ಡಾ| ಸಿ.ಆರ್. ಚಂದ್ರಶೇಖರ್‌ ಅವರು ಹೆಸರಾಂತ ವೈದ್ಯ ಲೇಖಕರಲ್ಲಿ ಒಬ್ಬರು. ಅವರ ಮೊದಲನೇ ಪುಸ್ತಕದ ‘ಮಿದುಳು’ ೧೯೭೯ರಲ್ಲಿ ಪ್ರಕಟವಾಯಿತು. ೨೦೦೨ರಲ್ಲಿ ನೂರನೆಯ ಪುಸ್ತಕ ‘ಹಿತ-ಅಹಿತ’ ಪ್ರಕಟಗೊಂಡಿತು. ಇವರ ಕೃತಿಗಳ ಕಿರುಪರಿಚಯ, ಪುಸ್ತಕದ ಮುಖ ಚಿತ್ರ, ಪ್ರಕಟಣಾ ವಿವರಣೆಗಳು ಮತ್ತು ಓದುಗರ, ವಿಮರ್ಶಕರ, ಪ್ರಕಾಶಕರ ಅನಿಸಿಕೆ ಇವೆಲ್ಲ “ಡಾ|| ಸಿ.ಆರ್. ಚಂದ್ರಶೇಖರ್‌ ಕೃತಿ ಪರಿಚಯ” ಎಂಬ ಕಿರು ಪುಸ್ತಕದಲ್ಲಿ ಕಾಣಸಿಗುವುದು. ಈಗ ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿರುವು “ಸಮಸ್ಯೆ-ಸಮಾಧಾನ” ಅಂಕಣ ಓದುಗರಿಗೆ ಅಚ್ಚು ಮೆಚ್ಚು.

ನಾನು ಅವರ ಎಲ್ಲ ಪುಸ್ತಕಗಳನ್ನು ಓದಿಲ್ಲವಾದರೂ, ನನಗಿಷ್ಟವಾದ ಅವರು ಬರೆದ ಪುಸ್ತಕವೆಂದರೆ ‘ಉದ್ಯೋಗಿ ಮಹಿಳೆಯರ ಮಾನಸಿಕ ಸಮಸ್ಯೆಗಳು’. ಮಹಿಳೆಯರ ಕಾರ‍್ಯಕ್ಷೇತ್ರ ವಿಸ್ತಾರವಾದಂತೆ ಅವರ ಜವಾಬ್ದಾರಿ ಹೆಚ್ಚಾಗಿ ಮಾನಸಿಕ ನೆಮ್ಮದಿಯನ್ನು ಅವರು ಕಳೆದುಕೊಳ್ಳುತ್ತಾರೆ. ಈ ಕಿರು ಪುಸ್ತಕದಲ್ಲಿ ಉದ್ಯೋಗಸ್ಥ ಮಹಿಳೆಯರ ಅನಿಸಿಕೆ, ಅನುಭವಗಳ ಜೊತೆಗೆ ಅವರ ಸಾಮಾನ್ಯ ಸಮಸ್ಯೆಗಲು, ಋತುಚಕ್ರಕ್ಕೆ ಸಂಬಂಧಿಸಿದ ಮಾನಸಿಕ ಸಮಸ್ಯೆಗಳು, ಮಹಿಳೆಯರನ್ನು ಕಾಡುವ ಸಾಮಾನ್ಯ ಮಾನಸಿಕ ಕಾಯಿಲೆಗಳ ಮತ್ತು ಮಹಿಳೆಯ ಮನಸ್ಸಿನ ನೋವುಗಳು (ನಿಜ ಪ್ರಕರಣಗಳ) ಈ ಎಲ್ಲವುಗಳ ಬಗ್ಗೆ ಜನಸಾಮಾನ್ಯನಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಲಾಗಿದೆ. ಉದ್ಯೋಗಸ್ಥ ಮಹಿಳೆಗೆ ಗಂಡನ, ಅತ್ತೆಮಾವಂದಿರ, ಮಕ್ಕಳ ನೆರವು – ಸಹಕಾರ ಸಿಗದಿದ್ದರೆ ಆಕೆಯ ಮಾನಸಿಕ ಒತ್ತಡ ಹೆಚ್ಚುತ್ತದೆ. ಸಾಲದ್ದಕ್ಕೆ ಟೀಕೆಗೂ ಅವಳು ಗುರಿಯಾಗುತ್ತಾಳೆ. ಪರೋಕ್ಷ ಮತ್ತು ಅಪರೋಕ್ಷ, ಲೈಂಗಿಕ ಕಿರುಕುಳಕ್ಕೆ ಒಳಗಾಗುವ ವಿದ್ಯಾವಂತ ಮಹಿಳೆಯ ಮಾನಸಿಕ ತುಮುಲದ ನೈಜ ಚಿತ್ರಣ ಇದರಲ್ಲಿದೆ. ಈ ತರಹದ ಸನ್ನಿವೇಶಗಳಲ್ಲಿ ಮಹಿಳೆ ಖಿನ್ನತೆ ಮತ್ತು ಗೀಳು ಮನೋರೋಗ (obsessive compulsive disorder) ನಂಥ ಸಮಸ್ಯೆಗಳಿಗೆ ತುತ್ತಾಗುತ್ತಾಳೆ.

ಪುಸ್ತಕದ ಕೊನೆಯ ಭಾಗವಾದಂಥ ‘ಮಹಿಳೆಯ ಮನಸ್ಸಿನ ನೋವುಗಳು’ ಅತ್ಯಂತ ಸರಳವಾದ ರೀತಿಯಲ್ಲಿ ವಿವರಣೆ, ವಿಶ್ಲೇಷಣೆ ಮತ್ತು ನಿವಾರಣೆ, ಈ ರೂಪದಲ್ಲಿ ಬರೆಯಲಾಗಿದೆ. ಆದರೆ ಇಲ್ಲಿ ಔಷಧೀಯ ನಿವಾರಣೆಯ ಬದಲು ಆಪ್ತ ಸಲಹೆ, ಸಮಾಧಾನದ ಮೇಲೆ ಹೆಚ್ಚು ಒತ್ತು ನೀಡಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಒಂದಂತೂ ನಿಜ. ಈ ಪುಸ್ತಕ ಮಾನಸಿಕ ಸಮಸ್ಯೆ/ಕಾಯಿಲೆಗಳ ಒಂದು ಕಿರುಪರಿಚಯ ಜನಸಾಮಾನ್ಯನಿಗೆ ನೀಡುವುದಂತೂ ಖಚಿತ. ಏಕೆಂದರೆ ಈ ರೋಗಲಕ್ಷಣಗಳನ್ನು ಓದಿದ ನಂತರ ಜನಸಾಮಾನ್ಯರು ಬಾನಾಮತಿ, ದೆವ್ವಭೂತಗಳ ಬಗ್ಗೆ ಯೋಚಿಸದೇ ಮನೋರೋಗಗಳ ಸಾಧ್ಯತೆಯ ಕಡೆಗೂ ಒಂದು ಸಲ ಯೋಚಿಸುತ್ತಾರೆ.

ಈ ಪುಸ್ತಕದ ಓದಿದವರಿಗೆ ಅವರ ಮನೆಯಲ್ಲಿ ಯಾರೇ ಉದ್ಯೋಗಕ್ಕೆ ಮಹಿಳೆಯಿದ್ದರೆ ಅವಳ ಮಾನಸಿಕ ತುಮುಲವನ್ನು ಅರ್ಥೈಸಿಕೊಳ್ಳುವ, ಸಹಕಾರ ತೋರುವ, ಜೊತೆಗೆ ಹುಚ್ಚರು ಮಾತ್ರ ಮನೋವೈದ್ಯರನ್ನು ಕಾಣಬೇಕು ಎನ್ನುವುದನ್ನು ಬಿಟ್ಟು ಯಾರು ಬೇಕಾದರೂ ತಮ್ಮ ಜೀವನ ಸಮಸ್ಯೆಗಳಿಗೆ ಮನೋವೈದ್ಯರನ್ನು ಕಾಣಬೇಕು ಎಂಬ ಧೋರಣೆ ಕಿಂಚಿತ್ತಾದರೂ ಬರುತ್ತದೆ ಎಂದು ನನ್ನ ಅನಿಸಿಕೆ.

* * *