ನಾಗಾಲೋಟದ ಬದುಕು, ಓಟದ ದಾರಿ
ಓಟವೇ ಗುರಿ, ಗದ್ದಲದ ಪರಿಸರ
ತನುವು ವಿರಮಿಸದು, ಮನವು ಧೇನಿಸದು
ಮನಸ್ಸು ದಿಶೆಗೆಟ್ಟ ಒಂಟಿ ಹಕ್ಕಿ,

ಇರುವುದನು, ಇರುವಂತೆಯೇ, ಒಪ್ಪಿ ಒಪ್ಪಿಸಿಕೊಳ್ಳಲು
ಬಿಡದು ಅವಸರದ ಬದುಕು; ಬಿಮ್ಮು ಬಿಗುಮಾನ ಬೇರೆ!
ನೋಯುವುದು ಸಂಬಂಧ, ತೋಯುವುದು ಮನಸು
ಮನುಜ ಮನುಜರ ನಡುವಿನ ಕುಸುರಿಯಂತಹ ಅನುಬಂಧ

ಹಸಿರು ಚಿಗುರಿನ ಮೇಲೆ ಕಾರ್ಮಳೆ
ಧಗಧಗಿಸೆ ಉಳಿಯುವುದೆ ಹೂಮನಸು
ಅರಳುವುದೆ, ಗಂಧ ಪಸರಿಸುವುದೆ
ಸ್ವಸ್ಥವಾಗಿ? ಸಹಜವಾಗಿ?

ಮನೆಜನಕೆ ಎರವಾಗಿ, ದೇವರಿಗೆ ಬೇಡದ
ವಿಕಲ್ಪರಿಗೆ ಯಾರು ತಾಯಿ?
ಯಾರು ದೇವರು??

ದೇವ ತಾನಿರಲಾರ ಎಲ್ಲೆಲ್ಲು ಜಗದೊಳಗೆ
ವಾತ್ಸಲ್ಯದೇವಿ ತಾಯವನ ಪ್ರತಿರೂಪವಂತೆ
ಅರಿವು ಮರೆತಿಹ ತ್ಯಕ್ತ ಮನಸುಗಳಿಗೆ
ಇರುವನೊಬ್ಬ ಹರಿಕಾರ
ಕೂಪದಲಿ ಕೈಬಿಡದ ಭರವಸೆಯ ಜೊತೆಗಾರ

ಬೇಗುದಿಗೆ ಹೆಗಲಾಗಿ, ಒಳಗುದಿಗೆ ಕಿವಿಯಾಗಿ,
ದಾರಿ ತೋರುವುದು ಅರಿವು ಹಣತೆಯ ಹಿಡಿದು
ಕತ್ತಲಲ್ಲಿ ಕುಗ್ಗಿರುವ ಮನವ ನೇವರಿಸಿ
ಮನದಾಳದ ನೋವು ಹೀರಿ ನಗೆಯ ಅರಳಿಸುವ
ಸಿ.ಆರ್.ಸಿ ಸಂತತಿ ಸಾವಿರವಾಗಲಿ
ಅರಿವು ಹಣತೆಯ ಜ್ಯೋತಿ ಉರಿಯಲಿ ನಿರಂತರ.

* * *