ತಮ್ಮ ಪ್ರೌಢಮೆಯ ಬರಹಗಳಿಂದ ಕನ್ನಡಿಗರಿಗೆ ಚಿರಪರಿಚಿತ ಡಾ| ಸಿ.ಆರ್.ಚಂದ್ರಶೇಖರ್ ಬರೆದ ಪುಸ್ತಕಗಳಲ್ಲೊಂದಾದ ‘ಮಾನಸ ಲೋಕದಲ್ಲೊಂದು ಸುತ್ತು’ ಸುಭಾಷ್ ಪಬ್ಲಿಷಿಂಗ್ ಹೌಸ್‌ನ ವಿಸ್ಮಯ ವಿಜ್ಞಾನ ಮಾಲಿಕೆಯಲ್ಲಿ ಮಕ್ಕಳ ಕುತೂಹಲ ತಣಿಸುವ ಕೃತಿ.

ಈ ಕಿರುಹೊತ್ತಿಗೆ ಕೆಲಸ ಮತ್ತು ಚಟುವಟಿಕೆ ಅಂಗವಾದ ಮನಸ್ಸು ಕಲಿಕೆ, ನೆನಪು, ಬುದ್ಧಿ, ಹಾಗೂ ನೈತಿಕ ಮತ್ತು ಸಾಮಾಜಿಕ ಪ್ರಜ್ಞೆಗಳೆಂಬ ಬಣ್ಣನೆಯೊಂದಿಗೆ ಓದುಗನ ಆಸಕ್ತಿಯನ್ನು ಕೆರಳಿಸುತ್ತದೆ.

ಮನಸ್ಸೇ ಮಿದುಳು, ಮಿದುಳೇ ಮನಸ್ಸು ಆಗಿದ್ದು, ೧೦,೦೦೦ ಕೋಟಿಗಿಂತ ಹೆಚ್ಚು ನರಕೋಶ ಮತ್ತು ವಾಹಕಗಳಿಂದ ಕೂಡಿರುವುದನ್ನು ಸರಳವಾಗಿ ವಿವರಿಸುತ್ತದೆ.

ಶಿಶು ಜನಿಸಿದಾಗ ಮಿದುಳು ಶೇಕಡ ೬೦ ರಷ್ಟು ಬೆಳೆದಿದ್ದು, ೩೫೦ ಗ್ರಾಂ ತೂಗುತ್ತದಾದರೆ ಐದು ವರ್ಷಗಳಲ್ಲಿ ಪೂರ್ತಿ ಬೆಳೆದಾಗ ೧೨೫೦ ಗ್ರಾಂ ಆಗುತ್ತದೆ. ೨೦ ವರ್ಷಗಳಲ್ಲಿ ಮನಸ್ಸಿನ ಬೆಳವಣಿಗೆಯಾಗಿ ವ್ಯಕ್ತಿತ್ವ ವಿಕಾಸವಾಗುತ್ತದಾದರೂ ಎಲ್ಲರಲ್ಲೂ ಒಂದೇ ರೀತಿ ಮತ್ತು ಮಟ್ಟ ಇರದೆಂದು ಸ್ಪಷ್ಟವಾಗುತ್ತದೆ.

ವಿವಿಧ ಮಾನಸಿಕ ಕ್ರಿಯೆಗಳು ವಿಕಾಸಗೊಂಡಾಗ ಆಲೋಚನೆ ಮತ್ತು ಭಾವನೆ ಪ್ರಕಟವಾಗುತ್ತದಲ್ಲದೆ ಸಂವೇದನೆ, ಕಲಿಕೆ ಮತ್ತು ನೆನಪಿನಿಂದ ಸ್ವ-ಅರಿವು ಮೂಡುವುದರೊಂದಿಗೆ ಸಾಮಾಜಿಕ ಹಾಗೂ ನೈತಿಕ ಪ್ರಜ್ಞೆಯಿಂದ ವ್ಯಕ್ತಿತ್ವ ರೂಪುಗೊಳ್ಳುತ್ತದೆಂಬುದು ಗಮನಾರ್ಹ.

ಮಾನಸಿಕ ಅಸಮಾಧಾನ ಮತ್ತು ಒತ್ತಡಗಳನ್ನು ಆಂಗ್ಲ ಅಕ್ಷರ ಮಾಲೆಯ ಪ್ರಕಾರ ವ್ಯಾಖ್ಯಾನಿಸಿರುವುದು ಗಮನಾರ್ಹ. ಮಹತ್ವಾಕಾಂಕ್ಷೆ, ಶರೀರದ ನೂನ್ಯತೆಗಳು ಹಾಗೂ ರೋಗಗಳು, ದ್ವಂದ್ವ ಮತ್ತು ಗೊಂದಲಗಳು, ನಿರಾಶೆ ಹಾಗೂ ಅತಿ ನಿರೀಕ್ಷೆ, ಅಹಿತಕರ ಪರಿಸರ, ಕುಟುಂಬ, ಸೋಲು, ಗುರಿ, ಅಭ್ಯಾಸ ಮತ್ತು ಹವ್ಯಾಸಗಳು, ಕೀಳರಿಮೆ ಹಾಗೂ ಅರಕ್ಷಿತ ಭಾವನೆಗಳು, ಉದ್ಯೋಗದಲ್ಲಿ, ಅತೃಪ್ತಿ, ದಾವೆಗಳ ಸಮಸ್ಯೆ, ಜ್ಞಾನ ಮತ್ತು ಕೌಶಲ್ಯ ಏಕಾಕಿತನ, ಹಣ ಹಾಗೂ ಭೋಗ ವಸ್ತುಗಳ ಆಸೆ ನಕಾರಾತ್ಮಕ ಧೋರಣೆ, ಮಾನ್ಯತೆ ಇರದಿರುವಿಕೆ, ಗುಣಮಟ್ಟ, ಪಾತ್ರ ಮತ್ತು ಜವಾಬ್ದಾರಿಗಳು, ಲೈಂಗಿಕತೆ ಅತೃಪ್ತಿ, ಆಘಾತಗಳು, ಕೆಟ್ಟ ಚಟಗಳು ಹಾಗೂ ಚಿಂತೆ ಹೇಗೆ ನಮ್ಮನ್ನು ಕಾಡುತ್ತವೆಂದು ಮನದಟ್ಟಾಗುತ್ತದೆ.

ಅನಂತರ ಮಾನಸಿಕ ಅನಾರೋಗ್ಯದ ಲಕ್ಷಣಗಳು ಮಾನಸಿಕ ರೋಗಗಳ ವಿಧಗಳು, ಮಾನಸಿಕ ಆರೋಗ್ಯ ವರ್ಧನೆಗೆ ೧೨ ಸೂತ್ರಗಳು ತೆರೆದುಕೊಳ್ಳುತ್ತವೆ.

ಶಾಲೆಗೆ ಹೋಗುವ ಮಕ್ಕಳ ಮಾನಸಿಕ ಸಮಸ್ಯೆಗಳ ತರುವಾಯ ಮಹಿಳೆಯರ ಮಾನಸಿಕ ಸಮಸ್ಯೆಗಳನ್ನು ಮತ್ತು ಮುಂಜಾಗ್ರತೆ ಕ್ರಮಗಳನ್ನು ತಿಳಿಸುವುದರೊಂದಿಗೆ ಓದುಗರಲ್ಲಿ ಅಚ್ಚಳಿಯದ ಛಾಪು ಒತ್ತಿ, ವಿನಯದಿಂದ ಮುಗಿಯುತ್ತದೆ.

ಮಕ್ಕಳಷ್ಟೇ ಅಲ್ಲದೆ ಎಲ್ಲ ವಯೋಮಾನದವರೂ ಮತ್ತೆ ಮತ್ತೆ ಓದಿ, ಮನನ ಮಾಡುತ್ತಾ, ಉತ್ತಮವಾಗಿ ಜೀವಿಸಲು ದಾರಿದೀಪವಾಗಿದೆ ಈ ಪುಸ್ತಕ.

* * *