|| ಜಯ ಜಯ ಭುವನೇಶ್ವರಿ ||

ಸಿ.ಆರ್.ಸಿ. ಆತ್ಮೀಯರ ಬಳಗ
ಸಹಯೋಗ
ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು (ರಿ)
ಕನ್ನಡ ವೈದ್ಯ ಸಾಹಿತ್ಯಒಂದು ಅವಲೋಕನ

ಮತ್ತು

ಡಾ|| ಸಿ.ಆರ್. ಚಂದ್ರಶೇಖರ್ರವರ
೬೦ನೇ ಹುಟ್ಟುಹಬ್ಬದ
ಅಭಿನಂದನಾ ಸಮಾರಂಭ

ಶ್ರೀ ಶಾಲೀವಾಹನ ಶಕೆ ಸರ್ವಜಿತ್ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಮಾರ್ಗಶಿರ ಮಾಸ ಕೃಷ್ಣ ಪಕ್ಷ ಬಿದಿಗೆಯೆಂದು, ಅಂದರೆ ಕ್ರಿ.ಶ. ೨೦೦೮ ನೆಯ ಇಸವಿ ಡಿಸೆಂಬರ್ ೨೦೦೮, ೧೪ನೆಯ ತಾರೀಕು ಭಾನುವಾರ ಸಂಜೆ ೪.೪೫ ನಿಮಿಷಕ್ಕೆ, ಬೆಂಗಳೂರು ಜೆ.ಪಿ. ನಗರದ ಆರ್.ವಿ. ಡೆಂಟಲ್ ಕಾಲೇಜು ಸಭಾಂಗಣದಲ್ಲಿ, ಸಿ.ಆರ್.ಸಿ. ಆತ್ಮೀಯರ ಬಳಗ ಹಾಗೂ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಸಹಯೋಗದೊಡನೆ ನಡೆಸುತ್ತಿರುವ ‘ಕನ್ನಡ ವೈದ್ಯ ಸಾಹಿತ್ಯ ಒಂದು ಅವಲೋಕನ’ ಮತ್ತು ಡಾ. ಸಿ.ಆರ್. ಚಂದ್ರಶೇಖರ್‌ ಅವರ ೬೦ ನೆಯ ಹುಟ್ಟುಹಬ್ಬದ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ, ಹಿರಿಯ ಸಾಹಿತಿ ಹಾಗೂ ವಿಮರ್ಶಕರಾದ ಡಾ. ಎಲ್.ಎಸ್. ಶೇಷಗಿರಿರಾವ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪಾಟೀಲ, ಮಣಿಪಾಲ ಪರಿಗಣಿತ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳಾದ ಪ್ರೊ. ಬಿ.ಎಂ. ಹೆಗ್ಡೆ, ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರರೋಗಗಳ ಸಂಸ್ಥೆಯ ನಿರ್ದೇಶಕರಾದ ಡಾ. ಡಿ. ನಾಗರಾಜ್, ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರತಾರೆ ಶ್ರೀಮತಿ ತಾರಾ, ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ವೈದ್ಯರು, ಸಾಹಿತಿಗಳು, ಆಹ್ವಾನಿತರು ಹಾಗೂ ಬೆಂಗಳೂರು ನಗರದ ಮಹಾ ಜನತೆಯ ಸಮ್ಮುಖದಲ್ಲಿ, ಭಾರತ ಸರ್ಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಲಿ ನೀಡುವ ವಿಜ್ಞಾನಪೀಠ ಪ್ರಶಸ್ತಿಯೆಂದು ಹೆಸರಾದ ರಾಷ್ಟ್ರೀಯ ಜನಪ್ರಿಯ ವಿಜ್ಞಾನ ಸಾಹಿತ್ಯ ಪ್ರಶಸ್ತಿ ವಿಜೇತರಾದ ಡಾ. ಚನ್ನಪಟ್ಟಣ ರಾಜಣ್ಣಾಚಾರ್ ಚಂದ್ರಶೇಖರ್‌ ಅವರಿಗೆ ಸಲ್ಲಿಸಿದ ಅಭಿನಂದನಾ ಪತ್ರ.

ಕನ್ನಡಿಗರ ಹೆಮ್ಮೆಯ ವೈದ್ಯರೆ! : ತಾವು ಡಿಸೆಂಬರ್ ೧೨-೧೯೪೮ ರಂದು ಚನ್ನಪಟ್ಟಣದ ಶ್ರೀ ಬಿ.ಎಂ. ರಾಜಣ್ಣಾಚಾರ್ ಹಾಗೂ ಶ್ರೀಮತಿ ಎಸ್. ಪಿ. ಸರೋಜಮ್ಮ ಅವರ ಪುತ್ರರಾಗಿ ಜನಿಸಿದಿರಿ. ಪ್ರಾಥಮಿಕ ಶಿಕ್ಷಣವನ್ನು ಚನ್ನಪಟ್ಟಣದಲ್ಲಿ ಪಡೆದು, ಇಂಟರ್ ಮೀಡಿಯಟ್‌ಗಾಗಿ ಬೆಂಗಳೂರಿನ ಸರ್ಕಾರಿ ಕಲಾ ಹಾಗೂ ವಿಜ್ಞಾನ ಕಾಲೇಜನ್ನು ಸೇರಿದಿರಿ. ವೈದ್ಯ ಶಿಕ್ಷಣವನ್ನು ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಪಡೆದು, ನಂತರ ಮನೋವೈದ್ಯಕೀಯದಲ್ಲಿ ಡಿಪ್ಲೋಮ ಹಾಗೂ ಸ್ನಾತಕೋತ್ತರ ಶಿಕ್ಷಣವನ್ನು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರರೋಗಗಳ ಸಂಸ್ಥೆಯಿಂದ ಪಡೆದಿರಿ. ಹಣ ತರುವ ಖಾಸಗೀ ವೃತ್ತಿಗೆ ಮನಸೋಲದೆ, ಲಾಭದ ಸೋಂಕಿಲ್ಲದ ಜನತಾ ಜನಾರ್ಧನ ಸೇವೆಗೆ ಅನುವು ಮಾಡಿಕೊಡುವ ಸರ್ಕಾರೀ ವೃತ್ತಿಯನ್ನು ಆರಿಸಿಕೊಂಡಿರಿ. ಇದು ಅಭಿನಂದನೀಯ ಹಾಗೂ ಅನುಕರಣೀಯ.

ವೈಜ್ಞಾನಿಕ ಮನೋಭಾವ ಪ್ರವತೃಕರೆ! : ಡಾ. ಎಚ್. ನರಸಿಂಹಯ್ಯನವರು ಕರ್ನಾಟಕದಲ್ಲಿ ಹದವಾಗಿ ಉತ್ತ ವೈಚಾರಿಕ ಭೂಮಿಯಲ್ಲಿ ತಾವು ಸೊಗಸಾದ ಮೂಢನಂಬಿಕೆ ನಿವಾರಣಾ ಬೆಳೆಯನ್ನು ಬೆಳೆದಿರಿ. ದೆವ್ವವೆನ್ನುವುದು ಇಲ್ಲ, ಅದು ಯಾರ ಮೈ ಮೇಲೂ ಬರುವುದಿಲ್ಲ, ಎಲ್ಲವೂ ಮನಸ್ಸಿನ ಲೀಲೆ ಎಂಬುದನ್ನು ಸಾಧಾರವಾಗಿ ನಿರೂಪಿಸಿದಿರಿ. ಶೃಂಗೇರಿಯ ತ್ಯಾವಣದ ಭೂತಗಣಗಳ ಬಗ್ಗೆ, ಉತ್ತರ ಕರ್ನಾಟಕದ ಬಾನಾಮತಿಯ ಬಗ್ಗೆ, ಭಾಗಮಂಡಲದ ಶಾಲಾ ಮಕ್ಕಳ ಮೈಮೇಲೆ ಬರುತ್ತಿದ್ದ ಭೂತಗಳ ಬಗ್ಗೆ, ಪಾಂಡಿಚೆರಿಯಲ್ಲಿ ಮಕ್ಕಳ ಮೈಮೇಲೆ ಬರುತ್ತಿದ್ದ ಬರುತ್ತಿದ್ದ ಗ್ರಾಮದೇವತೆಯ ಬಗ್ಗೆ ತಾವು ನಡೆಸಿ ಸಂಶೋಧನೆ ಹಾಗೂ ನೀಡಿದ ಚಿಕಿತ್ಸೆ ನಾಡಿನ ಜನರಲ್ಲಿ ಹೊಸ ಅರಿವನ್ನು ಮೂಡಿಸಿದೆ. ಅವರನ್ನು ವಿಚಾರವಂತರನ್ನಾಗಿಸಿದೆ. ವೈಜ್ಞಾನಿಕ ಭದ್ರ ಬುನಾದಿಯನ್ನು ಹಾಕಿದೆ.

ಜ್ಯೋತಿಸ್ವರೂಪರೇ!: ತಾವು ಮನೋವೈದ್ಯರಾದಾಗ ಇಡೀ ಕರ್ನಾಟಕದಲ್ಲಿದ್ದ ಮನೋವೈದ್ಯರ ಸಂಖ್ಯೆ ಕೇವಲ ೨೫! ಸಾಮಾನ್ಯ ವೈದ್ಯರಿಗೆ ಮನೋವೈದ್ಯಕೀಯದ ಬಗ್ಗೆ ಇದ್ದ ಅರಿವು ಬಹುಪಾಲು ಶೂನ್ಯ. ಡಾ. ಎಚ್. ನರಸಿಂಹಯ್ಯನವರ ‘ಬಾನಾಮತಿ’ ವರದಿಯಂತೆ, ಕನ್ನಡನಾಡಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ಮನೋವೈದ್ಯಕೀಯ ಸೂಕ್ಷ್ಮಗಳನ್ನು ತಿಳಿಸುವ ಕಾರ್ಯಾಗಾರಗಳನ್ನು ತಾವು ಹಾಗೂ ತಮ್ಮ ಸಹೋದ್ಯೋಗಿಗಳು ಪರಿಣಾಮಕಾರಿಯಾಗಿ ಜಾರಿಗೆ ತಂದುದು ದಾಖಲಾರ್ಹ. ಇದರ ನೇರ ಲಾಭ ಅಸಂಖ್ಯ ಮನೋರೋಗಿಗಳಿಗೆ ದೊರೆತದ್ದು ತಮ್ಮೆಲ್ಲರ ನಿಸ್ಪೃಹ ಸೇವೆಯ ದ್ಯೋತಕ. ವಿಶ್ವ ಆರೋಗ್ಯ ಸಂಸ್ಥೆ ಆಶಯದಂತೆ, ನಿಮ್‌ಹಾನ್ಸಿನ ಹಿರಿಯ ವೈದ್ಯರ ಮಾರ್ಗದರ್ಶನದಲ್ಲಿ ಸಕಲವಾರದ ಸುತ್ತಮುತ್ತಲ ಹಳ್ಳಿ ಹಳ್ಳಿಗಳ ಮನೆ ಹೋಗಿ, ಮನೋರೋಗಿಗಳನ್ನು ಹುಡುಕಿ, ಅವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡಿ, ಸಮಾಜದಲ್ಲಿ ಸಮಬಾಳನ್ನು ನಡೆಸಲು ಅವಕಾಶ ಮಾಡಿಕೊಟ್ಟದ್ದು ಶ್ಲಾಘನೀಯ.

ನೊಂದವರ ಸಚೇತಕರೇ! : ಮನೋವೈದ್ಯಕೀಯ, ಮನೋಸಾಮಾಜಿಕ ಸಮಸ್ಯೆಗಳಿಂದ ನರಳುತ್ತಿರುವ ಅಸಂಖ್ಯ ಜನರಿಗೆ ಆಪ್ತ ಸಲಹೆ – ಮಾರ್ಗದರ್ಶನ ನೀಡುವ ತಮ್ಮ ನಿರಂತರ ಸೇವೆ ಅದ್ವಿತೀಯ. ಬಸವನಗುಡಿಯ ಹಿಂದುಸೇವಾ ಪ್ರತಿಷ್ಠಾನದಲ್ಲಿ ಕಳೆದ ೨೯ ವರ್ಷಗಳಲ್ಲಿ ೫೦೦೦ ಕ್ಕೂ ಹೆಚ್ಚು ಜನರಿಗೂ ಹೆಚ್ಚು ಆಪ್ತಸಲಹೆಯನ್ನು ನೀಡಿರುವಿರಿ. ವಿದ್ಯಾರ್ಥಿಗಳು ಮಾನಸಿಕ ಸಮಸ್ಯೆಗಳನ್ನು ಸಕಾಲದಲ್ಲಿ ಗುರುತಿಸಲು, ಕರ್ನಾಟಕ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆಯ ಸಹಯೋಗ ದೊಡನೆ ಕಾರ್ಯಾಗಾರಗಳನ್ನು ನಡೆಸಿ ೧೦೦೦ ಕ್ಕೂ ಪ್ರಾಧ್ಯಾಪಕರಿಗೆ ತರಬೇತಿ ನೀಡಿರುವಿರಿ. ತಮ್ಮ ತಂದೆ-ತಾಯಿಯರ ಹೆಸರಿನಲ್ಲಿ ಮೈಕೋ ಅರಕೆರೆ ಬಡಾವಣೆಯಲ್ಲಿ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ತಾವು ತೆರೆದಿರುವ ಸಮಾಧಾನ-ಆಪ್ತಸಲಹಾ ಕೇಂದ್ರ ಇಡೀ ನಾಡಿನಲ್ಲಿಯೇ ವಿನೂತನವಾದದ್ದು, ಮಾದರಿಯಾದದ್ದು. ಅಲ್ಲಿ ನಡದಿರುವ ಉಚಿತ ಚಿಕಿತ್ಸೆ-ಮಾರ್ಗದರ್ಶನ ಹಾಗೂ ಜನಸಾಮಾನ್ಯರಿಗೆ ನೀಡುವ ಆಪ್ತಸಲಹಾ ಕೌಶಲ ತರಬೇತಿ ಕಾರ್ಯಕ್ರಮಗಳೂ ಅತ್ಯಪಯುಕ್ತವಾದದ್ದು.

ಉತ್ತಮ ಸಂವಹನಕಾರರ! : ಮಾತು ಆಡಿದರೆ ಅದು ಮುತ್ತಿನ ಹಾರದಂತೆ ಇರಬೇಕು ಎಂದರು ಅಣ್ಣ ಬಸವಣ್ಣನವರು. ತಮ್ಮ ರೇಡಿಯೋ, ದೂರದರ್ಶನ ಹಾಗೂ ಸಾರ್ವಜನಿಕ ವೇದಿಕೆಯ ಮೇಲೆ ತಾವು ನಡೆಸಿಕೊಡುವ ಮನೋವೈದ್ಯಕೀಯ – ಆರೋಗ್ಯ ಕಾರ್ಯಕ್ರಮಗಳು ಅಪಾರ ಜನಮನ್ನಣೆಯನ್ನು ಗಳಿಸಿದೆ. ಹೇಳಬೇಕಾದುದನ್ನು ತಿಳಿಗನ್ನಡದಲ್ಲಿ ಎಲ್ಲರಿಗೂ ತಿಳಿಯುವ ಹಾಗೆ ಸರಳವಾಗಿ ಹೇಳುವ ಕಲೆ ನಿಜಕ್ಕೂ ಆ ದೈವ ನಿಮಗೆ ನೀಡಿರುವ ಕೊಡುಗೆ ೩೦ ವರ್ಷಗಳ ಬದುಕಿನಲ್ಲಿ ಕನಿಷ್ಠ ೩೦೦೦ ಹೆಚ್ಚು ಭಾಷಣಗಳನ್ನು ನಾಡಿನಾದ್ಯಂತ ನೀಡಿದ್ದೀರಿ.

ಪತ್ರಮಿತ್ರರೆ! : ಆಪ್ತಸಲಹೆ- ಮಾರ್ಗದರ್ಶನ ಬೇಡಿ ತಮಗೆ ಪ್ರತಿದಿನ ಪತ್ರಗಳೂ ಬರುತ್ತಿದ್ದು, ಆ ಎಲ್ಲ ಪತ್ರಗಳಿಗೂ ಉತ್ತರಿಸುವ ತಮ್ಮ ತಾಳ್ಮೆ ಹಾಗೂ ಬದ್ಧತೆ ದೊಡ್ಡದು. ೩೦ ವರ್ಷಗಳ ಅವಧಿಯಲ್ಲಿ ೩೦,೦೦೦ ಕ್ಕೂ ಹೆಚ್ಚು ಪತ್ರಗಳನ್ನು ತಾವು ಬರೆದಿದ್ದೀರಿ. ಈ ಪತ್ರಗಳ ಅಧ್ಯಯನ-ವಿಶ್ಲೇಷಣೆಯು ಬಹುಶಃ ಒಂದು ಪಿ.ಎಚ್.ಡಿ.ಗೆ ವಿಷಯವಾಗಬಹುದು. ಈ ಕೈಂಕರ್ಯ ನಿರಂತರವಾಗಿ ನಡೆಯಲಿ.

ಸಂಘಟಕರೆ!: ಡಾ. ಡಿ.ಎಸ್. ಶಿವಪ್ಪನವರ ಪ್ರಿಯ ಶಿಷ್ಯರಾಗಿದ್ದ ನೀವು ಅವರನ್ನು ಮೀರಿಸುವಂತೆ ವೈದ್ಯಲೇಖನಗಳನ್ನು ಪುಸ್ತಕಗಳನ್ನು ಬರೆದಿರಿ. ಬಾಲಗ್ರಹಕ್ಕೆ ತುತ್ತಾಗಿದ್ದ ಕನ್ನಡ ವೈದ್ಯಸಾಹಿತ್ಯ ಪರಿಷತ್ತಿಗೆ ಮರು ಚೇತನವನ್ನು ನೀಡಿದಿರಿ. ವೈದ್ಯರಿಗಾಗಿ ವೈದ್ಯಲೇಖನ ಕಾರ್ಯಾಗಾರಗಳನ್ನು ನಡೆಸಿದಿರಿ. ಅನೇಕ ಹೊಸ ಲೇಖಕರಿಗೆ ಸ್ಫೂರ್ತಿ ಮಾರ್ಗದರ್ಶನವನ್ನು ನೀಡಿದಿರಿ. ಹೊಸ-ಹಳೆ ಲೇಖಕರಿಂದ ಪುಸ್ತಕಗಳನ್ನು ಬರೆಯಿಸಿದಿರಿ. ಪರಿಷತ್ತಿನ ವತಿಯಿಂದ ಪ್ರಕಟಿಸಿದಿರಿ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವೈದ್ಯಕಿಯ ಪುಸ್ತಕಗಳನ್ನು ಓದಿ, ವಿಮರ್ಶಿಸುವುದನ್ನು ಕಲಿಸಿದಿರಿ. ಬೆಂಗಳೂರಿನ ಆಸ್ಪತ್ರೆಗಳಲ್ಲಿ ವೈದ್ಯಕೀಯ ಕೃತಿಗಳನ್ನು ಪ್ರದರ್ಶಿಸಿ – ಮಾರಾಟಕ್ಕೆ ಅನುವು ಮಾಡಿಕೊಟ್ಟಿರಿ. ಇವೆಲ್ಲವು ತಮ್ಮ ಸಂಘಟನಾ ಚಾತುರ್ಯಕ್ಕೆ ಪ್ರತೀಕವಾಗಿವೆ.

ವೈದ್ಯ ಲೇಖಕರೆ! : ತಮ್ಮ ಬದುಕಿನಲ್ಲಿ ಗೆಳೆಯ ಲಕ್ಷ್ಮೀನಾರಾಯಣ ಓದುವ ಗೀಳನ್ನು ಹತ್ತಿಸಿದರು. ಅಧ್ಯಾಪಕರಾದ ಶ್ರೀ ಮೊಹಮ್ಮದ್ ಘೋರಿ ಭಾಷಾ ಸಮಪತ್ತನ್ನು ಹೆಚ್ಚಿಸಿದರು. ಡಾ. ಎಂ. ಶಿವರಾಂ (ರಾಶಿ). ಶ್ರೀಮತಿ ತ್ರಿವೇಣಿ ಅವರ ಕೃತಿಗಳು ತಮಗೆ ಸ್ಫೂರ್ತಿ ನೀಡಿದವು. ವೈದ್ಯಶಬ್ದ ಬ್ರಹ್ಮ ಡಾ. ಡಿ.ಎಸ್. ಶಿವಪ್ಪನವರ ಮಾರ್ಗದರ್ಶನ ತಮಗೆ ದೊರೆಯಿತು. ಈ ಎಲ್ಲ ಹಿರಿಯರ ಆಶೀರ್ವಾದದ ಫಲವಾಗಿ ತಾವು ೩೦ ವರ್ಷದ ವೃತ್ತಿ ಬದುಕಿನಲ್ಲಿ ೧೦೦೦ ಕ್ಕೂ ಮೀರಿ ವೈದ್ಯಕೀಯ ಲೇಖನಗಳನ್ನು ನಾಡಿನ ನಾನಾ ಪತ್ರಿಕೆಗಳಲ್ಲಿ ಪ್ರಕಟಿಸಿರುವಿರಿ. ಕನ್ನಡ ಮತ್ತು ಇಂಗ್ಲೀಷಿನಲ್ಲಿ ಸುಮಾರು ೧೨,೫೦೦ ಪುಟಗಳ ವೈದ್ಯ ಸಾಹಿತ್ಯವನ್ನು ೧೫೯ ಪುಸ್ತಕಗಳಲ್ಲಿ ಬರೆದಿರುವಿರಿ. ೪೦ ಕ್ಕೂ ಹೆಚ್ಚು ಪುಸ್ತಕಗಳನ್ನು ಸಂಪಾದಿಸಿರುವಿರಿ. ೩೦ ಕ್ಕೂ ಹೆಚ್ಚು ಪುಸ್ತಕಗಳನ್ನು ಸಂಪಾದಿಸಿರುವಿರಿ. ೩೦ ಕ್ಕೂ ಹೆಚ್ಚು ಕೃತಿಗಳು ಐದಕ್ಕಿಂತಲೂ ಹೆಚ್ಚಿನ ಮರು ಮುದ್ರಣಗಳನ್ನು ಕಂಡಿವೆ. ನವಕರ್ನಾಟಕ ಪ್ರಕಾಶನವೊಂದೇ ನಾಲ್ಕು ಲಕ್ಷಕ್ಕೂ ಮೀರಿ ತಮ್ಮ ಕೃತಿಗಳನ್ನು ಮೀರಿ ಮಾರಾಟ ಮಾಡಿವೆ. ತಮ್ಮ ಅನೇಕ ಕೃತಿಗಳು ಇತರ ಭಾಷೆಗಳಿಗೆ ಅನುವಾದವಾಗಿವೆ. ೨೫ ಲಕ್ಷಕ್ಕೂ ಮೀರಿ ಓದುಗರು ತಮ್ಮ ಪುಸ್ತಕಗಳಿಂದ ಲಾಭ ಪಡೆದಿದ್ದಾರೆ. ಇದು ನಿಜಕ್ಕೂ ಕನ್ನಡದ ಮಟ್ಟಿಗೆ ಒಂದು ದಾಖಲೆಯೇ ಸರಿ!

ಪ್ರಶಸ್ತಿ ವಿಜೇತರೇ! : ತಾವು ಬರೆದ ಕೃತಿಗಳಿಗೆ ಅನೇಕ ಬಹುಮಾನಗಳು ಪ್ರಶಸ್ತಿಗಳು ಬಂದಿವೆ. ಭಾರತದ ಸರ್ಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಸಂವಹನ ಮಂಡಲಿ ಲಕ್ಷ ರೂಪಾಯಿಯ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಎರಡು ಬಾರಿ ವಾರ್ಷಿಕ ಉತ್ತಮ ಪುಸ್ತಕ ಪ್ರಶಸ್ತಿಯನ್ನು ನೀಡಿದೆ. ವಿಶ್ವ ವಿದ್ಯಾಲಯ ಧನಸಹಾಯ ಆಯೋಗದ ಹರಿಓಂ ಪ್ರಶಸ್ತಿ, ಭಾರತೀಯ ವೈದ್ಯಕೀಯ ಸಂಘದ ಡಾ. ಬಿ.ಸಿ.ರಾಯ್ ವೈದ್ಯ ದಿನಾಚರಣಾ ಪ್ರಶಸ್ತಿ – ಹೀಗೆ ಹಲವು ಪ್ರಶಸ್ತಿಗಳು, ಬಹುಮಾನಗಳು, ಸನ್ಮಾನಗಳು, ಬಿರುದುಗಳು ತಮಗೆ ಸಂದಿವೆ. ಇವು ನಮ್ಮ ನಾಡಿಗೆ, ನುಡಿಗೆ ಹಾಗೂ ಜನರಿಗೆ ಮಾಡಿರುವ ಸೇವೆಯನ್ನು ಸೂಚಿಸುತ್ತವೆ.

ಡಾ. ಚನ್ನಪಟ್ಟಣ ರಾಜಣ್ಣಾಚಾರ್ ಚಂದ್ರಶೇಖರ್ ಅವರೆ,

ಕನ್ನಡ ನಾಡು ನುಡಿಗೆ, ವೈದ್ಯಕೀಯ ಸಾಹಿತ್ಯ ಲೋಕಕ್ಕೆ, ನೊಂದ ಮನೋ ರೋಗಿಗಳಿಗೆ ತಾವು ಸಲ್ಲಿಸಿರುವ ಸೇವೆಯನ್ನು ಗಮನಿಸಿ ತಮ್ಮನ್ನು ಅಭಿನಂದಿಸುತ್ತಿದ್ದೇವೆ ಹಾಗೂ ಇಂದು ತಮಗೆ ವೈದ್ಯ ಸಾಹಿತ್ಯ ಶಿಖರ ಎಂಬ ಬಿರುದನ್ನು ನೀಡುತ್ತಿದ್ದೇವೆ. ತಮಗೂ, ತಮ್ಮ ಕುಟುಂಬವಾದ ಶ್ರೀಮತಿ ಡಿ.ಎಸ್. ರಾಜೇಶ್ವರಿಯವರಿಗೂ ಹಾಗೂ ತಾಯಿಯವರಾದ ಶ್ರೀಮತಿ ಎಸ್.ಪಿ. ಸರೋಜಮ್ಮನವರಿಗೂ ಆಯುರಾರೋಗ್ಯ ಐಶ್ವರ್ಯ ಸಕಲ ಸೌಭಾಗ್ಯಾದಿಗಳೂ ದೊರೆಯಲಿ. ತಮ್ಮಿಂದ ಕನ್ನಡ ನಾಡಿಗೆ ಮತ್ತಷ್ಟು ಸೇವೆ ದೊರೆಯಲಿ ಎಂದು ಆಶಿಸುತ್ತಿದ್ದೇವೆ.

ಇತಿ

ಡಾ|| ನಾ. ಸೋಮೇಶ್ವರ
ಸಿ.ಆರ್.ಸಿ. ಆತ್ಮೀಯ ಬಳಗ

ಡಾ|| ವಸುಂಧರಾ ಭೂಪತಿ
ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು (ರಿ.)

೧. ಡಾ|| ಬಿ. ಜಇ. ಚಂದ್ರಶೇಖರ್ – ಉಪಾಧ್ಯಕ್ಷರು
೨. ಡಾ. ಪ್ರಕಾಶ್ ಸಿ ರಾವ್ – ಗೌರವ ಕಾರ್ಯದರ್ಶಿ
೩. ಶ್ರೀ ಎನ್. ವಿಶ್ವರೂಪಾಚಾರ್ = ಜಂಟಿ ಕಾರ್ಯದರ್ಶಿ
೪. ಶ್ರೀ ಆರ್. ಬಾಲಕೃಷ್ಣ – ಖಜಾಂಚಿ
೫. ಕನ್ನಡ ವೈದ್ಯಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು
೬. ಎಲ್ಲ ಕನ್ನಡಿಗರು

ದಿನಾಂಕ : ೧೨-೧೨-೨೦೦೮

* * *