ಡಾ| ಸಿ.ಆರ್. ಚಂದ್ರಶೇಖರ್‌ರವರ ‘ಕಷ್ಟ ಮನಸ್ಸಿಗೆ ಕಾಯಿಲೆ ದೇಹಕ್ಕೆ’ ನನಗೆ ತುಂಬಾ ಇಷ್ಟವಾದ ಪುಸ್ತಕ. ಬದುಕನ್ನು ಹೇಗೆ ಸ್ವೀಕರಿಸಬೇಕೆಂದು ಎಲ್ಲಾ ಆಯಾಮಗಳಿಂದ ನೆರವು ನೀಡುತ್ತದೆ ಈ ಪುಸ್ತಕದಲ್ಲಿಯ ಲೇಖನಗಳು ಹಿಂದೆ ಮಾಡಿದ ಕೆಲವು ತಪ್ಪುಗಳಿಂದ ಆದ ಅಪರಾಧಿ ಮನೋಭಾವ. ಜೀವನದಲ್ಲಿಯ ಕಷ್ಟ-ನಷ್ಟಗಳು, ವಿದ್ಯಾರ್ಥಿಗಳ ಪರೀಕ್ಷೆಯ ಭಯ, ಮೂಢನಂಬಿಕೆಗಳ ಬಗ್ಗೆ ಅವೈಜ್ಞಾಇಕತೆ, ಆತಂಕ ಹೀಗೆ ಅನೇಕ ಘಟನೆಗಳಿಂದಾದ ‘ಮನೋದೈಹಿಕ’ ಕಾಯಿಲೆಗಳು ಹಾಗೂ ಅವುಗಳ ಪರಿಹಾರಗಳನ್ನು ಮನಮುಟ್ಟುವಂತೆ ತಿಳಿಸಿದ್ದಾರೆ ಲೇಖಕರು.

ಹತ್ತಾರು ವರ್ಷಗಳಿಂದ ಆರೋಗ್ಯ ಸರಿಯಿಲ್ಲದೆ (ಎಲ್ಲಾ ಚಿಕಿತ್ಸೆ ವಿಫಲವಾಗಿ) ಅದು ಮನಸ್ಸಿಗೆ ಸಂಬಂಧಪಟ್ಟಿರಬಹುದಾದ ಸಮಸ್ಯೆಯಿರಬಹುದೆಂಬ ವಿಚಾರವನ್ನು, ರೋಗಿಗಳಿಂದಲೇ ಬಹಿರಂಗಪಡಿಸಿ, ಅದಕ್ಕೆ ಚಿಕಿತ್ಸೆ, ನಂತರ ಗುಣವಾಗುವುದು ಹೇಗೆ ಎಂಬ ಮಾಹಿತಿ ಇಲ್ಲಿ ತೆರೆದುಕೊಳ್ಳುತ್ತಾ ಸಾಗುತ್ತದೆ.

ಮೈ-ಮನಸ್ಸುಗಳ ಸಂಬಂಧ ಎರಡೂ ಹೊಂದಾಣಿಕೆಯಿಂದ ಕೆಲಸ ಮಾಡುವ ಕುತೂಹಲಕಾರಿ ಅಂಶಗಳನ್ನು ಅತ್ಯಂತ ಮನೋಜ್ಞರಾಗಿ ಮಾಡಿದ್ದಾರೆ ಲೇಖಕರು. ಮನುಷ್ಯನ ಮಿದುಳು, ಜೀರ್ಣಾಂಗಗಳು, ಉಸಿರಾಟದ ವ್ಯವಸ್ಥೆ ಎಲ್ಲಾ ಚಟುವಟಿಕೆಗಳು ಅದರ ಕಾರ‍್ಯವಿಧಾನ, ಒತ್ತಡಗಳಿಂದ ಅವುಗಳ ಮೇಲೆ ಆಗುವ ಪರಿಣಾಮ ಎಲ್ಲವೂ ಬಹಳ ಸರಳವಾಗಿ, ಎಲ್ಲರಿಗೂ ಅರ್ಥವಾಗುವಂತಿವೆ.

ಮೊದಲನೇ ಭಾಗದಲ್ಲಿ ಕಾರಣಾಂತರಗಳಿಂದ ತೊಂದರೆಗೆ ಸಿಕ್ಕಿ ನರಳುತ್ತಿದ್ದವರ ನೈಜ ಘಟನೆಗಳನ್ನು ಪ್ರಸ್ತಾಪಿಸುತ್ತಾ ಮನೋದೈಹಿಕ ಕಾಯಿಲೆಗಳ ಬಗ್ಗೆ ನಿಖರವಾದ ಮಾಹಿತಿ ಹಾಗೂ ಸಲಹೆ ಸಮಾಧಾನಗಳನ್ನು ನೀಡುತ್ತಾರೆ ಈ ಭಾಗವು ಭೋದಪ್ರದವಾಗಿವೆ.

ಇಂದಿನ ಧಾವಂತದ ಜೀವನಶೈಲಿ, ಸ್ವರ್ಧಾಮನೋಭಾವ, ಅತಿಯಾದ ಆಸೆ, ಅದರಿಂದಾದ ನಿರಾಸೆ-ಹತಾಶೆ ಒತ್ತಡಗಳು ಇವುಗಳೇ ಮನೋದೈಹಿಕ ಕಾಯಿಲೆಗಳ ಮೂಲ ಎಂಬುದು ಓದುಗನನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಆಹಾರ-ವಿಹಾರ, ವಿಶ್ರಾಂತಿ-ಮನೋರಂಜನೆ ಹವ್ಯಾಸಗಳು, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದಾಗುವ ಲಾಭಗಳನ್ನು ತಿಳಿಸುತ್ತಾ ‘ಸಕಾರಾತ್ಮಕ’ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಪ್ರೇರಣೆ ನೀಡಿದ್ದಾರೆ.

ನೆಮ್ಮದಿ-ಶಾಂತಿ ಕಳೆದುಕೊಂಡು ಅಸಹಾಯಕತೆ ಭಯದಿಂದ ನರಳುವ ಬದಲು ನೈತಿಕ ಮೌಲ್ಯಗಳನ್ನು ಮೊದಲಿನಿಂದಲೇ ರೂಢಿಸಿಕೊಂಡು, ಅವುಗಳನ್ನು ಪಾಲಿಸುತ್ತಾ ಆತ್ಮಸ್ಥೈರ‍್ಯವನ್ನು ಹೆಚ್ಚಿಸಿಕೊಂಡು ಆರೋಗ್ಯಮಯವಾದ ಕುಟುಂಬ ಜೀವನ ಅದರಿಂದ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ನಮ್ಮ ಪಾತ್ರವನ್ನು ಗುರುತಿಸಿಕೊಳ್ಳುವಲ್ಲಿ ಅತ್ಯಂತ ಸಹಾಯಕಾರಿಯಾಗಿದೆ. ಉಪಯುಕ್ತ ಮಾಹಿತಿಗಳಿಂದ ಕೂಡಿರುವ ಈ ಪುಸ್ತಕ ಸಂಗ್ರಹಯೋಗ್ಯ.

* * *