ಮಹಿಳೆಯರ ಮಾನಸಿಕ ಸಮಸ್ಯೆಗಳನ್ನು ಅತ್ಯಂತ ವ್ಯವಸ್ಥಿತವಾಗಿ, ಅರ್ಥಪೂರ್ಣವಾಗಿ ಬಿಡಿಸಿಡುವ ಕೃತಿ: ಮಹಿಳೆಯರ ಮಾನಸಿಕ ಅಸ್ವಸ್ಥತೆಗಳು. ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಡುವ ಸಂದರ್ಭಗಳಲ್ಲಿ, ಬೆಚ್ಚಿ ಬೀಳಿಸುವ ಸತ್ಯ ಸಂಗತಿಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ. ನೂರಾರು ಜನರ ಅಹವಾಲುಗಳ ಮಧ್ಯೆ ಮಾನವೀಯತೆ, ದೌರ್ಬಲ್ಯ, ವಿಶಾಲ ಹೃದಯಗಳ ಪರಿಚಯಗಳು ಪ್ರತಿಪುಟದಲ್ಲೂ ಪ್ರತ್ಯಕ್ಷವಾಗುತ್ತಲೆ ಹೋಗುವುದು ಈ ಕೃತಿಯ ಹೆಚ್ಚು ಗಾರಿಕೆ.

ಸಿಆರ್‌ಸಿ ಯಾವುದೇ ಹಂತದಲ್ಲೂ ಪಾಂಡಿತ್ಯ ಪ್ರದರ್ಶನದ ಆತ್ಮರತಿಗೆ ಬಲಿಯಾಗಿಲ್ಲ. ಬದಲಿಗೆ ಅವರು ಸಮಸ್ಯೆಗಳ, ಅಸ್ವಸ್ಥತೆಗಳ ಆಳ-ಅಗಲಗಳನ್ನು ತಾಳ್ಮೆಯಿಂದ ಪರಿಶೀಲಿಸಿ ಅವುಗಳಿಗೆ ಸೂಕ್ತ ಪರಿಹಾರ ಒದಗಿಸುವ ಸರಳ ಬರವಣಿಗೆ ತುಂಬಾ ಆತ್ಮೀಯವಾಗುತ್ತದೆ. ಎಷ್ಟೋ ವೇಳೆ ಆದ ಸೋಲುಗಳನ್ನು ಮಾನವೀಯತೆಯ ನೆಲೆಗಳಲ್ಲಿ ವಿಶ್ಲೇಷಿಸಿ, ಮರುಕ ವ್ಯಕ್ತಪಡಿಸಿರುವುದರಲ್ಲಿ ಸಿಆರ್‌‌ಸಿಯವರ ಸಹೃದಯತೆಯ ಛಾಪು ಇದೆ (ಉದಾ: ಕೃಷ್ಣವೇಣಿ, ಮುನಿಯಮ್ಮ, ಲಲಿತಮ್ಮ, ಇತ್ಯಾದಿ)

ತಮ್ಮ ಚಿಕಿತ್ಸೆ ಸಫಲವಾದಾಗ ಬಡಾಯಿ ಕೊಚ್ಚಿಕೊಳ್ಳದೇ ಅತ್ಯಂತ ವಿನಯದಿಂದ ತಿಳಿಸುವ, ವೈಫಲ್ಯಗಳನ್ನು ನೇರವಾಗಿ ಸ್ವೀಕರಿಸುವ ಸಿಆರ್‌ಸಿಯವರ ಪರಿಪೂರ್ಣ ವ್ಯಕ್ತಿತ್ವ ಈ ಕೃತಿಯಲ್ಲಿ ಪರೋಕ್ಷವಾಗಿ ಹರಡಿಕೊಂಡು ಬಿಟ್ಟಿದೆ. ಅಲ್ಲದೆ ಸಿಆರ್‌ಸಿಯವರಿಗೆ ಸಿದ್ಧಿಸಿರುವ ಬರಹದ ಶೈಲಿಯಂತೂ ಹೊಸರೀತಿಯದು. ಅತ್ಯಂತ ಸರಳವಾಕ್ಯಗಳಲ್ಲಿ ಗಹನ ವಿಚಾರಗಳನ್ನು ಬುದ್ಧಿಗೆ, ಮನಸ್ಸಿಗೆ ತಲುಪಿಸುವ ಅವರ ಸಾಮರ್ಥ್ಯ ಅವರ ಶ್ರದ್ಧೆ ಮತ್ತು ಅಧ್ಯಯನಗಳು ಇತರರಿಗೊಂದು ಗಟ್ಟಿ ಮಾದರಿ.

ತುಂಬಾ ಅಚ್ಚುಕಟ್ಟಾದ ಮುದ್ರಣ, ಕನಿಷ್ಠ ಮುದ್ರಣದೋಷಗಳು ಈ ಪುಟ್ಟ ಕೃತಿಯ ಹೆಗ್ಗಳಿಕೆ (೮೮ ಪುಟಗಳು) ರೋಗ ರುಜಿನ ಅಸ್ವಸ್ಥತೆಗಳ ತಲಸ್ಪರ್ಶೀ ಅಧ್ಯಯನದ ಸರಳ ಅಭಿವ್ಯಕ್ತಿಯ ಈ ಕೃತಿಯ ಮುಖಬೆಲೆಯಂತೂ ದುಬಾರಿಯಲ್ಲವೇ ಅಲ್ಲ (ಕೇವಲ ೩೦ ರೂ) ಪ್ರತಿಮನೆ ಇಂಥ ಕೃತಿಯನ್ನು ಬೇಡುತ್ತದೆ. ಇಂಥದೊಂದು ಕೃತಿಯಿದ್ದರೆ ಮಹಿಳೆಯರ ಮಾನಸಿಕ ಅಸ್ವಸ್ಥತೆಗಳು ಪ್ರತಿ ಶತ ಐವತ್ತರಷ್ಟು ಕಡಿಮೆಯಾಗುವ ಸಾಧ್ಯತೆಗಳು ಬೇಕಾದಷ್ಟಿವೆ.

ಕೃತಿಕಾರ ಡಾ|| ಸಿ.ಆರ್. ಚಂದ್ರಶೇಖರ್‌ ಮತ್ತು ನವಕರ್ನಾಟಕ ಪ್ರಕಾಶನ- ಇವರಿಬ್ಬರನ್ನೂ ಇಂತಹ ಕೃತಿಯನ್ನು ಜನತೆಗೆ ನೀಡಿದಕ್ಕೆ ಅರ್ಭಿನಂದಿಸಲೇಬೇಕು.

* * *