ಡಾ| ಕೆ.ಆರ್.ಶ್ರೀಧರ್‌ರವರು ‘ಮಾನಸಿಕ ಮತ್ತು ಲೈಂಗಿಕ ಆರೋಗ್ಯ ಕೃತಿಗಳ ಅವಲೋಕನ’ ವನ್ನು ನಡೆಸಿ ಬರೆದಿರುವ ಲೇಖನದ ವಿಮರ್ಶೆಗೆ ಕೊಟ್ಟಿರುವ ಅವಕಾಶಕ್ಕೆ ನಾನು ಅಭಾರಿಯಾಗಿದ್ದೇನೆ. ಶೀರ್ಷಿಕೆಯನ್ನು ಸ್ವಲ್ಪ ಬದಲಾಯಿಸಿ ‘ಕನ್ನಡದ ಮಾನಸಿಕ ಮತ್ತು ಲೈಂಗಿಕ ಆರೋಗ್ಯ ಕೃತಿಗಳ ಅವಲೋಕನ’ ಎಂದಿದ್ದರೆ ಇನ್ನೂ ಸಮಂಜಸವಾಗಿರುತ್ತಿತ್ತು ಎನಿಸಿತು. ಕನ್ನಡ ವೈದ್ಯಸಾಹಿತ್ಯ ಪರಿಷತ್ತಿನ ಪರಕಟಣೆಗೆ ತಯಾರಾದ ಲೇಖನವಾದ್ದರಿಂದ ಈ ಒತ್ತು ಕೊಟ್ಟಿಲ್ಲದಿರಲು ಸಾಧ್ಯವಿದೆ.

ಡಾ| ಕೆ.ಆರ್. ಶ್ರೀಧರ್‌ರವರು ನಾನು ದಾವಣಗೆರೆಯಲ್ಲಿ ವೈದ್ಯಕಿಯ ವಿದ್ಯಾರ್ಥಿಯಾಗಿದ್ದಾಗ ೧೯೭೪-೭೬ ರಲ್ಲಿ ನನಗೆ ಉಪನ್ಯಾಸಕರಾಗಿದ್ದವರು. ಆಗ ಕಲಿಸಿದ್ದಲ್ಲದೆ ನಂತರವೂ ತಮ್ಮ ಲೇಖನಗಳ ಮೂಲಕ ಮೇಷ್ಟರಾಗಿ ಮುಂದುವರೆದಿರುವುದು ಸಂತೋಷದ ವಿಚಾರ. ಅವರೇ ಕಳಕಳಿಯಿಂದ ಹೇಳಿರುವಂತೆ ನಮ್ಮ ಮಾನಸಿಕ ಆರೋಗ್ಯ ಹಾಗೂ ಲೈಂಗಿಕ ಆರೋಗ್ಯದ ಕೃಷಿಯಲ್ಲಿ ಹಲವು ಘಟ್ಟಗಳು, ಆಯಾಮಗಳು ಹಾಗೂ ತೊಡರುಗಳು ಇರುವುದು ವೇದ್ಯ. ಇಂಗ್ಲಿಷ್ ಭಾಷೆಯಲ್ಲಿ ಇರುವ ಸಾಹಿತ್ಯಕ್ಕೂ, ಕನ್ನಡದ ಸಾಹಿತ್ಯಕ್ಕೂ ಅಂಕಿಸಂಖ್ಯೆಯಲ್ಲಿ ದೊಡ್ಡ ಕಂದರವಿದೆ. ನನಗೆ ತಿಳಿದಂತೆ ವೈದ್ಯರು ಸಾಮಾನ್ಯವಾಗಿ ‘ಬುಸಿ’ಯಾಗಿರುವುದೇ ಅಲ್ಲದೆ ‘ಬರೆದರೆ’ ಅದೊಂದು ರೀತಿಯ ‘ತೋರ್ಪಡಿಕೆ’ ಎಂಬ ಮುಜುಗರವೇ ಕನ್ನಡ ಕೃಷಿಯ ಇಂದಿನ ಸ್ಥಿತಿಗೆ ಪ್ರಮುಖ ಕಾರಣ ಎನ್ನಬಹುದು. ಆದರೆ ಕನ್ನಡ ಸಾಹಿತ್ಯ ಪರಿಷತ್ತು, ನಂತರ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಆಗಮನ ಬಹಳಷ್ಟು ಕ್ರಾಂತಿಕಾರಿ ಬದಲಾವಣೆಗಳಿಗೆ ಕಾರಣವಾಗಿದೆ. ಮನೋವಿಜ್ಞಾನದ ಬಗ್ಗೆ ಡಾ| ರಾಶಿಯವರ ಸಮಯದಿಂದ ಹಿಡಿದು ಡಾ| ಸಿ.ಆರ್.ಸಿ. ಯವರೆಗೆ ನಡೆದ ದಾರಿಯನ್ನು ಅದಷ್ಟು ಸುಲಭವಾಗಿ ಸುಲಲಿತವಾಗಿ ನಿರೂಪಿಸಿದ್ದಾರೆ. ದೈಹಿಕ ಆರೋಗ್ಯದ ಮನಸ್ಸು ಮತ್ತು ಅದರ ಆರೋಗ್ಯ ಮುಖ್ಯ ಎಂಬುದನ್ನು ವಿವರಿಸಿದ್ದಾರೆ. ಮಾನಸಿಕ ಆರೋಗ್ಯದಲ್ಲೂ ಹಲವು ಆಯಾಮಗಳಿರುವುದನ್ನು, ಅದರಲ್ಲೂ ರೋಗವನ್ನು ತಡೆಯುವುದು ಅಥವಾ ಮಾನಸಿಕ ಆರೋಗ್ಯ ವೃದ್ಧಿ ಬಹಳ ಮುಖ್ಯ ಎಂಬ ವಿಚಾರವನ್ನು ಚೆನ್ನಾಗಿ ನಿರೂಪಿಸಿದ್ದಾರೆ. ಸಾಹಿತ್ಯದಲ್ಲಿ ಇರುವ ನ್ಯೂನತೆಗಳನ್ನು ಸರಿಪಡಿಸಲು ವಿಧಾನಗಳನ್ನು ಸಾದರಪಡಿಸಿದ್ದಾರೆ.

ಲೈಂಗಿಕ ವಿಜ್ಞಾನ, ಕಾಮವನ್ನು ಮೀರಿದ, ಎಲ್ಲರೂ ಅರಿತಿರಬೇಕಾದ ವಿಚಾರ ಎಂಬುದನ್ನು ಚೆನ್ನಾಗಿ ನಿರೂಪಿಸಿದ್ದಾರೆ. ಎಲ್ಲೆಡೆ ಲೈಂಗಿಕ ವಿಚಾರಗಳ ಬಗ್ಗೆ ಇದ್ದ ತಪ್ಪು ವಿಚಾರಗಳನ್ನು ಎತ್ತಿ ತೋರಿಸಿದ್ದಾರೆ. ಲೈಂಗಿಕ ವಿಜ್ಞಾನದ ಅರಿವು ಕನ್ನಡ ಸಾಹಿತ್ಯದಲ್ಲಿ ಬಹಳಷ್ಟನ್ನು ಸಾಧಿಸಿದೆ ಎಂಬುದರ ನಿರೂಪಣೆಯಿದೆ. ಲೈಂಗಿಕತೆಯ ಬಗ್ಗೆ ಕ್ರಿ.ಪೂ. ನಾಲ್ಕನೇ ಶತಮಾನದಲ್ಲಿ ವಾತ್ಸಾಯನನ್ನು ಕಾಮಸೂತ್ರದ ಬಗ್ಗೆ ಬರೆದ ವಿಚಾರಗಳು ‘ಕೃತಿಯಾಗಿಯೇ ಉಳಿಯಿತೇ ವಿನಃ ಜನಸಾಮಾನ್ಯರಲ್ಲಿ ಮಡಿವಂತಿಕೆ ಹೋಗಲಾಡಿಸಲು ವಿಫಲವಾಯಿತು’ ಎಂಬುದು ಅಷ್ಟು ನಿಜವೆನಿಸದು. ಹಾಗೆ ನೋಡಿದರೆ ಅಂದು ನಮ್ಮ ಸಮಾಜ ಲೈಂಗಿಕತೆಯ ಬಗ್ಗೆ ಗೌರವಯುತವಾಗಿ ನಡೆದದ್ದಲ್ಲದೆ ಅದಕ್ಕೆ ದೈವಿಕತೆಯ ಸಾಧನವನ್ನು ನೀಡಿದ್ದೂ ಸಹ ನಿಜ. ಜನಸಾಮಾನ್ಯರಲ್ಲಿಯೂ ಇದರ ಬಗ್ಗೆ ಮುಜುಗರವಿರಲಿಲ್ಲ, ಸಾಮಾನ್ಯವಾಗಿ ಧರ್ಮ, ಅರ್ಥದಷ್ಟು ಪ್ರಾಮುಖ್ಯತೆಯನ್ನು ನೀಡಿದ ಉಲ್ಲೇಖಗಳಿವೆ. ಅಜಂತಾ, ಎಲ್ಲೋರ, ಖಜುರಾಹೋ ದೇವಾಲಯಗಳಲ್ಲಿ ಲೈಂಗಿಕತೆಯ ಬಗ್ಗೆ ನಮ್ಮವರು ಕೊಟ್ಟ ಪ್ರಾಮುಖ್ಯತೆಯನ್ನು ಕಾಣಬಹುದು. ಮಡಿವಂತಿಕೆ ಮೂಡಿದುದು ನಂತರದ ಬೆಳವಣಿಗೆಗಳ ಕಾರಣದಿಂದ, ಅದರಲ್ಲೂ ಬ್ರಿಟಿಷರ ವಿಕ್ಟೋರಿಯನ್ ತತ್ವಗಳ ಪರಿಣಾಮವಾಗಿ ಎನ್ನಲು ಅಡ್ಡಿಯಿಲ್ಲ. ‘ಜೀವನದ ಯಾವುದೇ ಅಂಗಗನ್ನು ತೆಗೆದುಕೊಂಡರೂ ಅಲ್ಲಿ ಕಾಮ ಅರ್ಥಾತ್ ಲೈಂಗಿಕತೆಗೆ ಪ್ರಮುಖ ಸ್ಥಾನವಿದೆ’ ಎಂಬ ಮಾತು ಅರ್ಥಪೂರ್ಣ. ಇರುವ ತಪ್ಪು ನಂಬಿಕೆಗಳ ನಿವಾರಣೆ, ಲೈಂಗಿಕ ಶಿಕ್ಷಣದ ಪ್ರಾಮುಖ್ಯತೆ ಹಾಗೆಯೇ ಇನ್ನು ನಡೆಯಬೇಕಾದ ಸಾಹಿತ್ಯ ಕೃಷಿ ಬಗ್ಗೆ ಕಳಕಳಿ ಲೇಖನದಲ್ಲಿ ಚೆನ್ನಾಗಿ ಮೂಡಿಬಂದಿದೆ.

ಲೇಖನದ ಮಿತಿಯ ಬಗ್ಗೆ ಒಂದೆರಡು ಮಾತುಗಳನ್ನು ಸೂಕ್ತವೆನಿಸುತ್ತದೆ. ಲೇಖಕರೇ ಹೇಳುವಂತೆ ಮಾನಸಿಕ ಆರೋಗ್ಯದ ಬಗ್ಗೆ ಹಲವಾರು ಕೃತಿಗಳು ದೊರಕದಿರುವುದರಿಂದ ಉಂಟಾದ ಅವಲೋಕನದ ಮಿತಿ. ಲೈಂಗಿಕ ಸಾಹಿತ್ಯದ ಬಗ್ಗೆ ಈ ಮಿತಿಯ ತೀವ್ರತೆ ಇನ್ನು ಜಾಸ್ತಿ. ಮುಖ್ಯ ಹೆಸರುಗಳಾದ ಡಾ| ಬಿ.ಜಿ. ಚಂದ್ರಶೇಖರ್, ಎನ್.ಸೋಮೇಶ್ವರ್, ಡಾ| ರಾಜಣ್ಣ, ಡಾ| ಲೀಲಾವತಿ ದೇವದಾಸ್, ಡಾ| ಗಿರಿಜಮ್ಮ, ಡಾ| ಪ್ರಸಾದ್, ಡಾ| ಡಿ.ಕೆ. ಮಹಾಬಲರಾಜು, ಡಾ| ವಿ.ಎನ್. ಶಂಕರ್, ಸ.ಜ. ನಾಗಲೋಟಿಮಠ, ಡಾ| ಚಂದ್ರಪ್ಪಗೌಡ, ಡಾ| ಸುಬ್ರಹ್ಮಣ್ಯಂ, ಡಾ| ವಸುಂಧರಾ ಭೂಪತಿ ಮೊದಲಾದವರ ಹೆಸರುಗಳು ಪ್ರಸ್ತುತ. ಆದರ್ಶ ಗಂಡ ಹೆಂಡತಿಯ ದಿವಂಗತ ಶ್ರೀ ಮಲ್ಲಿಕಾರ್ಜುನಯ್ಯನವರು ೧೩ ವರ್ಷಕ್ಕೂ ಹೆಚ್ಚು. ಹಾಗೆಯೇ ಅನುರಾಗ್ ಗ್ರೂಪ್‌ನ ಶ್ರೀ ಬಾಲಕೃಷ್ಣರವರ ದೊಡ್ಡ ಸಂಖ್ಯೆಯ ಪ್ರಕಟಣೆಗಳು ಉಲ್ಲೆಖನೀಯ. ಹಲವು ದೈನಿಕಗಳು ಈ ನಿಟ್ಟಿನಲ್ಲಿ ಯೋಗ್ಯ ಕೆಲಸಗಳನ್ನು ಮಾಡುತ್ತಿರುವುದು ನಿಜ. ಇದರರ್ಥ ಈ ಎಲ್ಲ ಪ್ರಕಟಣೆಗಳ ಹಾಗೂ ಪುಸ್ತಕಗಳ ಒಂದು ಯಾದಿ, ಇಲ್ಲವೆ ಪಟ್ಟಿ ತಯಾರಿಸುವ ಹಾಗೂ ವಿಚಾರ ವಿನಿಮಯ ವಿಶ್ಲೇಷಣೆಗೆ ಸಂಬಂಧಿಸಿದಂತೆ ಪುಸ್ತಕ ಪ್ರಕಟಣೆಯ ‘ಬ್ಯಾಂಕ್’ ಒಂದು ಸ್ಥಾಪಿತವಾಗಬೇಕಾಗಿರುವ ಅವಶ್ಯಕತೆ. ಕನ್ನಡ ವೈದ್ಯಸಾಹಿತ್ಯದ ಭೀಷ್ಮರೆನಿಸಿದ ಸಿ.ಆರ್.ಸಿ. ರವರ ೬೦ನೇ ಹುಟ್ಟುಹಬ್ಬದ ಈ ಸಮಯದಲ್ಲಿ ಕನ್ನಡ ವೈದ್ಯಸಾಹಿತ್ಯ ಪರಿಷತ್ತಿನಿಂದ ಈ ಕೆಲಸವಾಗಲಿ ಎಂದು ಹಾರೈಸಿ ನನ್ನ ಮಾತುಗಳನ್ನು ಮುಗಿಸುತ್ತಿದ್ದೆನೆ.

* * *