ಜಗತ್ತಿನ ಎಲ್ಲ ಮಹಿಳೆಯರಿಗೂ ತಾವು ಮದುವೆಯಾಗಬೇಕು, ಮುದ್ದಾದ ಮಗುವನ್ನು ಪಡೆಯಬೇಕು ಎಂಬ ಹಂಬಲ ಇದ್ದೇ ಇರುತ್ತದೆ. ಜೀವಿಯೊಳಗೊಂದು ಜೀವ ಉದ್ಭವಿಸುವುದು ಸೃಷ್ಟಿಯ ರೋಚಕ ಕ್ರಿಯೆ. ಹೊಳೆವ ಕಣ್ಣುಗಳನ್ನು ಪಿಳಿ ಪಿಳಿ ಬಿಡುತ್ತಾ ಜಗತ್ತಿಗೆ ಬರುವ ಹಸಿದ ಹೊಟ್ಟೆಯ ಕಂದನಿಗೆ ಅಮ್ಮನ ಅಮೃತ ಕಳಸ ಸರ್ವಸ್ವ. ಅದರ ಬದುಕು ಬಿಚ್ಚಿಕೊಳ್ಳುವುದು ಅಮ್ಮನ ಎದೆಯಲ್ಲಿ ಜಿನುಗುವ ಜೀವದ್ರವದಿಂದಲೇ. ಜೀವಕಳೆ ಪಸರಿಸುತ್ತಾ, ಹಾಲುಗೆನ್ನೆ ತುಂಬಿಕೊಳ್ಳುತ್ತಾ, ಆರೋಗ್ಯದಿಂದ ನಳಿನಳಿಸುತ್ತಾ, ದಷ್ಟ ಪುಷ್ಟವಾಗಿ ಬೆಳೆಯುವುದು ಅಮ್ಮನ ಹಾಲಿನಿಂದಲೇ.

ಅಮ್ಮನ ಹಾಲು ಅಮೃತ. ಹಸುವಿನ ಹಾಲು ಕರುವಿಗೆ, ತಾಯಿಹಾಲು ಮಗುವಿಗೆ. ಇದು ಪ್ರಕೃತಿ ಕರುಣಿಸಿರುವ ಕಾಣಿಕೆ. ಇದು ಎಲ್ಲರಿಗೂ ಗೊತ್ತಿರುವ ನಿರಂತರ ಸತ್ಯ. ಆದಾಗ್ಯೂ ಇಂದಿನ ತಾಯಂದಿರುಗಳಲ್ಲಿ ಅನೇಕರು ಜಾಹೀರಾತಿನ ಮೋಡಿಗೊಳಗಾಗಿ, ಕಪೋಲಕಲ್ಪಿತ ಸೌಂದರ್ಯ ಕಾಳಜಿಯಿಂದಲೇ, ಅಪಕಲ್ಪನೆ ಹಾಗೂ ತಪ್ಪುತಿಳಿವಳಿಕೆಗಳಿಂದ ತೊಳಲಾಡುತ್ತಲೋ ಆಧುನಿಕತೆಯ ಧೋರಣೆಯಿಂದಲೋ ಸ್ತನ್ಯಪಾನ ಸಂಸ್ಕೃತಿ ಎಂಬ ಪರಂಪರೆಗೆ ಶರಣುಹೇಳುತ್ತಾ ಕೀಳುಮಟ್ಟದ ಹಾಲು ನೀಡಿ ಕರುಳ ಕುಡಿಗಳಿಗೆ ಸ್ತನಪಾನ ಸೌಖ್ಯ ಸುಪ್ಪತ್ತಿಗೆಯಿಂದ ವಂಚಿಸುತ್ತಿದ್ದಾರೆ. ನಿದರ್ಶನಗಳು ಅಧ್ಯಯನಗಿಂದ ವೇದ್ಯವಾಗಿವೆ.

ಆರೋಗ್ಯದ ಅಡಿಗಲ್ಲಾಗಿರುವ ತಾಯಿಹಾಲಿನ ಬಗ್ಗೆ ಅಧ್ಯಯನ ಮಾಡಿರುವ ವೈದ್ಯರುಗಳಿಗೆ, ಮಗುವಿಗೆ ತಾಯಿ ಹಾಲೇ ಸೂಕ್ತ. ಇದೇ ಸರ್ವಶ್ರೇಷ್ಠ. ಇದನ್ನು ಬಿಟ್ಟರೆ ಉಳಿದೆಲ್ಲ ಹಾಲು ಆಹಾರಗಳು ಮಗುವಿಗೆ ನಿಕೃಷ್ಟ ಮತ್ತು ನಿಷ್ಪ್ರಯೋಜಕ ಎಂಬ ಸತ್ಯ ಸಾಕ್ಷ್ಯವಾಗಿದೆ. ಹೀಗಾಗಿ ಜಗತ್ತಿನ ವೈದ್ಯರುಗಳೆಲ್ಲಾ ಮಗುವಿಗೆ ಮೊಲೆ ಹಾಲನ್ನೇ ಕೊಡಿ ಎಂದು ತಾಯಂದಿರಿಗೆ ಒತ್ತಾಯ ಮಾಡುತ್ತಿದ್ದಾರೆ.

ಎದೆ ಹಾಲೇ ಏಕೆ?

ಎದೆ ಹಾಲೇ ಏಕೆ? ಇತರ ಹಾಲು ಆಗದೆ? ಇದು ಹಲವಾರು ತಾಯಂದಿರ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ನೀಡಲು ಯೋಚಿಸುವಾಗ ಎದೆಹಾಲಿನ ಶ್ರೇಷ್ಠತೆ ಘನತೆಗಳಿಗೆ ಕೊನೆಯೇ ಇಲ್ಲ ಎಂದು ಗೊತ್ತಾಗುತ್ತದೆ. ಮಗುವಿಗೆ ಸ್ತನಪಾನ ಬಿಟ್ಟರೆ ಇತರೆ ಯಾವ ಹಾಲು, ಆಹಾರಗಳು ನಂಬರ್ ಒನ್ ಆಗಲು ಸಾಧ್ಯವಿಲ್ಲ. ಏಕೆಂದರೆ ಎದೆಹಾಲಿಗೆ ತನ್ನದೇ ಆದ ವೈಶಿಷ್ಟ್ಯತೆಗಳಿಗೆ. ತಾಯಂದಿರು ತಮ್ಮ ಹಾಲಿನ ಹೆಚ್ಚುಗಾರಿಕೆಗಳೇನೆಂದು ಅವಲೋಕಿಸಿ ಅರಿಯುವುದು ಅಗತ್ಯ.

ಕೋಟಿ ಹಣಕ್ಕೂ ಸಿಗದ ಕೊಲೆಸ್ಟ್ರಮ್

ಹೆರಿಗೆಯಾದ ಮೊದಲ ದಿನಗಳಲ್ಲಿ ತಾಯಿಯ ಸ್ತನದಿಂದ ನಸುಹಳದಿ ವರ್ಣದ ಮಂದದ್ರವ ಜಿನುಗುತ್ತದೆ. ಹಾಲು ಉತ್ಪತ್ತಿಯ ಹೊಸತರಲ್ಲಿ ಹೊರಹೊಮ್ಮುವ ಈ ದ್ರವಕ್ಕೆ ಕೊಲೆಸ್ಟ್ರಮ್ ಎನ್ನಲಾಗಿದೆ. ಈ ದ್ರವದಲ್ಲಿ ಮಗುವಿಗೆ ಅಗತ್ಯವಿರುವ ಅಮೂಲ್ಯ ಪೋಷಕಾಂಶಗಳ ಭಂಡಾರವೆ ಇದೆ. ಮಗುವಿನಲ್ಲಿ ರೋಗನಿರೋಧಕ ಶಕ್ತಿಯನ್ನು ಹುಟ್ಟುಹಾಕುವ ಶಕ್ತಿ ಇದೆ. ಕೋಟಿ ಕೋಟಿ ಹಣ ಸುರಿದರೂ ಸಿಗದೇ ಇರುವಂತಹ ವಸ್ತುವು ಇದು. ನವಜಾತ ಶಿಶುವಿಗೆ ಪ್ರಕೃತಿ ಕರುಣಿಸಿರುವ ಅನನ್ಯ ಕಾಣಿಗೆ ಇದು. ಇಂತಹ ಅಮೂಲ್ಯ ಕೊಲೆಸ್ಟ್ರಮ್ ಸ್ವಲ್ಪವೂ ವ್ಯರ್ಥಮಾಡದೆ ಸಂಪೂರ್ಣವಾಗಿ ಮಗುವಿಗೆ ಲಭಿಸಬೇಕು. ಅದಕ್ಕೋಸ್ಕರ ಸಮಯ ವಿಳಂಬ ಮಾಡದೆ ಹುಟ್ಟಿದ ತಕ್ಷಣವೇ ಆದಷ್ಟು ಬೇಗ ಮಗುವನ್ನು ಎದೆ ಚೀಪಲು ಬಿಡಬೇಕು. ಇದು ತಾಯಿ ತನ್ನ ಮಗುವಿಗೆ ಜೀವನ ಪರ್ಯಂತ ಸ್ವಾಸ್ಥ್ಯಕ್ಕಾಗಿ ನೀಡುವ ಅತ್ಯುನ್ನತ ಕೊಡುಗೆ. ಗಿಣ್ಣು ಹಾಲು (ಕೊಲೆಸ್ಟ್ರಮ್) ಮಗುವಿಗೆ ಅಮೇದ್ಯವೆಂದು ತಿಳಿದು ಮೊದಲಿನ ಹಾಲನ್ನು ಹಿಂಡಿ ಹೊರಚೆಲ್ಲುವ ಮೌಢ್ಯಾಚರಣೆಯನ್ನು ಇಂದಿನಿಂದಲೇ ಇತಿ ಶ್ರೀ ಗೊಳಿಸುವುದು ಬಲುಮುಖ್ಯ.

ಪರಮೋತ್ಕೃಷ್ಟ ಪೋಷಕ

ಮಗು ತನ್ನ ಜೇನು ತುಟಿಗಳಿಂದ ಹೀರುವಾಗ ಹರಿದುಬಂದು ಹೊಟ್ಟೆ ತುಂಬುವ ಅಮ್ಮನ ಹಾಲಿನಲ್ಲಿ ಮಾತ್ರ ಮಗು ಬಯಸುವ ಹಿತವಾದ ರುಚಿ ಇದೆ, ವಾಸನೆ ಇದೆ ಬಿಸಿ ಇದೆ. ತಾಜಾತನ ಇದೆ. ರೋಗಾಣುರಹಿತವಾಗಿದೆ. ಬಯಸಿದಾಗಲೆಲ್ಲಾ ದೊರೆಯುತ್ತದೆ. ಹೀರಿ ಹೀರಿದ ಹಾಗೆ ಕ್ಷೀರಧಾರೆ ಹರಿದುಬರುತ್ತಲೇ ಇರುತ್ತದೆ.

ಸಕಲ ಪೌಷ್ಠಿಕಾಂಶಗಳೂ, ಪೋಷಕ ವಸ್ತುಗಳೂ ಮಗುವಿನ ದೇಹಕ್ಕೆ ಒಪ್ಪುವ, ಹೊಂದುವ ಪ್ರಮಾಣದಲ್ಲಿ ಮಿಳಿತವಾಗಿರುವುದು ಎದೆ ಹಾಲಿನಲ್ಲಿ ಮಾತ್ರ. ಹೀಗಾಗಿ ಎದೆಹಾಲಿನಿಂದ ಮಗುವಿಗೆ ಮಲಬದ್ಧತೆ ಅಜೀರ್ಣ, ಬೇಧಿ, ಅಲರ್ಜಿಯಾಗುವ ಸಂಭವ ಇಲ್ಲ. ಪೋಷಕಾಂಶಗಳ ಕೊರತೆಯೂ ಆಗದು. ಹೆಚ್ಚಳವೂ ಆಗದು. ಮಗುವಿನ ಎಳಸು ಅಂಗಗಳಿಗೆ ಹಾನಿ ಆಗದು. ಈ ಎಲ್ಲ ಸರ್ವೋತ್ಕೃಷ್ಟ ಗುಣಗಳಿಂದಾಗಿ ತಾಯಿ ಹಾಲು ಮಗುವಿಗೆ ಪರಮೋತ್ಕೃಷ್ಟ. ಇತರೆ ಹಾಲು ಆಹಾರಗಳು ಮಗುವಿಗೆ ಅಸಂಬದ್ಧ ಅಷ್ಟೇ ಅಲ್ಲ, ಅಪಾಯಕಾರಿ ಹೀಗಾಗಿ ಮಗುವಿಗೆ ಮೊಲೆಹಾಲು ಮಾತ್ರ ಅತ್ಯುತ್ತಮ.

ಬಾಂಧವ್ಯದ ಬೆಸುಗೆ : ತಾಯಿ ಮಗುವಿನ ಮಮತೆ ಸಾಮೀಪ್ಯದ ಬೆಸುಗೆಗೆ ಸ್ತನಪಾನಕ್ಕಿಂತ ದೊಡ್ಡ ಸಂಕೇತ ಮತ್ತೊಂದಿಲ್ಲ. ಸ್ತನಪಾನ ಕ್ರಿಯೆಯಲ್ಲಿ ತಾಯಿಗೆ ಮಗುವಿನ, ಮಗುವಿಗೆ ತಾಯಿಯ ಉಸಿರು, ವಾಸನೆ, ಉಷ್ಣ, ಹೃದಯದ ಮಿಡಿತ ಚಹರೆಗಳು ಪರಿಚಿತವಾಗುತ್ತಾ ಅನ್ಯೋನ್ಯತೆಯ ಎಳೆಗಳು ತಳುಕು ಹಾಕಿಕೊಳ್ಳುತ್ತವೆ. ಇಂತಹ ಮಧುರವಾದ ತಾಯಿ ಮಗುವಿನ ಬಾಂಧವ್ಯ ಬಾಟಲಿ ಹಾಲು ಕುಡಿಸುವಾಗ  ದೊರೆಯುವುದು ಗಗನ ಕುಸುಮವಷ್ಟೆ.

ಎದೆಹಾಲು ಕುಡಿಸುವ ಪರಿಯು ತಾಯಿಗೆ ಮಗುವನ್ನು ಪೋಷಿಸುವ ಆತ್ಮವಿಶ್ವಾಸ, ಮಾತೃತ್ವ ಸಂತೃಪ್ತಿ ಮಗುವಿಗೆ ಸುರಕ್ಷತೆಯ ವಿಶ್ವಾಸ ದೊರಕುತ್ತದೆ.

ಔದಾರ್ಯದ ಔನ್ನತ್ಯತೆ

ಮಗು ತಾಯಿಯ ಹಾಲನ್ನು ಚೀಪಿ ಚೀಪಿ ಕುಡಿಯುತ್ತದೆ. ಈ ವ್ಯಾಯಾಮದಿಂದ ಮಾಂಸಖಂಡಗಳು ಉಪಕೃತಗೊಂಡು ಮಗುವಿನ ಮುಖ ಸುಂದರವಾಗಿ ರೂಪತಳೆಯುತ್ತದೆ. ಎದೆಹಾಲು ಕುಡಿದು ಬೆಳೆದ ಮಗುವಿನ ಮುಖ, ಭಾಷೆ, ಧ್ವನಿ, ನಡತೆ ಎಲ್ಲವೂ ಮಧುರ. ಸ್ತನಪಾನ ಮಾಡಿ ಬೆಳೆದ ಜನರಲ್ಲಿ ಸಕ್ಕರೆ ಕಾಯಿಲೆ, ಬೊಜ್ಜು, ಕ್ಯಾನ್ಸರ್, ಧೂಮಪಾನ ಮದ್ಯಪಾನ ಚಟ, ಅನೀತಿ ನಡವಳಿಕೆ, ತಲೆದೋರುವುದು ಕಡಿಮೆ ಎಂಬುದು ಅಧ್ಯಯನಗಳಿಂದ ವೇದ್ಯವಾಗಿದೆ. ಸ್ತನಪಾನದಿಂದ ದೇಹದ ಕೊಬ್ಬು ಕರಗಿ ಆರೋಗ್ಯ, ಸೌಂದರ್ಯ ಹೆಚ್ಚುತ್ತದೆಯಲ್ಲದೆ ಸ್ತನಪಾದಿಂದ ಸ್ತನ ಕ್ಯಾನ್ಸರ್‌ ಸಂಭವನೀಯತೆಯೂ ಕಡಿಮೆಯಾಗಿರುತ್ತದೆ.

ಮಗುವಿಗೆ ಆರೋಗ್ಯ, ಆರೈಕೆ, ಪೌಷ್ಠಿಕತೆ, ಸುರಕ್ಷಿತತೆ ಮಮತೆ ಎಲ್ಲವನ್ನೂ ಮೊಗೆದು ಮೊಗೆದು ನೀಡುವ ತಾಕತ್ತು ತಾಯಿ ಹಾಲಿಗೆ ಮಾತ್ರ ಇದೆ. ಈ ನಿಸರ್ಗ ಜಗತ್ತಿನಲ್ಲಿ ಎಂದಿಗೂ ತಾಯಿಹಾಲಿಗೆ ಪ್ರಧಾನ ಸ್ಥಾನವಿದೆ. ಯಾವುದೇ ನಿಟ್ಟಿನಲ್ಲಿ ನೋಡಿದರೂ ತಾಯಿಗಿಂತ ದೇವರಿಲ್ಲ ; ತಾಯಿ ಹಾಲಿಗಿಂತ ಮಿಗಿಲಾದ ಆಹಾರವಿಲ್ಲ.

 

ವೈದ್ಯಸಾಹಿತಿಯಾಗಿನನ್ನಅನುಭವ
ಒಂದೂ ಲೇಖನ ಹಿಂದಿರುಗಿ ಬಂದಿಲ್ಲ!’
– ಡಾ|| ಡಿ.ಕೆ.ಮಹಾಬಲರಾಜುನಯನ ೩೬೮೦/೨೨, ಹೌಸಿಂಗ್‌ಬೋರ್ಡ್‌ ಕಾಲೋನಿ,
ಮೆಡಿಕಲ್ ಬಾಯ್ಸ್‌ಹಾಸ್ಟೆಲ್ ರಸ್ತೆ, ಎಂ.ಸಿ.ಸಿ.ಬಿ. ಬ್ಲಾಕ್‌
ದಾವಣಗೆರೆ ೫೭೭೦೦೪. ಮೊಬೈಲ್ : ೯೮೪೪೦೬೩೫೬೩

ನಾನು ಪಿ.ಯು.ಸಿ. ವರೆಗೆ ಓದಿದ್ದು ಒಂದು ಚಿಕ್ಕಹಳ್ಳಿಯ ಕನ್ನಡ ಮಾಧ್ಯಮ ಶಾಎಯಲ್ಲಿ. ಮೆಡಿಕಲ್ ಸೇರಿದಾಗ ನನಗೆ ಇಂಗ್ಲೀಷ್ ವಿಪರೀತ ಕಷ್ಟವಾಗುತ್ತಿತ್ತು. ನಿಘಂಟುಗಳಿಂದ ವೈದ್ಯಕೀಯ ವಿಷಯವನ್ನು ಕನ್ನಡದಲ್ಲಿ ತಿಳಿದುಕೊಳ್ಳುತ್ತಿದ್ದೆ. ಇದರಿಂದ ನನ್ನ ವಿಷಯ ಜ್ಞಾನ ಹೆಚ್ಚಾಯಿತು. ಉತ್ತಮ ದರ್ಜೆಯಲ್ಲಿಯೇ ಪಾಸೂ ಆಯಿತು. ನಾನು ತಿಳಿದ ವಿಷಯವನ್ನು ಜನರಿಗೆ ತಿಳಿಸಬೇಕೆಂಬ ಬದ್ಧತೆ ಬೆಳೆಯಿತು. ಇದಕ್ಕೆ ಹಿರಿಯ ಲೇಖಕರು, ಪತ್ರಿಕೆಗಳು ಸ್ಫೂರ್ತಿ ಕೊಟ್ಟವು. ಅಂದು ಆರಂಭಗೊಂಡ ನನ್ನ ವೈದ್ಯಸಾಹಿತ್ಯ ಕೃಷಿಯನ್ನು ಈಗಲೂ ಮುಂದುವರಿಸಿಕೊಳ್ಳುತ್ತಾ ಬಂದಿದ್ದೇನೆ. ನಾನು ಇದುವರೆಗೆ ಪತ್ರಿಕೆಗಳಿಗೆ ಕಳುಹಿಸಿದ ಒಂದು ಲೇಖನ ಹಿಂದಿರುಗಿ ಬಂದಿಲ್ಲ. ನಾಡಿನ ಎಲ್ಲ ಪತ್ರಿಕೆಗಳು ನನ್ನ ಲೇಖನ ಪ್ರಕಟಿಸಿ ಉಪಕರಿಸಿವೆ. ಜನತೆ ನನ್ನ ಲೇಖನದಿಂದ ಉಪಯೋಗವಾಗಿದೆ ಎಂದು ಹೇಳುತ್ತಿದ್ದಾರೆ. ಅನೇಕ ಸಂಘ ಸಂಸ್ಥೆಗಳು ನನ್ನನ್ನು ಗುರುತಿಸಿ ಸನ್ಮಾನಿಸಿವೆ. ಅನೇಕ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳು ದೊರಕಿವೆ. ಆದಾಗ್ಯೂ ನಾನಿನ್ನೂ ವೈದ್ಯಸಾಹಿತ್ಯದ ವಿದ್ಯಾರ್ಥಿಯಾಗಿ ಪ್ರತಿದಿನ ಸಾಹಿತ್ಯ ಸೃಷ್ಟಿಯ ಕಲೆಯನ್ನು ಕಲಿಯುತ್ತಿದ್ದೇನೆ. ಬರವಣಿಗೆಯ ಆಳ, ವಿಸ್ತಾರವನ್ನು ಹೆಚ್ಚಿಸಿಕೊಳ್ಳಲು ಹವ್ಯಾಸವಿಟ್ಟುಕೊಂಡಿದ್ದೇನೆ. ನನ್ನ ಲೇಖನ ಮೌಲ್ಯವನ್ನು ಕಾಪಾಡಿಕೊಳ್ಳಲು ಹೆಚ್ಚಿಸಿಕೊಳ್ಳಲು ಸದಾ ಚಿಂತಿಸುತ್ತೇನೆ. ಈ ಎಲ್ಲ ಕೆಲಸಗಳು ನನಗೆ ತೃಪ್ತಿ ಕೊಟ್ಟಿವೆ. ಖುಷಿ ತಂದಿವೆ.

ವೈದ್ಯಸಾಹಿತ್ಯ ಕ್ಷೇತ್ರದಲ್ಲಿ ಕಾಲಿಟ್ಟಿರುವ ನನಗೆ ಹಲವಾರು ಹಿರಿಯ ಕಿರಿಯ ಲೇಖಕರು, ಮಹಾನ್ ವ್ಯಕ್ತಿಗಳ ಸ್ನೇಹ-ಪ್ರೀತಿ ಸಿಕ್ಕಿದೆ. ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಾದೆ ಏರುವ ಸೌಭಾಗ್ಯ ದೊರೆತಿದೆ. ವೈದ್ಯಸಾಹಿತ್ಯ ಪರಿಷತ್ತು ಇಂದಿಗೂ ಮೇಲು-ಕೀಳು, ಹಿರಿಯ – ಕಿರಿಯ, ಬಡವ- ಸಾಹುಕಾರ ಇತ್ಯಾದಿ ಭೇದ -ಭಾವದಿಂದ ಹೊರಗಿದ್ದು ರಾಜಕೀಯ ಮುಕ್ತವಾಗಿ ಇರುವುದು ನೂರ‍್ಮಡಿ ಸಂತೋಷ ನೀಡುವ ಸಂಗತಿಯಾಗಿದೆ. ಇಂತಹ ಸಂಘಟನೆಯಲ್ಲಿ ಮಿಳಿತಗೊಂಡಿರುವುದೇ ನನ್ನ ಜೀವನದ ದೊಡ್ಡ ಭಾಗ್ಯ ಎನಿಸಿದೆ.

ಎಲ್ಲ ರೀತಿಯ ಸಾಹಿತ್ಯಗಳಿಗಿಂತ ವೈದ್ಯಸಾಹಿತ್ಯ ಬಲು ಮೇಲು. ಇದರಿಂದ ಜನಕ್ಕೆ, ಸಮಾಜಕ್ಕೆ ಅತ್ಯಂತ ಉಪಯೋಗವಿದೆ. ಅನಿವಾರ್ಯವೂ ಅತಿಮುಖ್ಯವೂ ಆಗಿರುವ, ಈ ಸಾಹಿತ್ಯದ ಬೆಳವಣಿಗೆ ಸರಕಾರದಿಂದ ಇನ್ನಷ್ಟು ನೀರು -ಗೊಬ್ಬರ ಬಿದ್ದರೆ, ವೈದ್ಯ ಸಾಹಿತ್ಯ ಮತ್ತಷ್ಟು ಹುಲುಸಾಗಿ ಬೆಳೆದು ಜನತೆಯ ಆರೋಗ್ಯ ಮತ್ತು ಆಯುಷ್ಟು  ಮತ್ತಷ್ಟು ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ. ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಆರೋಗ್ಯ ತಾನೆ.

* * *