ಮನೋವೈದ್ಯಕೀಯ ಹಾಗೂ ವೈದ್ಯಸಾಹಿತ್ಯ ಕ್ಷೇತ್ರಗಳೆರಡರಲ್ಲೂ ಮಹತ್ವದ ಸಾಧನೆಗೈದ ವ್ಯಕ್ತಿ ಡಾ|| ಸಿ.ಆರ್. ಚಂದ್ರಶೇಖರ್, ಮನೋವೈದ್ಯರಾಗಿ, ಲೇಖಕರಾಗಿ, ಆಪ್ತಸಲಹೆಗಾರರಾಗಿ ಕನ್ನಡನಾಡಿನ ಮೂಲೆ ಮೂಲೆಗಳಿಗೂ ತಲುಪಿದ ಕೀರ್ತಿ ಇವರದು. ಖ್ಯಾತ ವೈದ್ಯ ಹಾಗೂ ಲೇಖಕ ಡಾ|| ಎಚ್.ಡಿ. ಚಂದ್ರಪ್ಪಗೌಡರು ಇವರನ್ನು ‘ಜೀವಂತ ದಂತಕಥೆ’ ಎಂದು ಬಣ್ಣಿಸಿರುವುದರಲ್ಲಿ ಅತಿಶಯೋಕ್ತಿ ಏನಿಲ್ಲ. ಜನರಲ್ಲಿನ ಮೂಢನಂಬಿಕೆ, ಕಂದಾಚಾರವನ್ನು ಹೋಗಲಾಡಿಸುವಲ್ಲಿ ಸರಳ ಶೈಲಿಯಲ್ಲಿ ಮನೋವೈದ್ಯಕೀಯ ವಿಷಯಗಳನ್ನು ಬರೆದು ಅರಿವು ಮೂಡಿಸಿದ್ದಾರೆ.

ಡಾ|| ಸಿ.ಆರ್. ಚಂದ್ರಶೇಖರ್‌ರವರ ಮೂವತ್ತಕ್ಕೂ ಮಿಕ್ಕ ಪುಸ್ತಕಗಳು ಮರು ಮುದ್ರಣ ಕಂಡಿವೆ. ‘ನಿಮ್ಮ ಮಗುವಿನ ಮನಸ್ಸು’, ‘ಮಕ್ಕಳ ಮಾನಸಿಕ ಸಮಸ್ಯೆಗಳು’, ‘ಬಾನಾಮತಿ’, ‘ಹದಿಮರೆಯ’ ಏಳು ಮುದ್ರಣಗಳನ್ನು ಕಂಡಿವೆ. ‘ಲೈಂಗಿಕ ಅರಿವು’, ‘ಮೈಮೇಲೆ ದೆವ್ವ ಬರುವುದೆ?’ ‘ಮನೋರೋಗ ನಿಮ್ಮ ನಂಬಿಕೆ ಎಷ್ಟು ಸರಿ, ಎಷ್ಟು ತಪ್ಪು?’ ಪುಸ್ತಕಗಳು ೬ನೇ ಮುದ್ರಣ ಕಂಡಿವೆಯಾದರೆ ‘ನಿಮ್ಮ ಜ್ಞಾಪಕ ಶಕ್ತಿಯ ವೃದ್ಧಿ ಹೇಗೆ?’  ಪುಸ್ತಕ ೧೧ನೇ ಮುದ್ರಣ ಕಂಡಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ತೆಲುಗಿಗೆ ಅನುವಾದಗೊಂಡ ಇವರ ನಾಲ್ಕು ಪುಸ್ತಕಗಳು ನಾಲ್ಕು ಮುದ್ರಣವನ್ನು ಕಂಡಿವೆ. ಇಂಗ್ಲಿಷ್‌ನಲ್ಲಿ ೧೫ ಕೃತಿಗಳು ಪ್ರಕಟವಾಗಿದೆ. ಇಂತಹ ಬಹುಮುಖ ಪ್ರತಿಭೆಗೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾಋಗಳು ಅರಸಿ ಬಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಡಾ|| ಎಸ್. ಎನ್. ಜಯರಾಮ್ ಪುರಸ್ಕಾರ, ಡಾ|| ಎಚ್. ನರಸಿಂಹಯ್ಯ ದತ್ತಿ ಬಹುಮಾನ, ಡಾ|| ಪಿ.ಎಸ್. ಶಂಕರ್ ಪ್ರಶಸ್ತಿ ಮುಖ್ಯವಾದವುಗಳು. ಈ ಎಲ್ಲಕ್ಕೂ ಗರಿಯಿಟ್ಟಂತೆ ಭಾರತದಲ್ಲಿಯೇ ಮನೋವೈದ್ಯಕೀಯ ಕ್ಷೇತ್ರಕ್ಕೆ ಪ್ರಥಮ ಬಾರಿಗೆ ಅಲ್ಲದೇ ಕರ್ನಾಟಕಕ್ಕೆ ವೈದ್ಯಕೀಯ ಹಾಗೂ ಮನೋವೈದ್ಯಕೀಯ ಕ್ಷೇತ್ರಕ್ಕೆ ಪ್ರಥಮ ಬಾರಿಗೆ ರಾಷ್ಟ್ರೀಯ ವಿಜ್ಞಾನ ಸಂಸ್ಥೆಯ ಪ್ರಶಸ್ತಿ ಲಭಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿ.

ಕನ್ನಡನಾಡಿನ ಮನೆ ಮಾತಾಗಿರುವ ಹೆಸರಾಂತ ವೈದ್ಯ ಲೇಖಕ ಆಪ್ತ ಸಲಹೆಗಾರ ಡಾ|| ಸಿ.ಆರ್. ಚಂದ್ರಶೇಖರ್‌ರಾಗಿ ರೂಪುಗೊಂಡಿದ್ದು ಹೇಗೆ ಅವರ ಮಾತಿನಲ್ಲೇ ಕೇಳೋಣ, “ನಾನು ನನ್ನ ಬಾಲ್ಯ ಕಳೆದದ್ದು ಚನ್ನಪಟ್ಟಣದಲ್ಲಿ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿಯೇ ಆಯಿತು. ಮಾಧ್ಯಮಿಕ ತರಗತಿಗಳಲ್ಲಿದ್ದಾಗಲೇ ಕರ್ಮವೀರ, ಪ್ರಜಾಮಣಿಯಂತಹ ಪತ್ರಿಕೆಗಳನ್ನು ಓದಲು ಆರಂಭಿಸಿದೆ. ಅಲ್ಲದೇ ಐತಿಹಾಸಿಕ ಮತ್ತು ಸಾಮಾಜಿಕ ಕಾದಂಬರಿಗಳನ್ನು ಓದಲು ಆರಂಭಿಸಿದೆ. ನನ್ನ ಸ್ನೇಹಿತ ಲಕ್ಷ್ಮೀನಾರಾಯಣನೇ ಓದಲು ಪ್ರೇರಣೆ. ತರಾಸು. ಶಿವರಾಮ ಕಾರಂತರು, ಅನಕೃ, ತ್ರಿವೇಣಿಯವರ ಕಾದಂಬರಿಗಳನ್ನು ಓದುತ್ತಿದ್ದೆ. ರಾಶಿ, ಶಿವರಾಮ ಕಾರಂತರು, ತ್ರಿವೇಣಿಯವರು ಹೆಚ್ಚು ಪ್ರಭಾವ ಬೀರಿದ್ದು ಅಲ್ಲದೇ ತಂದೆಯವರೊಂದಿಗೆ ಮುದ್ರಾಣಾಲಯದಲ್ಲಿ ಕೆಲಸ ಮಾಡುತ್ತಿದ್ದುದರಿಂದ ಜನಸಂಪರ್ಕವೂ ಬೆಳೆಯಿತು” ಎನ್ನುತ್ತಾರೆ. ವೈದ್ಯಕೀಯ ಅದರಲ್ಲಿಯೂ ಮನೋವೈದ್ಯಕೀಯವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣವೇನು ಎಂದಾಗ ಹೀಗೆ ಹೆಳುತ್ತಾರೆ “ಎಸ್.ಎಸ್.ಎಲ್.ಸಿ. ಯಲ್ಲಿ ಇಡೀ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದರೂ ಚನ್ನಪಟ್ಟಣದಲ್ಲಿ ಕಾಲೇಜಿಲ್ಲದ ಕಾರಣ ವಿದ್ಯಾಭ್ಯಾಸ ಮುಂದುವರೆಸುವುದು ಕಷ್ಟವಾಯಿತು. ಶಿಕ್ಷಕರಾದ ಮಹಮ್ಮದ್ ಘೋರಿಯವರು ಪ್ರೋತ್ಸಾಹಿಸಿ ಶಿಕ್ಷಣ ಮುಂದುವರೆಸಬೇಕೆಂದು ಒತ್ತಾಯಿಸಿ ಬೆಂಗಳೂರಿಗೆ ವಿದ್ಯಾಭ್ಯಾಸಕ್ಕಾಗಿ ಸರ್ಕಾರಿ ಕಾಲೇಜಿಗೆ ಸೇರಲು ಕಾರಣರಾದರು. ಹೌಸ್ ಸರ್ಜನ್ಸಿ ಸಮಯದಲ್ಲಿ ಪ್ರಸಿದ್ಧ ಮನೋವೈದ್ಯರಾದ ಡಾ|| ಎಸ್.ಎಸ್. ನಾರಾಯಣರವರ ಬಳಿ ಕೆಲಸ ಮಾಡಿದ್ದು ಸ್ನಾತಕೋತ್ತರದಲ್ಲಿ ಮನೋವೈದ್ಯಕೀಯವನ್ನು ಆಯ್ಕೆ ಮಾಡಿಕೊಳ್ಳಲು ಕಾರಣವಾಯಿತು” ಎಂದು ಹೇಳುತ್ತಾರೆ.

ಸಿ.ಆರ್.ಸಿ. ಎಂದೇ ಚಿರಪರಿಚಿತರಾಗಿರುವ ಡಾ|| ಸಿ.ಆರ್. ಚಂದ್ರಶೇಖರ್‌ರವರು ವೈದ್ಯಕೀಯ ಮತ್ತು ಸಾಹಿತ್ಯ ಎರಡರಲ್ಲಿಯೂ ಯಶಸ್ಸು ಸಾಧಿಸಿದವರು, ಎರಡನ್ನೂ ಸಮತೂಗಿಸಿಕೊಂಡು ಹೋಗುತ್ತಿರುವುದು ಹೇಗೆ ಸಾಧ್ಯ? ಎಂದು ಕೇಳಿದರೆ ಮುಗುಳ್ನಗುವ ಚಂದ್ರಶೇಖರ್‌ರವರು, “ವ್ಯಕತಿಗಳ ಮಾನಸಿಕ ಸಮಸ್ಯೆಗಳನ್ನು ಗುರುತಿಸಿ ಅದಕ್ಕೆ ಪರಿಹಾರ ಸೂಚಿಸುವುದು ಬದುಕಿನ ನಾನಾ ಕಷ್ಟಕೋಟಲೆಗಳಿಗೆ ಸ್ಪಂದಿಸುವಂತಹ ಮನೋಭಾವ, ಅವಕಾಶ ದೊರೆತಿರುವುದು ಮಾತ್ರವಲ್ಲ, ವೈದ್ಯವೃತ್ತಿಯೂ ಸಾಹಿತ್ಯ ಸೃಷ್ಟಿಗೆ ಪೂರಕವಾಗಿದೆ. ಬರವಣಿಗೆಯನ್ನು ಹವ್ಯಾಸವನ್ನಾಗಿ ಬೆಳೆಸಿಕೊಂಡಾಗ ಅದಕ್ಕೆ ಸಮಯ ಮತ್ತು ಅವಕಾಶವನ್ನು ಹೊಂದಿಸಿಕೊಳ್ಳಬಹುದು. ಹವ್ಯಾಸದಿಂದ ಮನಸ್ಸಿಗೆ ಸಂತೋಸ, ನೆಮ್ಮದಿ ಸಿಗುವುದರಿಂದ ಕಷ್ಟವೆನಿಸುವುದಿಲ್ಲ. ೧೯೭೧ ರಲ್ಲಿ ಮೊದಲ ಲೇಖನ ಮತ್ತು ೧೯೭೯ ರಲ್ಲಿ ಮೊದಲ ಪುಸ್ತಕ ‘ಮೆದುಳು’ ಪ್ರಕಟಗೊಂಡಿತು. ಅಂದಿನಿಂದ ಆರಂಭವಾದ ಬರಹದ ನಂಟು ಇವತ್ತಿಗೂ ಅವ್ಯಾಹತವಾಗಿ ಸಾಗಿದೆ.

ಕರ್ನಾಟಕದಾದ್ಯಂತ ಸಾವಿರಾರು ಜನರ ಸಮಸ್ಯೆಗಳಿಗೆ ಪ್ರತಿದಿನ ಪರಿಹಾರ ಒದಗಿಸುವ ಡಾ|| ಸಿ.ಆರ್. ಚಂದ್ರಶೇಖರ್‌ರವರ ಸಮಾಧಾನ ‘ಆಪ್ತಸಲಹಾ ಕೇಂದ್ರ’ ವನ್ನು ಸ್ಥಾಪಿಸಿ ಉಚಿತ ಆಪ್ತಸಲಹೆ ನೀಡುತ್ತಾರೆ. ತರಬೇತಿ ನೀಡುತ್ತಾರೆ. ಪತ್ನಿ ರಾಜೇಶ್ವರಿಯೂ ಸಂಗೀತಗಾರರಾಗಿದ್ದು ಆಪ್ತಸಹೆ ನೀಡುವಲ್ಲಿ ಅವರೂ ಪತಿಯ ಜೊತೆಗೆ ಕೈ ಜೋಡಿಸಿದ್ದಾರೆ. ಇಬ್ಬರದೂ ಅಪರೂಪದ ಅನುರೂಪ ದಾಂಪತ್ಯ. ಇತ್ತೀಚೆಗೆ ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳು ಚಟ, ಆತ್ಮಹತ್ಯೆಯ ಪ್ರಕರಣೆಗಳು, ವಿವಾಹಿತರಲ್ಲಿ ಹೆಚ್ಚುತ್ತಿರುವ ವಿಚ್ಛೇದನ ಇವುಗಳ ಕುರಿತು ಪ್ರಶ್ನಿಸಿದಾಗ, “ಹದಿವಯಸ್ಸಿನಲ್ಲಿ ಇರುವ ಮಾನಸಿಕ ಗೊಂದಲ, ಅತಿಸ್ಪರ್ಧೆ, ಅನಿಷ್ಕ್ರಿಯತೆ ಯಾವುದೇ ಗೊತ್ತುಗುರಿಯಿಲ್ಲದ ವಿದ್ಯಾಭ್ಯಾಸ, ಮೌಲ್ಯಗಳನ್ನು ಕಳೆದುಕೊಂಡಿರುವ ಪದವಿಗಳು, ಸಾಮಾಜಿಕ ಅವ್ಯವಸ್ಥೆ ಭ್ರಷ್ಟಾಚಾರ ಹಾಗೂ ಪುರಸ್ಕಾರ ಇಲ್ಲದಿರುವುದು ಈ ಎಲ್ಲ ಅಂಶಗಳೂ ನಿರಾಶೆಗೆ ದೂಡುತ್ತವೆ.

ಸಮಸ್ಯೆಗಳಿಗೆ ಪರಿಹಾರ, ತೀರ್ಮಾನ ಕೈಗೊಳ್ಳುವಲ್ಲಿ ತಾತ್ವಿಕ ಚಿಂತನೆ, ವಾಸ್ತವಿಕತೆಯ ಅರಿವಿಲ್ಲದಿರುವುದು ಇತರರೊಡನೆ ಹೊಂದಿಕೊಳ್ಳುವ ಪ್ರವೃತ್ತಿಯಿಲ್ಲದಿರುವುದು, ಭಾವನೆಗಳ ಹತೋಟಿ ಈ ಎಲ್ಲವುಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿಯಾಗಲೀ ಮನೆಯಲ್ಲಾಗಲಿ ಸರಿಯಾಗಿ ತರಬೇತಿಯಿಲ್ಲದ ಕಾರಣ ಮತ್ತು ಟಿ.ವಿ. ಸಿನಿಮಾ ಮಾಧ್ಯಮಗಳ ಮೂಲಕ ಐಷಾರಾಮಿ ಜೀವನ, ಸುಲಭ ಹಣ ಸಂಪಾದನೆಗೆ ಆದ್ಯತೆ ನೀಡಿ, ಸಿಗದಿದ್ದಾಗ ಇನ್ನೂ ಹೆಚ್ಚು ನಿರಾಶೆಗೊಳಗಾಗಿ ಮಾದಕ ವಸ್ತುಗಳ ಚಟಗಳಲ್ಲಿ ದಾಸರಾಗುತ್ತಾರೆ ಇಲ್ಲವೇ ಆತ್ಮಹತ್ಯೆಗಿಳಿಯುತ್ತಾರೆ. ಆರ್ಥಿಕ ಸ್ವಾವಲಂಬನೆ ಪ್ರತಿಭಟನಾ ಮನೋಭಾವ, ಅಭಿಪ್ರಾಯ ಮಂಡನೆ ಹಾಗೂ ದಂಪತಿನಲ್ಲಿ ಅಹಂ ವಿರಸಕ್ಕೆ ಕಾರಣವಾಗುತ್ತದೆ. ಅವಿಭಕ್ತ ಕುಟುಂಬದಲ್ಲಿ ಸಣ್ಣಪುಟ್ಟ, ಸಮಸ್ಯೆ ತಲೆದೋರಿದಾಗ ಮನೆಯಲ್ಲಿರುವ ಹಿರಿಯರು ಸಾಂತ್ವನ ಹೇಳಿ ಸರಿಪಡಿಸುತ್ತಿದ್ದರು ಈಗ ಆ ವ್ಯವಸ್ಥೆಯಿಲ್ಲ, ಪ್ರತಿಷ್ಠೆ ಅಹಂ ಹೆಚ್ಚಾಗಿದೆ. ದಾಂಪತ್ಯ ವಿಚ್ಛೇದನದ ನಂತರವೂ ಆರ್ಥಿಕ ಸ್ವಾವಲಂಬನೆಯ ಸ್ತ್ರೀ ಬದುಕಬಲ್ಲಳು. ಆದರೆ ಸುಖೀ ಮತ್ತು ಆರೋಗ್ಯಕರ ಸಮಾಜದ ಬೆಳವಣಿಗೆಗೆ ಸುಖೀ ಕುಟುಂಬ ಬುನಾದಿಯಿದ್ದಂತೆ. ಆರೋಗ್ಯವಂತ ಸಮಾಜಕ್ಕೆ ಕುಟುಂಬ ತನ್ನವೇ ಆದ ಕಾಣಿಕೆ ನೀಡುತ್ತಿದೆ” ಎಂದು ವಿವರಿಸುತ್ತಾರೆ. ಹೆಚ್ಚೆಚ್ಚುತ್ತಿರುವ ಏಡ್ಸ್‌ನಂತಹ ಕಾಯಿಲೆಗಳಿಗೆ ಲೈಂಗಿಕ ಶಿಕ್ಷಣದ ಕೊರತೆಯೇ ಕಾರಣವೆಂಬ ಸಾಮಾನ್ಯವಾದ ಅನಿಸಿಕೆಯ ಬಗ್ಗೆ ಅವರ ಪ್ರತಿಕ್ರಿಯೆ ಹೀಗಿದೆ. ಲೈಂಗಿಕ ಸಮಸ್ಯೆ ಮೊದಲಿನಿಂದಲೂ ಇದ್ದದ್ದೇ. ನಮ್ಮ ದೇಶದಲ್ಲಿ ಲೈಂಗಿಕ ಕ್ಷೇತ್ರದಲ್ಲಿರುವಷ್ಟು ಮೂಢನಂಬಿಕೆ ಬೇರೆ ಇನ್ನಾವ ಕ್ಷೇತ್ರದಲ್ಲಿಯೂ ಇಲ್ಲ. ಬಹಳಷ್ಟು ಅತ್ಯಾಚಾರ ಅನಾಚಾರವೇ ಇವೇ ಕಾರಣ. ವಿವಾಹೇತರ ಸಂಬಂಧ ಹೆಚ್ಚುತ್ತಿರುವ ವೇಶ್ಯಾವೃತಿ ದಾಂಪತ್ಯ ವಿಚ್ಛೇದನಗಳಿಗೂ ಇದೇ ಕಾರಣ. ಆದ್ದರಿಂದ ಲೈಂಗಿಕ ಶಿಕ್ಷಣವನ್ನು ಪ್ರಾಥಮಿಕ ಶಿಕ್ಷಣದಿಂದ ಕಾಲೇಜು ವಿದ್ಯಾಭ್ಯಾಸದವರೆಗೂ ಹಂತ ಹಂತವಾಗಿ ಕೊಡುವುದು ವೃತ್ತಿಯ ಹಾಗೂ ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದು ಮತ್ತು ಅತ್ಯಗತ್ಯ. ಸರ್ಕಾರ ಮತ್ತು ಸಮಾಜ ಈ ನಿಟ್ಟಿನಲ್ಲಿ ಲೈಂಗಿಗ ಶಿಕ್ಷಣ ಕಡ್ಡಾಯಗೊಳಿಸಬೇಕು. ಮಾನಸಿಕ ಆರೋಗ್ಯ ಶಿಕ್ಷಣ ಮತ್ತು ಲೈಂಗಿಕ ಶಿಕ್ಷಣ ಕ್ರಮಬದ್ಧವಾದ ವಿದ್ಯಾಭ್ಯಾಸದ ಒಂದು ಅಂಗವಾಗಬೇಕು.

ಡಾ|| ಸಿ.ಆರ್. ಚಂದ್ರಶೇಖರ್‌ರವರು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರರಾಗಿ ವಿದೇಶಗಳಲ್ಲಿ ಸಂಚರಿಸಿ ಬಂದವರು. ಈ ಹಿನ್ನೆಲೆಯಲ್ಲಿ ವಿದೇಶ ಮತ್ತು ಸ್ವದೇಶದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿಯನ್ನು ಹೋಲಿಸಿ ಹೀಗೆ ಹೇಳುತ್ತಾರೆ. ಯುರೋಪಿಯನ್ ರಾಷ್ಟ್ರಗಳಲ್ಲಿ ದೈಹಿಕ ಆರೋಗ್ಯಕ್ಕಿರುವಷ್ಟೇ ಮಹತ್ವ ಮಾನಸಿಕ ಆರೋಗ್ಯಕ್ಕೂ ಇದೆ. ಜನರು ಯಾವುದೇ ಸಂಕೋಚವಿಲ್ಲದೇ ಮಾನಸಿಕ ಕಾಯಿಲೆಗಳಿಗೆ ಮನೋವೈದ್ಯರ ಸಲಹೆ ಪಡೆಯುತ್ತಾರೆ. ಪ್ರತಿ ಆಸ್ಪತ್ರೆಯಲ್ಲಿ ಮನೋವೈದ್ಯರಿರುತ್ತಾರೆ. ಸಾಮಾನ್ಯ ವೈದ್ಯನಿಗೂ ಮಾನಸಿಕ ಕಾಯಿಲೆಗಳೂ ಬಗ್ಗೆ ಚಿಕಿತ್ಸೆಯ ಬಗ್ಗೆ ತಿಳಿವಳಿಕೆಯಿರುತ್ತದೆ. ನಮ್ಮ ದೇಶದಲ್ಲಿ ಮಾನಸಿಕ ಆರೋಗ್ಯ ಸೇವ ಸೌಲಭ್ಯಗಳು ಅತ್ಯಂತ ಕಡಿಮೆ. ಕರ್ನಾಟಕದಲ್ಲಿ ಎರಡೇ ಎರಡು ಮಾನಸಿಕ ಆಸ್ಪತ್ರೆಗಳಿವೆ. ಖಾಸಗಿ ವೈದ್ಯರು ಸೇರಿದಂತೆ ೧೫೦ ರಿಂದ ೨೦೦ ಜನ ಮನೋ ವೈದ್ಯರಿದ್ದಾರೆ, ಜನರು ತಮ್ಮ ಸಮಸ್ಯೆಗೆ ಮನೋವೈದ್ಯರನ್ನು ಭೇಟಿಯಾಗಲು ಸಾಮಾಜಿಕ ಕಳಂಕದ ಭಯದಿಂದ ಹಿಂಜರಿಯುತ್ತಾರೆ. ತೀವ್ರತರ ಮಾನಸಿಕ ರೋಗಿಗಳು ಭೂತೋಚ್ಛಾಟನೆ, ಮಂತ್ರದಂತಹ ವಿಧಾನಗಳನ್ನು ಅನುಸರಿಸುತ್ತಾರೆ.

ಸಮಾಜವೂ ಮನೋರೋಗಿಗಳನ್ನು ನಿರ್ಲಕ್ಷ್ಯದಿಂದ ದೂರವಿರಿಸುತ್ತದೆ. ಅಲ್ಪಮಟ್ಟದ ಮಾನಸಿಕ ಕಾಯಿಲೆಗಳಾದ ಖಿನ್ನತೆ, ಆತಂಕ, ಮನೋದೈಹಿಕ ರೋಗಲಕ್ಷಣಗಳು ಮಾನಸಿಕ ಕಾಯಿಲೆಗಳೆಂದೇ ಗುರುತಿಸುವುದಿಲ್ಲ. ಮಾನಸಿಕ ಕಾಯಿಲೆಯಿಂದ ನಿರ್ವಹಣಾ ಸಾಮರ್ಥ್ಯ ಕಳೆದುಕೊಂಡು ವ್ಯಕ್ತಿಯನ್ನು ಸೋಮಾರಿ, ದಡ್ಡ, ಬೇಕೆಂದೇ ನಾಟಕ ಮಾಡಿದ್ದಾನೆ ಎಂದು ಮೂದಲಿಸುತ್ತಾರೆ. ಇದನ್ನು ಸರಿಪಡಿಸಬೇಕಾದರೆ ಎಲ್ಲ ವೈದ್ಯರು, ವೈದ್ಯೇತರ ಸಿಬ್ಬಂದಿ, ಶಾಲಾಕಾಲೇಜುಗಳ ಶಿಕ್ಷಕರು ಸಮಾಜ ಕಲ್ಯಾಣದಲ್ಲಿ ಆಸಕ್ತಿಯಿರುವ ಎಲ್ಲರೂ ಮಾನಸಿಕ ಆರೋಗ್ಯದ ಬಗ್ಗೆ ತಮ್ಮ ತಿಳಿವಳಿಕೆ ಹೆಚ್ಚಿಸಿಕೊಳ್ಳಬೇಕು. ಕನಿಷ್ಠ ತಾಲೂಕು ಕೇಂದ್ರದಲ್ಲಾದರೂ ಮನೋವೈದ್ಯಕೀಯ ಚಿಕಿತ್ಸೆ ದೊರೆಯಬೇಕು. ಪ್ರತಿ ಶಾಲಾ ಕಾಲೇಜು, ಸಂಘ ಸಂಸ್ಥೆಗಳಲ್ಲಿ ಹಾಗೂ ಕಾರ್ಖಾನೆಗಳಲ್ಲಿ ಆಪ್ತಸಲಹೆಗಾರರು ಇರಬೇಕು. ಈ ಆರೋಗ್ಯ ಶಿಕ್ಷಣದಲ್ಲಿ ಪತ್ರಿಕೆ ಟಿ.ವಿ., ಆಕಾಶವಾಣಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು” ಹೀಗೆ ಸಾಗುತ್ತದೆ ಅವರ ವಾಗ್ಝರಿ.

ಸಿ.ಆರ್.ಸಿ. ಯವರು ಮನೋವೈದ್ಯ ಲೇಖಕರಷ್ಟೇ ಅಲ್ಲ, ವೈದ್ಯಸಾಹಿತ್ಯದವರನ್ನು ಒಗ್ಗೂಡಿಸಿ ಕನ್ನಡ ವೈದ್ಯಸಾಹಿತ್ಯ ಪರಿಷತ್ತು ಸ್ಥಾಪಿಸಿದವರು. ಕನ್ನಡ ವೈದ್ಯಸಾಹಿತ್ಯ ಪರಿಷತ್ತಿನ ಚಟುವಟಿಕೆ ಕುರಿತು ಅವರು ಹೇಳುವುದಿಷ್ಟು, “ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ವೈದ್ಯಸಾಹಿತ್ಯ ಸೃಷ್ಟಿಯಾಗಬೇಕು. ಅವು ನಾಡಿನ ಎಲ್ಲೆಡೆ ತಲುಪಬೇಕು. ಸಮಾಜದಲ್ಲಿ ಆರೋಗ್ಯ ಅನಾರೋಗ್ಯದ ಬಗ್ಗೆ ಚಿಂತನೆ ನಡೆಯಬೇಕು. ವೈದ್ಯಸಾಹಿತ್ಯ ಪ್ರಕಟಣೆ, ಉತ್ತೇಜನ, ಬರಹಗಾರರಿಗೆ ಪ್ರೋತ್ಸಾಹ ವೈದ್ಯಸಾಹಿತ್ಯ ವಿಮರ್ಶೆ ನಿರಂತರವಾಗಿ ನಡೆಸಬೇಕು. ವೈದ್ಯ ಸಾಹಿತ್ಯದ ಪ್ರಕಾರವನ್ನು ಮುಖ್ಯ ಪ್ರಕಾರವಾಗಿ ಸಾಹಿತಿಗಳು ಅಕಾಡೆಮಿಗಳು ಸರ್ಕಾರ ಮನ್ನಣೆ ನೀಡಬೇಕೆಂದೇ ಮುಖ್ಯ ಆಶಯ” ಎಂದು ನುಡಿಯುತ್ತಾರೆ.

ಕನ್ನಡದಲ್ಲಿ ನೂರು ಪುಸ್ತಕಗಳಿಗಿಂತ ಹೆಚ್ಚು ರಚಿಸಿದ ಅವರ ಸಾಧನೆಯನ್ನು ಕುರಿತು  ಪ್ರಶ್ನಿಸಿದರೆ “ಇದುವರೆಗೆ ಪ್ರಕಟವಾದ ಪುಸ್ತಕಗಳು ಹಾಗೂ ಲೇಖನಗಳ ಮೂಲಕ ಸಾಕಷ್ಟು ವಿದ್ಯಾವಂತರವನ್ನು ತಲುಪಿಸಿರುವ ಸಮಾಧಾನವಿದೆ. ಸಾಮಾಜಿಕ ಕಳಂಕ ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡುವಲ್ಲಿ ಪ್ರಯತ್ನ ಮಾಡಿದ ಸಮಾಧಾನವಿದೆ. ತಿಂಗಳಿಗೆ ಸರಾಸರಿ ೨೦೦ ಪತ್ರಗಳು ಬರುತ್ತಿರುವುದು ನನ್ನ ಪುಸ್ತಕಗಳು ನಾಡಿನ ಮೂಲೆ ಮೂಲೆ ತಲುಪಿವೆ ಎಂಬುದಕ್ಕೆ ಸಾಕ್ಷಿಯಾಗಿದೆ” ಎಂದು ನಮ್ರವಾಗಿ ಹೇಳುತ್ತಾರೆ.

– ಉದಯವಾಣಿ ಪತ್ರಿಕೆ

* * *