ಪ್ರಜಾವಾಣಿ ಪತ್ರಿಕೆಯಲ್ಲಿ ಸಿ.ಆರ್.ಸಿ.ಯವರನ್ನು ಕುರಿತಂತೆ ಒಂದು ಅಭಿನಂದನಾ ಗ್ರಂಥವನ್ನು ಹೊರತರುತ್ತಿರುವ ಬಗ್ಗೆ ಓದಿದೆ. ನಾನು ನನ್ನ ಅನಿಸಿಕೆಗಳನ್ನು ನಿಮ್ಮೊಡನೆ ಹಂಚಿಕೊಳ್ಳುವ ಉದ್ದೇಶದಿಂದ ನಿಮಗೆ ಈ ಪತ್ರ ಬರೆಯುತ್ತಿದ್ದೇನೆ.

ನನಗೆ ಈಗ ೫೧ ವರ್ಷ. ಮದುವೆಯಾಗಿ ೨೨ ವರ್ಷ ಕಳೆದಿದೆ. ನಾನು ಕಳೆದ ೨೫ ವರ್ಷಗಳಿಂದ ಸಿ.ಆರ್. ಸಿ. ಯವರ ಲೇಖನಗಳನ್ನು ಹಾಗೂ ಪುಸ್ತಕಗಳನ್ನು ಓದುತ್ತಾ ಬಂದಿದ್ದೇನೆ. ನಾನು ಯಾವುದೇ ಒಂದು ಪುಸ್ತಕದ ಬಗ್ಗೆ ಬರೆಯುವುದಿಲ್ಲ. ಅವರ ಒಟ್ಟಾರೆ ಬರಹದ ಬಗ್ಗೆ ಬರೆಯುತ್ತಿದ್ದೇನೆ. ಅವು ನನ್ನ ಮನಸ್ಸಿನ ಮೇಲೆ ಪರಿಣಾಮವನ್ನು ಬೀರಿವೆ.

ನಾನು ಬ್ರಹ್ಮಚಾರಿಯಾಗಿದ್ದೆ. ಹರೆಯದ ಕಾವಿನ ಎಷ್ಟೋ ವಿಷಯಗಳನ್ನು ಯಾರೊಡನೆಯೂ ಚರ್ಚಿಸಲಾರದವನಾಗಿದ್ದೆ. ಲೈಂಗಿಕತೆಗೆ ಸಂಬಂಧಿಸಿದ ಹಾಗೆ ಯಾವುದು ತಪ್ಪು, ಯಾವುದು ಸರಿ ಎಂದು ತಿಳಿಯದೆ ಬಳುತ್ತಿದ್ದೆ. ಆಗ ಸಿ.ಆರ್.ಸಿ.ಯವರು ‘ರತಿ ವಿಜ್ಞಾನ’ದಲ್ಲಿ ಲೇಖನಗಳನ್ನು ಬರೆಯುತ್ತಿದ್ದರು. ಅವನ್ನು ಓದಿದೆ. ನಮ್ಮ ಮನಸ್ಸಿನಲ್ಲಿ ಇರುವ ಎಲ್ಲ ಸಂದೇಹಗಳಿಗೆ ಇವರು ಎಷ್ಟು ಸರಳವಾಗಿ ಉತ್ತರ ಸಮಾಧಾನ ನೀಡುತ್ತಾರಲ್ಲ ಎಂದು ಸಂತೋಷವಾಯಿತು. ನನ್ನ ಕುತೂಹಲಗಳಿಗೆ ಸಿ.ಆರ್.ಸಿ.ಯವರ ಲೇಖನಗಳಲ್ಲಿ ಪರಿಹಾರ ಸಿಗುತ್ತಿತ್ತು, ಸಮಾಧಾನವಾಗುತ್ತಿತ್ತು. ಇದೆಲ್ಲ ೮೦ ರ ದಶಕದ ಕಥೆ.

೯೦ ದಶಕದಲ್ಲಿ ಸಿ.ಆರ್.ಸಿಯವರು ಕರ್ಮವೀರ ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯಲಾರಂಭಿಸಿದರು. ಅವು ಅದ್ಭುತವಾಗಿರುತ್ತಿದ್ದವು. ಜೀವನದ ಬೇಕು ಬೇಡುಗಳನ್ನು ಮನಸ್ಸಿಗೆ ನಾಟುವಂತೆ ಬರೆಯುತ್ತಿದ್ದರು. ಬದುಕನ್ನು ರೂಪಿಸಿಕೊಳ್ಳಲು ಇರುವ ನಾನಾ ಅವಕಾಶಗಳ ಬಗ್ಗೆ, ಮಾರ್ಗಗಳ ಬಗ್ಗೆ ಬರೆಯುತ್ತಿದ್ದರು. ಶರೀರದ ಪ್ರತಿಯೊಂದು ಅಂಗದ ಬಗ್ಗೆ, ಅಂಗಗಳ ಆರೋಗ್ಯದ ಬಗ್ಗೆ. ನಮ್ಮ ಆಹಾರದ ಬಗ್ಗೆ, ನಮ್ಮ ನಡೆನುಡಿಗಳ ಬಗ್ಗೆ ಬರೆಯುತ್ತಿದ್ದರು. ಅವರ ಬರಹ ಅತ್ಯಂತ ಸರಳವಾಗಿರುತ್ತಿತ್ತು. ನೇರವಾಗಿರುತ್ತಿತ್ತು.

ನಾನು ೫-೬ ವರ್ಷ ಕಾಲ ರಾಜ್ಯದಿಂದ ಹೊರಗಿದ್ದೆ. ಆ ಅವಧಿಯಲ್ಲಿ ಸಿ.ಆರ್.ಸಿ.ಯವರ ಬರಹದ ಬಗ್ಗೆ ಹೆಚ್ಚು ಓದಲು ಆಗಲಿಲ್ಲ. ೨೦೦೭ರಲ್ಲಿ ಬೆಂಗಳೂರಿಗೆ ವರ್ಗವಾಗಿ ಬಂದೆ. ಆಗ ಸಿ.ಆರ್.ಸಿ.ಯವರನ್ನು ಭೇಟಿಯಾಗುವ ನನ್ನ ಬಹುದಿನಗಳ ಆಸೆ ಮತ್ತೆ ಗರಿಗೆದರಿತು. ಒಂದು ದಿನ ರಜೆ ಹಾಕಿ ಬೆಳ್ಳಂಬೆಳಿಗ್ಗೆ ನಿಮ್ಹಾನ್ಸ್‌ಗೆ ಹೋದೆ. ಸಿ.ಆರ್.ಸಿ.ಯವರು ಎಲ್ಲಿ ಸಿಗುತ್ತಾರೆ ಎಂದು ವಿಚಾರಿಸಿದೆ. ಅವರ ಕೊಠಡಿಯ ಮುಂದೆ ಕಾಯುತ್ತಾ ಕುಳಿತೆ. ಮಧ್ಯಾಹ್ನದ ಊಟಕ್ಕೆ ಖೋತಾ ಆಯಿತು. ಸಂಜೆ ೪-೩೦ ಕ್ಕೆ ಬಂದರು. ನನ್ನ ಹಾಗೆ ಅವರಿಗಾಗಿ ಹಲವಾರು ಕಾಯುತ್ತಿದ್ದರು. ಸಿ.ಆರ್.ಸಿಯವರು ಅವರನ್ನೆಲ್ಲ ನೋಡಿಯಾದ ಮೇಲೆ ನಾನು ಓಳಹೋದೆ. ನನ್ನ ಕಡೆ ನೋಡಿ ‘ಹೇಳಿ’ ಎಂದರು. ಅವರನ್ನು ನೇರವಾಗಿ ನೋಡಿ ನನಗೆ ಮನವು ತುಂಬಿ ಬಂದಿತು.

ಲೇಖನಗಳ ಮೂಲಕ ನನ್ನ ಮಾನಸಿಕ ಗೆಳೆಯರಾಗಿದ್ದ ಸಿ.ಆರ್.ಸಿಯವರಿಗೆ ವಂದಿಸಿದೆ. ಸಿ.ಆರ್.ಸಿ.ಯವರದ್ದು ಸಮಚಿತ್ತ. ಏರುತಗ್ಗುಗಳಿರದ ಸಮಾಧಾನದ ವ್ಯಕ್ತಿ. ಹೊಸದೇನು ಬರೆದಿದ್ದೀರಿ ಎಂದು ಕೇಳಿದೆ. ಅವರು ಕಪಾಟುಗಳ ಕಡೆ ತೋರಿಸಿದರು. ಕಪಾಟಿನಲ್ಲಿ ಪುಸ್ತಕಗಳನ್ನು ಜಾಲಾಡಿದೆ. ನನಗೆ ಬೇಕಾದ ಎಲ್ಲ ಪುಸ್ತಕಗಳನ್ನು ಹೆಕ್ಕಿ ಅವರ ಮುಂದಿಟ್ಟೆ ಅವರು ಎಲ್ಲ ಪುಸ್ತಕಗಳನ್ನು ನೋಡಿದರು. ನಿಮಗೆ ಬೇಕಾದ ವಿಷಯ ಈ ಪುಸ್ತಕದಲ್ಲಿದೆ. ಇದು ಒಂದೇ ಸಾಕು ಎಂದರು. ಅರಕೆರೆಯ ಆಪ್ತಸಲಹಾ ಕೇಂದ್ರಕ್ಕೆ ಬರುವಂತೆ ಆಹ್ವಾನ ನಿಡಿದರು. ಬಸವನಗುಡಿಯ ಆಪ್ತಸಲಹಾ ಕೇಂದ್ರಕ್ಕೆ ಹೊರಡಲು ಸಿದ್ಧವಾದರು. ಸಿ.ಆರ್.ಸಿ.ಯವರೊಡನೆ ಕಳೆದ ೪೦-೫೦ ನಿಮಿಷಗಳು ನನಗೆ ಖುಷಿ ಕೊಟ್ಟಿತು.

ಸಿ.ಆರ್.ಸಿ.ಯವರಿಂದ ಸಾಕಷ್ಟು ಪುಸ್ತಕಗಳನ್ನು ತಂದಿದ್ದೆ, ಸಿ.ಆರ್.ಸಿಯವರ ಬದುಕಿಗೆ ಬಗ್ಗೆ ನನಗೆ ಕುತೂಹಲವಿತ್ತು. ಹಾಗಾಗಿ ಅವರ ‘ಹಿತ-ಅಹಿತ’ ಪುಸ್ತಕವನ್ನು ಮೊದಲು ಓದಿದೆ. ನಂತರ ಎಲ್ಲ ಪುಸ್ತಕಗಳನ್ನು ೫-೬ ದಿನಗಳ ಅವಧಿಯಲ್ಲಿ ಓದಿದೆ. ‘ಹಿತ-ಅಹಿತ’ ಓದಿದ ನಂತರ ಸಿ.ಆರ್.ಸಿಯವರು ನನಗೆ ಮತ್ತಷ್ಟು ಹತ್ತಿರವಾದರು ಎಂದು ಅನಿಸಿತು.

ಇದುವರೆಗೂ ನನ್ನ ವೈಯಕ್ತಿಕ ವಿಚಾರಗಳಾದವು. ಸಿ.ಆರ್.ಸಿಯವರನ್ನು ಏಕೆ ಅಭಿನಂದಿಸಬೇಕು ಎನ್ನುವುದು ಮುಖ್ಯವಲ್ಲವೆ! ಒಬ್ಬ ವ್ಯಕ್ತಿ ಅಭಿನಂದನೆಗೆ ಅರ್ಹನಾಗಲು ಯಾವುದಾದರೂ ಒಂದು ಮಾಪನವಿರಬೇಕಲ್ಲವೆ!

ವೈಯಕ್ತಿಕ ಸಾಧನೆ: ಯಾವುದಾದರೂ ಒಂದು ಕ್ಷೇತ್ರದಲ್ಲಿ ಅಸೀಮ ಸಾಧನೆಯನ್ನು ಮಾಡುವುದು.  ಉದಾ: ಸಂಗೀತ, ಕ್ರೀಡೆ, ವಿಜ್ಞಾನ, ಇತ್ಯಾದಿ ಇವರು ತಮ್ಮ ಸಾಧನೆಯಿಂದ ಜನಸಾಗರದಲ್ಲಿ ಎದ್ದು ಕಾಣುತ್ತಾರೆ.

ಸಂಘ-ಸಂಸ್ಥೆಗಳ ಮೂಲಕ ಸಾಧನೆ: ಕೆಲವರು ಸಂಘ ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಸಮಾಜದ ನಿರ್ದಿಷ್ಟ ವರ್ಗಗಳ ಒಳಿತಿಗಾಗಿ ಶ್ರಮಿಸುವರು. ಇದಕ್ಕಾಗಿ ಸ್ವಂತ ಹಣವನ್ನು ಖರ್ಚು ಮಾಡಬಹುದು. ಇಲ್ಲವೇ ಇತರರ ಹಣವನ್ನು ಬಳಸಿಕೊಳ್ಳಬಹುದು.

ಧರ್ಮ, ಜಾತಿ, ಮಠ, ಸ್ವಾಮಿಗಳ ಸೇವಾ ಸಾಧನೆ : ಕೆಲವರು ನಿರ್ದಿಷ್ಟ ಧರ್ಮ ಇಲ್ಲವೇ ಜಾತಿಗಾಗಿ ದುಡಿಯುವರು. ಮಠಗಳಿಗೆ ಇಲ್ಲವೇ ಸ್ವಾಮಿಗಳಿಗೆ ನಿಷ್ಠರಾಗಿದ್ದು ಸೇವೆ ಮಾಡಬಹುದು.

ಇವೂ ಮೂರು ಸಾಧನೆಯೆ! ಆದರೆ ಅವನ್ನು ಹತ್ತಿರದಿಂದ ನೋಡೋಣ.

–          ಮೊದಲನೆಯದು ವೈಯಕ್ತಿಕ ಸಾಧನೆ. ಈ ಸಾಧನೆಯಿಂದ ವ್ಯಕ್ತಿಗೆ ಸಂತೋಷವಾಗುತ್ತದೆ. ಇದರಿಂದ ಸಮಾಜಕ್ಕೆ ನೇರ ಒಳಿತಾಗದಿರಬಹುದು.

–          ಎರಡನೆಯ ಪ್ರಕಾರದ ಸಾಧನೆ ದ್ವಂದ್ವಮಯ. ಸಂಘ ಸಂಸ್ಥೆಗಳಿಗೆ ಖರ್ಚು ಮಾಡುವ ಹಣವನ್ನು ಸಮಂಜಸ ಮಾರ್ಗದಲ್ಲಿ ಸಂಪಾದನೆ ಮಾಡದಿರಬಹುದು. ಪಾಪಭೀತಿಯಿಂದ ಹಣ ದಾನ ಮಾಡಿರಬಹುದು. ಸ್ವಜಾತಿ ವ್ಯಾಮೋಹದಿಂದ ಮಾಡಿರಬಹುದು. ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಸಹಾಯ ಮಾಡಿರಬಹುದು. ಅನ್ಯರ ದೃಷ್ಟಿಯಲ್ಲಿ ಸಾಧಕರಾಗಿದ್ದರೂ, ವಾಸ್ತವದಲ್ಲಿ ನಿಜಕ್ಕೂ ಸಾಧನೆಯನ್ನು ಮಾಡಿದ್ದಾರೆಯೇ ಎಂದು ಪ್ರಶ್ನೆ ಕೇಳಿದರೆ ಅದಕ್ಕೆ ಖಚಿತ ಉತ್ತರವನ್ನು ಕೊಡುವುದು ಕಷ್ಟವಾಗುತ್ತದೆ.

–          ಮೂರನೆಯ ಸಾಧನೆಯ ಬಗ್ಗೆ ಮಾತನಾಡದಿರುವುದೇ ಲೇಸು. ಧರ್ಮ, ಮಠ, ಸ್ವಾಮೀಜಿಗಳು ಮನುಷ್ಯ ಮನುಷ್ಯರ ನಡುವೆ ಪ್ರೀತಿ-ನಂಬಿಕೆಗಳು ಏಕೆ ಕಾಣೆಯಾಗಿವೆ ಎಂಬುದನ್ನು ಹುಡುಕಿ, ಅವನ್ನು ಬೆಳೆಯುವಂತೆ ಮಾಡದೆ ಎಲ್ಲ ರೀತಿಯ ವ್ಯರ್ಥಕಾರ್ಯಗಳಲ್ಲಿ ಸಮಯವನ್ನು ನಷ್ಟ ಮಾಡುತ್ತಾರೆ.

ಸಿ.ಆರ್.ಸಿಯವರ ಸಾಧನೆ ಮೇಲಿನ ಮೂರು ಗುಂಪುಗಳಲ್ಲಿ ಬರುವುದಿಲ್ಲ. ಅವರು ಅಂತಹ ಸಾಧನೆಯನ್ನು ಮಾಡಿದ್ದಾರೆ ಎಂದು ನನ್ನ ಅನಿಸಿಕೆಗಳನ್ನು ಈಗ ನಿಮ್ಮ ಮುಂದಿಡುತ್ತೇನೆ :

–          ಸಿ.ಆರ್.ಸಿ.ಯವರ ಗುರಿ ವ್ಯಕ್ತಿತ್ವ ವಿಕಾಸ : ಸಮಾಜದಲ್ಲಿ  ಕುಟುಂಬಗಳಿರುತ್ತವೆ. ಅ ಕುಟುಂಬಗಳು ಹೇಗೆ ವರ್ತಿಸುತ್ತವೆಯೋ, ಹಾಗೆಯೇ ಆ ಸಮಾಜವೂ ವರ್ತಿಸುತ್ತದೆ. ಕುಟುಂಬದಲ್ಲಿ ವ್ಯಕ್ತಿಗಳು ಇರುತ್ತಾರೆ. ವ್ಯಕ್ತಿಗಳು ವೈಯಕ್ತಿಕ ವಿಕಾಸಕ್ಕೆ ಅನುಗುಣವಾದ ಕುಟುಂಬಗಳು ವಿಕಾಸ ಹೊಂದುತ್ತವೆ. ವ್ಯಕ್ತಿತ್ವ ಎನ್ನುವುದು ಬುದ್ಧಿ, ಮನಸ್ಸು, ಅನುಭವಗಳ ಹೂರಣ.

ಸಿ.ಆರ್.ಸಿ.ಯವರು ವೈದ್ಯಕೀಯ ವಿಷಯಗಳನ್ನು, ವ್ಯಕ್ತಿತ್ವ ವಿಕಸನವನ್ನು ನಾವು ನೀವು ಮಾತನಾಡುವ ಸರಳ ಶಬ್ದಗಳಲ್ಲಿ ತಿಳಿಸುತ್ತಾರೆ.

–          ಹದಿಹರೆಯದವರಲ್ಲಿ ಮಾಹಿತಿ ಕೊರತೆಯಿರತ್ತದೆ. ಲೈಂಗಿಕತೆಯ ಬಗ್ಗೆ ಭಯ, ಕುತೂಹಲಗಳಿರುತ್ತವೆ. ಇವೆಲ್ಲ ಗೋಪ್ಯ ವಿಚಾರಗಳು. ಶರೀರವು ಮನಸ್ಸಿನ ಎಚ್ಚರಿಕೆಗಳನ್ನು ಉಲ್ಲಂಘಿಸಿ ವಿಚಲಿತವಾದಾಗ ಸಿ.ಆರ್.ಸಿಯವರ ಲೇಖನಗಳು ಅಪ್ತಸಖ – ಸಖಿಯರಂತೆ ಆಪ್ತ ಸಲಹೆಯನ್ನು ನೀಡುತ್ತವೆ. ಓಹ್! ಹರೆಯದ ಗೊಂದಲ ನನಗೆ ಮಾತ್ರವಲ್ಲ ಎಂದು ಸಮಾಧಾನ ನೀಡುತ್ತವೆ.

–          ವಿದ್ಯಾರ್ಥಿಗಳು ವಿದ್ಯೆಯನ್ನು ಅರ್ಜಿಸುವ ವೇಳೆಯಲ್ಲಿ ಹದಿ ಹರೆಯದ ಕನಸುಗಳಲ್ಲಿ ಮುಳುಗಿ ಭವಿಷ್ಯವನ್ನು ಹಾಳುಮಾಡಿಕೊಳ್ಳುವುದು ಸಾಮಾನ್ಯ. ಗೆಳೆಯರ ಗುಂಪೂ ಸಹ ಅದೇ ಹಾದಿಯಲ್ಲಿದ್ದರೆ, ಮನಸ್ಸು ಹಾದಿ ತಪ್ಪುವುದು ಸಹಜ ಎಚ್ಚರದಪ್ಪುವುದು ಸಹಜ. ಇದು ಭವಿಷ್ಯವನ್ನು ಅಂಧಕಾರದಲ್ಲಿ ಮುಳುಗಿಸಬಹುದು. ಇಂತಹ ಡೋಲಾಯಮಾನ ಸ್ಥಿತಿಯಲ್ಲಿ ಸಿ.ಆರ್.ಸಿ.ಯವರ ಲೇಖನಗಳು ಯುವಜನರ ಕೈ ಹಿಡಿದು ನಡೆಸುತ್ತವೆ.

–          ಮಹಾನಗರದಲ್ಲಿ ಹಿಂಸಾಚಾರಗಳು ನಡೆಯುತ್ತಿವೆ. ಮನುಷ್ಯ ಮನುಷ್ಯನ ಮೇಲೆ ಎರಗುತ್ತಿರುವನು. ಆಕ್ರಮಣ ಮಾಡುತ್ತಿರುವನು. ಇವೆಲ್ಲಕ್ಕೂ ಮೂಲ ಕಾರಣ ಅವರ ವ್ಯಕ್ತಿತ್ವ ವಿಕಾಸದ ಕೊರತೆ – ಇದನ್ನು ಸಿ.ಆರ್.ಸಿ.ವರ ಲೇಖನಗಳು ಸ್ಪಷ್ಟವಾಗಿ ತಿಳಿಸುತ್ತವೆ.

–          ಬದುಕು ದುಸ್ತರ ನಿಜ. ಎಷ್ಟು ದುಡಿದರೂ ಮಹಾನಗರದಲ್ಲಿ ಸಾಲದು. ಅದೂ ನಿಜ. ಆದರೆ ದುಡಿಮೆಯೊಂದೇ ಬದುಕಲ್ಲ. ಸಿ.ಆರ್.ಸಿ.ಯವರ ಲೇಖನಗಳನ್ನು ಓದಿ. ಜೀವನವನ್ನು ಅರ್ಥಮಾಡಿಕೊಳ್ಳಿ. ಜೀವನದಲ್ಲಿ ದುಡಿತ ತರುವ ಸಂತೋಷಕ್ಕಿಂತ ಮಿಗಿಲಾದ ಅನೇಕ ಸಂತೋಷಗಳಿವೆ.

–          ಕುಟುಂಬದಲ್ಲಿರುವ ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಅವರ ಶೈಕ್ಷಣಿಕ ಹಿನ್ನೆಲೆ. ಬೆಳೆದು ಬಂದ ವಾತಾವರಣ, ಅವರ ಜೀವನಾನುಭವ ಭಿನ್ನ ಭಿನ್ನವಾಗಿರುತ್ತದೆ. ಇಂತಹ ಕಾರಣಗಳಿಂದ ಕುಟುಂಬ ಸಾಮರಸ್ಯ ಹಾಳಾಗಬಹುದು. ಗಂಡ ಹೆಂಡಿರಲ್ಲಿ, ಮಕ್ಕಳು-ಹೆತ್ತವರಲ್ಲಿ ಸಂಬಂಧಗಳ ಕೊರತೆ ಏರ್ಪಡಬಹುದು. ಇವೆಲ್ಲ ಸಹಜ. ಆದರೆ ಅವನ್ನು ಹಾಗೆಯೇ ಬಿಡಬಾರದು. ಅವು ಮತ್ತಷ್ಟು ಆಳವಾಗಿ ಬೆಳೆಯದಂತೆ ತಡೆಗಟ್ಟಬೇಕು. ಇದಕ್ಕೆ ಸಿ.ಆರ್.ಸಿ.ಯವರ ಲೇಖನಗಳು ನೆರವಾಗುತ್ತದೆ.

–          ನಾವು ನಮ್ಮ ಮನೆಯನ್ನು ಶುದ್ಧವಾಗಿಟ್ಟುಕೊಳ್ಳುತ್ತೇವೆ. ನಮ್ಮ ದೇಹವನ್ನು ಸ್ವಚ್ಛವಾಗಿಡುತ್ತೇವೆ. ಆದರೆ ನಮ್ಮ ಮನಸ್ಸು-ಬುದ್ಧಿಗಳು ಶೌಚಕ್ಕೆ ನಾವು ಗಮನವನ್ನು ಕೊಡುವುದಿಲ್ಲ. ದೇವರನ್ನು ಜಪಿಸಿದರೆ ಸಾಲದು. ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳಬೇಕು. ಇದಕ್ಕೆ ಸಿ.ಆರ್.ಸಿ.ಯವರ ಲೇಖನಗಳು ನೆರವಾಗುತ್ತವೆ.

–          ನಾವು ವಿಚಾರ ಮಾಡದೇ ನಿರ್ಣಯಕ್ಕೆ ಬರುತ್ತೇವೆ. ಒಬ್ಬ ಹೆಣ್ಣುಮಗಳನ್ನು ವೇಶ್ಯ ಎಂದು ತೆಗಳುವ ಮೊದಲು, ಒಬ್ಬ ಗಂಡಸನ್ನು ಕುಡುಕ ಎಂದು ಹೀಗಳೆಯುವ ಮೊದಲು, ಅವನು ಆ ಸ್ಥಿತಿಗೆ ಬರಲು ಕಾರಣವೇನು ಎಂಬುದರ ಬಗ್ಗೆ ವಿಚಾರಮಾಡುವುಇಲ್ಲ. ಸಿ.ಆರ್.ಸಿ.ಯವರ ಪುಸ್ತಕಗಳನ್ನು ಓದಿದರೆ ಸಂಯಮ ಬೆಳೆಯುತ್ತದೆ. ತೆಗಳುವ ಮನಸ್ಸು ತಿಳಿಯಾಗುತ್ತದೆ.

–          ಗಂಡು ಹೆಣ್ಣುಗಳು ವಯಸ್ಸಿನ ತಾರತಮ್ಯವಿಲ್ಲದೆ ತಮ್ಮ ತಮ್ಮ ವ್ಯಕ್ತಿತ್ವವನ್ನು ಆಗಾಗ್ಗೆ ಸ್ವ ವಿಮರ್ಶೆಗೆ ಒಳಪಡಿಸಿಕೊಳ್ಳಬೇಕು. ತಮ್ಮ ಮನಸ್ಸಿಗೆ ಕನ್ನಡಿ ಹಿಡಿಯಬೇಕು. ಈ ಕೆಲಸವನ್ನು ಮಾಡಲು ಸಿ.ಆರ್.ಸಿ.ಯವರ ಬರಹ ನೆರವಾಗುತ್ತದೆ.

–          ಸಿ.ಆರ್.ಸಿ.ಯವರ ಎಲ್ಲ ಪುಸ್ತಕಗಳು ಗ್ರಾಮಾಂತರ ಪ್ರದೇಶಗಳಲ್ಲಿರುವ ಸರ್ಕಾರೀ ಗ್ರಂಥಾಲಯಗಳಲ್ಲಿ ದೊರೆಯಬೇಕು. ಗ್ರಂಥಾಲಯಗಳಲ್ಲಿ ಕಥೆ, ಕಾದಂಬರಿಗಳ ವಿಭಾಗಗಳಿರುತ್ತವೆ. ಜೀವನ ವಿಧಾನ ಅಥವಾ ಜೀವನ ವಿಜ್ಞಾನ ಎಂಬ ವಿಭಾಗವಿರುವುದಿಲ್ಲ. ಅಂತಹ ಒಂದು ವಿಭಾಗದ ಅಗತ್ಯವಿದೆ. ಅದರಲ್ಲಿ ಸಿ.ಆರ್.ಸಿ.ಯವರ ಪುಸ್ತಕಗಳನ್ನು ಇಡಬೇಕು.

ಸಿ.ಆರ್.ಸಿಯವರು ಅಭಿನಂದನೆಗೆ ಅರ್ಹರು. ಮತ್ತಷ್ಟು ಮಾನವ ಸೇವೆಯನ್ನು ಮಾಡಲು ಭಗವಂತನು ಅವರಿಗೆ ಆಯುರಾರೋಗ್ಯ ಐಶ್ವರ್ಯಗಳನ್ನು ಕೊಡಲಿ ಎಂದು ಹೃದಯಪೂರ್ವಕವಾಗಿ ಪ್ರಾರ್ಥಿಸುತ್ತಿದ್ದೇನೆ.

* * *