ಡಾ| ಸಿ.ಆರ್‌. ಚಂದ್ರಶೇಖರ್‌ ಅವರ ಅನೇಕ ಲೇಖನಗಳನ್ನು, ಪುಸ್ತಕಗಳನ್ನು ಮತ್ತು ಅವರ ನಿಯಮಿತ ಪತ್ರಿಕಾ ಸಲಹೆಗಳನ್ನು ತಪ್ಪದೆ ಓದುವವನಾಗಿ ಅವರು ಕನ್ನಡ ಓದುಗರಿಗಾಗಿ ಮಾಡುತ್ತಿರುವ ಉಪಕಾರವನ್ನು ಶ್ಲಾಘಿಸಬೇಕಾದುದು ನಮ್ಮೆಲ್ಲರ ಕರ್ತವ್ಯ.

ಅವರ ‘ಮಾನಸಿಕ ಆರೋಗ್ಯ ವರ್ಧನೆ’ ಎಂಬ ಪುಸ್ತಕ, ಪ್ರತಿಯೊಂದರಲ್ಲೂ ಆಗುವ ಮಾನಸಿಕ ಗೊಂದಲ ಅನುಮಾನ, ಕೀಳರಿಮೆ, ಖಿನ್ನತೆಯ ಕಾರಣಗಳನ್ನು ತಿಳಿಸುವುದಲ್ಲದೆ ಅವುಗಳ ವೈಜ್ಞಾನಿಕ ವಿಶ್ಲೇಷಣೆಯನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ತಿಳಿಸಿರುವುದು ಅತ್ಯಂತ ಉಪಯುಕ್ತ. ವಿವಿಧ ರೀತಿಯ ಮಾನಸಿಕ ಕಾಯಿಲೆಗಳ ಬಗ್ಗೆ, ಅವುಗಳ ಲಕ್ಷಣಗಳ ಬಗ್ಗೆ ಹಾಗೂ ಅವುಗಳ ತೀವ್ರತೆಯ ಬಗ್ಗೆ ತಿಳಿಸಿ ಆ ಲಕ್ಷಣಗಳು ಕಂಡ ಕೂಡಲೆ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಅತ್ಯಂತ ಸುಲಭ ರೀತಿಯಲ್ಲಿ ವಿವರಿಸಿದ್ದಾರೆ.

ಅದೆಷ್ಟೋ ಜನರು ಇವರ ಪುಸ್ತಕಗಳಿಂದ ಪ್ರಭಾವಿತರಾಗಿ ‘ಹುಚ್ಚುತನ’ದ ಭಯದಿಂದ ಮುಕ್ತರಾಗಿ ಮಾನಸಿಕ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ತೊಂದರೆಯಿಂದ ಪಾರಾಗಲು ಮುಂದಾಗುತ್ತಿದ್ದಾರೆ.

ಇವರ ಲೇಖನ, ಪುಸ್ತಕಗಳಲ್ಲಿ ವ್ಯಕ್ತವಾಗುವ ಸಾಮಾಜಿಕ ಕಳಕಳಿಯನ್ನು ಎಷ್ಟು ಹೊಗಳಿದರೂ ಸಾಲದು. ಬಹುಶಃ ಪ್ರತಿಯೊಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಂದು ಬಾರಿಯಾದರೂ ಮಾನಸಿಕ ಖಿನ್ನತೆಯನ್ನು ಅನುಭವಿಸಬೇಕಾಗಿಬರುವುದು ಸಹಜ. ಆದರೆ. ಆತ್ಮಸ್ಥೈರ್ಯ ತುಂಬುವಂಥಾ ಪ್ರೀತಿ ಮತ್ತು ಒತ್ತಾಸೆ ಬೆಂಬಲದ ಆರೈಕೆ ಸಿಕ್ಕಾಗ ಖಿನ್ನತೆ ದೂರವಾಗಿ ಹೊಸ ಉತ್ಸಾಹ ಮೂಡುತ್ತದೆ. ಜೀವನ ಇಷ್ಟವಾಗುತ್ತದೆ. ಈ ಬಗ್ಗೆ ಆರೋಗ್ಯ ಸೂತ್ರಗಳನ್ನು ಡಾ| ಸಿ.ಆರ್. ಚಂದ್ರಶೇಖರ್‌ರವರು ನಮಗೆಲ್ಲಾ ದಣಿವರಿಯದೇ ನೀಡುತ್ತಾ ಬಂದಿದ್ದಾರೆ. ದೇವರು ಅವರಿಗೆ ಇನ್ನಷ್ಟು ಒಳ್ಳೆಯ ಕೆಲಸ ಮಾಡುವ ಶಕ್ತಿ ನೀಡಲಿ ಎಂದು ಕನ್ನಡಿಗರೆಲ್ಲರೂ ಹಾರೈಸುವ.

* * *