ಡಾ|| ಸಿ.ಆರ್. ಚಂದ್ರಶೇಖರರವರು ಮನೋವೈದ್ಯರಾಗಿ, ಲೇಖಕರಾಗಿ ಶಿಕ್ಷಕರಾಗಿ, ಆಪ್ತಸಲಹೆಗಾರರಾಗಿ ಸದಾ ಕ್ರಿಯಾಶೀಲತೆ ಮೈಗೂಡಿಸಿಕೊಂಡಿರುವವರು. ಇವರು ಹಲವಾರು ಸಂಶೋಧನಾ ಕಾರ್ಯಗಳಲ್ಲಿಯೂ ಭಾಗಿಯಾಗಿದ್ದಾರೆ. ಆರೋಗ್ಯ ಮತ್ತು ಮನೋವೈದ್ಯಕೀಯಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಅತ್ಯಂತ ಸರಳವಾಗಿ, ಸುಂದರವಾಗಿ, ಓದುಗರ ಮನಮುಟ್ಟುವಂತೆ ಸಾಹಿತ್ಯ ರಚಿಸುವುದರಲ್ಲಿ ಅಗ್ರಮಾನ್ಯರು. ಇದಕ್ಕೆ ಸಾಕ್ಷಿಯೆಂದರೆ ‘ಹಿತ=ಅಹಿತ’ ಇವರ ನೂರನೆಯ ಪುಸ್ತಕ. ಮೂವತ್ತಕ್ಕೂ ಮಿಕ್ಕೆ ಪುಸ್ತಕಗಳು ಮರು ಮುದ್ರಣಗಳನ್ನು ಕಂಡಿವೆ. ‘ಬಾನಾಮತಿ’ ಪುಸ್ತಕ ಎಂಟು ಮುದ್ರಣ ಕಂಡಿದ್ದರೆ ನಿಮ್ಮ ಜ್ಞಾಪಕಶಕ್ತಿ ಹೆಚ್ಚಿಸಿಕೊಳ್ಳಿ ಮತ್ತು ನಿಮ್ಮ ಮಗುವಿನ ಮನಸ್ಸು ಪುಸ್ತಕಗಳು ಕ್ರಮವಾಗಿ ೧೮ ಮತ್ತು ೧೩ ಮುದ್ರಣಗಳನ್ನು ಕಂಡಿವೆ. ‘ಹದಿಹರೆಯ’ ಪುಸ್ತಕ ಹತ್ತು ಮುದ್ರಣ ಕಂಡಿದೆ. ತೆಲುಗಿಗೆ ಅನುವಾದಗೊಂಡ ಇವರ ನಾಲ್ಕು ಕೃತಿಗಳು ನಾಲ್ಕು ಮುದ್ರಣ ಕಂಡಿವೆ. ಇಂಗ್ಲಿಷಿನಲ್ಲಿಯೂ ೧೭ ಪುಸ್ತಕಗಳು ಪ್ರಕಟವಾಗಿವೆ. ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳು ಇವರನ್ನು ಅರಸಿಕೊಂಡು ಬಂದಿವೆ. ಡಾ|| ಎಚ್.ಎಸ್. ನರಸಿಂಹಯ್ಯ ದತ್ತಿ ಬಹುಮಾನ ಹಾಗೂ ಡಾ| ಪಿ.ಎಸ್. ಶಂಕರ್ ಪ್ರಶಸ್ತಿ ಪ್ರಮುಖವಾದವುಗಳು. ಈ ಎಲ್ಲವುಗಳಿಗೆ ಗರಿಯಿಟ್ಟಿಂತೆ ಭಾರತದಲ್ಲಿಯೇ ಮನೋವೈದ್ಯಕೀಯ ಕ್ಷೇತ್ರಕ್ಕೆ ಮತ್ತು ಕರ್ನಾಟಕಕ್ಕೆ ವೈದ್ಯಕೀಯ ಮತ್ತು ಮನೋವೈದ್ಯಕ್ಕೆ ಪ್ರಥಮ ಬಾರಿಗೆ ರಾಷ್ಟ್ರೀಯ ವಿಜ್ಞಾನ ಪ್ರಶಸ್ತಿ ಲಭಿಸಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಷಯ.

ನಿಮ್ಮ ಬಾಲ್ಯ ಜೀವನ ಹೇಗಿತ್ತು? ಯಾವ ಮಾಧ್ಯಮದಲ್ಲಿ ಶಿಕ್ಷಣ ಪೂರೈಸಿದಿರಿ? ಪತ್ರಿಕೆಗಳು ಮತ್ತು ಪಠ್ಯೇತರ ಪುಸ್ತಕಗಳನ್ನು ಓದಲು ಯಾವಾಗ ಆರಂಭಿಸಿದಿರಿ? ನಿಮ್ಮ ಮೇಲೆ ಪ್ರಭಾವ ಬೀರಿದ ಲೇಖಕ/ಲೇಖಕಿ ಯಾರು?

– ನನ್ನ ಬಾಲ್ಯಜೀವನ ಬೆಂಗಳೂರು ಜಿಲ್ಲೆಯ ಚನ್ನಪಟ್ಟಣದಲ್ಲಿ ಕಳೆಯಿತು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿಯೇ ಪಡೆದೆ. ಮಾಧ್ಯಮಿಕ ತರಗತಿಯಲ್ಲಿಯೇ ಕರ್ಮವೀರ, ಪ್ರಜಾಮತದಂತಹ ಪತ್ರಿಕೆಗಳನ್ನು ಓದಲು ಆರಂಭಿಸಿದೆ. ಅಲ್ಲದೇ ಆಗಲೇ ಐತಿಹಾಸಿಕ ಮತ್ತು ಸಾಮಾಜಿಕ ಕಾದಂಬರಿಗಳನ್ನೂ ಓದಲು ಪ್ರಾರಂಭಿಸಿದ್ದು. ನನ್ನ ಸ್ನೇಹಿತ ಲಕ್ಷ್ಮೀನಾರಾಯಣನೇ ಪಠ್ಯೇತರ ಪುಸ್ತಕಗಳ ಓದಿಗೆ ಪ್ರೇರಣೆ, ತ.ರಾ.ಸು. ಶಿವರಾಮ ಕಾರಂತರು, ಅನಕೃ. ತ್ರಿವೇಣಿಯವರ ಕಾದಂಬರಿಗಳನ್ನು ಓದುತ್ತಿದ್ದೆ. ಅವರಲ್ಲಿ ರಾಶಿ, ಶಿವರಾಮ ಕಾರಂತರು ಮತ್ತು ತ್ರಿವೇಣಿಯವರು ಹೆಚ್ಚು ಪ್ರಭಾವ ಬೀರಿದವರು. ಅಲ್ಲದೆ ತಂದೆಯವರೊಂದಿಗೆ ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಿದ್ದುದರಿಂದ ಜನಸಂಪರ್ಕವೂ ಬೆಳೆಯಿತು.

ವೈದ್ಯಕೀಯ ಶಿಕ್ಷಣ, ಅದರಲ್ಲೂ ಮನೋವೈದ್ಯಕೀಯ ಆಯ್ಕೆ ಮಾಡಿಕೊಳ್ಳಲು ಕಾರಣ?

– ಎಸ್.ಎಸ್.ಎಲ್.ಸಿ.ಯಲ್ಲಿ ಇಡೀ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದರೂ ಚನ್ನಪಟ್ಟಣದಲ್ಲಿ ಕಾಲೇಜು ವಿದ್ಯಾಭ್ಯಾಸ ಇಲ್ಲದ ಕಾರಣ ವಿದ್ಯಾಭ್ಯಾಸ ಮುಂದುವರೆಸುವುದು ಕಷ್ಟವೆಂದು ಭಾವಿಸಿದಾಗ, ಶಿಕ್ಷಕರಾದ ಮಹಮ್ಮದ್ ಘೋರಿಯವರು ಪ್ರೋತ್ಸಾಹಿಸಿ ಶಿಕ್ಷಣ ಮುಂದುವರೆಸಬೇಕೆಂದು ಒತ್ತಾಯಿಸಿ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಸರ್ಕಾರಿ ಕಾಲೇಜಿಗೆ ಸೇರಲು ಕಾರಣವಾದರು. ಹೌಸ್ ಸರ್ಜನ್ಸಿ ಸಮಯದಲ್ಲಿ ಪ್ರಸಿದ್ಧ ಮನೋವೈದ್ಯರಾದ ಡಾ| ಎಚ್.ಎಸ್. ನಾರಾಯಣರವರ ಬಳಿ ಕೆಲಸ ಮಾಡಿದ್ದು ಸ್ನಾತಕೋತ್ತರದಲ್ಲಿ ಮನೋವೈದ್ಯಕೀಯ ಆಯ್ಕೆ ಮಾಡಿಕೊಳ್ಳಲು ಕಾರಣವಾಯಿತು.

ಸಾಹಿತ್ಯ ಮತ್ತು ವೈದ್ಯಕೀಯ ಎರಡರಲ್ಲೂ ಯಶಸ್ಸು ಸಾಧಿಸಿರುವಿರಿ. ಎರಡನ್ನು ಸರಿದೂಗಿಸಿಕೊಂಡು ಹೋಗುವುದು ಹೇಗೆ ಸಾಧ್ಯವಾಯಿತು?

– ವ್ಯಕ್ತಿಗಳ ಮಾನಸಿಕ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರ ಸೂಚಿಸುವುದು ಮಾತ್ರವಲ್ಲ, ಬದುಕಿನ ನಾನಾ ಕಷ್ಟಕೋಟಲೆಗಳಿಗೆ ಸ್ಪಂದಿಸುವಂತಹ ಮನೋಭವ ಮತ್ತು ಅದಕ್ಕೆ ಅವಕಾಶ ದೊರೆತಿರುವುದು. ಅಲ್ಲದೇ ವೈದ್ಯ ವೃತ್ತಿಯೂ ನನ್ನ ಸಾಹಿತ್ಯ ಸೃಷ್ಟಿಗೆ ಪೂರಕವಾಗಿದೆ. ಬರವಣಿಗೆಯನ್ನು ಹವ್ಯಾಸವನ್ನಾಗಿ ಬೆಳೆಸಿಕೊಂಡಾಗ ಅದಕ್ಕೆ ಸಮಯ ಹೊಂದಿಸಿಕೊಳ್ಳುವುದು ಕಷ್ಟವಾಗುವುದಿಲ್ಲ.

ತಾವು ಮನೋವೈದ್ಯರಾಗಿ ಲೇಖಕರಾಗಿ ಮಾತ್ರವಲ್ಲ, ಸಂಘಟಕರಾಗಿಯೂ ಯಶಸ್ವಿಯಾಗಿರುವಿರಿ. ವೈದ್ಯಸಾಹಿತಿಗಳನ್ನು ಒಗ್ಗೂಡಿಸಿ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು ಸ್ಥಾಪಿಸಿರುವಿರಿ. ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಬಗ್ಗೆ ತಿಳಿಸುವಿರಾ?

– ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಅಂದರೆ ಕನ್ನಡದಲ್ಲಿ ವೈದ್ಯಸಾಹಿತ್ಯ ಸೃಷ್ಟಿಯಾಗಬೇಕು. ಮಾತ್ರವಲ್ಲ, ಈ ಸಾಹಿತ್ಯ ನಾಡಿನ ಮೂಲೆ ಮೂಲೆಗೂ ತಲುಪಬೇಕು ಎಂಬುದೇ ಕನ್ನಡ ವೈದ್ಯಸಾಹಿತ್ಯ ಪರಿಷತ್ತಿನ ಮುಖ್ಯ ಉದ್ದೇಶ. ಸಮಾಜದಲ್ಲಿ ಆರೋಗ್ಯ, ಅನಾರೋಗ್ಯದ ಬಗ್ಗೆ ಚಿಂತನೆ ನಡೆಯಬೇಕು. ವೈದ್ಯಸಾಹಿತ್ಯ ಪ್ರಕಟಣೆಗೆ ಉತ್ತೇಜನ, ಬರಹಗಾರರಿಗೆ ಪ್ರೋತ್ಸಾಹ, ವೈದ್ಯಸಾಹಿತ್ಯದ ವಿಮರ್ಶೆ ನಿರಂತರವಾಗಿ ನಡೆಯಬೇಕು. ವೈದ್ಯಸಾಹಿತ್ಯವನ್ನು ಸಾಹಿತ್ಯದ ಮುಖ್ಯ ಪ್ರಕಾರವಾಗಿ ಸಾಹಿತ್ಯ ಸಂಸ್ಥೆಗಳು ಅಕಾಡೆಮಿಗಳು ಹಾಗೂ ಸರ್ಕಾರ ಮನ್ನಣೆ ನೀಡಬೇಕೆಂಬುದೇ ನನ್ನ ಆಶಯ.

ವೈದ್ಯ ಸಾಹಿತ್ಯದ ದಿಗ್ಗಜರಾದ ನಿಮಗೆ ಕೇಂದ್ರ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆಯಿಂದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಅಲ್ಲದೇ ನೀವು ಶತಕದ ಲೆಖಕರಾಗಿರುವಿರಿ. ತಮ್ಮ ನೂರನೆಯ ಪುಸ್ತಕ ಹಿತಅಹಿತ ಪ್ರಕಟಗೊಂಡಿದೆ. ಸಂದರ್ಭದಲ್ಲಿ ನಿಮ್ಮ ಅನಿಸಿಕೆ?

– ಇದುವರೆಗೆ ಪ್ರಕಟವಾದ ಪುಸ್ತಕಗಳು ಮತ್ತು ಲೇಖನಗಳ ಮೂಲಕ ಸಾಕ್ಟು ವಿದ್ಯಾವಂತರನ್ನು ತಲುಪಿರುವ ಸಮಾಧಾನವಿದೆ. ಸ್ವಲ್ಪ ಮಟ್ಟಿಗಾದರೂ ಮನೋರೋಗಗಳ ಬಗ್ಗೆ ಇರುವ ಸಾಮಾಜಿಕ ಕಳಂಕ ಕಡಿಮೆ ಮಾಡಲು ನಾನು ಪ್ರಯತ್ನ ಮಾಡಿದ್ದೇನೆನ್ನುವ ತೃಪ್ತಿ ಇದೆ. ತಿಂಗಳಿಗೆ ಸರಾಸರಿ ೨೦೦ ಪತ್ರಗಳು ಬರುತ್ತಿರುವುದು ನನ್ನ ಪುಸ್ತಕಗಳು ನಾಡಿನ ಮೂಲೆ, ಮೂಲೆ ತಲುಪಿವೆ ಎಂಬುದಕ್ಕೆ ಸಾಕ್ಷಿಯಾಗಿವೆ. ಪ್ರಥಮ ಬಾರಿಗೆ ಮನೋವೈದ್ಯಕೀಯಕ್ಕೆ ರಾಷ್ಟ್ರೀಯ ವಿಜ್ಞಾನ ಪ್ರಶಸ್ತಿ ಲಭಿಸಿರುವುದು ಅತ್ಯಂತ ಸಂತಸ ತಂದಿದೆ.

ಇಂದು ವಿಶ್ವದಾದ್ಯಂತ ಧಾರ್ಮಿಕ ಮೂಲಭೂತವಾದದ ಭಯೋತ್ಪಾದನೆ ಹೆಚ್ಚುತ್ತಿರುವುದು ಆತಂಕದ ವಿಷಯ. ಇದಕ್ಕೆ ಒಬ್ಬ ಮನೋವೈದ್ಯರಾಗಿ ಹಾಗೂ ಲೇಖಕರಾಗಿ ಯಾವ ರೀತಿ ಪರಿಹಾರ ಸೂಚಿಸುವಿರಿ?

ಜನರಲ್ಲಿ ಸ್ವಾರ್ಥಪರತೆ ಹೆಚ್ಚಾಗಿ ಸಾಮಾಜಿಕ ಹಾಗೂ ಸಮುದಾಯ ಪ್ರಜ್ಞೆ ಕಡಿಮೆಯಾಗುತ್ತಿದೆ. ವ್ಯಕ್ತಿಗಳಲ್ಲಿ ಒಳಮನಸ್ಸಿನ ನಿರಾಶೆ, ದುಃಖ, ಕೋಪ, ಭಯಗಳಿಂದ ಹರಬರಲು ಇದೊಂದು ನೆಪವಾಗಿದೆ. ಸರಳ, ತೃಪ್ತ ಹಾಗೂ ಸಾತ್ವಿಕ ಜೀವನಶೈಲಿಗೆ ಹೆಚ್ಚು ಒತ್ತು ಕೊಡುವುದರಿಂದ ಭಯೋತ್ಪಾದನೆಯ ಸಮಸ್ಯೆಗೆ ಪರಿಣಾಮಕಾರಿ ಉತ್ತರವಾಗುತ್ತದೆ.

– ಸಂಯುಕ್ತ ಕರ್ನಾಟಕ

* * *