ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯದ ಕೃತಿ ನಡೆಯುತ್ತಿದ್ದರೂ ಅದು ನಮ್ಮ ಜನ ಜೀವನ ಅವಶ್ಯಕತೆಗೆ ಏನೂ ಸಾಲದು. ವ್ಯಾಧಿಗಳ ಉಗಮ, ಚಿಕಿತ್ಸೆ ಮತ್ತು ತಡೆಗಟ್ಟುವ ವಿಧಿವಿಧಾನಗಳನ್ನು ತಿಳಿದುಕೊಳ್ಳುವುದು ಇಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬರು ಸಾಮಾನ್ಯ ವ್ಯಾಧಿಗಳ ಬಗ್ಗೆ ತಕ್ಕ ಮಟ್ಟಿಗೆ ತಿಳಿದುಕೊಂಡಿರಬೇಕಾಗುತ್ತದೆ. ಆಧುನಿಕ ವೈದ್ಯಶಾಸ್ತ್ರದ ಜನಪ್ರಿಯ ಸಾಹಿತ್ಯವು ವಿವಿಧ ಪ್ರಕಾರಗಳಲ್ಲಿ ಜನರನ್ನು ತಲುಪಬೇಕಾಗಿದೆ. ಆರೋಗ್ಯ ಪ್ರಜ್ಞೆ ಜಾಗೃತಿವಾಗಿಡಲು ನಿರಂತರ ಪ್ರಯತ್ನ ಸಾಗಬೇಕಾಗಿದೆ. ಆಧುನಿಕ ವೈದ್ಯಶಾಸ್ತ್ರ (ಆಲೋಪೆಥಿ)ದ ಕಟ್ಟಡ ಹಾಗೂ ಅದರ ಹಂದರ ನಿಂತಿರುವುದು ಮೂಲ ವೈದ್ಯವಿಜ್ಞಾನಗಳಾದ ಶರೀರ ರಚನಾಶಾಸ್ತ್ರ, ಶರೀರ ಕ್ರಿಯಾ ಶಾಸ್ತ್ರ, ಜೀವರಸಾಯನ ಶಾಸ್ತ್ರ, ಔಷಧ ಶಾಸ್ತ್ರ, ಸೂಕ್ಷ್ಮ ಜೀವಿಶಾಸ್ತ್ರ, ರೋಗನಿಧಾನ ಶಾಸ್ತ್ರ ಹೀಗೆ ಪಟ್ಟಿಮಾಡಬಹುದು.

ಒಂದು ಸರಳ ರೇಖೆ ಆರೋಗ್ಯಯುಕ್ತ ಜೀವನ ಎಂದು ವಾದಿಸಿದರೆ ಅದು ವಕ್ರಗೊಂಡಾಗ ಅನಾರೋಗ್ಯವಾಗುತ್ತದೆ. ಸುಸ್ವರವೇ ಆರೋಗ್ಯ, ಅಪಸ್ವರವೇ ಅನಾರೋಗ್ಯ ಎಂದೂ ಭಾವಿಸಬಹುದು. ಒಂದು ವಾದ್ಯ ಅಪಸ್ವರಗೈದರೆ ಅದನ್ನು ಸರಿಪಡಿಸುತ್ತವೆ. ಕಾರಣ ಅದರ ರಚನೆ ಕಾರ್ಯವಿಧಾನ ನಾವು ಅರಿತಿರುತ್ತವೆ. ಅದೇ ರೀತಿಯಾಗಿ ನಮ್ಮ ಸರೀರ ಅಪಸ್ವರಗೈದಾಗ ನಾವು ವೈದ್ಯರೆಡೆಗೆ ಧಾವಿಸುತ್ತೇವೆ. ಕಾರಣ ನಮಗೆ ಶರೀರದ ರಚನೆ ಹಾಗೂ ಕಾರ್ಯ ವಿಧಾನ ಗೊತ್ತಿಲ್ಲ. ದೋಷ ಸರಿಪಡಿಸಲು ನಮ್ಮಿಂದ ಅಸಾಧ್ಯ. ಆದರೆ ವೈದ್ಯ ಮೂಲ ವಿಜ್ಞಾನಗಳಾದ ಶರೀರರಚನೆ ಕ್ರಿಯಾ ತಂತ್ರ, ಜೀವನ ರಸಾಯನಗಳು ಪ್ರಾಥಮಿಕ ತಿಳಿವಳಿಕೆಯಿದ್ದರೆ ಯಾವುದಕ್ಕೂ ಭಯಪಡದೆ ವೈದ್ಯರಲ್ಲಿ ಆತಂಕವಿರದೆ ಹೋಗಬಹುದು. ಕನ್ನಡದಲ್ಲಿ ಸಾಕಷ್ಟು ಲೇಖಕರು ವೈದ್ಯವಿಜ್ಞಾನ ಸಾಹಿತ್ಯವನ್ನು ವಿಪುಲರೀತಿಯಲ್ಲಿ ಮಾಡುತ್ತಿದ್ದರು. ವೈದ್ಯ ವಿಜ್ಞಾನ ಆಧಾರ ಸ್ತಂಭವಾದ ಮೂಲ ವೈದ್ಯವಿಜ್ಞಾನ ರಚನೆ ಕೇವಲ ಬೆರಳಣಿಕೆಯ ವೈದ್ಯರಿಂದ ನಡೆದಿದೆ ಎಂದು ಹೇಳಬಹುದು. ಕಟ್ಟಡ ಅಡಿಪಾಯದ ಭದ್ರತೆ ರಚನೆಯ ಆಂತರ್ಯ ಅರಿವಿದ್ದರೆ ಮಾತ್ರ ಶ್ರೀ ಸಾಮಾನ್ಯ ಕಟ್ಟಡದ ದೋಷ ಕಂಡುಹಿಡಿಯಬಹುದು.

‘ರೀಡರ್ ಡೈಜೆಸ್ಟ್’, ಹಲವಾರು ವೈದ್ಯ ಲೇಖನಗಳನ್ನು ಕನ್ನಡಕ್ಕೆ ನಾನು ಅನುವಾದಿಸಿದ್ದೇನೆ. ಅಲ್ಲಿಯ ಲೇಖಕರು ನೇರವಾಗಿ ವಿಷಯ ವಸ್ತು ಪ್ರಸ್ತುತಪಡಿಸುತ್ತಾರೆ. ಆದರೆ ಕನ್ನಡದಲ್ಲಿ ಇದು ಸಾಧ್ಯವಾಗಲಾರದು. ನಾವು ಮೂಲ ರಚನೆ ಕಾರ್ಯವಿಧಾನ ವಿವರಿಸಿ ನಂತರ ವಿಷಯಕ್ಕೆ ಇಳಿಯಬೇಕಾಗುತ್ತದೆ. ರೀಡರ್ಸ್‌ ಡೈಜಸ್ಟ್‌ನ ಓದುಗರಿಗೆ ಮೂಲ ವಿಜ್ಞಾನಗಳ ಸಾಕಷ್ಟು ಗ್ರಹಿಕೆ ಇರುತ್ತದೆ. ಆದ್ದರಿಂದ ಕನ್ನಡ ಓದುಗರಲ್ಲಿ ಈ ಕೊರತೆಯಿದೆ. ಕನ್ನಡದ ಜಾಯಮಾನವೇ ಬೇರೆ. ಈ ಉದಾಹರಣೆ ಕನ್ನಡದಲ್ಲಿ ವೈದ್ಯ ಮೂಲ ವಿಜ್ಞಾನ ತಿಳಿವಳಿಕೆಯ ಅವಶ್ಯಕತೆಯ ತೀವ್ರತೆಯನ್ನು ಹೇಳುತ್ತದೆ.

ಕನ್ನಡ ವೈದ್ಯ ಸಾಹಿತ್ಯ ಕೃಷಿಯಲ್ಲಿ ಮೂಲ ವಿಜ್ಞಾನಗಳ ತಿಳಿವಳಿಕೆ ಹಾಗೂ ಪರಿಕಲ್ಪನೆಗಳು ನಮ್ಮ ಪರಂಪರೆಯಲ್ಲಿ ಅನೇಕ ಬಾರಿ ಗೋಚರಿಸುತ್ತದೆ. ಶರಣ ಸಾಹಿತ್ಯ, ದಾಸ ಸಾಹಿತ್ಯ, ಸಂತ ಸಾಹಿತ್ಯ ಹಾಗೂ ಪುರಾಣ ಐತಿಹಾಸಿಕಗಳಲ್ಲಿ ಕಂಡುಬರುತ್ತಿವೆ.

ಹನ್ನೆರಡನೆ ಶತಮಾನದಲ್ಲಿ ಶರಣ ವೈದ್ಯ ಸಂಗಣ್ಣ ದೇಹದಲ್ಲಿರುವ ಕೇಶವಾಹಿನಿಗಳ ಜಾಲದ ಬಗ್ಗೆ ಹೇಳಿರುವುದು. ಅದ್ಭುತ ಸಂಗಣ್ಣ ಹೀಗೆ ಹೇಳುತ್ತಾನೆ. ಐದು ತತ್ವಗಳಿಂದಾದ ದೇಹಕ್ಕೆ ರೋಗರುಜಿನ ಬರುವುದು ಸ್ವಾಭಾವಿಕ ಅಸ್ಥಿಮಾಸಂ, ಶುಕ್ಲ ಶ್ರೋಣಿತವುಳನ್ನಕೆ ಆಧಿ ವ್ಯಾಧಿಯ ತಾಪತ್ರಯದ ಕೂಟಸ ಬಿಡದು. ಚೆನ್ನಬಸವಣ್ಣನ ವಚನಗಳಲ್ಲಿ ಪಿಂಡಗೂಸಿನ ಕುಂದು ಹೇಳಲಾಗಿದೆ. ಆಹಾರ ಕ್ರಮದ ಬಗ್ಗೆ ಹೇಳಿದ್ದಾರೆ. ಅದರಂತೆ ಹನ್ನೆರಡನೆ ಶತಮಾನದ ಶಿವಶರಣೆ ಅಕ್ಕ ಮಹಾದೇವಿ ಆಹಾರ ಸೇವನೆ ಕಡಿಮೆ ಮಾಡಿ, ಕೆಲೋರಿ ಮೌಲ್ಯವನ್ನು ಕಡಿಮೆ ಮಾಡಿ, ದೀರ್ಘಾಯುಷ್ಯವನ್ನು ಸಾಧಿಸಬಹುದೆಂದು ಹೇಳಿರುವುದು ಸೋಜಿಗ.

ದಾಸವರೇಣ್ಯ ಪುರಂದರದಾಸರು “ಮಾಸವೆರಡರಲಿ ಶಿರಮಾಸ, ಮೂರರೊಳ ಲಿಂಗಮಾಂಸ, ನಾಲ್ಕರಲಿ ಚರ್ಮದಿ ಹೊದಿಕೆಯ ಮಾಸ ಐದರಲಿ, ನಖಕೊಂಡು ರಂಧ್ರಗಳು… ಮಾಸ ಎಂಟರಲಿ ಪೂರ್ವಾನುಭವದ ಕರ್ಮಗಳು” ಎಂಬ ಕೀರ್ತನೆಯಲ್ಲಿ ಪಿಂಡಗೂಸಿನ ರಚನೆಯನ್ನೂ ಮಾರ್ಮಿಕವಾಗಿ ಹೇಳಿದ್ದಾರೆ. ಜಗನ್ನಾಥದಾಸರು ಹರಿಕಥಾಮೃತ ಸಾರದಲ್ಲಿ ಅನೇಕ ಸಂಧಿಗಳ ಚರಣಗಳಲ್ಲಿ ಶರೀರಕ್ರಿಯಾ ಶಾಸ್ತ್ರ, ಪರಿಕಲ್ಪನೆಗಳನ್ನು ನಿವೇದಿಸಿದ್ದಾರೆ. ಜ್ವರ – ಶ್ವಾಸೋಚ್ಛ್ವಾಸದ ಬಗ್ಗೆ ಹೇಳಿದ್ದಾರೆ. ಆಹಾರ ಕ್ರಮಗಳ ಬಗ್ಗೆ ವಿವರಿಸಿದ್ದಾರೆ. ಕನಕದಾಸರು ಅನೇಕ ಕೀರ್ತನೆಗಳಲ್ಲಿ ಅಸ್ಥಿಪಂಜರ ನರಗಳ ಕುರಿತು ಉದಾಹರಿಸಿದ್ದಾರೆ. ಅನೇಕ ಆಧುನಿಕ ವಚನಕಾರರು – ನರಗಳ ಕುರಿತು ಉದಾಹರಿಸಿದ್ದಾರೆ. ಅನೇಕ ಆಧುನಿಕ ವಚನಕಾರರು ದಾಸರಲ್ಲಿ ಬಹುಶಃ ಆಯುರ್ವೇದ ಪರಿಕಲ್ಪನೆಗಳನ್ನು ಹೃದ್ಗಥ ಮಾಡಿಕೊಂಡಿದ್ದರಿಂದ ಅವುಗಳ ಕೆಲವು ವಿಚಾರಗಳು ಬಹುಶಃ ಮೂಲ ವಿಜ್ಞಾನಗಳಿಗೆ ಸಂಬಂಧಿಸಿದ್ದವೆಂದು ತರ್ಕಿಸಬಹುದು. ಶಿಶುನಾಳ ಶರೀಫ ಸಾಹೇಬರ ಗುರುಗೋವಿಂದ ಭಟ್‌ರ ತತ್ವ ಪದಗಳಲ್ಲಿಯೂ ಈ ವಿಚಾರಗಳು ಹಾದು ಹೋಗಿವೆ. ಬಹುಶಃ ಈ ಎಲ್ಲ ದಿವ್ಯ ಜ್ಞಾನಿಗಳಿಗೆ ಯೋಗ ದೃಷ್ಟಿ ಸಾಕ್ಷಾತ್ಕಾರವೂ ಕಾರಣವಾಗಿರಬಹುದು.

ಈ ಶತಮಾನದ ಆರಂಭದ ದಶಕಗಳಲ್ಲಿ ಬೆಂಗಳೂರಿನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ದಿ. ಬೆಳ್ಳಾವೆ ವೆಂಕಟನಾರಾಯಣಪ್ಪ ಮತ್ತು ಪವನಶಾಸ್ತ್ರದ ಪರೀವಿಕ್ಷರಾಗಿದ್ದ ದಿ. ನುಂಗಿಪುರಂ ವೆಂಕಟೇಶ ಅಯ್ಯಂಗಾರ್ಯರು ಜೊತೆಗೂಡಿ ವಿಜ್ಞಾನ ಪ್ರಚಾರಿಣಿ ಎಂಬ ಸಂಘಟನೆಯೊಂದನ್ನು ರಚಿಸಿದ್ದರು. ಅದರ ವತಿಯಿಂದ ವಿಜ್ಞಾನ ಎಂಬ ಕನ್ನಡ ಮಾಸಪತ್ರಿಕೆಯನ್ನೂ ಪ್ರಕಟಿಸುತ್ತಿದ್ದರು. ಕೆಲ ಸಂಚಿಕೆಗಳಲ್ಲಿ ಮಾನವನ ಶರೀರ ಕುರಿತು ಕೆಲ ಲೇಖನಗಳನ್ನು ಪ್ರಕಟವಾಗಿವೆ ಎಂದೂ ಹೇಳಲಾಗಿವೆ. ದಿ. ಡಾ| ಶಿವರಾಮ ಕಾರಂತರು ವಿಜ್ಞಾನಿಯಾಗಿರದಿದ್ದರೂ ಮಕ್ಕಳಿಗಾಗಿ ವೈಜ್ಞಾನಿಕ ವಿಷಯಗಳಾದ ಶರೀರ ರಚನೆಯ ಕ್ರಿಯೆಗಳನ್ನು ಬಾಲಪ್ರಪಂಚದಲ್ಲಿ ‘ಪ್ರೌಢರಿಗಾಗಿ ವಿಜ್ಞಾನ ಪ್ರಪಂಚ’ ಎಂಬ ವಿರ್ಶವಕೋಶದ ಮಾದರಿಯಲ್ಲಿ ಎರಡು ಸಂಪುಟಗಳಲ್ಲಿ ಹಲವೆಡೆ ಉಲ್ಲೇಖಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯವು ಪ್ರಚಾರ ಉಪನ್ಯಾಸ ಮಾಲೆಯ ಅಡಿಯಲ್ಲಿ ಎಲ್ಲ ವಿಷಯಗಳಂತೆ ವೈದ್ಯ ವಿಜ್ಞಾನಕ್ಕೆ ಸಂಬಂಧಿಸಿದ ಚಿಕ್ಕ, ಅತ್ಯಂತ ಸುಲಭ ಮಾದರಿಯಲ್ಲಿ ಕೈಪಿಡಿಯಾಗಿ ಸುಲಭ ಬೆಲೆಯಲ್ಲಿ ಪ್ರಕಟಿಸಲಾಯಿತು. ಅವುಗಳಲ್ಲಿ ಕೆಲವೊಂದನ್ನು ಗಮನಿಸಿದಾಗ ವಿಷಯಕ್ಕೆ ಸಂಬಂಧಿಸಿದ ಮೂಲ ವಿಜ್ಞಾನದ ರಚನೆ ಹಾಗೂ ಕ್ರಿಯೆಗಳನ್ನು ಚರ್ಚಿಸಲಾಗಿದೆ. ಈ ದಾರಿಯನ್ನೇ ಕರ್ನಾಟಕ ಹಾಗೂ ನಂತರ ಬೆಂಗಳೂರು ವಿಶ್ವವಿದ್ಯಾಲಯಗಳ ಪ್ರಸಾರಾಂಗದ ವ್ಯಾಸಂಗ ಉಪನ್ಯಾಸ ಮಾಲೆಯ ಪ್ರಕಟನೆಗಳು ಅನುಸರಿಸಿವೆ.

ಆದರೆ ಕೆಲದಶಕಗಳ ಹಿಂದೆ ವಿಶ್ವಕೋಶದ ೧೪ ಸಂಪುಟಗಳನ್ನು ಹೊರತಂದಿತು ಬೆಂಗಳೂರಿನ ಗಣಕ ಪರಿಷತ್ತು. ಎಲ್ಲ ವಿಷಯಗಳನ್ನು ಪರಿಷ್ಕರಿಸಿ ೪ ಸಿಡಿಗಳನ್ನು ಹೊರತಂದಿದೆ. ಇದು ಮೆಚ್ಚಬೇಕಾದ ಕಾರ್ಯ. ಅದರಲ್ಲಿ ಸುಮಾರು ೭೦೦ ವೈದ್ಯಕೀಯ ಸಂಬಂಧಿಸಿದ ಶೀರ್ಷಿಕೆಗಳಿವೆ. ಅವರಲ್ಲಿ ಸುಮಾರು ೪೦ ಶೀರ್ಷಿಕೆಗಳು ವೈದ್ಯ ಮೂಲ ವಿಜ್ಞಾನಗಳಿಗೆ ಸಂಬಂಧಿಸಿದವುಗಳು. ಇದೊಂದು ಬಹುದೊಡ್ಡ ಕೊಡುಗೆ. ಮೈಸೂರಿನ ಜೆ.ಎಸ್.ಎಸ್. ವೈದ್ಯಕೀಯ ಕಾಲೇಜಿನ ಜೀವ ವಿಜ್ಞಾನ ವಿಭಾಗ ಪ್ರೊ. ವಿ. ಸುಬ್ಬಾರಾವ್ ಅವರು ಸುಮಾರು ೨೦ ಪುಟಗಳಲ್ಲಿ ಜೀವರಸಾಯನ ಶಾಸ್ತ್ರದ ತಿರುಳನ್ನು ಬಹು ಅಂದವಾಗಿ ಬರೆದಿದ್ದಾರೆ. ಜೀವರಸಾಯನ ಶಾಸ್ತ್ರ ಕುರಿತು ಅನೇಕ ಪಠ್ಯಪುಸ್ತಕಗಳು ಬಂದರೂ ವೈದ್ಯ ರಸಾಯನಶಾಸ್ತ್ರ ಕುರಿತು ಸಂಶೋಧನೆ ನಡೆಸಿದಾಗ ಪುಸ್ತಕಗಳು ದೊರೆಯಲಿಲ್ಲ. ಹುಬ್ಬಳ್ಳಿ ಕೆ.ಎಂ.ಸಿ.ಯ ಆಗಿನ ಪ್ರಾಧ್ಯಾಪಕ ಡಾ| ಸೊಂಡೂರ ಶ್ರೀನಿವಾಸಚಾರ್ಯರು ಬರೆದದ್ದು ನೆನಪಿದೆ. ಅದು ಕೂಡ ನಮಗೆ ದೊರೆಯಲಿಲ್ಲ. ಅದರಂತೆ ಮೈಸೂರು ವಿಶ್ವವಿದ್ಯಾಲಯ  ವಿಶ್ವಕೋಶದ ಘನ ಕಾರ್ಯದಲ್ಲಿ ಅಂಗರಚನಾ ಶಾಸ್ತ್ರ ಹಾಗೂ ಶರೀರ ಕ್ರಿಯಾ ಶಾಸ್ತ್ರ ಕುರಿತು ಸುಮಾರು ೩೦ ಪುಟಗಳಲ್ಲಿ ಸುಂದರವಾದ ಟಿಪ್ಪಣಿ ನೀಡಲಾಗಿದೆ. ಸಾಕಷ್ಟು ಸಮಪದಗಳನ್ನು ಬಳಲಾವಾಗಿದೆ. ಇದು ಭಾಷಾಂತರ ಕೆಲಸವಾದ್ದರಿಂದ ಓದುಗನಿಗೆ ವಿಷಯ ತಿಳಿಸುವಲ್ಲಿ ಎಷ್ಟರಮಟ್ಟಿಗೆ ಸಾಧ್ಯ ಎಂಬ ಪ್ರಶ್ನೆ ಬೇರೆ. ಇದು ಕೂಡ ಪ್ರಶಂಸಾರ್ಹ ಕಾರ್ಯ

ಮುಂದೆ ಡಾ| ಪಿ.ಎಸ್. ಶಂಕರ್ ಅವರು ಪ್ರಧಾನ ಸಂಪಾದಕತದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಹೊರತಂದ ವೈದ್ಯವಿಶ್ವಕೋಶ ಉಲ್ಲೇಖನೀಯ. ಇಲ್ಲಿಯೂ ವಿಷಯ ವೈವಿಧ್ಯತೆಯಿದ್ದರೂ ಮೂಲ ವಿಜ್ಞಾನಗಳ ಪ್ರಾಥಮಿಕ ಪರಿಚಯವಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ’ ವಿಭಾಗವು ಹೊರತರುತ್ತಿರುವ ವಿಜ್ಞಾನ ಸಂಗತಿ ಮಾಸಪತ್ರಿಕೆಯಲ್ಲಿ ಹಿಂದ ಮೂಲ ವಿಜ್ಞಾನ, ಅದರಲ್ಲೂ ಶರೀರ ರಚನೆ, ಖನಿಜ ಶರೀರ ಕ್ರಿಯಾಶಾಸ್ತ್ರ ಕುರಿತು ಲೇಖನಗಳು ಪ್ರಕಟಗೊಂಡಿವೆ. ಜೀವನಾಡಿ, ಹುಬ್ಬಳ್ಳಿ ವೈದ್ಯಶ್ರೀ’ ಅನುರಾಗ ಆರೋಗ್ಯ ಹಾಗೂ ಕೆಲ ದಿನಪತ್ರಿಕೆಗಳ ಪುರವಣಿಗಳಲ್ಲಿ ದೇಹದ ಚಲನವಲನ ಮೆದುಳು ಮತ್ತು ಮನಸ್ಸು’ ಶರೀರ ಕ್ರಿಯೆಗಳ ವಿಸ್ಮಯ ಹೀಗೆ ಹಲವಾರು ಲೇಖನಗಳು ಪ್ರಕಟಗೊಂಡಿವೆ. ನಮ್ಮ ಅನುಭವದಲ್ಲಿ ವೈದ್ಯ ಮೂಲ ವಿಜ್ಞಾನದ ಲೇಖನಗಳು ಜನರ ಆಸಕ್ತಿ ಕೆರಳಿಸುವಲ್ಲಿ ಸಫಲತೆ ಕಂಡಿಲ್ಲ. ಕಾರಣ ವಿಷಯ ಪ್ರತಿಪಾದನೆ ಜಟಿಲಗೊಳ್ಳುವುದೇ ಕಾರಣ. ಅದೇ ಮೆಡಿಸಿನ್ ಕ್ಲಿನಿಕಲ್ ವಿಷಯವಾಗಿದ್ದರೆ ಓದುಗರ ಆಸಕ್ತಿ ಅರಳಿಸಲು ಹಾಗೂ ವಿಷಯ ತಿಳಿಸುವಲ್ಲಿ ನೆರವಾಗುತ್ತದೆ. ಕಾರಣ ಅವು ದೈನಂದಿನ ನಿತ್ಯ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿರುತ್ತವೆ.

ಶರೀರ ರಚನೆ, ಅದ್ಭುತವಾದ ಮೂಲವಿಜ್ಞಾನ, ಎಲುಬುಗಳು ಸ್ನಾಯುಗಳು – ರಕ್ತನಾಳ, ಹೃದಯ, ಪಚನಾಂಗ- ಮೆದುಳು ಹೀಗೆ ಅಂಗಾಂಗ ರಚನಾತ್ಮಕ ಸಂಬಂಧ. ಅವುಗಳ ವ್ಯೂಹ ಅಷ್ಟೇ ಅಲ್ಲದೆ ಅಂಗಾಂಶ’ಗಳ ಸೂಕ್ಷ್ಮ ದೃಶ್ಯವನ್ನು ನೀಡುತ್ತದೆ. ಈ ಶಾಸ್ತ್ರದಲ್ಲಿ ಕನ್ನಡದಲ್ಲಿ ನೇರವಾಗಿ ಚರ್ಚಿಸಿ ಹೇಳುವ ಸಾಹಿತ್ಯ ತೀರ ಕಡಿಮೆ. ಕೆಲವೂ ಲಭ್ಯವಿಲ್ಲ. ಕೆಲವು ಕಡೆಗಳಲ್ಲಿ ಶರೀರ ರಚನೆಯ ತುಂಡು ತುಂಡಾದ ಲೇಖನಗಳು ಸಾಂದರ್ಭಿಕವಾಗಿ ಪ್ರಕಟಗೊಂಡಿವೆ. ಕನ್ನಡ ಸಾಹಿತ್ಯ ಪರಿಷತ್ತು ೧೯೭೯ ರಲ್ಲಿ ಸುಮಾರು ೩೬ ಪುಟಗಳ ಚಿಕ್ಕ ಪುಸ್ತಕದಲ್ಲಿ ಮಕ್ಕಳಿಗಾಗಿಯೇ ನಮ್ಮ ಶರೀರ, ಈ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ. ಸುಂದರ ಸರಳ ಭಾಷೆಯಲ್ಲಿ ಮಕ್ಕಳಿಗೆ ತಿಳಿಯುವಂತೆ ಬರೆಯಲಾಗಿದೆ. ಮುಖ್ಯವಾಗಿ ಸಮಪದಗಳು ತಿಳಿಯುವಂತೆ ಬಳಸಲಾಗಿದೆ. ಡಾ| ಸಿ.ಆರ್. ಚಂದ್ರಶೇಖರ ಅವರನಮ್ಮ ಶರೀರ ಅವರ ರಕ್ಷಣೆ ಇದು ಕಿರಿಯರಿಗಾಗಿ ಅಂಗರಚನೆ ಮತ್ತು ಆರೋಗ್ಯ ಮಾಹಿತಿ ನೀಡುವ ಕೃತಿ. ನವಕರ್ನಾಟಕ ಪ್ರಕಾಶನದಿಂದ ಪ್ರಕಟಗೊಂಡ ಕೃತಿ ಉಪಯುಕ್ತವಾದುದು. ಹಿರಿಯ ಅನುಭವಿ ಲೇಖಕರಾದ ಚಂದ್ರಶೇಖರ ಅವರು ಆಕರ್ಷಕ ಸರಳ ಶೈಲಿಯಲ್ಲಿ ಸುಮಾರು ೨೬ ಅಧ್ಯಾಯಗಳಲ್ಲಿ ಅಂಗರಚನೆಯ ಸಂಪೂರ್ಣ ವಿವರಣೆ ಒದಗಿಸುವುದರೊಂದಿಗೆ ಅದರೊಡನೆ ಅದೂ ಆಯಾ ಅಂಗರಚನೆಗೆ ಸಂಬಂಧಿಸಿದಂತೆ ಸಂಕ್ಷಿಪ್ತವಾಗಿ ರೋಗಗಳ ಬಗ್ಗೆ ಸೂಕ್ತ ಮಾಹಿತಿ ನೀಡಲಾಗಿದೆ. ನಮ್ಮ ಶರೀರ ಹೊರ ಮತ್ತು ಒಳ ಅಂಗಾಂಗಗಳು ಪಂಚೇಂದ್ರಿಯಗಳು ನರಜಾಲ – ನಿದ್ರೆ, ರಕ್ತ, ಮೂತ್ರಜನಕಾಂಗ- ಗಂಡು ಹೆಣ್ಣು ಪ್ರಥಮ ಚಿಕಿತ್ಸೆ, ಅಲ್ಲದೆ ಆರೋಗ್ಯ ಭಾಗ್ಯ ಕಾಪಾಡುವ ಬಗೆಯನ್ನು ಮಾರ್ಮಿಕವಾಗಿ ಹೇಳಲಾಗಿದೆ. ಕೊನೆಯಲ್ಲಿ ಇಂಗ್ಲಿಷನಿಂದ ಕನ್ನಡದ ಸಮಪದಗಳ ಪಟ್ಟಿ ನೀಡಲಾಗಿದೆ. ಅರ್ಥ ಗೊಂದಲ ನಿವಾರಿಸಿದಂತಾಗಿದೆ.

ಗುಲ್ಬರ್ಗದ ಡಾ| ಎಸ್.ಎಸ್. ಪಾಟೀಲರು ವೈದ್ಯಕೀಯ ವಿಷಯಗಳಿಗೆ ವಚನಗಳ ರೂಪ ನೀಡಿದವರು. ನುರಿತ ಶಸ್ತ್ರ ವೈದ್ಯರು. ಅವರು ನಮ್ಮ ದೇಹವೇ ದೇಗುಲ ಹಾಗೂ ಎಲವು ಕೀಲುಗಳ ಪರಿಚಯ ಕೃತಿಗಳಲ್ಲಿ ದೇಹ ರಚನೆಯನ್ನು ವಿಭಿನ್ನ ದೃಷ್ಟಿಕೋನಗಳಿಂದ ಪ್ರತಿಪಾದಿಸಿದ್ದಾರೆ. ನಮ್ಮ ದೇಹವೇ ದೇಗುಲದಲ್ಲಿ ಪರಂಪರಾಗತ ಕಲ್ಪನೆಗಳ ಚರ್ಚೆಯಿಂದ ಆರಂಭಿಸಿ ವೈಜ್ಞಾನಿಕ ವಿಶ್ಲೇಷಣೆ, ಜನನ ಕ್ರಿಯೆ, ಭ್ರೂಣದ ರಚನೆ ಹಾಗೂ ಲಾಲನೆ ಪಾಲನೆ ಬಗ್ಗೆ ಹೇಳುತ್ತಾರೆ. ದೇಹದ ಅಂಗಾಂಗಗಳ ರಚನೆ ರಚನೆ ಹಂದರ ನೀಡಿ ಸಂಕ್ಷಿಪ್ತ ಕಾರ್ಯಗಳನ್ನು ವಿವರಿಸಿದ್ದಾರೆ. ಮುಖ್ಯವಾಗಿ ಆರೋಗ್ಯ ನೈತಿಕಸೂತ್ರ ತುಂಬ ಚೆನ್ನಾಗಿ ಮೂಡಿಬಂದಿದೆ. ವಿಷಯಗಳ ಸಂಮಿಶ್ರಣವಿದೆ. ಇದನ್ನು ಚೇತನ ಪ್ರಕಾಶನ ಪ್ರಕಟಿಸಿದೆ. ಡಾ| ಎಸ್. ಎಸ್. ಪಾಟೀಲರ ಇನ್ನೊಂದು ರಚನೆ ಎಲವು ಕೀಲುಗಳ ಪರಿಚಯದಲ್ಲಿ ಅಸ್ಥಿಗಳ ರಚನೆ- ಅವು ದೇಹದ ಹಂದರ ಪಿಲ್ಲರ್ಸ್‌ ಅವುಗಳನ್ನು ಸಂರಕ್ಷಿಸುವ ಬಗೆ ಹಾಗೂ ಎಲುಬು ಮುಂತಾದ ಕಾರಣಗಳನ್ನು ಹಾಗೂ ಉಪಾಯ ಕುರಿತು ಸಂಕ್ಷಿಪ್ತವಾಗಿ ನಿವೇದಿಸಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗವು ಪ್ರಕಟಿಸಿದೆ.

ಇನ್ನೊಂದು, ಪ್ರಮುಖವಾಗಿ ದೇಹರಚನೆ ವಿವರಗಳು ಹಾಗೂ ಅದರ ಕ್ರಿಯಾ ಮಹತ್ವವನ್ನು ಸ್ವಲ್ಪದರಲ್ಲಿ ಹೇಳುವ ಕಲೆ ಪಡೆದುಕೊಂಡದ್ದು ಡಾ| ನಾ. ಸೋಮೇಶ್ವರರ ನಮ್ಮ ದೇಹ ಪುಸ್ತಕ. ಕನ್ನಡ ಪುಸ್ತಕ ಪ್ರಾಧಿಕಾರವು ಮೂಲಭೂತ ಶೈಕ್ಷಣಿಕ ಪುಸ್ತಕ ಮಾಲೆಯ ಅಡಿಯಲ್ಲಿ ಪ್ರಕಟಗೊಂಡಿದೆ. ಮೂಲಭೂತ ಶಿಕ್ಷಣದ ಎಲ್ಲ ಆಶಯಗಳನ್ನು ಈ ಪುಸ್ತಕ ಪೂರೈಸಿದೆ ಎಂದೆನ್ನಬಹುದು. ಅನುಕ್ರಮವಾಗಿ ಪುಸ್ತಕದಲ್ಲಿ ಕಾಣಿಸಿಕೊಳ್ಳುವಂತೆ ಪಾರಿಭಾಷಿಕ ಪದಗಳ ಕನ್ನಡ-ಇಂಗ್ಲೀಷ ಪಟ್ಟಿ ನೀಡಲಾಗಿದೆ. ಇದೊಂದು ಮಹತ್ವದ ಪುಸ್ತಕ.

ಹುಬ್ಬಳ್ಳಿಯ ಹಿರಿಯ ನೇತ್ರತಜ್ಞ ಡಾ| ಅನಂತ ಹುಯಿಲಗೋಳ ಅವರೂ ಕೂಡ ಇದೇ ಪುಸ್ತಕ ಮಾಲೆಯಲ್ಲಿ ‘ನಿಮ್ಮ ಕಣ್ಣು’ ಬರೆದಿದ್ದಾರೆ. ಸಾಗರದ ನೇತ್ರತಜ್ಞ ಹಾಗೂ ಪರಿಚಿತ ವೈದ್ಯ ಲೇಖಕ ಡಾ| ಹೆಚ್.ಎಸ್. ಮೋಹನ ಅವರು ಕೂಡ ಕಣ್ಣು ಹೊಸನೋಟ ಪುಸ್ತಕದಲ್ಲಿ ಕಣ್ಣಿನ ವಿವಿಧ ರಚನೆಗಳು, ಒಂದು ರಚನೆ ಹಿಂದೆ ಹಲವು ಕಾಯಿಲೆಗಳ ಕುರಿತು ಮನೋಜ್ಞವಾಗಿ ಚರ್ಚಿಸಿದ್ದಾರೆ. ಇವೆರಡು ಪುಸ್ತಕಗಳಲ್ಲಿ ರಚನೆಯ ವಿವರಗಳನ್ನು ನೀಡಿದಾಗ ಮುಂದಿನ ಬರವಣಿಗೆಗೆ ಹೇಗೆ ಸಹಾಯವಾಗುವುದೆಂಬುದು ಉತ್ತಮ ಉದಾಹರಣೆ. ಭದ್ರ ಬುನಾದಿ ರಚನೆ ಜ್ಞಾನದ ಅವಶ್ಯಕತೆ ಕಾಣಬಹುದು. ಇದರಂತೆ ದಿ. ಡಾ| ಪಿ.ಎಸ್. ಶಂಕರ ಅವರ ಹೃದಯ ಕಾಯಿಲೆಗಳಲ್ಲಿ ಹೃದಯ ರಚನೆ ಕಾರ್ಯ ಸೂಕ್ಷ್ಮವಾಗಿ ವರ್ಣಿಸಲ್ಪಟ್ಟಿದೆ. ಅದರಂತೆ ಡಾ| ಎಸ್.ಬಿ. ಪಾಟೀಲರ ಹೃದಯಾಘಾತ ಪುಸ್ತಕವು ಹೃದಯರಚನಾ ಪರಿಚಯದ ಮುಂದಿನ ವಿವರಣೆ ನಿಂತಿದೆ. ಹೀಗೆ ಮೂಲಭೂತ ವಿಜ್ಞಾನದ ಅರಿವು ಓದುಗರಿಗೆ ಅವಶ್ಯಕವಿದೆ.

ಮಾನವ ಶರೀರ ಅನೇಕ ಸೋಜಿಗಗಳ ಗಣಿ. ಸಾವಿರಾರು ಕ್ರಿಯೆಗಳು. ಒಂದೊಂದು ಅಂಗಕ್ಕೂ ನಿರ್ದಿಷ್ಟ ಕೆಲಸಗಳು. ಹೀಗಿದ್ದರೂ ಒಂದು ಕಡೆಗೂ ತಾಳ ತಪ್ಪದಂತೆ ದೇಹ ಐಕ್ಯತೆ ಪಡೆದಿರುತ್ತದೆ. ಇಂತಹ ಶರೀರಕ್ರಿಯಾ ಶಾಸ್ತ್ರದಲ್ಲಿ ಕನ್ನಡದಲ್ಲಿ ಹಲವಾರು ಲೇಖಕರಿದ್ದಾರೆ. ಸಂಶೋಧಕರಿದ್ದಾರೆ. ಇವರಲ್ಲಿ ಹಿರಿಯರಾದ ಡಾ| ಎಸ್. ನಾರಾಯಣ ಅವರು ಬರೆದ ಬೆಂಗಳೂರು ವಿಶ್ವವಿದ್ಯಾಲಯದ ಪ್ರಕಟಣೆ ‘ಮಾನವ ಶರೀರ’ ಎಂಬ ಚಿಕ್ಕ ಹೊತ್ತಿಗೆ ಸುಮಾರು ನೂರು ಪುಟಗಳಲ್ಲಿ ಕ್ರಿಯಾವೈವಿಧ್ಯವನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಸೂಕ್ತ ಚಿತ್ರಗಳಿವೆ. ಕೊನೆಯಲ್ಲಿ ‘ಪದಮಂಜರಿ’ಯಲ್ಲಿ ಸಮಪದಗಳನ್ನು ನೀಡಲಾಗಿದೆ. ಈ ಪುಸ್ತಕ ಸಾಕಷ್ಟು ಸುಧಾರಣೆಯಾಗಬೇಕಾಗಿದೆ.

ಹಂಪಿ ವಿಶ್ವವಿದ್ಯಾಲಯದ ಮಂಟಪಮಾಲೆಯ ಪ್ರಕಟಣೆ ಡಾ| ವಸಂತ ಅ. ಕುಲಕರ್ಣಿಯವರ ದೇಹಕ್ರಿಯೆಗಳ ಸೋಜಿಗಗಳು ಪುಸ್ತಕದಲ್ಲಿ ಶರೀರ ಕ್ರಿಯಾಶಾಸ್ತ್ರದ ಒಳಗುಟ್ಟನ್ನು ಕ್ರಮವಾಗಿ ವಿವರಿಸಲಾಗಿದೆ. ಇದೊಂದು ಜನಪ್ರಿಯ ಆವೃತ್ತಿ. ಡಾ| ವಸಂತ ಅ. ಕುಲಕರ್ಣಿ ಸಾಧಾರಣ ಕವನ ಸಂಕಲನಗಳಲ್ಲಿ ಶರೀರಕ್ರಿಯಾ ಶಾಸ್ತ್ರದ ತತ್ವ ಹಾಗೂ ಮಾನವ ಜೀವನದ ಸಂದೇಶಗಳ ಸಂಬಂಧದ ಕವನಗಳು ಮೂಡಿಬಂದಿದೆ. ‘ಚಿರಂಜೀವಿ’ ಈ ‘ನರತಂತು’ ‘ದೇಹವೀಣೆಯ ಸಪ್ತಸ್ವರ’ ‘ಸೂಕ್ಷ್ಮ ದರ್ಶಕ’ ‘ರಕ್ತ’ ಹಲವಾರು ಕವನಗಳಲ್ಲಿ ಶರೀರ ಶಾಸ್ತ್ರ ಧ್ವನಿತಗೊಂಡಿದೆ. ಅದರಂತೆ ಅವರ ಡಾ| ಕುವಿನ ಹರಟೆ ವಿಡಂಬನೆಗಳಿವೆ. ದೇಹದೇಗುಲಕ್ಕೊಂದು ಪ್ರಣಾಮ… ಲಲಿತ ಪ್ರಬಂಧಗಳಲ್ಲಿ ಶರೀರ ಕ್ರಿಯಶಾಸ್ತ್ರದ ಸುಲಲಿತ ಪ್ರಬಂಧಗಳು ಜನಮೆಚ್ಚುಗೆ ಗಳಿಸಿವೆ. ಕರ್ಮವೀರ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡ ದೇಹಲೋಕದ ವಿಸ್ಮಯಗಳ ಬೆಂಗಳೂರಿನ ಮಧುರಾ ಪ್ರಕಾಶನ ಪ್ರಕಟಿಸಿದೆ. ಡಾ| ಪಿಎ.ಎಸ್. ಶಂಕರ ಪ್ರತಿಷ್ಠಾನದ ಪ್ರಶಸ್ತಿಗೂ ಭಾಜನವಾಗಿದೆ. ಡಾ| ವಸಂತ ಕುಲಕರ್ಣಿಯವರ ಕಾಲ್ಪನಿಕ ಪ್ರವಾಸ ಕಥೆ ‘ದೇಹದಲ್ಲಿ ಏಳು ದಿನಗಳ ಪಯಣ’ ಪಚನಾಂಗಗಳ ಕ್ರಿಯಾ ವ್ಯಾಪಾರವನ್ನು ಮನೋಜ್ಞವಾಗಿ ಬಿಂಬಿಸಲಾಗಿದೆ. ಇದು ಕುವೆಂಪು ವೈದ್ಯಸಾಹಿತ್ಯ ಪ್ರಶಸ್ತಿ ಪುರಸ್ಕೃತಗೊಂಡಿದೆ. ಶರೀರ ಕ್ರಿಯಾಶಾಸ್ತ್ರದ ಹಲವಾರು ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಡಾ| ಬಿ.ಆರ್. ಸುಹಾಸ್ ಅವರ ಹೆಲ್ತ್‌ ಗೈಡ್ ಪುಸ್ತಕದಲ್ಲಿ ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ರುಚಿಯನ್ನು ಗ್ರಹಿಸುವ ನಾಲಿಗೆ ಹಾಗೂ ಸ್ಪರ್ಶ ಚರ್ಮ, ಬಹಳ ಮಾರ್ಮಿಕವಾಗಿ ಕ್ರಿಯೆಗಳನ್ನು ವಿವರಿಸಲಾಗಿದೆ. ಕ್ರಿಯಾ ವ್ಯತ್ಯಾಸಗಳನ್ನು ಹೇಳಲಾಗಿದೆ.

ಶ್ರವಣೇಂದ್ರಿಯ ಕಿವಿ, ಎಂಬ ಆರ್. ರಾಜಲಕ್ಷ್ಮೀಯವರ ಪುಸ್ತಕದಲ್ಲಿ ಕಿವಿಯ ರಚನೆ ಹಾಗೂ ಕಾರ್ಯ, ವಿಧಾನದೊಂದಿಗೆ ಕಿವುಡತನದ ಕಾರಣಗಳನ್ನು ವಿವರಿಸಿ ಶ್ರವಣೋಪಕರಣ ಬಳಸುವ ರೀತಿಯನ್ನು ಮನಮುಟ್ಟಿರುವಂತೆ ಹೇಳಿದ್ದಾರೆ. ಇ.ಎನ್.ಟಿ. ಸರ್ಜನ್ ಡಾ| ಗುರುಮೂರ್ತಿಯವರು ಕಿವಿ-ಮೂರು ಗಂಟಲ ಸಮಸ್ಯೆಗಳ ಬಗ್ಗೆ ಮೂಲ ವಿಜ್ಞಾನ ಆಯಾಮಗಳನ್ನು ಚರ್ಚಿಸಿ ತೊಂದರೆಗಳ ಬಗ್ಗೆ ವಿವರ ಕೊಟ್ಟಿದ್ದಾರೆ.

ಡಾ| ಹೆಚ್. ಡಿ. ಚಂದ್ರಪ್ಪಗೌಡರು ನಾಡಿನ ಹಿರಿಯ ವೈದ್ಯಲೇಖಕರು. ಅವರ ‘ನನಗೆ ಟೈಪಾಸ್ ಆಯಿತು’ ಸ್ವಾನುಭವದ ವೃತ್ತಾಂತದ ಕಥಾನಕ ರೂಪ. ಅದರಲ್ಲಿ ಹೃದಯ ರಚನೆ ಹಾಗೂ ಕ್ರಿಯಾ ಸ್ವರೂಪಗಳ ಬಗ್ಗೆ ಆಕರ್ಷಕ ರೀತಿಯಲ್ಲಿ ವರ್ಣಿಸಿದ್ದಾರೆ. ಅವರ ಇನ್ನೊಂದು ಪುಸ್ತಕ ವೈದ್ಯವಿಜ್ಞಾನಿಗಳ ಜೀವನ ಚರಿತ್ರೆ ಹಾಗೂ ಕೊಡುಗೆಗಳನ್ನು ಸ್ಮರಿಸುವ ಕೃತಿ ನ್ಯಾಷನಲ್ ಬುಕ್ ಟ್ರಸ್ಟ್‌ ಇಂಡಿಯಾದವರು ಇಂಗ್ಲಿಷದಲ್ಲಿ ಪ್ರಕಟಿಸಿದ ಡಾ| ಬಿಜಲಾನಿ ಆರ್.ಎಲ್. ಹಾಗೂ ಡಾ| ಎಸ್.ಕೆ. ಮಂಚಂದ ಅವರ “Human machin how to prevent Breakdown” ಮಾನವಯಂತ್ರ ಕುಸಿದು ಬೀಳದಂತೆ ತಡೆಯುವುದು ಹೇಗೆ ಇದನ್ನು ಡಾ| ಹೆಚ್.ಡಿ. ಚಂದ್ರಪ್ಪಗೌಡರು ಬಹಳೇ ಸಮರ್ಥ ಹಾಗೂ ಕನ್ನಡದ ಜಾಯಮಾನ ತಕ್ಕಂತೆ ಅನುವಾದಿಸಿದ್ದಾರೆ. ಸುಮಾರು ೪೦೦ ಪುಟಗಳ ಈ ಕೃತಿಯಲ್ಲಿ ೨೪ ಅಧ್ಯಾಯಗಳಿವೆ. ಓದಿಸಿಕೊಂಡು ಹೋಗಿ ಓದುಗನಿಗೆ ನಮ್ಮ ಶರೀರ ಒಳಗುಟ್ಟು ಹಾಗೂ ಆಂತರಿಕ ವಾತಾವರಣವನ್ನು ಪರಿಚಯಿಸುವ ಒಳನೋಟ ನೀಡುತ್ತದೆ. ಆರೋಗ್ಯ ಅನಾರೋಗ್ಯದ ಬಗ್ಗೆ ಆರಂಭಿಸಿ ಭವಿಷ್ಯದತ್ತ ಒಂದು ಇಣುಕುನೋಟ ಕುರಿತು ಚರ್ಚಿಸಿದ್ದಾರೆ. ಕನ್ನಡದಲ್ಲಿಯೂ ವೈದ್ಯ ಮೂಲವಿಜ್ಞಾನವನ್ನು ಪರಿಪುಷ್ಪವಾಗಿ ಬರೆಯಬಹುದೆಂಬುದಕ್ಕೆ ಇದು ಸಾಕ್ಷಿ. ನಾನು ಇಂಗ್ಲಿಷ ಆವೃತ್ತಿಯನ್ನು ಹಾಗೂ ಲೇಖಕರ ಇಂಗ್ಲಿಷ್ ಟೆಸ್ಟ್ ಪುಸ್ತಕವನ್ನು ಹಲವಾರು ಬಾರಿ ಓದಿದ್ದೇನೆ. ಡಾ| ಹೆಚ್. ಡಿ. ಚಂದ್ರಪ್ಪಗೌಡರ ಶೈಲಿ ಸರಳ ಸುಂದರವಾಗಿದೆ.

ಡಾ| ಎಸ್.ಬಿ. ವಸಂತಕುಮಾರ ಅವರ ನಮ್ಮ ದೇಹ ಹಾಗೂ ಒಳಸುರಿಕ ಗ್ರಂಥಿಗಳು ಕೃತಿ ಕೂಡ ಪ್ರಬುದ್ಧವಾಗಿ ಬಂದಿದೆ. ಶರೀರಕ್ರಿಯಾಶಾಸ್ತ್ರದ ಬಹುದೊಡ್ಡ ಅಧ್ಯಾಯ, ರಸದೂತಗಳ ಪ್ರಪಂಚ, ಒಳಸುರಿಕ ಗ್ರಂಥಿಗಳ ಭೀಮಗಾತ್ರದ ಕ್ರಿಯಾ ವೈಖರಿ ದೇಹದ ಜೀವ ತಿರುಳು ಅಷ್ಟು. ಒಳಸುರಿತ ಗ್ರಂಥಿಗಳ ಪರಿಚಯ ಅವುಗಳ ಕ್ರಿಯೆಗಳಲ್ಲಿ ವ್ಯತ್ಯಾಸಗೊಂಡರೆ ಆಗುವ ವ್ಯತ್ಯಾಸ ಚೆನ್ನಾಗಿ ವಿವರಿಸಲ್ಪಟ್ಟಿದೆ. ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿದ ಈ ಕೃತಿಯ ಕೊನೆಯಲ್ಲಿ ಶಬ್ದಸೂಚಿ ಇಂಗ್ಲೀಷ ಪುಸ್ತಕ ಮಾದರಿಯಲ್ಲಿ ನೀಡಿದ್ದು ಇವರ ವೈಶಿಷ್ಟ. ಇದೇ ರೀತಿಯಾಗಿ ಡಾ| ಎಸ್. ಬಿ. ವಸಂತಕುಮಾರ ಅವರ ಇನ್ನೊಂದು ಮೂಲವಿಜ್ಞಾನಕ್ಕೆ ಸಂಬಂಧಿಸಿದ ಕೃತಿ. ನಾವು ನಮ್ಮ ಉಸಿರಾಟ ಶ್ವಾಸ ಜಗತ್ತಿನ ಎಲ್ಲ ಕ್ರಿಯಾತತ್ವಗಳನ್ನು ಕ್ರಮಬದ್ಧವಾಗಿ ಪರಿಚಯಿಸಿದೆ.

ದಿ. ಡಾ| ಅನುಪಮಾ ನಿರಂಜನ ಅವರ ‘ದಾಂಪತ್ಯ ದೀಪಿಕೆ’ ‘ತಾಯಿಮಗು’ ವಧುವಿಗೆ ಕಿವಿಮಾತು ಹಾಡೂ ಡಾ| ಪದ್ಮಿನಿಪ್ರಸಾದ ಅವರ ‘ಲೈಂಗಿಕ ದೀಪ್ತಿ’ಯಲ್ಲಿ ದೇಹರಚನೆ ಕ್ರಿಯಾ ಸ್ವರೂಪಗಳ ಕುರಿತು ಚರ್ಚೆಯಾಗಿದೆ. ಅದರಂತೆ ದಿ. ಡಾ| ಸ.ಜ.ನಾಗಲೋಟಿಮಠರ ‘ಚಟಗಳು’ ಹಾಗೂ ವೈದ್ಯವಿಜ್ಞಾನ ಕೃತಿಗಳಲ್ಲಿಯೂ ಚರ್ಚೆಯಾಗಿದೆ. ಮೂಲ ಬಾಳ ಘೊಡ್ಕೆ ಅವರ ಕೃತಿಯನ್ನು ಕನ್ನಡಕ್ಕೆ ಕೊಳ್ಳೆಗಾಲದ ಶರ್ಮ ತುಂಬ ನ್ಯಾಯಯುತವಾಗಿ, ಆಕರ್ಷಕ ಶೈಲಿಯಲ್ಲಿ ಬರೆದಿದ್ದಾರೆ. ಇದು ಮೂಲ ಕನ್ನಡದ ಕೃತಿಯೆಂದು ಅನಿಸುವಷ್ಟು ಶರೀರದ ರಕ್ಷಣಾ ಕಾರ್ಯ. ಅಲರ್ಜಿ ರಕ್ಷಣಾ ವಿಧಾನದ ತಂತ್ರಗಳನ್ನು ಬಹು ರಮ್ಯವಾಗಿ ನಿರೂಪಿಸಿದ್ದಾರೆ. ಸಮಪದಗಳ ಬಳಕೆಯ ಬಗ್ಗೆ ಈ ಪುಸ್ತಕ ನೋಡಬೇಕು. ಆದರೆ ಪುಸ್ತಕ ಕೆಲವೇ ಪುಟಗಳಷ್ಟಿದೆ ಎಂಬ ಬೇಜಾರು. ಪುಸ್ತಕದ ಶೀರ್ಷಿಕೆಯ ಶರೀರವೋ ರಣರಂಗವೋ ಹೇಳುವಂತೆ ವಿಷಯ ವ್ಯಾಪ್ತಿ ಬಹುದೊಡ್ಡದು.

ರಕ್ತದಾನ ಅನೇಕಾನೇಕ ಲೇಖನಗಳು ವಿವಿಧ ಲೇಖಕರಿಂದ ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಡಾ| ನುಡಿಬೈಲೂ ಉದಯ ಶಂಕರ ಅವರ ರಕ್ತದ ಕಥೆಯಲ್ಲಿ ರಕ್ತದ ಕಾರ್ಯಗಳು, ರಕ್ತದ ಘಟಕಗಳು, ದೇಹರಕ್ಷಣಾ ರಕ್ತಕಣಗಳು ಹೀಗೆ ಆಕರ್ಷಕ ಶೀರ್ಷಿಕೆಗಳಲ್ಲಿ ಜೀವದಾನವಾಗುವ ರಕ್ತದಾನ ಕುರಿತು ನಿವೇದಿಸಲಾಗಿದೆ. ಅದರಂತೆ ಸೂ. ಸುಬ್ರಹ್ಮಣಂ ಅವರ ರಕ್ತದ ಕಥೆ ಮಕ್ಕಳ ಸಾಹಿತ್ಯ ಸಾಹಿತ್ಯ ಮಾಲಿಕೆಯಲ್ಲಿ ಮಕ್ಕಳಿಗೆ ತಳಿ ಹೇಳುವಂತೆ ಪ್ರಸ್ತುತ ಪಡಿಸಲಾಗಿದೆ. ಕಮಲಾ ರಾಮಸ್ವಾಮಿ ರಕ್ತದ ಬ್ಯಾಂಕ್ ‘ಕಣ್ಣಿನ ಬ್ಯಾಂಕ್’ ಕುರಿತು ಹೇಳಲಾಗಿದೆ.

ವಂಶವಾಹಿ ಕುರಿತು ವಿಶ್ವದಾದ್ಯಂತ ಸಂಶೋಧನೆ ನಡೆಯುತ್ತಿದೆ. ವಂಶವಾಹಿಗಳು ರೋಗದ ಗುಣಧರ್ಮವನ್ನು ತನ್ನ ಮುಂದಿನ ಪೀಳಿಗೆಗೆ ಸಾಗಿಸಬಲ್ಲವು. ಇದು ಶರೀರಕ್ರಿಯಾಶಾಸ್ತ್ರ ಶರೀರ ರಚನಾ ಹಾಗೂ ಜೀವರಸಾಯನ ಶಾಸ್ತ್ರ ಬಹುಚರ್ಚಿತ ಅಧ್ಯಾಯ. ಇದರ ಬಗ್ಗೆ ಕನ್ನಡದಲ್ಲಿ ಅಲ್ಲಿ ಇಲ್ಲಿ ಬರೆಯುವ ಯತ್ನ ನಡೆದಿದೆ. ಬದುಕಿನ ಬೇರು ವಂಶವಾಹಿ ‘ಅನುವಂಶಿಕ ಸಂಕೇತ ಹಾಗೂ ಸುಪರ್ ಕ್ಲೋನಿಂಗ್‌ಅನುಕ್ರಮವಾಗಿ ಗುಡಿಬಂಡೆ ಪೂರ್ಣಿಮಾ ಡಾ| ವಿರೂಪಾಕ್ಷ ಕೆ ಬಣಕಾರ್ ಹಾಗೂ ಡಾ| ಪಂಡಿತ ವಿದ್ಯಾಸಾಗರ ಸುಪರ್ ಕ್ಲೊನೆ’ ಕಥಾನಕ ಹಂದರದಲ್ಲಿದ್ದು ಅದನ್ನು ಶ್ರೀ ಚಂದ್ರಕಾಂತ ಪೋಕಳೆಯವರು ಪೂರ್ಣಲಾಲಿತ್ಯ ಶೈಲಿಯಲ್ಲಿ ಅನುವಾದಿಸಿದ್ದಾರೆ. ವಂಶವಾಹಿ ಅನುವಂಶಿಕೆ ಬಹುಕ್ಲಿಷ್ಟವಾದ ನಾಗಾಲೋಟದ ಸಂಶೋಧನೆಗಳು ಸಾಗಿರುವಾಗ ಕನ್ನಡದಲ್ಲಿ ಈಗಿನ ಪ್ರಯತ್ನ ಅಭಿನಂದನೀಯ. ಆದರೆ ಇದು ಸಾಲದು.

ಮೆದುಳು ಮಾನವನ ಜ್ಞಾನ ಕೇಂದ್ರ, ಬುದ್ಧಿಕೇಂದ್ರ, ಕೇಂದ್ರಿಯ ನರಮಂಡಲ ವ್ಯವಸ್ಥೆ, ಸ್ವಾಯುತ್ತ ನರಮಂಡಲ ವ್ಯವಸ್ಥೆ ಹೀಗೆ ಸಂಕೀರ್ಣ ವಿಷಯವನ್ನು ಕನ್ನಡದಲ್ಲಿ ಹಲವಾರು ಪುಸ್ತಕಗಳು ಬಂದಿವೆ ಎಂದು ಹೇಳುತ್ತಾರೆ. ಡಾ| ಸಿ.ಆರ್. ಚಂದ್ರಶೇಖರ ಪ್ರಸಿದ್ಧ ಮನೋವೈದ್ಯರು ನರಮಂಡಲ ರೋಗಗಳು ದಲ್ಲಿ ಸಂಕ್ಷಿಪ್ತವಾಗಿ ಮೆದುಳಿನ ಕಾರ್ಯವೈಖರಿ ವರ್ಣಿಸಲಾಗಿದೆ. ಆದರೆ ಹಿರಿಯ ಶರೀರ ಕ್ರಿಯಾ ಶಾಸ್ತ್ರದ ಪ್ರಾಧ್ಯಾಪಕ ಡಾ| ಎಂ. ಬಸವರಾಜ ಅವರ ನರವ್ಯೂಹ ಕ್ರಿಯಾಶಾಸ್ತ್ರ ನರಮಂಡಲಗಳ ಕ್ರಿಯೆಗಳು ಪ್ರಯತ್ನ ಪಟ್ಟು ತಿಳಿಸಲು ಬರೆಯಲಾಗಿದೆ. ಸಂಕೀರ್ಣ ವಿಷಯದ ಕುರಿತಂತೆ ಕನ್ನಡದಲ್ಲಿ ಸರಳೀಕರಿಸಲಾಗಿದೆ. ಇದು ಅಧಿಕೃತ ಅಧಿಕಾರಿ ವಾಣಿಯಿಂದ ಬರೆದ ಕೃತಿ. ಸಮಪದಗಳ ಗೊಂದಲವಿದೆ. ಅದನ್ನು ಪರಿಹರಿಸಬೇಕು.

ಡಾ| ಸಿ.ಆರ್. ಚಂದ್ರಶೇಖರ ಅವರ ಮತ್ತೊಂದು ಕೃತಿ ‘ಮಿದುಳಿ ತಲೆನೋವು’ ಯಲ್ಲಿ ಮಿದುಳು ರಚನೆ ಕಾರ್ಯವ್ಯಾಪ್ತಿ ಏರುಪೇರಾಗುವುದರಿಂದ ಬರುವ ರೋಗಿಗಳ ಕುರಿತ ನುರಿತ ಬರವಣಿಗೆಯಲ್ಲಿ ಚರ್ಚಿಸಲಾಗಿದೆ. ಇದೊಂದು ಸಾರಾಂಶದಲ್ಲಿ ಸಮಗ್ರ ಮಾಹಿತಿ ನೀಡುವ ಕಲೆಗಾರಿಕೆ ಇಲ್ಲಿ ನೋಡಬೇಕು. ಲಹರಿ ಪ್ರಕಾಶನದ ಎನ್. ಗೋಪಾಲಕೃಷ್ಣ ಅವರ ‘ಮಿದುಳಿನ ರಹಸ್ಯ’ದಲ್ಲಿ ರಚನಾರಹಸ್ಯ ಕ್ರಿಯಾ ರಹಸ್ಯಗಳನ್ನು ಹಂತ ಹಂತವಾಗಿ ಬಿಡಿಸಿಟ್ಟಿದ್ದಾರೆ. ಮಿದುಳು ಮನಸ್ಸು ಅದರ ಹೊರಗೂ ಒಳಗೂ ಇರುವ ಕ್ರಿಯಾ ವಿಶೇಷವನ್ನು ಅಲ್ಪದರಲ್ಲಿ ಹೇಳಿದ್ದಾರೆ.

Pathology and Microbilogy ಅಂದರೆ ರೋಗನಿದಾನಶಾಸ್ತ್ರ ಹಾಗೂ ಸೂಕ್ಷ್ಮಜೀವಿ ಶಾಸ್ತ್ರಗಳ ಕುರಿತ ಕನ್ನಡದಲ್ಲಿ ಬರೆದ ಕೃತಿಗಳು ಅವಲೋಕನಕ್ಕೆ ಲಬ್ಯವಾಗಿಲ್ಲ. ದಿ. ಡಾ| .ಜ.ನಾಗಲೋಟಿಮಠರು ಪ್ರಸಿದ್ಧ ಪೆಥಾಲಜಿಸ್ಟ್ ಅವರು ಕನ್ನಡದಲ್ಲಿ ಬಹುಪುಟಗಳ ರೋಗನಿಧಾನಶಾಸ್ತ್ರ ಕುರಿತು ಕೆಲವು ಪರಿಚಯಾತ್ಮಕ ವಿಶೇಷಗಳನ್ನು ಬರೆದು ಡಿ.ಟಿ.ಪಿ. ಮಾಡಿದ್ದರು. ಅದರಂತೆ ಸೂಕ್ಷ್ಮ ಜೀವಿ ಶಾಸ್ತ್ರದ ಬಗ್ಗೆಯೂ ಡಿ.ಟಿ.ಪಿ. ಪ್ರತಿ ಸಿದ್ಧವಾಗಿತ್ತು. ನಾನು ಅವುಗಳನ್ನು ಓದಿದ್ದೇನೆ. ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಪ್ರಸಾರಾಂಗಕ್ಕೆ ಪ್ರಕಟನೆಗೆ ಒಪ್ಪಿಸಿದ್ದು ಗೊತ್ತು. ಮುಂದೆ ಏನಾಯಿತು ಗೊತ್ತಿಲ್ಲ. ಅವು ಬಹುಮೌಲಿಕ ಕನ್ನಡ ಕೊಡುಗೆಗಳೂ ಎಂದಿದ್ದರು ತಂತ್ರಜ್ಞರು. ರಕ್ತ-ಮಲ-ಮೂತ್ರ ಮುಂತಾದ ಪರೀಕ್ಷೆಗಳ ಚಿಕ್ಕ ಪುಸ್ತಕಗಳನ್ನು ಹೊರತಂದದ್ದು ಅಭಿನಂದನಾರ್ಹ. ಇಂಥದರಲ್ಲಿ ಮುಖ್ಯವಾಗಿ ಡಾ| ಬಿ.ಆರ್. ಸುಹಾಸ್ ಅವರ ಪರಾವಲಂಬಿಗಳು ಸಹನಾ ಪ್ರಕಾಶನ, ಇದರಲ್ಲಿ ಪರಾನ್ನಜೀವಿಗಳ ವರ್ಗೀಕರಣ ಹಾಗೂ ಅವುಗಳ ಜೀವನಕ್ರಮ ಉಂಟಾಗುವ ಪ್ರಮೇಯಗಳು ಕುರಿತು ಅಂದವಾಗಿ ಚರ್ಚಿಸಲಾಗಿದೆ.

ಪಾಂಡಿಚೇರಿಯ ಜವಾಹರ್‌ಲಾರ್ ಸ್ನಾತಕೋತ್ತರ ಕೇಂದ್ರದ ಡಾ| ಕೆ.ಎಸ್.ಕೃಷ್ಣಮೂರ್ತಿ (ಜೀವವಿಜ್ಞಾನಿ) ಮೂವರು ಕನ್ನಡದಲ್ಲಿ ಬರೆದ ಮಿದುಳು, ಮನಸ್ಸು ಮತ್ತು ಮಾತು. ಇಲ್ಲಿ ಗಮನಾರ್ಹ ಇಲ್ಲಿ ಮಾನವನ ವಿಕಾಸ ಇತರ ಪ್ರಾಣಿಗಳ ತುಲನಾತ್ಮಕ ವಿವರಗಳು. ಮತ್ತೊಂದು ಅತ್ಯಾಕರ್ಷಕ ಶೈಲಿಯಲ್ಲಿ ಬರೆದ ಚಿಕ್ಕ ಪುಸ್ತಕ ಡಾ| ಎನ್.ಎಸ್. ಲೀಲಾ ಅವರ ನನ್ನ ಆತ್ಮಕಥೆ ಇನ್ಸುಲಿನ್ ಮೂಲವಿಜ್ಞಾನವನ್ನು ಮೋಹಕ ಶಬ್ದಗಳಲ್ಲಿ ವಿವರಣಾತ್ಮಕ ಕರೆಯನ್ನು ಮೆಚ್ಚಲೇಬೇಕು. ಇವರಂತೆ ವಿಜ್ಞಾನ ಪ್ರಕಾಶನದ ಸೂ. ಸುಬ್ರಹ್ಮಣಂ ಬರೆದ ಚಿಕ್ಕ ಪುಸ್ತಕ ‘ಪೆನಿಸಿಲಿನ್’ ವೃತ್ತಾಂತ ಕೂಡ ಗಮನಾರ್ಹ.

ಕನ್ನಡದಲ್ಲಿ ಗಣನೀಯ ಔಷಧ ಶಾಸ್ತ್ರಕ್ಕೆ ಸೇವೆಸಲ್ಲಿಸಿದವರು ಶಬ್ದಬ್ರಹ್ಮ ಡಾ| ಡಿ.ಎಸ್. ಶಿವಪ್ಪನವರು. ೩೫೦೦ ಸಮಪದಗಳುಳ್ಳ ಸಮಪದ ಕೋಶ ರಚಿಸಿದ್ದು ನುಡಿಕಿಡಿಗಳ ಸಂಗ್ರಹ ಕನ್ನಡ ಪದಗಳ ಹುಟ್ಟು ರಚನೆ- ಬಹು ಅಪರೂಪದ ಕೊಡುಗೆಗಳು. ಅವರು ಸುಧಾ ಹಾಗೂ ಇನ್ನಿತರ ಪತ್ರಿಕೆಗಳಲ್ಲಿ ಔಷಧದ ವರ-ಶಾಪ, ಸ್ವಯಂ ವೈದ್ಯಕಿಯ ಹೀಗೆ ಹಲವಾರು ಲೇಖನಗಳನ್ನು ಬರೆದರು. ಅದು ಪುಸ್ತಕದ ರೂಪದಲ್ಲಿಯೂ ಬಂದಿತೆಂದು ಹೇಳಿದ್ದರು. ಅವರ ಜೀವಂತಭೂಮಿ ನೋಡಿದ್ದೇನೆ (ಪ್ರತಿಲಭ್ಯವಿಲ್ಲ). ನವ ಕರ್ನಾಟಕ ಪ್ರಕಾಶನವು ಹೊರತಂದ ಡಾ| ಸಿ.ಆರ್. ಚಂದ್ರಶೇಖರ ಅವರ ನೀವು ಬಳಸುವ ಔಷಧಗಳು ಶ್ರೀಸಾಮಾನ್ಯನ ಸಂಗ್ರಹಯೋಗ್ಯ ನಿತ್ಯುಪಯೋಗಿ ಕೃತಿ. ನೋವು ತಗ್ಗಿಸುವ ಔಷಧಗಳಿಂದ ಆರಂಭಿಸಿ ಪಾಲಿಸುವ ನಿಯಮಗಳ ಕುರಿತು ಮನಕ್ಕೆ ನಾಟುವಂತೆ ಹೇಳಲಾಗಿದೆ. ಸುಮಾರು ೩೦ ವಿವಿಧ ಭಾಗಗಳಲ್ಲಿ ಔಷಧಶಾಸ್ತ್ರದ ಎಲ್ಲ ಅಂಗಾಂಗಗಳ ತೊಂದರೆ ಉಪಚಾರ ಕುರಿತು ಆತ್ಮೀಯ ಹಾಗೂ ನೇರವಾಗಿ ಹೇಳಲಾಗಿದೆ. ಔಷಧದ ಆವಾಂತರಗಳು, ಅಡ್ಡ ಪರಿಣಾಮಗಳನ್ನು ಹೇಳಲಾಗಿದೆ. ಅದರಂತೆ ಸ್ವಯಂ ವೈದ್ಯಕೀಯ ಸೃಷ್ಟಿಸುವ ಸಮಸ್ಯೆಗಳ ಕುರಿತು ಎಚ್ಚರಿಸಲಾಗಿದೆ.

ಮುಂಬಯಿಯ ಡಾ| ಜಿ.ವ್ಹಿ. ಕುಲಕರ್ಣಿ ಇವರು ವೈದ್ಯರಲ್ಲದಿದ್ದರೂ ಬರೆದ ಔಷಧವಿಲ್ಲದೆ ಬದುಕಲು ಕಲಿಯರಿ ಬಹು ಉಪಯುಕ್ತ ಗ್ರಂಥ. ಯೋಗದ ಮಹತ್ವದ ಕುರಿತು ಹೇಳಲಾಗಿದೆ. ಡಂಕೆಲ್ ಪ್ರಸ್ತಾವನೆಯ ಬೆಳಕಿನಲ್ಲಿ ಆರೋಗ್ಯ ಮತ್ತು ಬಹುರಾಷ್ಟ್ರೀಯ ಔಷಧಿ ಕೈಗಾರಿಕೆಗಳು ಡಾ| ಪ್ರಕಾಶ ಅವರ ಕೃತಿಯಲ್ಲೂ ಹೇಳಲಾಗಿದೆ. ಯೋಗವಿಜ್ಞಾನ ಆಹಾರ ಕ್ರಮಾದಿಗಳು ವ್ಯಾಯಾಮ ಇಂದಿನ ಆಧುನಿಕ ವೈದ್ಯಶಾಸ್ತ್ರದ ಮೂಲವಿಜ್ಞಾನಗಳು.

ಕನ್ನಡದಲ್ಲಿ ಆಹಾರ ಮತ್ತು ಆರೋಗ್ಯ ಕುರಿತು ಅನೇಕ ಕೃತಿಗಳು ಬಂದಿವೆ. ಇದನ್ನು ಮೂಲ ವಿಜ್ಞಾನವಾಗಿ ಪರಿಗಣಿಸಲ್ಪಟ್ಟಿದೆ. ಪ್ರತಿಯೊಂದು ಆಸ್ಪತ್ರೆಯಲ್ಲಿ ಇದರ ಬಗ್ಗೆ ಪ್ರತ್ಯೇಕ ವಿಭಾಗವಿರುತ್ತದೆ. ಸುಮಾರು ೧೫ ವರುಷಗಳ ಹಿಂದೆ ಪ್ರಜಾವಾಣಿಯಲ್ಲಿ ನಾವೇಕೆ ಸಸ್ಯಾಹಾರಿಗಳಾಗಿರಬೇಕು ಎಂಬ ಚರ್ಚಿತ ವಿಷಯದ ಪುಸ್ತಕವನ್ನು ವಿಮರ್ಶಿಸಿದ್ದ ನೆನಪು (ಲೇಖಕರ ಹೆಸರು ನೆನಪಿಲ್ಲ). ಈಗ ಡಾ| ನಾ. ಸೋಮೇಶ್ವರ ಅವರ ನಮ್ಮ ಆಹಾರ ಹೇಗಿರಬೇಕು ಕೃತಿಯಲ್ಲಿ (ನವ ಕರ್ನಾಟಕದಲ್ಲಿ ಪ್ರಕಾಶಿಸಿದ್ದು) ಮಾರಕ ಮಾಂಸಾಹಾರ ಕುರಿತು ಅಭ್ಯಾಸಪೂರ್ಣ ವಿಷಯ ಹೇಳಿದ್ದಾರೆ. ಪೋಷಕಾಂಶಗಳ ಅಂತರಂಗದ ಪರಿಚಯದಿಂದ ಆರಂಭಿಸಿ ಆಹಾರ ಒಮ್ಮೊಮ್ಮೆ ವಿಷವಾಗುವ ಬಗ್ಗೆ ಮೂಢನಂಬಿಕೆಗಳು ಆಹಾರ ಕಾಯ್ದಿಡುವ ಕ್ರಮ, ಅಡುಗೆ ಮಾಡುವ ಪಾತ್ರೆಗಳು ಹೀಗೆ ನಿತ್ಯದ ಆಹಾರ ಸುತ್ತಲೂ ಅವರಿಸಿ ಸಮಸ್ಯೆಗಳನ್ನು ಮನದುಂಬುವಂತೆ ಚರ್ಚಿಸಲಾಗಿದೆ. ಈ ಪುಸ್ತಕದ ಸಾರಾಂಶ ಪಾಠಗಳು ಮಕ್ಕಳು ಪಠ್ಯಪುಸ್ತಕಗಳಲ್ಲಿ ಅಳವಡಿಸುವುದು ಅವಶ್ಯ. ಕೋಷ್ಟಕಗಳು ಪ್ರಯೋಜನಕಾರಿ.

ಅದರಂತೆ ಡಾ| ಬಿ.ಆರ್. ಸುಹಾಸ್ ಅವರ ಆಹಾರ ಮತ್ತು ಆರೋಗ್ಯ ಹಾಗೂ ಜೀವಸತ್ವಗಳು ಎಂಬ ಎರಡು ಪ್ರತ್ಯೇಕ ಕೃತಿಗಳನ್ನು ಪ್ರಕಟಿಸಿದ್ದಾರೆ (ಕೃಷ್ಣ ಬುಕ್ ಎಜೆನ್ಸಿ ಪ್ರಕಾಶನ). ಊಟ ಬಲ್ಲವನಿಗೆ ರೋಗವಿಲ್ಲ, ಸಮತೋಲನ ಆಹಾರ, ರಕ್ತಹೀನತೆ, ಜೀವಸತ್ವಗಳ ಮಹತ್ವದ ಪಾತ್ರ ಎಲ್ಲವನ್ನೂ ತುಂಬ ಕಾಳಜಿಯಿಂದ ಮನತಟ್ಟುವಂತೆ ಹೇಳಿದ್ದಾರೆ. ಆಹಾರ ಆರೋಗ್ಯ ಕುರಿತ ಪ್ರಕಟಗೊಂಡ ಪುಸ್ತಕಗಳು ಲಭ್ಯವಾಗಲಿಲ್ಲ.

ಯೋಗ ಕೂಡ ಒಂದು ವೈದ್ಯ ವಿಜ್ಞಾನದ ಭಾಗ. ಅದು ಶರೀರ ಕ್ರಿಯಾ ಶಾಸ್ತ್ರಕ್ಕೆ ನೇರ ಸಂಬಂಧಿಸಿದ್ದು. ಯೋಗ ಕುರಿತು ಕನ್ನಡದಲ್ಲಿ ನೂರಾರು ಕೃತಿಗಳು ಪ್ರಕಟಗೊಂಡಿವೆ. ಬಹುಪಾಲು ಅವುಗಳಲ್ಲಿ ಅಧ್ಯಾತ್ಮ ಪಾರಮಾರ್ಥಿಕ ವಿಚಾರಗಳನ್ನು ಹೇಳಲಾಗಿದೆ. ಆಸನ ಪ್ರಾಣಾಯಾಮ ಧ್ಯಾನ ಪ್ರಕ್ರಿಯೆ ವಿಧಾನ ಕುರಿತು ಹೇಳುತ್ತಾರೆ. ಯೋಗಕ್ಕೂ ಶರೀರಕ್ರಿಯೆಗಳಿಗೂ ಸಂಬಂಧ, ವೈದ್ಯಕೀಯ ಪ್ರಯೋಜನೆಗಳನ್ನು ಸ್ವಾಮಿ ವಿವೇಕಾನಂದ ಅನುಸಂಧಾನ ಕೇಂದ್ರ ಹೊರತಂದದ್ದು ಪ್ರಶಂಸಾರ್ಹ. ಡಾ| ವಸಂತ ಕುಲಕರ್ಣಿಯವರ ಸಂಶೋಧನಾ ಲೇಖನಗಳ ಸಂಕಲನ ಇಲ್ಲಿ ಉಲ್ಲೇಖಿಸುವುದು ಅಗತ್ಯ. ಲಭ್ಯವಿದ್ದ ಸುಮಾರು ೪೨ ಕೃತಿಗಳನ್ನು ಸಮೀಕ್ಷೆಗೆ ತೆಗೆದುಕೊಳ್ಳಲಾಗಿದೆ. ಹಲವಾರು ಲೇಖಕರನ್ನು ಸಂಪರ್ಕಿಸಲಾಯಿತು. ಕೊನೆಗೆ ದೊರಕಿದ್ದು ಇಷ್ಟೇ. ಹಳೆಯ ಕೆಲ ಮೂಲ ವಿಜ್ಞಾನದ ಪ್ರತಿಗಳು ಪುನಃ ಪ್ರಕಟಗೊಂಡಿಲ್ಲ. ನನಗೆ ತೋಚಿದ್ದು ಅನಿಸಿದ ಕೆಲ ಮಾತುಗಳು :

೧. ಕನ್ನಡದಲ್ಲಿ ಮೂಲವಿಜ್ಞಾನಗಳ ಪ್ರಾಥಮಿಕ ಜ್ಞಾನವಾದರೂ ಗಟ್ಟಿಯಾಗಿ ಮೂಡಲೇಬೇಕು. ಮುಖ್ಯವಾಗಿ ವೈದ್ಯ ಸಾಹಿತ್ಯ ಕೃಷಿಗೆ ಬೇರುಗಳು.

೨. ವೈದ್ಯ ಸಾಹಿತ್ಯದಲ್ಲಿ ಇಲ್ಲಿಯವರೆಗೂ ಪ್ರಕಟಗೊಂಡ ಎಲ್ಲ ಕೃತಿಗಳು ಲೇಖಕರ ಪರಿಚಯ ಅವರ ಕೊಡುಗೆ – ಹೀಗೆ ಬೃಹತ್ ಸೂಚಿ ನಿರ್ಮಾಣವಾಗಬೇಕಾಗಿದೆ ಇದನ್ನು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಸಾರಾಂಗ ಮಾಡಬೇಕು. ಆಗಾಗ ಸಮೀಕ್ಷೆ ನಡೆಯಬೇಕು.

೩. ಕನ್ನಡದಲ್ಲಿ ವೈದ್ ಮೂಲವಿಜ್ಞಾನ ಹೇಗೆ ಎಷ್ಟು ಮತ್ತು ಯಾರಿಗೆ ಕುರಿತು ಮಾನದಂಡಗಳ ನಿರ್ಧಾರವಾಗಬೇಕು.

೪. ಜೀವರಸಾಯನಶಾಸ್ತ್ರ ಕುರಿತು ಕೆಲ ಪಠ್ಯಪುಸ್ತಕಗಳು ಪ್ರಕಟಗೊಂಡರೂ ಯಾತಕ್ಕೂ ಸಾಲದು. ಕೆಲ ದಶಕಗಳ ಹಿಂದೆ ಹುಬ್ಬಳ್ಳಿ ಕೆ.ಎಂ.ಸಿಯ ದಿ. ಡಾ| ಸೊಂಡೂರ ಶ್ರೀನಿವಾಸಾಚಾರ್ಯ ಈ ದಿಸೆಯಲ್ಲಿ ಅವರ ಪುಸ್ತಕ ಹಾಗೂ ಸಂಕ್ಷಿಪ್ತ ನಿಘಂಟು ಪ್ರಶಂಸಾ ಕಾರ್ಯ. ದುಃಖದ ವಿಷಯಗಳೆಂದರೆ ಪ್ರತಿಗಳು ಲಭ್ಯವಿಲ್ಲ.

೫. ಮೂಲ ವಿಜ್ಞಾನಗಳಲ್ಲಿ ಸಮಪದಗಳ ಕ್ಲಿಷ್ಟತೆ ಗೊಂದಲ ಇಲ್ಲಿಯೂ ಇದೆ. ಅದನ್ನು ಪರಿಹರಿಸಬೇಕು.

೬. ಕನ್ನಡ ದಿನ ಪತ್ರಿಕೆಗಳು ಹಾಗೂ ಮಾಸಪತ್ರಿಕೆಗಳು ವೈದ್ಯ ಮೂಲ ವಿಜ್ಞಾನಗಳ ಲೇಖನಗಳಿಗೆ ಆದ್ಯತೆ ನೀಡಬೇಕು. ಆರೋಗ್ಯ ಸಂವಾದ ಕಾರ್ಯಕ್ರಮಗಳಲ್ಲಿ ಮೂಲ ವಿಜ್ಞಾನಗಳ ಚರ್ಚೆಯಾಗಬೇಕು.

* * *