ಸಮಾಜ ಆರೋಗ್ಯಕರವಾಗಿರಬೇಕೆನ್ನುವ ನಿಟ್ಟಿನಲ್ಲಿ ಡಾ| ಸಿ.ಆರ್. ಚಂದ್ರಶೇಖರ್‌ ಇವರು ಬರೀ ಚಿಕಿತ್ಸೆಯ ಮೂಲಕ ಮಾತ್ರವಲ್ಲ, ಸಾಹಿತ್ಯ ಲೋಕದ ಶಕ್ತಿ ಲೇಖನಿಯ ಮೂಲಕವೂ ಕನ್ನಡಿಗರನ್ನು ದಾಟಿ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ, ಮತ್ತೆ ಇಂದಿನ ಕಾಲಮಾನಕ್ಕೆ ಅತ್ಯವಶ್ಯ ಕೂಡ. ಇಡೀ ವಿಶ್ವವೇ ನಮ್ಮ ಮುಷ್ಠಿಯಲ್ಲಿರುವಷ್ಟು ಹತ್ತಿರ ಎಂದು ನಾವು ಒಂದೆಡೆ ಬೀಗಿದರೆ, ಅದೇ ಹತ್ತಿರವೇ ನಮಗೆ ತಂದೊಡ್ಡಿರುವ ಸಮಸ್ಯೆ ಸವಾಲುಗಳು ಆತಂಕದ ಸರಮಾಲೆಯನ್ನೇ ಸೃಷ್ಟಿಸಿರುವುದು, ಮತ್ತೊಂದೆಡೆಗಿನ ಶೋಚನೀಯ ವಿಚಾರ. ಆಗಾಧ ಬೆಳವಣಿಗೆ, ಅಭಿವೃದ್ಧಿಯೆಂಬ ಅರಳಿದ ಹೂವಿನೊಂದಿಗೆ, ಒತ್ತಡ, ಆತಂಕವೆಂಬ ಮುಳ್ಳೂ ಜೊತೆಗೂಡೇ ಬಂದಿರುವುದು ಸತ್ಯವೂ ಹೌದು. ಎದುರಿಸಲು ಮನುಕುಲ ಹೆಣಗುತ್ತಿರುವುದೂ ಹೌದು. ದೈಹಿಕ ಭೋಗಭಾಗ್ಯಗಳಿಗೆ ಒತ್ತು ಕೊಟ್ಟು ನಡೆವ ಜೀವಗಳು ಮನಸ್ಸಿನ ಮೇಲೆ ಅತಿ ಒತ್ತಡ ಹೇರಿಕೊಳ್ಳುತ್ತ, ಪ್ರಾಕೃತಿಕ ಅಸಮತೋಲನದಲ್ಲಿ ನರಳುತ್ತ ಇಂದು ಇಡೀ ಸಮಾಜವೇ ರೋಗಗ್ರಸ್ತವಾಗುತ್ತಿರುವುದು ಸಂತಸದ ವಿಷಯವಲ್ಲ. ‘ಮನಸ್ಸೇ ಕುಶಲವೇ’ ಎಂದು ನಮ್ಮೊಳಗೆ ಇರುವ, ನಮ್ಮ ಕೈಹಿಡಿದು ನೇರಮಾರ್ಗದಲ್ಲಿ ನಡೆಸುವ ಈ ಅಂತರಾತ್ಮನನ್ನು ಆಗಾಗ ವಿಚಾರಿಸಿಕೊಳ್ಳಲು ನಮಗೆ ಬಿಡುವೇ ಇಲ್ಲ. ಅಷ್ಟು ಧಾವಂತಹದ ಬದುಕು. ಆದರೆ, ಅದಾದರು ಎಷ್ಟು ದುಡಿದೀತು? ನಮ್ಮ ನಿರ್ಲಕ್ಷ್ಯತೆಯನ್ನು ಸಹಿಸೀತು?

ಹೌದು, ಮೇಲಿನ ಶೀರ್ಷಿಕೆ ಹೊತ್ತ ಈ ಪುಸ್ತಕ ನನಗೆ ಬಹಳ ಇಷ್ಟವಾಯಿತು. ಇದೊಂದು ಲೇಖನಗಳ ಸರಮಾಲೆ. ಇದರಲ್ಲಿ ಏನುಂಟು? ಏನಿಲ್ಲ? ಮಾನವ ಪ್ರಯಣದ ಆದಿಯಿಂದ ಅಂತ್ಯದವರೆಗೆ ಇರುವ ಸಕಲ ಜೀವನ ಘಟ್ಟಗಳಲ್ಲಿ, ಎಲ್ಲ ತೆರನಾದ ವ್ಯಕ್ತಿಗಳು ಎದುರಿಸಬಹುದಾದ ದೈನಂದಿನ ಮಾನಸಿಕ ಕ್ಲೇಶಗಳು, ಅದರ ವಿವರಣೆ, ಇರುವ ಚಿಕಿತ್ಸೆ ಪರಿಹಾರೋಪಾಯಗಳು ಪದರ ಪದರವಾಗಿ ಸವಿಸ್ತಾರವಾಗಿ ನಿರೂಪಿತವಾಗಿವೆ. ನನ್ನ ಪ್ರಕಾರ ಇದೊಂದು ಮಾನಸಿಕ ಆರೋಗ್ಯದ ವಿಶ್ವಕೋಶ, ಮಾನಸಿಕ ತೊಂದರೆಗಳು ಹಿಂದೆಯೂ ಇದ್ದರೂ ಇಂದಿನಷ್ಟು ಭೂತಾಕಾರವಾಗಿರಲಿಲ್ಲ. ಸರಳ ಬದುಕಿನಲ್ಲಿ, ಕೂಡು ಕುಟುಂಬಗಳಲ್ಲಿ, ಸ್ವಾರ್ಥ ಆಸೆ ಅತಿಯಾಗಿ ಕಾಡದ ಕಾಲದಲ್ಲ, ನೇತ್ಯಾತ್ಮಕ ವಿಚಾರಗಳು ಅಷ್ಟಾಗಿ ಕಾಡದೆ, ಒಂದೇ ತೆರನಾಗಿ ಬದುಕು ಸಾಗುತ್ತಿತ್ತು. ಆದರೆ ಅತಿವೇಗದಲ್ಲಿ ಬದಲಾದ ಈ ದಿನಗಳಲ್ಲಿ ಬದಲಾದ ಜೀವನಶೈಲಿಯಲ್ಲಿ ಸರಳಬದುಕು ಯಾರಿಗೂ ಬೇಡದ ವಸ್ತುವಾಗಿ ಈಗ ‘ಮನಸ್ಸಿಗೊಂದು ಆಳವಾದ ಆರೋಗ್ಯಚಿಂತನೆ’ ಬೇಕೆನ್ನುವ ಅನಿವಾರ್ಯ ಮಟ್ಟ ಎದುರಾಗಿದೆ. ದೇಹ, ಮನಸ್ಸನ್ನು ಹಿಡಿದು ಸುತ್ತಿರುವ ಈ ಒತ್ತಡಗಳೆಂಬ ತೊಡರು ಬಳ್ಳಿಗಳು ಬದುಕಿನ ಪಯಣದ ಹಾದಿಯನ್ನು ಹೇಗೆ ಅಡ್ಡಗಾಲು ಹಾಕಿಕಾಡುತ್ತಿವೆ ಎಂಬುದಕ್ಕೆ ಈ ಪುಸ್ತಕದಲ್ಲಿ ಕಂಡುಬರುವ ನಾನಾ ರೀತಿಯ ಮನೋರೋಗಗಳ ವರ್ಣನೆಗಳೇ ಸಾಕ್ಷಿ. ಮಾನವ ಮನೋವ್ಯಾಪಾರದ ಒಂದೊಂದು ಹೆಜ್ಜೆಯ ಪರಿಚಯವೂ ಅತಿಸಾಮಾನ್ಯ ಜ್ಞಾನವಿರುವ ವ್ಯಕ್ತಿಯೂ ಸುಲಲಿತವಾಗಿ ಅರ್ಥ ಮಾಡಿಕೊಳ್ಳಬಲ್ಲ.

ಹಿಂದೆಲ್ಲ ಮನೋವೈದ್ಯರ ಬಳಿ ಹೋಗುವುದೆಂದರೆ ಸಂಪೂರ್ಣ ಹುಚ್ಚು ಎನ್ನುವ ವಿಪರೀತದ ಕಾಯಿಲೆ ಇದ್ದಾಗ ಮಾತ್ರ. ಅದುಬಿಟ್ಟು ಬೇರೆ ಮಾನಸಿಕ ಸಣ್ಣಪುಟ್ಟ ಸಮಸ್ಯೆಗಳಿರಬಹುದು ಎನ್ನುವಷ್ಟು ತಿಳಿವಳಿಕೆ ಸಮಾಜದ ಸ್ತರದಲ್ಲಿ ಇರಲಿಲ್ಲ. ಕಾರಣ ಈ ಸಮಸ್ಯೆ ಹೆಚ್ಚೂ ಇರಲಿಲ್ಲವಲ್ಲ. ಆದರಿಂದ ವಿಜ್ಞಾನ ತ್ವರಿತಗತಿಯ ಬೆಳವಣಿಗೆ ಕಂಡಿದೆ. ದೇಹಕ್ಕಾದಂತೆ ಮನಸ್ಸಿಗೂ ನೂರೆಂಟು ಜಾಡ್ಯಗಳು ಅಂಟುತ್ತವೆ, ಇವು ಹಿಂದೆಲ್ಲ ತಿಳಿದಂತೆ ದೆವ್ವಭೂತ ಕಾಟವಲ್ಲ, ಪುನರ್ಜನ್ಮದ ವೇಷವಲ್ಲ ನಿಶ್ಚಿತವಾಗಿ ಮನೋವಿಕಾರಗಳೇ ಎಂಬುದನ್ನು ಸಾಧಾರವಾಗಿ ಇಲ್ಲಿ ನಿರೂಪಿಸಿರುವುದಲ್ಲದೇ ಇವುಗಳ ಪರಿಹಾರ, ಚಿಕಿತ್ಸೆ ಹೇಗೆ ಸಾಧ್ಯ ಎಂಬುದನ್ನು ಲೇಖನಿಸಿದ್ದಾರೆ.

ಇಲ್ಲಿ ಎಷ್ಟ ವರ್ಗದ ವ್ಯಕ್ತಿಗಳ ಸಮಸ್ಯೆಗಳು ಚಿತ್ರಿತವಾಗಿವೆ ನೋಡಿ, ಉದ್ಯೋಗಸ್ಥ ಮಹಿಳೆಯರು, ಬುದ್ಧಿಮಾಂದ್ಯ ಮಕ್ಕಳು, ಓದುವ ಮಕ್ಕಳ ಸಮಸ್ಯೆ, ದಾಂಪತ್ಯ ಸಮಸ್ಯೆ, ಕೌಟುಂಬಿಕ ನೆಮ್ಮದಿ, ಏಡ್ಸ್‌ಗೆ ಸಂಬಂಧಿಸಿದ ಮನೋರೋಗ, ಕನಸುಗಳು, ಭಾವನೆಗಳು ಎಷ್ಟು ತೆರನಾಗಿ ಮನುಷ್ಯನನ್ನು ಕಾಡಿ ಕೊಲ್ಲುತ್ತಿವೆ ಎನ್ನುವ ವಾಸ್ತವಾಂಶ ಬಿಚ್ಚಿಕೊಂಡಿದೆ. ಒಂದೂಕಾಲು ಕೆ.ಜಿ. ತೂಗುವ ಈ ಮಿದುಳೆಂಬ ದೈವದತ್ತ ಯಂತ್ರ ಹತ್ತಾರು, ನೂರಾರು ಕೆ.ಜಿ. ತೂಗುವ ದೇಹವೆಂಬ ಯಂತ್ರವನ್ನು ಹೇಗೆ ಕಾಪಾಡುತ್ತದೆ ಅಥವಾ ಕಾಡುತ್ತದೆ ಎಂಬುದೆಲ್ಲ ಓದಿದಾಗ ಅಚ್ಚರಿಯಾಗದಿರದು. ದೇಹವಿಲ್ಲದೇ ಮನಸ್ಸಿಲ್ಲ. ಮನಸ್ಸಿಲ್ಲದೇ ದೇಹವಿಲ್ಲ. ಮನಸ್ಸು, ಮಿದುಳು ಒಂದೇ. ಆದ್ದರಿಂದ ಮಿದುಳಿನ ರೋಗಗಳ ಕಳೆದು ಮನಸ್ಸನ್ನು ಸುಸ್ಥಿತಿಯಲ್ಲಿಟ್ಟುಕೊಂಡು ದೇಹದ ಮೂಲಕ ಸಾರ್ಥಕ ಜನ್ಮವನ್ನು ಕಳೆಯಲು ಸೃಜನಶೀಲ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಿ’ ಎಂದು ಹೇಳುವ ಈ ವೈದ್ಯರ ಕರೆ ಸ್ವಸ್ಥ ಮಾನವ ಸಮಾಜಕ್ಕೆ ದಾರಿ ದೀಪವೇ ಸರಿ.

ಮತ್ತೆ ಈ ಪುಸ್ತಕದ ಮುನ್ನುಡಿಯೇ ಅದೆಷ್ಟು ಸೊಗಸಾಗಿದೆ. ಮನಸ್ಸಿನ ಜೊತೆ ಎಂಥ ಆಹ್ಲಾದಕರ ಸಂಭಾಷಣೆ. “ನೀನು ಮುನಿದರೆ ನಮ್ಮ ಗತಿ ಏನು? ನೀ ಸ್ವಾಸ್ಥ್ಯದಿಂದಿರಲು ನಾವೇನು ಮಾಡಬೇಕು” ಎಂದು ಪ್ರಶ್ನೆ ಕೇಳುತ್ತಾ, ಬದುಕಿನಲ್ಲಿ ಅವಳಡಿಸಿಕೊಳ್ಳಬೇಕಾದ ಸ್ವಾಸ್ಥ್ಯ ಸಾರವನ್ನೆಲ್ಲಾ ಭಟ್ಟಿ ಇಳಿಸಿ ನಾಲ್ಕಾರು ವಾಕ್ಯದಲ್ಲಿ ಮನಕ್ಕೆ ನಾಟುವಂತೆ ಉದ್ಧರಿಸಿದ್ದಾರೆ. ಹೌದು, ಸಾಹಿತ್ಯ, ಸಂಗೀತ ಮನಸಿನ ಖುಷಿ, ಯೋಗಧ್ಯಾನಗಳೇ ಶಾಂತಿ ಮಂತ್ರ, ಪ್ರೀತಿ-ವಿಶ್ವಾಸಕ್ಕೆ ಅರಳುವ ಹೂವು, ಮತ್ಸರ ದ್ವೇಷಕ್ಕೆ ಮುದುಡುವ ತಾವರೆ, ಸ್ವಾರ್ಥಕ್ಕೆ ಇಳಿಮುಖ, ನಿಸ್ವಾರ್ಥಕ್ಕೆ ಊರ್ಧ್ವಗಮನ, ಇಷ್ಟು ಸರಳದಿಂದ ಆದರೂ ಸಂಕೀರ್ಣತೆಯೆಡೆಗೆ ಸಾಗುತ್ತಿರುವ ಈ ಮನಸ್ಸೆಂಬ ಚೇತನವನ್ನು ಇಂಥ ಒಬ್ಬ ದಕ್ಷ ವೈದ್ಯರ ಹಾಗೂ ಉತ್ತಮ ವೈದ್ಯಸಾಹಿತಿಯ ಮಾರ್ಗದರ್ಶನದಲ್ಲಿ ವಿವೇಕದ ಹಾದಿಯಲ್ಲಿ ನಡೆಸಿಕೊಂಡು ಹೋದರೆ ಸ್ವಸ್ಥ್ಯ ಸಮಾಜ ಕನಸಾಗಿ ಉಳಿಯಲಾರದು. ಈ ನಿಟ್ಟಿನಲ್ಲಿ ಎಲ್ಲರ ಒಳಿತಿಗಾಗಿ, ಈ ಪುಸ್ತಕ ಪ್ರತಿ ಮನೆಯ ಗ್ರಂಥಾಲಯದ ಅಗತ್ಯ ಪರಿಕರ ಎಂದೇ ನನ್ನ ಭಾವನೆ.

ಇಂಥ ಸಮಾಜಮುಖಿ ವೈದ್ಯರ ಸಂತತಿ ಸಾವಿರವಾಗಲಿ, ಈ ವೈದ್ಯರು ನಮ್ಮ ಸಮಾಜಕ್ಕೆ ಇನ್ನೂ ಹೆಚ್ಚೆಚ್ಚು ಸೇವೆ ಸಲ್ಲಿಸುವಂತಾಗಲಿ, ಇವರ ಇಲ್ಲಿಯವರೆಗಿನ ಸಾಧನೆಗೆ ನನ್ನ ಅಭಿನಂದನೆಗಳನ್ನು ಈ ಮೂಲಕ ಸಲ್ಲಿಸುತ್ತಿದ್ದೇನೆ.

* * *