ಸಮಾಜದ ಮಾನಸಿಕ ಆರೋಗ್ಯ ಕಾಪಾಡುವ ಸಲುವಾಗಿ ಡಾ| ಸಿ.ಆರ್. ಚಂದ್ರಶೇಖರ್‌ ಬರವಣಿಗೆಯ ಜೊತೆಗೆ ಉಪನ್ಯಾಸವನ್ನು ಮತ್ತೊಂದು ಸಾಧನವನ್ನಾಗಿ ಬಳಸುತ್ತಾರೆ. ವಾರಕ್ಕೆ ಸರಾಸರಿ ಎರಡು ಮೂರು ಕಾರ‍್ಯಕ್ರಮಗಳು, ಶಾಲಾ ಕಾಲೇಜುಗಳು ಸಂಘ ಸಂಸ್ಥೆಗಳಲ್ಲಿ ಇದ್ದೇ ಇರುತ್ತವೆ… “ನನ್ನ ಬರವಣಿಗೆಯು ಓದುಗರನ್ನು ನೇರವಾಗಿ ಭೇಟಿ ಮಾಡುವ ಅವಕಾಶವನ್ನು ಈ ಸನ್ನಿವೇಶಗಳು ಸೃಷ್ಟಿಸುತ್ತವೆ. ಅವರೊಡನೆ ಸಂಭಾಷಿಸುವ, ಅವರ ಪ್ರತಿಕ್ರಿಯೆ ಹಾಗೂ ಮೆಚ್ಚುಗೆಗಳನ್ನು ಸ್ವೀಕರಿಸುವ ಸಂದರ್ಭಗಳಿವು. ಈ ಸಂದರ್ಭಗಳಲ್ಲಿ ಜನರು ನನ್ನ ಬಗ್ಗೆ ತೋರಿಸುವ ಪ್ರೀತಿ ವಿಶ್ವಾಸ ಗೌರವಗಳು ನನ್ನನ್ನು ಮೂಕನನ್ನಾಗಿ ಮಾಡುತ್ತವೆ. ನನ್ನ ಬರವಣಿಗೆ ಜನಸಾಮಾನ್ಯರನ್ನು ತಲುಪಿ ಅವರಿಗೆ ಸಹಾಯ ಮಾಡಿದೆ ಎಂದು ತಿಳಿದು ಧನ್ಯತೆಯ ಭಾವನೆ ಮನಸ್ಸನ್ನು ಅವರಿಸುತ್ತದೆ…”, ಎನ್ನುತ್ತಾರೆ ಡಾ| ಸಿ.ಆರ್. ಚಂದ್ರಶೇಖರ್.

ದಿನಕ್ಕೆ ಸರಾಸರಿ ಐದಾರು ಪತ್ರಗಳು ಇವರ ಸಲಹೆ ಅಥವಾ ಮಾರ್ಗದರ್ಶನವನ್ನು ಕೋರಿ ಬರುತ್ತವೆ. ಅವೆಲ್ಲಕ್ಕೂ ಇವರು ತಾಳ್ಮೆಯಿಂದ ಉತ್ತರಿಸುತ್ತಾರೆ. ೧೯೨೯ರ ಸುಮಾರಿಗೇ ಹಿಂದೂ ಸೇವಾ ಪ್ರತಿಷ್ಠಾನದ ಕೋರಿಕೆಯ ಮೇರೆಗೆ ತಮ್ಮ ಕೆಲವು ಹಿರಿಯ ಸಹೋದ್ಯೋಗಿಗಳೊಂದಿಗೆ ಪ್ರಾರಂಭಿಸಿದ ಸೇವಾ ಕಾರ್ಯವೇ ಪ್ರಸನ್ನ ಆಪ್ತ ಸಲಹಾ ಕೇಂದ್ರ. ಉಚಿತವಾಗಿ ಶ್ರದ್ಧೆಯಿಂದ ಆಪ್ತ ಸಲಹೆ ಸಮಾಧಾನ, ನೀಡಲು ಸ್ವಯಂ ಇಚ್ಛೆಯಿಂದ ಮುಂದೆ ಬರುವವರಿಗೆ ಇಲ್ಲಿ ತರಬೇತಿ ನೀಡಲಾಗುವುದು. ಕಳೆದ ಎರಡೂವರೆ ದಶಕಗಳಿಂದ ಇಂತಹ ಸಾವಿರಾರು ಸಹಾಯಾರ್ಥಿಗಳು ಈ ಶಿಕ್ಷಣ ಪಡೆದು ಈ ಕೇಂದ್ರಕ್ಕೆ ಬಂದೋ ಅಥವಾ ತಾವಿರುವ ಸ್ಥಳದಲ್ಲೇ ನಾನಾ ರೀತಿಯ ಮಾನಸಿಕ ಮತ್ತು ಇತರ ರೀತಿಯ ತೊಂದರೆಗಿಂದ ಬಳಲುತ್ತಿರುವವರಿಗೆ ಸಾಂತ್ವನ ನೀಡುತ್ತಿದ್ದಾರೆ. ೧೯೯೫ರಿಂದ ಕಾಲೇಜು ಶಿಕ್ಷಕರಿಗಾಗಿಯೂ ಆಪ್ತಸಲಹಾ ತರಬೇತಿ ಕಾರ್ಯಕ್ರಮವನ್ನು ಇಲ್ಲಿ ನಡೆಸಲಾಗುತ್ತಿದೆ. ಎರಡು ವಾರಗಳ ಅವಧಿಯು ತರಬೇತಿಯ ಸಮನ್ವಯಕಾರರಾಗಿ ಡಾ| ಸಿ.ಆರ್. ಚಂದ್ರಶೇಖರ್ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೆಂದಿಗಿಂತ ಇಂದು ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪರೀಕ್ಷೆ, ಸ್ಪರ್ಧೆ, ನಿರುದ್ಯೋಗ, ಅಂತಸ್ತಿನ ವ್ಯತ್ಯಾಸಗಳು ಹೀಗೆ ನಾನಾ ರೀತಿಯ ಆತಂಕ, ಕಾತರ, ಉದ್ವೇಗಗಳಿಗೆ ಒಳಗಾಗುತ್ತಾರೆ. ಕಾಲೇಜಿನ ಬೋಧಕ ವರ್ಗ, ತಮ್ಮ ವಿದ್ಯಾರ್ಥಿಗಳ ವಿಶ್ವಾಸವನ್ನು ಗಳಿಸಿ ಸ್ನೇಹದಿಂದಿದ್ದರೆ ಅವರು ತಮ್ಮ ತಂದೆತಾಯಿಯರೊಂದಿಗೆ ಹೇಳದ ಕೆಲವು ಸಮಸ್ಯೆಗಳನ್ನು ತಿಳಿಸುತ್ತಾರೆ. ಅವುಗಳಿಗೆ ಸೂಕ್ತ ಸಲಹೆ ಮಾರ್ಗದರ್ಶನಗಳನ್ನು ನೀಡಿದಾಗ ವಿದ್ಯಾರ್ಥಿಗಳ ನಡವಳಿಕೆ ಮತ್ತು ಕಲಿಕೆ ಉತ್ತಮಗೊಳ್ಳುತ್ತದೆ. ವಿವಿಧ ವಿಷಯಗಳನ್ನು ಬೋಧಿಸುವ ಕರ್ನಾಟಕದ ವಿವಿಧ ಊರಿನ ಕಾಲೇಜುಗಳಿಂದ ಬರುವ, ವಿವಿಧ ಮನೋಭಾವದ ಶಿಕ್ಷಕರ ಜೊತೆ ಎರಡು ವಾರಗಳನ್ನು ಕಳೆದು ಅವರಿಗೆ ಜ್ಞಾನ ಮತ್ತು ಕೌಶಲವನ್ನು ಕಲಿಸುವ ನನ್ನ ಅನುಭವ ರೋಚಕವಾಗಿದೆ ಎನ್ನುತ್ತಾರೆ ಡಾ| ಸಿ.ಆರ್. ಚಂದ್ರಶೇಖರ್‌. ಕುಟುಂಬ ಸಲಹಾ ಕೇಂದ್ರ, ಮಹಿಳಾ ದೂರು ವಿಭಾಗ ಪರಿಹಾರ, ಮಹಿಳಾ ಸಹಾಯವಾಣಿ, ಪೊಲೀಸ್ ಆಯುಕ್ತರ ಕಛೇರಿ, ಅಭಯ ಆಶ್ರಮ, ಈ ಕೇಂದ್ರಗಳಲ್ಲೂ ಡಾ| ಸಿ.ಆರ್. ಚಂದ್ರಶೇಖರ್ ತಜ್ಞ ಸಲಹೆಗಾರರಾಗಿದ್ದಾರೆ. ಇವಿಷ್ಟೇ ಅಲ್ಲದೆ ಭಾರತೀಯ ವೈದ್ಯ ಸಂಘ, ಭಾರತೀಯ ಮನೋವೈದ್ಯ ವಿಶ್ವ ವಿದ್ಯಾಲಯದ ಪ್ರಸಾರಾಂಗ ಸಮಿತಿ ಹೇಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ, ವಿವಿಧ ಪತ್ರಿಕೆಗಳ ಸಂಪಾದಕ ಮಂಡಳಿ ಸದಸ್ಯರಾಗಿ ಇವರು ನೆರವು ನೀಡಿದ್ದಾರೆ.

* * *