದಿನನಿತ್ಯದ ಘಟನೆಗಳನ್ನು ಬೆಸೆಯುವ ಈ ಕೃತಿ ವಿಶಿಷ್ಟವಾದುದು. ಗಹನ ವೈಜ್ಞಾನಿಕ ವಿಷಯಗಳನ್ನು ಮತ್ತು ಕಾಯಿಲೆಯ ವಿವರಗಳಂತಹ ಶಾಸ್ತ್ರದ ವಿಷಯಗಳನ್ನು ಹೇಳುವಾಗ ತಮ್ಮ ಅನುಭವದಲ್ಲಿ ಕಂಡ ದೃಷ್ಟಾಂತಗಳನ್ನು ಪಾತ್ರಗಳು ಮತ್ತು ಸಂಭಾಷಣೆಯಲ್ಲಿ ಒಳಗೊಂಡ ಘಟನೆಯಾಗಿಸಿ, ಮುನ್ನುಡಿಯ ರೂಪದಲ್ಲಿ ಹೇಳುತ್ತಾರೆ. ಈ ನಿರೂಪಣೆ ಓದುಗರ ಮನವನ್ನು ಸೆಳೆದು ಮುಂದೆ ಓದಲು ಪ್ರೇರೇಪಿಸುತ್ತದೆ. ಸಿಹಿ ಲೇಪಿತ ಕಹಿ ಗುಳಿಗೆಗಳ ಕ್ರಮವೇ ಇವರ ನಿರೂಪಣೆ.

ದೇಹದ ರಚನೆ ಅಂಗಾಂಗಳ ಕಾರ‍್ಯವಿಧಾನ, ಸಾಮಾನ್ಯವಾಗಿ ಕಾಡುವ ಕಾಯಿಲೆಗಳ ಲಕ್ಷಣ, ಅವು ಬರಲು ಕಾರಣ, ಚಿಕಿತ್ಸೆ, ನಿವಾರಣಾ ವಿಧಾನಗಳು ಆರೋಗ್ಯಪಾಲನೆ ಮತ್ತು ವರ್ಧನೆ- ಇವು ಪ್ರತಿಯೊಬ್ಬರಿಗೂ ತಿಳಿದಿರಬೇಕಾದ ವಿಚಾರಗಳು ಎಂಬ ಲೇಖಕರ ಮಾತುಗಳಲ್ಲಿ ಅವರ ಬರವಣಿಗೆಯ ಉದ್ದೇಶ ಸ್ಪಷ್ಟವಾಗುತ್ತದೆ. ಜನರಲ್ಲಿ ವೈಜ್ಞಾನಿಕ ತಿಳಿವಳಿಕೆ ಮೂಡಿಸುವ ಇವರ ಉದ್ದೇಶಕ್ಕೆ ನಿರೂಪಣಾ ವಿಧಾನ ಸಹಕಾರಿಯಾಗಿದೆ.

ಲೇಖಕರ ಭಾಷೆ ನೇರ ಸರಳ ಮತ್ತು ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. “ಔಷಧ ವಿಷ ಎರಡು ಕಡೆ ಅಲಗಿನ ಕತ್ತಿ ಎಂಬುದನ್ನ ಮರೆಯಬಾರದು” (ಪುಟ ೨೦೩) ಎಂಬಂತಹ ಸಾಹಿತ್ಯದ ಸ್ಪರ್ಶದ ವಾಕ್ಯಗಳೂ ಅಲ್ಲಲ್ಲಿ ಬರುತ್ತವೆ ಜೊತೆಗೆ ವಿಷಯವನ್ನು ಸಣ್ಣ ಸಣ್ಣ ಅಂಶಗಳಾಗಿ ವಿಭಜಿಸಿ ಪಟ್ಟಿ ಮಾಡುವಂತಹ ವೈಜ್ಞಾನಿಕ ಬರವಣಿಗೆಯ ವಿಧಾನವೂ ಇದೆ. ಕಲೆ ಮತ್ತು ವಿಜ್ಞಾನ ಮಾದರಿಯ ಶೈಲಿಗಳ ಮಿಶ್ರಣದಿಂದ ಓದುಗರನ್ನು ಸುಲಭವಾಗಿ ತಲುಪಿ, ನೆನಪಿನಲ್ಲಿ ಉಳಿಯುತ್ತದೆ.

ಯಾವ ಕೈಯಿಂದ ಕಬ್ಬಿಣದ ಗುಂಡನ್ನು ಎತ್ತುತ್ತೇವೆಯೋ ಅದೇ ಕೈಯಿಂದ ಆಗ ತಾನೆ ಮೊಟ್ಟೆಯಿಂದ ಹೊರಬಂದ ಕೋಳಿಮರಿಯನ್ನು ಎತ್ತಿಕೊಳ್ಳುತ್ತೇವೆ. ಇದು ಹೇಗೆ ಸಾಧ್ಯವಾಗುತ್ತದೆ? ಯೋಚಿಸಿದ್ದೀರಾ?” (ಪು.೫೩) ಎಂಬಂತಹ ಪ್ರಶ್ನೆ ರೂಪದ ಆತ್ಮೀಯತೆಯ ಧಾಟಿ ಶೈಲಿಗೆ ವಿಶೇಷ ಮೆರುಗುಗಳನ್ನು ನೀಡಿದೆ.

ವೈದ್ಯಕೀಯ ವಿಷಯಗಳನ್ನು ಹೇಳುವಾಗ ಇವರು ಅನುಸರಿಸುವ ಕ್ರಮ ಅನುಕರಣೀಯ. ಅಂದರೆ ಆಂಗ್ಲ ಭಾಷೆಯ ಪಾರಿಭಾಷಿಕ ಪದಗಳನ್ನು ಬಳಸುವಾಗ ಮಿದುಳಿನ ಮೇಲ್ಮೈ ‘ಮಿದುಳಕಾಂಡ’ ಎಂಬಂತೆ ಸುಂದರವಾಗಿ ಅನುವಾದ ಮಾಡುತ್ತಾರೆ. ಕೆಲವೊಮ್ಮೆ ಅನುವಾದ ಅರ್ಥವಾಗುವುದು ಕಷ್ಟ ಎನಿಸಿದಾಗ ಆಂಗ್ಲಪದವನ್ನು ಜೊತೆಯಲ್ಲಿ ಕೊಡುತ್ತಾರೆ. ಉದಾ:- ಶಿರಗುಳಿ (ಥೆಲಾಮಸ್), ಸ್ಕಿಜೋಫ್ರೀನಿಯಾ (ಇಚ್ಚಿತ್ತ ವಿಕಲತೆ) ಇತ್ಯಾದಿ ಈ ಕ್ರಮದಿಂದ ಕನ್ನಡಿಗರಿಗೆ ವಿಷಯ ಚೆನ್ನಾಗಿ ಅರ್ಥವಾಗುತ್ತದೆ.

ಎಲ್ಲ ಶಾಸ್ತ್ರದ ವಿಷಯಗಳನ್ನು ಕನ್ನಡ ಭಾಷೆಯಲ್ಲೇ ಕಲಿಯಲು ಸಾಧ್ಯವಾಗುವಂತಹ ಶಕ್ತಿಯನ್ನು ಭಾಷೆಗೆ ತಂದುಕೊಡಬೇಕಾಗಿರುವ ಅನಿವಾರ್ಯತೆಯನ್ನು ಕುರಿತು ಭಾಷಾ ವಿಜ್ಞಾನಿಗಳು ತೀವ್ರವಾಗಿ ಚಿಂತಿಸುತ್ತಾರೆ. ಭಾಷೆಯ ಶಕ್ತಿಯನ್ನು ವೃದ್ಧಿಸುವ ಈ ನಿಟ್ಟಿನಲ್ಲಿ ಡಾ| ಸಿ.ಆರ್. ಚಂದ್ರಶೇಖರ್‌ರವರ ಕೃತಿಗಳು ಮಾರ್ಗದರ್ಶಕವಾಗಬಲ್ಲವು ಎಂದು ಹೇಳಬಹುದು.

* * *