ಕಳೆದ ಶತಮಾನದ ಎಪ್ಪತ್ತರ ದಶಕದವರೆಗೂ ಆರೋಗ್ಯ ಎಂದರೆ ದೈಹಿಕ ಆರೋಗ್ಯ ಎಂಬ ಕಲ್ಪನೆ ಇತ್ತು. ದೇಹದೊಂದಿಗೆ ಮನಸ್ಸು ಇದೆ. ವ್ಯಕ್ತಿ ಸಮಾಜ ಜೀವಿ. ಅವನಿಗೆ ಭಾವನೆಗಳಿವೆ ಎಂಬ ಕಲ್ಪನೆ ಇದ್ದರೂ ಅವುಗಳ ಬಗ್ಗೆ ತಲೆಕೆಡಿಸಿ ಕೊಂಡವರಿರಲಿಲ್ಲವೆಂದು ಹೇಳಬಹುದು. ಮನೋರೋಗಕ್ಕೆ ಮದ್ದಿಲ್ಲ. ಮನೋರೋಗ ಎಂದರೆ ಹುಚ್ಚು, ಅದು ಅವಮಾನ. ಅರವತ್ತಕ್ಕೆ ಅರುಳೋ ಮರುಳೋ ಎನ್ನುವ ಉಕ್ತಿಗಳಿಂದ ಜನಸಾಮಾನ್ಯರ ನಂಬಿಕೆಗಳೂ ಸಹ ಮಾನಸಿಕ ಆರೋಗ್ಯವನ್ನು ಅಲಕ್ಷಿಸಲು ಕಾರಣವಿರಬಹುದು.

ಒಬ್ಬ ವೈದ್ಯ ವಿದ್ಯಾರ್ಥಿ ತನ್ನ ನಾಲ್ಕೂವರೆ ವರ್ಷದ ವೈದ್ಯಕೀಯ ಶಿಕ್ಷಣದಲ್ಲಿ ಕೇವಲ ಹದಿನೈದು ದಿನಗಳು ಮಾತ್ರ ಮನೋವೈದ್ಯಕೀಯದ ಬಗ್ಗೆ ಕಲಿಯಬೇಕಾಗಿತ್ತು. ಯಾರಾದರೂ ಮಾನಸಿಕ ಆರೋಗ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಹವಣಿಸಿದರೆ ಅವನು ದಡ್ಡ ಎಂಬ ಹಣೆ ಪಟ್ಟಿಯೂ ಬೀಳುತ್ತಿತ್ತು. ನಮ್ಮ ಪ್ರೊಫೆಸರರೂ ಅಷ್ಟೇ. ಯಾವುದಾದರೂ ಕಾಯಿಲೆಗೆ ದೈಹಿಕ ಕಾರಣಗಳು ಕಂಡುಬರದಿದ್ದಾಗ ಅದಕ್ಕೆ ‘ಇನ್ನಾಮಿನೇಟಂ’ ಅಥವಾ ಹೆಸರಿಲ್ಲದ ಕಾಯಿಲೆ ಎನ್ನುತ್ತಿದ್ದರೇ ವಿನಃ ಅದಕ್ಕೆ ಶರೀರದ ಹೊರತು ಬೇರೆ ಮನಸ್ಸು ಅದಕ್ಕೆ ಕಾರಣ ಇರಬಹುದೆಂಬುದರ ಕಲ್ಪನೆಯೇ ಇರಲಿಲ್ಲ.

ಒಂದು ನೈಜ ಉದಾಹರಣೆ ನನ್ನ ನೆನಪಿಗೆ ಬರುವುದನ್ನು ಓದುಗರೊಂದಿಗೆ ಹಂಚಿಕೊಳ್ಳಬೇಕೆನಿಸುತ್ತದೆ. ೧೯೬೮ ರಲ್ಲಿ ನಾನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೌಸ್ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದೆ. ಸುಮಾರು ಹನ್ನೆರಡು ವರ್ಷ ವಯಸ್ಸಿನ ವಿದ್ಯಾರ್ಥಿಯೊಬ್ಬನನ್ನು ಕರೆದುಕೊಂಡು ಬಂದರು. ಅವನು ಇದ್ದಕ್ಕಿದ್ದ ಹಾಗೆ ಎಚ್ಚರ ತಪ್ಪಿ ಬೀಳುತ್ತಿದ್ದ. ಅವನನ್ನು ಪರೀಕ್ಷಿಸಿದಾಗ ಅದು ಮೂರ್ಛೆರೋಗವಲ್ಲ ಎಂಬುದು ಖಾತ್ರಿಯಾಯಿತು. ಇದನ್ನು ನನ್ನ ಪ್ರೊಫೆಸರಿಗೆ ತಿಳಿಸಿದಾಗ ಅವರು ಒಂದು ಪ್ಲಾಸೆಬೋ ಕೊಟ್ಟು ಕಳಿಸು, ಸಾಕು ಮತ್ತೇನೂ ಮಾಡುವುದಕ್ಕಾಗುವುದಿಲ್ಲ ಮುಂದೆ ಬಂದರೆ ಪುನಃ ನೋಡೋಣ ಎಂದಾಗ ನನಗೆ ಅದು ಸರಿ ಎನಿಸಲಿಲ್ಲ. ಅವರು ಆಚೆ ಹೋದ ಮೇಲೆ ಅವರ ಕುಟುಂಬದ ಬಗ್ಗೆ ಕೆಲವು ವಿವರ ಕೇಳಿದೆ. ಹುಡುಗನ ಬಗ್ಗೆ ವಿವರ, ಅವನು ಒಬ್ಬನೇ ಮಗ. ತಂದೆತಾಯಿಗಳದ್ದು ಅತಿಯಾದ ನಿರೀಕ್ಷೆ. ಅವರು ಸರಿಯಾಗಿ ಕ್ಲಾಸಿನಲ್ಲಿ ಅಂಕಗಳನ್ನು ತೆಗೆದುಕೊಂಡಿರಲಿಲ್ಲ ಎಂದು ಅವನಿಗೆ ದಿನವೂ ಬೈಯ್ಗುಳ. ಕೆಲವೊಮ್ಮೆ ಹೊಡೆತವೂ ಬೀಳುತ್ತಿತ್ತು. ಇವೆಲ್ಲವನ್ನು ಕಲೆ ಹಾಕಿ ಆ ವಿದ್ಯಾರ್ಥಿಯ ತೊಂದರೆಗೆ ಇದೇ ಕಾರಣವಿರಬಹುದೆಂದು ಅವರಿಗೆ ಏನು ಮಾಡಬೇಕೆಂದು ಹೇಲಿದೆ.

“ಸುಮಾರು ಒಂದು ವಾರ ಕಳೆದಿರಬಹುದು. ಈ ಹುಡುಗ ತಂದೆ ತಾಯಿಯೊಂದಿಗೆ ಬಂದ. ನಗುತ್ತಿದ್ದ ತಂದೆ ಹೇಳಿದರು, ಸಾರ್, ನೀವು ಹೇಳಿದ ಹಾಗೆ ನನ್ನ ನಡವಳಿಕೆಗಳನ್ನು ಬದಲಾಯಿಸಿಕೊಂಡಿದ್ದೇವೆ. ಈಗ ಸ್ಕೂಲಿಗೆ ಸರಿಯಾಗಿ ಹೋಗುತ್ತಿದ್ದಾನೆ. ಹಾಗೆ ಏನೂ ಆಗಿಲ್ಲ. ಚೆನ್ನಾಗೇ ಓದುತ್ತಿದ್ದಾನೆ”, ಎಂದರು. ಆಗ ಮನಸ್ಸು ನಮ್ಮ ದೇಹದ ಮೇಲೆ, ನಡುವಳಿಕೆಯಲ್ಲಿ ಎಷ್ಟು ಮಹತ್ವದ ಪಾತ್ರ ವಹಿಸುತ್ತದೆ ಎಂಬುದರ ಅರಿವಾಯಿತು. ಇದನ್ನು ನನ್ನ ಪ್ರೊಫೆಸರ್‌ರಿಗೆ ಹೇಳಿದಾಗ ಅವರು ನಕ್ಕು ಬಿಟ್ಟರು. ಈ ಉದಾಹರಣೆಯನ್ನು ಹೇಳುವ ಇನ್ನೊಂದು ಕಾರಣ ಮನಸ್ಸಿನ ಆರೋಗ್ಯ ಕುರಿತು ಜನಸಾಮಾನ್ಯರಿಗೆ ಒಂದೇ ಅಲ್ಲ, ನಮ್ಮ ವೈದ್ಯ ಸಹೋದ್ಯೋಗಿಗಳಿಗೂ ಸಹ ಇದರ ಬಗ್ಗೆ ಲಕ್ಷ್ಯ ಇರಲಿಲ್ಲ ಎಂದೇ ಹೇಳಬಹುದು.

ಮಾನಸಿಕ ಆರೋಗ್ಯ ಸಾಹಿತ್ಯ

ಈಗ ಕಾಲ ಬದಲಾಗಿದೆ. ಮೊದಲನೆಯದಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಆದ ಸಂಶೋಧನೆಗಳು ಆರೋಗ್ಯ ಎಂದರೆ ಕಾಯಿಲೆರಹಿತ ವ್ಯಕ್ತಿಯಲ್ಲ. ಯಾರೂ ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಆರೋಗ್ಯವಾಗಿರುವರೋ ಅವರು ಆರೋಗ್ಯವಂತರು. ಅಂಥವರು ನೆಮ್ಮದಿಯ ಜೀವನ ನಡೆಸಬಲ್ಲರು ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತು. ಅದರಂತೆ ಜನಸಾಮಾನ್ಯರಿಗೆ ಈ ಸಂದೇಶವನ್ನು ಮೂಡಿಸಿ ಅವರನ್ನು ಎಚ್ಚರಗೊಳಿಸಿ ಉಪಯುಕ್ತವಾಗುವಂತೆ ಮಾಡುವುದೇ ವೈದ್ಯ ಸಾಹಿತ್ಯದ ಗುರಿ. ರೋಗಕ್ಕೆ ಮದ್ದು ನೀಡಿ ಗುಣಪಡಿಸುವುದಕ್ಕಿಂತ ರೋಗ ಬಾರದಂತೆ ತಡೆಯುವುದು (ರೋಗ ನಿರೋಧ) ಉತ್ತಮ ಎನ್ನುವ ಮತ್ತೊಂದು ಉಕ್ತಿ ಇಂಗ್ಲಿಷಿನಲ್ಲಿದೆ. ಈ ದಿಕ್ಕಿನಲ್ಲಿ ವೈದ್ಯ ಸಾಹಿತ್ಯವು ಜನಸಾಮಾನ್ಯರಲ್ಲಿ ಕಾಯಿಲೆಯ ಬಗ್ಗೆ ಅರಿವು ಮೂಡಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.

ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಸಾಹಿತ್ಯ ಕೃಷಿ ಪ್ರಾರಂಭವಾದದ್ದು ಡಾ| ರಾಶಿಯವರ ಮನಮಂಥನ ಮೊದಲ ಹೆಜ್ಜೆ ಎಂದರೆ ತಪ್ಪಾಗಲಾರದು. ಖ್ಯಾತ ಕಾದಂಬರಿಗಾತಿಯಾಗಿದ್ದ ದಿ. ತ್ರಿವೇಣಿಯವರ ಶರಪಂಜರ ಮತ್ತು ಬೆಕ್ಕಿನ ಕಣ್ಣು ಕೃತಿಗಳು ಮನೋವಿಜ್ಞಾನಾಧಾರಿತವಾಗಿದ್ದರು ಮಾನಸಿಕ ಕಾಯಿಲೆಗಳ ಕುರಿತು ಯಾವ ಮಾಹಿತಿಯನ್ನು ನೀಡಿರಲಿಲ್ಲ. ನಂತರದಲ್ಲಿ ಓದುಗರ ಗಮನಕ್ಕೆ ಬರುವವರು ಡಾ| ಸಿ. ಆರ್. ಚಂದ್ರಶೇಖರ್‌, ಇದುವರೆವಿಗೆ ಸುಮಾರು ನೂರ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಕನ್ನಡದಲ್ಲಿ ಬರೆದಿರುವ ಡಾ| ಸಿ.ಆರ್‌ಸಿಯವರು ಇಂಗ್ಲಿಷಿನಲ್ಲೂ ಸುಮಾರು ೧೫ ಕ್ಕಿಂತಲೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವರ ಕನ್ನಡದ ಕೆಲವು ಕೃತಿಗಳು ತೆಲಗು, ತಮಿಳು ಮತ್ತು ಗುಜರಾತಿ ಭಾಷೆಗಳಿಗೂ ತರ್ಜುಮೆಗೊಂಡಿವೆ ಎಂಬುದು ಗಮನಾರ್ಹ. ತಪ್ಪು ಕಲ್ಪನೆಗಳ ಅಂಶಗಳಿಂದ ಕೂಡಿದ್ದ ಮಾನಸಿಕ ಕಾಯಿಲೆಗಳ ಕುರಿತು ಅವರ ಕೃತಿಗಳು ಒಂದು ಸಾಮಾಜಿಕ ಕ್ರಾಂತಿಯನ್ನೇ ಮಾಡಿತು ಎಂದರೆ ಅದು ಅತಿಶಯೋಕ್ತಿಯಲ್ಲ. ಅವರು ತಾವು ಬರೆದದ್ದಷ್ಟೇ ಅಲ್ಲ. ಇತರ ಮನೋವೈದ್ಯರನ್ನೂ ಮನಶಾಸ್ತ್ರಜ್ಞರನ್ನು ಬರೆಯುವ ಹಾಗೆ ಪ್ರೋತ್ಸಾಹಿಸಿ ಮಾರ್ಗದರ್ಶನ ಮಾಡಿದವರು. ಮನಸ್ಸು ಎಂದರೆ ಏನೆಂದು ಸರಳ ಭಾಷೆಯಲ್ಲಿ ವಿವರಿಸಿ ಅದರ ಗುಣಲಕ್ಷಣಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಸಿದ ಮೊದಲಿಗರು.

ಮಾನಸಿಕ ಆರೋಗ್ಯ ಎಂದರೇನು? ಮಾನಸಿಕ ಕಾಯಿಲೆಗಳಾವುವು? ಅವುಗಳಿಗೆ ಚಿಕಿತ್ಸೆ ಹೇಗೆ? ಮಾನಸಿಕ ಆರೋಗ್ಯ ಕಾಪಾಡಿಕೊಂಡು ನೆಮ್ಮದಿಯ ಜೀವನ ಸಾಗಿಸುವ ಪರಿ ಹೇಗೆ? ಮನೋರೋಗದ ಕುರಿತಾದ ತಪ್ಪುಕಲ್ಪನೆಗಳು ಸಮುದಾಯ ಮಾನಸಿಕ ಆರೋಗ್ಯ. ಹೀಗೆ ಮಾನಸಿಕ ಆರೋಗ್ಯದ ವಿವಿಧ ಆಯಾಮಗಳ ಕುರಿತು ಜನಸಾಮಾನ್ಯರಿಗೆ ಮಾಹಿತಿ ಮುಟ್ಟಿಸುವಲ್ಲಿ ಅತ್ಯಂತ ಯಶಸ್ಸು ಮನೋವೈದ್ಯ ಸಾಹಿತಿ. ಈ ಎಲ್ಲ ದೃಷ್ಟಿಯಿಂದ ಡಾ| ಸಿ.ಆರ್.ಸಿಯವರನ್ನು ಮನೋವೈದ್ಯ ಸಾಹಿತ್ಯದ ಭೀಷ್ಮ ಎಂದು ಕರೆಯಲು ಸರ್ವ ರೀತಿಯಿಂದಲೂ ಯೋಗ್ಯರು ಎಂಬುದು ನನ್ನೊಬ್ಬನದಲ್ಲ, ಹಲವರ ಅನಿಸಿಕೆ. ಮನೋವೈದ್ಯ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿದ ಇತರ ಮನೋವೈದ್ಯರೆಂದರೆ ಡಾ| ಕೆ.ಎ. ಅಶೋಕ ಪೈ, ಡಾ| ಜಿ.ಎಸ್.ಪಾಲಾಕ್ಷ, ಡಾ| ಕೆ. ನಾಗರಾಜರಾವ್, ಡಾ| ಕೆ.ಎಸ್. ಪವಿತ್ರ, ಡಾ| ಮೀನಗುಂಡಿ ಸುಬ್ರಮಣ್ಯ , ಡಾ| ನಟರಾಜ್ (ಮನೋಶಾಸ್ತ್ರಜ್ಞರು) ಮತ್ತು ಡಾ| ಕೆ.ಆರ್. ಶ್ರೀಧರ್. ಸುಮಾರು ಹತ್ತು ಕೃತಿಗಳನ್ನು ಬರೆದಿರುವ ಡಾ| ಅಶೋಕ್ ಪೈಯವರ ಚಲನಚಿತ್ರ ದೂರದರ್ಶನ ಮಾಧ್ಯಮಗಳ ಮೂಲಕವೂ ಸಹ ಸಾರ್ವಜನಿಕರಿಗೆ ಮಾನಸಿಕ ಆರೋಗ್ಯದ ಮಾಹಿತಿ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಹಲವಾರು ವೈದ್ಯರುಗಳು ಆರೋಗ್ಯ ಕಾರ್ಯಕರ್ತರುಗಳು ಮನೋವೈದ್ಯಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಆದರೆ ಅವರುಗಳ ಬಗ್ಗೆ ನನಗೆ ಸರಿಯಾಗಿ ಮಾಹಿತಿ ಸಿಕ್ಕಿಲ್ಲವಾದ್ದರಿಂದ ಅವರ ಬಗ್ಗೆ ಉಲ್ಲೇಖ ಮಾಡದಿರುವುದಕ್ಕೆ ಕ್ಷಮೆ ಕೋರುವುದು ನನ್ನ ಕರ್ತವ್ಯ. ಇನ್ನು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಲಭ್ಯವಾದ ಕೃತಿಗಳ ಅವಲೋಕನ ಮಾಡೋಣ.

ಸುಮಾರು ನೂರಾ ಮೂವತ್ತಕ್ಕಿಂತ ಹೆಚ್ಚು ಕೃತಿಗಳನ್ನು ರಚಿಸಿರುವ ಡಾ| ಸಿ.ಆರ್.ಸಿಯವರು ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಗಾದೆಯಂತೆ ಮಾನಸಿಕ ಆರೋಗ್ಯದ ಎಲ್ಲ ಆಯಾಮಗಳನ್ನು ತಮ್ಮ ಕೃತಿಗಳಲ್ಲಿ ಜಾಲಾಡಿದ್ದಾರೆ. ಅವರು ಬರೆದ ಎಲ್ಲ ಕೃತಿಗಳನ್ನು ಕೂಲಂಕಷವಾಗಿ ಅವಲೋಕನ ಮಾಡುವುದು ಈಗ ಸಾಧ್ಯವಾಗಲಾರದು. ಅವರ ಕೃತಿಗಳ ಕುರಿತು ಒಂದು ಪಕ್ಷಿನೋಟ ಹರಿಸಲು ಮಾತ್ರ ಸಾಧ್ಯ. ಸುವರ್ಣಕರ್ನಾಟ ಸಂದರ್ಭದಲ್ಲಿ ಸುವರ್ಣ ಸಾಹಿತ್ಯ ಗ್ರಂಥಮಾಲೆಯು ಹೊರ ತಂದ ‘ಮನಸ್ಸೇ ಕುಶಲವೇ?’ ಎಂಬ ಅವರ ಕೃತಿ ಜನಸಾಮಾನ್ಯರಿಗೆ ಮಾಹಿತಿ ನೀಡುವ ಸಮಗ್ರವಾಗಿ ಮೂಡಿಬಂದ ಅತ್ಯುತ್ತಮ ಕೃತಿ ಎನ್ನಬಹುದು.

ಈ ಕೃತಿಯಲ್ಲಿ ಮನಸ್ಸೆಂದರೇನು, ಮಿದುಳಿನ ವಿವರಣೆಯಿಂದ ಪ್ರಾರಂಭಿಸಿ ಮಾನಸಿಕ ಕಾಯಿಲೆಗಳನ್ನು ಕುರಿತು ಸರಳ ವಿವರಣೆ ಕೊಟ್ಟಿದ್ದಾರೆ. ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಅನುಭವಿಸುವ ಮಾನಸಿಕ ಒತ್ತಡ ಮತ್ತು ಅದನ್ನು ನಿಭಾಯಿಸುವುಕೆಯಿಂದ ದಾಂಪತ್ಯ ವಿರಸ, ಏಯ್ಡ್ಸ್‌ಮತ್ತು ಮಾನಸಿಕ ಆರೋಗ್ಯ ಕುರಿತು ಬರೆದಿದ್ದಾರೆ. ಸಾಮಾನ್ಯ ಜನರಿಗೆ ತಿಳಿಯದ ಆದರೆ ಅಷ್ಟೇ ಮುಖ್ಯವಾದ ಮನೋರೋಗಿಗಳು ಮತ್ತು ಮಾನವ ಹಕ್ಕುಗಳು. ಎದ್ದು, ಮಾಟ ಮಂತ್ರ, ದೆವ್ವ, ಪೀಡೆ ಪಿಶಾಚಿಗಳ ಬಗ್ಗೆ ವಿವರಣೆ ನೀಡಿ ಅವುಗಳ ಉಪಯುಕ್ತತೆಯನ್ನು ತಿಳಿಸುತ್ತಾರೆ. ಕೃತಿಯ ಕೊನೆಯ ಅಧ್ಯಾಯಗಳಾದ ನಾರತರ ಪರದಾಟ ಮತ್ತು ಕೃಷ್ಣಾಯಣ ಎಂಬ ಹಾಸ್ಯಭರಿತ ಕಿರು ನಾಟಕಗಳು ಅತ್ಯಂತ ಮನೋಜ್ಞವಾಗಿ ಮೂಡಿ ಬಂದಿವೆ. ಮದ್ಯ ವ್ಯಸನದಿಂದ ಏನೇನು ಸಮಸ್ಯೆಗಳು ಉದ್ಭವಿಸಬಹುದು, ಮಾನಸಿಕ ರೋಗಗಳ ಬಗ್ಗೆ ಇರುವ ತಪ್ಪುಕಲ್ಪನೆಗಳನ್ನು ಸುಂದರವಾಗಿ ಪಾತ್ರ ರೂಪಗಳಲ್ಲಿ ಹೊರತರುತ್ತಾರೆ. ಇಂದು ವಿದ್ಯಾರ್ಥಿಗಳನ್ನು ವ್ಯಾಪಕವಾಗಿ ಕಾಡುತ್ತಿರುವ ಮರೆವು ಮತ್ತು ಪರೀಕ್ಷಾ ಭಯ, ಕನಸುಗಳು ಚಿತ್ರಕಲೆ ಸೃಜನಶೀಲತೆ ಮತ್ತು ಮನೋವಿಜ್ಞಾನ ಪುನರ್ಜನ್ಮ ಇವುಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುವಲ್ಲಿ ಅತ್ಯಂತ ಯಶಸ್ವಿ ಗ್ರಂಥ ಎನ್ನಬಹುದು.

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಬೆಂಗಳೂರು ಇವರು ಹೊರತಂದ ‘ಮನಸ್ಸು ಮತ್ತು ಮಾನಸಿಕ ಅಸ್ವಸ್ಥತೆ’ ಎಂಬ ಡಾ| ಸಿ.ಆರ್.ಸಿಯವರ ಕೃತಿ ಮತ್ತೊಂದು ಅಮೂಲ್ಯವಾದ ಪುಸ್ತಕ. ಮಾನಸಿಕ ಆರೋಗ್ಯದ ವಿವಿಧ ಆಯಾಮಗಳ ಕುರಿತು ಸಮಗ್ರ ಮಾಹಿತಿ ನೀಡುವ ಈ ಕೃತಿ ಎಲ್ಲರೂ ಓದಲೇಬೇಕಾದ ಕೃತಿ. ಅದು ಎಷ್ಟು ಜನಪ್ರಿಯವಾಗಿದೆಯೆಂದರೆ ಪ್ರಕಟವಾದ ಮೂರು ವರ್ಷಗಳಲ್ಲೇ ಮೂರು ಮುದ್ರಣಗಳನ್ನು ಕಂಡ ಕೃತಿ ಇದು. ಮಹಿಳೆಯರ ಮಾನಸಿಕ ಆರೋಗ್ಯ ಮತ್ತು ಹರಿಹರೆಯದವರ ಸಮಸ್ಯೆಗಳ ಕುರಿತು ಒಳ್ಳೆಯ ಮಾಹಿತಿ ನೀಡುವ ಕೃತಿ ಇದು. ಉತ್ತರ ಕರ್ನಾಟಕ ಭಾಗದಲ್ಲಿ ಕಾಲದಿಂದ ಕಾಲಕ್ಕೆ ಜನರನ್ನು ಕಾಡುವ ಬಾನಾಮತಿ, ಅತಿ ಮಾನವ ಶಕ್ತಿ ಹೀಗೆ ಸಮಾಜವನ್ನು ದಾರಿತಪ್ಪಿಸುವ ಸಮಸ್ಯೆಗಳಿಗೆ ಮನೋವೈಜ್ಞಾನಿಕವಾಗಿ ವಿವರಣೆ ನೀಡಿ ಇವುಗಳನ್ನು ನಿಭಾಯಿಸುವುದು ಹೇಗೆ ಎಂಬುದನ್ನು ತಿಳಿಸುತ್ತದೆ. ಇದು ಪ್ರತಿಯೊಂದು ಮನೆಯಲ್ಲಿರಬೇಕಾದ ಅಮೂಲ್ಯ ಕೃತಿ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿ- ನಮ್ಮ ನಿಮ್ಮ ಅಸಹಜ ನಡವಳಿಕೆಗಳಿಗೆ ಪರಿಹಾರವೇನು? ಎಂಬ ಪುಸ್ತಕ ಸಹಜವಾಗಿಯೇ ಕುತೂಹಲ ಹುಟ್ಟಿಸುವಂಥದ್ದು. ಅಲ್ಲಿ ಬರುವ ಜ್ವಲಂತ ಉದಾಹರಣೆಗಳೊಂದಿಗೆ ಸಮಾಜದಲ್ಲಿ ಅಸಹಜ ನಡವಳಿಕೆಗಳು ಹೇಗೆ ವಿವಿಧ ರೂಪ ತಾಳುತ್ತವೆ. ಅವುಗಳಿಂದ ಪರಸ್ಪರ ಸಂಬಂಧ ಹೇಗೆ ಕಲುಷಿತಗೊಳ್ಳುತ್ತವೆ. ಅದರಿಂದ ಎಂತಹ ಸಮಸ್ಯೆಗಳು ಉದ್ಭವಿಸುತ್ತವೆ ಮಾನಸಿಕ ಆರೋಗ್ಯ ಕಾಪಾಡಲು ಸರಳ ಸೂತ್ರಗಳು ಯಾವುವು ಎಂಬುದನ್ನು ಮನಸ್ಸಿಗೆ ತಟ್ಟುವಂತೆ ಓದುಗರ ಮುಂದಿಡುತ್ತಾರೆ. ನಾವು ಯಾರನ್ನಾದರೂ ಭೇಟಿ ಆದಾಗ ಚೆನ್ನಾಗಿದ್ದೀರಾ? ಆರಾಮವಿದ್ದೀರಾ? ಎಂದು ಕೇಳುವುದು ವಾಡಿಕೆ. ಅವರೂ ಅಷ್ಟೇ ಸಹಜವಾಗಿ ಓ ಆರಾಮಿದ್ದೇವೆ ಎನ್ನುತ್ತಾರೆ. ಎಷ್ಟೋ ವೇಳೆ ಇದು ಯಾಂತ್ರಿಕ ಉತ್ತರ ಎಂದು ಹೇಳಿದರೆ ಅದರಲ್ಲಿ ಸಂಶಯವಿಲ್ಲ. ನಮ್ಮಲ್ಲಿ ಕೆಲವರು ಸಲಹೆಗೆಂದು ಬರುತ್ತಾರೆ. ಸಹಜ ಕ್ಷೇಮ ಸಮಾಚಾರಗಳೊಂದಿಗೆ ನಿಮ್ಮ ತೊಂದರೆ ಏನು ಎಂದು ಕೇಳಿದಾಗ, ಎಲ್ಲವೂ ಚೆನ್ನಾಗಿದೆ, ನನಗೆ ಏನು ತೊಂದರೆ ಅಂತಲೆ ಗೊತ್ತಾಗಿಲ್ಲ ಎನ್ನುತ್ತಾರೆ. ನಿಮ್ಮ ಮನಸ್ಸಿಗೆ ನೆಮ್ಮದಿ ಇದೆ ಅಂತಾ ಅನ್ನಿಸುತ್ತಾ ಅಂತ ಕೇಳಿದರೆ ಅದೇ ನೋಡಿ ಡಾಕ್ಟ್ರೇ ನೆಮ್ಮದಿ ಅನ್ನೋದನ್ನ ದೀಪ ಹಚ್ಚಿ ಹುಡುಕಿದ್ರೂ ಸಿಗ್ತಾ ಇಲ್ಲ ಎನ್ನುತ್ತಾರೆ. ಎಲ್ಲರೂ ಬಯಸುವುದು ನೆಮ್ಮದಿಯ ಜೀವನ. ಆ ನೆಮ್ಮದಿಗೋಸ್ಕರ ಅವಿಶ್ರಾಂತ ದುಡಿಮೆ. ಕೆಲವರು ಮಾಡುವ ಸಾಧನೆ ಅದ್ಭುತ. ಅವರ ಸಾಧನೆಗಳಿಗೆ ಹೊಗಳಿಕೆಗಳು, ಪ್ರಶಸ್ತಿಗಳು ಲೆಕ್ಕವಿಲ್ಲದಷ್ಟು. ಅಂಥವರೊಬ್ಬರು ತಮ್ಮ ಪತ್ನಿಯನ್ನು ಸಲಹೆಗೆಂದು ಕರೆತಂದಿದ್ದರು. ಆಗ ಅವರು ಹೇಳಿದ “ಡಾಕ್ಟ್ರೇ ನಾನು ಬಹಳ ಕೆಲಸ ಮಾಡಿದ್ದೇನೆ. ಒಳ್ಳೆ ಹೆಸರು ಮಾಡಿದ್ದೇನೆ, ಆದ್ರೆ ಮನೆಗೆ ಬಂದ ಕೂಡಲೇ ನನ್ನ ನೆಮ್ಮದಿಯೆಲ್ಲಾ ಮಾಯ ಆಗಿಬಿಡುತ್ತೆ” ಎಂಬ ಮಾತುಗಳು ಬಹಳಷ್ಟು ಮಂದಿಯಲ್ಲಿ ವಾಸ್ತವಿಕಕ್ಕೆ ಹತ್ತಿರ ಎಂಬುದು ಪ್ರಶ್ನಾತೀತ. ಮನಸ್ಸೇ ನೀ ಪ್ರಶಾಂತವಾಗಿರು” ಮತ್ತು ಕಷ್ಟನಷ್ಟಗಳಿಗೆ ಅಂಜೊದೊಡೆಂತಯ್ಯಾ ಎಂಬ ಕೃತಿಗಳಲ್ಲಿ ಇವುಗಳ ಕುರಿತು ವಿಶ್ಲೇಷಿಸಿ ನೆಮ್ಮದಿ ಜೀವನಕ್ಕೆ ಅನುಸರಿಸಬೇಕಾದ ಮಾರ್ಗಗಳನ್ನು ಮನೋಜ್ಞವಾಗಿ ವಿವರಿಸಿದ್ದಾರೆ ಡಾ|| ಸಿ.ಆರ್.ಸಿ.

ಮೊದಲೇ ತಿಳಿಸಿದ ಹಾಗೆ ಡಾ| ಸಿ.ಆರ್.ಸಿ.ಯವರು ಮಾನಸಿಕ ಆರೋಗ್ಯಗಳ ಹಲವು ಮಜಲುಗಳನ್ನು ತಮ್ಮ ಕೃತಿಗಳ ಮೂಲಕ ಬಿಚ್ಚಿಟ್ಟಿದ್ದಾರೆ. ಅವರ ಅನನ್ಯ ನೆನಪು, ಕಥೆಗಳಾದ ಮನೋವ್ಯಥೆಗಳು, ಮಾನಸಿಕ ರೋಗಿಗಳ ವಾಸ್ತವಿಕ ಅನುಭವಗಳು ಅವರ ಬಗ್ಗೆ ಸಮಾಜ ನಡೆದುಕೊಳ್ಳುವ ಪರಿಯನ್ನು ಓದುಗರ ಮನಸ್ಸಿಗೆ ಮುಟ್ಟುವಂತೆ ವಿವರಿಸುತ್ತಾರೆ. ದೇವರು ಇರುವುದೇ? ಮೈಮೇಲೆ ಬರುವುದೇ? ಎಂಬ ಕೃತಿಯಲ್ಲಿ ಭೂತ ದೆವ್ವಗಳ ಕುರಿತು ಮನೋವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡುತ್ತಾ ಒಬ್ಬ ಮನೋರೋಗಿ ಹೇಗೆ ತಪ್ಪುಕಲ್ಪನೆಗಳಿಂದ ಬೇರೆಯವರಿಂದ ಅತ್ಯಂತ ಹೀನಾಯ ಶೋಷಣೆಗೆ ಒಳಗಾಗುತ್ತಾನೆ ಎಂಬ ವಾಸ್ತವಿಕ ಅಂಶಗಳನ್ನು ಓದುಗನ ಮುಂದಿಡುತ್ತಾರೆ.

ಇದು ಸ್ಪರ್ಧಾತ್ಮಕ ಯುಗ. ಪ್ರತಿಯೊಬ್ಬ ಪೋಷಕನೂ ತಮ್ಮ ಮಗು ಮೊದಲನೇ ರ‍್ಯಾಂಕ್ ಗಳಿಸಬೇಕೆಂದು ಹಂಬಲಿಸುತ್ತಾರೆ. ರೇಸಿನ ಕುದುರೆಯಂತೆ ತಮ್ಮ ಮಕ್ಕಳು ಓದಿ ಎಲ್ಲರನ್ನೂ ಮೀರಿಸಬೇಕೆಂದು ಮಕ್ಕಳ ಮೇಲೆ ಎಲ್ಲಿಲ್ಲದ ಒತ್ತಡ. ತಮ್ಮ ಮಗುವಿನ ಸಾಮರ್ಥ್ಯವನ್ನರಿಯದೇ ಅವರ ಮೇಲೆ ಒತ್ತಡ ತಂದಾಗ ಸಹಜವಾಗಿಯೇ ಮಾನಸಿಕ ಕ್ರಿಯಾಶೀಲತೆ ಕುಂಠಿತಗೊಳ್ಳುತ್ತದೆ. ಅಪಕ್ವವಾದ ಬಾಲ್ಯದ ಮತ್ತು ಹರೆಯದ ಮನಸ್ಸು ಪೋಷಕರ ಅನಿಸಿಕೆಗಳಿಗೆ ಸ್ಪಂದಿಸಲು ತೊಳಲಾಡುತ್ತದೆ. ಇದರ ಅಂತಿಮ ಫಲ ಕಲಿತಿದ್ದೆಲ್ಲ ಮರೆತಂತೆನಿಸಿ ವಿದ್ಯಾರ್ಥಿ ಹತಾಶನಾಗುತ್ತಾನೆ. ತನ್ನ ಬಗ್ಗೆ ನಕಾರಾತ್ಮಕ ಭಾವನೆಗಳನ್ನು ತಳೆಯಲು ಪ್ರಾರಂಭಿಸುತ್ತಾನೆ.

ಕೊನೆಯದಾಗಿ ಕಲಿಕೆಯಲ್ಲಿ ಹಿಂದುಳಿಕಯುವಿಕೆ. ಇಲ್ಲಿ ಪೋಷಕರಿಗೆ ಕಿವಿ ಮಾತು ಹೇಳುವ “ ನಿಮ್ಮ ಮಕ್ಕಳ ಬೆಳವಣಿಗೆ ಚೆನ್ನಾಗಿದೆಯೇ?” ಎಂಬ ಕೃತಿ ಹಾಗೂ ನೆನಪಿನ ಶಕ್ತಿ ಪರೀಕ್ಷಾ ನಿರ್ವಹಣೆ ಉತ್ತಮವಾಗಲು, ಜ್ಞಾಪಕಶಕ್ತಿ ವೃದ್ದಿ ಹೇಗೆ ಎಂಬ ಪುಸ್ತಕಗಳು ಈ ದಿಶೆಯಲ್ಲಿ ಒಳ್ಳೆಯ ಮಾಹಿತಿ ನೀಡುತ್ತವೆ. ಮಾನವನ ಜೀವಿತದಲ್ಲಿ ಹರೆಯ ಎಂಬುದು ಅತ್ಯಂತ ಪ್ರಮುಖ ಘಟ್ಟ. ಪ್ರತಿ ಕ್ಷಣಕ್ಕೂ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿ ಹೇಳಲಾರದ ಮಾನಸಿಕ ಒತ್ತಡಕ್ಕೆ ಒಳಗಾಗುವ ಹರೆಯದವರಿಗೆ ಪೋಷಕರ ಮಾರ್ಗದರ್ಶನ ಅಗತ್ಯ. ಹರೆಯದವರ ಸಮಸ್ಯೆಗಳು ಮತ್ತು ಅದರಲ್ಲಿ ಪೋಷಕರ ಜವಾಬ್ದಾರಿ ಏನು ಎಂಬುದನ್ನು ತಮ್ಮ ಕೆಲವು ಕೃತಿಗಳಲ್ಲಿ ಸವಿಸ್ತಾರವಾಗಿ ವಿವರಿಸಿದ್ದಾರೆ. ಇನ್ನುಳಿದ ಹಾಗೆ ಬುದ್ಧಿಮಾಂದ್ಯತೆ, ಮಹಿಳೆಯರ ಮಾನಸಿಕ ಕಾಯಿಲೆಗಳು ಮಧ್ಯ, ಮಾದಕವಸ್ತು ಕುರಿತು ಬರೆದ ಅವರ ಕೃತಿಗಳು ಜನಸಾಮಾನ್ಯರ ಅರಿವು ಮೂಡಿಸುವಲ್ಲಿ ಯಶಸ್ಸು ಕಂಡಿವೆ.

ಮಾನಸಿಕ ಆರೋಗ್ಯಕ್ಷೇತ್ರದಲ್ಲಿ ವ್ಯಾಪಕವಾಗಿ ತಮ್ಮನ್ನು ತೊಡಗಿಸಿಕೊಂಡ ಮತ್ತೊಬ್ಬ ವೈದ್ಯ ಡಾ. ಕೆ.ಎ. ಅಶೋಕ ಪೈ. ಮಾನಸ, ನಿಮ್ಮದು ಸಮಸ್ಯೆಯ ಮಗುವೇ? ಚಿತ್ತ ವಿಚಿತ್ರ, ಹಾಸ್ಯರಷ್ಮಿ ಹೀಗೆ ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಡಾ| ಅಶೋಕ ಪೈಯವರು ಮಾನಸಿಕ ಆರೋಗ್ಯದ ಹಲವು ಆಯಾಮಗಳನ್ನು ಓದುಗರ ಮುಂದಿಡುತ್ತಾರೆ. ತಮ್ಮ ಬರಹಗಳನ್ನು  ಚಲನಚಿತ್ರ ಮತ್ತು ದೂರದರ್ಶನ ಮಾಧ್ಯಮಗಳ ಮೂಲಕ ಪ್ರಚುರಪಡಿಸಿ ಜನಸಾಮಾನ್ಯರ ಮನದಲ್ಲಿ ಅಚ್ಚಳಿಯದಂತೆ ಮಾಡಿದ ಕೀರ್ತಿ ಅಶೋಕ ಪೈಯವರಿಗೆ ಸಲ್ಲುತ್ತದೆ. ‘ಪ್ರಥಮ ಉಷಾಕಿರಣ’ ಎಂಬ ಕೃತಿ ನಮ್ಮ ಧರ್ಮಾಚರಣೆ ತಲೆಮಾರಿನ ಅಂತರಕ್ಕೂ ಮಾನಸಿಕ ಆರೋಗ್ಯಕ್ಕೂ ಇರುವ, ನಂಟನ್ನು ಸಾಬೀತುಪಡಿಸುತ್ತದೆ.

ಮಕ್ಕಳ ಮನೋಲೋಕ. ಮನ ಮಂದಿರ ಮಾನಸಿಕ ಒತ್ತಡ ಹರೆಯದವರ ಮನೋರಂಗ, ಸಂಸಾರ ಸಾರ ಹೀಗೆ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಹತ್ತು ಕೃತಿಗಳನ್ನು ರಚಿಸಿದವರು ಡಾ| ಕೆ.ಆರ್. ಶ್ರೀಧರ್. ಮಾನಸಿಕ ಆರೋಗ್ಯದ ಬೇರೆ ಬೇರೆ ಆಯಾಮಗಳನ್ನು ಕುರಿತು ಬರೆದ ಕೃತಿಗಳು ಓದುಗರ ಮನಸ್ಸನ್ನು ತಟ್ಟುವಲ್ಲಿ ಯಶಸ್ವಿಯಾಗಿವೆ. ಹರೆಯದವರ ಮನೋರಂಗವು ಹದಿಹರೆಯದವರ ಸಮಸ್ಯೆಗಳನ್ನು ಒತ್ತಿ ಹೇಳುತ್ತದೆ. ಡಾ| ಕೆ.ಎಸ್. ಪವಿತ್ರ ಅವರ ‘ಮಗು ಮನಸ್ಸು’ ಎಂಬ ಕೃತಿ ಮಕ್ಕಳ ಬೆಳವಣಿಗೆ ಕುರಿತು ತಿಳಿಸುತ್ತದೆ ಮಾನಸಿಕ ಆರೋಗ್ಯ ಸಾಹಿತ್ಯಕ್ಕೆ ಡಾ| ಜಿ.ಎಸ್. ಪಾಲಾಕ್ಷ ಡಾ| ಕೆ. ನಾಗರಾಜರಾವ್ ಮತ್ತು ಡಾ| ಧ್ರುವಕುಮಾರ್ ಅವರ ಕೊಡುಗೆ ಕೂಡ ಅಪಾರ. ನನಗೆ ಅವರೆಲ್ಲರ ಕೃತಿಗಳು ಸಕಾಲದಲ್ಲಿ ದೊರೆಯದಿದ್ದರಿಂದ ಅವುಗಳ ಅವಲೋಕನ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಕ್ಷಮೆ ಕೋರುವುದು ನನ್ನ ಕರ್ತವ್ಯವೆಂದು ಭಾವಿಸುತ್ತೇನೆ.

ಬಹುದೂರ ಸಾಗಬೇಕಾಗಿದೆ

ಮಾನಸಿಕ ಆರೋಗ್ಯ ಕ್ಷೇತ್ರವು ಒಂದು ರೀತಿಯಲ್ಲಿ ಪುರಾತನ ವಿಜ್ಞಾನಕ್ಷೇತ್ರಗಳಲ್ಲೊಂದು. ಆದರೆ ಮತ್ತೊಂದು ರೀತಿಯಲ್ಲಿ ಅದು ಇನ್ನೂ ಕಿಶೋರಾವಸ್ಥೆಯಲ್ಲಿದೆ ಎನ್ನಬಹುದು. ಪುರಾತನ ಕ್ಷೇತ್ರಗಳಲ್ಲೊಂದು ಎಂಬ ದೃಷ್ಟಿಯಲ್ಲಿ ನಮ್ಮ ಪೂರ್ವಿಕರು ಮನಸ್ಸೆಂದರೇನು ನಮ್ಮ ವ್ಯಕ್ತಿತ್ವ, ವ್ಯಕ್ತಿತ್ವ ವಿಕಸನ ಮತ್ತು ಮಕ್ಕಳನ್ನು ಬೆಳೆಸುವ ಬಗ್ಗೆ ವ್ಯಾಖ್ಯಾನಿಸಿದ್ದಾರೆ. ಯಾವುದು ಹಿತ, ಯಾವುದು ಅಹಿತ ಎಂಬುದನ್ನು ಸಾರಿ ಸಾರಿ ಹೇಳಿದ್ದಾರೆ. ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದನ್ನು ಅವರು ಹಿಂದೆಯೇ ಮನಗಂಡಿದ್ದರು ಎಂಬುದಕ್ಕೆ ಸಂಸ್ಕೃತದ ಒಂದು ಶ್ಲೋಕವನ್ನು ಉದಾಹರಿಸಿದರೆ ಓದುಗರಿಗೆ ಮನದಟ್ಟಾಗಬಹುದು.

ಪಾಲಯೇತ್ ಪಂಚವರ್ಷಾಣಿ ದಶವರ್ಷಾಣಿ ತಾಡಯೇತ್ ‘ಪ್ರಾಪ್ತೇಷು ಶೋಢಶೇ ಏರ್ಷೇ ಪುತ್ತಮಿತ್ರವದಾಚರೇತ್|| ಎಂಬ ಶ್ಲೋಕದಲ್ಲಿ ಯಾವ ಯಾವ ಹಂತದಲ್ಲಿ ಮಕ್ಕಳೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಬಹಳ ವಿಧಿವತ್ತಾಗಿ ವಿವರಿಸಿದ್ದಾರೆ. ಭಾವನೆಗಳು ನಮ್ಮ ಮನಸ್ಸಿನ ನೆಮ್ಮದಿಯನ್ನು ಕಾಪಾಡುವಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಅರಿಷಡ್ವರ್ಗಗಳ ವ್ಯಾಖ್ಯಾನದಿಂದ ನಮಗೆ ತಿಳಿಸಿಕೊಟ್ಟಿದ್ದಾರೆ.

ವೈಜ್ಞಾನಿಕ ಅವಿಷ್ಕಾರದ ಹಿನ್ನೆಲೆಯಲ್ಲಿ ಮಾನಸಿಕ ಆರೋಗ್ಯ ಕ್ಷೇತ್ರವು ಒಂದು ನಿರ್ದಿಷ್ಟ ಆಯಾಮದಲ್ಲಿ ತಲವೂರಿದೆ. ನಾಗರೀಕತೆ ಮುಂದುವರೆದಂತೆ ಸ್ಪರ್ಧೆ ಹೆಚ್ಚುತ್ತದೆ ಆಸೆ, ಆಕಾಂಕ್ಷೆಗಳೂ ಮಹದತ್ತರ ಬೆಳೆಯುತ್ತವೆ. ಹೊಸ ಹೊಸ ಆವಿಷ್ಕಾಋಗಳು ಹೊಸ ಹೊಸ ಮಾನಸಿಕ ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಾನವ ಯಂತ್ರದ ಗೊಂಬೆಯಾಗುತ್ತಿದ್ದಾನೆ. ನಿರಂತರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾನೆ. ಮಾನವೀಯ ಸಂಬಂಧದ ಕೊರತೆ ಎಲ್ಲೆಲ್ಲೂ ಎದ್ದು ಕಾಣುತ್ತಿದೆ. ಕೌಟುಂಬಿಕ ಸಾಮರಸ್ಯವನ್ನು ಅರಸುತ್ತಾ ಸಾಗಬೇಕು. ತನ್ನ ಒತ್ತಡವನ್ನು ನೀಗಲು ತಾತ್ಕಾಲಿಕವಾಗಿಯಾದರೂ ಮನಸ್ಸಿಗೆ ಮುದ ನೀಡುವ ವಸ್ತುಗಳಿಗೆ ಮೊರೆ ಹೋಗಲು ನಿರ್ಧರಿಸುತ್ತಾನೆ. ಅದರ ಅಂತಿಮ ಫಲ ಮದ್ಯ ಮಾದಕ ವಸ್ತುಗಳ ಸೇವನೆ. ಕ್ರಮೇಣ ಇವುಗಳ ಚಟಕ್ಕೆ ದಾಸನಾಗುತ್ತಿದ್ದಾನೆ. ಆಧುನಿಕ ಸಮಾಜದಲ್ಲಿ ಕಾಡ್ಗಿಚ್ಚಿನಂತೆ ಇಂದು ಮದ್ಯ ಮಾದಕ ವಸ್ತುಗಳ ಚಟವು ನಮ್ಮ ಸಮಾಜದಲ್ಲಿ ಹರಡಿಕೊಳ್ಳುತ್ತಿದೆ. ಹರೆಯದವನ್ನು ಬಲಿ ತೆಗೆದುಕೊಳ್ಳುವ ಈ ಕ್ಷೇತ್ರದಲ್ಲಿ ಜನ ಸಾಮಾನ್ಯರಿಗೆ ಸರಿಯಾದ ಮಾಹಿತಿ ಒದಗಿಸುವ ಮನೋರೋಗ್ಯ ಸಾಹಿತ್ಯದ ಅವಶ್ಯವಿದೆ.

ವ್ಯಕ್ತಿತ್ವ ದೋಷಗಳು ಇಂದು ವ್ಯಾಪಾಕವಾಗಿ ಕಂಡುಬರುವ ಮತ್ತೊಂದು ಮಾನಸಿಕ ಕಾಯಿಲೆ. ವ್ಯಕ್ತಿತ್ವ ನಿರ್ಮಾಣವು ಬಾಲ್ಯದಲ್ಲಿ ಆರಂಭಗೊಂಡು ಕಿಶೋರಾವಸ್ಥೆಯಲ್ಲಿ ಗಟ್ಟಿತನವನ್ನು ಕಂಡುಕೊಳ್ಳುತ್ತದೆ. ವ್ಯಕ್ತಿತ್ವ ನಿರ್ಮಾಣಕ್ಕೆ ಸರಿಯಾದ ಅಡಿಪಾಯ ಹಾಕುವ ಅವಧಿ ಇದು. ವ್ಯಕ್ತಿತ್ವ ನಿರ್ಮಾಣಕ್ಕೆ ಅವಶ್ಯಕವಾದ ಎರಡು ಪ್ರಮುಖ ಅಂಶಗಳೆಂದರೆ ವಂಶವಾಹಿನಿ ಮತ್ತು ವ್ಯಕ್ತಿಯ ಪರಿಸರ. ಆರೋಗ್ಯಕರ ಕೌಟುಂಬಿಕ ಪರಿಸರ, ಪೋಷಕರ ಮಾರ್ಗದರ್ಶನ, ಆತ್ಮೀಯ ಸ್ನೇಹಿತರು ಹೀಗೆ ಹಲವು ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ.

ವ್ಯಕ್ತಿತ್ವ ನಿರ್ಮಾಣದಲ್ಲಿ ಕೆಲವು ಅಪರವಾದಗಳನ್ನುಳಿದು ಪರಿಸರವು ವಂಶವಾಹಿನಿಗಿಂತ ಮಹತ್ತರ ಪಾತ್ರ ವಹಿಸುತ್ತದೆ ಎಂಬುದು ಈಗ ಸಾಬೀತಾದ ಅಂಶ. ವಂಶವಾಹನಿಯಿಂದುಟಾದ ವ್ಯಕ್ತಿತ್ವದ ಅವಗುಣಗಳನ್ನು ಆರೋಗ್ಯಕರ ಪರಿಸರವು ತಿದ್ದಬಲ್ಲದು. ಕಲುಷಿತ ವಾತಾವರಣವು ವಂಶವಾಹಿನಿಯಿಂದ ಬಂದ ಒಳ್ಳೆಯ ಗುಣಗಳನ್ನು ಕೆಡಿಸಬಲ್ಲದು. ಇದನ್ನು ಜನಸಾಮಾನ್ಯರಿಗೆ ತಿಳಿಸುವುದು ಅವಶ್ಯ. ವ್ಯಕ್ತಿತ್ವ  ದೋಷಗಳು ಅವುಗಳನ್ನು ತಡೆಗಟ್ಟಲು ಪೋಷಕರು ವಹಿಸಬೇಕಾದ ಜವಾಬ್ದಾರಿ ಕುರಿತು ಅರಿವು ಮೂಡಿಸುವ ಸಾಹಿತ್ಯ ಇಂದು ವಿಫುಲವಾಗಿ ದೊರಕಬೇಕು.

ಮೇರಿ ವಿಗ್ನಾನ್ ಮಾಸ್ಕೆರ‍್ನಾಹಸ್ ಬರೆದು ಶ್ರೀ ಶಿವಣ್ಣನವರು ಕನ್ನಡಕ್ಕೆ ಅನುವಾದಿಸಿದ ‘ಕೌಟುಂಬಿಕ ಜೀವನ ಶಿಕ್ಷಣ ಶಿಕ್ಷಣ ಮೌಲ್ಯ’ ಎಂಬ ಕೃತಿಯನ್ನು ಕರ್ನಾಟಕ ಸರ್ಕಾರ ಹೊರತಂದಿದೆ. ಇದನ್ನು ಅವಲೋಕಿಸಿದಾಗ ವ್ಯಕ್ತಿತ್ವ ನಿರ್ಮಾಣದಲ್ಲಿ ಕೌಟುಂಬಿಕ ಜೀವನ ಶಿಕ್ಷಣ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ನಮಗೆ ತಿಳಿಯುತ್ತದೆ. ಮನೋವಿಜ್ಞಾನಿಗಳು ಆರೋಗ್ಯಕರ ವ್ಯಕ್ತಿತ್ವದ ಕುರಿತು ವ್ಯಾಖ್ಯಾನಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯಕರ ವ್ಯಕ್ತಿತ್ವ ನಿರ್ಮಾಣಕ್ಕೆ ದಶ ಸೂತ್ರಗಳನ್ನು ರಚಿಸಿ ಅವುಗಳಿಗೆ “ಜೀವನ ಕೌಶಲಗಳು” (Life skills) ಎಂದು ಹೆಸರಿಸಿದೆ. ಇವುಗಳನ್ನು ಸಾರ್ವಜನಿಕರಿಗೆ ಉಣಬಡಿಸಬೇಕು. ವ್ಯಕ್ತಿತ್ವ ದೋಷಗಳನ್ನು ಪ್ರಾರಂಭದಲ್ಲೇ ಅಂದರೆ ಬಾಲ್ಯದಲ್ಲೇ ಗುರ್ತಿಸಿ ಅದನ್ನು ಸರಿಪಡಿಸಲು ತೆಗೆದುಕೊಳ್ಳಬೇಕಾದ ಕ್ರಮಗಳು ಜನಸಾಮಾನ್ಯರಿಗೆ ಅರಿವಿಗೆ ಬರಬೇಕು.

‘ತೊಟ್ಟಿಲನ್ನು ತೂಗುವ ಕೈಗಳು ವಿಶ್ವವನ್ನೇ ಆಳಬಹುದು’ ಎಂಬ ನಾಣ್ನುಡಿ ಒಂದಿದೆ. ಮಾನಸಿಕವಾಗಿ ನೆಮ್ಮದಿಯಿಂದಿರುವ ಮಹಿಳೆ ಸಮಾಜದ ನೆಮ್ಮದಿಗೂ ಮತ್ತು ಅಭಿವೃದ್ಧಿಗೂ ಮಹತ್ತರ ಕೊಡುಗೆ ನೀಡಬಲ್ಲಳು. ಈ ದಿಶೆಯಲ್ಲಿ ಮಹಿಳೆಯರ ಮಾನಸಿಕ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿಗಳು ಹೊರಬರುತ್ತಿವೆ. ಋತುಮತಿಯಾಗುವಿಕೆ, ಋತುಚಕ್ರ, ಋತುಬಂಧ, ಗರ್ಭಧರಿಸುವಿಕೆ, ಗರ್ಭ ಅಳಿಯುವಿಕೆ, ಹೆರಿಗೆ ಹೀಗೆ ಮಾನಸಿಕ ಒತ್ತಡ ತರುವ ಸಂದರ್ಭಗಳು ಮಹಿಳೆಗೆ ಮೀಸಲು. ಮಹಿಳೆ ಮನೋಸ್ವಾಸ್ಥ್ಯವು ಮಕ್ಕಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದೇ ಕಾರಣದಿಂದ ಮಹಿಳೆಯರ ಮಾನಸಿಕ ಆರೋಗ್ಯದ ಕಡೆ ಗಮನ ನೀಡುವುದು ಪ್ರತಿಯೊಬ್ಬರ ಆದ್ಯಕರ್ತವ್ಯ.

ಮಹಿಳೆಯರು ಮತ್ತು ಮಕ್ಕಳ ಮಾನಸಿಕ ಸ್ವಾಸ್ಥ್ಯ ಕುರಿತು ಡಾ| ಸಿ.ಆರ್., ಸಿ. ಶ್ರೀಧರ್, ಡಾ. ಕೆ.ಎಸ್. ಪವಿತ್ರ ಹಾಗೂ ಇನ್ನಿತರರು ಬರೆದಿದ್ದಾರೆ ನಿಜ. ಹೆಚ್ಚುತ್ತಿರುವ ಕೌಟುಂಬಿಕ ಹಿಂಸಾಚಾರ, ಅತ್ಯಾಚಾರದ ಘಟನೆಗಳು ಮಕ್ಕಳ ಶೋಷಣೆ ಬದಲಾದ ಜೀವನ ಶೈಲಿಯಿಂದ ಅಧಿಕವಾಗುವ ಮಾನಸಿಕ ಒತ್ತಡ ಇವು ಮಹಿಳೆಯರನ್ನು ಅನುಭವಿಸಲಾಗದ ಆತಂಕಕ್ಕೀಡು ಮಾಡುತ್ತವೆ. ಹೆಚ್ಚುತ್ತಿರುವ ಬಂಜೆತನ ವರದಕ್ಷಿಣೆ ಸಾವುಗಳು ಮಾನಸಿಕ ಆರೋಗ್ಯವನ್ನು ಕೆಡಿಸುತ್ತದೆ ಇವು ಮಹಿಳೆಯನ್ನು ನಿರಂತರವಾದ ಒತ್ತಡಕ್ಕೆ ಈಡು ಮಾಡುತ್ತವೆ. ಇವುಗಳ ಕುರಿತು ಅರಿವು ಮೂಡಿಸಿ ಅವುಗಳನ್ನು ತಡೆಗಟ್ಟಲು ನಿಭಾಯಿಸಲು ಹೊಸ ಹೊಸ ಕೃತಿಗಳು ಹೊರಬರಬೇಕಾಗಿದೆ.

ತೀವ್ರ ತರದ ಮನೋರೋಗದಿಂದ ಬಳಲುವವರನ್ನು ಚಿಕಿತ್ಸೆಯ ನಂತರ ಎಲ್ಲರಂತೆ ಬಾಲು ಅನುವು ಮಾಡಿಕೊಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ. ಅವರಿಗೂ ನೆಮ್ಮದಿಯ ಜೀವನ ನಡೆಸುವ ಹಕ್ಕು ಇದೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು, ಅವರು ನೆಮ್ಮದಿಯ ಬದುಕು ಸಾಗಿಸಲು ಪುನಶ್ಚೇತನ ಕಾರ್ಯಕ್ರಮಗಳ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸುವ ಸಾಹಿತ್ಯ ಅತ್ಯವಶ್ಯ. ಈ ದಿಶೆಯಲ್ಲಿ ಕೆಲಸ ಆಗಬೇಕಿದೆ. ಅಂಥವರಿಗೆ ಮನೋರೋಗಿಗಳು ಎಂಬ ಹಣೆಪಟ್ಟಿ ಹಚ್ಚದೇ, ಅವರನ್ನು ವಕ್ರ ದೃಷ್ಟಿಯಿಂದ ನೋಡದೇ ಅವರಿಗಿರುವ ಇತಿಮಿತಿಗಳಲ್ಲಿ ಅವರು ನೆಮ್ಮದಿಯ ಬದುಕು ನಡೆಸಲು ಅನುವು ಮಾಡಿಕೊಡಬೇಕು. ಈ ದಿಕ್ಕಿನಲ್ಲಿ  ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ವಾಸ್ತವಿಕ ಅರಿವನ್ನು ಮೂಡಿಸುವ ಲೇಖನಗಳು ಹೊರಬರಬೇಕಿದೆ. ಅವುಗಳ ಕುರಿತು ಕಾರ್ಯಾಗಾರರನ್ನು ನಡೆಸಿ ಅದರಲ್ಲಿ ಜನಸಾಮಾನ್ಯರ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಿದಾಗ ಉಪಯೋಗವಾಗಬಹುದು.

ಲೈಂಗಿಕ ಆರೋಗ್ಯ ಸಾಹಿತ್ಯ

ಹಸಿವು ನೀರಡಿಕೆಗಳಂತೆ ಲೈಂಗಿಕತೆಯು ಮಾನವನ ಹುಟ್ಟಾಸೆಗಳಲ್ಲೊಂದು. ಒಬ್ಬ ವ್ಯಕ್ತಿಯ ಜೀವನ ಪರಿಪೂರ್ಣವಾಗಬೇಕಾದರೆ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಕ್ಷೇತ್ರಗಳಲ್ಲಿ ಸಾಧನೆ ಮಾಡುವುದು ಅವಶ್ಯ ಎಂದು ಪುರಾಣಗಳು ಹೇಳುತ್ತವೆ. ನಮ್ಮ ಪೂರ್ವಜರು ಲೈಂಗಿಕತೆ ಬಗ್ಗೆ ಆಳವಾದ ಚಿಂತನೆ ನಡೆಸಿ ಅದರ ಮಹತ್ವವನ್ನು ಅರಿತಿದ್ದರು. ವಿವಾಹದ ವೇಳೆ ಪತಿಯು ಪತ್ನಿಯನ್ನು ಸ್ವೀಕರಿಸುವಾಗ ವಧುವಿನ ತಂದೆಗೆ ‘ಧರ್ಮೇಚ, ಅರ್ಥೇಚ, ಕಾಮೇಚ, ನಾತಿಚರಾಮಿ’, ಎಂದು ವರನು ಪ್ರಮಾಣೀಕರಿಸುತ್ತಾನೆ. ಮಾನವನ ಜೀವಿತದಲ್ಲಿ ಲೈಂಗಿಕತೆ ಹಾಸುಹೊಕ್ಕಾಗಿದೆ ಎಂದರೆ ಅದು ಅತಿಶಯೋಕ್ತಿಯಾಗಲಾರದು. ಸಂತಾನೋತ್ಪತ್ತಿಗೆ ಲೈಂಗಿಕತೆ ಅವಶ್ಯ. ಸಮರಸ ದಾಂಪತ್ಯ ಮಾನಸಿಕ ನೆಮ್ಮದಿಯ ಜೀವನ ನಡೆಸಲು ಆರೋಗ್ಯಕರ ಲೈಂಗಿಕತೆ ಮಹತ್ವದ ಪಾತ್ರ ವಹಿಸುತ್ತದೆ. ಇಷ್ಟು ಮಹತ್ವವುಳ್ಳ ಕ್ಷೇತ್ರವನ್ನು ಕಾಲಕ್ರಮೇಣ ಒಂದು ಮಡಿವಂತಿಕೆಯ ವಿಷಯವನ್ನಾಗಿ ಮಾಡಲಾದ ಕಾರಣವಾದರೂ ಏನು? ಎಂಬುದು ಯಕ್ಷಪ್ರಶ್ನೆಯೇ ಸರಿ. ಇದು ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಕ್ರಿಶ್ಚಿಯನ್ನರು ಪಾರ್ಸಿ, ಮುಸ್ಲಿಂ, ಜನಾಂಗದಲ್ಲಿಯೂ ಸಹ ಲೈಂಗಿಕತೆ ಬಗ್ಗೆ ಮಡಿವಂತಿಕೆಯನ್ನು ಅನುಸರಿಸುತ್ತಾ ಬಂದಿದ್ದಾರೆ.

ಮಾನಸಿಕ ಒತ್ತಡವನ್ನು ನಿಭಾಯಿಸಿ ನೆಮ್ಮದಿಯ ಜೀವನ ನಡೆಸಲು ಕಾಮ ಕ್ರೋಧ, ಲೋಭ, ಮೋಹ, ಮದ ಮತ್ತು ಮಾತ್ಸರ್ಯ ಎಂಬ ಅರಿಷಡ್ವರ್ಗಗಳನ್ನು ತನ್ನ ಹಿಡತದಲ್ಲಿಟ್ಟುಕೊಳ್ಳಬೇಕೆಂದು ಪುರಾಣಗಳು ಹೇಳುತ್ತವೆ. ಜೀವನದ ಯಾವ ಅಂಗವನ್ನು ತೆಗೆದುಕೊಂಡರೂ ಅಲ್ಲಿ ಕಾಮ ಅರ್ಥಾತ್ ಲೈಂಗಿಕತೆಗೆ ಪ್ರಮುಖ ಸ್ಥಾನವಿದೆ. ಇಂತಹ ಪ್ರಮುಖವಾದ ಕ್ಷೇತ್ರದ ಕುರಿತು ಜನಸಾಮಾನ್ಯರಲ್ಲಿ ಅಜ್ಞಾನವೊಂದೇ ಅಲ್ಲ ವ್ಯಾಪಕವಾದ ತಪ್ಪುಕಲ್ಪನೆಗಳಿವೆ. ಇದರಿಂದ ಆಗುವ ಅಪಾಯಗಳು ಕೆಲವೊಮ್ಮೆ ಅತ್ಯಂತ ಭೀಕರ ಪರಿಣಾಮಗಳು ವ್ಯಕ್ತಿಯ ಮೇಲಷ್ಟೇ ಅಲ್ಲ, ಸಮಾಜದ ಮೇಲೂ ಆಗುವುದನ್ನು ನಾವು ಕಾಣಬಹುದು. ಉದಾಹರಣೆಗೆ ಇಂದು ನಾವು ಕಾಣುವ ಜನಸಂಖ್ಯಾ ಸ್ಫೋಟವು ಮಕ್ಕಳನ್ನು ದೇವರು ಕೊಡುತ್ತಾನೆ ಎಂಬ ತಪ್ಪುತಿಳಿವಳಿಕೆಯಿಂದ ಡಜನ್ ಗಟ್ಟಲೇ ಮಕ್ಕಳನ್ನು ಹೆರುವವರು ಇಂದೂ ಇದ್ದಾರೆ.

ಲೈಂಗಿಕತೆ ಬಗ್ಗೆ ಇರುವ ಮಡಿವಂತಿಕೆ ಕುರಿತು ಮಲೆನಾಡಿನ ಹಳ್ಳಿಗಳಲ್ಲಿ ಆಚರಿಸುತ್ತಿದ್ದ ಪದ್ಧತಿ ಕುತೂಹಲಕರ. ವಿವಾಹದ ನಂತರ ಪತಿ ಪತ್ನಿಯರು ಒಂದು ಕೋಣೆಯಲ್ಲಿ ಮಲಗುವುದು ಸಹಜ. ಆದರೆ ಅವರು ಹಾಗೆ ಮಲಗುವುದು ರಾತ್ರಿ ಊಟದ ನಂತರವೇ. ವಿನಃ ಹಗಲು ಹೊತ್ತು ಪತಿ ಮಾತ್ರ ಕೋಣೆಯೊಳಗೆ ಮಲಗಲು ಅವಕಾಶವಿತ್ತು. ರಾತ್ರಿ ವೇಳೆ ಗಂಡ ಮಂಚದ ಮೇಲೆ ಮಲಗುತ್ತಿದ್ದ. ಹೆಂಡತಿ ಕೆಳಗೆ ಹಾಸಿಗೆ ಹಾಕಿಕೊಂಡು ಮಲಗುವುದು ವಾಡಿಕೆಯಾಗಿತ್ತು. ಸಂಭೋಗದ ವೇಳೆ ಮಾತ್ರ ಅವಳು ಪತಿಯೊಡನೆ ಮಂಚದ ಮೇಲೆ ಮಲಗುತ್ತಿದ್ದಳು. ಹಾಗೆ ಗಂಡ ಹೆಂಡತಿ ಒಂದೇ ಹಾಸಿಗೆಯಲ್ಲಿ ಮಲಗಿದರೆ, ಹಗಲು ಹೊತ್ತು ಹೆಂಡತಿ ಕೋಣೆಯೊಳಗೆ ಮಲಗಿದರೆ ಅದನ್ನು ಜನ ಟೀಕಿಸುತ್ತಿದ್ದರು. ನಗುತ್ತಿದ್ದರು. ಹೊರಗಡೆ ಹೋಗುವಾಗಲೂ ಅಷ್ಟೇ. ಗಂಡ ಹೆಂಡತಿ ಒಟ್ಟಿಗೇ ಹೋಗುವ ಹಾಗಿರಲಿಲ್ಲ. ಗಂಡ ಮುಂದೆ ನಡೆದರೆ ಹೆಂಡತಿ ಸ್ವಲ್ಪ ದೂರ ಹೋಗುತ್ತಿದ್ದಳು. ಕ್ರಿ.ಪೂ. ನಾಲ್ಕನೇ ಶತಮಾನದ  ಹಿಂದೆಯೇ ವಾತ್ಸಾಯನನು ಕಾಮಶಾಸ್ತ್ರವನ್ನು ಬರೆದುದೇನೋ ಹೌದು. ಅದು ಒಂದು ಕೃತಿಯಾಗಿ ಉಳಿಯಿತೇ ವಿನಃ, ಜನಸಾಮಾನ್ಯರಲ್ಲಿ ಇರುವ ಮಡಿವಂತಿಕೆ ಹೋಗಲಾಡಿಸಲು ವಿಫಲವಾಯಿತು ಎನ್ನಬಹುದು. ಮನೋವೈಜ್ಞಾನಿಕವಾಗಿ ಲೈಂಗಿಕತೆಗೂ ನಮ್ಮ ಜೀವನಕ್ಕೂ ನಿಕಟವಾದ ಸಂಬಂಧ ಇದೆ ಎಂದು ಪ್ರತಿಪಾದಿಸಿದ ಮೊದಲಿಗರಲ್ಲಿ ಮನೋ ವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್. ನಂತರದಲ್ಲಿ ಲೈಂಗಿಕತೆಯ ಕುರಿತು ಆಳವಾಗಿ ಅಭ್ಯಾಸ ಮಾಡಿದ ಕಿನ್ಸೆ ಲೈಂಗಿಕತೆಯ ಬೇರೆ ಬೇರೆ ಆಯಾಮಗಳನ್ನು ವಿವರಿಸಿದನು. ಕಳೆದ ಶತಮಾನದ ಎಂಭತ್ತರ ದಶಕದಲ್ಲಿ ಲೈಂಗಿಕತೆ ಕುರಿತು ಪ್ರಾತ್ಯಕ್ಷಿತೆಯ ಮೂಲಕ ವೈಜ್ಞಾನಿಕ ವಿಶ್ಲೇಷಣೆ ನೀಡಿದ ಮಾಸ್ಟರ್ಸ್‌ ಮತ್ತು ಜಾನ್ಸನ್‌ರು ಲೈಂಗಿಕ ಕ್ಷೇತ್ರದಲ್ಲಿ ಒಂದು ಕ್ರಾಂತಿಯನ್ನೇ ಮಾಡಿದರು ಎನ್ನುವುದು ಇತಿಹಾಸ.

ಕನ್ನಡದಲ್ಲಿ ಲೈಂಗಿಕ ಚಿಂತನೆ ನಡೆಸಿದವರಲ್ಲಿ ಡಾ. ಡಿ.ವಿರಾಮ್ ಅಗ್ರಗಣ್ಯರು. ಬೆಂಗಳೂರಿನ ಹತ್ತಿರದ ದೊಡ್ಡಬಳ್ಳಾಪುರದಲ್ಲಿ ವೈದ್ಯಸೇವೆಯಲ್ಲಿ ನಿರತರಾಗಿದ್ದರು. ಕಳೆದ ಶತಮಾನದ ನಲವತ್ತರ ದಶಕದಲ್ಲಿ ಅವರು ಬರೆದ ‘ವಿಕೃತ ಕಾಮ’ ಎಂಬ ಪುಸ್ತಕದಲ್ಲಿ ಕಾಮದ ಪ್ರಭಾವ ಮತ್ತು ವ್ಯಾಪಕತ್ವವನ್ನು ಎಳೆ ಎಳೆಯಾಗಿ ಓದುಗರ ಮುಂದೆ ತೆರೆದಿಡುತ್ತಾರೆ. ಲೈಂಗಿಕತೆ ಕುರಿತು ಮಡಿವಂತಿಕೆ, ಅಜ್ಞಾನ ಮತ್ತು ತಪ್ಪುಕಲ್ಪನೆಗಳು ವ್ಯಕ್ತಿಯ ಜೀವನದಲ್ಲಿ ಹೇಗೆ ದುಷ್ಪರಿಣಾಮ ಬೀರುತ್ತವೆ. ಕಾಮೋದಯವಾದ ನಂತರ ಈ ಅಂಶಗಳು ವಿಕೃತ ಮನೋಗತಿಗಳಾಗಿ ಹೇಗೆ ರೂಪುಗೊಳ್ಳುತ್ತವೆ ಎಂಬುದನ್ನು ಅರ್ಥಪೂರ್ಣವಾಗಿ ವಿವರಿಸಿದ್ದಾರೆ.

ಆ ಕಾಲದಲ್ಲಿ ಅವರು ಹೊರತಂದ ‘ದಾಂಪತ್ಯ ಜೀವನ’ ಎಂಬ ಮಾಸಪತ್ರಿಕೆಗೆ ಜನಸಾಮಾನ್ಯರಿಗೆ ಲೈಂಗಿಕ ಶಿಕ್ಷಣವನ್ನು ಒದಗಿಸುತ್ತಿತ್ತು ಎಂಬುದು ಅದರ ಅವಲೋಕನ ಮಾಡಿದಾಗ ನಮಗೆ ತಿಳಿಯುತ್ತದೆ. ಸುಖೀ ದಾಂಪತ್ಯ ಎಂದರೇನು? ಸಮರಸ ದಾಂಪತ್ಯಕ್ಕೆ ಲೈಂಗಿಕತೆ ಜ್ಞಾನ ಎಷ್ಟು ಮಹತ್ವದ್ದು ಅನೈತಿಕ ಲೈಂಗಿಕತೆಯಿಂದ ಆಗುವ ದುಷ್ಪರಿಣಾಮಗಳೇನು ಎಂಬುದನ್ನು ಕುರಿತು ಬೇರೆ ಬೇರೆ ತಜ್ಞರು ದಾಂಪತ್ಯ ಜೀವನದಲ್ಲಿ ಬರೆಯುತ್ತಿದ್ದರು. ‘ದಾಂಪತ್ಯ ಜೀವನ’ ಮಾಸಪತ್ರಿಕೆಯ ಲಭ್ಯವಾದ ಕೆಲವು ಪುಟಗಳನ್ನು ತಿರುವಿ ಹಾಕಿದಾಗ ಪೋಷಕರ ಜವಾಬ್ದಾರಿ ಎಂಬ ಒಂದು ಪ್ಯಾರಾ ನನ್ನ ಕಣ್ಣಿಗೆ ಬಿತ್ತು. ಅದನ್ನು ಹಾಗೆಯೇ ಬರೆದಿದ್ದೇನೆ. ತಮ್ಮ ಮಕ್ಕಳಿಗೆ ಸಕಾಲದಲ್ಲಿ ಆರೋಗ್ಯ ಮತ್ತು ಲೈಂಗಿಕ ಶಿಕ್ಷಣ ಕೊಡುವ ಮಹತ್ವ ಪೋಷಕ ಬೋಧಕ ವರ್ಗದವರಿಗೆ ಮನವರಿಕೆಯಾಗಬೇಕು. ಪೋಷಕ, ಬೋಧಕ ವರ್ಗದವರು ಶಿಕ್ಷಕರನ್ನು ತರಬೇತು ಮಾಡುವ ಪ್ರತಿಯೊಂದು ಟ್ರೈನಿಂಗ್ ಶಾಲೆಗಳ ಅಭ್ಯಾಸಕ್ರಮದಲ್ಲೂ ಮಕ್ಕಳಿಗೆ ಹದವಾದ ಆರೋಗ್ಯ ಮತ್ತು ಲೈಂಗಿಕ ಶಿಕ್ಷಣ ಕೊಡುವ ವಿಚಾರಗಳನ್ನು ಸೇರಿಸಲು ಏರ್ಪಾಡು ಮಾಡಬೇಕು. ಅದರ ಫಲವಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಈ ವಿಚಾರದಲ್ಲಿ ತಕ್ಕ ದಾರಿ ತೋರಲು ಸಮರ್ಥರಾಗುವರು. ಇಂದು ಶಾಲೆಗೆ ಹೋಗುತ್ತಿರುವ ನಮ್ಮ ಬಾಲಕ ಬಾಲಕಿಯರನ್ನು ಸ್ವಚ್ಛ ಲೈಂಗಿಕ ಮತ್ತು ಆರೋಗ್ಯ ಜೀವನಕ್ಕೆ ಸಿದ್ಧಗೊಳಿಸಿದರೆ ಅವರ ಮುಂದಿನ ಪೀಳಿಗೆಯು ತನ್ನಷ್ಟಕ್ಕೆ ಅಭ್ಯುದಯದ ದಾರಿ ಹಿಡಿದು ಸಾಗುತ್ತದೆ. ಇದನ್ನು ನೋಡಿದಾಗ ಡಾ. ದೊಡ್ಡೇರಿ ವೆಂಕಟಗಿರಿರಾವ್ ಅವರ ಲೈಂಗಿಕ ಶಿಕ್ಷಣದ ಮಹತ್ವ ಕುರಿತ ದೂರದೃಷ್ಟಿ ನಮಗೆ ಅರಿವಾಗುತ್ತದೆ. ಒಮ್ಮೆ ಅವರು ಮಾತನಾಡುತ್ತಾ ಶ್ರೀಧರ್ ನನ್ನ ಈ ಮಾಸಪತ್ರಿಕೆಗೆ ಬಗ್ಗೆ ಸಾರ್ವಜನಿಕರಿಂದ ಬಂದ ಕಟು ಟೀಕೆಗಳು ಇದನ್ನು ಹೊರತರಬಾರದೆಂಬ ಆದೇಶಗಳು ನಿರಂತರವಾಗಿ ಬಂದಾಗ ನಾನು ಅದನ್ನು ನಿಲ್ಲಿಸಬೇಕಾಯಿತು”, ಎಂದು ನುಡಿದಿದ್ದು ಈಗಲೂ ನನಗೆ ಜ್ಞಾಪಕದಲ್ಲಿದೆ. ಅವರು ಬರೆದ ರತಿ ರಹಸ್ಯ, ಕಾಮ ಕುಂಜ, ನಿನ್ನ ತಂದೆ ತಾಯಿ ಹಾಗೂ ನಿನ್ನ ಹುಟ್ಟು ಎಂಬ ಕೃತಿಗಳು ನನಗೆ ಲಭ್ಯವಾಗಲಿಲ್ಲ. ಅವರ ಕೃತಿ ವಿಕೃತಕಾಮದಲ್ಲಿ ವೀರ್ಯ, ಸ್ಖಲನ, ಮುಷ್ಠಿಮೈಥುನಗಳ ಬಗ್ಗೆ ಇರುವ ತಪ್ಪುಕಲ್ಪನೆಗಳನ್ನು ನಿವಾರಿಸಲು ಪ್ರಯತ್ನಿಸುತ್ತಾರೆ. ಕಾಮೋದಯ ಬಾಲ್ಯದಲ್ಲಿ ಕಾಣಿಸುವ ವಿಕೃತ ಕಾಮನೆಗಳು, ಸ್ವರತಿ, ಸಲಿಂಗರತಿ ಹೀಗೆ ಬೇರೆ ಬೇರೆ ಅಧ್ಯಾಯಗಳಿಂದ ಲೈಂಗಿಕ ವಿಷಯಗಳ ಬಗ್ಗೆ ಓದುಗರಿಗೆ ಸರಳವಾಗಿ ತಿಳಿಸುತ್ತಾರೆ ಡಾ| ಡಿ.ವಿ.ರಾವ್.

ನಂತರದಲ್ಲಿ ನಮ್ಮ ಗಮನಕ್ಕೆ ಬರುವ ವ್ಯಕ್ತಿ ದಿ. ಡಾ| ಅನುಪಮಾ ನಿರಂಜನ ಅವರು ಬರೆದ ‘ದಾಂಪತ್ಯ ದೀಪಿಕೆ’ ಎಂಬ ಕೃತಿಯಲ್ಲಿ ಪ್ರೇಮ ಕಲೆ ಮತ್ತು ಕಾಮ ಕಲೆ ಎಂಬ ಅಧ್ಯಾಯಗಳು ನವ ದಂಪತಿಗಳಿಗೆ ಮೊದಲ ರಾತ್ರಿ ಸಮಾಗಮಕ್ಕೆ ದಾರಿದೀಪ ಎನ್ನಬಹುದು. ಪ್ರೇಮ ಕಲೆಯಿಂದ ಸತಿಪತಿಗಳು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಕಾಮ ಕಲೆಯನ್ನು ಆನಂದದಿಂದ ಅನುಭವಿಸಬಹುದು ಎಂಬುದನ್ನು ಸರಳವಾಗಿ ಅಷ್ಟೇ ಸಹಜವಾಗಿ ವಿವರಿಸುತ್ತಾರೆ. ‘ವಧುವಿಗೆ ಕಿವಿಮಾತು’ ಕೃತಿಯಲ್ಲಿ ಲೈಂಗಿಕ ಸಾಮರಸ್ಯವನ್ನು ಸಾಧಿಸುವಲ್ಲಿ ಲೈಂಗಿಕ ಶಿಕ್ಷಣ ಎಷ್ಟು ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ಮನೋಜ್ಞವಾಗಿ ತಿಳಿಸುತ್ತಾರೆ. ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ೧೯೯೭ ರಲ್ಲಿ ಹೊರತಂದ ‘ಗುಹ್ಯ ರೋಗಗಳು’ ಎಂಬ ಕೃತಿಯನ್ನು ಡಾ| ಸಿಡೆನೂರ್‌ರವರು ಬರೆದಿದ್ದಾರೆ. ಗುಹ್ಯರೋಗಗಳ ಇತಿಹಾಸದಿಂದ ಮೊದಲಾಗಿ ‘ಲೈಂಗಿಕ ಪೀಡೆ’ ಎಂಬ ಅಧ್ಯಾಯದಲ್ಲಿ ಜನನೇಂದ್ರಿಯ ಮತ್ತು ಅವುಗಳ ಸುತ್ತಮುತ್ತ ಚೊಕ್ಕಟವಾಗಿರುವುದು ಎಷ್ಟು ಅವಶ್ಯ ಎಂಬುದನ್ನು ಒತ್ತಿ ಹೇಳುತ್ತದೆ. ಗುಹ್ಯರೋಗಕ್ಕೂ ಲೈಂಗಿಕ ಪೀಡೆಗಳಿಗೂ ಇರುವ ವ್ಯತ್ಯಾಸವನ್ನು ಡಾ. ಸಿಡೆನೂರ್‌ರವರು ಈ ಕೃತಿಯಲ್ಲಿ ಸರಳವಾಗಿ ಸ್ಪಷ್ಟಪಡಿಸುತ್ತಾ ಚಿಕಿತ್ಸೆಯನ್ನು ಸೂಚಿಸುತ್ತಾರೆ. ಅದರಲ್ಲಿ ಇರುವ ಎಚ್.ಐ.ವಿ. ಮತ್ತು ಏಡ್ಸ್ ಎಂಬ ಅಧ್ಯಾಯ ಹೆಚ್.ಐ.ವಿ. ರೋಗಾಣುವಿನಿಂದ ದೂರ ಇರಲು ಸರಳ ಸೂತ್ರಗಳನ್ನು ಡಾ. ಸಿಡೆನೂರ್ ಓದುಗರಿಗೆ ತಿಳಿಸುತ್ತಾರೆ. ಲೈಂಗಿಕ ವಿಜ್ಞಾನ ಎಂಬ ಅವರ ಇನ್ನೊಂದು ಕೃತಿಯು ಸರಳ ಭಾಷೆಯಲ್ಲಿ ಲೈಂಗಿಕ ಅಂಗಾಂಗ, ಲೈಂಗಿಕತೆ ಬಗ್ಗೆ ತಿಳಿಸುತ್ತದೆ.

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಎನ್. ವಿಶ್ವರೂಪಾಚಾರ್ ಅವರದು ಲೈಂಗಿಕ ಸಾಹಿತ್ಯಕ್ಕೆ ಕೊಡುಗೆ ಅಪಾರ. ಲೈಂಗಿಕ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸುಮಾರು ಐವತ್ತಕ್ಕೂ ಹೆಚ್ಚು ಕಿರು ಕೃತಿಗಳನ್ನು ಎಂಭತ್ತನೇ ಇಸವಿಯಿಂದಲೂ ಹೊರತರುತ್ತಿದ್ದಾರೆ. ಲೈಂಗಿಕತೆ ಮತ್ತು ಲೈಂಗಿಕ ಕ್ರಿಯೆ, ಸಮರಸ ದಾಂಪತ್ಯ ಸೇರಿದಂತೆ ಬೇರೆ ಬೇರೆ ಆಯಾಮಗಳ ಕುರಿತು ಜನಸಾಮಾನ್ಯರಿಗೆ ತಿಳಿಯುವ ಹಾಗೆ ಬರೆದಿದ್ದಾರೆ. ಡಾ. ನಾರಾಯಣರಾವ್ ಅವರ ಸೆಕ್ಸ್ ಮತ್ತು ಮಾನಸ ಸಮಾಜ ಎಂಬ ಕೃತಿಯು ಸಮಾಜದಲ್ಲಿ ವ್ಯಾಪಕವಾಗಿ ಕಾಣುವ ಮದ್ಯವ್ಯಸನ, ಆತ್ಮಹತ್ಯೆ, ಲೈಂಗಿಕ ಅತ್ಯಾಚಾರ, ಲೈಂಗಿಕ ಕ್ರಿಯೆ ಹೀಗೆ ಬೇರೆ ಬೇರೆ ಅಂಶಗಳನ್ನು ಕುರಿತು ವಿಶ್ಲೇಷಣೆಗೈಯುತ್ತದೆ.

‘ಪುರುಷರಲ್ಲಿ ಬಂಜೆತನ’ ಎಂಬ ಡಾ| ಸಿ. ಶರತ್‌ ಕುಮಾರ್ ಅವರ ಕೃತಿಯನ್ನು ಓದುವಾಗ ನನಗೆ ಒಂದು ಘಟನೆ ನೆನಪಿಗೆ ಬರುತ್ತದೆ. ಒಮ್ಮೆ ಎರಡು ತಿಂಗಳ ಬಾಣಂತಿ ಮಹಿಳೆಯೊಬ್ಬರನ್ನು ಸಲಹೆಗಾಗಿ ಕರೆತಂದಿದ್ದರು. ಆ ಮಹಿಳೆ ತಾನು ಪ್ರಪಂಚದಲ್ಲಿ ಇರಬಾರದು ದೊಡ್ಡ ತಪ್ಪು ಮಾಡಿಬಿಟ್ಟೆ, ದೇವರು ನನ್ನನ್ನು ಕ್ಷಮಿಸುವುದಿಲ್ಲ ಎಂಬ ಭಾವನೆಯಿಂದ ಜಿಗುಪ್ಸೆಗೆ ಒಳಗಾಗಿದ್ದಳು. ಪತಿರಾಯನಿಗೆ ಅವಳು ಮೂರನೆಯ ಹೆಂಡತಿ. ಪತಿರಾಯ ತಂದೆ ತಾಯಿಗೆ ಒಬ್ಬನೇ ಮಗನಾಗಿದ್ದ. ಪತಿರಾಯನಿಗೆ ಆಗಲೇ ಎರಡು ಮದುವೆಯಾದರೂ ಇಬ್ಬರಿಗೂ ಮಕ್ಕಳಾಗದೇ ಬಂಜೆಯರೆಂಬ ಹಣೆಪಟ್ಟಿ ಹಚ್ಚಿಕೊಂಡು ಅತ್ತೆ ಮಾವಂದಿರ ಕೆಂಗಣ್ಣಿಗೆ ಗುರಿಯಾಗಿದ್ದರು. ಹೋಮ, ಹವನ, ನಾಗಪ್ರತಿಷ್ಠೆ ಎಲ್ಲವೂ ಮುಗಿದ ನಂತರ ಪ್ರಸಿದ್ಧ ಜ್ಯೋತಿಷಿಗಳ ಹತ್ತಿರ ಮಗನಿಗೆ ಮಕ್ಕಳಾಗದ ಕಾರಣ ಕೇಳಿದರು. ಆ ಜ್ಯೋತಿಷಿ ಕವಡೆ ಲೆಕ್ಕ ಹಾಕಿದರು. ಭಾಗಾಕಾರ, ಗುಣಾಕಾರ ಮಾಡಿ ‘ಇವರಿಗೆ ಮೂರನೆಯ ಮದುವೆಯಲ್ಲಿ ಮಾತ್ರ ಮಕ್ಕಳ ಯೋಗ” ಎಂದು ಹೇಳಿ ಮದುವೆಯ ನಂತರ ಸಂಹಿತಾ ಹವನ ಮಾಡಿಸಬೇಕು ಎಂದು ಆದೇಶ ಇತ್ತರು. ಅದರಂತೆ ಮೂರನೆಯ ವಿವಾಹವೂ ಆಯಿತು. ಸಂಹಿತಾಯಾಗವೂ ಮುಗಿಯಿತು. ಮದುವೆಯಾಗಿ ಎರಡು ವರ್ಷವಾದರೂ ಮೂರನೆಯ ಹೆಂಡತಿ ಗರ್ಭ ಧರಿಸಲಿಲ್ಲ. ಪುನಃ ಜ್ಯೋತಿಷಿಯ ಹತ್ತಿರ ಹೋಗಿ ಕೇಳಿದಾಗ ಇನ್ನು ಮೂರು ತಿಂಗಳೊಳಗೆ ಗರ್ಭ ನಿಂತೇ ನಿಲ್ಲುತ್ತದೆ ಎಂಬ ನಿರ್ದಿಷ್ಟ ಉತ್ತರ ದೊರಕಿತು. ಇದನ್ನು ಕೇಳಿಸಿಕೊಂಡ ಪತ್ನಿ ತಾನು ಹೇಗಾದರೂ ಮಾಡಿ ಗರ್ಭ ಧರಿಸಲೇಬೇಕು ಎಂದು ನಿರ್ಧರಿಸಿದಳು. ಇದಾಗಿ ಎರಡೂವರೆ ತಿಂಗಳಿಗೆ ಅತ್ತೆ ಮಾವನಿಗೆ ತಾನು ಗರ್ಭಿಣಿ ಎಂಬ ಸಿಹಿ ಸುದ್ದಿ ಮುಟ್ಟಿತು ಮನೆಯಲ್ಲಿ ಸಂಭ್ರಮವೋ ಸಂಭ್ರಮ.

ಒಂಭತ್ತು ತಿಂಗಳಿಗೆ ಹೆರಿಗೆಯಾಯಿತು. ಮುದ್ದಾದ ಗಂಡು ಮಗು ಹುಟ್ಟಿತು. ತಮ್ಮ ಮಗನಿಂದ ವಂಶದ ಕುಡಿ ಮೂಡಿತು ಎಂಬ ಸಂತಸ ಒಂದು ಕಡೆ, ತಮ್ಮ ಮೂರನೆ ಸೊಸೆ ಭಾಗ್ಯಲಕ್ಷ್ಮೀ ಎಂಬ ಹೊಗಳಿಕೆ ಇನ್ನೊಂದು ಕಡೆ. ಹಾಗೆ ಮಾತನಾಡುವಾಗ ಆ ಎರಡು ಬಂಜೆ ಸೊಸೆಯಂದಿರ ಬದಲು ಮೊದಲೇ ಜ್ಯೋತಿಷಿಗಳ ಹತ್ತಿರ ಕೇಳಿದ್ದರೆ ಇವಳನ್ನು ಮೊದಲೇ ತರಬಹುದಿತ್ತು ಎಂಬ ಅತ್ತೆ ಮಾವಂದಿರ ಅಭಿಪ್ರಾಯಗಳು. ಇವೆಲ್ಲ ಮಾಹಿತಿಗಳನ್ನು ಕಲೆ ಹಾಕಿ ಮೂರನೇ ಸೊಸೆ ಮೀನಾಕ್ಷಿಯ ಮನೋವಿಶ್ಲೇಷಣೆಗೈದೆ. ಆಗ ಲಭಿಸಿದ ಮಾಹಿತಿ ಕುತೂಹಲಕರವಾಗಿತ್ತು. ಮೀನಾಕ್ಷಿ ಮೊದಲಿನಿಂದಲೂ ಚುರುಕು ಬುದ್ಧಿಯವಳು, ಮಾವನ ಮನೆಯವರ ಮಾತುಗಳನ್ನು ಕೇಳುತ್ತಿದ್ದಳು. ಅವಳಿಗೆ ಬೇಗ ಮಗು ಆಗಬೇಕೆಂಬ ಅತ್ತೆ ಮಾವಂದಿರ ಒತ್ತಡ ಮೊದಲ ಇಬ್ಬರಿಗೆ ಆಗಲಿಲ್ಲ. ಹಾಗಾದರೆ ತನಗೆ ಹೇಗೆ ಆಗುತ್ತದೆ ಎಂಬ ಚಿಂತೆ. ಮೀನಾಕ್ಷಿಗೆ ಇವೆಲ್ಲದರಿಂದ ಮನಸ್ಸಿಗೆ ಆತಂಕ. ವೈದ್ಯರಿಂದ ಮೀನಾಕ್ಷಿಯ ಪರೀಕ್ಷೆಯೂ ಆಯಿತು. ಪತಿ ಚಂದ್ರು ಮಾತ್ರ ತಾನು ಸರಿಯಾಗಿದ್ದೇನೆ, ಹೆಂಗಸರದೇ ತಪ್ಪಿರುತ್ತದೆ ಎಂಬ ಕಲ್ಪನೆಯಿಂದ ವೀರ್ಯ ಪರೀಕ್ಷೆಗೆ ಒಪ್ಪದಾದ, ಇದನ್ನರಿತ ಮೀನಾಕ್ಷಿ ತಾನು ಹೇಗಾದರೂ ಮಾಡಿ ಮಗುವನ್ನು ಹಡೆಯಲೇಬೇಕೆಂದು ನಿರ್ಧರಿಸಿದಳು. ಯಾರಿಂದ ಆಯಿತು ಎಂದರೆ ಬಾಯಿ ಬಿಡಲಿಲ್ಲ. ಕೊನೆಗೆ ಮಂಪರು ಪರೀಕ್ಷೆ ಮಾಡಿದಾಗ ಅವಳ ಭಾವನ ದೆಸೆಯಿಂದ ಆಯಿತು ಎಂಬ ಸತ್ಯ ಹೊರಬಂತು. ಈಗ ಮೀನಾಕ್ಷಿಯನ್ನು ಅಪರಾಧ ಪ್ರಜ್ಞೆ ಕಾಡುತ್ತಿತ್ತು. ಅದಕ್ಕಾಗಿ ಜಿಗುಪ್ಸೆ ಹೊಂದಿದ್ದಳು.

ಪುರುಷರಲ್ಲಿ ಬಂಜೆತನ ಎಂಬ ಡಾ. ಸಿ. ಶರತ್‌ಕುಮಾರ್ ಅವರ ಕೃತಿ ಅತ್ಯಂತ ಸುಂದರವಾಗಿ ಮೂಡಿಬಂದಿದೆ. ಮಕ್ಕಳಾಗದ ದಂಪತಿಗಳಲ್ಲಿ ಹೆಂಡತಿಯನ್ನೇ ಬಲಿಪಶು ಮಾಡುವ ಸಂದರ್ಭಗಳು ಹೆಚ್ಚು. ಬಂಜೆತನದಲ್ಲಿ ಮಹಿಳೆಯರಿಗಿಂತ ಪುರುಷರಲ್ಲೇ ಹೆಚ್ಚಿನ ನ್ಯೂನತೆಗಳು ಕಾರಣ ಎಂಬ ವೈಜ್ಞಾನಿಕ ಸತ್ಯವನ್ನು ಓದುಗರ ಮುಂದಿಡುತ್ತಾರೆ. ಈ ಕೃತಿಯು ಸಮಗ್ರವಾಗಿ ಸರಳವಾಗಿ ಮೂಡಿಬಂದಿದೆ.

ಲೈಂಗಿಕ ಸಾಹಿತ್ಯಕ್ಕೆ ಅದ್ವಿತೀಯ ಕೊಡುಗೆ ಕೊಟ್ಟ ಮನೋವೈದ್ಯ, ಸಾಹಿತ್ಯದ ಭೀಷ್ಮ ಎಂಬ ಬಿರುದಿಗೆ ಪಾತ್ರರಾದ ಡಾ| ಸಿ.ಆರ್.ಸಿ.ಯವರು ಅವರ ‘ಲೈಂಗಿಕ ಅರಿವು – ನೂರಾರು ಪ್ರಶ್ನೆಗಳು’ ಎಂಬ ಕೃತಿ ಹತ್ತಕ್ಕೂ ಹೆಚ್ಚು ಮರು ಮುದ್ರಣಗಳನ್ನು ಕಂಡಿದ್ದೇ ಅದರ ಜನಪ್ರಿಯತೆಗೆ ಸಾಕ್ಷಿ. ಅದರ ಇನ್ನೊಂದು ಮುಖ ನೋಡಿದರೆ ಜನಸಾಮಾನ್ಯರಲ್ಲಿ ಲೈಂಗಿಕ ಅರಿವಿನ ಕುರಿತು ಎಷ್ಟೊಂದು ಸಂದೇಹಗಳಿವೆ ಎಂಬುದು ನಮಗೆ ಗೋಚರವಾಗುತ್ತದೆ. ಅವರು ಬರೆದಿರುವ ಸುಖದಾಂಪತ್ಯ ವೈವಾಹಿಕ ಜೀವನ, ಅನ್ಯೋನ್ಯ ದಾಂಪತ್ಯ, ದಾಂಪತ್ಯ ಸಮಸ್ಯೆಗಳು ಸಮರಸ ದಾಂಪತ್ಯ ಜೀವನದಲ್ಲಿ ಲೈಂಗಿಕತೆಯ ಮಹತ್ವವನ್ನು ತಿಳಿಸುತ್ತದೆ. ‘ದಾಂಪತ್ಯ ಸಮಸ್ಯೆಗಳು’ ಎಂಬ ಕೃತಿ ಐದು ಮರು ಮುದ್ರಣಗಳನ್ನು ಕಂಡ ಕೃತಿ. ಲೈಂಗಿಕ ತಪ್ಪು ತಿಳಿವಳಿಕೆಯಿಂದ ದಾಂಪತ್ಯ ಸಮಸ್ಯೆಗಳು ಹೇಗೆ ಉದ್ಭವವಾಗುತ್ತವೆ ಎಂಬುದನ್ನು ವಾಸ್ತವಿಕದ ಹಿನ್ನೆಲೆಯಲ್ಲಿ ವಿವರಿಸುತ್ತಾರೆ ಡಾ. ಸಿ.ಆರ್.ಸಿ.

ಬೆಂಗಳೂರಿನಲ್ಲಿ ಮೆಡಿಸೆಕ್ಸ್ ಫೌಂಡೇಶನ್ ಮೂಲಕ ವೃತ್ತಿ ನಿರತರಾಗಿರುವ ಡಾ| ವಿರೋದ್ ಛೆಬ್ಬಿಯವರು ನುರಿತ ಲೈಂಗಿಕ ತಜ್ಞರು. ಸುಧಾದ ‘ಸುಖೀ ಭವ’ದ ಡಾ| ಛೆಬ್ಬಿಯವರು ಲೈಂಗಿಕ ಆಯಾಮಗಳು ಎಂಬ ಕೃತಿಯಲ್ಲಿ ಹಲವು ನೈಜ ಉದಾಹರಣೆಗಳಿಂದ ಲೈಂಗಿಕ ಕ್ಷೇತ್ರವನ್ನು ವಿಶ್ಲೇಷಿಸುತ್ತಾರೆ. ಅವರು ಬರೆದಿರುವ ಲೈಂಗಿಕ ಚಿಕಿತ್ಸೆಯ ನೈಜ ಪ್ರಕರಣಗಳು ಎಂಬ ಎರಡು ಕೃತಿಗಳನ್ನು ಓದಿದೆ. ಈ ಪುಸ್ತಕಗಳಲ್ಲಿ ಅವರು ಲೈಂಗಿಕತೆಯನ್ನು ಓದುಗರಿಗೆ ಮುಜುಗರವಾಗದ ರೀತಿಯಲ್ಲಿ ಎಳೆ ಎಳೆಯಾಗಿ ವಿವರಿಸುತ್ತಾರೆ.

ಲೈಂಗಿಕ ಸಾಹಿತ್ಯವನ್ನು ಮನಸ್ಸಿಗೆ ತಟ್ಟುವಂತೆ ಆದರೆ ಅದು ಅಸಹ್ಯವಾಗದಂತೆ ಬರೆಯುವುದು ಕಷ್ಟ ಈ ಕೆಲಸವನ್ನು ಡಾ. ವಿನೋದ್ ಛಬ್ಬಿಯವರು ತಮ್ಮ ಕೃತಿಗಳಲ್ಲಿ ಸಾಧಿಸಿದ್ದಾರೆ ಎಂದರೆ ಅದು ಉತ್ಪ್ರೇಕ್ಷೆಯಲ್ಲ. ಅವರು ಸುಧಾದಲ್ಲಿ ಬರೆಯುವ ಸುಖೀಭವ ಅಂಕಣ ಕುರಿತು ಒಬ್ಬರು ಅದನ್ನು ನಿಲ್ಲಿಸಬೆಕೆಂದು ಬರೆದದ್ದನ್ನು ಓದಿದೆ. ಅದಕ್ಕೆ ಕೊಟ್ಟ ಕಾರಣ ತಮ್ಮ ಮಕ್ಕಳು ಇದನ್ನು ಓದಿ ಪ್ರಶ್ನೆ ಕೇಳುತ್ತಾರೆ. ತನಗೆ ಏನೂ ಹೇಳಬೇಕೆಂದು ತಿಳಿಯದು ಅದಕ್ಕೆ ಆ ಅಂಕಣ ಬೇಡ ಎಂಬುದು ಅವರು ಕೊಟ್ಟ ಕಾರಣ. ಇಷ್ಟು ಮುಂದುವರಿದ ಸಮಾಜದಲ್ಲಿಯೂ ಸೆಕ್ಸ್ ಬಗ್ಗೆ ಎಷ್ಟು ಮಡಿವಂತಿಕೆ ಇದೆ ಎಂಬುದು ನಮಗೆ ಇದರಿಂದ ತಿಳಿಯುತ್ತದೆ. ಛೆಬ್ಬಿಯವರ ‘ಲೈಂಗಿಕತೆ ವಿವಿಧ ಆಯಾಮಗಳು’ ಎಂಬ ಕೃತಿಯಲ್ಲಿ ಲೈಂಗಿಕತೆ ಮತ್ತು ದೈವಿಕತೆ ಎಂಬ ಒಂದು ಅಧ್ಯಾಯ. ಈ ಅಧ್ಯಾಯದಲ್ಲಿ ಯೋಗ ಕಾಮ ಸಂಬಂಧಗಳ ಬಗ್ಗೆ ವಿಶ್ಲೇಷಿಸುತ್ತಾರೆ. ಆರೋಗ್ಯಕರ ಕಾಮ ಸಂವೇದನೆಯಲ್ಲಿ ಅನ್ಯೋನ್ಯತೆಯ ಪಾತ್ರ ಎಷ್ಟು ಮಹತ್ವದ್ವೆಂದು ಎಳೆ ಎಳೆಯಾಗಿ ಬಿಡಿಸುತ್ತಾರೆ.

ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಸೆಕ್ಸುಯಲ್ ಮೆಡಿಸಿನ್‌ನ ನಿರ್ದೇಶಕರಾದ ಡಾ| ಪದ್ಮನಿ ಪ್ರಸಾದ್ ಸ್ತ್ರೀರೋಗ ತಜ್ಞರು. ಅದರೊಂದಿಗೆ ಅಮೆರಿಕೆಯಲ್ಲಿ ಲೈಂಗಿಕತೆ ಕುರಿತು ವಿಶೇಷ ಪರಿಣಿತಿ ಪಡೆದ ಕರ್ನಾಟಕದ ಏಕೈಕ ಮಹಿಳಾ ಲೈಂಗಿಕ ತಜ್ಞೆ ಎನ್ನುವುದು ವಿಶೇಷ. ಪ್ರಸೂತಿ ಮತ್ತು ಸ್ತ್ರೀರೋಗ ಸಲಹೆ ಚಿಕಿತ್ಸೆಯೊಂದಿಗೆ ಅವರು ಲೈಂಗಿಕ ಮತ್ತು ವೈವಾಹಿಕ ಸಲಹೆ ನೀಡುತ್ತಾರೆ. ‘ಲೈಂಗಿಕ ಆರೋಗ್ಯ’ ಎಂಬ ಅವರ ಕೃತಿ ನಾಲ್ಕನೇ ಮುದ್ರಣವನ್ನು ಕಂಡಿದೆ. ಪ್ರಶ್ನೋತ್ತರಗಳ ಅವರ ಕೃತಿ ‘ಲೈಂಗಿಕ ಸಾಮರಸ್ಯ’ ಎರಡನೇ ಮುದ್ರಣ ಕಂಡಿದೆ ಎಂದು ತಿಳಿಯಿತು. ಅವರ ಲೈಂಗಿಕ ಆರೋಗ್ಯ ಎಂಬ ಕೃತಿಯಲ್ಲಿ ಆರೋಗ್ಯಕರ ಲೈಂಗಿಕತೆ ಎಂದರೇನು? ಎಂದು ವಿವರಿಸುತ್ತಾ ಲೈಂಗಿಕ ಶಿಕ್ಷಣದ ಮಹತ್ವವನ್ನು ವಿಶ್ಲೇಷಿಸುತ್ತಾರೆ. ಉಳಿದಂತೆ ಸ್ತ್ರೀ ಲೈಂಗಿಕತೆ ಮತ್ತು ಪುರುಷರಲ್ಲಿ ಲೈಂಗಿಕತೆ ಎಂದು ಎರಡು ಭಾಗ ಮಾಡುತ್ತಾರೆ. ಇದು ಅತ್ಯಂತ ಅವಶ್ಯಕವಾದ ವಿವಾಹ ತಯಾರಿ ಮತ್ತು ವಿವಾಹ ಪುರ್ವ ಮಾರ್ಗದರ್ಶನ ನೀಡುತ್ತದೆ. ಭಾವೀ ದಂಪತಿಗಳಿಗೆ ಅತ್ಯಂತ ಉಪಯುಕ್ತವಾಗಿದೆ.

ಅದೇ ರೀತಿ ‘ಪ್ರಥಮ ರಾತ್ರಿ, ವಾಸ್ತವಿಕತೆ ಏನು’ ಎಂಬುದನ್ನು ಸಹಜವಾಗಿ ಮುಜುಗರ ಇಲ್ಲದ ಹಾಗೆ ಎಳೆ ಎಳೆಯಾಗಿ ಬಿಡಿಸಿ ತಿಳಿಸುತ್ತಾರೆ. ಜನಸಂಖ್ಯಾ ಸ್ಫೋಟಕ್ಕೂ ಮತ್ತು ಲೈಂಗಿಕತೆಗೂ ಇರುವ ಸಂಬಂಧವನ್ನು ಮನೋಜ್ಞವಾಗಿ ತಿಳಿಸುತ್ತಾರೆ ಈ ಸಂದರ್ಭದಲ್ಲಿ ಮೊನ್ನೆ ತಾನೆ ನಾನು ಕ್ಲಿನಿಕ್‌ನಲ್ಲಿ ನೋಡಿದ ಘಟನೆ ನೆನಪಿಗೆ ಬರುತ್ತದೆ.

ಬೆಂಗಳೂರಿನಿಂದ ಸಲಹೆಗೆಂದು ದಂಪತಿಗಳಿಬ್ಬರು ಬಂದಿದ್ದರು. ಇಬ್ಬರೂ ಸಾಫ್ಟ್ ವೇರ್ ಇಂಜಿನೀಯರ್ಸ್‌. ಒಳ್ಳೆಯ ಕಂಪನಿಯಲ್ಲಿ ಕೆಲಸ ಮಾಡುತ್ತಾ ಒಳ್ಳೆಯ ಸಂಬಳವನ್ನು ಪಡೆಯುತ್ತಿದ್ದವರು. ಮದುವೆ ಆಗಿ ಆಗಲೇ ಆರು ತಿಂಗಳು ಕಳೆದಿತ್ತು. ಅವರ ಸಮಸ್ಯೆ ಎಂದರೆ ಮದುವೆ ಆಗಿ ಆರು ತಿಂಗಳಾದರೂ ಅವರಿಗೆ ಲೈಂಗಿಕ ಸಂಪರ್ಕವೇ ಇಲ್ಲ. ಕಾರಣ ವಿಶ್ಲೇಷಿಸಿದಾಗ ಪತ್ನಿ ರಮಾ, “ಸಾರ್, ನನಗೆ ಸೆಕ್ಸ್ ಬಗ್ಗೆ ಒಲವೇ ಇಲ್ಲ. ಆ ಬಸಿರಾಗೋದು, ಮಕ್ಕಳನ್ನು ಹೆರೋದು ಹೆರಿಗೆನೋವು, ಅದನ್ನೆಲ್ಲಾ ಅನುಭವಿಸೋದಕ್ಕೆ ನನ್ನಿಂದ ಆಗೋಲ್ಲ”, ಎಂದು ತನ್ನ ಧೋರಣೆಗಳನ್ನು ತೆರೆದಿಟ್ಟಳು.

ಪತಿ ಕಿಶೋರ್ ಸಾರ್, ನನ್ನ ಅಪ್ಪ ಅಮ್ಮಂಗೆ ನಾನು ಒಬ್ಬನೇ ಮಗ. ಅವರಿಗೆ ಮೊಮ್ಮಗನ್ನ ನೋಡ್ಬೇಕೂ ಅಂತ ಇಷ್ಟ. ಆದರೆ ಇವಳಿಗೆ ಮನಸ್ಸಿಲ್ಲ. ನನಗೆ ಮುಟ್ಟೋದಕ್ಕೂ ಬಿಡೋಲ್ಲ. ಇದುವರೆಗೆ ಫ್ರೆಂಡ್ಸ್ ಆಗಿಯೇ ಇದ್ದೇವೆ ಅನ್ನೋದು ನನ್ನ ಅಪ್ಪ ಅಮ್ಮಂಗೂ ಗೊತ್ತಿಲ್ಲ. ಇನ್ನು ಒಂದು ಆರು ತಿಂಗಳು ನೋಡ್ತೇನೆ. ಅದಿಲ್ಲದಿದ್ದರೆ ನಾನು ಡೈವೋರ್ಸ್‌ ಮಾಡ್ಬೇಕಾಗುತ್ತೆ ಅಷ್ಟೆ. ಈಗ ನಿಮ್ಮ ಹತ್ರ ಕಡೆ ಛಾನ್ಸು ಅಂತ ಬಂದಿದ್ದೇವೆ. ಇನ್ನು ನನ್ನಿಂದ ಆಗೋಲ್ಲ ಎಂದು ಮಾತು ಮುಗಿಸಿದ ರಮಾಳಿಗೆ ವಿವಾಹಪೂರ್ವ ತಯಾರಿ ಇದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದು ಹೇಳಬಹುದು. ಕೊನೆಗೆ ಆಪ್ತ ಸಲಹೆಯ ನಂತರ ರಮಾಪತಿಯೊಂದಿಗೆ ಸೇರಲು ಒಪ್ಪಿ ಈಗ ಅವರು ಸಂತೋಷದಲ್ಲಿದ್ದಾರೆ ಎಂಬುದು ನಮಗೂ ಸಂತಸದ ಸುದ್ದಿ. ಅದೇ ರೀತಿ “ಮೊದಲ ರಾತ್ರಿ ಶಿಶ್ನವು ಗಡುಸಾಗದೇ ಸಂಭೋಗ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ತನಗೆ ಏನೋ ಆಗಿದೆ” ಎಂಬ ಆತಂಕದಿಂದ ಮಾರನೇ ದಿನವೂ ಶಿಶ್ನವು ನಿಮಿರದಿದ್ದಾಗ ತಾನು ಭವಿಷ್ಯದಲ್ಲಿ ಷಂಡನಾಗುತ್ತೇನೆಂಬ ಭಯದಿಂದ ಬರುವ ಗಂಡಸರು ಎಷ್ಟೋ ಮಂದಿ ತನ್ನ ಪತ್ನಿಗೆ ಮೊದಲ ರಾತ್ರಿ ಸಂಭೋಗದ ವೇಳೆ ರಕ್ತ ತೊಟ್ಟಿಕ್ಕಲಿಲ್ಲ. ಕಾರಣ ಅವಳ ಕನ್ಯಾಪೊರೆ ಹರಿದಿತ್ತು. ಅದರ ಅರ್ಥ ಅವಳು ಮೊದಲೇ ಪರಪುರುಷರ ಸಂಗ ಮಾಡಿರಲೇಬೇಕು. ಎಂದು ಪತ್ನಿಯ ಮೇಲೆ ಸಂಶಯ ಪಡುವ ಗಂಡಂದಿರು ಇದಕ್ಕೆಲ್ಲ ಅವಶ್ಯವಾದುದು ವಿವಾಹಪೂರ್ವದಲ್ಲಿ ಮತ್ತು ಪ್ರಥಮ ರಾತ್ರಿ ಕುರಿತು ಮಾಹಿತಿ ನೀಡುವುದು. ವಯಾಗ್ರಾ ಕುರಿತು ಹೆಣ್ಣು ಶಿಶು ಭ್ರೂಣಹತ್ಯೆ ಎಷ್ಟು ಅಪಾಯಕರ. ಅದರಿಂದ ಸಮಾಜದ ಮೇಲೆ ಎಷ್ಟು ದುಷ್ಪರಿಣಾಮಗಳಾಗುತ್ತವೆ ಎಂಬ ವಿವಿಧ ಮಜಲುಗಳನ್ನು ತುಂಬಾ ಸರಳವಾಗಿ ಆದರೆ ಅಷ್ಟೇ ಸ್ಫುಟವಾಗಿ ತಿಳಿಸುತ್ತಾರೆ. ಅದಕ್ಕಾಗಿ ಡಾ| ಪಿ.ಎಸ್. ಶಂಕರ್ ಪ್ರತಿಷ್ಠಾನದ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿಯನ್ನು ಈ ಕೃತಿ ಪಡೆದಿದೆ.

ಡಾ. ಟಿ.ಎಸ್. ಸತ್ಯನಾರಾಯಣರಾವ್ ಅವರು ಬರೆದ ‘ದಾಂಪತ್ಯ ವೈದ್ಯ ಶಾಸ್ತ್ರ’ ಕೃತಿ ಲೈಂಗಿಕ ಅಂಗಾಂಗಗಳ ರಚನೆಯಿಂದ ಪ್ರಾರಂಭಿಸಿ ಲೈಂಗಿಕತೆಯ ಪ್ರತಿಯೊಂದು ಆಯಾಮಗಳನ್ನೂ ವಿವರಿಸುತ್ತದೆ. ತಪ್ಪುಕಲ್ಪನೆಗಳು ಯಾವುವು, ಅವುಗಳಿಂದ ಆಗುವ ದುಷ್ಪರಿಣಾಮ ಏನು ಎಂಬುದನ್ನು ಡಾ| ಟಿ.ಎಸ್.ಎಸ್. ರಾವ್ ಸರಳ ಶಬ್ದಗಳಲ್ಲಿ ವಿವರಿಸುತ್ತಾರೆ. ಉಳಿದಂತೆ ವಿಜಯ್ ಪಿ.ಎಸ್. ಮತ್ತು ಕೃಪಾ ಕುಮಾರಿ ಬರೆದ ಸುಖಮಯ ದಾಂಪತ್ಯ ಜೀವನ, ಡಾ. ಬಿ.ಡಿ.ಸತ್ಯನಾರಾಯಣರಾವ್ ಅವರು ಬರೆದ ಲೈಂಗಿಕ ಸಮಸ್ಯೆಗಳು ಮತ್ತು ಪರಿಹಾರಗಳು ತುಂಬಾ ಉಪಯುಕ್ತವಾಗಿದೆ. ಡಾ. ಕೆ.ಆರ್.ಶ್ರೀಧರ್‌ರವರು ಬರೆದ ಸಂಸಾರ ಸಾರ ಎಂಬ ಕೃತಿಯು ದಾಂಪತ್ಯ ಸಮಸ್ಯೆಯಲ್ಲಿ ಲೈಂಗಿಕತೆ ಎಷ್ಟು ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ತಿಳಿಸಿದ್ದಾರೆ.

ಲೈಂಗಿಕ ಶಿಕ್ಷಣ: ಇಂದು ಚರ್ಚೆಗೆ ಅತ್ಯಂತ ಗ್ರಾಸವಾಗಿರುವ ವಿಷಯವೆಂದರೆ ಲೈಂಗಿಕ ಶಿಕ್ಷಣ. ಲೈಂಗಿಕ ಶಿಕ್ಷಣ ಬೇಕೇ ಬೇಡವೇ ಎಂಬುದು ಒಂದು ಪ್ರಶ್ನೆ. ಅದು ಬೇಕು ಎಂದಾಗ ಯಾರಿಗೆ ಎಂಬುದು ಎರಡನೆಯ ಪ್ರಶ್ನೆ. ಯಾವ ಹಂತದಲ್ಲಿ ಮತ್ತು ಎಷ್ಟು ಆಳವಾಗಿ ಎಂಬುದು ಮೂರನೆಯ ಪ್ರಶ್ನೆ. ಲೈಂಗಿಕ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಅದರಲ್ಲೂ ಹರೆಯದವರಿಗೆ ಕೊಟ್ಟರೆ ಅದು ಸದುಪಯೋಗವಾಗುತ್ತದೆ.

ಲೈಂಗಿಕ ಅಂಗಾಂಗಗಳು ವಿಕಾಸಗೊಳ್ಳುವ ಈ ಸಂದರ್ಭದಲ್ಲಿ ಮನೋವಿಕಾಸ ಹರೆಯದವರ ಮನಸಿನಲ್ಲಿ ಲೈಂಗಿಕತೆ ಕುರಿತು ಹತ್ತು ಹಲವು ಪ್ರಶ್ನೆಗಳು ಏಳುವುದು ಸಹಜ. ಮಡಿವಂತಿಕೆಯು ನಮ್ಮ ಸಮಾಜದಲ್ಲಿ ಅಂತಹ ಪ್ರಶ್ನೆಗಳನ್ನು ಪರಿಹರಿಸಲು ಅನುವು ಮಾಡಿಕೊಡುವುದಿಲ್ಲ. ಅದರಿಂದ ಹರೆಯದವರು ಕುತೂಹಲದಿಂದ ಮುಚ್ಚುಮರೆಯಲ್ಲಿ ಸಿಗುವ ಮಾಹಿತಿಗಳಿಗೆ ಮೊರೆ ಹೋಗಿ ಮೋಸಹೋಗುತ್ತಾರೆ. ವಿಕೃತ ಕಾಮಗಳಿಗೆ, ಅನೈತಿಕ ಲೈಂಗಿಕತೆ ಲೈಂಗಿಕ ಅತ್ಯಾಚಾರಗಳಿಗೆ ಗುರಿಯಾಗಬಹುದು. ಲೈಂಗಿಕ ಆಸೆಗಳನ್ನು ಹತ್ತಿಕ್ಕಲಾಗದೇ ವಾಸ್ತವಿಕ ಅಂಶಗಳನ್ನು ಅರಿಯದೇ ಮನಃ ಕ್ಲೇಶಗಳಿಗೆ ಒಳಗಾಗಬಹುದು. ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಿ ಅವರು ಕಲಿಕೆಯಲ್ಲಿ ಹಿಂದುಳಿಯಬಹುದು. ಅದಕ್ಕಾಗಿ ಲೈಂಗಿಕ ಶಿಕ್ಷಣವನ್ನು ಪ್ರೌಢಶಾಲೆ ಮತ್ತು ಶಾಲಾ ಕಾಲೇಜುಗಳಲ್ಲಿ ಖಂಡಿತವಾಗಿಯೂ ಅಳವಡಿಸಬೇಕು. ಹಾಗೆ ಒದಗಿಸುವ ಶಿಕ್ಷಣದಿಂದ ಲೈಂಗಿಕತೆಯ ಕುರಿತು ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಬಹುದು. ವಾಸ್ತವಿಕ ಅಂಶಗಳ ಅರಿವನ್ನು ಹರೆಯದವರಲ್ಲಿ ಮೂಡಿಸಬಹುದು. ಇದರಿಂದ ಅನೈತಿಕ ಲೈಂಗಿಕತೆಯನ್ನು ತೊಲಗಿಸಬಹುದು.

ಲೈಂಗಿಕತೆ ಎಂದರೆ ಕೆಲವು ಸಂಭೋಗ ಅಷ್ಟೇ ಅಲ್ಲ. ಲೈಂಗಿಕತೆ ಸಮಗ್ರವಾದ ನಮ್ಮ ಜೀವನದ ಒಂದು ಅಂಗ ಎಂಬ ವಾಸ್ತವ ಸತ್ಯವನ್ನು ಹರೆಯದವರಿಗೆ ತಿಳಿಸಬೇಕು. ಹಾಗಾದರೆ ಭವಿಷ್ಯದಲ್ಲಿ ಅವರು ಸುಖೀ ದಾಂಪತ್ಯ ಹೊಂದಲು ಅನುವಾಗುತ್ತದೆ. ನೆಮ್ಮದಿಯ ಜೀವನ ಸಾಗಿಸಲು ಲೈಂಗಿಕ ಆರೋಗ್ಯ ಅವಶ್ಯ ಎಂಬ ಕಟು ಸತ್ಯವನ್ನು ಹರೆಯದವರಿಗೆ ತಿಳಿಸಬೇಕು. ಮೇಲಿನ ಅಂಶಗಳನ್ನಾಧರಿಸಿ ಲೈಂಗಿಕ ತಜ್ಞರು ಮನಃಶಾಸ್ತ್ರಜ್ಞರು. ಮನೋವೈದ್ಯರು ಲೈಂಗಿಕ ಶಿಕ್ಷಣ ಅಗತ್ಯ ಎಂಬ ಅಭಿಪ್ರಾಯ ಮುಂದಿಡುತ್ತಾರೆ. ಲೈಂಗಿಕತೆಯು ಹುಟ್ಟಾಸೆಗಳಲ್ಲೊಂದು. ಸಮಯ ಬಂದಾಗ ವ್ಯಕ್ತಿ ತಾನಾಗಿಯೇ ಕಲಿಯುತ್ತಾನೆ. ಅದಕ್ಕೆ ಶಿಕ್ಷಣದ ಅವಶ್ಯಕತೆಯಿಲ್ಲ. ಹಾಗೆ ಶಿಕ್ಷಣ ಕೊಟ್ಟರೆ ಅದರಿಂದ ಲೈಂಗಿಕ ಸ್ವೇಚ್ಛಾಚಾರಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ. ಅದರಲ್ಲಿ ಮಡಿವಂತಿಕೆ ಇರಬೇಕು ಎಂಬುದು ಕೆಲ ಶಿಕ್ಷಣ ತಜ್ಞರ ಅಭಿಪ್ರಾಯ. ಒಮ್ಮೆ ಲೈಂಗಿಕ ಶಿಕ್ಷಣವನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಿದರೂ ಅದನ್ನು ವಿದ್ಯಾರ್ಥಿಗಳಿಗೆ ಹೇಳಬೇಕಾದ ಶಿಕ್ಷರು ಹಾಗೆ ಪಾಠ ಮಾಡಲು ಮುಜುಗರ ಪಡುತ್ತಾರೆ. ಅದು ತೀರಾ ಅಸಹ್ಯ ಎಂದು ಹೇಳುವ ಶಿಕ್ಷಕರಿದ್ದಾರೆ ಎಂಬ ವಾದವನ್ನು ಇವರು ಮುಂದಿಡುತ್ತಾರೆ.

ಒಮ್ಮೆ ಕುಟುಂಬ ಯೋಜನಾ ಸಂಸ್ಥೆಯವರು ಪ್ರೌಢಶಾಲಾ ಶಿಕ್ಷಕರಿಗೆ ಮಾನಸಿಕ ಮತ್ತು ಲೈಂಗಿಕ ಸಮಸ್ಯೆಗಳು ಎಂಬ ಕಾರ್ಯಾಗಾರ ಒಂದನ್ನು ಏರ್ಪಡಿಸಿದ್ದರು. ಅದರಲ್ಲಿ ನಾನೂ ಪಾಲ್ಗೊಂಡಿದ್ದೆ. ಲೈಂಗಿಕ ಶಿಕ್ಷಣದ ಬಗ್ಗೆ ನಾನು ಉಪನ್ಯಾಸ ಮಾಡಿದೆ. ಸುಮಾರು ಎಪ್ಪತ್ತು ಶಿಕ್ಷಕರು ಭಾಗವಹಿಸಿದ್ದ ಆ ಸಭೆಯಲ್ಲಿ ಕೊನೆಯಲ್ಲಿ ಲೈಂಗಿಕ ಶಿಕ್ಷಣದ ಪರ/ವಿರೋಧ ಎಷ್ಟು ಮಂದಿ ಶಿಕ್ಷಕರಿದ್ದಾರೆ ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಯಿತು. ಆಶ್ಚರ್ಯವೆಂದರೆ ನಲವತ್ತೆರಡು ಶಿಕ್ಷಕರು ಲೈಂಗಿಕತೆ ಬಗ್ಗೆ ಪಾಠ ಮಾಡುವುದು ಕಷ್ಟ, ಹಾಗೇನಾದರೂ ಇದ್ದರೆ ಅದಕ್ಕೆ ಬೇರೆ ಶಿಕ್ಷಕರೇ ಬೇಕು ಎಂಬ ಅಭಿಪ್ರಾಯ ಸೂಚಿಸಿದರು. ಜನನಾಂಗಗಳ ರಚನೆ ಕುರಿತು ಪಾಠ ಮಾಡಲು ಕಷ್ಟ. ಇನ್ನು ಲೈಂಗಿಕತೆ ಕುರಿತು ತಿಳಿಸಿ ಹೇಳಲು ಅಸಾಧ್ಯ ಎಂಬ ಪ್ರತಿಕ್ರಿಯೆ ಬಂತು. ಲೈಂಗಿಕತೆ ಕುರಿತು ಕಲಿತ ಶಿಕ್ಷಕರಲ್ಲಿಯೂ ಸಹ ಎಷ್ಟು ಹಿಂಜರಿಕೆ ಇದೆ ಎಂಬುದಕ್ಕೆ ಇದು ಒಂದು ಉದಾಹರಣೆ.

ಇದರ ಬಗ್ಗೆ ಹೆಚ್ಚಿನ ಚರ್ಚೆಯಾಗಿ ಉಪಾಧ್ಯಾಯರ ಮನವೊಲಿಸಿ ಒಂದು ತೀರ್ಮಾನಕ್ಕೆ ಬರಬೇಕು ಎನ್ನುವುದು ಈಗ ಕೇಳಿಬರುವ ಮಾತು. ಹರೆಯದವರಿಗೆ ಯಾವ ಯಾವ ಅಂಶಗಳನ್ನು ಅಳವಡಿಸಿದರೆ ಸೂಕ್ತ ಎಂಬುದು ಚರ್ಚೆಯಾಗಬೇಕು. ಲೈಂಗಿಕ ಅಂಗರಚನೆ ಮಾತ್ರ ತಿಳಿಸಿ ಉಳಿದಂತೆ ಆಗುವ ಪರಿಣಾಮಗಳನ್ನು ತಿಳಿಸದಿದ್ದಲ್ಲಿ ಅದರಿಂದ ಆಗುವ ಅಪಘಾತಗಳೇ ಹೆಚ್ಚು. ಅದೇ ರೀತಿ ಲೈಂಗಿಕ ಅಂಗಾಂಗಗಳ ಕುರಿತು, ಲೈಂಗಿಕತೆ ಕುರಿತು ಇರುವ ತಪ್ಪುಕಲ್ಪನೆಗಳು ಮತ್ತು ಅನೈತಿಕ ಲೈಂಗಿಕತೆ ಕುರಿತು ವಿದ್ಯಾರ್ಥಿಗಳಿಗೆ (ಹರೆಯದವರಿಗೆ) ತಜ್ಞರಿಂದ ಸಾಹಿತ್ಯ ಒದಗಿಸಬೇಕು. ಇದಾಗದಿದ್ದಲ್ಲಿ ಹರೆಯದವರು ಇಂಟರ್‌ನೆಟ್ ಮತ್ತು ಸೈಬರ್‌ ಕೆಫೆಗಳಲ್ಲಿ ಹೋಗಿ ಸಮಯ ಕಳೆಯುತ್ತಾ ಕಲಿಕೆಯಲ್ಲಿ ಹಿಂದುಳಿಯುತ್ತಾರೆ. ಟಿ.ವಿ. ಮಾಧ್ಯಮ, ಕೆಲವು ಅಶ್ಲೀಲ ನಿಯತಕಾಲಿಕೆಗಳಲ್ಲಿ ಇಂಟರ್ನೆಟ್‌ನಲ್ಲಿ ಸಿಗುವ ಪೋರ‍್ನೋಗಳು, ಬ್ಲೂಫಿಲ್ಮ್‌ಗಳಿಗೆ ಶರಣು ಹೋಗುವ ಸಂದರ್ಭಗಳು ಹೆಚ್ಚು. ಇತ್ತೀಚೆಗಂತೂ ಮೊಬೈಲ್ ಫೋನ್‌ಗಳಲ್ಲಿ ಎಸ್.ಎಂ.ಎಸ್. ಮೂಲಕ ಅಶ್ಲೀಲ ಮಾತುಕತೆ, ಬ್ಲೂ ಫಿಲ್ಮ್ ಡೌನ್ ಲೋಡ್ ಮಾಡುವ ಹರೆಯದವರು ಅಧಿಕವಾಗುತ್ತಿದ್ದಾರೆ. ಸರಿಯಾದ ಲೈಂಗಿಕ ಶಿಕ್ಷಣ ದೊರೆತರೆ ಇಂತಹ ಅವಘಡಗಳನ್ನು ನಿವಾರಿಸಲು ಸಾಧ್ಯ. ಈ ದಿಕ್ಕಿನಲ್ಲಿ ಪೋಷಕರು ತಮ್ಮ ಮಕ್ಕಳ ಸಂಶಯಗಳಿಗೆ ನಾಚಿಕೆ ಪಟ್ಟುಕೊಳ್ಳದೇ ಸಹಜವಾಗಿ ಉತ್ತರಿಸಲು ಪ್ರಯತ್ನಿಸಬೇಕು. ಬಾಲ್ಯದಿಂದಲೇ ಲೈಂಗಿಕ ಶಿಕ್ಷಣ ಪೋಷಕರಿಂದ ಪ್ರಾರಂಭವಾದರೆ ಅದು ಉತ್ತಮ ಎಂಬುದು ತಜ್ಞರ ಅಭಿಪ್ರಾಯ. ಈ ದಿಶೆಯಲ್ಲಿ ಲೈಂಗಿಕ ಶಿಕ್ಷಣದಲ್ಲಿ ಪೋಷಕರ ಪಾತ್ರವನ್ನು ಮಕ್ಕಳಿಗೆ ತಿಳಿಸಿ ಹೇಳುವ ಪರಿ ಇವುಗಳ ಕುರಿತು ತಿಳಿಸುವ ಕೃತಿಗಳೂ ಹೊರಬರಬೇಕು.

ಮಿದುಳು ಒಂದು ಲೈಂಗಿಕ ಅಂಗಾಂಗ ಎಂದರೆ ತಪ್ಪಾಗಲಾರದು. ಕಾರಣ ಮಿದುಳಿನ ಲಿಂಬಿಕ್ ವಿಭಾಗದಲ್ಲಿ ಲೈಂಗಿಕತೆಯಲ್ಲಿ ನಿಯಂತ್ರಿಸುವ ಕೇಂದ್ರಗಳಿವೆ. ಇದು ವಿದ್ಯಾವಂತರೆನಿಸಿಕೊಂಡವರಿಗೂ, ಬುದ್ಧಿವಂತರೆನಿಸಿಕೊಂಡವರಿಗೂ ತಿಳಿಯದ ವಿಚಾರ. ಇದರಿಂದ ಸ್ಪರ್ಧಾತ್ಮಕ ಯುಗದಲ್ಲಿ ಹಲವಾರು ಲೈಂಗಿಕ ಸಮಸ್ಯೆಗಳಿಗೆ ಮಾನಸಿಕ ಒತ್ತಡವೇ ಕಾರಣ ಎಂಬುದು ನಿರ್ವಿವಾದ. ಇದನ್ನು ಡಾ| ಛಬ್ಬಿಯವರು ಬಹಳ ಸುಂದರವಾಗಿ ಹೊರತಂದಿದ್ದಾರೆ. ವಿವಾಹಪೂರ್ವ ಲೈಂಗಿಕ ಮಾಹಿತಿ ಈ ದಿಶೆಯಲ್ಲಿ ಬಹಳ ಉಪಕಾರಿ. ನಾನು ಅವಲೋಕನ ಮಾಡಿದ ಲೈಂಗಿಕ ಸಾಹಿತ್ಯ ಕೃತಿಗಳಲ್ಲಿ ಮೇಲಿನವುಗಳ ಕುರಿತು ಲೇಖಕರು ಬರೆದಿದ್ದಾರೆ. ಆದರೆ ಇವುಗಳ ಕುರಿತು ಕಿರು ಕೃತಿಗಳು ಹೊರಬಂದರೆ ಅದರಿಂದ ಇನ್ನೂ ಹೆಚ್ಚು ಉಪಯುಕ್ತವಾದೀತೆಂದು ನನ್ನ ಅನಿಸಿಕೆ.

ಪ್ರಕಾಶಕರ ಬಗ್ಗೆ ಎರಡು ಮಾತು

ಸಾಹಿತ್ಯ ಸೇವೆಯಲ್ಲಿ ಲೇಖಕರು ಸಾಹಿತ್ಯ ಒದಗಿಸುವುದು ಒಂದೆಡೆಯಾದರೆ ಅಷ್ಟೇ ವ್ಯವಸ್ಥಿತವಾಗಿ ಜನರಿಗೆ ತಲುಪಿಸುವಲ್ಲಿ ಪ್ರಕಾಶಕರ ಪಾತ್ರ ಹಿರಿದು ಎಂಬುದು ಗಮನಾರ್ಹ. ಈ ದಿಕ್ಕಿನಲ್ಲಿ ನವಕರ್ನಾಟಕ ಪ್ರಕಾಶದನ ಶ್ರೀಯುತ ಆರ್. ಎಸ್. ರಾಜಾರಾಂ ಅವರು ಮಾನಸಿಕ ಮತ್ತು ಲೈಂಗಿಕ ಆರೋಗ್ಯದ ಕುರಿತು ಕೃತಿಗಳ ಪ್ರಕಾಶನಗೊಳಿಸುವ ಕಾರ್ಯ ಶ್ಲಾಘನೀಯ. ಪ್ರತಿವರ್ಷ ಅವರು ಹೊರತರುವ ವ್ಯಕ್ತಿ ವಿಕಸನ ಮಾಲೆಯ ಕೃತಿಗಳು ಸಮಾಜದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದರೆ ಅದು ಅತಿಶಯೋಕ್ತಿಯಲ್ಲ. ಲೇಖಕರನ್ನು ಅದರಲ್ಲಿಯೂ ವೈದ್ಯರು ಮನೋವೈದ್ಯರನ್ನು ಕಲೆ ಹಾಕಿ ಅವರಿಗೆ ಬರೆಯುವಂತೆ ಪ್ರೋತ್ಸಾಹಿಸಿ ಹಿಂದೂ ಮುಂದೂ ಬಿಡದೇ ಬರೆಸಿ ಅಂದವಾಗಿ ಅಚ್ಚು ಹಾಕಿಸಿ, ಪುಸ್ತಕ ಪ್ರದರ್ಶನ ಏರ್ಪಡಿಸಿ ಸಾರ್ವಜನಿಕರ ಗಮನಕ್ಕೆ ತರುವುದು ಸುಲಭದ ಕೆಲಸವಿಲ್ಲ. ಪ್ರಚಾರ ನೀಡುವ ಮಹತ್ತರ ಕಾರ್ಯ ನಿರ್ವಹಿಸುವ ಅನೇಕ ಪ್ರಕಾಶನಗಳಿವೆ. ಐ.ಬಿ.ಹೆಚ್ ಪ್ರಕಾಶನ ಸಂಸ್ಥೆ, ಆರೋಗ್ಯ ಪ್ರಕಾಶನ ಸಂಸ್ಥೆ, ಸ್ನೇಹ ಪ್ರಕಾಶನ ಶಿವಮೊಗ್ಗೆಯ ಕ್ಷೇಮ ಟ್ರಸ್ಟ್, ವಿಶ್ವರೂಪ ಪ್ರಕಾಶನ ಸಂಸ್ಥೆ, ದಿವ್ಯ ಪ್ರಕಾಶನ ಸಂಸ್ಥೆ, ಸ್ನೇಹ ಪ್ರಕಾಶನ ಸಂಸ್ಥೆ ಆರೋಗ್ಯ ಶಿಕ್ಷಣ ಪ್ರತಿಷ್ಠಾನ ಲೈಂಗಿಕ ವಿಜ್ಞಾನ ಅಧ್ಯಯನ ಪೀಠ ಇತ್ಯಾದಿ ಪ್ರಕಾಶನಗಳು ಮುಂಚೂಣಿಯಲ್ಲಿವೆ. ಅದೇ ರೀತಿ ವಿಶ್ವವಿದ್ಯಾಲಯಗಳು ಸಹ ಮಾನಸಿಕ ಆರೋಗ್ಯ ಕುರಿತ ಕೃತಿಗಳನ್ನು ಪ್ರಸಾರಾಂಗ ವಿಭಾಗದ ಮೂಲಕ ಹೊರತಂದು ಜನಸಾಮಾನ್ಯರಿಗೆ ಅರಿವು ಮೂಡಿಸುವ ಕೆಲಸವನ್ನು ನಿರ್ವಹಿಸುತ್ತಿವೆ. ಇವುಗಳಂತೆ ಇನ್ನು ಬೇರೆ ಪ್ರಕಾಶನಗಳನ್ನು ನೆನಪಿಸಲು ಆಗದ್ದಕ್ಕೆ ಕ್ಷಮೆ ಇರಲಿ. ಅವೆಲ್ಲಾ ಸಂಸ್ಥೆಗಳೂ ಸಹ ವೈದ್ಯ ಸಾಹಿತ್ಯ ಕ್ಷೇತ್ರದಲ್ಲಿ ಪ್ರಚುರಪಡಿಸುವ ಮಹತ್ತರ ಕಾರ್ಯವನ್ನು ಹಮ್ಮಿಕೊಂಡಿವೆ. ಈ ಎಲ್ಲ ಪ್ರಕಾಶನ ಸಂಸ್ಥೆಗಳ ಜತೆಗೆ ವಿಶ್ವವಿದ್ಯಾಲಯದ ಪ್ರಸಾರಾಂಗಗಳನ್ನು ಅಭಿನಂದಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ. ಇತ್ತೀಚಿನ ವರ್ಷಗಳಲ್ಲಿ ನಿಯತಕಾಲಿಕೆಗಳು ಮತ್ತು ದೈನಿಕ ವಾರ್ತಾ ಪತ್ರಿಕೆಗಳು ಆರೋಗ್ಯ ಸಾಹಿತ್ಯವನ್ನು ಅಂಕಣದ ಮೂಲಕ ಸಾರ್ವಜನಿಕರಿಗೆ ತಲುಪಿಸುವಲ್ಲಿ ಮಹತ್ತರ ಕೆಲಸ ಮಾಡುತ್ತಿವೆ. ಅವುಗಳಿಗೂ ನಮ್ಮ ಗೌರವ ಸಲ್ಲಬೇಕು.

ಕೊನೆಯ ಮಾತು

ವೈದ್ಯ ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡ ವೈದ್ಯ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದವರು ಡಾ| ಸಿ.ಆರ್.ಸಿ. ವೈದ್ಯ ಸಾಹಿತ್ಯ ಅನೇಕ ಪ್ರಕಾರಗಳನ್ನು ವಿಶ್ಲೇಷಿಸಿ ಮುಂದೇನಾಗಬೇಕು ಎಂಬುದನ್ನು ಕುರಿತು ಚಿಂತನೆ ನಡೆಸುವ ಮೂಲ ಅವರ ಷಷ್ಠ್ಯಬ್ಧಿಯನ್ನು ಆಚರಿಸುತ್ತಿರುವುದು ಅರ್ಥಪೂರ್ಣವೆನಿಸುತ್ತದೆ. ಈ ದಿಶೆಯಲ್ಲಿ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತನ್ನು ನಾನು ಅಭಿನಂದಿಸುತ್ತೇನೆ. ಮಾನಸಿಕ ಮತ್ತು ಲೈಂಗಿಕ ಆರೋಗ್ಯ ಕೃತಿಗಳ ಕುರಿತು ಅವಲೋಕನ ನಡೆಸಿ ಮುಂದಿನದರ ಬಗ್ಗೆ ಕೆಲವು ವಾಕ್ಯಗಳನ್ನು ಬರೆಯಲು ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು ನನಗೆ ಅವಕಾಶ ಮಾಡಿಕೊಟ್ಟಿದೆ. ಮಾನಸಿಕ ಮತ್ತು ಲೈಂಗಿಕ ವೈದ್ಯ ಸಾಹಿತ್ಯದಲ್ಲಿ ಲಭ್ಯವಾದ ಕೃತಿಗಳನ್ನು ಕುರಿತು ಅವಲೋಕನ ಮಾಡುವ ಒಂದು ಸಣ್ಣ ಪ್ರಯತ್ನವನ್ನು ಮಾಡಿದ್ದೇನೆ. ನನಗೆ ಕೃತಿಗಳನ್ನು ಸಕಾಲದಲ್ಲಿ ಒದಗಿಸಿದ ಎಲ್ಲಾ ಲೇಖಕರಿಗೂ ನನ್ನ ಅಭಾರಗಳು. ಡಾ| ಸಿ.ಆರ್.ಸಿ. ಯವರು ಶತಾಯುಷಿಯಾಗಲಿ, ಅವರಿಂದ ಸಮಾಜಕ್ಕೆ ಇನ್ನೂ ಹೆಚ್ಚಿನ ಉಪಯೋಗವಾಗಲಿ ಮತ್ತು ಸಿ.ಆರ್.ಸಿ.ಯವರಿಗೂ ಮತ್ತು ಅವರ ಕುಟುಂಬಕ್ಕೂ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ಎಂದು ಶುಭ ಹಾರೈಸುತ್ತಾ ನನ್ನ ಈ ಚಿಕ್ಕ ಲೇಖನಕ್ಕೆ ಇತಿ ಶ್ರೀ ಹಾಡುತ್ತೇನೆ.

* * *