“ವೈದ್ಯ ಸಾಹಿತ್ಯ ಪುಸ್ತಕಗಳು ಮನೆಯೊಳಗಿದ್ದರೆ ಮನೆಯಲ್ಲೇ ವೈದ್ಯರೇ ಇದ್ದಂತೆ.”

ಆರ್ಥಿಕ, ಶೈಕ್ಷಣಿಕ, ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗ ಮತ್ತು ಕುಟುಂಬದಿಂದ ಬಂದ ನಾನು ಮನೋವೈದ್ಯ, ತಜ್ಞನಾದದ್ದು, ನೂರಕ್ಕೂ ಹೆಚ್ಚಿನ ಪುಸ್ತಕಗಳ ಲೇಖಕನಾಗಿದ್ದು, ಸಾವಿರಾರು ಜನರ ಪ್ರೀತಿ ವಿಶ್ವಾಸ ಗಳಿಸಲು ಸಾಧ್ಯವಾದದ್ದು ವೈದ್ಯನಾಗಿ ಸಂಶೋಧಕನಾಗಿ, ಉಪನ್ಯಾಸಕನಾಗಿ ಜನ ಮನ್ನಣೆ ಗಳಿಸಿದ್ದು ಒಂದು ಅಚ್ಚರಿ.

ಕನ್ನಡದಲ್ಲಿ ಮನೋವೈದ್ಯಕೀಯ ಬರಹಗಳ ಮೂಲಕ ಮನೆಮಾತಾಗಿರುವ ಡಾ| ಸಿ.ಆರ್. ಚಂದ್ರಶೇಖರ್ ಅವರ ಪ್ರಾಮಾಣಿಕ ಮಾತಿದು. ಮೂರು ದಶಕದ ಹಿಂದೆ ಕನ್ನಡದಲ್ಲಿ ಮನೋವಿಶ್ಲೇಷಣೆಗೆ ಸಂಬಂಧಿಸಿದಂತೆ ತಿಳಿವಳಿಕೆ ನೀಡುವ, ಮಾನಸಿಕ, ಅಸ್ವಸ್ಥತೆಯನ್ನು ದೂರ ಮಾಡುವ, ಜನಸಾಮಾನ್ಯರಿಗೆ ಮಾರ್ಗದರ್ಶಿ ಬರಹಗಳ ಕೊರತೆಯನ್ನು ಈ ವೈದ್ಯಬರಹಗಾರರು ತುಂಬಿದರು. ಇಂಗ್ಲಿಷ್‌ನಲ್ಲಿ ಸಾಕಷ್ಟು ಪುಸ್ತಕಗಳಿದ್ದರೂ ಕನ್ನಡದಲ್ಲಿ ವೈದ್ಯಕೀಯ ಬರಹದ ಕೊರತೆಯಿತ್ತು ಎಂಬುದನ್ನು ಡಾ| ಸಿ.ಆರ್. ಚಂದ್ರಶೇಖರ್ ಮನಗಂಡರು. ತಾವು ಆಯ್ದುಕೊಂಡ ವಸ್ತು, ಪುಸ್ತಕ ರೂಪವಾಗಿ ಹೊರಬಂದು ಮತ್ತೆ ಮರುಮುದ್ರಣವಾದಾಗ ಅವರಿಗೆ ಅಚ್ಚರಿ ಕಾದಿತ್ತು. ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿರುವ ಬಂಧಿಗಳಲ್ಲಿ ಕಂಡುಬರುವ ಆತಂಕ ಮತ್ತು ಭಯದ ವಿಶ್ಲೇಷಣೆಯನ್ನು ಮೂವತ್ತು ವರ್ಷಗಳ ಹಿಂದೆಯೇ ಮಾಡಿ. ಮದ್ದು ಮಧ್ಯಪಾನ ದುರ್ಬಳಕೆಯ ಸರ್ವೇಕ್ಷಣಾ ಪ್ರಶ್ನಾವಳಿಯನ್ನು ಅದರ ಅಂತಿಮ ಹಂತದಲ್ಲಿ ಪರಿಷ್ಕರಿಸಲು ನಡೆದ ಕ್ಷೇತ್ರ ಪರೀಕ್ಷೆಯಲ್ಲಿ ಪಾಲ್ಗೊಂಡು ಮಾರ್ಗದರ್ಶನ ಮಾಡಿದ್ದಾರೆ.

ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಲೇಖನ, ಕತೆ, ಕವನ ಬರೆದು- ಸಹಪಾಠಿಗಳಿಂದ ಮೆಚ್ಚುಗೆ ಪಡೆದಿದ್ದರು. ಔಷಧ ಶಾಸ್ತ್ರದ ಪ್ರಾಧ್ಯಾಪಕ ಡಾ| ಡಿ.ಎಸ್. ಶಿವಪ್ಪ ವೈದ್ಯಕೀಯ ಶಾಸ್ತ್ರದ ಬರಹಗಳಿಗೆ ಆಗಲೇ ಜನಪ್ರಿಯರಾಗಿದ್ದರು. ಕನ್ನಡದ ‘ವೈದ್ಯ ಪದಕೋಶ’ ಎಂಬ ತಮ್ಮ ಕೃತಿಕೊಟ್ಟ, ಸಿಆರ್‌ಸಿ ಅವರಿಗೆ ‘ನೀವು ಈ ಕ್ಷೇತ್ರದ ಬಗ್ಗೆ ಬರೆಯಬಲ್ಲಿರಿ’ ಎಂದು ಆತ್ಮವಿಶ್ವಾಸ ತುಂಬಿದರು. ‘ಕ್ಯಾನ್ಸರ್‌ ಬಗ್ಗೆ ನಿಮಗೇನು ತೊಂದರೆ ತಾಯಿ? ಹಾಗೂ ರಕ್ತದಾನ ಮಾಡಿ’ ಲೇಖನಗಳು ಪ್ರಕಟವಾದವು. ಮುಂದೆ ಮನೋವಿಶ್ಲೇಷಣೆಗೆ ಸಂಬಂಧಿಸಿದಂತೆ ಯಾವುದೇ ಲೇಖನ, ಪುಸ್ತಕ ಪ್ರಕಟವಾದರೂ ಜನ ಇವರ ವಿಳಾಸ ಹುಡುಕಿ ಬಂದು ತಮ್ಮ ಅನೇಕ ಸಮಸ್ಯೆ ಹೇಳಿಕೊಂಡು ಪರಿಹಾರಕ್ಕೆ ಮೊರೆ ಇಟ್ಟದ್ದೂ ಉಂಟು.

ಜನರ ಮಾನಸಿಕ ತೊಂದರೆ, ಅವರ ಅನುಭವಗಳ ಮೂಲಕವೇ ಬರಹ ಆರಂಭಿಸಿ ಅವರಿಗಿರುವ ಕಾಯಿಲೆಗಳನ್ನು ಸಾರ್ವಜನಿಕರ ಗಮನಕ್ಕೆ ತಂದು ಅದಕ್ಕೆ ಪರಿಹಾರವನ್ನು ಸೂಚಿಸಿ, ಅವರಲ್ಲಿ ಆತ್ಮವಿಶ್ವಾಸ ಮೂಡಿಸುವುದು ಡಾ|| ಸಿ.ಆರ್‌. ಚಂದ್ರಶೇಖರ್‌ ಅವರ ಬರಹದ ವೈಶಿಷ್ಟ್ಯ. ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗ ೧೯೮೦ ರಲ್ಲಿ ಪ್ರಕಟಿಸಿದ ಅವರ ಮೊದಲ ಪುಸ್ತಕ ‘ಮಗು’ ‘ಮನಸ್ಸು ಮತ್ತು ಆರೋಗ್ಯ’, ಜೈ ಕರ್ನಾಟಕ ಸಾಹಿತ್ಯ ಅಕಾಡೆಮಿ, ಸಮಾಜ ವಿಜ್ಞಾನ, ವಿಭಾಗದಲ್ಲಿ ಪುರಸ್ಕಾರ ನೀಡಿ ಗೌರವಿಸಿತು.

ಯುವ ಜನಾಂಗವನ್ನು ಸದಾ ಕಾಡುವ ಖಿನ್ನತೆ, ಮಾನಸಿಕ ಅಸ್ವಸ್ಥತೆಯ ಕುರಿತು ಅನೇಕ ಉಪನ್ಯಾಸ ನೀಡಿದಲ್ಲದೆ ಈ ಕುರಿತಂತೆ ಉಪಯುಕ್ತ ಮಾಹಿತಿಯ ಪುಸ್ತಕಗಳೂ ಹೊರಬಂದವು. ಬುದ್ಧಿಮಾಂದ್ಯತೆ, ಹದಿ ವಯಸ್ಸು, ಅಸ್ವಸ್ಥ ಮನಸ್ಸು, ಚಿತ್ರ ವೈಚಿತ್ರ‍್ಯದಂಥ ಕೃತಿಗಳು ಮಾನಸಿಕ ಕಾಯಿಲೆ ದೂರವಾಗಲು ಕೈಪಿಡಿಯಾಗಿ ಕೆಲಸ ಮಾಡಿದವು.

ಮನೋರೋಗ ನರದೌರ್ಬಲ್ಯ ಇತ್ಯಾದಿಗೆ ಸಂಬಂಧಿಸಿದ ನಿಮ್ಹಾನ್ಸ್ ಮಾನಸಿಕ ಆಸ್ಪತ್ರೆಯಲ್ಲಿ ವೈದ್ಯರಾಗಿ ಪಡೆದ ಅನುಭವ ಮತ್ತಷ್ಟು ಹೊಸ ಬರಹಕ್ಕೆ ಪ್ರೇರಣೆ ಆಯಿತು. ೧೯೮೫ ರಲ್ಲಿ ೪೮ ಲೇಖನಗಳ ಮನಸ್ಸು ಮತ್ತು ಮಾನಸಿಕ ಅಸ್ವಸ್ಥತೆ’ ಎಂಬ ಗ್ರಂಥ ನಿಮ್ಹಾನ್ಸ್ ಮೂಲಕವೇ ಅದರ ನಿರ್ದೇಶಕರು ಬಿಡುಗಡೆಗೆ ವ್ಯವಸ್ಥೆ ಮಾಡಿದರು. ಅಲ್ಲಿಗಾಗಲೆ ಮಾಹಿತಿ ರವಾನೆಯ ಪುಟ್ಟ ಪುಸ್ತಕಗಳ ಲೆಕ್ಕವೂ ಸೇರಿ ಈ ದೊಡ್ಡ ಪುಸ್ತಕ ೨೫ನೇ ಪ್ರಕಟಣೆಯಾಯಿತು. ನಂತರದ ಎರಡು ದಶಕಗಳ ಕಾಲಘಟ್ಟದಲ್ಲಿ ಇವುಗ ಸಂಖ್ಯೆ ನೂರನ್ನು ದಾಟಿತು, ಬಹುಶಃ ಮನೋವಿಜ್ಞಾನ, ವಿಜ್ಞಾನ ಸಾಹಿತ್ಯದಲ್ಲಿ ಇಷ್ಟೊಂದು ಕೃತಿ ಬರೆದವರಲ್ಲಿ ಇವರೇ ಪ್ರಥಮರು.

ಶಾಲಾ ಕಾಲೇಜು ವಿದ್ಯಾರ್ಥಿಗಳು ಪಠ್ಯ ಓದುವುದು ಕಡಿಮೆ ಆಗಿದೆ. ದೃಶ್ಯ ಮಾಧ್ಯಮಗಳು ಬಹು ಆಕರ್ಷಣೆಯವಾಗಿರುವುದರಿಂದ ಜನ ನೋಡಲು ಇಷ್ಟಪಡುತ್ತಾರೆಯೇ ವಿನಾ ಓದಲು ಆಸಕ್ತರಾಗಿರುವುದಿಲ್ಲ. ಆದ್ದರಿಂದ ವೈದ್ಯ ಸಾಹಿತ್ಯ ಜನರಿಗೆ ತಲುಪಿಸಬೇಕಾದರೆ, ಶಾಲಾ ಕಾಲೇಜುಗಳ ಪಠ್ಯಪುಸ್ತಕದಲ್ಲಿ ಸೇರ್ಪಡೆಯಾಗಬೇಕು” ಎನ್ನುತ್ತಾರೆ ಡಾ| ಸಿ.ಆರ್. ಚಂದ್ರಶೇಖರ್.

* * *