ವೈದ್ಯಕೀಯ ವ್ಯವಸ್ಥೆ ದುಬಾರಿಯಾಗಿರುವ ಈ ಕಾಲದಲ್ಲಿ ಸಾಹಿತಿಗಳ ಕುರಿತು, ಔಷಧಿಗಳ ಕುರಿತು ಸರಿಯಾದ ಮಾಹಿತಿಯನ್ನು ಲೇಖನಗಳು, ಪುಸ್ತಕಗಳು, ಭಾಷಣಗಳು, ರೇಡಿಯೋ ಮತ್ತು ಟಿ.ವಿ. ಮುಖಾಂತರ ನೀಡಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಜನರಿಗೆ ಅತ್ಯಂತ ಉಪಯುಕ್ತವಾದದ್ದು ಮತ್ತು ಹತ್ತಿರವಾಗಿರುವುದು ವೈದ್ಯ ಸಾಹಿತ್ಯ. ಇಲ್ಲಿಯವರೆಗೆ ಕನ್ನಡದಲ್ಲಿ ಪ್ರಕಟವಾದ ವೈದ್ಯ ಸಾಹಿತ್ಯದ ಪುಸ್ತಕಗಳು ೨೦೦೦ ಎಂಬ ಅಂದಾಜಿದೆ. ಸಂಸ್ಕೃತದಲ್ಲಿರುವ ಮತ್ತು ಇಂಗ್ಲಿಷ್‌ನಲ್ಲಿರುವ ವೈದ್ಯ ಸಾಹಿತ್ಯವನ್ನು ಕನ್ನಡಕ್ಕೆ ತರುವ ಕೆಲಸ ಬಹಳ ಹಿಂದಿನಿಂದಲೇ ನಡೆದು ಬಂದಿದೆ. ಆದಿ ಕಾಲದಲ್ಲಿ ರಾಷ್ಟ್ರಕೂಟ ನೃಪತುಂಗನ (೮೧೫-೮೧೭) ಆಸ್ಥಾನದಲ್ಲಿ ಉಗ್ರಾದಿತ್ಯನೆಂಬ ಜೈನ ವೈದ್ಯ ಕನ್ನಡ ಭಾಷೆಯ ವೈದ್ಯ ಗ್ರಂಥ ಕಲ್ಯಾಣಕಾರಕ ರಚಿಸಿದ ಚಾಲುಕ್ಯರಾಜ ಇಮ್ಮಡಿ ಜಯಸಿಂಹನ ಆಸ್ಥಾನದಲ್ಲಿ (೧೦೧೫-೧೦೪೨) ಬ್ರಾಹ್ಮಣ ಕವಿ ಚಾವುಂಡರಾಯ ಲೋಕೋಪಕಾರದಲ್ಲಿ ಆಯುರ್ವೇದದ ಕುರಿತು ಸವಿಸ್ತಾರವಾಗಿ ವಿವರಿಸಿದ್ದಾನೆ. ಚಂದ್ರರಾಜನ (೧೦೭೯) ಮದನ ತಿಲಕ, ಕೀರ್ತಿಕಾಮನ ಗೋವೈದ್ಯ, (೧೧೨೫) ಚಾಲುಕ್ಯ ಚಕ್ರವರ್ತಿ ಸೋಮೇಶ್ವರನ ಮಾನಸೋಲ್ಲಾಸ, ಕೇಶವ ಪಂಡಿತನ ಸಿದ್ಧಮಂತ್ರ, ಬೋಪದೇವ (೧೨೬೩) ಸಿದ್ದಮಂತ್ರ ಪ್ರಕಾಶ, ವೈದ್ಯಶತಕ ಹೃದಯ ದೀಪಿಕ ನಿಘಂಟು ಮುಂತಾದವು ಈ ಕಾಲದ ಪ್ರಮುಖ ಗ್ರಂಥಗಳು ಮಧ್ಯಕಾಲದಲ್ಲಿ ವಿಜಯನಗರದ ಅಧಿರಾಜನಾಗಿದ್ದ ಮುಗಳೀಪುರದ ಅರಸ ಮಂಗರಾಜ (೧೩೬೦) ರಚಿಸಿದ ‘ಖಗೇಂದ್ರ ಮಣಿ ದರ್ಪಣ’ ಕನ್ನಡ ಸಾಹಿತ್ಯದಲ್ಲಿ ಶ್ರೇಷ್ಠ ಗ್ರಂಥ. ಅಭಿನವ ಚಂದ್ರನ ಅಶ್ವಶಾಸ್ತ್ರ, ವಲಭೇಂದ್ರನ ವೈದ್ಯ ಚಿಂತಾಮಣಿ, ಕಲ್ಲರಸನ ಜನವಶನೆಂಬ ಕಾಮಶಾಸ್ತ್ರ ಗ್ರಂಥ ಶ್ರೀಧರ ದೇವ (೧೫೦೦) ವೈದ್ಯಾಮೃತ, ಚಾಚರಸನ ಅಶ್ವವೈದ್ಯ, ಕಳಲೆಯ ವೀರರಾಜನ ಸಕಲ ವೈದ್ಯ ಸಂಹಿತ ಸಂಕೀರ್ಣವಾದ ನಂಜರಾಜನ ವೈದ್ಯಸಾರ ಸಂಗ್ರಹ ಮುಂತಾದವು ಮುಖ್ಯಗ್ರಂಥಗಳು.

೧೯೦೪ ರಲ್ಲಿ ಅಲೋಪತಿ ವೈದ್ಯಶಾಸ್ತ್ರ ಕುರಿತಂತೆ ಮೈಸೂರು ಸಂಸ್ಥಾನದ ಸೇವೆಯಲ್ಲಿದ್ದ ಎಂ. ಗುರುರಾವ್‌ರವರು ‘ಆಂಗ್ಲೇಯ ವೈದ್ಯಶಾಸ್ತ್ರ’ ಪುಸ್ತಕ ಬರೆದರು. ೧೯೨೮ ರಲ್ಲಿ ‘ದಾಂಪತ್ಯ ವಿಜ್ಞಾನ’, ‘ಸಂತಾನ ವಿಜ್ಞಾನ’, ‘ಆಹಾರ ವಿಜ್ಞಾನ’ ದಂತಹ ಪುಸ್ತಕಗಳನ್ನು ರಚಿಸಿದ ದ.ಕೃ. ಭಾರದ್ವಜರು ಯುಗ ಪ್ರವರ್ತಕರು. ಪಂಡಿತ ತೀರ್ಥನಾಥರು ರಚಿಸಿದ ‘ತಾಯಂದಿರಿಗಾಗಿ’ ಮುಂತಾದ ಪುಸ್ತಕಗಳನ್ನು ರಚಿಸಿದರು. ಡಾ. ಎಂ. ಗೋಪಾಲಕೃಷ್ಣರಾಯರು ‘ಪ್ರೇಮಕಲಾ’, ‘ಗರ್ಭ ನಿರೋಧ’ ಪುಸ್ತಕಗಳನ್ನು ರಚಿಸಿದುದಲ್ಲದೇ ೧೯೩೬-೩೭ ರಲ್ಲಿ ‘ಕಲಿಯುಗ’ ಎಂಬ ಕಾಮ ವಿಜ್ಞಾನದ ಪತ್ರಿಕೆಯ ಸಂಪಾದಕರಾದರು. ಲೈಂಗಿಕ ಆರೋಗ್ಯದ ಬಗ್ಗೆ ಬರೆದ ಮತ್ತೊಬ್ಬರು ಡಾ| ದೊಡ್ಡೇರಿ ವೆಂಕಟಗಿರಿರಾವ್. ‘ವಿಕೃತ ಕಾಮ’, ಪ್ರಸವ ವಿಜ್ಞಾನ ರಚಿಸಿ ವೈದ್ಯ ಸಾಹಿತ್ಯಕ್ಕೆ ಅನುಪಮ ಕೊಡುಗೆ ಕೊಟ್ಟಿದ್ದಾರೆ.

ವೈದ್ಯ ಸಾಹಿತ್ಯಕ್ಕೆ ಜನಪ್ರಿಯತೆ, ಜನಮನ್ನಣೆ ತಂದುಕೊಟ್ಟಿವರಲ್ಲಿ ರಾಶಿ ಎಂದೇ ಖ್ಯಾತರಾಗಿರುವ ಡಾ| ಎಂ. ಶಿವರಾಂ ಮತ್ತು ಡಾ|| ಅನುಪಮಾ ನಿರಂಜನ ಅವರ ‘ತಾಯಿ – ಮಗು’ ಪುಸ್ತಕ ೨೦೦೮ ರಲ್ಲಿ ೩೫ ನೇ ಮುದ್ರಣ ಕಂಡಿರುವುದು ಸಾಹಿತ್ಯಕ್ಷೇತ್ರದಲ್ಲಿ ಒಂದು ದಾಖಲೆ. ಅವರ ದಾಂಪತ್ಯ ಜೀವನ ಪುಸ್ತಕ ೩೨ ಮುದ್ರಣ ಕಂಡಿದೆ. ವೈದ್ಯಸಾಹಿತ್ಯದ ಮತ್ತೊಬ್ಬ ದಿಗ್ಗಜರೆಂದರೆ ಡಾ| ಡಿ.ಎಸ್. ಶಿವಪ್ಪನವರು. ಕನ್ನಡ ವೈದ್ಯ ಪದಕೋಶ ಮತ್ತು ವೈದ್ಯಕ ಪದಗಳ ಹುಟ್ಟು ಗ್ರಂಥಗಳನ್ನು ರಚಿಸಿ ವೈದ್ಯ ಬರಹಗಾರರಿಗೆ ಪ್ರೇರಕ ಶಕ್ತಿಯಾದರು. ನಂತರದ ದಿನಗಳಲ್ಲೂ ಅನೇಕ ಮಂದಿ ವೈದ್ಯಸಾಹಿತ್ಯವನ್ನು ಬೆಳೆಸುತ್ತಾ ಬಂದಿದ್ದಾರೆ.

ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು

ಡಾ| ಎಂ.ಎಸ್. ರಾಜಣ್ಣ, ದಿ| ಡಾ|| ಸಿ. ಅಶ್ವಥ್, ಡಾ|| ಸಿ.ಆರ್. ಚಂದ್ರಶೇಖರ್‌ ಹಾಗೂ ಡಾ|| ಬಿ.ಜಿ. ಚಂದ್ರಶೇಖರ್‌ ಮುಂತಾದವರು ಸೇರಿ ೧೯೮೬ ರಲ್ಲಿ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ೧೫ ಪುಸ್ತಕಗಳನ್ನು ಪ್ರಕಟಿಸಿರುವ ಈ ಸಂಸ್ಥೆ ಪ್ರಸಕ್ತ ವರ್ಷದಿಂದ ಪುಸ್ತಕ ನಿಧಿ ಸ್ಥಾಪಿಸಿ ಆ ಮೂಲಕ ಪ್ರತಿವರ್ಷ ಪುಸ್ತಕಗಳನ್ನು ಪ್ರಕಟಿಸುವ ಯೋಜನೆ ಹಾಕಿಕೊಂಡಿದೆ. ಏಳೆಂಟು ರಾಜ್ಯಮಟ್ಟದ ಸಮ್ಮೇಳನಗಳನ್ನು ನಡೆಸಿದೆ. ಉದಯೋನ್ಮುಖ ಬರಹಗಾರರಿಗೆ ವೈದ್ಯಲೇಖನ ರಚನಾ ಕಾರ್ಯಾಗಾರ ಏರ್ಪಡಿಸಿದೆ. ಕಾಲೇಜು ವಿದ್ಯಾರ್ಥಿಗಳಲ್ಲಿ ವೈದ್ಯಪುಸ್ತಕ ವಿಮರ್ಶಾ ಲೇಖನ ಸ್ಪರ್ಧೆಗಳನ್ನು ನವಕರ್ನಾಟಕ ಪ್ರಕಾಶನದ ಸಹಯೋಗದಲ್ಲಿ ಏರ್ಪಡಿಸಿದೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ವೈದ್ಯ ಸಾಹಿತ್ಯ ಎಂಬ ಪ್ರಮುಖ ಯೋಜನೆಯನ್ನು ಹಾಕಿಕೊಂಡು ಕಳೆದ ಸಾಲಿನಲ್ಲಿ ನವಕರ್ನಾಟಕ ಪ್ರಕಾಶನದ ಸಹಯೋಗದಲ್ಲಿ ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಂಡಿತ್ತು.

– ಕನ್ನಡ ಪ್ರಭ

* * *