ಕನ್ನಡದ ವೈದ್ಯಸಾಹಿತ್ಯವನ್ನು ಜನಪ್ರಿಯಗೊಳಿಸುತ್ತ ಸಮೃದ್ಧಗೊಳಿಸಿದವರಲ್ಲಿ ಡಾ|| ಸಿ.ಆರ್. ಚಂದ್ರಶೇಖರ್‌ ದೊಡ್ಡ ಹೆಸರು. ವೈದ್ಯ ಸಾಹಿತ್ಯದ ಇತಿಹಾಸ ಕನ್ನಡದಲ್ಲಿ ಪ್ರಾರಂಭವಾಗುವುದೇ ೨೦ನೇ ಶತಮಾನದ ನಡುವಿನಲ್ಲಿ. ಆಗ ತ್ರಿವೇಣಿ ಹಾಗೂ ಡಾ| ಎಂ. ಶಿವರಾಂ ಬರೆಯುತ್ತಿದ್ದರು. ನಿಧಾನವಾಗಿ ಕನ್ನಡ ಪತ್ರಿಕೋದ್ಯಮ ಬೆಳೆಯುತ್ತ ಬಂದಂತೆ, ನಿಯತಕಾಲಿಕಗಳಲ್ಲಿ ವೈದ್ಯಕೀಯ ಬರಹಗಳಿಗೆ ಸಲಹೆ-ಸೂಚನೆಗಿಗೆ, ವೈದ್ಯಕೀಯ ಅಂಕಣ ಬರಹಗಳಿಗೆ ಅವಕಾಶ ಹೆಚ್ಚಾಗತೊಡಗಿತು. ಡಾ| ಸಿ.ಆರ್. ಚಂದ್ರಶೇಖರ್‌ ಈವರೆಗೆ ಇಂತಹ ಸುಮಾರು ೧೦೦೦ ಲೇಖನಗಳನ್ನು ಬರೆದಿದ್ದಾರೆ.

ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ೧೫೦ ಕ್ಕಿಂತ ಹೆಚ್ಚು ಪುಸ್ತಕಗಳನ್ನು ಬರೆದು, ಪತ್ರಗಳಿಗೆ ಉತ್ತರಿಸುತ್ತ, ಅಂಕಣ ಬರಹಗಳಲ್ಲಿ ವೈದ್ಯಕೀಯ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತ ವೈದ್ಯಕೀಯ ನೆರವಿನ ವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ. ರೇಡಿಯೋ ಭಾಷಣ, ವೈದ್ಯಕೀಯ ನೆರವಿಗೆ ಬೇಕಾದ ಪ್ರಾಥಮಿಕ ತರಬೇತಿ, ಅಧ್ಯಯನ ಸಂಶೋಧನೆ ಮುಂತಾದ ಹಲವು ಚಟುವಟಿಕೆಗಳಿಂದ ಹಾಗೂ ಮನೋವೈದ್ಯಕೀಯ ಶಾಸ್ತ್ರದ ಪ್ರಾಧ್ಯಾಪಕರಾಗಿ, ಮನೋವೈದ್ಯರಾಗಿ ಡಾ| ಸಿ.ಆರ್. ಚಂದ್ರಶೇಖರ್‌ ಜನಸಾಮಾನ್ಯರ ಪ್ರೀತಿಯನ್ನು ಪಡೆದವರು. ಅವರ ಮೂವತ್ತು ವರ್ಷಗಳ ವೈದ್ಯಕೀಯ ಕ್ಷೇತ್ರದಲ್ಲಿಯ ಅನುಭವಗಳ ಮೆಲುಕು ಹಿತ-ಅಹಿತ’ ಪುಸ್ತಕದಲ್ಲಿದೆ.

ಆತ್ಮ ಚರಿತ್ರೆ, ಪ್ರವಾಸಕಥನಗಳ ಅಂಶಗಳನ್ನೂ ಪಡೆದಿರುವ ಹಿತ-ಅಹಿತ ಯುವಪೀಳಿಗೆಯ ವೃತ್ತಿನಿರತ ವೈದ್ಯರಿಗೆ ಉಪಯುಕ್ತವಾಗುವ ದಿಕ್ಸೂಚಿಯೂ ಆಗಿದೆ. ಮನಸ್ಸನ್ನೂ ಖಿನ್ನಗೊಳಿಸುವ ವೈದ್ಯವಿಜ್ಞಾನದ ಸೋಲಿನ ಹಲವು ಘಟನೆಗಳು ಹಾಗೂ ಮುದನೀಡುವ ಸಫಲತೆಯ ಪ್ರಸಂಗಗಳು ಈ ಪುಸ್ತಕದಲ್ಲಿ ದಾಖಲಾಗಿವೆ. ಹಿತ-ಅಹಿತದ ವೈಶಿಷ್ಟ ಇಷ್ಟೇ ಅಲ್ಲ, ತಮ್ಮ ವೃತ್ತಿಜೀವನದ ಕುರಿತು ಅಭಿಮಾನ ಹಾಗೂ ಸಂತೃಪ್ತಿಯಿಂದ ಬರೆಯುವ ಡಾ| ಸಿ.ಆರ್. ಚಂದ್ರಶೇಖರ್ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕ ಸಮಕಾಲೀನ ಹಿರಿಯ ವೈದ್ಯರಿಂದ, ಅವರ ಒಡನಾಟದಲ್ಲಿ ತಮಗೆ ದೊರೆತ ಸಹಾಯ ಸಹಕಾರಗಳನ್ನು ನೆನೆಯುತ್ತಾರೆ. ವೈದ್ಯಕೀಯ ತರಬೇತಿ, ಮನೋರೋಗಿಗಳಿಗಾಗಿ ಹುಡುಕಾಟ, ದೆವ್ವ ಭೂತಗಳ ಬರುವಿಕೆಯ ಪರೀಕ್ಷೆ, ಬಾನಾಮತಿಯ ಸತ್ಯ ಶೋಧನೆ, ವಿದೇಶಗಳಲ್ಲಿ ವೈದ್ಯಕೀಯ ನೆರವಿನ ಸಲುವಾಗಿ ಪ್ರವಾಸ, ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಿದ ಸೇವೆ ಹೀಗೆ ಹಲವು ಹತ್ತು ವಿಧಗಳಲ್ಲಿ ಕೆಲಸ ಮಾಡಿರುವ ಲೇಖಕರು ವೈದ್ಯಕೀಯ ವಿದ್ಯೆಪಡೆದು ಅದನ್ನು ಜನಸಾಮಾನ್ಯರ ಸೇವೆಗಾಗಿ ಹೇಗೆ ಬಳಸಿಕೊಳ್ಳಬಹುದು. ಎಂದು ವಿವರಿಸುತ್ತಾರೆ. ಹಿತ-ಅಹಿತ’ದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ನಿಲ್ಲುವ ಭಾಗವೆಂದರೆ ನೆನಪಿನಲ್ಲಿ ಉಳಿದ ರೋಗಿಗಳು’ ಅಧ್ಯಾಯ. ಚಿಕ್ಕಮಗಳೂರಿನ ಕಲಾಮಣಿ ಎನ್ನುವ ಹುಡುಗಿ ಅವರಲ್ಲಿ ಒಬ್ಬಳು ಡಾಕ್ಟರೇ, ನಾನು ಹೆಣ್ಣಾಗಿ ಹುಟ್ಟಿದ್ದೇನೆ. ಆದರೆ ನಾನು ಹೆಣ್ಣಲ್ಲ. ದೇಹ ಹೆಣ್ಣಿನದೇ. ಆದರೆ ನಾನು ಗಂಡಸು… ನಾನು ಪುರುಷನಂತೆ ಬಾಳಬೇಕು. ನನ್ನ ದೇಹ ಪುರುಷನಾಗಬೇಕು… ನಾನು ಲಿಂಗಬದಲಾವಣೆ ಅಪರೇಷನ್ ಮಾಡಿಸಿಕೊಳ್ಳಬೇಕು” ಎಂದು ಬೇಡಿಕೊಳ್ಳುತ್ತಿದ್ದ ಆಕೆಗೆ ಲಿಂಗ ಬದಲಾವಣೆಯ ಆಪರೇಷನ್ ಸಾಧ್ಯವಾಗಲಿಲ್ಲ.

ಒಂದು ದಿನಪತ್ರಿಕೆಯಲ್ಲಿ ಆಘಾತಕಾರಿ ಸುದ್ದಿಯೊಂದು ಪ್ರಕಟವಾಗುತ್ತದೆ. ಈ ಕಲಾಮಣಿ ಇನ್ನೊಬ್ಬ ಹುಡುಗಿಯನ್ನು ಒಪ್ಪಿಸಿ ಗುಟ್ಟಾಗಿ ಮದುವೆಯಾದಳೆಂದೂ ಅದನ್ನು ತಿಳಿದ ಎರಡು ಮನೆಯವರು ಸಿಟ್ಟಿಗೆದ್ದು ಇವರಿಬ್ಬರನ್ನೂ ಬಡಿದರೆಂದೂ ಆತ್ಮಹತ್ಯೆಗೆ ಪ್ರಯತ್ನಿಸಿದ ಇವರಿಬ್ಬರಲ್ಲಿ ಕಲಾಮಣಿಯು ಬದುಕಿ ಮತ್ತೊಬ್ಬಳು ಸತ್ತಳೆಂದೂ ಡಾ|| ಸಿ.ಆರ್.ಚಂದ್ರಶೇಖರ್ ಕಣ್ಣಿಗೆ ಬಿದ್ದಿತು. ತಿಂಗಳ ನಂತರ ಕಲಾಮಣಿಯಿಂದ ಡಾಕ್ಟರರಿಗೆ ಬಂದ ಕಾಗದ ಹೀಗಿತ್ತು. “ಪತ್ರಿಕೆಗಳಲ್ಲಿ ಬಂದ ಸುದ್ದಿಗಳನ್ನು ನೀವು ಓದಿರಬೇಕು. ನನ್ನಿಂದ ರಮಾ ಸಾಯುವಂತಾಯಿತು. ನನ್ನ ತಂದೆ ತಾಯಿಗಳಿಗೆ, ಈ ಸಮಾಜಕ್ಕೆ ನನ್ನಂಥವರ ಗೋಳು ಅರ್ಥವಾಗುವುದಿಲ್ಲ.. ಎಲ್ಲರೂ ನನ್ನನ್ನು ತಿರಸ್ಕಾರದ ದೃಷ್ಟಿಯಿಂದ ಅಪರಾಧಿಯನ್ನು ನೋಡುವಂತೆ ನೋಡುತ್ತಾರೆ…. ನಾನು ಕೂಡ ಸತ್ತು ಮುಂದಿನ ಜನ್ಮದಲ್ಲಾದರೂ ಪೂರ್ಣ ಗಂಡಾಗಿ ಹುಟ್ಟಲು ಆಶಿಸುತ್ತೇನೆ. ನಿಮ್ಮ ಆಶೀರ್ವಾದವಿರಲಿ”.

Trans sexuals ಕುರಿತು ಪಾಠ ಮಾಡುವಾಗಲೆಲ್ಲ ಕಲಾಮಣಿಯ ದುರಂತವನ್ನು ನೆನಪಿಗೆ ತಂದುಕೊಳ್ಳುವ ಲೇಖಕರು ಇಂಥವರಿಗೆ ಸುಲಭವಾಗಿ ಪರಿಹಾರ ಸಿಗುವ ದಿನಗಳು ವೈದ್ಯಕೀಯ ವಿಜ್ಞಾನದಲ್ಲಿ ಬರಲಿ ಎಂದು ಆಶಿಸುತ್ತಾರೆ. ಮತ್ತೊಬ್ಬ ಇಂತಹುದೇ ವ್ಯಕ್ತಿ ತ್ಯಾಗರಾಜ ಅಲಿಯಾಸ್ ಉಮಾದೇವಿ. ಮನೋವೈದ್ಯರಿಗೆ ಸಮಸ್ಯೆಯಾಗಿಯೇ ಉಳಿದ ಆರುಂಧತಿ, ವಿವಾಹ ವಿಚ್ಛೇದನ ಪಡೆದ ವಕೀಲ ಗಂಡ, ವೈದ್ಯ ಹೆಂಡತಿ, ಭಾವೋದ್ವೇಗದ ಸುಮಾ, ಗೊಂದಲದಲ್ಲಿ ಸಿಕ್ಕಿದ ಒಬ್ಬ ಗೃಹಿಣಿ – ಇವೆರಲ್ಲರ ಚಿಕಿತ್ಸೆಗೆ ನೆರವಾದ ಕುರಿತು ಅಥವಾ ಮನೋವೈದ್ಯಕೀಯ ವಿಜ್ಞಾನ ಇನ್ನೂ ಪಳಗಿಸಿಕೊಳ್ಳಬೇಕಾದ ಚಿಕಿತ್ಸಾ ವಿಧಾನಗಳ ಕುರಿತು ಲೇಖಕರು ಆಸಕ್ತಿ ಮೂಡಿಸುತ್ತಾರೆ. ಈ ಪುಸ್ತಕದ ಇನ್ನೊಂದು ಅಧ್ಯಾಯ ‘ಬಾನಾಮತಿಯ ನಾಡಿನಲ್ಲಿ’ ಕೂಡ ನೆನಪಿನಲ್ಲಿ ಇರುವ ಮಹತ್ವದ ಲೇಖನ. ೧೯೮೦ರ ತುಂಬ ನಾಡಿನ ಉದ್ದಗಲ ಸುದ್ದಿ ಮಾಡಿದ ಕಳವಳಕ್ಕೆ ಕಾರಣವಾಗಿದ್ದ ಬಾನಾಮತಿಯ ಉಪದ್ರವದ ಸತ್ಯಶೋಧನೆ ನಡೆಸಲು ಕರ್ನಾಟಕ ಸರ್ಕಾರವು ಒಂದು ಸಮಿತಿನ್ನು ರಚಿಸಿತು. ಅದರ ನೇತೃತ್ವವನ್ನು ಖ್ಯಾತ ವಿಚಾರವಾದಿ ಡಾ. ಎಚ್. ನರಸಿಂಹಯ್ಯ ವಹಿಸಿದ್ದರು. ಈ ಲೇಖಕರು ಕೂಡ ಆ ಸಮಿತಿಯ ನೆರವಿನ ತಂಡದಲ್ಲಿದ್ದರು. ಅಲ್ಲಿ ತಾವು ತನಿಖೆ ಮಾಡಿದ ಮನುಷ್ಯರ ವಿಚಿತ್ರ ಹೇಳಿಕೆಗಳನ್ನು, ಕಂಡ ಸಂಗತಿಗಳನ್ನು ಲೇಖಕರು ಟೀಕೆ-ಟಿಪ್ಪಣಿಗಳಲ್ಲದೆ ಚಿಕಿತ್ಸಕ ದೃಷ್ಟಿಯಿಂದ ದಾಖಲಿಸುತ್ತಾರೆ. ಬೆನಕನಹಳ್ಳಿಯ ಹೆಂಗಸರ ಸಮೂಹ ಸನ್ನಿ ಬಾನಾಮತಿ ಮಾಡುವವರ ಅಸಂಬದ್ಧ ಪೂಜಾ ವಿಧ, ಹಣ ಸುಲಿಯುವ ಪೋಲಿಪಟಾಲಂಗಳು ಬಾನಾಮತಿ ತೆಗೆಯುವವರ ರಕ್ಕಸ ಕುಣಿತ ಇವು ನಮಗೆ ನಂಬಲು ಅಸಾಧ್ಯವಾದ ಸಂಗತಿಗಳು.

ತಮ್ಮ ವೃತ್ತಿಗೆ ಸಂಬಂಧಿಸಿದಂತೆ ಲೇಖಕರು ಮಾಡಿದ ವಿದೇಶಿ ಪ್ರವಾಸದ ವಿವರ ಮೂರು ಅಧ್ಯಾಯಗಳಲ್ಲಿದೆ. ಆದರೆ ಇವುಗಳಿಗಿಂತ ಹೆಚ್ಚು ಕುತೂಹಲವನ್ನು ಹುಟ್ಟಿಸುವ ಸಂಗತಿಯೆಂದರೆ ಲೇಖಕರು ಈವರೆಗೆ ಸುಮಾರು ೩೦ ಸಾವಿರಕ್ಕೂ ಕಡಿಮೆಯಿಲ್ಲದಷ್ಟು ಆರೋಗ್ಯ ಸಲಹೆಗಳನ್ನು ಪತ್ರಗಳ ಮೂಲಕ ಜನರಿಗೆ ನೀಡಿರುವುದು. ಅವರ ಸಲಹೆ ಕೇಳಿಬರುತ್ತಿದ್ದ ಕಾಗದಗಳು ಅನೇಕ ರೀತಿಯವು. ಕೆಲವು ಕಟುಶಬ್ದಗಳಿಲ್ಲಿದ್ದರೆ ಇನ್ನು ಹಲವು ಆತ್ಮೀಯ ನುಡಿಕಟ್ಟುಗಳಲ್ಲಿ ಇರುತ್ತಿದ್ದವು. ಆದರೆ ಎಲ್ಲ ಪತ್ರಗಳನ್ನು ಮಾನವೀಯ ಸಮಸ್ಯೆಯ ರೂಪಗಳು ಎಂದು ಸಮಾನವಾಗಿ ಲೇಖಕರು ನೋಡಬೇಕಿತ್ತು. ವೈದ್ಯಕೀಯ ವಿದ್ಯೆ ಪಡೆದವರು ನೆನಪಿಡಬೇಕಾಗಿದ್ದ ಅಸಲು ಧ್ಯೇಯವಾಕ್ಯ ಇದು. ಮೂಢನಂಬಿಕೆಗಳ ವಿರುದ್ಧ ಮನೋವೈದ್ಯಕೀಯ ಕಾರಣಗಳನ್ನಿಟ್ಟುಕೊಂಡೇ ಹೋರಾಡಿದ ಲೇಖಕರಿಗೆ ದೇವರಲ್ಲಿ ನಂಬಿಕೆ ಇದೆ. ಮೂಢನಂಬಿಕೆಗಳನ್ನು ಗೇಲಿ ಮಾಡದೆ ವಿರೋಧಿಸುವಾಗ ಮಾತ್ರ ತನಗೆ ಇದು ಸಾಧ್ಯವಾಯಿತು ಎನ್ನುವ ನಿಲುವು ಅವರದು. ಅವರು ದೇವರ ನಂಬಿಕೆ ಹೇಗೆ ಕೆಲಸ ಮಾಡಬಹುದು ಎನ್ನುವ ತನ್ನ ಇತ್ತೀಚಿನ ಅನುಭವಗಳನ್ನು (ಪು ೧೯೪) ಹೇಳಿಕೊಳ್ಳುತ್ತಾರೆ. ಮೂಢನಂಬಿಕೆಗಳ ವಿರುದ್ಧ ಸಮರ ಸಾರುವ ಇತ್ತೀಚಿನ ಪ್ರವೃತ್ತಿಗಳು ಸಾಮಾನ್ಯವಾಗಿ ವೀರಾವೇಶ ಆಕ್ರೋಶಗಳಲ್ಲಿ ಆಡಂಬರ ಮಾತುಗಳಲ್ಲಿ, ವ್ಯಕ್ತವಾಗುತ್ತದೆ. ಆದರೆ ಡಾ| ಸಿ.ಆರ್. ಚಂದ್ರಶೇಖರ್ ತಣ್ಣಗೆ ಅದೂ ಕೂಡ ಒಂದು ಪರಿಹರಿಸಬಹುದಾದ ಕಾಯಲೆ ಎನ್ನುವಂತೆ ಬರೆಯುತ್ತಾರೆ. ಇದು ಹೋರಾಟಗಾರರನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯಬಹುದಾದ ಸಮಸ್ಥಿತಿ.

ಡಾ| ಸಿ.ಆರ್. ಚಂದ್ರಶೇಖರ್ ಕೊನೆಯಲ್ಲಿ ಹನ್ನೆರಡು ಮಾನಸಿಕ ಆರೋಗ್ಯ ಸೂತ್ರಗಳನ್ನು ಮುಂದಿಡುತ್ತಾರೆ. ಇದು “ಡಾ| ಸಿ.ಆರ್. ಚಂದ್ರಶೇಖರ್ ಕೊಡುವ ಮಾತ್ರೆಗಳ ಪ್ರಿಸ್ಕ್ರಿಪ್ಸನ್” ಎಂದು ತಮಾಷೆ ಮಾಡಬೇಕೆನ್ನಿಸುತ್ತದೆಯಾದರೂ ಆ ಸೂತ್ರಗಳಲ್ಲಿ ಇರುವ ಅನುಭವ ವಚನಗಳನ್ನು ತಿರಸ್ಕರಿಸುವಂತಿಲ್ಲ. ಅವುಗಳನ್ನು ಪಾಲಿಸಿಕೊಂಡು ಸಫಲತೆಯನ್ನು ಸಾಧಿಸಿದ ಬಗ್ಗೆ ತೃಪ್ತಿ ಕೂಡ ಲೇಖಕರಿಗಿದೆ. “ನನಗೀಗ ಐವತ್ಮೂರು ವರ್ಷ. ಇದುವರೆಗೆ ಆಘಾತವಾಗುವ ಯಾವ ಕೆಟ್ಟ ಘಟನೆ ಕಷ್ಟನಷ್ಟ ಆಗಿಲ್ಲ. ನನ್ನ ಆರೋಗ್ಯ ಉತ್ತಮವಾಗಿದೆ. ಯಾವುದೇ ದೊಡ್ಡ ದೀರ್ಘ ಕಾಯಿಲೆ ನನಗೆ ಬಂದಿಲ್ಲ… ಇದೆಲ್ಲವೂ ದೇವರ ಕೃಪೆ ಎಂದೇ ತಿಳಿದಿದ್ದೇನೆ. ಇದು ನನ್ನ ವೈಯಕ್ತಿಕ ನಂಬಿಕೆ” (ಪು ೧೯೫) ಯಶಸ್ವೀ ಮನುಷ್ಯನ ಈ ಸರಳ ನಂಬಿಕೆಗಳಲ್ಲಿ ಎಷ್ಟೊಂದು ಸೌಂದರ್ಯ!” ಎಂದು ಅಚ್ಚರಿಯಾಗುತ್ತದೆ.

* * *