ಡಾ|| ಚಂದ್ರಶೇಖರ್‌, ಖ್ಯಾತ ಮಾನಸಿಕ ರೋಗ ತಜ್ಞರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ಕನ್ನಡದ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲೂ ಮನೋ ವಿಜ್ಞಾನದ ಕುರಿತು ಲೇಖನಗಳನ್ನು ಮೇಲಿಂದ ಮೇಲೆ ಬರೆಯುತ್ತಿರುತ್ತಾರೆ. ವೈದ್ಯ ವಿಜ್ಞಾನದ ಕುರಿತು, ಅದರಲ್ಲೂ ಮನೋ ವಿಜ್ಞಾನದ ಕುರಿತು ಧಂಡಿಯಾಗಿ ಪುಸ್ತಕಗಳನ್ನು ಬರೆದಿದ್ದಾರೆ. ಅಧ್ಯಯನಾರ್ಥವಾಗಿ ವ್ಯಾಪಕ ವಿದೇಶ ಪ್ರವಾಸ ಮಾಡಿರುವ ಅವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಅವೆಲ್ಲಕ್ಕಿಂತ ಹೆಚ್ಚಾಗಿ ಅವರನ್ನು ಸ್ವತಃ ನೋಡದ ಅನೇಕ ರೋಗಿಗಳು ಪತ್ರಿಕೆಗಳ ಮೂಲಕ ಅವರ ಸಲಹೆ ಪಡೆದು ತಮ್ಮ ವ್ಯಾಧಿಗೆ ಶಮನ ಪಡೆದಿದ್ದಾರೆ.

ಪ್ರ ನಿಮ್ಮ ಕಲ್ಪನೆಯಲ್ಲಿ ಪರಮ ಸುಖ ಎಂದರೆ ಯಾವುದು?

ಉ – ಎಲ್ಲರಿಂದ ಪ್ರೀತಿ ಗೌರವವನ್ನು ಪಡೆಯುವುದು; ವೃತ್ತಿ ಮತ್ತು ಪ್ರವೃತ್ತಿಯಿಂದ ಇತರ ಜನರಿಗೆ ಸಂತೋಷ ನೆಮ್ಮದಿ ನೀಡುವುದು.

ಪ್ರ –  ನಿಮಗೆ ಅತ್ಯಂತ ಆತಂಕ/ಭಯ ತರುವ ಸಂಗತಿಯಾವುದು?

ಉ – ನಿಮ್ಮ ಆಡಳಿತಗಾರರ ಅಸಾಮಥ್ಯ, ನಿಷ್ಕ್ರೀಯತೆ, ದುರಾಶೆ ಹಾಗೂ ನಮ್ಮ ಜನರಲ್ಲಿ ಇನ್ನೂ ಉಳಿದಿರುವ ಮೌಢ್ಯ, ಕಂದಾಚಾರಗಳು.

ಪ್ರ –  ನಿಮ್ಮ ಮೇಲೆ ಅತ್ಯಂತ ಗಾಢ ಪ್ರಭಾವ ಬೀರಿದ್ದು ಯಾರು?

ಉ – ಶಿವರಾಮ ಕಾರಂತ, ರಾಶಿ, ತ್ರಿವೇಣಿ ಅವರ ಸಾಹಿತ್ಯ ಮತ್ತು ಸ್ನೇಹಿತ ಲಕ್ಷ್ಮೀನಾರಾಯಣ, ಗುರುಗಳಾದ ಡಾ. ಎಚ್.ಎಸ್. ನಾರಾಯಣ್.

ಪ್ರ –  ಇತರರ ಯಾವ ಗುಣ ನಿಮಗೆ ಹಿಡಿಸುವುದಿಲ್ಲ?

ಉ – ಹಣ, ಅಧಿಕಾರ, ಬುದ್ಧಿ ಬಲದಿಂದ ಇತರರನ್ನು ಹೀನಾಯವಾಗಿ ಕಾಣುವು ಗುಣ.

ಪ್ರ ನೀವು ಎಂದೂ ಮರೆಯಲಾಗದ ಮಾತು ಯಾವುದು?

ಉ – ನನ್ನ ಮೊದಲ ವೈದ್ಯ ಲೇಖನಗಳನ್ನು ಓದಿ ತುಂಬಾ ಚೆನ್ನಾಗಿ ಬರೆದಿದ್ದೀರಿ ಎಂದು ಡಾ. ಡಿ.ಎಸ್. ಶಿವಪ್ಪನವರ ಮಾತು.

ಪ್ರ –  ನಿಮ್ಮ ಯಾವ ಗುಣ ನಿಮಗೇ ಬೇಸರ ತರಿಸುತ್ತದೆ?

ಉ – ಅಂತಹ ಯಾವ ಗುಣವೂ ನನ್ನಲ್ಲಿಲ್ಲ.

ಪ್ರ ನಿಮ್ಮ ಅಮೂಲ್ಯ ಆಸ್ತಿ ಯಾವುದು?

ಉ – ನನ್ನ ವೃತ್ತಿ ಬರವಣಿಗೆ ಮತ್ತು ಮನೆಯವರ ಪ್ರೀತಿ.

ಪ್ರ ನಿಮ್ಮ ಮನಸ್ಸನ್ನು ಬಹುವಾಗಿ ಕುಗ್ಗಿಸುವ ಸಂಗತಿ ಯಾವುದು?

ಉ – ಮನೋರೋಗಿಯ ಬೇಕು, ಬೇಡಗಳನ್ನು ಅರ್ಥಮಾಡಿಕೊಳ್ಳದ ಮನೆಯವರು; ಇಂತಹ ರೋಗಿಗಳನ್ನು ತಿರಸ್ಕರಿಸುವ ಸಮಾಜ.

ಪ್ರ ನಿಮ್ಮ ಅತ್ಯಂತ ಪ್ರಿಯವಾದ ಓಡಾಟದ (ಪ್ರವಾಸದ) ತಾಣ ಯಾವುದು?

ಉ – ಪ್ರಕೃತಿ ರಮ್ಯ ಸ್ಥಳಗಳು ಹಿಮಾಲಯ ಮತ್ತು ಅಲ್ಪ ಪರ್ವತ ಪ್ರದೇಶಗಳು.

ಪ್ರ –  ಇಮ್ಮ ಜೀವನದ ಅತ್ಯಂತ ಮಹತ್ವದ ನಿರ್ಣಯ ಯಾವುದಾಗಿತ್ತು?

ಉ – ಎಸ್ಸೆಸ್ಸೆಲ್ಸಿಯ ನಂತರ ನಿಂತಿದ್ದ ಓದನ್ನೂ ಮುಂದುವರೆಸುವ ಹಾಗೂ ಮನೋವೈದ್ಯ ಕೋರ್ಸಿಗೆ ಸೇರುವ ನಿರ್ಣಯಗಳು.

ಪ್ರ ನಿಮ್ಮ ಜೀವನದ ಅತ್ಯಂತ ಸಂತಸದ ಕ್ಷಣ ಯಾವುದಾಗಿತ್ತು?

ಉ – ಭಾರತೀಯ ವೈದ್ಯ ಸಂಘದ ವೈದ್ಯ ದಿನಾಚರಣೆ ಪುರಸ್ಕಾರವನ್ನು ವರನಟ ಡಾ. ರಾಜ್‌ಕುಮಾರ್‌ರಿಂದ ಪಡೆದ ಸಂದರ್ಭ.

ಪ್ರ –  ನಿಮ್ಮ ಅತ್ಯಂತ ಪ್ರೀತಿಯ ಕನಸು ಯಾವುದು?

ಉ – ಎಲ್ಲ ಬಗೆಯ ದೈಹಿಕ ಮಾನಸಿಕ ರೋಗಗಳಿಗೆ ಒಂದೇ ಸೂರಿನಡಿಯಲ್ಲಿ ಉಚಿತ ಚಿಕಿತ್ಸೆ ನೀಡುವ ಸ್ನೇಹಮಯಿ ಆಸ್ಪತ್ರೆಗಳು

ಪ್ರ ನಿಮಗೆ ಕಣ್ಣೀರು ಬರಿಸುವ ಸಂಗತಿ ಯಾವುದು?

ಉ – ದೀನ, ದುರ್ಬಲರ ದುಃಸ್ಥಿತಿ.

ಪ್ರ ನಿಮ್ಮ ವಿರಾಮದ ಕ್ಷಣಗಳನ್ನು ನೀವು ಹೇಗೆ ಕಳೆಯುತ್ತೀರಿ?

ಉ – ಓದು, ಬರವಣಿಗೆ, ಜನರೊಂದಿಗೆ ಸಂವಾದ ಮತ್ತು ಮುದ್ದಿನ ನಾಯಿಯೊಡನೆ ತಿರುಗಾಟ.

ಪ್ರ ನೀವು ಸದಾ  ನಿಮ್ಮೊಡನೆ ಒಯ್ಯುವ ವಸ್ತು ಯಾವುದು?

ಉ – ಓದಲು ಪುಸ್ತಕ/ನಿಯತಕಾಲಿಕೆ.

ಪ್ರ –  ನೀವು ಎಂಥ ಸಾವನ್ನು ಬಯಸುತ್ತೀರಿ?

ಉ – ಕರೆದಾಗ ಬರುವ ಸ್ನೇಹಮಯಿ ಸಾವು.

ಪ್ರ –  ನಿಮ್ಮನ್ನು ಜನರು ಹೇಗೆ ನೆನಪಿಸಿಕೊಳ್ಳುತ್ತಿರಬೇಕು?

ಉ – ಆರೋಗ್ಯ ಪಾಲನೆ ವರ್ಧನೆಗೆ ಮಾರ್ಗದರ್ಶಿಯಾದ ವೈದ್ಯ ಸ್ನೇಹಿತನೆಂದು.

ಪ್ರ –  ನೀವು ಮರೆಯಬೇಕೆಂದು ಬಯಸುವ ಕಹಿ ಕ್ಷಣ?

ಉ – ರೋಮ್‌ನಲ್ಲಿ ಹಣ, ಕಾಗದ ಪತ್ರಗಳು ಕಳುವಾದ ಘಟನೆ.

ಪ್ರ ಎಂಥ ಸಂದರ್ಭಗಳಲ್ಲಿ ನೀವು ಸುಳ್ಳು ಹೇಳುತ್ತೀರಿ?

ಉ – ವೈದ್ಯನಾಗಿ ರೋಗಿಯ ಹಿತದೃಷ್ಟಿಯಿಂದ ಆಗಾಗ ಸುಳ್ಳು ಹೇಳಬೇಕಾಗುತ್ತದೆ.

ಪ್ರ ಸಾಧ್ಯವಿದ್ದರೆ ನೀವು ಜಗತ್ತಿನ ಬೇರೆ ಏನಾಗಲು ಬಯಸುತ್ತೀರಿ?

ಉ – ಜನರ ಆರೋಗ್ಯಮಟ್ಟವನ್ನು ಸುಧಾರಿಸಲು ಸರ್ಕಾರದ ಸರ್ವ ಶಕ್ತಿ ಪ್ರಮುಖ.

ಪ್ರ –  ದೇವರು ನಿಮಗೆ ಮೂರು ವರ ಕೊಟ್ಟರೆ ಮೂರನೆಯ ವರದಲ್ಲಿ ಏನನ್ನು ಕೇಳುತ್ತೀರಿ?

ಉ – ಎಲ್ಲರಿಗೂ ಆರೋಗ್ಯ ಮತ್ತು ಆನಂದ.

* * *