ನಾನು ಪುಸ್ತಕದ ಅಂಗಡಿಯಲ್ಲಿ ಸುತ್ತುತ್ತಿದ್ದಾಗ ಕಣ್ಣಿಗೆ ಬಿದ್ದ ಪುಸ್ತಕವೇ “ಕಾಯಿಲೆಯ ಕಾರಣಗಳು ನಿಮ್ಮ ನಂಬಿಕೆ ಎಷ್ಟು ಸರಿ” ಡಾ|| ಸಿ.ಆರ್. ಚಂದ್ರಶೇಖರ್ ರವರ ಅನೇಕ ಲೇಖನಗಳನ್ನು ಓದಿರುವ ನಾನು ಈ ಪುಸ್ತಕವನ್ನು ಕೊಂಡುಕೊಂಡೆ ಮತ್ತು ಈ ದಿನವೇ ಒಂದೇ ಸಲದಲ್ಲಿ ಓದಿದೆ, ಅಲ್ಲ, ಈ ಪುಸ್ತಕದ ವಿಷಯ ಮತ್ತು ಪರಿಣಾಮಕಾರಿಯಾದ ಭಾಷೆಯು ನನ್ನನ್ನು ಓದುವಂತೆ ಮಾಡಿತು. ಈ ಪುಸ್ತಕದ ಹಿಂಪುಟ ತೆಗೆದಾಗ ಡಾ|| ಸಿ.ಆರ್. ಚಂದ್ರಶೇಖರ್‌ರವರು ನೂರು ಪುಸ್ತಕಗಳನ್ನು ಬರೆದಿರುವುದಾಗಿ ತಿಳಿದು ಆಶ್ಚರ್ಯ ಪಟ್ಟೆ, ಸಾಮಾನ್ಯವಾಗಿ ಕಾಡುವ ಕಾಯಿಲೆಗಳಿಗೆ ನಾವೇ ತೆಗೆದುಕೊಳ್ಳಬಹುದಾದ ಟ್ಯಾ‌ಬ್ಲೆಟ್, ಸಿರಪ್, ಕ್ಯಾಪ್ಸೂಲ್‌ಗಳ ವಿವರವನ್ನು ಲೇಖಕರು ತಿಳಿಸಬಹುದೆಂದು ಭಾವಿಸಿದ್ದ ನನಗೆ ಭ್ರಮನಿರಸನವಾಯಿತು. ಇದರ ಬದಲಾಗಿ ಕಾಯಲೆಗಳ ಬಗ್ಗೆ ಜನರಿಗಿರುವ ಮೂಢನಂಬಿಕೆಗಳ ವಿರುದ್ಧ ತಿಳುವಳಿಕೆಯನ್ನು ಪಡೆದೆ. ಕಾಯಿಲೆ ಎಂಬ ಪದದ ಆಂಗ್ಲರೂಪವಾದ Disease ಎಂಬ ಪದದ ಒಂದೊಂದು ಅಕ್ಷರದ ವಿವರಣೆಯು ನನ್ನಗಿಷ್ಟವಾಯಿತು. ಉಷ್ಣ, ಶೀತದ ಬಗ್ಗೆ ಲೇಖಕರು ತಿಳಿಸಿದ ವಿವರಣೆಯನ್ನು ಓದಿ ನನ್ನಲ್ಲೂ ಇದ್ದ ಮೂಢನಂಬಿಕೆಯು ಪರಿಹಾರವಾಗಿ ಸತತವಾಗಿ ಮಳೆ ಬೀಳುತ್ತಿದ್ದ ಈ ದಿನಗಳಲ್ಲಿ ಧೈರ್ಯವಾಗಿ ಐಸ್ ಕ್ರೀಂ ತಿಂದೆ!!

ಈ ಪುಸ್ತಕದಲ್ಲಿ ಮದ್ದೀಡು. ಬಾನಾಮತಿ, ಭಟ್ಟಿ ಬಿದ್ದಿರುವುದು, ದೃಷ್ಟಿಯಾಗಿರುವುದು, ಮಾಟ, ಮಂತ್ರ, ದೆವ್ವ ಮುಂತಾದ ಪ್ರಚಲಿತವಾದ ಮೂಢನಂಬಿಕೆಗಳ ವಿರುದ್ಧ ಪರಿಣಾಮಕಾರಿಯಾದ ಎಚ್ಚರಿಕೆ ಇದೆ. ಟಾನಿಕ್ ಮತ್ತು ಲೈಂಗಿಕ ಶಕ್ತಿವರ್ಧಕಗಳು ಹೆಚ್ಚಿನವು ಪರಿಣಾಮಕಾರಿಗಳಲ್ಲ ಅವುಗಳನ್ನು ಜನರು ಕೊಂಡು ಕೊಂಡು ತಮ್ಮ ಅಮೂಲ್ಯವಾದ ಹಣವನ್ನು ದಂಡ ಮಾಡಿ ಏನೋ ಒಂದು ಬಗೆಯ ತಾತ್ಕಾಲಿಕ ನೆಮ್ಮದಿ ಪಡೆಯುತ್ತಾರೆ ಎಂಬ ಡಾ|| ಸಿ.ಆರ್. ಚಂದ್ರಶೇಖರ್‌ರವರ ಹೇಳಿಕೆಯು ನನಗೆ ಇಷ್ಟವಾಯಿತು. ಮತ್ತು ನನ್ನ ಮನೆಯ ಕಪಾಟಿನಲ್ಲಿ ಜೋಡಿಸಿಟ್ಟ ಟಾನಿಕ್ ಬಾಟಲ್‌ಗಳು ನನ್ನನ್ನು ನೋಡಿ ‘ಕಿಸಕ್’ ಎಂದು ನಕ್ಕಂತಾಯಿತು.

ಈ ಪುಸ್ತಕವನ್ನು ಓದಿ ಲೇಖಕರ ಇತರ ಪುಸ್ತಕಗಳನ್ನು ಕೊಳ್ಳಲು ನಿರ್ಧರಿಸಿದೆ. ಇಂತಹ ಪುಸ್ತಕಗಳನ್ನು ಓದಿ ಸಂಗ್ರಹಿಸಿಡುವುದರ ಜೊತೆಗೆ ಡಾ|| ಸಿ.ಆರ್. ಚಂದ್ರಶೇಖರ್‌ರವರ ವಿಚಾರಗಳನ್ನು ಆಚರಣೆಗೆ ಎಲ್ಲರೂ ತರಬೇಕು ಎಂಬು ನನ್ನ ಖಚಿತವಾದ ಅಭಿಪ್ರಾಯವಾಗಿದೆ.

* * *