ಚಂದ್ರಶೇಖರ್‌ ಅವರು ಬರೆದ ಹಲವು ಪುಸ್ತಕಗಳಲ್ಲಿ ನಾಲ್ಕು ಪುಸ್ತಕಗಳನ್ನು ನಾನು ಓದಿದ್ದೇನೆ. ಅದರಲ್ಲಿ ನನಗೆ ಖುಷಿ ಕೊಟ್ಟದ್ದು ‘ಹಿತ-ಅಹಿತ’. ಡಾ| ಸಿ.ಆರ್.ಸಿಯವರ ವೃತ್ತಿ ಜೀವನದಲ್ಲಿ ಕಂಡ ಅನುಭವಿಸಿದ ಅನೇಕ ಹಿತ-ಅಹಿತ ಕ್ಷಣಗಳನ್ನು ಪುಸ್ತಕರೂಪದಲ್ಲಿ (ಬರಹದ) ಓದುಗರಿಗೆ ಉಣಬಡಿಸಿದ ರೀತಿ ಊಟದ ಜೊತೆಗಿನ ಉಪ್ಪಿನಕಾಯಿಯಂತೆ ಓದಲು ಹಿತವೆನಿಸಿದೆ.

’ಹಿತ-ಅಹಿತ’ ಪುಸ್ತಕ ನನಗೆ ಹಿತವೆನಿಸಲು ಕಾರಣಗಳು ಎರಡು. ಮನುಷ್ಯನಿಗೆ ಬರಬಹುದಾದ ಹಲವು ವಿಧದ ಮಾನಸಿಕ ಕಾಯಿಲೆಗಳ ಬಗ್ಗೆ ಪ್ರಥಮ ಮಾಹಿತಿ ಅದರಲ್ಲಿದೆ. ಲೇಖಕರು ತಾವು ರೋಗಿಗಳಿಗೆ ನೀಡಿದ ಚಿಕಿತ್ಸೆ, ಅನುಭವಕ್ಕೆ ಬಂದ ಘಟನೆಗಳನ್ನು ವಿವರಿಸುತ್ತಾ ಹಲವು ಮಾನಸಿಕ ರೋಗಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಿಆರ್‌ಸಿಯವರು ಸಹೋದ್ಯೋಗಿಗಳ ಜೊತೆಗೆ ಹಳ್ಳಿಗಳಿಗೆ ಹೋಗಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಬಡಬಗ್ಗರಿಗೆ ಚಿಕಿತ್ಸೆ ನೀಡದ ಘಟನೆಗಳನ್ನು ಓದುತ್ತಿದ್ದರೆ ವೈದ್ಯರಾಗಿ ತಮ್ಮ ವೃತ್ತಿಗೆ ನ್ಯಾಯ ಒದಗಿಸಿದ್ದಾರೆ ಎನಿಸುತ್ತದೆ. ಜೊತೆಗೆ ಹಳ್ಳಿ ಜನರ ಸ್ಥಿತಿಗತಿ ಬಗ್ಗೆ ಮನಸ್ಸಿಗೆ ಖೇವೆನಿಸುತ್ತದೆ. ಈ ಪರಿಸ್ಥಿತಿ ಇಂದಿಗೂ ಹಲವು ಹಳ್ಳಿಗಳಲ್ಲಿ ಹಾಗೆಯೇ ಉಳಿದಿದೆ.

ಹೀಗೆ ಹೇಳುವಾಗ ನಮ್ಮೂರಿನಲ್ಲಿ ನಡೆದ ಘಟನೆಯೊಂದು ನೆನಪಿಗೆ ಬರುತ್ತದೆ. ಭೂತ, ಪ್ರೇತ, ದೆವ್ವಗಳನ್ನು ನಂಬುವ ದಕ್ಷಿಣ ಕನ್ನಡ ಜಿಲ್ಲೆಯ ನಮ್ಮೂರಿನಲ್ಲಿ ಯುವತಿಯೊಬ್ಬಳಿಗೆ ಮೈ ಮೇಲೆ ದೆವ್ವ ಬರುತ್ತದೆಯೆಂದು ಆಕೆಯ ಮನೆಯವರು ನಂಬಿದ್ದರು. ಡಾ| ಸಿ.ಆರ್.ಸಿ.ಯವರು ಹೇಳುವಂತೆ ಅದು ಯಾವುದೋ ಮಾನಸಿಕ ಕಾಯಿಲೆಯಾಗಿರಬಹುದು. ಮನೆಯವರು ಚಿಕಿತ್ಸೆ ನೀಡದೆ ಆಕೆ ಸಾವನ್ನಪ್ಪಿದ್ದು ಈಗಲೂ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದಿದೆ.

ಇನ್ನೊಂದು ಲೇಖಕರ ಬರಹದಲ್ಲಿ ಕಂಡುಬಂದ ಅತ್ಯಾಶ್ಚರ‍್ಯ. ಸಂದೇಹ, ಪರಿಹಾರಗಳನ್ನು ಕೇಳಿ ಅವರ ಬಳಿ ಬರುತ್ತಿದ್ದ ರೋಗಿಗಳು ಮತ್ತು ನಂಬಲಸಾಧ್ಯವಾದ ಪತ್ರಗಳು, ಲೇಖಕರು ಅದನ್ನು ಬರೆದ ರೀತಿ ಸೊಗಸಾಗಿದೆ. ನಮ್ಮ ಸಮಾಜದಲ್ಲಿ ಇಂಥವರೂ ಇದ್ದಾರೆಯೇ ಎಂದು ಆಶ್ಚರ್ಯವಾಯಿತು!

ಲೈಂಗಿಕತೆ, ಲೈಂಗಿಕ ಶಿಕ್ಷಣದ ಬಗ್ಗೆ ಜನರಲ್ಲಿ ಇನ್ನಷ್ಟು ಅರಿವು ಮೂಡಬೇಕು.

ಇಡೀ ಕೃತಿಯನ್ನು ಓದಿದಾಗ ನನಗನಿಸಿದ್ದು ಇಷ್ಟು. ಹಳ್ಳಿಗಳಲ್ಲಿ ಹೇಗೆ ಆರೋಗ್ಯ ಕೇಂದ್ರಗಳು ವೈದ್ಯರ ಅವಶ್ಯಕತೆಯಿದೆಯೋ ಮನೋವೈದ್ಯರ ಸೌಲಭ್ಯವೂ ಅಗತ್ಯವಾಗಿದೆ. ಆಪ್ತಸಲಹಾ ಕೇಂದ್ರಗಳು ಜಿಲ್ಲಾ ಕೇಂದ್ರಗಳು ಹಾಗೂ ನಗರಗಳಿಗೆ ಮಾತ್ರ ಸೀಮಿತವಾಗಿರದೆ ಗ್ರಾಮ ಪಂಚಾಯಿತಿ ಮಟ್ಟದಿಂದ ಬೆಳೆಯಬೇಕು. ಈ ದಿಸೆಯಲ್ಲಿ ಮನೋವೈದ್ಯರು ಸರ್ಕಾರ ಕೆಲಸ ಮಾಡಬೇಕು. ನಿಮ್ಹಾನ್ಸ್ ಸಂಸ್ಥೆಯ ಮೂಲಕ ಡಾ.ಸಿ.ಆರ್.ಸಿಯವರು ಈ ನಿಟ್ಟಿನಲ್ಲಿ ಇನ್ನಷ್ಟು ಕೆಲಸ ಮಾಡಬೇಕೆಂದು ಆಶಿಸುತ್ತೇನೆ.

* * *