. ಕನ್ನಡದಲ್ಲಿ ಪ್ರಕಟವಾಗಿರುವ ಆರೋಗ್ಯ ಮತ್ತು ವೈದ್ಯಕೀಯ ಪುಸ್ತಕಗಳನ್ನು ಕುಟುಂಬ ವರ್ಗ ಏತಕ್ಕೆ ಓದಬೇಕು?

– ಶೇ. ೮೦ ರಷ್ಟು ಕಾಯಿಲೆಗಳನ್ನು ಬರದಂತೆ ತಡೆಗಟ್ಟಬಹುದು. ಕಾಯಿಲೆ ಬಂದ ಮೇಲೆ ಎಷ್ಟೊಂದು ನೋವು, ನರಳಿಕೆ ಆಸ್ಪತ್ರೆ- ವೈದ್ಯರು ಔಷಧಿ ಖರೀದಿ ಸೇವನೆ ಹಣ, ಸಮಯ, ವ್ಯಯವಾಗುತ್ತದೆ. ರೋಗ ನಿವಾರಣೆ ಬಗ್ಗೆ ತಿಳಿದುಕೊಳ್ಳಲು ಹಾಗೂ ರೋಗ ಬಂದಾಗ ಏನು ಮಾಡಬೇಕು, ಮಾಡಬಾರದು ಎಂದು ಅರಿಯಲು ವೈದ್ಯರಿಂದ ಉತ್ತಮ ಸೇವೆ ಪಡೆಯಲು ಸುಲಭ ಮಾರ್ಗವೆಂದರೆ ವೈದ್ಯಕೀಯ ಲೇಖನಗಳನ್ನು, ಪುಸ್ತಕಗಳನ್ನು ಓದುವುದು ಇದು ಆರೋಗ್ಯ ವರ್ಧನೆಗೂ ಸಹಾಯಕಾರಿ.

. ಸಮಾಜ ಲೈಂಗಿಕ ರೋಗಗಳನ್ನು ಮತ್ತು ಏಡ್ಸ್ ರೋಗವನ್ನು ತಡೆಗಟ್ಟಬೇಕಾದರೆ ಸರ್ಕಾರ ಮತ್ತು ಸಮಾಜ ಯಾವ ಕಾರ್ಯ ಕ್ರಮಗಳನ್ನು ಕೈಗೊಳ್ಳಬೇಕು.

– ಮದುವೆಯಾಗಿ ಲೈಂಗಿಕ ಸಂಗಾತಿಯನ್ನು ಪಡೆದು, ಪರಸ್ಪರ ಲೈಂಗಿಕ ಚಟುವಟಿಕೆಗಳಿಂದ ಗರಿಷ್ಠ ಮಟ್ಟದ ಲೈಂಗಿಕ ಸುಖಾನುಭವವನ್ನು ಪಡೆಯುವ ವೈಜ್ಞಾನಿಕ ಮಾಹಿತಿ ಜನರಿಗೆ ಸಿಗಬೇಕು. ವಿವಾಹೇತರ ಸಂಬಂಧಗಳು, ವೃತ್ತಿನಿರತರೊಂದಿಗೆ ಲೈಂಗಿಕ ಸಂಪರ್ಕ ಹೇಗೆ ಅಪಾಯಕಾರಿ ಎಂದು ಜನ ತಿಳಿಯುವಂತಾಗಬೇಕು. ಶಿಸ್ತಿನ ಲೈಂಗಿಕ ಜೀವನದಿಂದ ಮಾತ್ರ ಲೈಂಗಿಕ ರೋಗಗಳನ್ನು ತಡೆಯಬಹುದು ಎಂಬ ಅರಿವನ್ನು ಹರೆಯದ ವಯಸ್ಸಿನಿಂದಲೇ ಎಲ್ಲರಲ್ಲಿ ಮೂಡಿಸಬೇಕು.

. ದಂಪತಿಗಳು ಲೈಂಗಿಕ ವಿಜ್ಞಾನ ಸಾಹಿತ್ಯವನ್ನು ಏತಕ್ಕಾಗಿ ಓದಬೇಕು?

– ಲೈಂಗಿಕ ಕ್ರಿಯೆ ಕಲೆಯೂ ಹೌದು, ವಿಜ್ಞಾನವೂ ಹೌದು. ಅದರ ಬಗ್ಗೆ ವಸ್ತುನಿಷ್ಟ ಮಾಹಿತಿಯನ್ನು ಪಡೆದು ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಂಡು ವಿವಾಹ ಜೀವನದಿಂದ ಗರಿಷ್ಠಮಟ್ಟದ ಸುಖಾನುಭವವನ್ನು ಪಡೆಯುವುದಕ್ಕೋಸ್ಕರ ಹಾಗೂ ಲೈಂಗಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳುವುದಕ್ಕೋಸ್ಕರ ವೃದ್ಧಿಸಿಕೊಳ್ಳುವುದಕ್ಕೋಸ್ಕರ ದಂಪತಿಗಳು ಲೈಂಗಿಕ ವಿಜ್ಞಾನ ಸಾಹಿತ್ಯವನ್ನು ಓದಬೇಕು.

. ಆದರ್ಶ ಗಂಡಹೆಂಡತಿ ಓದುಗರಿಗೆ ನಿಮ್ಮ ಸಂದೇಶವೇನು?

– ಲೈಂಗಿಕತೆ ಬಗ್ಗೆ ಇರುವ ತಪ್ಪು ನಂಬಿಕೆ, ಧೋರಣೆಗಳನ್ನು ಗುರುತಿಸಿ ಅವುಗಳನ್ನು ನಿವಾರಿಸಿಕೊಳ್ಳಿ. ಲೈಂಗಿಕತೆ ಬಗ್ಗೆ ಉತ್ಪ್ರೇಕ್ಷಿತ, ಅವಾಸ್ತವಿಕ ಕಲ್ಪನೆಗಳನ್ನು ಬಿಟ್ಟು ಆರೋಗ್ಯಕರ ಧೋರಣೆ ಬೆಳೆಸಿಕೊಳ್ಳಿ. ಹಸಿವು, ನೀರಡಿಕೆಗಳಂತೆ ಲೈಂಗಿಕ ಆಸೆ ಮನುಷ್ಯನಿಗೆ ಸ್ವಾಭಾವಿಕವಾದದ್ದು. ಅದರ ಬಗ್ಗೆ ಹೀನಾಯ ಬೇಡ. ಲೈಂಗಿಕ ಇತಿಮಿತಿಯಲ್ಲಿದ್ದರೆ, ಜ್ಯೋತಿಯಂತೆ ಬೆಳಕು ನೀಡುತ್ತದೆ. ಮಿತಿ ಮೀರಿದರೆ, ಬೆಂಕಿಯಾಗಿ ಎಲ್ಲರನ್ನು ಸುಡುತ್ತದೆ. ಆದ್ದರಿಂದ ಲೈಂಗಿಕ ಕ್ರಿಯೆಯಿಂದ ಸಂತೋಷ ಪಡುವುದೇ ಅಥವಾ ಸಂತಾಪ ಪಡುವುದೇ ಎನ್ನುವುದು ನಮ್ಮನ್ನೇ ಅವಲಂಬಿಸಿದೆ.

ಪತ್ರಿಕೆ : ಗಂಡ ಹೆಂಡತಿ ಮಾಸಪತ್ರಿಕೆ

* * *