ಇಂದಿನ ಯುಗ ಪ್ರಧಾನವಾಗಿ ವೈಜ್ಞಾನಿಕ ಯುಗವೆಂದು ಗುರುತಿಸಲ್ಪಟ್ಟಿದೆ. ಆದರೆ ವೈಜ್ಞಾನಿಕ ಆವಿಷ್ಕಾರಗಳು ಜನಸಾಮಾನ್ಯರನ್ನು ತಲುಪಿದಾಗ ಮಾತ್ರ ಈ ಹೆಸರು ಸಾರ್ಥಕವಾಗುತ್ತದೆ. ಈ ದಿಸೆಯಲ್ಲಿ ಅತ್ಯುತ್ತಮ ಕೊಡುಗೆ ನೀಡಿರುವವರು ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯಲ್ಲಿ ಮನೋವೈದ್ಯ-ಪ್ರಾಧ್ಯಾಪಕರಾಗಿರುವ ಡಾ| ಸಿ.ಆರ್. ಚಂದ್ರಶೇಖರ್‌ರವರು.

ಮನೋವೈದ್ಯರಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವ ಪ್ರಧಾನ ಕಾರ‍್ಯದೊಂದಿಗೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧಿಸುವ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಸಂಶೋಧನಾ ಮಾರ್ಗದರ್ಶಕರಾಗಿಯೂ ದುಡಿಯುವುದು ಇವರ ವೃತ್ತಿ. ವೃತ್ತಿಯ ಜೊತೆ, ಜೊತೆಯಲ್ಲೇ ಸಾಗಿರುವ ಮತ್ತೊಂದು ಪ್ರವೃತ್ತಿಯೆಂದರೆ ಬರವಣಿಗೆ. ವಿದ್ಯಾರ್ಥಿ ದೆಸೆಯಿಂದಲೇ ಅಂದರೆ ೧೯೭೨ ರಿಂದಲೇ ಈ ಪ್ರವೃತ್ತಿಯನ್ನು ರೂಢಿಸಿಕೊಂಡ ಶ್ರೀಯುತರ ಲೇಖನಿಯಿಂದ ಮೂಡಿ ಬಂದಿರುವ ಬರವಣಿಗೆಯೆಂದರೆ- ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಲೇಖನಗಳು, ಅಂಕಣಗಳು ಮತ್ತು ಸುಮಾರು ೧೬೦ ಗ್ರಂಥಗಳು ಕನ್ನಡ ಮತ್ತು ಆಂಗ್ಲ ಭಾಷೆಗಳ ಪರಿಣತಿಯಿಂದ ಮೂಡಿ ಬಂದಿರುವ ಇವುಗಳು ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಜನರನ್ನು ತಲುಪಿವೆ. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ೭೦ ಕ್ಕೂ ಹೆಚ್ಚಿನ ಸಂಶೋಧನಾ ಪ್ರಬಂಧಗಳನ್ನೂ ಬರೆದಿದ್ದಾರೆ. ಜೊತೆಗೆ ಜನಸಾಮಾನ್ಯರಿಗೆ ಅರ್ಥವಾಗುವಂತಹ ಸರಳ ಶೈಲಿಯ ಕೃತಿಗಳನ್ನೂ ರಚಿಸಿದ್ದಾರೆ. ಮನೆ ಮನಸ್ಸು ಎಂಬ ಐದು ಕಾದಂಬರಿಗಳನ್ನು ಬರೆದು ಸಾಹಿತ್ಯ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ. ಹಾಗೆಯೇ ವೈದ್ಯಕೀಯ ವಿಷಯಗಳನ್ನು ಕುರಿತ ಆರು ಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಆಂಗ್ಲ ಮತ್ತು ಕನ್ನಡ ಭಾಷೆಗಳ ಮಾನಸಿಕ ಆರೋಗ್ಯದ ಪತ್ರಿಕೆಗಳಿಗೆ ಸಂಪಾದಕರಾಗಿದ್ದಾರೆ. ಆಂಗ್ಲ ಭಾಷೆಯ ಮಾನಸಿಕ ಆರೋಗ್ಯ ಕೈಪಿಡಿಯ ಸಹಲೇಖಕರಾಗಿದ್ದಾರೆ. ಎಂಟು ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳಲ್ಲಿ, ಕನ್ನಡ ಭಾಷೆಯಲ್ಲಿ ಒಂದೊಂದು ಅಧ್ಯಾಯವನ್ನು ಬರೆದಿದ್ದಾರೆ. ಹಾಗೆಯೇ ಆಂಗ್ಲಭಾಷೆಯ ಸ್ನಾತಕೋತ್ತರ ಮನೋವಿಜ್ಞಾನದ ಪಠ್ಯಪುಸ್ತಕದಲ್ಲಿಯೂ ಒಂದು ಅಧ್ಯಾಯವನ್ನು ಬರೆದಿದ್ದಾರೆ. ಅಲ್ಲದೆ ಸುಧಾ, ತರಂಗ, ತುಷಾರ, ಸಂಯುಕ್ತ ಕರ್ನಾಟಕ ಮೊದಲಾದ ಜನಪ್ರಿಯ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ ಮತ್ತು Deccan Herald ಹಾಗೂ ಇತರ ಇಂಗ್ಲಿಷ್ ಪತ್ರಿಕೆಗಳಲ್ಲಿ ಅನೇಕ ಜನಪ್ರಿಯ ವೈದ್ಯಲೇಖನಗಳನ್ನು ಬರೆದು ಮನೆ, ಮನೆಗಳನ್ನೂ ತಲುಪಿದ್ದಾರೆ. ಹೀಗೆ ಶ್ರೀಯುತರು ಕಲಿತವರ ಗುರು, ಕಲಿಯದವರ ಕಾಮಧೇನು.

ಡಾ| ಸಿ.ಆರ್.ಸಿಯವರು ಭಾರತೀಯ ವೈದ್ಯ ಸಂಘ ಭಾರತೀಯ ಮನೋವೈದ್ಯ ಸಂಘ, ವಿಶ್ವ ಆರೋಗ್ಯ ಸಂಸ್ಥೆ, ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು, ಪ್ರಸನ್ನ ಆಪ್ತಸಲಹೆ ಕೇಂದ್ರ- ಮೊದಲಾದ ಅನೇಕ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷ, ತಜ್ಞ ಸಲಹೆಗಾರ ಗೌರವ ಅಧ್ಯಕ್ಷ ಮೊದಲಾದ ಗೌರವ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ವೈದ್ಯಕೀಯ ಮತ್ತು ಬರವಣಿಗೆಯ ಎರಡೂ ಕ್ಷೇತ್ರಗಳು ಸಿ.ಆರ್.ಸಿಯವರ ಪ್ರಮುಖ ಕ್ಷೇತ್ರಗಳಾಗಿರುವುದರಿಂದ ಭಾರತೀಯ ವೈದ್ಯಸಂಘದ ವಿವಿಧ ಶಾಖೆಗಳು ಡಾ| ಪಿ.ಎಸ್. ಶಂಕರ್ ಪ್ರತಿಷ್ಠಾನದ ಜೊತೆ ಜೊತೆಯಲ್ಲಿಯೇ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ವೈದ್ಯ ಸಾಹಿತ್ಯ ಪರಿಷತ್ ಮತ್ತು ಅನೇಕ ಕನ್ನಡ ಸಂಘ, ಸಂಸ್ಥೆಗಳಿಂದ ಪ್ರಶಸ್ತಿ, ಪುರಸ್ಕಾರಗಳು ದೊರೆತಿವೆ. ಅಮೆರಿಕನ್ ಬಯೋಗ್ರಾಫಿಕಲ್ ಇನ್‌ಸ್ಟಿಟ್ಯೂಟ್‌ನಿಂದ ೧೯೯೭ ರ ‘ಮ್ಯಾನ್ ಆಫ್ ದಿ ಇಯರ್’ ಪುರಸ್ಕಾರ ಮತ್ತು ೨೦೦೧ ರಲ್ಲಿ ಯು.ಜಿ.ಸಿ.ಯಿಂದ ದೊರೆತ ಹರಿ ಓಂ ಟ್ರಸ್ಟ್ ಪುರಸ್ಕಾರಗಳು ಇವರ ಸಾಧನೆಗೆ ಸಂದ ಪ್ರತಿಷ್ಠಿತ ಗೌರವವೆಂದು ಹೇಳಬಹುದು.

ವೈದ್ಯರಾಗಿ ರೋಗಿಗಳ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದಷ್ಟೇ ಸಿ.ಆರ್.ಸಿ.ಯವರ ಉದ್ದೇಶವಲ್ಲ. ದೇಹದ ರಚನೆ, ಅಂಗಾಂಗಗಳ ಕಾರ‍್ಯವಿಧಾನ, ಸಾಮಾನ್ಯವಾಗಿ ಕಾಡುವ ಕಾಯಿಲೆಗಳ ಲಕ್ಷಣ, ಅವು ಬರಲು ಕಾರಣ, ಚಿಕಿತ್ಸೆ ನಿವಾರಣಾ ವಿಧಾನಗಳು, ಆರೋಗ್ಯಪಾಲನೆ ಮತ್ತು ವರ್ಧನೆ- ಇವು ಪ್ರತಿಯೊಬ್ಬರಿಗೂ ತಿಳಿದಿರಬೇಕಾದ ವಿಚಾರಗಳು. ‘ಸೃಷ್ಟಿಯ ಅದ್ಭುತ ಮಿದುಳು’ ಕೃತಿಯ ಲೇಖನ ಮಾತು ಎಂಬಂತೆ ಮೈ, ಮನಗಳ ಬಗ್ಗೆ ಜನತೆಯಲ್ಲಿ ವೈಜ್ಞಾನಿಕ ತಿಳಿವಳಿಕೆ ಮೂಡಿಸುವುದು ಇವರ ಮೂಲ ಗುರಿ ವೈದ್ಯ ಸಾಹಿತ್ಯದ ಪುಸ್ತಕಗಳು ಮನೆಯೊಳಗಿದ್ದರೆ ಮನೆಯಲ್ಲಿ ವೈದ್ಯರೇ ಇದ್ದಂತೆ (ಹಿತ-ಅಹಿತ ಪು. ೧೮೧) ಎಂಬುದು ಇದರ ದೃಢ ನಂಬಿಕೆ.

ಶ್ರೀಯುತರು ತಮ್ಮ ಗುರಿ ತಲುಪುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ನಿಖರವಾದ ವೈಜ್ಞಾನಿಕ ಮಾಹಿತಿಯೊಂದಿಗೆ ಚಿಕಿತ್ಸೆ ನೀಡುವಾಗ ತಾವು ಪಡೆದ ಅನುಭವವನ್ನು ಮಿಶ್ರಣ ಮಾಡುತ್ತಾರೆ. ಅನುಭವವನ್ನು ಕಲ್ಪಿತ ಪಾತ್ರಗಳು ಮತ್ತು ಸಂಭಾಷಣೆಯನ್ನು ಒಳಗೊಂಡ ದೃಷ್ಟಾಂತಗಳೆಂಬಂತೆ ವಿವರಿಸಿ ಮಾಹಿತಿ ಕೊಟ್ಟು ಅನಂತರ ಕಾಯಿಲೆ ಬರಲು ಕಾರಣಗಳು, ಚಿಕಿತ್ಸಾ ವಿಧಾನ, ಕಾಯಿಲೆ ಬರದಂತೆ ತಡೆಗಟ್ಟುವ ವಿಧಾನಗಳು ಮುಂಜಾಗ್ರತೆಯ ಕ್ರಮಗಳು ಮೊದಲಾದವುಗಳನ್ನು ವಿವರಿಸುತ್ತಾರೆ. ದೃಷ್ಟಾಂತಗಳು ಓದುಗರ ಮನವನ್ನು ಸೆಳೆದು, ಮುಂದಿನ ವಿಷಯಗಳನ್ನು ಓದಲು ಪ್ರೇರೇಪಿಸುತ್ತವೆ.

ಲೇಖಕರ ಭಾಷೆ ನೇರ ಮತ್ತು ಸರಳ ರೋಗಿಯ ಅಮೂರ್ತ ಅನುಭವವನ್ನೂ ಚಮ್ ಮರಗಟ್ಟಬಹುದು. ಸೂಜಿಯಲ್ಲಿ ಚುಚ್ಚಿದಂತೆ ನೋವುಸುಟ್ಟಂತೆ ಉರಿ, ಇರುವೆ ಕೀಟಗಳು ಓಡಾಡಿದಂತೆ ಅನಿಸಬಹುದು ಇತ್ಯಾದಿ (ಕಷ್ಟ ಮನಸ್ಸಿಗೆ ಕಾಯಿಲೆ ದೇಹಕ್ಕೆ ಪು. ೪೩) – ಎಂಬಂತಹ ಮೂರ್ತ ರೂಪದ ಉದಾಹರಣೆಗಳ ಮೂಲಕ ಸುಲಭವಾಗಿ ಅರ್ಥ ಮಾಡಿಸುತ್ತಾರೆ. ಆಂಗ್ಲ ಭಾಷೆಯ ಪಾರಿಭಾಷಿಕ ಪದಗಳನ್ನು ಯಥಾವತ್ತಾಗಿ ಬಳಸುವುದು; ಅರ್ಥಪೂರ್ಣವಾಗಿ ಸುಲಭವಾಗಿ ಅನುವಾದ ಮಾಡುವುದು; ಅನುವಾದ ಅಸ್ಪಷ್ಟವೆನಿಸಿದರೆ ಕನ್ನಡ ಪದದೊಂದಿಗೆ ಆಂಗ್ಲ ಪದವನ್ನು ಸೇರಿಸುವುದು ಇವರ ಪ್ರಧಾನ ಶೈಲಿ.

ವಿಷಯವನ್ನು ಸಣ್ಣ ಸಣ್ಣ ಅಂಶಗಳಾಗಿ ವಿಭಜಿಸಿ ಪಟ್ಟಿ ಮಾಡುವಂತಹ ವೈಜ್ಞಾನಿಕ ಬರವಣಿಗೆಯ ವಿಧಾನವೂ ಇದೆ. ಹೀಗೆ ಕಲಾತ್ಮಕ ಮತ್ತು ವೈಜ್ಞಾನಿಕ ಮಾದರಿಗಳ ಶೈಲಿಗಳ ಮಿಶ್ರಣದಿಂದ ಸಿ.ಆರ್.ಸಿ.ಯವರ ವಿಷಯಗಳು ಓದುಗರನ್ನು ಸುಲಭವಾಗಿ ತಲುಪಿ, ನೆನಪಿನಲ್ಲಿ ಉಳಿಯುತ್ತವೆ.

ವೈದ್ಯಕೀಯ ವಿಜ್ಞಾನದ ವಿಷಯಗಳನ್ನು ಸಮಾಜದ ಹತ್ತಿರ ತಂದು ಜನರ ಸಾಮಾನ್ಯಜ್ಞಾನವನ್ನು ಹೆಚ್ಚಿಸಿ ಮೂಢನಂಬಿಕೆಗಳಿಂದ ಮುಕ್ತವಾದ ವೈಜ್ಞಾನಿಕ ಮನೋಭಾವದೊಂದಿಗೆ ಜೀವನವನ್ನು ಅರ್ಥಪೂರ್ಣವಾಗಿ ಸಾಗಿಸಲು ಸಿ.ಆರ್.ಸಿ.ಯವರು ನೀಡಿರುವ ಕೊಡುಗೆ ಅತ್ಯಂತ ಅಮೂಲ್ಯವಾದುದು.

ಬೆಂಗಳೂರು ವೈದ್ಯಕೀಯ ವಿದ್ಯಾಲಯದ ವಿದ್ಯಾರ್ಥಿಯಾಗಿ ಶ್ರೀಮತಿ ಡಿ.ಎಸ್. ರಾಜೇಶ್ವರಿ ಎಂಬ ಬಾಳಸಂಗಾತಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿರುವ ಡಾ| ಸಿ.ಆರ್. ಚಂದ್ರಶೇಖರ್ (ಚನ್ನಪಟ್ಟಣ ರಾಜಣ್ಣಾಚಾರ್ ಚಂದ್ರಶೇಖರ್‌) ರವರು ೧೯೪೮ ರ ಡಿಸೆಂಬರ್ ೧೨ ರಂದು ಹುಟ್ಟಿದರು.

* * *