ಇತ್ತೀಚೆಗೆ ನಾನು ಓದಿದ ಪುಸ್ತಕಗಳಲ್ಲಿ ಡಾ| ಸಿ.ಆರ್.ಚಂದ್ರಶೇಖರ್‌ರವರ ಸಂಪಾದಿಸಿದ ‘ಮರೆಯಲಾಗದ ರೋಗಿಗಳು’ ನಿಜವಾಗಲೂ ನೆನಪಿನಾಳದಲ್ಲಿ ಉಳಿಯುವ ಪುಸ್ತಕಗಳಲ್ಲಿ ಇದೂ ಒಂದು.

ಇಲ್ಲಿಯ ಲೇಖನಗಳನ್ನು ೨೮ ಜನ ವೈದ್ಯರು ತಮ್ಮ ಜೀವನದಲ್ಲಿ ಮರೆಯಲಾಗದ ರೋಗಿಗಳ ಬಗ್ಗೆ ಬರೆದಿದ್ದಾರೆ. ಈಗಾಗಲೇ ಪ್ರಸಿದ್ಧ ವೈದ್ಯರು ಹಾಗೂ ಇತರ ವೈದ್ಯರ ಲೇಖನಗಳು ಇಲ್ಲಿವೆ. ಹಿರಿಯ ಕಿರಿಯ ವೈದ್ಯರು. ಅದರಲ್ಲಿ ಅಲೋಪತಿ ವೈದ್ಯರು, ಹೋಮಿಯೋಪತಿ ವೈದ್ಯರು. ಆಯುರ್ವೇದ ವೈದ್ಯರು ಹಾಗೂ ಒಬ್ಬ ಶುಶ್ರೂಷಕಿಯಾದ ಮಹಾದೇವಿ ಜಿ. ಹರಿಕಾಂತರವರವ ಲೇಖನಗಳು ಇಲ್ಲಿವೆ. ಲೇಖನಗಳು ಬರೆದ ವೈದ್ಯರಲ್ಲಿ ಕೆಲವರು ಮೂಳೆ ತಜ್ಞರು, ಮಾನಸಿಕ ರೋಗಗಳ ತಜ್ಞರು, ಸರ್ಜನ್‌ರು, ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ಹೀಗೆ ಅನೇಕ ರೋಗಗಳ ತಜ್ಞರು ಇದ್ದಾರೆ.

೧೫೫ ಪುಟಗಳ ಈ ಪುಸ್ತಕವು ಸಾಮಾನ್ಯ ಓದುಗನನ್ನು ಓದಿಕೊಂಡು ಹೋಗುತ್ತದೆ. ಪ್ರತಿಯೊಬ್ಬರ ಲೇಖನವು ಚೆನ್ನಾಗಿ ಮೂಡಿಬಂದಿದೆ. ಕೆಲ ಲೇಖನಗಳಲ್ಲಿ ಬರುವ ರೋಗಿಯ ಹಾಗೂ ವೈದ್ಯ ಹಾಸ್ಯಭರಿತ ಸನ್ನಿವೇಶಗಳನ್ನು ಓದಿ ನಗದೆ ಇರಲಾರೆವು. ಅದೇ ರೀತಿ ಲೇಖನಗಳಲ್ಲಿ ಬರುವ ಸನ್ನಿವೇಶಗಳು ಹೃದಯಕ್ಕೆ ಮುಟ್ಟಿ ನಮಗರಿವಿಲ್ಲದಂತೆ ಕಣ್ಣಲ್ಲಿ ನೀರು ಬರದೆ ಇರಲಾರವು. ಕೆಲ ಲೇಖನಗಳು ಮುಂದೆ ಏನಾಗುವುದೋ ಎಂದು ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ವೈದ್ಯರು ಮಾಡುವುದೊಂದು, ಅದರಿಂದ ರೋಗಿಯ ಮೇಲೆ ಆದ ಪರಿಣಾಮವೇ ಬೇರೆ ಆದಾಗ, ಅದು ಈಗ ಮೋಜಿನ ಪ್ರಸಂಗವೆಂದೆನಿಸಿದರೂ, ಆಗಿನ ವೈದ್ಯರ ಸ್ಥಿತಿಯ ಬಗ್ಗೆ ಅಯ್ಯೋ! ಎಂದು ಅನಿಸದೆ ಇರದು. ಕೆಲ ರೋಗಿಗಳ ಸಂಬಂಧಿಕರು ತಮ್ಮ ಶ್ರೀಮಂತಿಕೆ ಪ್ರದರ್ಶನ ಮಾಡುವ ಬಗ್ಗೆ ಓದಿದಾಗ, ಅವರ ಬಗ್ಗೆ ಕನಿಕರ ಉಂಟಾಗುತ್ತದೆ. ಇನ್ನು ಕೆಲ ಲೇಖನಗಳು ಅನೇಕ ವಿಧದಲ್ಲಿ ಪಾಠವನ್ನು ಕಲಿಸುತ್ತವೆ ಎಂದರೆ ತಪ್ಪಾಗಲಾರದು. ಉದಾಹರಣೆಗಾಗಿ ವೈದ್ಯರು ರೋಗಿಗಳಾದರೆ! ಎಂಬ ಲೇಖನದಲ್ಲಿ ಬರುವ ಎರಡು ವಾಕ್ಯ ನನ್ನ ಮನಸ್ಸಿಗೆ ತುಂಬಾ ಹಿಡಿಸಿತು. ಸುಖ ಜೀವನ ಮಾಡುವವರು ಚೆಕ್ ಅಪ್‌ಗೆ ಹೋಗುವುದು ಅಧಿಕ ಪ್ರಸಂಗತನ ಇದು ನಿಜವೆಂದು ನನಗೂ ಒಮ್ಮೆ ಅನಿಸಿದೆ.

ಇಲ್ಲಿಯ ಲೇಖನಗಳನ್ನು ಲೇಖಕರು ಕೇವಲ ಒಂದೆರಡು ರೋಗಿಗಳ ಬಗ್ಗೆ ಬರೆದಿರುತ್ತಾರೆ. ತಮ್ಮಲ್ಲಿ ಬರುವ ರೋಗಿಗಳಲ್ಲಿ ಮರೆಯಲಾಗದ ರೋಗಿಗಳ ಬಗ್ಗೆ ಬರೆಯುತ್ತಾ ಹೋದರೆ ಸಾವಿರಾರು ಪುಟಗಳ ಪುಸ್ತಕವನ್ನು ಒಬ್ಬೊಬ್ಬ ಲೇಖಕರಿಂದ ಬರುತ್ತದೆ ಎಂದು ತಿಳಿದಿದ್ದೇನೆ. ಏಕೆಂದರೆ ವೈದ್ಯಕೀಯ ವೃತ್ತಿಯೇ ರೋಗಿಗಳೊಂದಿಗೆ ಕಳೆಯುವುದಿದೆ. ದಿನದ ಅನೇಕ ಗಂಟೆಗಳ ಕಾಲ ತಮ್ಮ ಸ್ವಂತದ ಸುಖ-ದುಃಖಗಳನ್ನು ಬದಿಗೊತ್ತಿ ರೋಗಿಗಳ ಶುಶ್ರೂಷೆಯಲ್ಲೆ ತೊಡಗಿರುತ್ತಾರೆ. ಇಲ್ಲಿ ಬರುವ ಅನೇಕ ರೋಗಿಗಳು ಮರೆಯಲಾಗದ ರೋಗಿಗಳೆ ಆಗುತ್ತಾರೆ. ಅಂಥ ಮರೆಯಲಾಗದ ರೋಗಿಗಳಲ್ಲೇ ಕೆಲವನ್ನು ಬರೆದು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ, ಇಲ್ಲಿಯ ೨೮ ವೈದ್ಯ ಲೇಖಕರು.

ಕೆಲವು ರೋಗಿಗಳು ವೈದ್ಯರ ಸ್ಮೃತಿ ಪಟಲದಿಂದ ಮಾಸಿಹೋಗಿರುತ್ತಾರೆ. ಅನೇಕ ವರ್ಷಗಳ ನಂತರ ಒಂದಿನ ಅವರು ಭೇಟಿ ಆಗಿ ‘ಡಾಕ್ಟರ್ ನಾ ನಿಮ್ಮ ರೋಗಿ. ಗುರುತು ಹತ್ತಲಿಲ್ಲವೆ?’ ಎಂದು ಕೇಳಿದಾಗ ವೈದ್ಯರಿಗೆ ಈ ರೋಗಿ ನೆನಪಾಗಿ ಸಾವಿನ ದವಡೆಯಲ್ಲಿದ್ದವನು ಬದುಕುಳಿದವನು ಎಂದು ಕಂಡಾಗ ವೈದ್ಯರಿಗೆ ಆದ ಆನಂದ ಎಷ್ಟು ಎಂಬುದನ್ನು ಕೆಲ ಲೇಖನಗಳನ್ನು ಓದಿ ತಿಳಿದುಕೊಂಡೆ. ನಿಜ ಅಂಥ ಘಟನೆಗಳು ಮರೆಯಲು ಸಾಧ್ಯವೇ?

ರೋಗ ವಾಸಿಯಾಗಲಾರದೆಂದು ತಿಳಿದು ನೀವೇ ಪ್ರಯತ್ನ ಮಾಡಿ ಡಾಕ್ಟರೆ, ಸತ್ತರು ನಾ ಇಲ್ಲೆ ಸಾಯುತ್ತೇನೆಂದು ಬಂದ ರೋಗಿ ಗುಣಮುಖನಾಗಿ ಹೋದಾಗ ವೈದ್ಯರು ಆ ರೋಗಿಯನ್ನು ಮರೆಯಲಾರರು ಹಾಗೆ ರೋಗಿಯು ಆ ವೈದ್ಯರನ್ನು ಮರೆಯಲಾರರು.

ಮಾನಸಿಕ ರೋಗಿಗಳು ತಜ್ಞರ ಲೇಖನಗಳನ್ನು ಓದುವಾಗ, ಆ ಮಾನಸಿಕ ರೋಗಿಗಳ ಬಗ್ಗೆ ಅಯ್ಯೋ! ಎಂದು ಅನಿಸುವುದು ಸಹಜ, ಹಾಗೂ ಆ ವೈದ್ಯರ ಬಗ್ಗೆಯೂ ಅಯ್ಯೋ! ಪಾಪ! ಎಂದು ನಾನು ಅಂದಿದ್ದೇನೆ. ಆ ರೋಗಿಗಳು ವೈದ್ಯರನ್ನೇ ಕೊಲೆ ಮಾಡಲು ಹೋದಾಗ, ಪಾಪ! ಇವರ ವೃತ್ತಿ ಎಂದು ಅನ್ನದೇ ಇರಲು ಸಾಧ್ಯವೆ!

ವೈದ್ಯರು ಕೇವಲ ಹನ ಗಳಿಸುವವರು ಎಂದು ತಿಳಿದವರು ಈ ಪುಸ್ತಕವನ್ನು ಓದಲೇಬೇಕು. ಅವರೂ ಮಾನವರು. ಪ್ರೀತಿ ಅಂತಃಕರಣ ಅವರಲ್ಲೂ ಇದೆ. ರೋಗಿಗಳನ್ನು ಗುಣಪಡಿಸುವುದರಲ್ಲಿ ಅವರು ಪಡುವ ಕಷ್ಟಗಳನ್ನು ಓದುವಾಗ ವೈದ್ಯರ ಬಗ್ಗೆ ನಮಗೆ ಅರಿವಿಲ್ಲದೆ ಗೌರವ ಹೆಚ್ಚುತ್ತದೆ. ಅವರು ದೇವತಾ ಸ್ವರೂಪಿಗಳಾಗಿ ಕಾಣುತ್ತಾರೆ. ವೈದ್ಯ ನಾರಾಯಣೋ ಹರಿ! ಎಂದು ನಮ್ಮ ಹಿರಿಯರು ಹೇಳಿದ ಮಾತಿನಲ್ಲಿ ಸತ್ಯಾಂಶವಿದೆ ಎಂದು ಈ ಲೇಖನಗಳನ್ನು ಓದಿದ ಮೇಲೆ ಓದು ಅನ್ನದೇ ಇರಲಾರ.

ಮರೆಯಲಾಗದ ರೋಗಿಗಳು ಪ್ರಕಟಿಸಿದ ಕನ್ನಡ ವೈದ್ಯಸಾಹಿತ್ಯ ಪರಿಷತ್ತು ಬೆಂಗಳೂರು ಇವರಿಗೆ, ಹಾಗೂ ಲೇಖನಗಳನ್ನು ೨೮ ಲೇಖಕರಿಂದ ಸಂಪಾದಿಸಿದ ಪುಸ್ತಕದ ಸಂಪಾದಕರಾದ ಡಾ| ಸಿ.ಆರ್. ಚಂದ್ರಶೇಖರ್‌ರವರಿಗೆ ಅಭಿನಂದಿಸಲೇಬೇಕು. ಅದಲ್ಲೆ ಇಂಥ ಸಿಹಿಕಹಿ ಒಗರು, ಹುಳಿ, ಖಾರ ಇರುವ ಘಟನೆಗಳನ್ನು ನಮ್ಮ ಕೈಗೆ ಮುಟ್ಟಿಸಲು ಧನಸಹಾಯ ಮಾಡಿದ ರಾಮಸುಧಾ ಚಾರಿಟೇಬಲ್ ಟ್ರಸ್ಟಿನವರಿಗೂ ಅಭಿನಂದಿಸದೆ ಇರಲಾರೆ. ಒಟ್ಟಾರೆ ಜನಸಾಮಾನ್ಯರು ಹಾಗೂ ವೈದ್ಯರು ಓದಲೇಬೇಕಾದ ಪುಸ್ತಕ ಇದಾಗಿದೆ.

* * *