ಮಗು ಮಾನವನ ತಂದೆ’ ಎಂದು ತಿಳಿದವರು ಹೇಳುತ್ತಾರೆ. ಮಗು ತನ್ನ ಅಭಿಪ್ರಾಯಗಳನ್ನು ದುಃಖ ದುಮ್ಮಾನಗಳನ್ನು ತನ್ನದೇ ರೀತಿಯಲ್ಲಿ ಅಭಿವ್ಯಕ್ತ ಮಾಡುತ್ತದೆ. ಕೆಲವು ಸಮಯಗಳಲ್ಲಿ ಮಗುವಿನ ವರ್ತನೆ ಗೊಂದಲಕ್ಕೀಡು ಮಾಡುತ್ತದೆ. ಚನ್ನಾಗಿಯೇ ಕಲಿಯುತ್ತಿದ್ದ ಮಗು ಇದ್ದಕ್ಕಿದ್ದ ಹಾಗೆ ಹಿಂದುಳಿಯಲು ಕಾರಣವೇನು? ಎಲ್ಲವನ್ನು ಹೇಳಿಕೊಳ್ಳುವ ಮಗು ಬರಬರುತ್ತಾ ಮಂಕಾಗುವುದೇಕೆ? ಇವೆಲ್ಲಾ ನಮ್ಮನ್ನು ಕಾಡುವ ಸಾಮಾನ್ಯ  ಪ್ರಶ್ನೆಗಳು. ಹಾಗಾದರೆ ಪೋಷಕರು ಹೇಗೆ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು? ‘ನಿಮ್ಮ ಮಗುವಿನ ಮನಸು’ ಎಂಬ ಉತ್ತಮ ಕೃತಿ. ಸಮಾಜಕ್ಕೆ ಒಂದು ದಾರಿದೀಪವಾಗಿದೆ ಎಂದರೆ ತಪ್ಪಾಗಲಾರದು.

ಇಡೀ ಪುಸ್ತಕವು ನಮ್ಮ ಮಕ್ಕಳಲ್ಲಿ ಕಾಣುವ ಅನೇಕ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗೋಪಾಯಗಳನ್ನು ಸೂಚಿಸುತ್ತದೆ. ಇದಲ್ಲದೇ ಮಗುವಿ ಕೆಲವು ವಿಚಿತ್ರ ವರ್ತನೆಗಳ (ಪು.ಸಂ.೧೪-ಅಟಿಸಂ) ಬಗೆಗೆ ವೈಜ್ಞಾನಿಕ ಕಾರಣಗಳನ್ನು ನೀಡಿ ಆ ವರ್ತನೆಗೆ ಕಾರಣಗಳನ್ನು ತಿಳಿಸುತ್ತದೆ. ಈ ಪುಸ್ತಕ ಇಷ್ಟವಾಗುವುದು ಪುಸ್ತಕದಲ್ಲಿನ ಅಂಶಗಳು ಬೆಳೆಯುವ ರೀತಿ. ಭ್ರೂಣಾವಸ್ಥೆಯಿಂದ ಹದಿಹರೆಯದತನಕ ಮಕ್ಕಳ ವರ್ತನೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಮಕ್ಕಳ ಮನಸ್ಸಿನ ಮೇಲೆ ಯಾವ ಯಾವ ಅಂಶಗಳು ಪ್ರಭಾವ ಬೀರಬಲ್ಲವು ಎಂಬುದನ್ನು ಸರಳವಾಗಿ ಸಾಮಾನ್ಯರಿಗೂ ಅರ್ಥವಾಗುವಂತೆ ತಿಳಿಸಲಾಗಿದೆ. ಕೃತಿಯ ಬಹುಪಾಲು ಅಂಶ ಮಕ್ಕಳು ಪೋಷಕರಿಂದ ಗೌಣವಾಗಿಡಬಹುದಾದಂತಹ ಹಲವಾರು ಸಮಸ್ಯೆಗಳನ್ನು ವಿಶ್ಲೇಷಿಸಲಾಗಿದೆ.

(ಪು.ಸಂ.೪೪-ಆತಂಕ) ಇದಲ್ಲದೇ ಇಂತಹ ಸಮಸ್ಯೆಗಳಿಗೆ ಮಾನಸಿಕ ಶಕ್ತಿಯನ್ನು ತುಂಬುವಂತಹ ಸಲಹೆಗಳನ್ನೇ ನೀಡಲಾಗಿದೆ. ಈ ಕೃತಿಯಲ್ಲಿ ನಾವು ತಿಳಿಯಬೇಕಾದ ಮುಖ್ಯ ಅಂಶವೆಂದರೆ ಮಗುವಿನ ಸ್ಪರ್ಧಾಮನೋಭಾವ, ಮಗುವಿನ ಮನಸ್ಸು ಸ್ಪರ್ಧೆಗೆ ತಯಾರಾಗುವುದು, ತನ್ನನ್ನು ಎಲ್ಲರೂ ಗಮನಿಸಬೇಕೆಂಬುದು, ಇದಕ್ಕಾಗಿ ಮಗುವಿನ ಮೇಲೆ ತಮ್ಮ ಅಥವಾ ತಂಗಿಯಿಂದ ಎದುರಾಗುವ ಗಮನಿಸುವಿಕೆಯ ಇರಾದೆಯನ್ನು ಸೂಕ್ಷ್ಮವಾಗಿ ಈ ಕೃತಿಯಲ್ಲಿ ತಿಳಿಸಲಾಗಿದೆ. ಇದಲ್ಲದೆ ತನ್ನ ಪ್ರತಿಭಟನೆಯನ್ನು ಪುಟ್ಟ ಮಗು ಯಾವ ರೀತಿ ವ್ಯಕ್ತಪಡಿಸಬಹುದು ಎಂಬುದಕ್ಕೆ ಉದಾಹರಣೆಗಳ ಮೂಲಕ ಅರಿಯುವಂತೆ ಮಾಡುತ್ತದೆ (ಪು.ಸಂ.೭,೮). ನಾವು ಮಾಡುವ ಮತ್ತೊಂದು ತಪ್ಪೆಂದರೆ ಪರೀಕ್ಷೆಗಳಲ್ಲಿ ಮಗು ಫೇಲ್ ಆಗಿದ್ದರೆ, ಓದಿನಲ್ಲಿ ಹಿಂದುಳಿದಿದ್ದರೆ ಕಾರಣಗಳನ್ನು ಹುಡುಕುವ ಗೋಜಿಗೆ ಹೋಗದೆ ನೇರವಾಗಿ ಮಗುವನ್ನು ನಿಂದಿಸುತ್ತೇವೆ. ಆದರೆ, ಇದರಿಂದ ಮಗುವಿನ ಮನಸ್ಸಿನಲ್ಲಿ ಎಂತಹ ಪರಿಣಾಮ ಬೀರಬಹುದು? ಎಂಬುದನ್ನು ಆಲೋಚಿಸುವುದು ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರ. ಈ ಕೃತಿಯಲ್ಲಿ ಹಿಂದುಳಿಯಲು ಕಾರಣಗಳು ಹಾಗೂ ಬುದ್ಧಿಮಾಂದ್ಯತೆಗೆ ವೈಜ್ಞಾನಿಕ ಕಾರಣಗಳನ್ನು ವಿವರವಾಗಿ ತಿಳಿಸಿದೆ (ಪು.ಸಂ.೨೩,೨೪,೨೫).

೨೧ನೇ ವರ್ಣತಂತುಗಳಲ್ಲಿನ ನ್ಯೂನತೆಯಿಂದ ಡೌನ್ಸ್‌ಸಿಂಡ್ರೋಮ್ ಎಂಬ ನ್ಯೂನತೆವುಳ್ಳ ಮಗು ಹುಟ್ಟಬಹುದು. ಲೈಂಗಿಕ ವರ್ಣತಂತು ಜೋಡಿಯಲ್ಲಿನ ನ್ಯೂನತೆಯಿಂದ ಜನನಾಂಗಗಳು ಅಸ್ತವ್ಯಸ್ತಗೊಂಡು, ಬುದ್ಧಿ ಕಡಿಮೆ ಇರುವ ಮಗು ಹುಟ್ಟಬಹುದು – ಇದು ಒಂದು ಉದಾಹರಣೆಯಷ್ಟೆ. ಇದೇ ರೀತಿ ಹತ್ತು ಹಲವು ವೈಜ್ಞಾನಿಕ ಕಾರಣಗಳಿಂದ ಮಗು ಹೇಗೆ ಬುದ್ಧಿಮಾಂದ್ಯತೆಗೆ ಒಳಗಾಗಬಹುದು ಎಂಬುದನ್ನು ತಿಳಿಸಿದೆ. ಇಡೀ ಕೃತಿ ಮನಸ್ಸಿಗೆ ಹತ್ತಿರವಾಗುವುದು ಈ ಅಧ್ಯಾಯದಿಂದಲೇ. ಮಗುವನ್ನು ಎಲ್ಲರ ಮುಂದೆ ನಿಂದಿಸುವ ಹಲವು ಪೋಷಕರಿದ್ದಾರೆ. ಆದರೆ ಕಾರಣಗಳನ್ನು ಹುಡುಕುವಲ್ಲಿ ವಿಫಲರಾಗುತ್ತಾರೆ. ಡಾ. ಸಿ.ಆರ್.ಸಿ.ಯವರ ಈ ಕೃತಿ ಪೋಷಕರಿಗೆ ಮಗುವಿನ ಮೇಲಿರಬಹುದಾದ ಅಸಮಾಧಾನಗಳು ದೂರವಾಗುವುದರಲ್ಲಿ ಸಂಶಯವೇ ಇಲ್ಲ. ಶಿಕ್ಷಕರಿಗೆ ಕೂಡಾ ಮಗುವಿನ ಮನಸ್ಸು ಅರಿಯಲು ಇದೊಂದು ಶ್ರೇಷ್ಠ ಕೃತಿಯೆಂದರೆ ಅತಿಶಯೋಕ್ತಿಯಾಗಲಾರದು. ಶಿಕ್ಷಣ ಕ್ಷೇತ್ರದಲ್ಲಿ ಡಾ. ಸಿ.ಆರ್. ಚಂದ್ರಶೇಖರ್‌ರವರ ಅಗತ್ಯತೆ ಎಷ್ಟಿದೆ ಎಂಬುದಕ್ಕೆ ಅವರ ಕೃತಿ ಸಾಕ್ಷಿಯಾಗಿ ನಿಲ್ಲುತ್ತದೆ.

ಕಡೆಯದಾಗಿ, ಈ ಕೃತಿ ಒಂದು ದೊಡ್ಡ ಜ್ಞಾನ ಭಂಡಾರದಂತೆ ನಿಲ್ಲುತ್ತದೆ. ಕನ್ನಡ ಸಾಹಿತ್ಯದಲ್ಲಿ ವೈದ್ಯಕೀಯ ಸಾಹಿತ್ಯ ಒಂದು ವಿಶೇಷ ಅಂಗ. ಅದರಲ್ಲಿ ಡಾ| ಸಿ.ಆರ್. ಚಂದ್ರಶೇಖರ್‌ರವರಿಗೆ ಅಗ್ರಸ್ಥಾನವೆಂದರೆ ತಪ್ಪಾಗಲಾರದು.

* * *