ನಿರಾಸೆ, ಸಾವು, ನೋವು, ಅಪಘಾತ, ದುರಂತಗಳು, ಅಂಗವೈಕಲ್ಯ, ಮಾನಸಿಕ ಕಾಯಿಲೆ ಮತ್ತು ಆತ್ಮಹತ್ಯೆಗಳು, ಅಸಹಜ ಲೈಂಗಿಕತೆ ಮತ್ತು ಮಕ್ಕಳಲ್ಲಿ ಲೈಂಗಿಕ ಶಿಕ್ಷಣ ಇವೆಲ್ಲ ವಿಷಯಗಳು ನಮ್ಮ ಸಮಾಜದಲ್ಲಿ ನಮ್ಮ ದಿನನಿತ್ಯದ ಬದುಕಿನಲ್ಲಿ ಹಾಸು ಹೊಕ್ಕಾಗಿವೆ. ಈ ಮೇಲಿನ ಎಲ್ಲ ವಿಷಯಗಳ ಬಗ್ಗೆ ತಿಳಿಸುವಲ್ಲಿ ಡಾ| ಸಿ.ಆರ್.ಸಿ. ಅವರ ಪುಸ್ತಕ ಯಶಸ್ವಿಯಾಗಿದೆ.

ಈ ಪುಸ್ತಕದ ಮುಖೇನ ವೈದ್ಯರು ಸಮಾಜದ ನಾನಾಸ್ತರದ ಜನರ ಸಮಸ್ಯೆಗಳನ್ನು ಉದಾಹರಣೆಗಳೊಂದಿಗೆ ಸಾಮಾನ್ಯ ಜನರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ ವಿವರಿಸಿ ಅದಕ್ಕೆ ಪರಿಹಾರ ಸೂಚಿಸಿರುತ್ತಾರೆ.

ಇತ್ತೀಚಿನ ಆಧುನಿಕ ಜೀವನ ಶೈಲಿಯಿಂದ ದುಃಖ, ನೋವು, ನಿರಾಸೆ, ಇನ್ನೂ ಅನೇಕ ಸಮಸ್ಯೆಗಳು ನಮ್ಮನ್ನು ಆವರಿಸಿಕೊಂಡಿವೆ. ಉದಾಹರಣೆಗೆ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ, ಗುರಿಸಾಧನೆಯಲ್ಲಿ ಸೋತಾಗ, ಆಸೆ ಪಟ್ಟಿದ್ದು ಸಿಗದಿದ್ದಾಗ ಅನಾರೋಗ್ಯದಿಂದ ಬಳಲಿದಾಗ, ಸಾವು ಬಂದೆರಗಿದಾಗ, ಏನು ಮಾಡಬೇಕು ಯಾರ ಸಹಾಯ ಪಡೆಯಬೇಕು. ಹೇಗೆ ನಿಭಾಯಿಸಬೇಕು, ಜೀವನ ಶೈಲಿ, ಶಕ್ತಿ-ಕೌಶಲ್ಯಗಳನ್ನು ಹೇಗೆ ಹೆಚ್ಚಿಸಿಕೊಳ್ಳಬೇಕೆಂಬುದರ ಬಗ್ಗೆ ಈ ಪುಸ್ತಕವು ಪ್ರಖರ ಬೆಳಕನ್ನು ಚೆಲ್ಲುತ್ತದೆ.

ಜೊತೆಗೆ ಇಂದಿನ ಐಷಾರಾಮಿ ಜೀವನದಿಂದ ಸಾಲಗಾರರಾಗಿರುವರಿಗೆ ಹಣಕಾಸಿನ ನಿರ್ವಹಣೆಯನ್ನು ವ್ಯವಸ್ಥಿತವಾಗಿ ತಿಳಿಸುತ್ತದೆ, ಸಂಬಂಧಗಳು ಹಳಸುತ್ತಿರುವ ಈ ದಿನಗಳಲ್ಲಿ ಅವುಗಳ ಪುನಃಶ್ಚೇತನ ಬಗ್ಗೆಯೂ ತಿಳಿವಳಿಕೆ ನೀಡುತ್ತದೆ.  ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ಆದರೆ ಅವರ ಅಸಂಬದ್ಧ ನಡವಳಿಕೆಗಳಿಗೆ ಕಾರಣ ಮತ್ತು ಪರಿಹಾರವನ್ನು ಇಲ್ಲಿ ಕಾಣಬಹುದು.

ನಾವು ಉದಾಸೀನ ಮಾಡುವ ಸಣ್ಣ ಸಣ್ಣ ವಿಷಯಗಳನ್ನು ಡಾ| ಸಿ.ಆರ್.ಸಿ.ರವರ ಪುಸ್ತಕದಲ್ಲಿ ಗಂಭೀರವಾಗಿ ಪರಿಗಣಿಸಿ ಅಂತಹ ಸಮಸ್ಯೆಗಳನ್ನು ಒಂದು ಕಡೆ ಒಟ್ಟು ಮಾಡಿ ಸರಿತಪ್ಪುಗಳನ್ನು ನಿಖರವಾಗಿ ತಿಳಿಸಿದ್ದಾರೆ.

ಮಕ್ಕಳು, ಹಿರಿಯರ ಮಾತನ್ನು ಕೇಳದಿರುವುದು, ಮಕ್ಕಳ ಭಾವನಾತ್ಮಕ ಸಂಬಂಧ ಅವರ ಲೈಂಗಿಕ ಶಿಕ್ಷಣ, ಸೋಶಿಯಲ್ ಡಿಸ್‌ಲೆಕ್ಸಿಯಾ ಅಟೆನ್ಶನ್ ಡೆಫಿಸಿಟ್ ಮತ್ತು ಹೈಪರ್ ಕ್ಯೆನೆಟಿಕ್ ಡಿಸಾರ್ಡರ್ ಮತ್ತು ಮಕ್ಕಳ ಮೆದುಳಿನ ಸಾಮರ್ಥ್ಯಗಳ ಬಗ್ಗೆ ಇನ್ನೂ ಹಲವು ವಿಷಯಗಳ ಬಗ್ಗೆ ವೈದ್ಯರು ಈ ಪುಸ್ತಕದಲ್ಲಿ ಬರೆದಿದ್ದಾರೆ. ಈ ಪುಸ್ತಕ ಮನೆಯ ಕೈಪಿಡಿ ಎಂದರೆ ತಪ್ಪಾಗಲಾರದು.

ಸಮಾಧಾನ

ಸಮಾಧಾನದ ನೇತಾರ ಚಂದ್ರಶೇಖರ
ಇವರು ನಿರ್ಮಲ ನಿರಾಡಂಬರ
ಪ್ರಕ್ಷುಬ್ಧಗೊಂಡವರಿಗೆ ಆಹ್ಲಾದಕರ
ಇನ್ನಾದರೂ ದೂರವಾಗಲಿ ಎಲ್ಲರ ಬೇಸರ

ಸಮಾಧಾನದ ತಾಣ ಪ್ರಶಾಂತ
ಸಮಾಧಾನದ ಸೇವೆ ಉಚಿತ
ಇಲ್ಲಿ ನಾವು ಕಾಣುವುದಿಲ್ಲ ಪಕ್ಷಪಾತ
ನಿಮ್ಮ ಮಾಹಿತಿಗಳು ಇಲ್ಲಿ ಸುರಕ್ಷಿತ

ನಿಂತ ತಿಳಿ ನೀರಿಗೆ ಕಲ್ಲೆಸೆದರೆ ಬಗ್ಗಡ
ಸುಪ್ತ ಮನಸ್ಸಿಗೆ ನೋವಾದರೆ ಒತ್ತಡ
ರೀತಿ, ನೀತಿ, ತೊಡುಗೆಯಲ್ಲಿರಲಿ ವಿಭಿನ್ನತೆ
ಸೂಕ್ಷ್ಮ ಮನಸ್ಸಿಗೆ ಆಗದಿರಲಿ ಖಿನ್ನತೆ
ಎಲ್ಲೆ ಮೀರಿ ಮನಸ್ಸಿಗೆ ಆದಾಗ ಅಸಮಾಧಾನ
ಇಲ್ಲಿ ಬರಲು ನೀವು ಮಾಡಬೇಡಿ ನಿಧಾನ|

– ಸುಚಿತ್ರಾ ರಮೇಶ್‌

* * *