ಕವಿ ಮಿತ್ರರೊಬ್ಬರು ಬರೆದರು, “ನನ್ನ ಕವಿತೆಗಳಲ್ಲಿ ನನಗೆ ಮುಪ್ಪಾಗಿದೆ ಅಂತ ಅನಿಸುತ್ತಿದೆ ಅಂತ ಒಬ್ಬರು ಬರೆದಿದ್ದಾರೆ. ನನಗಿನ್ನೂ ಐವತ್ತಾಗಲಿಲ್ಲ. ಮನಸ್ಸಿನಲ್ಲೂ ನಾನಿನ್ನೂ ಯುವಕನೇ, ಮುಪ್ಪು ಹೇಗೆ ಆಗುತ್ತದೆ ಮತ್ತು ಯಾಕಾಗುತ್ತದೆ ಎಂಬ ಬಗ್ಗೆ ನನಗೆ ವೈಜ್ಞಾನಿಕವಾಗಿ ಕುತೂಹಲ ಇದೆ, ವಿವರಿಸುವಿರಾ?” ಎಂದು.

ಹೌದು, ಮಾತನಾಡುವಾಗ “ನೀನು ಮುದುಕನ ಹಾಗೆ ಮಾತನಾಡುತ್ತೀ?” ಎಂದು ಕೆಲವೊಮ್ಮೆ ಯಾರಾದರೂ ಒಬ್ಬಿಬ್ಬರಿಗಾದರೂ ಹೇಳದೆ ಇರುವುದು ನಮಗೆ ಸಾಧ್ಯವಾಗುವುದಿಲ್ಲ. ಹಾಗೆ ಹೇಳಿಸಿಕೊಂಡವರು ಯೌವನಸ್ಥರಾಗಿದ್ದರೂ ಅವರ ಮಾತಿನಲ್ಲಿ ಮುಪ್ಪನ್ನು ಕಂಡು ನಾವು ನೀಡುವ ಪ್ರತಿಕ್ರಿಯೆ ಅದು. ಹಾಗಾದರೆ ಮುಪ್ಪೆಂಬುದು ಒಂದು ಭಾವನಾತ್ಮಕ ವಿಷಯವೇ ಅಥವಾ ವಾಸ್ತವವೇ? ಎರಡೂ  ಹೌದು. ದೇಹ ಜರ್ಝರಿತವಾಗಿದ್ದವರೂ ಅನೇಕ ಸಲ ತರುಣರನ್ನು ನಾಚಿಸುವಷ್ಟು ಜೀವನೋತ್ಸಾಹವನ್ನು ತೋರಿಸುವುದುಂಟು. ಆಗ ಅಂಥವರನ್ನು ನಾವು ಪ್ರಾಯ ಸಂದದ್ದು ದೇಹಕ್ಕಾದರೂ ಮನಸ್ಸಿಗಲ್ಲ ಎಂದು ಮೆಚ್ಚಿ ಆಡುತ್ತೇವೆ. ಅದೇ ಇನ್ನೂ ಯುವಕರಾಗಿದ್ದರೂ ಯಾವುದರಲ್ಲೂ ಉತ್ಸಾಹವೇ ತೋರಿಸದೆ ಜಡಭರತನ ಹಾಗಿದ್ದರೆ ಅಂಥವರನ್ನು ಎಷ್ಟು ಬೇಗ ಮುದಕನಾದ ಎಂದು ಛೇಡಿಸುತ್ತೇವೆ.

ನಮ್ಮ ಕವಿ ಮಿತ್ರರ ಕವಿತೆಗಳಲ್ಲಿ ಅವರಿಗೆ ಮುಪ್ಪಾಗಿದೆ ಅಂಥ ಓದುಗರೊಬ್ಬರಿಗೆ ಅನಿಸಿದರೆ ಅದರಲ್ಲಿ ಜೀವನೋತ್ಸಾಹ ಇಲ್ಲ ಎಂದು ಅರ್ಥ ಇಲ್ಲ! ಅವರೂ ಮಾಗಿದ್ದಾರೆ, ಅವರ ಕವಿತೆಯೂ ಮಾಗಿದೆ ಎಂದರ್ಥ ಅಥವಾ ಇನ್ನೊಂದು ಅರ್ಥದ ಸಾಧ್ಯತೆಯೂ ಇದೆ. ಅನುಭವಗಳ ಆಚೆ ಇರುವ ಅನುಭಾವದಾಚೆ ಅವರು ವಾಲಿದ್ದಾರೆ ಎಂದೂ ಹೇಳಬಹುದೇನೋ!
ಇರಲಿ, ನಮಗೆ ಇಲ್ಲಿ ಮುಪ್ಪಿನ ಬಗ್ಗೆ ಸಾಹಿತ್ಯಕ ವ್ಯಾಖ್ಯಾನ ಬೇಡ. ಮುಪ್ಪು ಅಂದರೆ ಏನು? ಯಾಕೆ ಬರುತ್ತದೆ ಎನ್ನುವಾಚೆ ಹೊರಳೋಣ.

ಹುಟ್ಟಿನೊಂದಿಗೆ ಸಾವು ಗೊತ್ತಿಲ್ಲದ ಹಾಗೆ ಹುಟ್ಟುತ್ತದೆ! ಶರೀರ ಅಂದರೆ ಶೀರ್ಯತೆ ಇತಿ ಶರೀರಂ ಎಂದು ಅರ್ಥ ! ಅಂದರೆ ಕ್ಷಣಕ್ಷಣಕ್ಕೂ ಸಾಯುವಂಥದ್ದು ಎಂದು. ಕ್ಷಣಕ್ಷಣಕ್ಕೂ ಸತ್ತರೆ ನಾವು ಜೀವಂತ ಉಳಿಯುವುದು ಹೇಗೆ ಎಂದು ಪ್ರಶ್ನಿಸುವವರು. ಇದ್ದಾರೆ! ನಿಜ. ಬರಿಗಣ್ಣಿನಿಂದ ನೋಡಿದರೆ ನಾವು ಸಾಯುವುದು ಕಾಣುವುದಿಲ್ಲ. ಒಳಗಣ್ಣಿನಿಂದ (ಬೇಕಾದರೆ ವೈಜ್ಞಾನಿಕವಾಗಿ ಅನ್ನಿ) ನೋಡಿದರೆ ಪ್ರತಿ ಜೀವಕಣವೂ ಸತ್ತಹಾಗೆ ಮತ್ತೊಂದು ಹುಟ್ಟುತ್ತಲೇ ಇರುತ್ತದೆ ಎನ್ನುತ್ತದೆ ವಿಜ್ಞಾನ.

ಹದಿಹರೆಯದಲ್ಲಿರುವಾಗಲೇ ನಮ್ಮ ದೇಹದಲ್ಲಿ ಹುಟ್ಟುವ ಜೀವ ರಾಸಾಯನಿಕ ಕ್ರಿಯೆಗಳ ನಮ್ಮನ್ನು ಮುಪ್ಪಿನತ್ತ ಸಾಗಿಸುತ್ತವೆ. ಪ್ರಾಯವಾಗುತ್ತಾ ಹೋಗುವುದು ಅಂದರೆ ನಾವು ಸಾವಿನತ್ತ ಧಾವಿಸುವುದೇ ಆಗಿದೆ. ನಮಗೆ ಗೊತ್ತಿಲ್ಲದ ಹಾಗೆ ಬಾಲಕನಲ್ಲಿ ತಾರುಣ್ಯ ಯುವಕರಲ್ಲಿ ವೃದ್ಧಾಪ್ಯ ಅಡಗಿ ಕುಳಿತಿರುತ್ತದೆ. ನೋಡುನೋಡುತ್ತಾ ಇದ್ದಹಾಗೆ ನಿನ್ನೆಯ ಬಾಲಕ ಇಂದಿನ ತರುಣನಾಗಿರುತ್ತಾನೆ. ಇಂದಿನ ತರುಣ ನಾಳೆ ಮುದುಕನಾಗುತ್ತಾನೆ. ಹಾಗಾಗಿ ನಮ್ಮ ಸಹಧ್ಯಾಯಿಗಳು ಹತ್ತಾರು ವರ್ಷಗಳ ಮೇಲೆ ಇದಿರಾದಾಗ ಅರೇ ಇವನು ಮುದುಕನಾಗಿದ್ದಾನಲ್ಲ ಅನಿಸುತ್ತದೆ ನಮಗೆ. ಅವನಿಗೂ ನಮ್ಮ ಬಗ್ಗೆ ಹಾಗೇ ಅನಿಸುತ್ತದೆ. ಇಬ್ಬರ ಬಾಯಿಯಿಂದಲೂ ಈ ಉದ್ಗಾರ ಬಂದಾಗ ನಮ್ಮ ಬಾಲ್ಯದ, ಯೌವ್ವನದ ನೆನಪುಗಳೆಲ್ಲ ಧುತ್ತೆಂದು ಪ್ರತ್ಯಕ್ಷವಾಗಿ ನಾವು ಮುದುಕರಾದೆವು ಎಂದು ಗೊತ್ತಾಗಿ ಸಾವು ಬಹಳ ಹತ್ತಿರದಲ್ಲೇ ಇದೆ ಎಂದು ಆತಂಕಗೊಳ್ಳುತ್ತೇವೆ.

ನಾವು ಕಾವ್ಯಾತ್ಮಕವಾಗಿ ಮುಪ್ಪು ದೇಹಕ್ಕಲ್ಲ, ಮನಸ್ಸಿಗೆ ಎನ್ನುತ್ತೇವೆ. ಇದು ತೋರಿಕೆಗೆ ಮಾತ್ರ. ಕಾವ್ಯಾತ್ಮಕವಾಗಿ ಕಂಡರೂ ವಾಸ್ತವ ಅರ್ಥ ವೈಜ್ಞಾನಿಕವಾಗಿಯೂ ಸತ್ಯವೇ. ನಾವು ಹುಟ್ಟಿನಿಂದಲೇ ಮೆದುಳಿನ ಅಧೀನರು. ಹುಟ್ಟಿದ ತತ್‌ಕ್ಷಣ ಅಳುವುದರಿಂದ ಹಿಡಿದು ಸಾಯುವ ತನಕ ನಮ್ಮನ್ನು ಆಲುವುದು ಮೆದುಳೇ. ಕಾಮಕ್ರೋಧಗಳು ದೇಹಕ್ಕಲ್ಲ; ಮನಸ್ಸಿಗೆ!  ನಮ್ಮ ಶತ್ರುವೂ ಮೆದುಳೇ! ನಮ್ಮ ಮಿತ್ರನೂ ಮೆದುಳೇ! ಇಂಥ ಮೆದುಳು ನಮ್ಮ ಇಡೀ ದೇಹದ ನರಮಂಡಲದ ಅಧಿಪತಿ. ಈ ಅಧಿಪತಿಯ ಜೀವಕೋಶಗಳನ್ನು ನ್ಯೂರಾನ್ ಎಂದು ಕರೆಯುತ್ತಾರೆ. ಬೇರೆಲ್ಲ ಜೀವಕೋಶಗಳು ವಿಭಜನೆಯಾದಂತೆ ನ್ಯೂರಾನ್ ವಿಭಜನೆಯಾಗುವುದಿಲ್ಲ. ಹಾಗಾಗಿ ನ್ಯೂರಾನ್‌ನ ಸಂಖ್ಯೆ ಅಧಿಕಗೊಳ್ಳುವುದಿಲ್ಲ.

ದಿನಂಪ್ರತಿ ಸಾವಿರಾರು ನ್ಯೂರಾನ್‌ಗಳು ಸಾಯುತ್ತವೆ. ಹೀಗೆ ನಾಶವಾದ ನ್ಯೂರಾನ್‌ಗಳ ಕೊರತೆ ಪೂರ್ತಿ ತುಂಬುವುದಿಲ್ಲ. ಮೆದುಳು ಅಪಾರ (೧೦೦ ಬಿಲಿಯನ್) ನ್ಯೂರಾನ್ ಹೊಂದಿರುವುದರಿಂದ ನಾವು ಹರೆಯದಲ್ಲಿದ್ದಾಗ ನ್ಯೂರಾನ್‌ಗಳ ಸಾವು ನಮ್ಮ ಮೇಲೆ ಅಂತಹ ಪರಿಣಾಮ ಬೀರುವುದಿಲ್ಲ.

ಜೀವಕೋಶಗಳ ಇಂತಹ ಸಾವನ್ನು ಡೀಜನರೇಶನ್ ಎಂದು ಹೇಳುತ್ತದೆ ವಿಜ್ಞಾನ. ವಯಸ್ಸಾದ ಹಾಗೆ ಅಥವಾ ವಯಸ್ಸಾಗುವುದು ಅಂದರೆ ಮೆದುಳಿನ ಹೆಚ್ಚು ಹೆಚ್ಚು ಭಾಗಗಳಲ್ಲಿ ಡೀಜನರೇಶನ್ ಪ್ರಮಾಣ ಹೆಚ್ಚುವುದು. ಇದರಿಂದಾಗಿ ನರಮಂಡಲಗಳ ಮೇಲೆ ಮೆದುಳಿನ ಹಿಡಿತ ಕಡಿಮೆಯಾಗುತ್ತದೆ, ಇದರಿಂದಾಗಿ ಅಂಗಾಂಗಗಳ ದೌರ್ಬಲ್ಯ ಕಂಡುಬರುತ್ತದೆ. ಕಣ್ಣು, ಕಿವಿ, ಮಂದವಾಗುವುದು, ರುಚಿ, ವಾಸನಾ ಶಕ್ತಿ ಕಡಿಮೆಯಾಗುವುದು. ನೆನಪಿನ ಶಕ್ತಿ ಕಡಿಮೆಯಾಗುವುದು, ನಡತೆ ಮಾತುಗಳಲ್ಲಿ ಅಸ್ಥಿರತೆ ಎಲ್ಲಾ ಕಾಣುವುದು ನರಮಂಡಲದ ಮೇಲೆ ಮೆದುಳಿನ ಹಿಡಿತ ಕಡಿಮೆಯಾದ್ದರಿಂದ ಎಂದು ತಿಳಿಯಬೇಕು. ಇನ್ನಷ್ಟು ಸರಳೀಕರಿಸಿ ಹೇಳುವುದಾದರೆ ಮೆದುಳು ಮುದಿಯಾಗುವುದೇ ನಾವು ಮುದಿಯಾಗಲು ಕಾರಣ. ಮೂತ್ರಪಿಂಡವು ಕೂಡಾ ಇತರ ಅವಯವಗಳ ಹಾಗೆ ವಯಸ್ಸಾದ ಹಾಗೆ ಹೀಗೆ ತನ್ನಿಂತಾನೇ ಮುದಿಯಾಗುತ್ತದೆ!

ಇದರ ಜೊತೆಗೆ ಇನ್ನೊಂದು ಬಹುಮುಖ್ಯ ಕಾರಣ ಅಂದರೆ ವಯಸ್ಸಾದ ಹಾಗೆ ನಮ್ಮ ಅಂಗವ್ಯೂಹಗಳ ಕಾರ್ಯಕ್ಷಮತೆ ಕೂಡಾ ಕಡಿಮೆಯಾಗುವುದು. ಇದು ನಮ್ಮನ್ನು ಕಾಡುವ ರೋಗರುಜಿನಗಳು ಮತ್ತು ನಮ್ಮ ದೇಹಬಾಧೆಗಳಿಂದಾಗುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಲು ಸಾಧ್ಯ. ಈ ಅಡೆಪ್ಟಿವ್ ಕೆಪ್ಯಾಸಿಟಿ (ಸಂಯೋಜಕ ಸಾಮರ್ಥ್ಯ) ಮತ್ತು ಅಂಗವ್ಯೂಹಗಳ ಕಾರ್ಯಕ್ಷಮತೆಯನ್ನು ವಂಶವಾಹಿಗಳು (ಜೀನ್ಸ್) ನಿರ್ಧರಿಸುತ್ತದೆ. ಒಬ್ಬನು ಹುಟ್ಟುವಾಗಲೇ ಅವನ ಮೇಲಿನ ಸಾಮರ್ಥ್ಯಗಳ ನೀಲಿ ನಕ್ಷೆ ಹೀಗೆ ಸಿದ್ಧವಾಗಿರುತ್ತದೆ. ಆದ್ದರಿಂದಲೇ ಕಡಿಮೆ ವಯಸ್ಸಿನಲ್ಲಿ ಕೆಲವರು ವೃದ್ಧರ ಹಾಗೆ ಕಂಡರೆ ೬೦, ೭೦ ವರುಷದವರು ೪೦, ೫೦ ವಯಸ್ಸಿನವರು ಹಾಗೆ ಕಾಣುವುದಿದೆ.

ಮುಪ್ಪನ್ನು ಬೇಗ ಆಹ್ವಾನಿಸುವುದರಲ್ಲಿ ರೋಗನಿರೋಧಕ ಶಕ್ತಿಯ ಪಾತ್ರವೂ ಇದೆ. ರೋಗನಿರೋಧಕ ಶಕ್ತಿಯು ಕೆಲವು ರೀತಿಯ ಕಣಗಳ ಮೇಲೆ ಅವಲಂಬಿತವಾಗಿರುತ್ತದೆ. ಉದಾ : ನ್ಯೂಟ್ರೊಫಿಲ್, ಲಿಂಪೋಸೈಟ್, ನಾಶಮಾಡಿ ಶರೀರವನ್ನು ರಕ್ಷಿಸುತ್ತದೆ. ಅಲ್ಲದೆ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ. ಪ್ರಾಯವಾಗುತ್ತಾ ಹೋದಹಾಗೆ ಜೀವರಕ್ಷಕ ಕೋಶಗಳು (ಇಮ್ಯೂನ್ ಸೆಲ್ಸ್) ದುರ್ಬಲವಾಗುವುದರಿಂದ ಬಹಳ ಬೇಗ ಕಾಯಿಲೆ ಬೀಳುವ ಸಂಭವ (ಅಂದರೆ ರೋಗನಿರೋಧಕ ಶಕ್ತಿ ಇಲ್ಲದೆ) ಜಾಸ್ತಿ. ಹೀಗೆ ತೊಂಬತ್ತರೊಳಗೆ ಸಾಯುವವರ ಸಂಖ್ಯೆ ಹೆಚ್ಚು. ತೊಂಬತ್ತು ದಾಟಿದವರಲ್ಲಿ ರೋಗನಿರೋಧಕ ಶಕ್ತಿ ಪ್ರಬಲವಾಗಿದೆ ಎಂದು ಅರ್ಥ ಮತ್ತು ಅವರು ಆಮೇಲೆಯೂ ಸುದೀರ್ಘವಾಗಿ ಬದುಕಿದ ವೈಜ್ಞಾನಿಕ ದಾಖಲೆಗಳೂ ಇವೆ.

ಈಚೆಗೆ ಮುಪ್ಪಿನ ವಿಜ್ಞಾನ ಎಂಬ ಶಾಸ್ತ್ರವೊಂದು ಪ್ರತ್ಯೇಕ ವಿಭಾಗವಾಗಿ ಬೆಳೆಯುತ್ತಿದ್ದು ಅದರ ಪ್ರಕಾರ ಜೀವಕಣಗಳ ಕರ್ತವ್ಯ ನಿರ್ವಹಣೆಯ ಮೂಲ ವಸ್ತುವಾದ ಡಿ.ಎನ್.ಎ. ಗಳ ದುರಸ್ತಿ ಮಟ್ಟವನ್ನು ಹೆಚ್ಚಿಸುವುದು ಮತ್ತು ಅವುಗಳ ಸಾವಿಗೆ ಕಾರಣವಾಗುವ ಫ್ರೀ ರೆಡಿಕಲ್‌ಗಳನ್ನು ತಡೆಗಟ್ಟುವುದು ಮುಪ್ಪನ್ನು ಗೆಲ್ಲುವುದರಲ್ಲಿ ಮುಖ್ಯವೆಂದು ಹೇಳಲಾಗುತ್ತದೆ. ಫ್ರೀ ರೆಡಿಕಲ್‌ಗಳು ಅಂದರೆ ನಾವು ಬದುಕಲು ಅಗತ್ಯವಿರುವ ಆಕ್ಷಿಜನ್ ಕೆಲವೊಮ್ಮೆ ಹಾನಿಯನ್ನು ಮಾಡಬಹುದು. ಜೀವಕೋಶಗಳಲ್ಲಿ ಗ್ಲೂಕೋಸ್ ವಿಭಜನೆಯಾಗಿ ಎ.ಟಿ.ಪಿ. ತಯಾರಾಗುವುದಕ್ಕೆ ಆಕ್ಷಿಜನ್ ಬೇಕು. ಆ ಕ್ರಿಯೆಯಲ್ಲಿ ಅದು ಫ್ರೀ ರೆಡಿಕಲ್ಸ್ ಆಗಿ ಪರಿವರ್ತನೆಗೊಳ್ಳುತ್ತದೆ. ಫ್ರೀ ರೆಡಿಕಲ್ಸ್ ಅಂದರೆ ಹೊರಕವಚದಲ್ಲಿ ಹೆಚ್ಚುವರಿ ಎಲೆಕ್ಟ್ರಾನ್ ಹೊಂದಿರುವ ಕ್ರಿಯಾಶೀಲ ಅಣು, ಪರಮಾಣುಗಳು. ಆಕ್ಷಿಜನ್ ಫ್ರೀ ರೆಡಿಕಲ್‌ಗಳು ಜೀವಕೋಶಗಳೊಂದಿಗೆ ವರ್ತಿಸಿ ಅವುಗಳಲ್ಲಿಯ ಸೂಕ್ಷ್ಮ ಭಾಗಗಳನ್ನು ಹರಿದೊಗೆಯುತ್ತವೆ.

ಫ್ರೀ ರೆಡಿಕಲ್‌ಗಳಿಂದ ದಿನೇ ದಿನೇ ಹಾನಿ ಹೆಚ್ಚಾಗಿ ಮುಪ್ಪಿಗೆ ಮತ್ತು ಮುಪ್ಪು ಸಂಬಂಧಿತ ರೋಗಗಳಿಗೆ ಕಾರಣವಾಗುತ್ತದೆ. ಆಕ್ಸಿಜನ್ ಫ್ರೀ ರೆಡಿಕಲ್‌ಗಳೊಂದಿಗೆ ಸಂಯೋಗ ಹೊಂದಿ ಅವುಗಳ ಕ್ರಿಯಾಶೀಲತೆಯನ್ನು ಮೊಟಕುಗೊಳಿಸುವ ವಿಟಾಮಿನ್ ಎ, ಸಿ. ಹಾಗೂ ಇ ಗಳಂತಹ ಆಂಟಿ ಆಕ್ಸಿಡೆಂಟ್‌ಗಳು ಆಹಾರದಲ್ಲಿದ್ದರೆ ಮುಪ್ಪನ್ನು ಸ್ವಲ್ಪಮಟ್ಟಿಗೆ ಹಿಂದೆ ತಳ್ಳಬಹುದು. ಆಯುರ್ವೇದದಲ್ಲಿ ಚ್ಯವನ ಮಹರ್ಷಿ ಕಂಡುಹಿಡಿದ ಚ್ಯವನಪ್ರಾಶ ಲೇಹವು ಮುಪ್ಪನ್ನು ಹಿಂದೆ ತಳ್ಳುವ ರಸಾಯನವಾಗಿದ್ದು ಅದರಲ್ಲಿ ನೆಲ್ಲಿಕಾಯಿಯೇ ಪ್ರಧಾನ ಔಷಧ ದ್ರವ್ಯವಾಗಿದ್ದು, ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಧಾರಾಳ ಇದೆ ಎನ್ನುವುದು ಆಯುರ್ವೇದದ ರಸಾಯನ ಔಷಧಿಗಳು ಎಷ್ಟು ವೈಜ್ಞಾನಿಕವಾಗಿವೆ ಎಂಬುದಕ್ಕೆ ಒಂದು ಉದಾಹರಣೆ. ಮುಪ್ಪನ್ನು ಗೆಲ್ಲಲು ವಿಜ್ಞಾನದಲ್ಲಿ ಕೆಲವು ಸಲಹೆಗಳಿವೆ (ಸಾವನ್ನು ಗೆಲ್ಲಲು ಅಲ್ಲ ಎಂಬ ನೆನಪಿರಲಿ). ಅವುಗಳಲ್ಲಿ ಮುಖ್ಯವಾಗಿ ಇವು : ೧. ವ್ಯಾಯಾಮ, ಪ್ರಾಣಾಯಾಮಗಳಿಂದ ದೇಹವನ್ನು ಚುರುಕುಗೊಳಿಸುವುದು. ಬಳಕೆಯಿಂದ ಸವೆದು ಹೋಗುವುದಕ್ಕಿಂತ ಜಡತ್ವವೇ ದೇಹಕ್ಕೆ ಅಪಾಯಕಾರಿ. ೨. ಆಹಾರ ಸೇವನೆಯಲ್ಲಿ ಸಂಯಮ ಮತ್ತು  ವಿವೇಚನೆ. ೩. ವಾಸಿಸುವ ಪ್ರದೇಶಕ್ಕೆ ಮತ್ತು ಋತುಕಾಲಕ್ಕೆ ಅನುಗುಣವಾಗಿ ಜೀವನ ಕ್ರಮವನ್ನು ಹೊಂದಿಸಿಕೊಳ್ಳುವುದು. ೪. ಧೂಮಪಾನ ಮಾಡದಿರುವುದು. ೫. ಸಣ್ಣಪುಟ್ಟ ಕಾಯಿಲೆ/ ನೋವುಗಳಿಗೆ ಔಷಧವನ್ನು (ಅದರಲ್ಲೂ ರಾಸಾಯನಿಕ ಮೂಲದ ಔಷಧಗಳನ್ನು) ಬಳಸದೇ ಇರುವುದು. ಅನೇಕ ಸಂದರ್ಭಗಳಲ್ಲಿ ದೇಹವು ತನ್ನಿಂತಾನೇ ತನಗೇ ರಿಪೇರಿ ಮಾಡಿಕೊಳ್ಳುವ ಶಕ್ತಿ ಹೊಂದಿದೆ. ೬. ನಿಯಮಿತ ದಿನಚರಿ, ನಿದ್ರೆ, ವಿಶ್ರಾಂತಿ, ಮನೋಲ್ಲಾಸ ಸದಾ ಇರುವಂತೆ ನೋಡಿಕೊಳ್ಳಿ. ಇದು ಬಹು ದೊಡ್ಡ ಟಾನಿಕ್. ೭. ದೇಹ ಮತ್ತು ಇಂದ್ರಿಯ ಶಕ್ತಿಯುತವಾಗಿರುವವರೆಗೆ ಸ್ವಾವಲಂಬನೆ ಇರಲಿ. ಇನ್ನೊಬ್ಬರ ನೆರವನ್ನು ಬಯಸಬೇಡಿ. ಸ್ವಾವಲಂಬನೆಗೆ ಸಾಧ್ಯವಾಗದಿದ್ದಾಗ ಪರಾವಲಂಬನೆ ನಿಮ್ಮ ಹಕ್ಕು ಎಂಬಂತೆ ಮುಜುಗರಪಡದೆ ಒಪ್ಪಿಕೊಳ್ಳಿ.

ವೈದ್ಯಸಾಹಿತಿಯಾಗಿನನ್ನಅನುಭವ
ಅಂಕಣದಿಂದ ಜನಪ್ರಿಯತೆ ಜೊತೆಗೆ ಕಿರಿಕಿರಿ
ಡಾ| ನಾ. ಮೊಗಸಾಲೆ ನಾನು ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ್ದು ಬಾಲ್ಯದಲ್ಲಿ ಸಾಹಿತ್ಯದ ಕುರಿತಾದ ಆಸಕ್ತಿಯನ್ನು ನನ್ನಲ್ಲಿ ಮೂಡಿಸಿದ ನನ್ನ ಹಿರಿಯರು ಮತ್ತು ಗುರುಗಳ ಪ್ರಭಾವದಿಂದ. ಆಗ ನನಗೆ ಒಂದು ಉದ್ದೇಶವಿತ್ತು. ನಾನೊಬ್ಬ ಸಾಹಿತಿಯಾಗಬೇಕು, ಜನಮನ್ನಣೆ ಪಡೆಯಬೇಕು ಎಂದು. ಆದರೆ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ ಮೇಲೆ ತಿಳಿಯಿತು ಈ ನನ್ನ ಉದ್ದೇಶ ತುಂಬಾ ಬಾಲಿಶವಾದದ್ದು, ಎಂದು. ಯಾಕೆಂದರೆ ಸಾಹಿತ್ಯ ಲೋಕದ ಘಟಾನುಘಟಿಗಳ ಸಾಧನೆಗಳ ಎದುರು ನಾನು ಈಜುವುದು, ಪ್ರಸಿದ್ಧಿಗೆ ಬರುವುದು, ಅಷ್ಟು ಸುಲಭದ್ದಲ್ಲ ಎಂಬಂತಾಯಿತು. ಆದರೂ ನಾನು ಛಲ ಬಿಡಲಿಲ್ಲ. ಓದು, ಅಭ್ಯಾಸ, ಪರಿಶ್ರಮ, ಸಾಧನೆಗಳಿಂದ ನಾನು ನಿರೀಕ್ಷಿತ ಗುರಿ ಮುಟ್ಟದಿದ್ದರೂ, ನಾನೊಬ್ಬ ಬರೆಹಗಾರ ಎಂಬ ಪರಿಚಯ ಇಂದು ಕರ್ನಾಟಕದಲ್ಲಿ ಎಲ್ಲರಿಗೂ ಆಗಿದೆ. ಅಷ್ಟೇ ಸಾಕು ಎಂಬ ನಿಲುವು ನನಗೂ ತೃಪ್ತಿ ತಂದಿದೆ.

ವೈದ್ಯಸಾಹಿತಿಯಾಗುತ್ತೇನೆ, ಆಗಬೇಕು ಎಂಬುದನ್ನು ನಾನು ಎಂದೂ ನಿರೀಕ್ಷಿಸಿರಲಿಲ್ಲ, ಕನಸೂ ಕಾಣಲಿಲ್ಲ. ಆದರೆ ೧೯೮೦ ರಲ್ಲಿ ದಶಕದಲ್ಲಿ ಬೆಂಗಳೂರಿನ ‘ಪ್ರಜಾ ಪ್ರಭುತ್ವ’ ಎಂಬ ವಾರಪತ್ರಿಕೆಯು ವಿಠ್ಠಲ ಬಂಟ್ವಾಳ ಮತ್ತು ವಸಂತಕುಮಾರ್‌ಪೆರ್ಲ ಎಂಬವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದುದು ನನ್ನ ಗಮನಕ್ಕೆ ಬಂದಿತು. ಪೆರ್ಲ ಅವರು ನನ್ನ ಕಿರಿಯ ಸ್ನೇಹಿತರಾಗಿದ್ದರು. ಬಂಟ್ವಾಳ ಮತ್ತು ಉಡುಪಿಯಲ್ಲಿ ಅವರು ಉದ್ಯೋಗಿಯಾಗಿದ್ದಾಗ ನನ್ನ ಮನೆಗೆ ಆಗಾಗ ಬರುತ್ತಿದ್ದರು. ಅವರ ಕಥಾ ಸಂಗ್ರಹ ‘ಹತ್ತರೊಡನೆ ಹನ್ನೊಂದು’ಕ್ಕೆ ನಾನು ಮುನ್ನುಡಿ ಬರೆದಿದ್ದೆ. ನಾನು ಯಾವುದೇ ಕಾರಣಕ್ಕೆ ಒಮ್ಮೆ ಬೆಂಗಳೂರಿಗೆ ಬರುವುದನ್ನು ತಿಳಿದು ಪೆರ್ಲ ಅವರು ನನ್ನನ್ನು ತಮ್ಮ ಪತ್ರಿಕಾ ಕಛೇರಿಗೆ ಪ್ರೀತಿಯಿಂದ ಆಮಂತ್ರಿಸಿದರು. ಅಲ್ಲಿಗೆ ಹೋದಾಗ ವಿಠ್ಠಲ ಬಂಟ್ವಾಳ ಮತ್ತು ಪೆರ್ಲ ಇಬ್ಬರೂ ಸೇರಿ ನಾನು ಅವರ ಪತ್ರಿಕೆಯಲ್ಲಿ ಒಂದು ಸಾಹಿತ್ಯದ ಅಂಕಣ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಆಗ ಆ ಪತ್ರಿಕೆಯಲ್ಲಿ ಡಾ|| ಕೆ.ವಿ. ತಿರುಮಲೇಶರಂಥ ಪ್ರಸಿದ್ಧ ಕವಿಯ ಒಂದು ಅಂಕಣವೂ ಇತ್ತು. ನಾನು ಗ್ರಾಮಾಂತರ ಪ್ರದೇಶದಲ್ಲಿರುವುದರಿಂದ, ಅಂಕರಣ ಬರೆಹಕ್ಕೆ ಬೇಕಾದ ಆಕರ ಗ್ರಂಥಗಳಿರುವ ಗ್ರಂಥಾಲಯದ ಕೊರತೆ ನಮ್ಮಲ್ಲಿ ಇತ್ತು. ಆ ಕಾರಣದಿಂದ ‘ಅದು ಅಸಾಧ್ಯ’ ಎಂದೆ. ಆದರೆ, ಅವರು ನೀವು ಆರೋಗ್ಯದ ಕುರಿತಾದ ಅಂಕಣವೊಂದನ್ನು ಪ್ರಾರಂಭಿಸಿ ನಾವು ಆಸಕ್ತರಿಂದ ಪ್ರಶ್ನೆಗಳನ್ನು ಆಹ್ವಾನಿಸಿ ನಿಮಗೆ ಕಳುಹಿಸುತ್ತೇವೆ” ಎಂದು ಒತ್ತಾಯಿಸಿದರು. ಆಗ ನಾನು “ನಾನೊಬ್ಬ ಸಾಮಾನ್ಯ ವೈದ್ಯ (ಜನರಲ್ ಪ್ರಾಕ್ಟೀಶನರ್), ತಜ್ಞನಲ್ಲ, ಅನುಭವ ಕಡಿಮೆ” ಎಂದು ನುಣುಚಿಕೊಳ್ಳಲು ಪ್ರಯತ್ನಿಸಿದೆ. ಅವರು ಕೇಳಲಿಲ್ಲ. ಪತ್ರಿಕೆಯಲ್ಲಿ ಜಾಹೀರಾತು ನೀಡಿ, ಆಸಕ್ತರ ಪ್ರಶ್ನೆಗಳನ್ನು ನನಗೆ ಕಳುಹಿಸಿಯೇ ಬಿಟ್ಟರು. ಭಯದಿಂದಲೇ ನಾನು ಉತ್ತರಿಸು ಪ್ರಯತ್ನಿಸಿದೆ. ಯಾರ ಪುಣ್ಯವೋ ಏನೋ! ಅದು ಜನಪ್ರಿಯವಾಯಿತು. ಪ್ರಶ್ನೆಗಳ ಸರಮಾಲೆಯೇ ಬರಲು ಪ್ರಾರಂಭವಾಯಿತು. ನಾನು ಓದಿ ಮಡಚಿಟ್ಟಿದ್ದ ವೈದ್ಯಕೀಯ ಗ್ರಂಥಗಳನ್ನೆಲ್ಲ ಅನಿವಾರ್ಯವಾಗಿ ತೆರೆದು ನೋಡಬೇಕಾಯಿತು. ಇದರಿಂದ ನನಗೆ ‘ರಿಫ್ರೆಶ್‌’ ಆಗುವ ಅವಕಾಶವೂ ಒದಗಿಬಂತು. ಆದರೆ ಅಷ್ಟರಲ್ಲಿ ದುರದೃಷ್ಟವಶಾತ್ ಆ ಪತ್ರಿಕೆಯೇ ನಿಂತುಹೋಯಿತು.

ಆಮೇಲೆ ಕಳೆದ ಶತಮಾನದ ಕೊನೆಯ ದಶಕದಲ್ಲಿ (೧೯೯೫ರ ಸುಮಾರಿಗೆ) ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ಕನ್ನಡ ಜನಾಂತರಂಗ’ ಎಂಬ ಪತ್ರಿಕೆಯಿಂದ ಅನಿರೀಕ್ಷಿತವಾಗಿ ನನಗೆ ಒಂದು ಸಾಹಿತ್ಯದ ಅಂಕಣ ಬರೆಯಲು ಆಹ್ವಾನ ಬಂತು. ಪ್ರತಿವಾರವೂ ಬರೆಯುವುದು ಕಷ್ಟ ಎಂದು ಆಗಲೂ ನಾನು ಆಹ್ವಾನ ನಿರಾಕರಿಸಿದೆ. ಆದರೆ ಅಷ್ಟರಲ್ಲಿ ನಾನು ಹಿಂದೆ ಆರೋಗ್ಯ ಸಲಹೆಯೊಂದನ್ನು ‘ಪ್ರಜಾ ಪ್ರಭುತ್ವ’ದಲ್ಲಿ ನೀಡುತ್ತಿದ್ದುದನ್ನು ಯಾರೋ ಅವರ ಗಮನಕ್ಕೆ ತಂದರು. ಅವರು ‘ಅದನ್ನೇ ಇಲ್ಲಿಯೂ ಪ್ರಾರಂಭಿಸೋಣ ಎಂದು ಒತ್ತಾಯಿಸಿದರು. ಹುಂಬ ಧೈರ್ಯದಿಂದ ನಾನು ಒಪ್ಪಿಗೆಕೊಟ್ಟೆ. ಇಲ್ಲೂ ಆ ಅಂಕಣ ಜನಪ್ರಿಯವಾಯಿತು. ಪ್ರಶ್ನೆಗಳು ಸಾಕಷ್ಟು ಸಂಖ್ಯೆಯಲ್ಲಿ ಬರಹತ್ತಿದುವು. ಸ್ವಲ್ಪ ಸಮಯದಲ್ಲಿ ಪತ್ರಿಕೆಯೂ ನಿಂತುಹೋಯಿತು. ಆದರೆ ಆ ಪತ್ರಿಕೆಯ ಸೋದರ ಪತ್ರಿಕೆ ‘ಕರಾವಳಿ ಅಲೆ’ ಆಗಲೇ ಸಂಜೆ ಪತ್ರಿಕೆಯಾಗಿ ತುಂಬಾ ಜನಪ್ರಿಯವಾಗಿತ್ತು. ಅದರಿಂದಾಗಿ ಸಂಪಾದಕರು ನಿಮ್ಮ ಅಂಕಣಕ್ಕೆ ತುಂಬಾ ಬೇಡಿಕೆ ಇದೆ ನೀವು ಈ ಸಂಜೆ ಪತ್ರಿಕೆಯಲ್ಲಿ ಆರೋಗ್ಯ ಸಲಹೆ ನೀಡಿ ಎಂದು ಒತ್ತಾಯಿಸಿ ಅಂಕಣವನ್ನು ಪ್ರಾರಂಭಿಸಿಯೇ ಬಿಟ್ಟರು.

ಅದು ಎಷ್ಟು ಜನಪ್ರಿಯವಾಯಿತೆಂದರೆ, ನಾನು ಅವಿಭಜಿತ ದ.ಕ.ದಲ್ಲಿ ಮಾತ್ರವಲ್ಲ, ಆ ಪತ್ರಿಕೆಯ ಪ್ರಸಾರ ಇರುವ ಉತ್ತರ ಕನ್ನಡ, ಶಿವಮೊಗ್ಗ, ಮೊದಲಾದ ಕಡೆಗಳಲ್ಲಿ ಬಸ್ಸು ಇಲ್ಲವೇ ಕಾರಿನಲ್ಲಿ ಓಡಾಡುವಾಗ ಜನ ನನ್ನ ಗುರುತು ಹಚ್ಚಿ ‘ನೀವು ಮೊಗಸಾಲೆಯವರಲ್ಲವೇ?, ಎಂದು ಗೌರವದಿಂದ ನನ್ನನ್ನು ಮಾತನಾಡಿಸಹತ್ತಿದರು.

ಆದರೆ ನಿಧಾನವಾಗಿ ಈ ಅಂಕಣ ಲೈಂಗಿಕ ವಿಷಯಕ್ಕೆ ಒತ್ತುಕೊಡಬೇಕಾದ ಸ್ಥಿತಿ ಬಂತು. ಬಹುತೇಕ ಪ್ರಶ್ನೆಗಳು ಲೈಂಗಿಕತೆಗೆ ಸಂಬಂಧಿಸಿದವುಗಳಾಗಿ ಬರಹತ್ತಿದವು. ಕುತೂಹಲದ ಮತ್ತು ವಿಷಾದದ ಸಂಗತಿ ಎಂದರೆ, ಸಾಕಷ್ಟು ವರುಷ ದಾಂಪತ್ಯ ಜೀವನ ನಡೆಸಿದವರಿಗೂ, ಲೈಂಗಿಕತೆಯ ಬಗ್ಗೆ ತೀರಾ ಅಜ್ಞಾನ ಇತ್ತು ಎನ್ನುವುದು ಅಂಥ ಪ್ರಶ್ನೆಗಲಿಗೆ ನನಗೆ ತಿಳಿಯಿತು. ಅದೂ ಅಲ್ಲದೇ ಒಂದೇ ವಿಷಯಕ್ಕೆ ಸಂಬಂಧಿಸಿದ ಉತ್ತರವಷ್ಟೇ ಎಂದುಕೊಳ್ಳುವ ಓದುಗರು ಅಂಥಾದ್ದೇ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳಿ ಪತ್ರತ್ಯೇಕವಾದ ಉತ್ತರವನ್ನು ನನ್ನಿಂದ ನಿರೀಕ್ಷಿಸುತ್ತಿದ್ದರು. ಇದು ಸಾಲದೆಂಬಂತೆ ನಾನೊಬ್ಬ ಲೈಂಗಿಕ ತಜ್ಞ ಎಂದು ನನ್ನನ್ನು ಕೆಲವರು ಆರಾಧಿಸಹತ್ತಿದರೆ, ಇನ್ನು ಕೆಲವರು (ಲೈಂಗಿಕತೆಯ ಬಗ್ಗೆ ಮಡಿವಂತಿಕೆ ಉಳ್ಳವರು) ನನ್ನನ್ನು ವಿಚಿತ್ರವಾಗಿ ನೋಡಹತ್ತಿದರು. ಇದು ಇಷ್ಟಕ್ಕೇ ನಿಲ್ಲಲಿಲ್ಲ. ಪತ್ರಿಕಾ ಕಛೇರಿಯಲ್ಲಿ ಸಂಪರ್ಕಿಸಿ ನನ್ನ ದೂರವಾಣಿ ಸಂಖ್ಯೆಯನ್ನು ತಿಳಿದು ಹೊತ್ತಲ್ಲದ ಹೊತ್ತಿನಲ್ಲಿ ನನಗೆ ಫೋನ್ ಮಾಡಿ ತಮ್ಮ ಸಮಸ್ಯೆಯನ್ನು ಫೋನಿನಲ್ಲಿ ಕೇಳಿ ಪರಿಹಾರವನ್ನು ಫೋನಿನಲ್ಲೇ ನಿರೀಕ್ಷಿಸತೊಡಗಿದರು. ಇದರಿಂದ ನನಗೆ ಒಂದು ರೀತಿಯ ಕಿರುಕುಳ ಮತ್ತು ಖಾಸಗಿ ಬದುಕೇ ಇಲ್ಲದಂಥ ಸ್ಥಿತಿ ಬಂತು.

ನಾನು ಅಂಕಣ ಬರೆಹವನ್ನು ನಿಲ್ಲಿಸುತ್ತೇನೆ ಎಂದು ಸಂಪಾದಕರಿಗೆ ತಿಳಿಸಿದೆ. ಅವರು “ನೀವು ಪ್ರತಿದಿನವೂ ಪತ್ರಿಕೆಗೆ ಬರೆಯಿರಿ. ಅಂಥ ಬೇಡಿಕೆ ಇದೆ ನಿಮ್ಮ ಬರೆಹಕ್ಕೆ” ಎಂದು ಒತ್ತಾಯಿಸಿದರು. ನಾನು ಇದಕ್ಕೆ ಪರಿಹಾರ ಎಂಬಂತೆ, ನಿಧಾನವಾಗಿ ಇಂಥ ಪ್ರಶ್ನೆಗಳನ್ನೆಲ್ಲ ಬದಿಗಿರಿಸಿ, ನನಗೆ ಆಸಕ್ತಿ ಇರುವ ಜೀವನ ಧರ್ಮಕ್ಕೆ ಸಂಬಂಧಿಸಿದ ವಿಚಾರಗಳನ್ನೆಲ್ಲ ಆ ಅಂಕಣದಲ್ಲಿ ಬರೆಯಲು ಪ್ರಾರಂಭಿಸಿದೆ. ಅರ್ಥಾತ್‌ಅದು ಮುಖ್ಯವಾಗಿ ಮನಸ್ಸಿನ ಆರೋಗ್ಯಕ್ಕೆ ಸಂಬಂಧಿಸಿದ್ದಾಗಿತ್ತು. ಇಂಥ ನಾಲ್ಕೆಂಟು ಬರೆಹ ಪ್ರಕಟವಾಗುವಷ್ಟರಲ್ಲಿ ಒಂದು ದಿನ ಆ ಪತ್ರಿಕೆಯ ಸಂಪಾದಕರು ನನಗೆ ಒಂದು ಮಾತನ್ನೂ ಹೇಳದೆ, ನನ್ನ ಅಂಕಣಕ್ಕೆ ಮಂಗಳ ಹಾಡಿದರು.

‘ಬದುಕಿದೆಯಾ ಬಡಜೀವವೇ!’ ಎಂದು ನೆಮ್ಮದಿಯ ನಿಟ್ಟುಸಿರುಬಿಟ್ಟೆ. ವೈದ್ಯಕೀಯ ಬರೆಹಗಳನ್ನು ಬರೆಯುವುದು ಬಿಟ್ಟು ಸಾಹಿತ್ಯ ಬರಹಗಳತ್ತ ಮುಖ ಹಾಕಿದೆ!

ಆದರೆ, ಈಗಲು ಅಪರೂಪಕ್ಕೊಮ್ಮೆ ಲೈಂಗಿಕ ವಿಚಾರಕ್ಕೆ ಸಂಬಂಧಿಸಿದ ಹಾಗೆ, ಸಲಹೆ ನಿರೀಕ್ಷಿಸಿ ದೂರವಾಣಿ ಕರೆಗಳು ಬರುತ್ತಿವೆ. ಆಗ ಉತ್ತರಿಸುವುದೋ, ಉತ್ತರಿಸದೇ ಇರುವುದೋ ಎಂಬ ದ್ವಂದ್ವ ನನ್ನನ್ನು ಕಾಡುತ್ತಿದೆ!

* * *