ಡಾ| ಸಿ.ಆರ್. ಚಂದ್ರಶೇಖರ್‌ರವರು ‘ಹಿತ-ಅಹಿತ’ ಪುಸ್ತಕದಲ್ಲಿ ಅವರ ವೃತ್ತಿ ಜೀವನದ ೨೫ ವರ್ಷಗಳು ಅವರ ಸಾಧನೆಯ ಹಾದಿಯಂತಿದೆ.

’ವೈದ್ಯ ತರಬೇತಿಯ ಅನುಭವಗಳು’ ಬಹಳ ಕುತೂಹಲಕಾರಿಯಾಗಿವೆ. ನಿಮ್ಹಾನ್ಸ್‌ನ ಇತಿಹಾಸ ಕಾರ್ಯ ವೈಖರಿ ೧೫೦ ವರ್ಷಗಳ ಹಿಂದೆಯೇ ಬೆಂಗಳೂರಿನಲ್ಲಿ ಮಾನಸಿಕ ರೋಗಿಗಳಿಗಾಗಿ ಆಸ್ಪತ್ರೆ ತೆರೆಯಲ್ಪಟ್ಟಿದ್ದು ಸೋಜಿಗದ ವಿಷಯ. ಅವರ ಅಚ್ಚುಕಟ್ಟುತನ’ ಅವರು ತಮ್ಮ ಕೀಳರಿಮೆಯನ್ನು ಯಾವುದೇ ಸಂಕೋಚವಿಲ್ಲದೆ ತೆರೆದಿಟ್ಟ ರೀತಿ ಅದನ್ನು ನಿವಾರಿಸಿಕೊಂಡ ಬಗೆ ಎಲ್ಲವೂ ಪಾಠ ಕಲಿಯುವಂತಿದೆ.

ಅವರ ಜೀವನದಲ್ಲಿ ಅವರ ಬಾಳಸಂಗಾತಿ ರಾಜೇಶ್ವರಿಯವರ ಕೊಡುಗೆಯನ್ನು ಉತ್ತಮವಾಗಿ ನಿರೂಪಿಸಿದ್ದಾರೆ.

ರೋಗಿಗಳನ್ನು ಅವರೇ ಹುಡುಕಿಕೊಂಡು ಹೋಗಿ ಚಿಕಿತ್ಸೆ ನೀಡುತ್ತಿದ್ದ ವಿಷಯಗಳ ಕೆಲವು ತಮಾಷೆಯಾಗಿ ಕಂಡರೆ ಕೆಲವು ವಿಸ್ಮಯವನ್ನುಂಟು ಮಾಡುತ್ತವೆ. ಬಾನಾಮತಿ ಬಗ್ಗೆ ಆಗೊಮ್ಮೆ ಈಗೊಮ್ಮೆ ಪತ್ರಿಕೆಗಳಲ್ಲಿ ಓದಿ ಆಶ್ಚರ್ಯಪಡುತ್ತಿದ್ದೆ. ಅದನ್ನವರು ಅಭ್ಯಸಿಸಿದ ರೀತಿ ತುಂಬಾ ಕುತೂಹಲಕಾರಿಯಾಗಿದೆ.

ಅವರ ವಿದೇಶ ಪ್ರವಾಸಗಳೂ ಓದುಗರಿಗೆ ಕುತೂಹಲ ಹಾಗೂ ಮನಸ್ಸಿಗೆ ಮುದವನ್ನುಂಟು ಮಾಡುತ್ತವೆ.

ಯೆಮೆನ್ ದೇಶದ ಬಗೆಗಿನ ವಿವರಗಳು ಚೆನ್ನಾಗಿ ಮೂಡಿಬಂದಿವೆ. ಯೆಮೆನಿಗಳ ಆಚರಣೆ ಆಹಾರ ಪದ್ಧತಿಗಳು ವಿಚಿತ್ರ ರೀತಿಯಲ್ಲಿವೆ. ಸಸ್ಯಾಹಾರಿಯಾದ ಚಂದ್ರಶೇಖರ್‌ರವರು ಅನುಭವಿಸಿದ ತೊಂದರೆಗಳು ಹಾಗೂ ಎಲ್ಲದಕ್ಕೂ ಹೊಂದಿಕೊಂಡ ರೀತಿ ಓದಿ ಸಂತೋಷವಾಯಿತು.

ನೆನಪಿನಲ್ಲಿ ಉಳಿವ ರೋಗಿಗಳ ವಿಷಯ ಓದಿ ದಿಗ್ಭ್ರಮೆಯಾಯಿತು. ಇಂತಹವರೂ ಸಮಾಜದಲ್ಲಿ ಇರುವರೇ ಎಂದು ಆಶ್ಚರ್ಯವಾಯಿತು. (ಲಿಂಗಪರಿವರ್ತನೆಗಾಗಿ ಪರಿತಪಿಸುವವರು) ಬಂಧುವೊಬ್ಬರ ಸೊಸೆಯನ್ನು ಹಿಂಸಿಸಿ ಆಸ್ಪತ್ರೆಗೆ ದಾಖಲು ಮಾಡಿದ ವಿಷಯ ಓದಿ ವ್ಯಥೆಯಾಯಿತು. ನಮ್ಮ ಸಮಾಜ ಹೆಣ್ಣು ಮಕ್ಕಳನ್ನು ನಡೆಸಿಕೊಳ್ಳುವ ರೀತಿ ಮಾನಸಿಕ ಹಿಂಸೆಯನ್ನು ಕೊಡುವ ರೀತಿ ಓದಿ ಆತಂಕವೂ ಆಯಿತು.

ಆಪ್ತ ಸಮಾಲೋಚನೆ ತರಬೇತಿ ಕಾರ್ಯಕ್ರಮಗಳು, ಪತ್ರಗಳ ಮೂಲಕ ಸಲಹೆ ಸಮಾಧಾನ, ಕೆಲವು ಅಸಮಧಾನವನ್ನುಂಟು ಮಾಡುವ ಪತ್ರಗಳು, ರೋಗಿಗಳ ಬೇಡಿಕೆಗಳು ಅವುಗಳಿಗೆ ಸಿ.ಆರ್.ಸಿ.ರವರು ಸ್ಪಂದಿಸಿರುವ ರೀತಿ ಮನಮುಟ್ಟುವಂತಿವೆ. ಸತ್ಯಪತ್ರಗಳು ನಂಬಲು ಕಷ್ಟವಾದರೂ ವಿಸ್ಮಯವನ್ನುಂಟು ಮಾಡುತ್ತವೆ.

ಪತ್ನಿ ರಾಜೇಶ್ವರಿಯವರೊಡನೆ ಯುರೋಪ್ ರಾಷ್ಟ್ರಗಳ ಭೇಟಿ ಅಥೆನ್ಸ್ ಗ್ರೀಸ್, ಜಿನಿವಾ,  ಮ್ಯಾಂಚೆಸ್ಟರ್, ಲಂಡನ್ ಪ್ರವಾಸಗಳನ್ನು ಓದಿ ನಾನೂ ಒಡವೆಗಳನ್ನು ಮಾಡಿಸಿಕೊಳ್ಳುವ ಬದಲು ಈ ರೀತಿಯ ಪ್ರವಾಸ ಮಾಡಿಕೊಂಡು ಬರಬೇಕೆಂದು ನಿರ್ಧರಿಸಿಬಿಟ್ಟೆ. ರಾಜೇಶ್ವರಿಯವರೇ ದಾಖಲಿಸಿರುವ ಕೆಲವು ವಿಷಯಗಳು ತಮಾಷೆಯಾಗಿವೆ.

W.H.O. ಅಧ್ಯಯನದ ಹಾಗೂ ಪ್ರವಾಸ ಕಥನ ಬೇರೆ ಪುಸ್ತಕವಾಗಿ ಬಂದರೆ ಓದುಗರಿಗೆ ಮುದನೀಡುವುದರೊಂದಿಗೆ ಉತ್ತಮ ಮಾರ್ಗದರ್ಶನವೂ ಆಗುತ್ತದೆ. ಅಹಿತ ಅನುಭವಗಳು ಓದುಗರಿಗೆ ಎಚ್ಚರಿಕೆ ಕೊಡುವಂತಿವೆ.

ಸೊಮಾಟೋಫಾರಂ ಡಿಸಾರ್ಡರ್ ಕಾಯಿಲೆಗಳ ಬಗ್ಗೆ ಓದಿ ಕುತೂಹಲವಾಯಿತು. ಸಿ.ಆರ್.ಸಿಯವರು ಬರೆದ ಪುಸ್ತಕಗಳ ಪಟ್ಟಿಯೂ ಈ ಪುಸ್ತಕದಲ್ಲಿ ಇರುವುದರಿಂದ ನಮಗೆ ಬೇಕಾದ ಪುಸ್ತಕಗಳನ್ನು ತಂದು ಓದಿ ನಮ್ಮ ಜ್ಞಾನ ಹಾಗೂ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳಬಹುದು. ಕುತೂಹಲ, ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದು. ಪ್ರಶಸ್ತಿ, ಪುರಸ್ಕಾರ, ಬಹುಮಾನಗಳೂ, ಅವರ ಸಾಧನೆಗೆ ಸಾಮಾಜಿಕ ಸಂಸ್ಥೆಗಳು ಗುರುತಿಸುವುದು ಇವೆಲ್ಲವನ್ನೂ ಓದಿ ಸಂತೋಷವಾಯಿತು.

ಅನುಭವ ಕಥನವನ್ನು ಮುಗಿಸುವ ಮೊದಲು, ಕೊನೆಯ ಅಧ್ಯಾಯದಲ್ಲಿ ದೇವರ ಮೇಲಿನ ನಂಬಿಕೆಯ ಬಗ್ಗೆ ಬರೆದಿರುವ ಸಂಗತಿಗಳು ಚೆನ್ನಾಗಿವೆ. ಮನೋಬಲವು ಮನುಷ್ಯನ ದೈಹಿಕ ಸ್ವಸ್ಥತೆಯನ್ನು ಕಾಪಾಡುತ್ತದೆ ಎಂದು ನನಗೂ ಕೆಲವು ಅನುಭವಗಳು ಉಂಟಾಗಿವೆ.

ಕೊನೆಯಲ್ಲಿ ಡಾ| ಎಚ್.ಡಿ. ಚಂದ್ರಪ್ಪಗೌಡರು ಅವರನ್ನು ‘ಲಿವಿಂಗ್ ಲೆಜೆಂಡ್’ ಎಂದು ಕರೆದಿರುವುದು ಖಂಡಿತವಾಗಿಯೂ ಸರಿಯಾಗಿದೆ. ಚಂದ್ರಶೇಖರ್‌ ಅವರು ಇಡೀ ಜಗತ್ತಿಗೆ ಗೊತ್ತಾಗುವಂತೆ ಆಗಬೇಕು ಎಂಬುದು ನನ್ನ ಅಭಿಲಾಷೆ.

* * *