ಕನ್ನಡ ಸಾಹಿತ್ಯಸಾಗರದಲ್ಲಿ  ವೈದ್ಯಕೀಯ ಪುಸ್ತಕಗಳ ಸಂಖ್ಯೆ ಅತ್ಯಂತ ವಿರಳ. ಇಂದಿನ ಕಾಲದಲ್ಲಿ ಜನಸಾಮಾನ್ಯರಿಗೆ ವೈದ್ಯಶಾಸ್ತ್ರದ ಕ್ಲಿಷ್ಟಕರ ವಿಷಯಗಳನ್ನು ಸರಳ ಭಾಷೆಯಲ್ಲಿ ಬರೆದು ತಿಳಿಸುವುದು ಅತ್ಯಾವಶ್ಯಕ. ಈ ರೀತಿಯ ಪ್ರಯತ್ನ ಹೆಚ್ಚಿಗೆ ನಡೆಯದಿರುವುದರ ಕಾರಣ ರೋಗಿಗಳು ಅನೇಕ ವೇಳೆ ವೈದ್ಯರ ವಿರುದ್ಧ ಕೋರ್ಟಿನ ಕಟಕಟೆ ಹತ್ತಿದುದುಂಟು.

ಪರ್ಯಾಯ ವೈದ್ಯಪದ್ಧತಿಗಳು ಎಂಬ ಮನ್ನಣೆ ಪಡೆದ ಆಯುರ್ವೇದ ಮತ್ತು ಹೋಮಿಯೋಪತಿ ವೈದ್ಯಪದ್ಧತಿಗಳ ಕನ್ನಡದ ಪುಸ್ತಕಗಳ ಬಗ್ಗೆ ಅವಲೋಕನ ಮಾಡೋಣ.

ಮೊದಲಿಗೆ ಆಯುರ್ವೇದ ವೈದ್ಯಸಾಹಿತ್ಯವ್ನು ೩ ವಿಭಾಗವಾಗಿ ವಿಂಗಡಿಸಬಹುದು.

೧. ಆದಿಕಾಲ (ಕ್ರಿ.ಪೂ. ೨೬೦ ರಿಂದ ಕ್ರಿ.ಷ-೧೩೦೦)
೨. ಮಧ್ಯಂತರ ಕಾಲ (ಕ್ರಿ.ಶ.೧೩೦೦ ರಿಂದ ಕ್ರಿ.ಶ. ೧೮೦೦)
೩. ಆಧುನಿಕ ಕಾಲ (ಕ್ರಿ. ೧೮೦೦ ರಿಂದ ಇಂದಿನವರೆಗೆ)

೧. ಆದಿಕಾಲದಲ್ಲಿ ಕರ್ನಾಟಕ ರಾಜ್ಯದ ಉತ್ತರದ ಜಿಲ್ಲೆಗಳು ಅಶೋಕ ಚಕ್ರವರ್ತಿಯ ರಾಜ್ಯಕ್ಕೆ ಸೇರಿದ್ದುದರಿಂದ ಆತನ ಕಾಲದಲ್ಲಿದ್ದ ‘ನಾಗಾರ್ಜುನ’ ಎಂಬ ವೈದ್ಯನ ಗ್ರಂಥವನ್ನು ‘ರಸರತ್ನಾಕರ’ ಎಂಬ ಕನ್ನಡದ ಪ್ರಥಮ ಆಯುರ್ವೇದ ಗ್ರಂಥ ಎಂದು ಪರಿಗಣಿಸಬಹುದು.

ಇತಿಹಾಸದ ಪ್ರಕಾರ ಈ ಮೇಲಿನ ವೈದ್ಯನು ಶ್ರೀ ಶೈಲ ಪರ್ವತದಲ್ಲಿ ವಾಸವಾಗಿದ್ದು ‘ಲೋಹ ವಿದ್ಯೆ’ಯ ಬಗ್ಗೆ ಅಪಾರ ಪಾಂಡಿತ್ಯ ಪಡೆದಿದ್ದನು.

ನಂತರ ನಮ್ಮ ರಾಜ್ಯವನ್ನು ಅಳಿದ ಗಂಗರಸರು ಜೈನಧರ್ಮಿಗಳಾಗಿದ್ದರು. ಇವರ ರಾಜಗುರುವಾಗಿದ್ದ ‘ದಿಗಂಬರ ಜೈನಯತಿ ಪೂಜ್ಯಪಾದರು’ (೬೦೫-೬೫೦) ‘ಕಲ್ಯಾಣಕಾರಕ’ ಎಂಬ ವೈದ್ಯಗ್ರಂಥವನ್ನು ರಚಿಸಿದರು ನಂತರ “ಸಿದ್ಧನಾಗಾರ್ಜುನ” ಎಂಬ ವೈದ್ಯನು ‘ರಸೇಂದ್ರ ಮಂಗಳ’, ‘ಕಕ್ಷಪುಟತಂತ್ರ’ ಮತ್ತು ‘ನಾಗಾರ್ಜುನ ತಂತ್ರ’ ಎಂಬ ಗ್ರಂಥವನ್ನು ರಚಿಸಿದ್ದರು. ಕರ್ನಾಟಕದ ದಕ್ಷಿಣ  ಭಾಗದ ಬನ್ನೂರು ಎಂಬ ಊರಿನಲ್ಲಿ ರಾಜ್ಯವಾಳುತ್ತಿದ್ದ ‘ಗಂಗರಾಜನು’ ಗಜಶಾಸ್ತ್ರವನ್ನು ಮತ್ತು ಗಜಾಷ್ಟಕವನ್ನು ಬರೆದಿದ್ದಾರೆ.

ಇದನ್ನು ಆಯುರ್ವೇದದ ಪ್ರಥಮ ಪ್ರಾಣಿ ಚಿಕಿತ್ಸಾಗ್ರಂಥವೆಂದು ಕರೆಯಬಹುದು. ಈ ಮೇಲಿನ ಪುಸ್ತಕಗಳಲ್ಲಿ ಜೈನಧರ್ಮದ ನಿಷ್ಠೆಯನ್ನು ಪಾಲಿಸಿರುವುದರಿಂದ ಮದ್ಯ, ಮಾಂಸ ಮತ್ತು ಜೇನುತುಪ್ಪಗಳನ್ನು ಔಷಧವಾಗಿಯಾಗಲೀ, ಆಹಾರವಾಗಿಯಾಗಲೀ ವರ್ಜಿಸಿರುವುದು ಒಂದು ವೈಶಿಷ್ಟ್ಯದ ವಿಚಾರವಾಗಿದೆ. ಚಾಲುಕ್ಯರ ಆಳ್ವಿಕೆಯಲ್ಲಿದ್ದ ‘ಚಾಮುಂಡ ರಾಯನು (೧೦೧೫-೧೦೪೨) ‘ಲೋಕೋಪಕಾರ’ ಎಂಬ ವಿಸ್ತಾರವಾದ ಆಯುರ್ವೇದ ಗ್ರಂಥವನ್ನು ರಚಿಸಿದ್ದಾನೆ ‘ಚಂದ್ರರಾಜನ (೧೦೭೯) ‘ಮದನತಿಲಕ’ ‘ಕೀರ್ತಿವರ್ಮನ’ (೧೧೨೫) ‘ಗೋವೈದ್ಯ’, ‘ಸೋಮೇಶ್ವರನ’ (೧೧೨೬-೩೮) ‘ಮನಸೋಲ್ಲಾಸ’ ಸೋಮನಾಥನ (೧೧೫೦) ‘ಕರ್ನಾಟಕ ಕಲ್ಯಾಣ ಕಾರಕ’ ‘ದೇವೇಂದ್ರ ಮುನಿಯ’ ‘ಬಾಲಗ್ರಹ ಚಿಕಿತ್ಸೆ’, ‘ಆಸ್ಥಾನದಲ್ಲಿದ್ದ ಲೋಲಿಂಬರಾಜನ’ ಸದ್ವೈದ ಜೀವನ ಮತ್ತು ವೈದ್ಯ ಸಂತಗಳು ‘ಕೊಟ್ಟೂರು ಬಸವರಾಜನ’ (೧೬೭೦) ಶಿವತ್ವ ರತ್ನಾಕರದಲ್ಲಿ ಆಯುರ್ವೇದ ವಿವರಣೆ, ‘ಶ್ರೀಕಂಠ ನದಿಯ ‘ಪರ್ಯಾಯ ಮಂಜರಿ’, ಶ್ರೀಕಂಠ ಪಂಡಿತನ ‘ವೈದ್ಯಸಾರಸಂಗ್ರಹ’ ಶ್ರೀಪಂಡಿತನ ಯೋಗಶತಕ, ‘ಕೃಷ್ಣಾರ್ಯನ’ ‘ಸಿದ್ಧಯೋಗ ಸಮುಚ್ಛಯ’, ‘ಸಲಾದು ಮಾಧವಾಚಾರ್ಯನ’ ‘ಚಿಕಿತ್ಸಾ ಸಾರಸಂಗ್ರಹ’, ‘ಗಂಗಾಧರನ ಭೇಸಜ ಕಲ್ಪಿ’, ಕಳಲೆಯ ‘ವೀರರಾಜನ (೧೭೨೦) ಸಕಲ ವೈದ್ಯ ಸಂಹಿತಾ ಸಾರಾರ್ಣವ, ‘ನಂಜರಾಜನ (೧೭೪೦) ವೈದ್ಯಸಾರಸಂಗ್ರಹ’ ‘ತಿಮ್ಮ ರಾಜಗೌಡನ’ (೧೭೫೦) ಸ್ತ್ರೀವೈದ್ಯ, ‘ಇಮ್ಮಡಿ ಕೃಷ್ಣರಾಜ ಒಡೆಯನ’ (೧೭೫೯) ಬಾಹಟ ಟೀಕೆ, ‘ಲಕ್ಷ್ಮಣ ಪಂಡಿತನ’ (೧೭೭೫) ಆಕಾರಾಜಿ ನಿಘಂಟು ಈ ಯುಗದ ಮುಖ್ಯ ಗ್ರಂಥಗಳು.

೩. ಆಧುನಿಕ ಕಾಲ : ಆಯುರ್ವೇದ ಮೂಲಗ್ರಂಥಗಳಿಂದ ಸುಶ್ರುತ ಸಂಹಿತ ಮತ್ತು ಅಷ್ಟಾಂಗ ಹೃದಯವನ್ನು ಕನ್ನಡದಲ್ಲಿ ತರ್ಜುಮೆ ಮಾಡಿದವರು ಎನ್ ಎಲ್. ಭಟ್ಟಾಚಾರ್ಯರು. ಇವರು ಭಾಷಾಂತರಿಸಿದ ಚರಕ ಸಂಹಿತೆಯು ಪ್ರಕಟವಾಗಿಲ್ಲ. ಇವರ ಪುತ್ರರಾಗಿದ್ದ ಅಶ್ವಥನಾರಾಯಣರವರು ‘ದ್ರವ್ಯಗುಣ ವಿಜ್ಞಾನ’ ‘ಪ್ರಸೂತಿ ತಂತ್ರ’ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ. ಡಾ| ವಿಜೇಂದ್ರ ಮೂರ್ತಿಗಳ ‘ದ್ರವ್ಯ ಗುಣ ವಿಜ್ಞಾನ’ ಪ್ರಸಿದ್ಧವಾದ ಪುಸ್ತಕವಾಗಿದೆ. ಪಂಡಿತ ತಾರಾನಾಥರು ರಚಿಸಿದ ಸುಲಭ ಚಿಕಿತ್ಸೆ, ಪ್ರಸಿದ್ಧ ರಸೌಷಧಗಳು ಇಂದಿಗೂ ವೈದ್ಯರಿಗೆ ಮತ್ತು ವೈದ್ಯವಿದ್ಯಾರ್ಥಿಗಳಿಗೆ ಉಪಯುಕ್ತ ‘ಕೇಶವಪಂಡಿನ’ (೧೨೪೦) ಸಿದ್ಧಮಂತ್ರ ‘ಭೋಪದೇವನ’ (೧೨೬೩) ಸಿದ್ಧಮಂತ್ರಪ್ರಕಾಶ ವೈದ್ಯಶತಕ ಇವು ಆದಿಯುಗದ ಮುಖ್ಯವಾದ ಕನ್ನಡ ಗ್ರಂಥಗಳು.

ಮಧ್ಯಯುಗದಲ್ಲಿ ವಿಜಯನಗರ ಸಾಮ್ರಾಜ್ಯದ ‘ಕೃಷ್ಣದೇವಾಲಯರು’ ಆಯುರ್ವೇದ ವೈದ್ಯಶಾಸ್ತ್ರವನ್ನು ಚೆನ್ನಾಗಿ ಪೋಷಿಸಿ ಬೆಳೆಸಿದರು. ಇವರ ಕಾಲದಲ್ಲಿದ್ದ ಮಂಗರಾಜ’ ಎಂಬ ವೈದ್ಯನು (೧೩೬೦) ‘ಖಗೇಂದ್ರ ಮಣಿದರ್ಪಣ’ ಎಂಬ ಶ್ರೇಷ್ಠಗ್ರಂಥವನ್ನು ರಚಿಸಿದ್ದಾರೆ. ‘ಒಂದನೇ ಬುಕ್ಕರಾಯನ’ (೧೩೫೬-೭೬) ಆಸ್ಥಾನದಲ್ಲಿದ್ದ ವೈದ್ಯ ವಿಷ್ಣುದೇವನ ‘ರಸರಾಜಲಕ್ಷ್ಮೀ’ ‘ಇಮ್ಮಡಿ ಬುಕ್ಕರಾಯನ’ (೧೪೦೪-೧೪೨೪) ಆಸ್ಥಾನದಲ್ಲಿದ್ದ ಲಕ್ಷ್ಮಣ ಪಂಡಿತನ’ ‘ವೈದ್ಯರಾಜ ವಲ್ಲಭ’ ‘ಅಭಿನವ ಚಂದ್ರನ’ (೧೪೦೦) ಅಶ್ವಶಾಸ್ತ್ರ’ ‘ವಲ್ಲಭೇಂದ್ರನ (೧೪೩೫) ವೈದ್ಯ ಚಿಂತಾಮಣಿ, ಕಲ್ಲರಸನ” (೧೪೩೦) ಜನವಶ್ಯಿವೆಂಬ ಕಾಮಶಾಸ್ತ್ರ ಗ್ರಂಥ, ‘ಕವಿಲಿಂಗನ’ (೧೪೯೦) ಕಾಮಶಾಸ್ತ್ರದ ಪದಗಳು ‘ದಾಮೋದರ ಪಂಡಿತನ’ ‘ಆರೋಗ್ಯ ಚಿಂತಾಮಣಿ’, ‘ಭಟ್ಟನ ಹರಿಯ’, ‘ವಾಗ್ಭಟ ಮಂಡನ’ ಶ್ರೀಧರ ಜೀವನ (೧೫೦೦) ‘ಮೈದ್ಯಾಮೃತ’ ‘ಬಾಚರಸನ (೧೫೦೦) ‘ಅಶ್ವವೈದ್ಯ’ ‘ಮೂರನೆ ಮಂಗರಸನ’ (೧೫೦೮) ಸೂಪಶಾಸ್ತ್ರೆ ‘ಸಾಳ್ವನ’ (೧೫೫೦) ವೈದ್ಯ ಸಾಂಗತ್ಯ ರಘುನಾಥ ಸೂರಿಯ’ ‘ಭೋಜನ ಕುತೂಹರ’ ‘ಯಳಂದೂರು ಚನ್ನರಾಜನ (೫೭೦) ‘ಹಯಸಾರ ಸಮುಚ್ಚಯ’ ಬಿಜಾಪುರದ ಸುಲ್ತಾನ್ ‘ಇಮ್ಮಡಿ ಆದಿಲ್‌ಶಾಹನ’ (೧೬೨೬-೫೬) ದಾರಿದೀಪಗಳಾಂತಿವೆ. ಇವರ ಶಿಷ್ಯರಾಗಿದ್ದ ಡಾ|| ಎಮ್ ಗೋಪಾಲಕೃಷ್ಣ ರಾಯರ ‘ಬಡವರ ವೈದ್ಯಭಾಗ-೧ ಹಾಗೂ ಭಾಗ ೨ ಮತ್ತು ಕಾಮಶಾಸ್ತ್ರದ ಅನೇಕ ಪುಸ್ತಕಗಳು ಜನಪ್ರಿಯವಾಗಿವೆ. ಕೃಸು ಭಟ್ಟರು ಬರೆದ ‘ಆಸನಾರಿಷ್ಠ ವಿಜ್ಞಾನ ಸಂಗ್ರಹ’ ಅತ್ಯಂತ ಉಪಯುಕ್ತವಾಗಿದೆ. ದತ್ತಾತ್ರೇಯ ಅನಂತ ಹಲಸಿಕರ್ ‘ಆದ್ಯ ಅನಂತಾಚಾರ್ಯ’ ಬಿಂದು ಮಾಧವ ಒಡೆಯರ್, ದ.ಕೃ. ಭಾರದ್ವಾಜ, ಪಟವರ್ಧನ ಇವರುಗಳು ಅನೇಕ ಕನ್ನಡ ಭಾಷೆಯ ಆಯುರ್ವೇದ ಪುಸ್ತಕಗಳನ್ನು ರಚಿಸಿದ್ದಾರೆ.

ಡಾ| ಕೆ.ಆರ್. ಶ್ರೀಕಂಠಮೂರ್ತಿಗಳು ಕರ್ನಾಟಕದಲ್ಲಿ ಆಯುರ್ವೇದ ಇತಿಹಾಸ ಮುಂತಾದ ಉಪಯುಕ್ತ ಪುಸ್ತಕಗಳನ್ನು ರಚಿಸಿದ್ದಾರೆ.

ಮಲ್ಯಾಡಿಹಳ್ಳಿಯ ‘ತಿರುಕ’ ಎಂಬ ಕಾವ್ಯ ನಾಮದಿಂದ  ಪ್ರಸಿದ್ಧರಾದ ಶ್ರೀರಾಘವೇಂದ್ರಸ್ವಾಮಿಗಳ ‘ಸ್ವಯಂವೈದ್ಯ’, ‘ಅಂಗಮರ್ಧನ’ ಮುಂತಾದ ಶ್ರೇಷ್ಠ ಗ್ರಂಥಗಳನ್ನು ರಚಿಸಿದ್ದಾರೆ. ಮಂಗಳೂರಿನ ಶ್ರೀರಾಮಕೃಷ್ಣಯ್ಯಾನವರ ‘ಆಯುರ್ವೇದ ಸಾರ’ ಭಾಗ ೧, ೨ ಮತ್ತು ೩ ಅತ್ಯಂತ ಉಪಯುಕ್ತವಾದ ಪುಸ್ತಕವಾಗಿವೆ.

ಹುಬ್ಬಳ್ಳಿಯ ಡಾ|| ಧನ್ಯಕುಮಾರ ಇಜಾರಿ, ಡಾ|| ಎಲ್. ವಸಂತ, ಡಾ|| ಸತ್ಯನಾರಾಯಣ ಭಟ್, ಡಾ|| ವಸುಂಧರಾ ಭೂಪತಿ, ಡಾ|| ಪೂರ್ಣಿಮಾ ಭಟ್, ಡಾ|| ಕೆ.ಜಯಲಕ್ಷ್ಮೀ, ಡಾ|| ನಡಿಬೈಲು ಉದಯಶಂಕರ್, ಡಾ|| ವಿ.ಆರ್ ಪದ್ಮನಾಭರಾವ್, ಡಾ|| ಅನಂತರಾಮನ್ ಮತ್ತು ಹಲವಾರು ಉಪಯುಕ್ತ ಕನ್ನಡದ ವೈದ್ಯಕೀಯ ಪುಸ್ತಕಗಳನ್ನು ರಚಿಸಿದ್ದಾರೆ. ಡಾ|| ಬಿ.ಎಲ್. ದೇವರಾಜ್‌ರವರು ಅನೇಕ ಉಪಯುಕ್ತ ಆಯುರ್ವೇದದ ಪುಸ್ತಕಗಳನ್ನು ರಚಿಸಿ ಕೀರ್ತಿ ಭಾಜನಾರಾಗಿದ್ದಾರೆ.

ಆಧುನಿಕ ವೈದ್ಯ ಪದ್ಧತಿ ಎಂಬ ಹೆಗ್ಗಳಿಕೆ ಇರುವ ಆಲೋಪತಿ ವೈದ್ಯ ಪದ್ಧತಿಯ ಉಗಮದ ನಂತರ ಹೋಮಿಯೋಪತಿಯು ಹುಟ್ಟಿದ್ದರಿಂದ ಇದನ್ನು ಅತ್ಯಾಧುನಿಕ ವೈದ್ಯ ಪದ್ಧತಿ ಎಂದು ಕರೆದರೆ ತಪ್ಪೇನಿಲ್ಲ.

ಹೋಮಿಯೋಪತಿ ವೈದ್ಯಪದ್ಧತಿಯಲ್ಲಿ ಕನ್ನಡದ ಪುಸ್ತಕಗಳು ಇನ್ನೂ ಹೆಚ್ಚಾಗಿ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಹಿರಿಯ ಮತ್ತು ಕಿರಿಯ ವೈದ್ಯರನ್ನು ಜನೋಪಯೋಗಿ ಲೇಖನಗಳನ್ನು ಮತ್ತು ಗ್ರಂಥಗಳನ್ನು ಹೆಚ್ಚಾಗಿ ರಚಿಸಿ ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತೇವೆ.

ಕನ್ನಡದಲ್ಲಿ ರಚಿತವಾಗಿರುವ ಕೆಲವು ಹೋಮಿಯೋಪತಿ ಪುಸ್ತಕಗಳ ಬಗ್ಗೆ ಗಮನ ಹರಿಸೋಣ. ‘ಲೀಡರ್ಸ್‌ ಇನ್ ಹೋಮಿಯೋಪತಿ ಥೆರಪ್ಯೊಟಿಕ್ಸ್’ ಎಂಬ ಗ್ರಂಥವು ವೈದ್ಯವಿಜ್ಞಾನದ ದಿಗ್ಗಜರಾಗಿದ್ದ ದಿವಂಗತ ಇ.ಬ. ನಾಷ್ ರವರು ರಚಿಸಿದ್ದಾರೆ. ಈ ಪುಸ್ತಕವನ್ನು ಕನ್ನಡ ಭಾಷೆಗೆ ಅನುವಾದ ಮಾಡಿದವರು ಹಿರಿಯ ವೈದ್ಯರಾಗಿದ್ದ ಡಾ| ಎ.ಎಂ. ರತ್ನಂ ರವರು. ಈ ಪುಸ್ತಕದಲ್ಲಿ ಹೋಮಿಯೋಪತಿ ಔಷಧಿಗಳ ಬಗ್ಗೆ ವಿವರಗಳು ಬಳಸುವ ವಿಧಾನವನ್ನು ವಿಸ್ತಾರವಾಗಿ ತಿಳಿಸಲಾಗಿದೆ.

‘ಹೋಮಿಯೋಪತಿ ಸ್ವಯಂ ಚಿಕಿತ್ಸಾ ದಪರ್ಣ’ ಡಾ|| ಬಿ.ಎಸ್. ಸುಬ್ಬರಾಮ್ ಮತ್ತು ‘ಹೋಮಿಯೋಪತಿ ಚಿಕಿತ್ಸಾ ವಿಧಾನ’ ಡಾ|| ಮಾಧವ ಕುಲಕರ್ಣಿ ಎಂಬ ಪುಸ್ತಕಗಳು ಜನಸಾಮಾನ್ಯರು ತಾವೇ ಓದಿಕೊಂಡು ಸಣ್ಣ ಪುಟ್ಟ ರೋಗಗಳಿಂದ ನೆಗಡಿ, ಕೆಮ್ಮು, ಜ್ವರ ಮುಂತಾದವುಗಳಿಗೆ ಬಳಸಬಹುದಾದ ಔಷಧಗಳ ಬಗ್ಗೆ ವಿವರವು ಲಭ್ಯವಿದೆ. ‘ಔಷಧಿ ಕಹಿ’ ಎಂಬ ಪುಸ್ತಕವನ್ನು ಡಾ|| ಎಂ.ಸಿ. ಮೋಹನ್‌ರವರು ರಚಿಸಿದ್ದಾರೆ. ಈ ಲೇಖಕರು ‘ಆಂದೋಲನ’ ಪತ್ರಿಕೆಯಲ್ಲಿ ಬರೆದ ಲೇಖನಗಳನ್ನು ಸಂಗ್ರಹ ಮಾಡಿದ್ದಾರೆ.

ಇವರು ತಮ್ಮ ರೋಗಿಗಳು ವ್ಯಕ್ತಪಡಿಸಿದ ಸಂದೇಹಗಳು ಮತ್ತು ನೀಡಿದ ಚಿಕಿತ್ಸೆಗಳ ವಿವರ ಈ ಪುಸ್ತಕದಲ್ಲಿ ಅಡಕವಾಗಿವೆ. ರೋಗಗಳನ್ನು ವಿವರಿಸುವಾಗ ಆಧುನಿಕ ವೈದ್ಯಪದ್ಧತಿಯ ಮಾಹಿತಿಗಳನ್ನು ಸೇರಿಸಿದ್ದಾರೆ. ಹೋಮಿಯೋ ಪತಿ ವೈದ್ಯಪದ್ಧತಿಯ ರಾಯಭಾರಿ ಎಂದು ಕರೆಯಬಹುದಾದ ಸುಪ್ರಸಿದ್ಧ ವೈದ್ಯರಾದ ‘ಡಾ|| ಬಿ.ಟಿ. ರುದ್ರೇಶ್‌ರವರು ಬೆಳ್ಳಿಬೆಳಕು ಸುವರ್ಣಬದುಕು ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಈ ಪುಸ್ತಕದಲ್ಲಿ ಮೇಲಿನ ವೈದ್ಯರ ವ್ಯಕ್ತಿತ್ವ ಮತ್ತು ಹೋಮಿಯೋಪತಿ ಕ್ಷೇತ್ರದಲ್ಲಿ ಅವರ ಸಾಧನೆಗಳ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹವನ್ನು ಸೇರಿಸಲಾಗಿದೆ. ‘ಡಾ| ಬಿ.ಟಿ. ರುದ್ರೇಶ್‌ರವರು ನೋವು ನೀಡುವ ಕಾಯಕದಲ್ಲಿ ಕಂಡ ‘ಬದುಕು ಬೆಳಕು’ ಎಂಬ ಮತ್ತೊಂದು ಜನಪ್ರಿಯ ಪುಸ್ತಕವನ್ನು ರಚಿಸಿದ್ದಾರೆ. ಈ ಪುಸ್ತಕದಲ್ಲಿ ಹೋಮಿಯೋಪತಿ ವೈದ್ಯ ಪದ್ಧತಿಯ ವೈಶಾಲ್ಯ, ಅವರು ರೋಗವನ್ನು ಮತ್ತು ರೋಗಿಗಳಲ್ಲಿ ಕಂಡು ಅನುಭವಗಳು, ಜನಸಾಮಾನ್ಯರಲ್ಲಿ ಕಂಡುಬರುವ ಸಂದೇಹಗಳು ಇವುಗಳನ್ನು ವಿಸ್ತಾರವಾಗಿ ವಿಶ್ಲೇಷಿಸಿದ್ದಾರೆ.

ಬಂಜೆತನ ನಿವಾರಿಸುವುದರಲ್ಲಿ ಸಿದ್ದಹಸ್ತರಾದ ಡಾ| ಬಿ.ಟಿ. ರುದ್ರೇಶ್‌ರವರು ತಮ್ಮ ಚಿಕಿತ್ಸಾ ಅನುಭವಗಳನ್ನು ಮೇಲಿನ ಪುಸ್ತಕದಲ್ಲಿ ತಿಳಿಸಿರುವುದರಿಂದ ಇತರ ವೈದ್ಯರಿಗೆ ಮಾರ್ಗದರ್ಶಿಗಳಾಗಿದ್ದಾರೆ.

ಈ ಎರಡೂ ವೈದ್ಯಪದ್ಧತಿಗಳ ಸಾಹಿತ್ಯವನ್ನು ಅವಲೋಕನ ಮಾಡಿದಾಗ ಕೆಲವು ವಿಷಯಗಳ ಸ್ಪಷ್ಟವಾಗಿ ಕಂಡುಬರುತ್ತವೆ. ನಾನು ಹಿಂದೆ ತಿಳಿಸಿದಂತೆ ಈ ಎರಡೂ ವೈದ್ಯ ಪದ್ಧತಿಗಳ ವೈದ್ಯರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪುಸ್ತಕ ರಚನೆಯನ್ನು ಮಾಡಬೇಕು. ವೈದ್ಯರು, ವೈದ್ಯ ವಿದ್ಯಾಥಿಗಳು ಮತ್ತು ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಅವರವರ ಮಟ್ಟದ ಪುಸ್ತಕಗಳು ರಚನೆಯಾಗಬೇಕು. ಇತ್ತೀಚೆಗೆ ಪರ್ಯಾಯ ವೈದ್ಯ ಪದ್ಧತಿಗಳು ಹೆಚ್ಚು ಜನಪ್ರಿಯವಾಗುವುದರೊಂದಿಗೆ ಜನರಲ್ಲಿ ಈ ವೈದ್ಯ ಪದ್ಧತಿಗಳ ಬಗ್ಗೆ ಅನೇಕ ಸಂದೇಹಗಳು ಸಂಶಯಗಳು ತಲೆದೋರುತ್ತಿವೆ. ಇವುಗಳನ್ನು ನಿವಾರಣೆ ಮಾಡುವುದು ಈ ವೈದ್ಯ ಪದ್ಧತಿಗೆ ಸೇರಿದ ವೈದ್ಯರ ಆದ್ಯ ಕರ್ತವ್ಯ ಎಂಬುದು ನನ್ನ ಭಾವನೆ.

ಲೇಖನಗಳು ಮತ್ತು ಪುಸ್ತಕಗಳನ್ನು ರಚಿಸುತ್ತಾ ಹೋದಾಗ ವೈದ್ಯರಿಗೆ ತಮಗೇ ಅರಿವಿಲ್ಲದಂತೆ ಬರವಣಿಗೆಯು ಶ್ರೀಮಂತವಾಗುತ್ತದೆ. ಉದಾಹರಣೆಗೆ ಆಯುರ್ವೇದ ಕ್ಷೇತ್ರದಲ್ಲಿ ಇತ್ತೀಚಿನ ಲೇಖಕರಾದ ಡಾ|| ವಸುಂಧರಾ ಭೂಪತಿ ಮತ್ತು ಡಾ|| ಪದ್ಮನಾಭರಾವ್‌ರವರ ಪುಸ್ತಕಗಳ ಗುಣಮಟ್ಟ ತುಂಬಾ ಚೆನ್ನಾಗಿದೆ. ಇವರು ಬಳಸಿರುವ ಭಾಷೆಯು ಅನುಕರಣೀಯ. ಇದೇ ರೀತಿ ಡಾ|| ಬಿ.ಟಿ. ರುದ್ರೇಶ್‌ರವರ ಪುಸ್ತಕದ ಭಾಷಾ ಸಮೃದ್ಧಿಯನ್ನು ಹಿರಿಯ ಸಾಹಿತಿ ಡಾ|| ನಿಸಾರ್ ಅಹಮದ್ ರವರು ಮುಕ್ತಕಂಠದಿಂದ ಪ್ರಶಂಸಿದ್ದಾರೆ.

ಒಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಬರವಣಿಗೆಗಳು ಹೊರಬರಬೇಕು ಮತ್ತು ಇದರಿಂದ ಕನ್ನಡದ ಸಾರಸ್ವತ ಲೋಕವು ಶ್ರೀಮಂತವಾಗಬೇಕು.

* * *