ಇತ್ತೀಚೆಗೆ ೩೦ವರ್ಷದ ಯುವಕನೊಬ್ಬ ಕಣ್ಣು ಮುಂಜಾಗುತ್ತಿದೆ ಎಂದು ಕಣ್ಣು ಪರೀಕ್ಷೆಗೆ ಬಂದ. ಕಣ್ಣಿನ ಪರೀಕ್ಷೆ ಮಾಡಿದಾಗ ಮೇಲ್ನೋಟಕ್ಕೆ ಅದು ಕಣ್ಣಿನ ಕಾಯಿಲೆಯ ಹಾಗೆ ಅನಿಸಲಿಲ್ಲ. ದೈಹಿಕ ಕಾಯಿಲೆ ಇರಬೇಕು ಎನಿಸಿತು. ಸುಮಾರು ಶೇ. ೪೦ ರಷ್ಟು ಕಣ್ಣಿನ ದೃಷ್ಟಿ ಕಡಿಮೆಯಾಗಿದೆ ಎಂಬ ಅಂಶ ಹೊರತುಪಡಿಸಿ ಕಣ್ಣಿನಲ್ಲಿ ಬೇರಾವ ಲಕ್ಷಣವೂ ಇರಲಿಲ್ಲ. ಕಣ್ಣು ನೋವಿರಲಿಲ್ಲ, ಕಣ್ಣು ಕೆಂಪಾಗಿರಲಿಲ್ಲ, ನೀರು ಬರುತ್ತಿರಲಿಲ್ಲ, ಕಣ್ಣಿನ ಕಡಿತವಿರಲಿಲ್ಲ. ಕಾಯಿಲೆಯ ಬಗ್ಗೆ ವಿವರವಾಗಿ ತಿಳಿಯಲು ಸೂಕ್ತ ಔಷಧಿ ಕಣ್ಣಿಗೆ ಬಿಟ್ಟು ಅರ್ಧ ಗಂಟೆಯ ನಂತರ ಪುನಃ ಅಕ್ಷಿಪಟಲ ಪರೀಕ್ಷೆ ಮಾಡಿದಾಗ ದೈಹಿಕ ಕಾಯಿಲೆ ಎಂಬ ನನ್ನ ಅನುಮಾನ ನಿಜವಾಗಿತ್ತು.

ವಿವರವಾಗಿ ವಿಚಾರಿಸಿದಾಗ ಆತ ಟ್ರಾನ್ಸಪೋರ್ಟ್‌ಲಾರಿಯಲ್ಲಿ ಊರೂರು ಸುತ್ತುವ ಡ್ರೈವರ್‌. ಮದುವೆಯಾದರೂ, ಈ ದಿನ ಒಂದು ಊರಿನಲ್ಲಿದ್ದರೆ ನಾಳೆ ಮತ್ತೊಂದು ಊರಿನಲ್ಲಿ ಠಿಕಾಣಿ. ಕಳೆದ ಆರು ತಿಂಗಳಿನಿಂದ ಆಗಾಗ ಜ್ವರ, ಕೆಮ್ಮು ಕಾಣಿಸಿಕೊಂಡವು. ವೈದ್ಯರು ಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ಔಷಧ ಕೊಡುತ್ತಿದ್ದರು. ತಾತ್ಕಾಲಿಕವಾಗಿ ಶಮನವಾಗುತ್ತಿತ್ತು. ನಂತರ ಆತನ ವಿವರವಾದ ರಕ್ತಪರೀಕ್ಷೆ ಮಾಡಿಸಿದಾಗ ಆತನಿಗೆ ಏಡ್ಸ್ ಕಾಯಿಲೆ ಇದೆಯೆಂಬ ನನ್ನ ಸಂದೇಹ ನಿಜವಾಗಿತ್ತು. ಸಿಹಿಮೂತ್ರ ರೋಗ, ಸಿಫಿಲಿಸ್ ಮತ್ತು ಬಿ.ಪಿ. ಕಾಯಿಲೆಗಳನ್ನು ಕೇವಲ ಕಣ್ಣಿನ ಒಳಗಡೆ ಪರೀಕ್ಷಿಸಿ ಹೇಗೆ ನೇತ್ರವೈದ್ಯ ಮೊದಲ ಬಾರಿಗೆ ಕಾಯಿಲೆ ಪತ್ತೆ ಹಚ್ಚಬಲ್ಲನೋ ಅದೇ ರೀತಿ ಏಡ್ಸ್ ಕಾಯಿಲೆಯನ್ನು ಮೊದಲ ಬಾರಿಗೆ ಕಣ್ಣಿನ ವೈದ್ಯನೇ ಪತ್ತೆ ಮಾಡಬಹುದು ಎಂಬುದಕ್ಕೆ ಇದು ಒಂದು ಉದಾಹರಣೆ ಮಾತ್ರ.

ಏಡ್ಸ್‌ಕಾಯಲೆಯ ವೈರಸ್‌ಗಳು ಟಿ. ಲಿಂಫೋಸೈಟ್ ಎಂಬ ಜೀವಕೋಶಗಳನ್ನು ನಾಶಗೊಳಿಸಿ, ಕಣ್ಣಿನೊಳಗೆ ಹಾಗೂ ಕಣ್ಣಿನ ಹೊರಗೆ ಹಲವು ರೀತಿಯ ಸೋಂಕುಗಳಿಗೆ ಕಾರಣವಾಗುವುದೇ ಅಲ್ಲದೆ, ದೃಷ್ಟಿ ಗಮನಾರ್ಹವಾಗಿ ಕುಂಠಿತಗೊಳ್ಳುವಂತೆಯೂ ಮಾಡುತ್ತದೆ.

ಏಡ್ಸ್ ಪೀಡಿತ ಶೇ. ೭೦ ರೋಗಿಗಳಲ್ಲಿ ಕಣ್ಣಿನ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ಕಣ್ಣಿನಲ್ಲಿ ಕಾಣಿಸಿಕೊಳ್ಳುವ ಮುಖ್ಯ ರೋಗಲಕ್ಷಣವೆಂದರೆ ಕಣ್ಣಿನ ಅಕ್ಷಿಪಟಲದಲ್ಲಿ ಕಾಣಿಸಿಕೊಳ್ಳುವ ಹೆಚ್‌ಐವಿ ರೆಟಿನೋಪತಿ. ಈ ರೆಟಿನೋಪತಿ ಮೇಲ್ನೋಟಕ್ಕೆ ಏರು ರಕ್ತದೊತ್ತಡದ (ಹೈಪರ್‌ಟೆನ್ಸೀವ್) ರೆಟಿನೋಪತಿಯನ್ನೇ ಹೋಉತ್ತದೆ. ಅದರಲ್ಲಿಯಂತೆಯೇ ಅಕ್ಷಿಪಟಲದ ತುಂಬಾ ವಿವಿಧ ರೀತಿಯ ರಕ್ತಸ್ರಾವಗಳು ಒಸರುಗಳು (ಎಕ್ಸುಡೇಟ್ಸ್) ಹಾಗೂ ಸಣ್ಣ ಸಣ್ಣ ರಕ್ತಸ್ರಾವದ ತುಣುಕುಗಳು (ಹೆಮರೇಜಸ್) ಕಾಣಿಸಿಕೊಳ್ಳುತ್ತದೆ. ಈ ರೀತಿಯ ರಕ್ತಸ್ರಾವಗಳು ಮತ್ತು ಒಸರುಗಳು ಅಕ್ಷಿಪಟಲದ ತುಂಬಾ ವ್ಯಾಪಿಸಿದಂತೆ ಅದರಲ್ಲಿಯೂ ಅಕ್ಷಿಪಟಲದ ಮಧ್ಯಭಾಗ ಮ್ಯಾಕ್ಯುಲ ಭಾಗವನ್ನು ಆವರಿಸಿದಾಗ ದೃಷ್ಟಿ ಗಮನಾರ್ಹವಾಗಿ ಕುಂಠಿತಗೊಳ್ಳುತ್ತದೆ. ವ್ಯಕ್ತಿಗೆ ಏಡ್ಸ್ ಕಾಯಿಲೆ ಸ್ವಲ್ಪ ಮುಂದುವರಿದ ಹಂತದಲ್ಲಿದ್ದಾಗ ಈ ಮುಂದುವರಿದ ಲಕ್ಷಣಗಳು ಕಣ್ಣಿನಲ್ಲಿ ಕಾಣಿಸಿಕೊಳ್ಳುತ್ತವೆ.

ಈ ಹಂತದಲ್ಲಿ ಮೂಲ ಏಡ್ಸ್ ಕಾಯಿಲೆಗೆ ಚಿಕಿತ್ಸೆ ಮಾಡಬೇಕೇ ಹೊರತು ಕಣ್ಣಿನ ಲಕ್ಷಣಗಳಿಗೆ ಪ್ರತ್ಯೇಕವಾದ ಚಿಕಿತ್ಸೆಯಿಲ್ಲ.

ಕೆಲವೊಮ್ಮೆ ಕಣ್ಣುಗುಡ್ಡೆಯ ಹೊರಭಾಗದಲ್ಲಿ ಕ್ಯಾಪೊಸಿ ಸಾರ್ಕೋಮಾ ಎಂಬ ಹೆಸರಿನ ಸಣ್ಣ ಸಣ್ಣ ಗಡ್ಡೆಗಳು ಏಡ್ಸ್ ರೋಗಿಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇದು ಒಂದು ರೀತಿಯ ಕ್ಯಾನ್ಸರ್ ಕಾಯಿಲೆ. ಕೆಲವೊಮ್ಮೆ ಇದಕ್ಕೆ ಶಸ್ತ್ರಚಿಕಿತ್ಸೆ ಹಾಗೂ ಔಷಧ ಚಿಕಿತ್ಸೆ (ಕಿಮೋಥೆರಪಿ)ಗಳನ್ನು ಮಾಡಬೇಕಾಗುತ್ತದೆ.

ತೀವ್ರ ರೀತಿಯ ಹರ್ಪಿಸ್ ಸೋಂಕು ಕಣ್ಣಿನ ಭಾಗದಲ್ಲಿ ಉಂಟಾದಾಗ ಕೆಲವೊಮ್ಮೆ ಏಡ್ಸ್ ಕಾಯಿಲೆಯೇ ಇದಕ್ಕೆ ಕಾರಣವಾಗಿರುತ್ತದೆ. ಇದನ್ನು ನೇತ್ರ ವೈದ್ಯ ಯಾವಾಗಲೂ ಗಮನದಲ್ಲಿಟ್ಟುಕೊಂಡು ಹರ್ಪಿಸ್ ಕಾಯಿಲೆಯ ಚಿಕಿತ್ಸೆಯನ್ನು ಸಮಗ್ರವಾಗಿ ಕೈಗೊಳ್ಳಬೇಕಾಗುತ್ತದೆ. ಈ ಕಾರಣಗಳಿಗಾಗಿ ಏಡ್ಸ್ ಕಾಯಿಲೆ ಪತ್ತೆ ಹಚ್ಚುವಲ್ಲಿ ನೇತ್ರವೈದ್ಯನ ಪಾತ್ರವೂ ಮುಖ್ಯವಾಗುತ್ತದೆ.

 

ವೈದ್ಯಸಾಹಿತಿಯಾಗಿನನ್ನಅನುಭವ
ದಿಕ್ಕಿಲ್ಲದ ಮಗು ಭವಿಷ್ಯ ಕಂಡುಕೊಂಡಿತು
ಡಾ| ಎಚ್.ಎಸ್.ಮೋಹನ್ ಕಳೆದ ೨೪ ವರ್ಷಗಳಿಂದ ೮೦೦ ಕ್ಕೂ ಹೆಚ್ಚು ಲೇಖನಗಳನ್ನು ಬರೆದದ್ದರಿಂದ ಸ್ವಾಭಾವಿಕವಾಗಿ ಭಿನ್ನ ರೀತಿಯ ಅನುಭವಗಳಾಗಿವೆ. ಮುಖ್ಯವಾ ಒಂದೆರಡನ್ನು ಇಲ್ಲಿ ಹೇಳುವುದ ಸೂಕ್ತ ಎಂದು ಭಾವಿಸುತ್ತೇನೆ.

೧೯೮೮ ರಲ್ಲಿ ನಾನು ಮಣಿಪಾಲದ ಕೆ.ಎಂ.ಸಿ.ಯಲ್ಲಿ ಉಪನ್ಯಾಸಕನಾಗಿದ್ದೆ. ಆಗ ಕೈ ಕಾಲು ಬೆಳವಣಿಗೆಯಿಲ್ಲದೆ ಹುಟ್ಟಿದ ‘ಫೋರ್ಕೇಮೀಲಿಯ’ ಮಗುವಿನ ಬಗ್ಗೆ ಬರೆದಿದ್ದೆ. ಆ ಮಗುವನ್ನು ತಮಗೆ ಸಾಕಲು ಸಾಧ್ಯವಿಲ್ಲವೆಂದು ಹೆತ್ತವರು ಕೆ.ಎಂ.ಸಿ. ಆಸ್ಪತ್ರೆಯಲ್ಲಿಯೇ ಬಿಟ್ಟು ತೆರಳಿದ್ದರು. ವೈದ್ಯಕೀಯ ವೈಚಿತ್ರ‍್ಯ ಮತ್ತು ಆ ಮಗುವಿನ ಹೊಣೆ ಯಾರದ್ದು? ಎಂಬ ಬಗ್ಗೆ ಒತ್ತುಕೊಟ್ಟು ನಾನು ‘ಉದಯವಾಣಿ’ಯಲ್ಲಿ ಬರೆದ ಲೇಖನ ಮುಖಪುಟದಲ್ಲಿ ಪ್ರಕಟವಾಯಿತು. ೨-೩ ದಿನಗಳಲ್ಲಿ ಕೇರಳದ ‘ಮಲೆಯಾಳಂ ಮನೋರಮಾ’ ಮತ್ತು ಮುಂಬೈನ ‘ಫ್ರೀ ಪ್ರೆಸ್ ಜರ್ನಲ್’ ಪತ್ರಿಕೆಗಳು ಇದೇ ಲೇಖನವನ್ನು ಆಧರಿಸಿ ವರದಿ ಪ್ರಕಟಿಸಿದವು. ನಂತರ ನಾನೇ ವಿವರವಾಗಿ ‘ತರಂಗ’, ‘ಈವ್ಸ್ ವೀಕ್ಲಿ’ ಪತ್ರಿಕೆಗಳಲ್ಲಿ ಲೇಖನಗಳನ್ನು, ಉಳಿದ ‘ಇಂಡಿಯನ್ ಎಕ್ಸ್‌ಪ್ರೆಸ್’ ‘ಟೈಮ್ಸ್‌ಆಫ್ ಇಂಡಿಯಾ’ ‘ಸಂಯುಕ್ತ ಕರ್ನಾಟಕ’, ‘ಇಂಡಿಯಾ ಟುಡೇ’ ಹೀಗೆ ವಿವಿಧ ಪತ್ರಿಕೆಗಲ್ಲಿ ೨೩-೨೪ ಲೇಖನಗಳು ಪ್ರಕಟವಾದವು. ಈ ಮದ್ಯೆ ಬೆಂಗಳೂರಿನ ಆಶ್ರಯ ಸಂಸ್ಥೆಯವರು ಮಗುವನ್ನು ಸಾಕಲು ಕೊಂಡೊಯ್ದರು. ಇಂಡಿಯಾ ಟುಡೆ ವರದಿ ಓದಿದ ಇಬ್ಬರು ವಿದೇಶಿಯರು ೧೫೦ ಡಾಲರ್ ಹಾಗೂ ಆಟಿಗೆಗಳನ್ನು ಕಳುಹಿಸಿಕೊಟ್ಟರು. ೧೯೮೯ ರಲ್ಲಿ ನಾನು ಮಣಿಪಾಲ ಬಿಟ್ಟು ಸಾಗರದಲ್ಲಿ ಸ್ವತಂತ್ರ ವೃತ್ತಿಗೊಂಡೆ. ೧೯೯೦ ರಲ್ಲಿ ಅಕಸ್ಮಾತ್ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಮುಖಪುಟದಲ್ಲಿ ಈ ಮಗುವಿನ ಚಿತ್ರದ ವರದಿ ಇತ್ತು. ಅಮೆರಿಕದ ದಂಪತಿಗಳು ಇದನ್ನು ದತ್ತು ತೆಗೆದು ಅಲ್ಲಿಗೆ ಕೊಂಡುಹೋದರು. ಎಂದಿತ್ತು. ಮಗುವಿಗೆ ಹೊಸ ಜೀವನ ಸಿಕ್ಕಿತು ಎಂದು ಸಮಾಧಾನ ಆಯಿತು. ೨೦೦೭ರ ಡಿಸೆಂಬರ್‌ನಲ್ಲಿ ‘ಹಿಂದು’ವಿನಲ್ಲಿ ಇದೇ ಮಗು ಈಗ ಯುವತಿಯಾದ ಬಗ್ಗೆ ವರದಿ ಇತ್ತು. ಕೈಯಿಲ್ಲದಿದ್ದರೂ ಕುತ್ತಿಗೆಯಲ್ಲಿ ಕುಂಚ ಹಿಡಿದು ಚಿತ್ರಕಲೆಯಲ್ಲಿ ವಿಶೇಷ ಸಾಧನೆ ಮಾಡಿದ ಯುವತಿ ‘ಆಶ್ರಯ’ದ ಬೆಳ್ಳಿಹಬ್ಬದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದಾಳೆ ಎಂದಿತ್ತು. ಅದೇ ದಿನ ನನಗೂ ಅಲ್ಲಿಂದ ಫೋನ್ ಬಂದು ಆ ಯುವತಿಯೇ ಮಾತನಾಡಿದಳು. ಕುಂದಾಪುರ ತಾಲ್ಲೂಕಿನ ಹುಡುಗಿ ಅಮೆರಿಕನ್ ಆಕ್ಸೆಂಟ್‌ನಲ್ಲಿ ಇಂಗ್ಲಿಷ್ ಮಾತನಾಡಿದಾಗ ಮೊದಲು ಅರ್ಥವಾಗಲಿಲ್ಲ. ನಂತರ ಅವಳ ಒತ್ತಾಯಕ್ಕೆ ಮಣಿದು ಬೆಂಗಳುರಿಗೆ ಹೋಗಿ ಆ ಹುಡುಗಿಯ ಬೌದ್ಧಿಕ ಬೆಳವಣಿಗೆಯನ್ನು ಕಂಡು ಚಕಿತಗೊಂಡೆ, ಅವಳ ಸಾಕು ತಾಯಿ ತಂದೆಯರ ಶ್ರಮವನ್ನು ಮನಸಾರೆ ಶ್ಲಾಘಿಸಿದೆ. ಪತ್ರಿಕಾ ಮಾಧ್ಯಮ, ‘ಆಶ್ರಯ’ದಂತಹ ಸಂಸ್ಥೆ ಹೀಗೆ ಯಾರ‍್ಯಾರದೋ ಪರಿಶ್ರಮದ ಕಾರಣ ದಿಕ್ಕಿಲ್ಲದ ಮಗು ಒಳ್ಳೆಯ ಭವಿಷ್ಯ ಕಂಡುಕೊಂಡದ್ದು ಸಮಾಧಾನ ನೀಡಿತು.

* * *