ಶೈಕ್ಷಣಿಕ ವಿಷಯಗಳೊಂದಿಗೆ ಮನಃಶಾಸ್ತ್ರದ ಪ್ರಾಥಮಿಕ ವಿಚಾರಗಳನ್ನು ಪಠ್ಯ ಪುಸ್ತಕದಲ್ಲಿ ಸೇರಿಸಬೇಕು ಎಂದು ಹಲವಾರು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬಗ್ಗೆ ನಿಮ್ಮ ಅನಿಸಿಕೆ ಏನು?

– ಖಂಡಿತ ಸೇರಿಸಬೇಕು. ಯಾರಿಗೆ, ಎಷ್ಟು ಬೋಧಿಸಬೇಕು ಎಂಬ ವಿಚಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರ ವಹಿಸಬೇಕು. ಆದರೆ ಪ್ರಾಥಮಿಕ ಮನೋವಿಜ್ಞಾನವನ್ನು ಬೋಧಿಸುವುದರಿಂದ ವಿದ್ಯಾರ್ಥಿಗಳಿಗೆ ಬಹಳ ಸಹಾಯವಾಗುತ್ತದೆ. ಜ್ಞಾಪಕಶಕ್ತಿಯ ಬಗ್ಗೆ, ವ್ಯಕ್ತಿತ್ವ ವಿಕಾಸದ ಬಗ್ಗೆ, ಮನಸ್ಸಿನ ವಿಕಾಸದ ಬಗ್ಗೆ ಹೇಳುವುದು ಉಚಿತ. ಈ ರೀತಿಯ ಅತ್ಯಂತ ಸರಳ ಮನಃಶಾಸ್ತ್ರದ ಅರಿವು ವಿದ್ಯಾರ್ಥಿಗಳಲ್ಲಿ ಇರುವುದು ಅತ್ಯಂತ ಪ್ರಯೋಜನಕಾರಿಯಾಗಿರುತ್ತದೆ.

ಇಂದಿನ ಒತ್ತಡ ಜೀವನಶೈಲಿಯಲ್ಲಿ ವ್ಯಕ್ತಿಯ ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಕಲಿಯುವುದೆಂತು?

– ಒತ್ತಡ (Stress) ಎಲ್ಲ ಜೀವಿಗಳಲ್ಲೂ ಇದೆ. ಪ್ರೈಮರಿ ಶಾಲಾ ದಿನಗಳಿಂದಲೇ ಹಂತ ಹಂತವಾಗಿ ಮಾನಸಿಕ ಒತ್ತಡವನ್ನು ಪರಿಹರಿಸಿಕೊಳ್ಳುವ ವಿಧಾನವನ್ನು (Stress Management) ಹೇಳಿಕೊಡುವುದು ಉಚಿತ. ಒತ್ತಡ ಯಾವುದೇ ಕಾರಣದಿಂದಾದರೂ ಆಗಿರಬಹುದು. ಪರೀಕ್ಷೆಗಳು, ಕೌಟುಂಬಿಕ ಸಮಸ್ಯೆ, ಆರ್ಥಿಕ ಮುಗ್ಗಟ್ಟು, ಮೊದಲಾದ ಎಲ್ಲ ಅಂಶಗಳು ವಿದ್ಯಾರ್ಥಿಯ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು.

ಈ ಒತ್ತಡ ಹೊರಬರಲು ಏಕೈಕ ಮಾರ್ಗವೆಂದರೆ ಅದನ್ನು ಯಾರಲ್ಲಾದರೂ  ಹೇಳಿಕೊಳ್ಳುವುದು. ಹೇಳಿಕೊಳ್ಳದಿದ್ದರೆ ಅದು ಅವರ ಗುಣ-ನಡತೆಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗುತ್ತದೆ. ಮೆದುಳಿನ ರಚನೆ ಹೇಗಿರುತ್ತದೆ? ಮನಸ್ಸು ಹೇಗೆ ಕೆಲಸ ಮಾಡುತ್ತದೆ? ಭಾವನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? ಎಂಬುದನ್ನೆಲ್ಲ ನಮ್ಮ ವಿದ್ಯಾರ್ಥಿಗಳು ಅರಿಯಬೇಕು. ಇಂದು ಬೌದ್ಧಿಕ ಬೆಳವಣಿಗೆ ಅಥವಾ ಬುದ್ಧಿಶಕ್ತಿ ಎಂದರೆ ವಿಚಾರಸಂಗ್ರಹಣೆ ಎಂದಷ್ಟೇ ಆಗಿಬಿಟ್ಟಿದೆ. ಆದರೆ ಆಲೋಚನಾಶಕ್ತಿಯನ್ನು ಬೆಳೆಸುವ ಬಗ್ಗೆ ನಾವು ಒತ್ತು ನೀಡಬೇಕಾಗಿದೆ.

ಕೆಲವು ಶಿಕ್ಷಣಸಂಸ್ಥೆಗಳಲ್ಲಿ ವಿದ್ಯಾರ್ಥಿ ಸಲಹಾ ಕೇಂದ್ರಗಳು (Student counselling cell) ಕೆಲಸ ಮಾಡುತ್ತಿದೆ. ಪ್ರಯತ್ನ ಸಫಲವಾಗಿದೆಯೇ?

ಇದೊಂದು ಸ್ವಾಗತಾರ್ಹ ಪ್ರಯೋಗ. ಆದರೆ ಇದು ಹೆಚ್ಚು ಯಶಸ್ವಿಯಾಗಿಲ್ಲ. ಏಕೆಂದರೆ ಆಪ್ತ ಸಲಹಾ ಕೇಂದ್ರ ನಡೆಸುವ  ವ್ಯಕ್ತಿಗಳು ಮೊದಲು ಸಮರ್ಥರಾಗಿರಬೇಕಾಗುತ್ತದೆ. ಅದಕ್ಕಾಗಿ ಆಯಾ ಶಾಲಾ=ಕಾಲೇಜಿನ ಅಧ್ಯಾಪಕ ವರ್ಗದಿಂದ ಆಯ್ದು ಅಧ್ಯಾಪಕರಿಗೆ ಮೊದಲು ಸೂಕ್ತ ತರಬೇತಿ ನೀಡಬೇಕಾಗುತ್ತದೆ. ವಿದ್ಯಾರ್ಥಿಗಳು ಸಲಹಾ ಕೇಂದ್ರಕ್ಕೆ ಹೋಗುವುದು ಒಂದು ನ್ಯೂನತೆ ಎಂದು ಭಾವಿಸುವುದೂ ಉಂಟು. ಸಲಹಾ ಕೇಂದ್ರ ಕೇವಲ ಮಾನಸಿಕ ತುಮುಲಗಳಿಗಷ್ಟೇ ಪರಿಹಾರ ನೀಡುವ ಕೇಂದ್ರವಾಗದೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ನಿಲ್ಲುವ ಆತ್ಮೀಯ ಸಂಘಟನೆಯಾಗಿ ನಿಂತಾಗ ಈ ಕೇಂದ್ರಗಳು ಯಶಸ್ವಿಯಾಗುತ್ತವೆ.

ಇಂದಿನ ಯುವಜನತೆಯ ಮುಖ್ಯ ಸಮಸ್ಯೆಯೇನು?

– ಸಾರ್ವತ್ರಿಕ ಸಮಸ್ಯೆಯೊಂದಿಗೆ; ತನ್ನತನವನ್ನು ಕಂಡುಕೊಳ್ಳುವ ಸಮಸ್ಯೆ (Identity crisis). ಹದಿವಯಸ್ಸಿಗೆ ಬಂದ ಕೂಡಲೇ ವ್ಯಕ್ತಿ ತನ್ನ ಪ್ರತ್ಯೇಕತೆಯನ್ನು ಗುರುತಿಸಿಕೊಳ್ಳುತ್ತಾನೆ ಮತ್ತು ಇತರರು ಅದನ್ನು ಗಮನಿಸಬೇಕು, ಗೌರವಿಸಬೇಕು ಎಂದು ಆಶಿಸುತ್ತಾನೆ.

ಭಾರತೀಯ ಸಮಾಜದಲ್ಲಿ ಎರಡನೆಯ ಸಮಸ್ಯೆಯೆಂದರೆ ಸ್ವಾವಲಂಬಿ ಬದುಕಿಗಾಗಿ ನಡೆಯುವ ತುಮುಲಗಳು. ನಮ್ಮ ಸಮಾಜದಲ್ಲಿ ವ್ಯಕ್ತಿಯ ಹದಿವಯಸ್ಸು ತನ್ನ ನಿಗದಿತ ಕಾಲವನ್ನು ಮೀರಿಹೋಗುತ್ತದೆ (Prolonged Adolescence) ಸಾಮಾಜಿಕ ಅಸ್ಥಿರತೆ ಮತ್ತು ಅವ್ಯವಸ್ಥೆ ಹಾಗೂ ಮೌಲ್ಯಗಳ ಬದಲಾವಣೆ ಯುವ ಜನತೆಯ ಮಾನಸಿಕ ಅಶಾಂತಿಗೆ ಕಾರಣವಾಗಿದೆ. ನಾವು ಅವರಿಗೆ ಶಾಲಾ ಕಾಲೇಜುಗಳಲ್ಲಿ ಬೋಧಿಸುವ ಮೌಲ್ಯಗಳು ಸಮಾಜದಲ್ಲಿ ಪ್ರತಿಫಲಿತವಾಗುತ್ತಿರಲಿಲ್ಲವೆಂಬ ವಾಸ್ತವಿಕತೆಯ ಅರಿವು ಅವರಲ್ಲಿ ಖಿನ್ನತೆ ಅಥವಾ ಪ್ರತಿಭಟನಾ ಮನೋಭಾವವನ್ನು ಬೆಳೆಸುತ್ತವೆ.

ಧಾರ್ಮಿಕ ವಿಚಾರಗಳು ಮನುಷ್ಯನ ಭ್ರಮೆ ಎಂದು ಅವು ವ್ಯಕ್ತಿಯನ್ನು ದುರ್ಬಲಗೊಳಿಸುತ್ತವೆ ಎಂಬುದು ಹಲವರ ವಾದ. ಬಗ್ಗೆ ನಿಮ್ಮ ಅಭಿಪ್ರಾಯವೇನು?

– ಧಾರ್ಮಿಕ ಮನೋಭಾವ ಮನುಷ್ಯನ ಚಾರಿತ್ರ‍್ಯ ರೂಪಿಸುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಅದು ನಡವಳಿಕೆಯ ಸೂತ್ರಗಳನ್ನು ನಮಗೆ ನೀಡುತ್ತದೆ. ಆದರೆ ಇವುಗಳ ಅತಿಯಾದಾಗ ತೊಂದರೆ ಆಗುವ ಸಾಧ್ಯತೆಯಿರುವುದರಿಂದ ಕೆಲವರು ಧರ್ಮದಿಂದ ತೊಂದರೆ ಎಂದು ಹೇಳಿರಬಹುದು. ಯಾವುದೇ ಧರ್ಮವಾಗಲಿ ಮುಖ್ಯವಾಗಿ ಎರಡು ಅಂಶಗಳನ್ನು ಒತ್ತಿ ಹೇಳುತ್ತದೆ. ಒಂದು ದೇವರಲ್ಲಿ ನಂಬಿಕೆ, ಎರಡನೆಯದು ಸನ್ನಡತೆಯ ಸೂತ್ರಗಳು. ಕೆಲವೊಮ್ಮೆ ಈ ಸೂತ್ರಗಳ ತಿದ್ದುವಿಕೆ, ತಿರುಚುವಿಕೆ ನಡೆದು, ಧರ್ಮ ಕೆಟ್ಟದ್ದು ಎಂದು, ಶೋಷಣೆಗೆ ಕಾರಣ ಎಂದು ಭಾವಿಸುವಂತಾಗಿರುವುದು ದುರದೃಷ್ಟಕರವಾಗಿದೆ. ಧರ್ಮದ ಉದ್ದೇಶ ವ್ಯಕ್ತಿಗತ ಸಮತೋಲನ ಮತ್ತು ಸಮಾಜದ ಸಮತೋಲನ. ಧಾಮಿಕ ನಂಬಿಕೆ, ಆಚರಣೆಗಳ ವ್ಯಕ್ತಿಯ, ಸಮಾಜದ ಬೆಳವಣಿಗೆ ಅತ್ಯಂತ ಅವಶ್ಯಕತೆ ಅಂಶ.

ಒಬ್ಬ ಮನೋವಿಜ್ಞಾನಿಯಾಗಿ ಅತೀಂದ್ರಿಯ ಶಕ್ತಿಗಳ ಬಗ್ಗೆ ಏನು ಹೇಳುವಿರಿ?

– ಅತೀಂದ್ರಿಯ ಶಕ್ತಿಗಳ ಬಗ್ಗೆ ವೈಜ್ಞಾನಿಕವಾಗಿ ಯಾವ ನಿಖರ ಮಾಹಿತಿಯೂ ಇಲ್ಲ. ಅತೀಂದ್ರಿಯ ಶಕ್ತಿ ಇರುವ ಬಗ್ಗೆಯೂ ಉದಾಹರಣೆಗಳು ಇವೆ; ಆದರೆ ಅವು ಪ್ರಾಯೋಗಿಕ ಚೌಕಟ್ಟಿಗೆ ದೊರಕದಿರುವುದರಿಂದ ಈ ಬಗ್ಗೆ ನಾವು ಖಡಾಖಂಡಿತವಾಗಿ ಇದೆ ಅಥವಾ ಇಲ್ಲ ಎಂದು ಹೇಳುವುದು ಸಾಧ್ಯವಿಲ್ಲ.

ಯುವಜನತೆಗೆ ನೀವು ವಿಶೇಷವಾಗಿ ಏನನ್ನಾದರೂ ಹೇಳಬಯಸುವಿರಾ?

– ವಾಸ್ತವಿಕವಾಗಿ ಬದುಕುವುದನ್ನು ನಮ್ಮ ಯುವಜನರು ಕಲಿಯಬೇಕು. ಫ್ಯಾಂಟೆಸಿಗೆ ಒಳಗಾಗಿ ಭಾವನಾತ್ಮಕ ಸೋಲುಗಳನ್ನು, ಕಷ್ಟಪರಂಪರೆಗಳನ್ನು ಎದುರಿಸಬಾರದು.  ಕೀಳರಿಮೆ, ಮೇಲರಿಮೆಗಳಿಗೆ ಒಳಗಾಗದೆ ಸಹಜವಾಗಿ ಬದುಕುವನ್ನು ಅಭ್ಯಸಿಸಬೇಕು. ತಮ್ಮ ಸಾಮರ್ಥ್ಯದ ಇತಿಮಿತಿಯರಿತು ಗುರಿ ಸಾಧನೆಗಳನ್ನು ರೂಢಿಸಿಕೊಳ್ಳಬೇಕು ಮತ್ತು ಅದಕ್ಕೆ ತಕ್ಕಂತಹ ಜೀವನ ನಡೆಸುತ್ತಾ ಸಂತೃಪ್ತಿಯನ್ನು ಕಾಣಬೇಕು. ತಮ್ಮ ಕ್ಷೇಮಕ್ಕೆ ಗಮನ ಕೊಡುವುದರ ಜೊತೆಗೆ ಇತರರ ಕ್ಷೇಮ ಚಿಂತನೆಯನ್ನೂ ಮಾಡಬೇಕು.

* * *