ಕನ್ನಡ ಸಾಹಿತ್ಯದ ದೃಷ್ಟಿಯಿಂದ ನೋಡುವುದಾದರೆ ಡಾ| ಸಿ.ಆರ್. ಚಂದ್ರಶೇಖರ್ ರವರು ಮನೋವೈದ್ಯರಾಗಿ ಕನ್ನಡ ಸಾಹಿತ್ಯಕ್ಕೆ ನೀಡುವ ಕೊಡುಗೆಗಳು ಅಪಾರ. ಡಾಕ್ಟರ್ ಎಂದ ಮೇಲೆ ತಮ್ಮಲ್ಲಿ ಬರುವ ರೋಗಿಗಳನ್ನು ಪರೀಕ್ಷಿಸಿ, ಚಿಕಿತ್ಸೆ ನೀಡುವುದು ಎಂದು ಕೆಲವರ ಅಭಿಪ್ರಾಯ. ಆದರೆ ಇವರು ತಮ್ಮ ಲೇಖನಗಳಿಂದ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಎಲ್ಲಾ ಸ್ತರಗಳಲ್ಲೂ, ಅದರಲ್ಲೂ ಮನುಷ್ಯನ ಮಾನಸಿಕ ದ್ವಂದ್ವ, ತುಮುಲ, ಮನೋರೋಗ, ದೌರ್ಬಲ್ಯ ಹಾಗೂ ಹೆಣ್ಣಿನ ಬಗ್ಗೆ ಅವಳ ಮನಃಸ್ಥಿತಿಯ ಬಗ್ಗೆ, ವಿದ್ಯಾರ್ಥಿಗಳ ಮನಃಸ್ಥಿತಿಯ ಬಗ್ಗೆ ಹೀಗಿ ಒಟ್ಟಾರೆ ಮಾನಸಿಕ ವಿಷಯಗಳ ಬಗ್ಗೆ ಲೇಖನಗಳನ್ನು ಬರೆದಿರುವುದು ಹೆಮ್ಮೆಯ ವಿಷಯ. ಗೋಮುಖ ವ್ಯಾಘ್ರ ಗಂಡಸರ ವರ್ತನೆಯಿಂದ ಬಳಲುತ್ತಿರುವ ಹೆಣ್ಣಿನ ಬಗ್ಗೆ ತಿಳಿಸಿರುವುದು ಮನೋಜ್ಞವಾಗಿದೆ.

ಡಾ| ಸಿ.ಆರ್.ಚಂದ್ರಶೇಖರ್‌ರವರು ಬರೆದಿರುವ ಅನೇಕಾನೇಕ ಪುಸ್ತಕಗಳಲ್ಲಿ ಒಮದಾದ ‘ಮಹಿಳೆಯರ ಮಾನಸಿಕ ಅಸ್ವಸ್ಥತೆಗಳು’ ಎಂಬ ಕೃತಿಯಲ್ಲಿ ತಾಯಿಯಾಗಿ, ತಂಗಿಯಾಗಿ, ಹೆಂಡತಿಯಾಗಿ ಹೀಗೆ ಎಲ್ಲ ಸ್ತರಗಳಲ್ಲೂ ಮಾನ್ಯಳಾದ ಹೆಣ್ಣಿನ ಮಾನಸಿಕ ರೋಗಗಳು ಹೆರಿಗೆಯ ಸಮಯದಲ್ಲಿ ಹಾಗೂ ನಂತರದಲ್ಲಿ ಅನುಭವಿಸಿದ ಮನಃಕ್ಲೇಶ, ದೌರ್ಬಲ್ಯಗಳ ಸಮಸ್ಯೆಗಳು, ವಯಸ್ಸಾದ ಮೇಲೆ ಮದುವೆಯಾಗಿ ತಾಯಿಯಾದರೆ ಆ ಮಗುವಿನ ಮೇಲಾಗುವ ದುಷ್ಪರಿಣಾಮಗಳು, ಉದ್ಯೋಗಸ್ಥ ಮಹಿಳೆಯರ ಮನಃಸ್ಥಿತಿಗಳು ಸಮಸ್ಯೆಗಳು ಮಹಿಳೆ ಯಾವ ರೀತಿಯಲ್ಲಿ ಪುರುಷನ ಅಡಿಯಾಳಾಗಿ, ಶೋಷಿತಳಾಗಿ ನೋವನ್ನು ಅನುಭವಿಸುತ್ತಿದ್ದಾಳೆ ಎಂಬುದನ್ನು ಹಾಗೂ ಆ ಸಮಸ್ಯೆಗಳಿಗೆ ಸಾಂತ್ವನವನ್ನು ತಿಳಿಸಿದ್ದಾರೆ. ಅದರಲ್ಲೂ ಕೆಲವು ನೈಜ ದೃಷ್ಟಾಂತಗಳನ್ನು ವಿವರಿಸಿದ್ದಾರೆ.

ಈ ಲೇಖನದಲ್ಲಿ ಬರುವ ಲೀಲಾಳ ಮನಃಸ್ಥಿತಿಗೆ ಕಾರಣವಾದ ಅವಳ ಗೆಳತಿ ಕಲಾಳ ಸಾವು, ಲೀಲಾಳ ಬಾಳಿಗೆ ಕುತ್ತಾದರೂ ಅದರಿಂದ ಆಕೆಯನ್ನು ಪಾರು ಮಾಡಿದ್ದಾರೆ. ಇದು ಸಂತೋಷದ ವಿಷಯ. ಇನ್ನೊಂದು ಘಟನೆಯಲ್ಲಿ ವಯಸ್ಸಾದ ತಾಯಿಯ ಮನೋವೇದನೆಗಳನ್ನು ಓದಿದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ಹಾಗೇ ಕೆಲವು ಮಹಿಳೆಯರು ಹೆರಿಗೆಯ ನಂತರ ಮಾನಸಿಕ ಅಸ್ವಸ್ಥತೆಗೆ ಗುರಿಯಾಗುತ್ತಾರೆ. ಅದನ್ನು ನಮ್ಮ ಜನ ಗಾಳಿ ಚೇಷ್ಟೆ ಎಂದು ನಂಬಿ ಮಾಟ-ಮಂತ್ರಗಳನ್ನು ಮಾಡಿಸಿ ಹರಕೆ-ತಾಯಿತಗಳನ್ನು ಕಟ್ಟಿಕೊಂಡು ಮೂಢನಂಬಿಕೆಗಳಿಗೆ ಮಾರುಹೋಗುತ್ತಾರೆ. ಇದನ್ನು ವೈದ್ಯವಿಜ್ಞಾನದಲ್ಲಿ ‘ಬಾಣಂತಿ ಸನ್ನಿ’ ಎಂದು ಕರೆದು, ಅದಕ್ಕೆ ಕಾರಣಗಳೇನು? ಆ ಸಮಸ್ಯೆಯ ಪರಿಹಾರವನ್ನೂ ಡಾಕ್ಟರ್‌ರವರು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಹಾಗೆಯೇ ೩೫ ವರ್ಷ ದಾಟಿದ ಮಹಿಳೆಗೆ ಮಗುವಾದರೆ, ಆ ಮಗುವಿನ ಬುದ್ಧಿಮಾಂದ್ಯತೆ ಹಾಗೂ ಇತರೆ ರೋಗಗಳ ಬಗ್ಗೆ ಮೈಗ್ರೇನ್ ತಲೆನೋವು ಇದರ ಬಗ್ಗೆ ಡಾಕ್ಟರ್‌ಅವರು ಕೊಟ್ಟಿರುವ ಸಲಹೆಗಳನ್ನು ಮುಂಜಾಗ್ರತಾ ಕ್ರಮಗಳನ್ನು ರೋಗಿ ಜಾಗೃತವಾಗಿ ಮೊದಲೇ ಎಚ್ಚೆತ್ತುಕೊಂಡು ಅದರಂತೆ ನಡೆದರೆ, ಅದರಿಂದ ಕಾಯಿಲೆ ಬರದಂತೆ ತಡೆಯಬಹುದು.

ಹೆಣ್ಣು ಎಂಥೆಂತಹ ಪ್ರಸಂಗಗಳಲ್ಲಿ ಮಾನಸಿಕ ರೋಗಗಳಿಗೆ ಬಲಿಯಾಗುತ್ತಾಳೆಂಬುದನ್ನು ಕೆಲವು ನೈಜ ದೃಷ್ಟಾಂತಗಳೊಂದಿಗೆ ವಿವರಿಸಿದ್ದಾರೆ. ಓದಿನ ಮೇಲೆ ಹೆಚ್ಚಿನ ಆಸಕ್ತಿ ಒಲವು ಇಟ್ಟುಕೊಂಡಿದ್ದ ೧೫ ವರ್ಷದ ಕೃಷ್ಣವೇಣಿಯು ಮನೆಯವರ ಒತ್ತಡದಿಂದ ಹೇಗೆ ಮನೋವ್ಯಾಕುಲಕ್ಕೊಳಗಾಗಿ ಮಾನಸಿಕ ರೋಗಿಯಾಗಿ, ಚಿಕಿತ್ಸೆಯ ನಂತರ ಹೇಗೆ ಗುಣಮುಖಳಾಗಿದ್ದಾರೆ ಎಂಬುದನ್ನು ನೋಡಿದಾಗ ಸಂತೋಷವಾಗುತ್ತದೆ. ಹಾಗೇ ಮುಂದಿನ ದೃಷ್ಟಾಂತವಂತೂ ಎಂತಹವರ ಮನಸ್ಸನ್ನೂ ಕಲಕಿ, ಮನೋವ್ಯಥೆ ಪಡೆವಂತೆ ಮಾಡುತ್ತದೆ. ೩೫ ವರ್ಷ ವಯಸ್ಸಿನ ಜಾನಕಿಯು ಪುಟ್ಟಹುಡುಕಿಯಂತೆ ಜಯಪುರದ ಅರಮನೆಗಳನ್ನು ನೋಡುವ ಉತ್ಸಾಹ. ಅಲ್ಲಿಗೆ ಹೋಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ಶೋಚನೀಯ. ಇದನ್ನು ಓದುವಾಗ ನಿಜಕ್ಕೂ ನನ್ನ ಕಣ್ಣುಗಳು ತೇವಗೊಂಡವು. ಡಾಕ್ಟರವರು ಅವಳಿಗೆ ಪರಿಸರ ಬದಲಾವಣೆಯಾಗಿ, ಆಕೆ ಗುಣಮುಖಳಾಗುತ್ತಾಳೆ ಎಂದು ಭಾವಿಸಿದ್ದರೆ ಅದು ಅಂದುಕೊಳ್ಳದ ದೊಡ್ಡ ಅನಾಹುತವಾಯಿತು. ಡಾಕ್ಟರ ರೋಗಿಗಳ ಪಾಲಿಗೆ ದೇವರೇ ನಿಜ. ವಿಧಿಯ ಮುಂದೆ ಯಾರೂ ದೇವರಾಗಲು ಸಾಧ್ಯವಿಲ್ಲವೆಂಬುದು ಸತ್ಯ. ಇನ್ನು ರಾಮರಾಯರ ಸೊಸೆ ಕನಕಲಕ್ಷ್ಮಿ ಕಥೆ ನಮ್ಮಲ್ಲೇ ನಡೆಯುತ್ತಿದೆ ಎಂಬಂತೆ ಭಾಸವಾಗುತ್ತದೆ. ಕನಕಲಕ್ಷ್ಮಿಯ ಹಾಗೆ ಗಂಡನ ಅತ್ತೆಯ ಅನುಮಾನಕ್ಕೊಳಗಾಗಿ, ನೆರೆ-ಹೊರೆಯವರ ಜೊತೆ ಮಾತನಾಡದೆ ತನ್ನಲ್ಲೇ ಮರುಗಿ-ಕೊರಗಿ ಕೊನೆಗೆ ಮಾನಸಿಕ ಅಸ್ವಸ್ಥತೆಯಿಂದ ಬಳಲುವ ಹೆಣ್ಣುಗಳು ಇಂತಹ ಎಷ್ಟೋ ಇಂತಹ ಪರಿಸ್ಥಿತಿಯಿಂದ ಎಂದಿಗೆ ಮುಕ್ತಿ ಸಿಗುವುದೋ ದೇವರಿಗೆ ಗೊತ್ತು. ೫ ವರ್ಷವಾದರೂ ೨ ವರ್ಷದ ಮಗುವಿನ ಬೆಳವಣಿಗೆ ಇರುವ ಬುದ್ಧಿಮಾಂದ್ಯ ಸುಂದರಲಕ್ಷ್ಮೀ ಗೋಳಿನ ಕಥೆ, ಅನಾಥೆಯಾದ ಅವಳನ್ನು ಸಾಕುತ್ತಿರುವ ಬಡವಳಾದ ಸಾವಿತ್ರಮ್ಮನ ಹೃದಯ ವೈಶಾಲ್ಯತೆ, ಮಾನವೀಯತೆ ಅವಿಸ್ಮರಣೀಯವಾದುದು, ಶ್ಲಾಘನೀಯವಾದುದು.

ವಿದ್ಯಾವಂತರಾದರೂ ಅವಿದ್ಯಾವಂತರಂತೆ ವರ್ತಿಸಿ ದಾಂಪತ್ಯ ಜೀವನವನ್ನು ಹಾಳುಮಾಡಿಕೊಂಡಿರುವ ಕಾಲೇಜ್ ಲೆಕ್ಚರರ್‌ಪ್ರಭಾಕರನನ್ನು ಏನೆಂದು ಹೇಳುವುದು. ವಿದ್ಯಾವಂತೆ ಹೆಂಡತಿಯಾದರೂ ಅವಳಾಡಿದ ಒಂದೇ ಒಂದು ಮಾತು, ಕಲಾವತಿ ನಿಮ್ಮ ಮೈ ಹೆಂಗಸರ ಮೈಯ ಹಾಗೆ ಕೋಮಲವಾಗಿದೆ ಎಂಬುದೇ ಇವರ ದಾಂಪತ್ಯದ ರಸಗಳಿಗೆ ಹೋಗಿ ಜೀವನವೇ ಕಹಿಯಾಗಿ ದಾಂಪತ್ಯ ಜೀವನ ತಾಳತಪ್ಪಿತು. ಪ್ರಭಾಕರನ ಅವಿವೇಕದಿಂದ ಇಂದು ಪ್ರಾಯಶ್ಚಿತ್ತ ಪಡುತ್ತಿರುವುದು ಕಲಾವತಿ ಮಾತ್ರ. ಅವಳ ನೋವಿಗೆ ಪರಿಹಾರ ಏನು, ಕಾದು ನೋಡಬೇಕು ಗಂಡ ಎಂತಹ ಕುಡುಕನಾದರೂ ಅವನೇ ನನ್ನ ದೈವ ಎಂದು ತಿಳಿದು ಕೊನೆಗೆ ತನ್ನ ಜೀವವನ್ನೇ ತೆತ್ತ ಮುನಿಯಮ್ಮನ ಕಥೆ ಇಂದು ನಮ್ಮ ಸುತ್ತಮುತ್ತ ನಡೆಯುತ್ತಲೇ ಇದೆ.

ಈ ಲೇಖನದ ಲಲಿತಮ್ಮನ ಕಥೆ ವಿಭಿನ್ನವಾದರೂ, ಇಲ್ಲಿ ಡಾಕ್ಟರರ ಪ್ರಯತ್ನ ಫಲಿಸುತ್ತಿರುವಾಗಲೇ ‘ತಾನೊಂದು ಬಗೆದರೆ ದೈವವೊಂದು ಬಗೆಯಿತು’ ಎನ್ನುವಂತೆ ರಾಧಾಕೃಷ್ಣಸ್ವಾಮಿಗೆ ಹೃದಯಬೇನೆ ಕಾಣಿಸಿಕೊಂಡು ಲಲಿತಮ್ಮ ಇಂದು ಬ್ರಹ್ಮಚಾರಿಯಂತೆ ಬದುಕುತ್ತಿರುವುದು ನಿಜಕ್ಕೂ ಶೋಚನೀಯ. ಇನ್ನು ಉದ್ಯೋಗಸ್ಥ ಮಹಿಳೆಯರ ಪಾಡಂತೂ ದೇವರಿಗೇ ಪ್ರೀತಿ. ಮನೆಯ ಒಳಗೆ ಹಾಗೂ ಹೊರಗೆ ಎರಡೂ ಕಡೆಯೂ ಆಕೆ ಹಿಂಸೆ ಅನುಭವಿಸುತ್ತಾಳೆ. ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಗಾದೆಯಂತೆ ಅತ್ತೆ, ನಾದಿನಿಯರ ಕಾಟಕ್ಕೆ ಸೊಸೆಯಾದವಳು ಗುರಿಯಾಗುತ್ತಾಳೆ. ಅವರ ಮಾತು ಕೇಳಿ ಗಂಡ ಕೊಡುವ ಹಿಂಸೆ ಒಂದು ಕಡೆಯಾದರೆ, ಆಫೀಸಿನಲ್ಲಿ ಪಡುವ ದೈಹಿಕ ಹಿಂಸೆ, ಮಾನಸಿಕ ಹಿಂಸೆ ಇಂದು ಯಥಾವತ್ತಾಗಿ ನಡೆಯುತ್ತಲೇ ಇದೆ. ಈ ಮೇಲೆ ಹೇಳಿದ ದೃಷ್ಟಾಂತಗಳಿಂದ ಹೆಣ್ಣು ಎಲ್ಲಾ ಒತ್ತಡಗಳಿಂದ ಮುಕ್ತಳಾಗಿ ಬದುಕಬಲ್ಲಳು ಎಂಬುದು ಸತ್ಯಕ್ಕೆ ದೂರವಾದ ಮಾತು. ಇದಕ್ಕೆ ಈ ದೃಷ್ಟಾಂತಗಳು ಕನ್ನಡಿ ಹಿಡಿದಂತಿವೆ.

ಡಾ| ಸಿ.ಆರ್. ಚಂದ್ರಶೇಖರ್‌ರವರ ಈ ಎಲ್ಲಾ ಪ್ರಯತ್ನಗಳು ಅವರ ದೈವತ್ವದ ಕುರುಹಾಗಿದೆ. ಆದರೆ ಮನುಷ್ಯ ಪ್ರಯತ್ನದ ಜೊತೆ ಅವನಿಗೆ ಅದೃಷ್ಟವಿದ್ದರೆ ಮಾತ್ರ ಆ ಮನುಷ್ಯ ಎಲ್ಲಾ ಸ್ತರಗಳಲ್ಲೂ ನಿಶ್ಚಿಂತೆಯಿಂದ ಇರುತ್ತಾನೆ. “ತಾನೊಂದು ಬಗೆದರೆ ದೈವವೊಂದು ಬಗೆಯಿತು, ‘ದೇವರು ವರ ಕೊಟ್ಟರೂ ಪೂಜಾರಿ ವರ ಕೊಡ’ ಎಂಬ ಗಾದೆಗಳಂತೆ ವಿಧಿಯ ಮುಂದೆ ಮನುಷ್ಯ ಕುಬ್ಜನಾಗುತ್ತಾನೆ. ಮನೋವೈದ್ಯರಾಗಿ ಡಾ| ಸಿ.ಆರ್. ಚಂದ್ರಶೆಖರ್‌ರವರ ಸಾಧನೆ ಅವಿಸ್ಮರಣೀಯ ಹಾಗೂ ಶ್ಲಾಘನೀಯವಾದುದು. ಅವರನ್ನು ಎಷ್ಟು ಹೊಗಳಿದರೂ ಸಾಲದು. ದೇವರಲ್ಲಿ ಪ್ರಾರ್ಥನೆಯೇನೆಂದರೆ ಈ ರೀತಿಯ ಡಾಕ್ಟರ್‌ಗಳನ್ನು ದೇವರು ನಮಗೆ ಕರುಣಿಸಲಿ ಎಂದು ಬೇಡಿಕೊಳ್ಳುತ್ತೇನೆ. ಡಾ| ಸಿ.ಆರ್. ಚಂದ್ರಶೇಖರ್‌ರವರಿಗೆ ನನ್ನ ಹೃತ್ಪೂರ್ವಕ ಮನಃಪೂರ್ವಕ ನಮನಗಳನ್ನು ಸಲ್ಲಿಸುತ್ತಿದ್ದೇನೆ.

* * *