ನನ್ನ ಸ್ನೇಹಿತೆಯೊಬ್ಬಳ ಸಲುವಾಗಿ ನನ್ನ ಮಗಳು ಮಾಳವಿಕಾ ಕಪೂರಳಿಗೆ ತಿಳಿಸಿ, ನಿಮ್ಮ ಒಂದು ಬರಹ ತರಿಸಿಕೊಂಡಿದ್ದೆ. ನಿಮ್ಮ ಕೆಲವು ಪ್ರಕಟನೆಗಳನ್ನು ಅವಳು ಕೊಂಡು ಓದಿ, ಹಿಗ್ಗಿದಳು. ಆದರೆ ನಾನೇ ನನ್ನ ಹಲವಾರು ಕೆಲಸಗಳ ಎಡೆಯಲ್ಲಿ ನಿಮ್ಮ ಬರಹ ಓದಿಲ್ಲ, ಅವಳ ಪ್ರಶಂಸೆ ಕೇಳಿ, ಕುಳಿತಿದ್ದೆ. ಈಗ ಒಂದೆರಡು ಬರಹ ಓದುತ್ತಿದ್ದೇನೆ. ನನ್ನ ಮಿತ್ರ ಡಾಕ್ಟರ್ ಶಿವರಾಮ್‌ರಂತೆ ನೀವು ಮನೋ ವಿಜ್ಞಾನದ ಬರವಣಿಗೆಗಳನ್ನು ಬರೆಯುತ್ತಿದ್ದೀರಿ. ಈ ಬಗ್ಗೆ ಬೇಕಾದಷ್ಟೂ ಬರೆದೂ ಇದ್ದೀರಿ. ಈ ಬಗೆಯ ತಿಳಿವು ನಮ್ಮ ಜನರಿಗೆ ಬೇಕೇ ಬೇಕಾದುದರಿಂದ ಇದರ ಅವಶ್ಯಕತೆಯ ಬಗ್ಗೆ ನಾನು ಹೇಳಬೇಕಾದ ಕಾರಣವಿಲ್ಲ, ಡಾ| ರವಿ ಕಪೂರರ ಪುಸ್ತಕ ಅನುವಾದ ಮಾಡಿದಾಗ, ನಮ್ಮ ಮನೋ ರೋಗಗಳಿಗೆ ಹೆಚ್ಚಳ ಎಷ್ಟೆಂದು ತಿಳಿಯುತ್ತದೆ.

ನೀವು ನಿಮ್ಮ ಸರಳ ಭಾಷೆಯಲ್ಲಿ, ವಿವಿಧ ಮನೋರೋಗಗಳ, ರೋಗಿಗಳನ್ನು ಬಣ್ಣಿಸಿ ಬರೆಯುತ್ತಿದ್ದೀರಿ. ಜನಸಾಮಾನ್ಯರಿಗೆ ತಿಳಿವು ಹೆಚ್ಚಿಸಲು ನೀವು ಮಾಡುತ್ತಿರುವ ಈ ಕೆಲಸ ಬಲು ದೊಡ್ಡದು ಎಂದು ಅನಿಸುತ್ತದೆ. ಇದರಿಂದ ಕನ್ನಡ ಓದಬಲ್ಲ ಎಳೆಯರಿಗೂ, ಹಿರಿಯರಿಗೂ ಪ್ರಯೋಜನವಾದೀತು.

ನಿಮ್ಮ ಈ ರೀತಿಯಾದ ಇಂಗ್ಲಿಷ್ ಬರವಣಿಗೆಯನ್ನೂ ನೋಡಿದೆ. ಅದು ಇನ್ನಷ್ಟು ವಿಶಾಲ ಓದುಗರನ್ನು ಮುಟ್ಟೀತು.

ಇದು ವಿಷಯವನ್ನೇ ಕುರಿತು ನೀವು ಮಾಡುತ್ತಿರುವ ಕೆಲಸದ ಬಗ್ಗೆ ನನಗೆ ಅತೀವ ಸಂತೋಷವನ್ನು ಸೂಚಿಸುವ ಪತ್ರ – ಎಂದು ತಿಳಿದರೆ ಸಾಕು.

* * *