ಬಾನಾಮತಿ ಸತ್ಯವೇ, ಮಿಥ್ಯವೇ, ಇದರ ಉಪಟಳಕ್ಕೆ ಸಿಲುಕಿ ಸಂಕಟಕ್ಕೀಡಾಗಿರುವ ಜನರಿಗೆ ಏನು ಪರಿಹಾರ? ಇಂತಹ ಪ್ರಶ್ನೆಗಳಿಗೆ ಉತ್ತರವನ್ನು ಹಾಗೂ ಮೂಢನಂಬಿಕೆಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುವ ಮಾರ್ಗವನ್ನು ಈ ಕಿರು ಹೊತ್ತಿಗೆಯ‌ಲ್ಲಿ ಕಾಣಬಹುದು.

ಬಾನಾಮತಿ ಎಂಬುದು ಒಂದು ವಿಶೇಷ ವಿದ್ಯೆ, ವಿಶಿಷ್ಟ ರೀತಿಯಲ್ಲಿ ಗುರು ಒಬ್ಬನ ಮಾರ್ಗದರ್ಶನದಲ್ಲಿ ಸತತ ಸಾಧನೆಯಿಂದ ವಶಪಡಿಸಿಕೊಳ್ಳಬಹುದಾದಂತಹ ಶಕ್ತಿ, ಈ ವಿದ್ಯೆ-ಶಕ್ತಿಯಿಂದ ಅತಿಮಾನುಷವಾದುದನ್ನು ಮಾಡಬಹುದು. ಮುಖ್ಯವಾಗಿ ಮರೆಯಲ್ಲಿದ್ದುಕೊಂಡು ಬೇರೆಯವರಿಗೆ ಕೆಡಕು ಮಾಡಬಹುದು ಎಂದು ಜನ ನಂಬುತ್ತಾರೆ.

ಈ ವಿದ್ಯೆಯನ್ನು ಗುರುವಿನ ಮೂಲಕ ಕಲಿಯಬೇಕಾಗುತ್ತದೆ. ಈ ವಿದ್ಯೆ ವಂಶಪಾರಂಪರ‍್ಯವಾಗಿ ತಂದೆಯಿಂದ ಮಗನಿಗೆ ಹಸ್ತಾಂತರವಾಗುತ್ತದೆ. ಬಾನಾಮತಿ ಮಾಡುವ ವ್ಯಕ್ತಿಗೆ ಅದನ್ನು ತೆಗೆಯುವ, ನಿಷ್ಕ್ರಿಯಗೊಳಿಸುವ ಕಲೆಯೂ ಗೊತ್ತು ಎನ್ನಲಾಗುತ್ತದೆ.

ಬಾನಾಮತಿ ಶಕ್ತಿಯನ್ನು ಬೇರೊಬ್ಬರಿಗೆ ಕೆಡುಕು ಮಾಡಲು, ಕಷ್ಟ-ನಷ್ಟಗಳನ್ನುಂಟು ಮಾಡಲು ಬಳಸಲಾಗುತ್ತದೆ. ಬಾನಾಮತಿ ಮಾಡಬಲ್ಲ ವ್ಯಕ್ತಿ, ಹಣ ಸಂಪಾದನೆಗಾಗಿ, ತನ್ನಿಷ್ಟದಂತೆ ಒಬ್ಬನ ಮೇಲೆ ಬಾನಾಮತಿ ಮಾಡಿ ಅವನನ್ನು ನರಳಿಸಿ, ಕಂಗಾಲು ಮಾಡಿ, ನಂತರ ಆ ವ್ಯಕ್ತಿ ಬಾನಾಮತಿ ತೆಗೆಸಿಕೊಳ್ಳಲು ತನ್ನ ಬಳಿಗೆ ಬರುವಂತೆ ನೋಡಿಕೊಳ್ಳುತ್ತಾನೆ. ನಂತರ ಬಾನಾಮತಿಯ ಬಗ್ಗೆ ಉತ್ಪ್ರೇಕ್ಷೆಯ ಮಾತುಗಳನ್ನಾಡಿ ಭಯ ತುಂಬುತ್ತಾನೆ. ಅಪಾರ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ಕಾಣಿಕೆಯಾಗಿ ಪಡೆಯುತ್ತಾನೆ.

ಬಾನಾಮತಿ ಮಾಡುವ ವಿಧಾನವನ್ನು ಇಲ್ಲಿ ಸೋದಾಹರಣವಾಗಿ ವಿವರಿಸಲಾಗಿದೆ ಹಾಗೂ ಅದರ ಪರಿಣಾಮಗಳನ್ನು ಅದರಿಂದಾಗುವ ಕೆಡುಕು, ಅನಾಹುತಗಳನ್ನು ಮನುಷ್ಯರ, ಪ್ರಾಣಿಗಳ ಮತ್ತು ನಿರ್ಜೀವ ವಸ್ತುಗಳ ಮೇಲೆ ತಮ್ಮ ಪ್ರಭಾವ ಬೀರುವಂತೆ, ಮಾಡುತ್ತಾರೆ. ಈ ಮೇಲಿನ ಅಂಶಗಳೆಲ್ಲ ಬಾನಾಮತಿ ಬಗೆಗಿನ ವಿವರಣೆಯಾಗಿದೆ.

ನಮ್ಮ ರಾಜ್ಯದ ಗುಲ್ಬರ್ಗ, ಬೀದರ್, ಜಿಲ್ಲೆಗಳಲ್ಲಿ ಬಾನಾಮತಿ ಎಂದು ಕರೆಯಿಸಿಕೊಳ್ಳುವ ‘ಮಾಟ-ಮಂತ್ರ’ ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತಿದೆ. ಇದು ಇಂದಿನ ವಿಷಯವಾಗದೇ, ಅಥರ್ವಣ ವೇದದಲ್ಲಿ ರಾಮಾಯಣ, ಮಹಭಾರತದ ಕೆಲವು ಭಾಗಗಳಲ್ಲಿ ಉಲ್ಲೇಖಿತವಾಗಿರುವುದನ್ನು ಲೇಖಕರು ನಮ್ಮ ಗಮನಕ್ಕೆ ತಂದಿದ್ದಾರೆ. (ಪುಟ-೧೪)

ಈ ಬಾನಾಮತಿಯ ಪ್ರಕರಣಗಳನ್ನು ಲೇಖಕರು ಇಲ್ಲಿ ತಿಳಿಸಿದ್ದಾರೆ. ಗಂಗವ್ವನ ಚೀತ್ಕಾರ ಅವಳ ಧ್ವನಿಯಲಾಗುವ ಬದಲಾವಣೆ, ಶರಣಪ್ಪನ ಸೊಸೆಯ ಕೈ, ಹೊಟ್ಟೆ, ತೊಡೆಗಳ ಮೇಲಾಗಿರುವ ಕೇರುಗಳು. ಸಂಗಪ್ಪನ ಕಾಯಿಲೆಯಿಂದಾದ ಸಾವು, ಈರಮ್ಮನ ಹೆಳವು-ಕ್ಷಯ, ಗೌರಿಯ ಉಬ್ಬಸದ ಕಾಯಿಲೆ (ಅಸ್ತಮ) ಈ ಎಲ್ಲವನ್ನು ಅಧ್ಯಯನ ಮಾಡಿದ ಸಂಶೋಧಕರ ಪ್ರಕಾರ ಇದು “ಸೂಕ್ತ ವೈದ್ಯಕಿಯ ನೆರವನ್ನು ಪಡೆಯಲು ಯತ್ನಿಸಿ ವಿಫಲರಾಗಿ ಬಾನಾಮತಿಗೆ ಶರಣಾಗಿರುವುದು ಕಾಣಬರುತ್ತದೆ. ಇನ್ನು ಕೆಲವರು ವೈದ್ಯಕೀಯ ನೆರವನ್ನು ಮತ್ತೊಂಡು ಕಡೆ ಮಾಂತ್ರಿಕರ ನೆರವನ್ನು ಪಡೆಯುತ್ತಾ ಒಟ್ಟಿನಲ್ಲಿ ಯಾವುದಾದರಿಂದಲಾದರೂ ಕಾಯಿಲೆ ವಾಸಿಯಾದರೆ ಸಾಕೆಂದುಕೊಳ್ಳುತ್ತಾರೆ (ಪುಟ-೧೯).

ಬಡತನದ ರೇಖೆಯ ಕೆಳಗಿರುವ ಜನರಿಗೆ ಉಚಿತ ವೈದ್ಯಕೀಯ ಸೌಲಭ್ಯ ದೊರೆತು ಕಾಯಿಲೆಯಿಂದ ಮುಕ್ತರಾಗಿದ್ದರೆ ಅಲ್ಲಿ ಬಾನಾಮತಿಯ ಸೊಲ್ಲು ಕೇಳಿ ಬರಲು ಅವಕಾಶವಿರುತ್ತಿರಲಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದುಬಂದಿದೆ.

-ನಾಗಮ್ಮನಿಗೆ ಇರುವ ಸ್ಕಿಜೋಫ್ರೀನಿಯಾ (ಇಚ್ಛಿತ್ತವಿಕಲತೆ), ಲಕ್ಷ್ಮಮ್ಮನ ಕಿವುಡುತನ, ಕ್ರಮೇಣ ಪ್ಯಾರಾಫ್ರೀನಿಯಾ ಇವು ಮಾನಸಿಕ ಕಾಯಿಲೆಗಳಾಗಿದ್ದರೂ, ಇವನ್ನು ಬಾನಾಮತಿಯ ಉಪಟಳವೆಂದು ಹೇಳುತ್ತಾರೆ. ಲೇಖಕರು ಇದನ್ನು ‘ಮಾನಸಿಕ ಕಾಯಿಲೆ’ಗಳೆಂದು ಹೇಳುತ್ತಾರೆ.

ಲೇಖಕರು ಸಿಗ್ಮಂಡ್ ಫ್ರಾಯ್ಡ್‌ನ ಮನೋವಿಶ್ಲೇಷಣ ಮನೋಚಿಕಿತ್ಸೆಯ ಬಗ್ಗೆ ಹೇಳಿದ್ದು ಈ ಸಿದ್ಧಾಂತ ಬಾನಾಮತಿಗೆ ಹೇಗೆ ಸಂಬಂಧಿಸಿದೆ ಎಂಬುದನ್ನು ಕೆಲವು ಉದಾಹರಣೆಗಳನ್ನು (ಪ್ರಕರಣ) ಕೊಡುವ ಮೂಲಕ ತಿಳಿಸಿದ್ದಾರೆ. ಫ್ರಾಯ್ಡ್‌ನ ಸಿದ್ಧಾಂತದ ಪ್ರಕಾರ ‘ಜಾಗೃತ ಮನಸ್ಸಿಗೆ’ ಅಹಿತವಾದ ಸಂಕೋಚ, ಆತಂಕವನ್ನುಂಟು ಮಾಡುವ ವಿಚಾರಗಳನ್ನೆಲ್ಲಾ ನಾವು ನಮ್ಮ ಸುಪ್ತ ಮನಸ್ಸಿನಲ್ಲಿರುವ ಹಗೇವುಗಳೊಳಕ್ಕೆ ತಳ್ಳಿ ಬಿಡುತ್ತೇವೆ (ಪುಟ-೨೩).

ಮನಸ್ಸಿನ ಆತಂಕ ಅಸಹಜ ನಡವಳಿಕೆ ಮೂಲಕ ಕಾಣಿಸಿಕೊಂಡರೆ ಅದನ್ನು ‘ಉನ್ಮಾದ ಮನೋಬೇನೆ’ ಎಂದಿರುವ ಫ್ರಾಯ್ಡ್ ಇವನ್ನು ಪ್ರಯೋಗಗಳ ಮೂಲಕ ಸಾಧಿಸಿದ್ದಾರೆ.

ಪುರುಷ ಪ್ರಧಾನವಾದ ನಮ್ಮ ಸಮಾಜದಲ್ಲಿ ಸ್ತ್ರೀಯರು ಬಹುಪಾಲು ಶೋಷಣೆ, ತಿರಸ್ಕಾರ, ಮತ್ತು ತುಳಿತಕ್ಕೆ ಗುರಿಯಾಗುತ್ತಾರೆ. ಅಭಿಪ್ರಾಯ ಸ್ವಾತಂತ್ರ‍್ಯವಿರುವುದಿಲ್ಲ. ನೇರವಾಗಿ ಹೇಳಲಾಗದ್ದನ್ನು ಬಹಿರಂಗವಾಗಿ ಪ್ರಕಟಿಸಲಾಗದ್ದನ್ನು ಉನ್ಮಾದ ಸ್ಥಿತಿಯಲ್ಲಿ ಪ್ರಕಟಿಸುತ್ತಾರೆ ಎನ್ನುವುದು ತಜ್ಞರ ಅಭಿಮತ (ಪುಟ-೨೮).

ಇದೇ ರೀತಿ ಲೈಂಗಿಕ ದುರ್ಬಲತೆ ಹಾಗೂ ಸಮೂಹದ ಉನ್ಮಾದ ಸ್ಥಿತಿ, ಪ್ರಾಣಿಗಳ ನಿರ್ಜೀವ ವಸ್ತುಗಳ ಮೇಲಿನ ಪರಿಣಾಮಗಳನ್ನು ಅಧ್ಯಯನ ಮಾಡಿದ ಮನೋಶಾಸ್ತ್ರಜ್ಞರ ಪ್ರಕಾರ- ಅವೆಲ್ಲಾ ಶಾರೀರಕ ಅಥವಾ ಮಾನಸಿಕ ಅಸ್ವಸ್ಥತೆಯ ಚಿಹ್ನೆಗಳು ಎಂದು ಸ್ಪಷ್ಟವಾಯಿತು. ಭಯ ಭೀತಿಗೊಳಗಾದ ಜನ ಅದನ್ನು ಬಾನಾಮತಿಯಿಂದಾದವು ಎಂದು ತಪ್ಪಾಗಿ ತಿಳಿದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ ಹೇಳುವುದಾದರೆ, ಬಾನಾಮತಿ ಎಂಬುದು ಒಂದು ಸಾಮಾಜಿಕ ಪಿಡುಗಾಗಿದ್ದು ಈ ಅಂಟು ಜಾಡ್ಯವನ್ನು ಹೋಗಲಾಡಿಸಲು ಉತ್ತಮ ಶಿಕ್ಷಣ, ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಹೊಣೆಯಾಗಿದೆ.

ಅದೇ ರೀತಿ ಮನುಷ್ಯನ ಮನಸ್ಸಿನಲ್ಲಿ ಬೇರೂರಿರುವ ಅಜ್ಞಾನ, ಮೂಢನಂಬಿಕೆಗಳನ್ನು ಮಾಧ್ಯಮಗಳ ಮೂಲಕ ಹೋಗಲಾಡಿಸಲು ಪ್ರಯತ್ನಿಸುವುದು.

ಬೇರೆಯವರಿಗೆ ತೊಂದರೆಯನ್ನುಂಟು ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಆದಷ್ಟು ಮಟ್ಟಿಗೆ ಇದರ ಉಪಟಳವನ್ನು ಕೊನೆಗಾಣಿಸುವುದು ಸೂಕ್ತವಾದ ಸಲಹೆಯಾಗಿದೆ.

ಡಾ| ಸಿ.ಆರ್.ಚಂದ್ರಶೇಖರ ‘ಬಾನಾಮತಿ’ ಒಂದು ಪುಟ್ಟ ಸಂಶೋಧನಾ ಗ್ರಂಥ. ಹಲವು ವೈದ್ಯರುಗಳು ಸೇರಿ ನಡೆಸಿದ ಸಂಶೋಧನೆಯ ಸಾರಾಂಶ ರೂಪದ ಗ್ರಂಥ. ಇವರು ಸಂಶೋಧನೆ ನಡೆಸುವ ಮೂಲಕ ಅದರ ವೈಜ್ಞಾನಿಕ ವಿಮರ್ಶೆಯನ್ನು ಮಾಡಿದ್ದಾರೆ. ಈ ಪುಸ್ತಕ ‘ಬಾನಾಮತಿ’ಯ ಬಗೆಗಿನ ಒಂದು ಪರಿಪೂರ್ಣ ಕೈಪಿಡಿ ಎಂದು ಹೇಳಬಹುದು.

* * *