ಈ ಪುಸ್ತಕ ನನ್ನ ಆತ್ಮಕಥೆಯಲ್ಲ. ಆತ್ಮಕಥೆ ಬರೆಯುವಷ್ಟು ದೊಡ್ಡ ಮನುಷ್ಯ ನಾನಲ್ಲ’ ಎಂದು ಡಾ| ಚಂದ್ರಶೇಖರ್ ಈ ಕೃತಿಗೆ ಪೀಠಿಕೆ ಬರೆದಿದ್ದಾರೆ. ಆದರೆ ಆತ್ಮಕಥೆಯನ್ನು ದೊಡ್ಡ ಮನುಷ್ಯರೇ ಬರೆಯಬೇಕೆಂದೇನಿಲ್ಲ. ಜೀವನದಲ್ಲಿ ಸದುದ್ದೇಶ ಹೊಂದಿದ ವ್ಯಕ್ತಿ ತನ್ನ ಉದ್ದೇಶ ಸಫಲವಾದಾಗ, ತನ್ನ ಸಾಫಲ್ಯದ ಕಾರಣ ಹಾಗೂ ಕಾರ್ಯ ಪದ್ಧತಿ ತಿಳಿಸಿದರೆ, ಅದು ಜನಸಾಮಾನ್ಯರಿಗೆ ಅರಿವು ಮತ್ತು ಧೈರ್ಯ ಕೊಡುತ್ತದೆ. ಸ್ವಂತ ಜೀವನ ಒಂದು ಪ್ರಯೋಗ ಎಂದು ತಿಳಿದು, ಆ ಪ್ರಯೋಗ ಸಫಲ ಅಥವಾ ಅಸಫಲವಾದಾಗದರ ವರದಿ ಬರೆದರೆ ಆದ ಆತ್ಮಚರಿತ್ರೆಯಾಗುತ್ತದೆ. ಇಂತಹ ವರದಿಯಲ್ಲಿ ವಾಸ್ತವಿಕತೆಗೆ ಮತ್ತು ಸತ್ಯಕ್ಕೆ ಅತಿ ಮುಖ್ಯ ಸ್ಥಾನವಿರಬೇಕು. ಇಂತಹ ಒಂದು ಪ್ರಯೋಗಶೀಲ, ಪರೋಪಕಾರಿ ಸಹೃದಯಿ, ಮತ್ತು ಪ್ರತಿಭಾಶಾಲಿ ಜೀವನದ ಸ್ವಪರೀಕ್ಷಣೆಯೇ ಈ ಪುಸ್ತಕ. ಅದನ್ನು ಅವರು ವೃತ್ತಿ ಜೀವನದ ಇಪ್ಪತ್ತೈದು ವರ್ಷಗಳು ಎಂದುಕರೆದಿದ್ದಾರೆ. ಹೊರತು ಆತ್ಮ ಚರಿತ್ರೆ ಎಂದು ಅಲ್ಲ.

ವೃತ್ತಿ ಜೀವನಕ್ಕೆ ಮಹತ್ವವಿರುವ ಈ ಪುಸ್ತಕದಲ್ಲಿ, ವೈಯುಕ್ತಿಕ ಜೀವನದ ವಿವರಕ್ಕೆ ಹೆಚ್ಚಿನ ಸ್ಥಾನವಿಲ್ಲ. ಆದರೂ ಜೀವನದಲ್ಲಿ ಬರುವ ತಿರುವುಗಳ, ಜೀವನದ ಉದ್ದೇಶ ನಿಶ್ಚಯಿಸಲು ಕಾರಣವಾದ ಘಟನೆಗಳ ಮತ್ತು ಗುರುಹಿರಿಯರಿಂದ ಪಡೆದ ಮಾರ್ಗದರ್ಶನ ವಿವರಗಳನ್ನು ಪರಿಣಾಮಕಾರಿಯಾಗಿ ನಿವೇದಿಸಿದ್ದಾರೆ. ತಮ್ಮ ಜನಹಿತದ ಕಾರ್ಯದಲ್ಲಿ ತಮ್ಮ ಪತ್ನಿಯ ಸಹಕಾರವನ್ನು ಎತ್ತಿ ಹಿಡಿದಿದ್ದಾರೆ. ಹಿರಿಯ ಒಪ್ಪಿಗೆಯಿಂದ ನಡೆದ ತಮ್ಮ ವಿವಾಹದ ವಿವರಗಳನ್ನು ಕೊಟ್ಟು, ತಮ್ಮ ವೈವಾಹಿಕ ಜೀವನ ಹೇಗೆ ಸಫಲ ಮತ್ತು ಸಹಕಾರಿ ಜೀವನವಾಯಿತು ಎಂಬುದನ್ನು ಮನೋಜ್ಞವಾಗಿ ತಿಳಿಸಿದ್ದಾರೆ. ಮಕ್ಕಳಾಗದಿದ್ದರೂ ವೈವಾಹಿಕ ಜೀವನವನ್ನು ಸುಖಜೀವನವನ್ನಾಗಿ ಹೇಗೆ ನಡೆಸಬಹುದು. ಎಂಬುದಕ್ಕೆ ಡಾ| ಚಂದ್ರಶೇಖರ ಮತ್ತು ಸೌ. ರಾಜೇಶ್ವರಿಯವರು ಉತ್ತಮ ಉದಾಹರಣೆ ಎನ್ನಿಸುತ್ತದೆ.

ಯಾವ ಮಹತ್ವಾಕಾಂಕ್ಷೆ ಇಲ್ಲದ ಜೀವನ ಒಂದು ಜೀವನವೇ? ಹೀಗಿದ್ದರೂ ಡಾ| ಚಂದ್ರಶೇಖರರು ಇಂತಹ ಜೀವವನ್ನೇ ಬಾಳಲು ಪ್ರಾರಂಭಿಸಿದ್ದರು. ಎಸ್. ಎಸ್.ಎ.ಸಿಯಲ್ಲಿ ಉತ್ತಮ ಗುಣಪಡೆದು ಪಾಸಾಗಿದ್ದರೂ ಮುಂದೆ ಓದದೇ ತಮ್ಮ ತಂದೆಯವರ ಪ್ರಿಟಿಂಗ್ ಪ್ರೆಸ್‌ನಲ್ಲಿಯೇ ಕೆಲಸ ಪ್ರಾರಂಭಿಸಿದ್ದರು. ಅವರ ಪ್ರತಿಭೆಯನ್ನು ಅರಿತ ಒಬ್ಬ ಗುರುಗಳು ಮುಂದಿನ ಕ್ಲಾಸಿನ ಪಾಠಗಳನ್ನು ಅವರಿಗೆ ಮನೆಯಲ್ಲಿಯೇ ಕಲಿಸುತ್ತಿದ್ದರು. ಆದರೆ, ಲೇಖಕರ ಸುದೈವವೆಂಬಂತೆ, ಅವರ ಪ್ರೆಸ್ ವ್ಯವಹಾರ ಒಮ್ಮೇಲೆ ಇಳಿಮುಖವಾಯಿತು. ಪರೆಸ್‌ಗೆ ಅಂಟಿಕೊಂಡು ಉಪಯೋಗವಿಲ್ಲವೆಂದು ಅರಿತು, ಅವರು ಕಾಲೇಜು ಸೇರಿದರು. ಆಗ ತಾವು ಡಾಕ್ಟರ ಆಗಿ ಜನಸೇವೆ ಮಾಡಬೇಕೆಂದು ನಿಶ್ಚಯಿಸಿ ತುಂಬ ಧೈರ್ಯ ಮತ್ತು ಆಸಕ್ತಿಯಿಂದ ಮೆಡಿಕಲ್ ಕಾಲೇಜು ಸೇರಿ, ತಮ್ಮ ಪ್ರತಿಭೆಯಿಂದ ಉತ್ತಮ ರೀತಿಯಲ್ಲಿ ಎಮ್.ಬಿ.ಬಿ.ಎಸ್. ಪಡೆದರು. ಕಾಲೇಜು ಜೀವನದಲ್ಲಿಯೇ ಅವರು ಬರಹಗಾರರಾದರು. ಅವರ ಬರಹಗಳಿಗೆ ಪ್ರಶಸ್ತಿ ದೊರಕಿದವು. ಈ ಅನುಭವವೇ ಅವರನ್ನು ತಮ್ಮ ವೃತ್ತಿಯ ಬಗ್ಗೆ ಅನೇಕ ಪುಸ್ತಕಗಳನ್ನು ಬರೆಯಲು ಪ್ರೇರೇಪಿಸಿದವು. ತಮಗೆ ಲಭಿಸಿದ ಜ್ಞಾನ ಸಂಪದವನ್ನು ಇತರರಿಗೆ ಪ್ರಸಾರ ಮಾಡುವ ಅವರ ಸದುದ್ದೇಶ ಅವರಿಗೆ ಸ್ವಭಾವ ಜನ್ಯವಾಗಿ ತೋರಿಕೆಗಾಗಿ ಅಲ್ಲ ಎಂಬುದು, ಅವರ ಜೀವನ ವಿವರ ಓದುವವರಿಗೆ ನಿಶ್ಚಿತವಾಗಿ ತಿಳಿಯುತ್ತದೆ.

ಎಂ.ಬಿ.ಬಿ.ಎಸ್. ಪಾಸಾಗಿ ಹೆಚ್ಚು ಹಣ ಗಳಿಸುವ ಮತ್ತು ವಿದೇಶ ಗಮನದ ಮೋಹವಿರಿಸಿಕೊಳ್ಳದೆ, ಸರಕಾರಿ ಆಸ್ಪತ್ರೆಯಲ್ಲಿ ಅದೂ ಹೆಚ್ಚಿನ ಆಡಂಬರ ಮತ್ತು ಜನಾಕರ್ಷಣೆ ಇಲ್ಲದ ಮನೋ ವೈದ್ಯಕೀಯ ಕೋರ್ಸ್‌ಗೆ ಏಕೆ ಸೇರಿದರು. ಎಂಬ ಪ್ರಶ್ನೆ ಹೀಗೆ ಉತ್ತರ ಹೇಳಿದ್ದಾರೆ. ವಿಕ್ಟೋರಿಯ ಆಸ್ಪತ್ರೆಗೆ ಬರುವ ರೋಗಿಗಳ ಬಡತನ, ದೀನಾವಸ್ಥೆ ಅಜ್ಞಾನ, ಕಷ್ಟನೋವುಗಳು ಅಂತಿಮ ಹಂತದಲ್ಲಿದ್ದ ರೋಗಿಗಳ ಸಾವು ನನ್ನಲ್ಲಿ ಸೂಕ್ಷ್ಮಸಂವೇದನೆ ಮತ್ತು ಸಹ ಅನುಭೂತಿ (ಎಂಪಥಿ) ತೋರಿಸುವ ಕೌಶಲವನ್ನು ತಂದುಕೊಟ್ಟವು. ಏನೇ ಆಗಲಿ ವೈದ್ಯವೃತ್ತಿಯನ್ನು ಹಣ ಸಂಪಾದನೆಗಾಗಿ ಉಪಯೋಗಿಸಬಾರದು ಎಂಬ ಧೃಡ ನಿರ್ಧಾರವನ್ನು ದಯಪಾಲಿಸಿದವು.

ಯಾವುದಾದರೂ ಒಂದು ವಿಷಯದಲ್ಲಿ ವಿಶೇಷ ಪ್ರಾವಿಣ್ಯ ಪಡೆದು ಆಸ್ಪತ್ರೆಯಲ್ಲಿ ರೋಗಿಗಳಿಂದ ಹಣ ಪಡೆಯದೇ ಚಿಕಿತ್ಸೆ ಕೊಡಬೇಕು. ಕೆಳ ವರ್ಗದ ಜನರಿಗೆ ನೆರವಾಗಬೇಕು ಎಂಬ ನಿರ್ಧಾರಕ್ಕೆ ಬಂದೆ. ಈ ನಿರ್ಧಾರಕ್ಕೆ ಏನು ಮತ್ತು ಯಾರ ಪ್ರೇರಣೆ ಎಂದು ಹೇಳಲಾರೆ ಬಹುಶಃ ನಾನು ಓದಿದ ಸಾಹಿತ್ಯ ಪ್ರಾಥಮಿಕ ಶಾಲಾ ಸಹಪಾಠಿ ಶ್ರೀ ಲಕ್ಷ್ಮೀನಾರಾಯಣ, ಬಡತನ ಬೇಗೆಯಲ್ಲಿ ಬೇಯುತ್ತಿದ್ದ ನನ್ನ ಬಂಧುಗಳು, ದೀರ್ಘಾವಧಿಯಲ್ಲಿ ರೂಪುಗೊಂಡ ನನ್ನ ವ್ಯಕ್ತಿತ್ವ ಮತ್ತು ಮಾನಸಿಕ ಧೋರಣೆ ಇದಕ್ಕೆ ಕಾರಣವೆನ್ನಿಸುತ್ತದೆ ಇಂತಹ ಸಹೃದಯಿಗಳು ಎಷ್ಟು ಜನ ದೊರೆತಾರು? ಮನೋವೈದ್ಯನಾಗಲು ಪ್ರೇರಣೆ ನೀಡಿದವರು ಮಾತ್ರ ಡಾ|| ಎಚ್.ಎಸ್. ನಾರಾಯಣ ಎಂದು ಸೂಚಿಸಿದ್ದಾರೆ.

ಈ ಎಲ್ಲ ವೈಯಕ್ತಿಕ ವಿವರ ಕೊಟ್ಟ ಬಳಿಕ ಅನೇಕ ತರಹದ ಮನೋರೋಗಗಳ ವಿವರ ಮತ್ತು ಅದಕ್ಕೆ ಮಾಡಿದ ಉಪಚಾರದ ಬಗ್ಗೆ ಸರಳಭಾಷೆಯಲ್ಲಿ ಎಲ್ಲರಿಗೂ ತಿಳಿಯುವಂತೆ ಬರೆದಿದ್ದಾರೆ. ಅದರಂತೆಯೇ ಸೆಮಿನಾರ ಮತ್ತು ಲೆಕ್ಚರಿಗೆಂದು ವಿದೇಶ ಪ್ರಯಾಣಗಳ ಬಗ್ಗೆ ಹಾಗೂ ಇವೆಲ್ಲದರಲ್ಲಿ ತಮಗೆ ಬಂದ ಹಿತ-ಅಹಿತಗಳ ಬಗ್ಗೆ ತುಂಬ ವಾಸ್ತವಿಕವಾಗಿ ಉತ್ತಮ ಶೈಲಿಯಲ್ಲಿ ಬರೆದಿದ್ದಾರೆ. ಅವರು ಇದಕ್ಕೂ ಮೊದಲು, ಹೆಚ್ಚಾಗಿ ಮನೋವಿಜ್ಞಾನದ ಮೇಲೆ, ನೂರಕ್ಕೂ ಹೆಚ್ಚು ಪುಸ್ತಕ ಬರೆದಿದ್ದಾರೆ. ಅನೇಕ ಸಾಹಿತ್ಯ ಪ್ರಶಸ್ತಿಗಳು ಇವರಿಗೆ ದೊರತಿದೆ. ಹೀಗಾಗಿ ಇವರೊಬ್ಬ ಸಿದ್ದ ಹಸ್ತ ವಿಜ್ಞಾನಿ ಹಾಗೂ ಸಾಹಿತಿ.

ಈ ಉಪಯುಕ್ತ ಪುಸ್ತಕದ ಸಮಾರೋಪದಲ್ಲಿ ಚಂದ್ರಶೇಖರ್ ಹೀಗೆ ಬರೆದಿದ್ದಾರೆ. ಆರ್ಥಿಕ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಹಿಂದುಳಿದ ವರ್ಗ ಮತ್ತು ಕುಟುಂಬದಲ್ಲಿ ಜನಿಸಿದ ನಾನು ಮನೋವೈದ್ಯ ತಜ್ಞನಾದದ್ದು, ನೂರಕ್ಕೂ ಹೆಚ್ಚಿನ ಪುಸ್ತಕಗಳ ಲೇಖಕನಾದದ್ದು, ಸಾವಿರಾರು ಜನರ ಪ್ರೀತಿ ವಿಶ್ವಾಸಗಳ್ನು ಬಳಿಸಲು ಸಾಧ್ಯವಾದದ್ದು, ವೈದ್ಯನಾಗಿ ಉಪನ್ಯಾಸಕನಾಗಿ, ಬರಹಗಾರನಾಗಿ ಸಂಶೋಧಕನಾಗಿ ಶಿಕ್ಷಕನಾಗಿ, ಜನಮನ್ನಣೆ, ಗಳಿಸಿದ್ದು ಒಂದು ಅಚ್ಚರಿ. ಇದರಲ್ಲಿ ನನ್ನ ಪ್ರತಿಭೆಯದು ಒಂದ ಸಣ್ಣ ಪಾಲಾದರೆ, ಅನೇಕ ಸಜ್ಜನರ ಪ್ರೀತಿ, ಪ್ರೋತ್ಸಾಹ ಹಾಗೂ ದೊರೆತ ಅವಕಾಶಗಳದ್ದು ದೊಡ್ಡ ಪಾಲು. ಇವೆಲ್ಲದಕ್ಕಿಂತ ಭಗವಂತನ ಕೃಪೆ ನನ್ನ ಮೇಲೆ. ಇದೆ ನಾನು ಭಗವಂತನನ್ನು ನಂಬಿದ್ದೇನೆ’ ಇದು ಒಬ್ಬ ವಿನಮ್ರ ವ್ಯಕ್ತಿಯ ಸ್ವಭಾವದ ಸಂಕೇತ. ಡಾ. ಚಂದ್ರಶೇಖರರು ವಿಜ್ಞಾನ, ಸಾಹಿತ್ಯ ಹಾಗೂ ಸಂವೇದನೆಯ ತ್ರಿವೇಣಿ ಸಂಗಮ. ಅವರ ಈ ಆತ್ಮಚರಿತ್ರೆ ಅವರ ಉನ್ನತ ವ್ಯಕ್ತಿತ್ವದ ಕೈಗನ್ನಡಿ. ಅವರ ಈವರೆಗಿನ ಸಾಹಿತ್ಯದಂತೆ ಜನ ಇದನ್ನೂ ಪ್ರೀತಿಯಿಂದ ಸ್ವಾಗತಿಸುವರೆಂದು ನಂಬಿಕೆ.

* * *