ಬಾಲಪೀಡಕರು : ಇದ್ಯಾವ ಪದದ ಹೆಸರು ಅಂದುಕೊಂಡಿರಾ? ಇದನ್ನು ಆಂಗ್ಲಭಾಷೆಯಲ್ಲಿ ಚೈಲ್ಡ್ ಮಾಲೆಸ್ಟರ್ಸ ಎನ್ನುತ್ತಾರೆ. ವಿಕೃತ ಮನಸ್ಸಿನವರು ಮಕ್ಕಳನ್ನು ಪೀಡಿಸಿ ಹಿಂಸೆ ಮಾಡುವುದಕ್ಕೆ ಈ ಹೆಸರು ಒಂದು ವಿಧದ ಹಿಂಸಾತ್ಮಕ ಶೋಷಣೆ.

ಅದನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಪುರಷರು ನೀಡುವ ಪೀಡನೆ ಮತ್ತು ಮಹಿಳೆಯರು ನೀಡು ಪೀಡನೆ.

ಮಹಿಳೆಯರು ಅಂದರೆ ಎಲ್ಲರೂ ಆ ರೀತಿಯಿರುವುದಿಲ್ಲ ಮತ್ತು ಪುರುಷರಲ್ಲಿಯೂ ಆ ರೀತಿಯಿರುವುದಿಲ್ಲ. ಆ ವಿಕೃತ ಮನಸ್ಸಿನವರ ಗುಂಪೇ ಬೇರೆ ಇರುತ್ತದೆ. ಮೇಲ್ನೋಟಕ್ಕೆ ಸತ್ಯ ನಿಮಗೆ ತಿಳಿಯುವುದಿಲ್ಲ. ಕೆಲಸಕ್ಕೆಂದು ಮನೆಗೆ ಆಯ್ಕೆ ಮಾಡುವುದು ಪುಟ್ಟ ಹುಡುಗಿಯರನ್ನು. ಆ ಪುಟ್ಟ ಮಕ್ಕಳ ವಯಸ್ಸು ೮ ರಿಂದ ೧೫ರವರೆಗೂ ಇರಬಹುದು. ಮನೆಗೆಲಸದೊಂದಿಗೆ, ಮಕ್ಕಳನ್ನು ಸ್ಕೂಲಿಗೆ ಬಿಟ್ಟು ಬರುವುದು, ಅಂಗಡಿಗೆ ಚಿಕ್ಕಪುಟ್ಟ ವಸ್ತು ತರಲು ಅವರೇ ಹೋಗುತ್ತಾರೆ. ಅದಕ್ಕೆಂದೇ ಸಂಬಳ ಕೊಡುತ್ತೇವೆ ನಿಜ. ಆದರೆ ಅವುಗಳೂ ಹೊಟ್ಟೆಯಿದೆ, ಮನಸ್ಸಿದೆ ಅಂತ ಕೆಲವರಿಗೆ ಅರ್ಥವೇ ಆಗುವುದಿಲ್ಲ. ಕೆಲಸ ಮಾಡದೆ ಟೀವಿ ನೋಡುತ್ತಾ ಕೂತ ಹುಡುಗಿಯರನ್ನು ಮನಬಂದಂತೆ ನಿಂದಿಸಿ, ಹೊಡೆದು, ಕೈಗಳಿಗೆ ಬರೆ ಹಾಕುವ ಮಹಾತಾಯಿಯರೂ ಇರುವಂತೆ ಪ್ರೀತಿಯಿಂದ ತಮ್ಮ ಮಕ್ಕಳಂತೆ ಸಾಕುವವರೂ ಇದ್ದಾರೆ. ಬಾಲಕಾರ್ಮಿಕರ ಬಗ್ಗೆ ಸರ್ಕಾರ ಗಮಹರಿಸಿದ ಮೇಲೆ ಆ ಶೋಷಣೆ ಕಡಿಮೆಯಾಗಿರಬಹುದು. ಆದರೂ ಮುಸುಕಿನೊಳಗೆ ನಡೆಯುತ್ತಲೇ ಇದೆ. ಅದಕ್ಕೆ ಹುಡುಗಿಯರೂ ಹೊರತಲ್ಲ.

ಹೋಟೆಲ್‌ಗಳಲ್ಲಿ, ಅಂಗಡಿಗಳಲ್ಲಿ ಕೆಲಸ ಮಾಡುವ ಪುಟ್ಟ ಹುಡುಗರು, ಅಪ್ಪ ಅಮ್ಮನೊಂದಿಗೆ ಗೆಳೆಯರೊಂದಿಗೆ ಅಡಿ ನಲಿಯುವ ಮಕ್ಕಳಿಗೆ ಸಂಜೆಯ ಸೌಂದರ್ಯವೇ ತಿಳಿದಿರುವುದಿಲ್ಲ. ಒಂದಿಷ್ಟು ಹೊಟ್ಟೆಗೆ ಅನ್ನ ಹಾಕಿದರೆ ಸಾಕು. ರಾತ್ರಿಯಾದರೆ ಸಾಕು, ನೆಲಕ್ಕೆ ತಲೆಯೊಡ್ಡಿ ಮಲಗುವ ಕಾತರದಲ್ಲಿರುತ್ತವೆ. ಇದು ಬಾಲಕಾರ್ಮಿಕರಿಗೆ ನೀಡುವ ಕಿರುಕುಳ. ಬರೆಯುತ್ತಾ ಹೋದರೆ ಪುಸ್ತಕವೇ ಆದೀತು. ಆದರೆ ಈಗ ಹೆಚ್ಚುತ್ತಿರುವುದು ಲೈಂಗಿಕ ಶೋಷಣೆ. ಅಂತಹ ಹೆಣ್ಣು ಮಕ್ಕಳಿಗೆ ವೈದ್ಯೆಯಾಗಿ ನಾನು ನನ್ನ ಅನುಭವ, ಸಂಕಟ ಹೇಳಲೇಬೇಕಾಗಿದೆ.

ನಾನು ಹೇಳುವುದು ವೇಶ್ಯಾವಾಟಿಕೆಯ ಬಗ್ಗೆ ಅಲ್ಲ. ಶಾಲೆಗೆ ಹೋಗುವ, ಆಟವಾಡುವ ಮಕ್ಕಳಿಗೆ ಮೇಲ್ನೋಟಕ್ಕೆ ಮಹಾಪುರುಷರಂತೆ ಕಾಣುವವರು ಲೈಂಗಿಕತೆಗೆ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದರ ಬಗ್ಗೆ. ಇವರೇ ಬಾಲಪೀಡಕರೆಂದರೆ ತಪ್ಪಾಗಲಾರದು.

ಘಟನೆ

ತಾಯಿಯೊಬ್ಬಳು ತನ್ನ ಹತ್ತನೆಯ ವಯಸ್ಸಿನ ಪುಟ್ಟ ಮಗಳನ್ನು ಕರೆದುಕೊಂಡು ಔಟ್‌ಪೇಶೆಂಟ್ ವಿಭಾಗಕ್ಕೆ ಬಂದಿದ್ದಳು. ಆ ಮಗುವಿಗೆ ಬಿಳಿಮುಟ್ಟು ಜಾಸ್ತಿ ಹೋಗುತ್ತೆ ಚಡ್ಡಿಯೆಲ್ಲಾ ಒದ್ದೆಯಾಗಿರುತ್ತದೆ ಎಂದು ಹೇಳುತ್ತಿದ್ದಳು. ಎಂದಿನಂತೆ ನಾವು ನೈರ್ಮಲ್ಯದ ಬಗ್ಗೆ ಕೊರೆದೆವು. ಮಕ್ಕಳು ಮಣ್ಣಿನಲ್ಲಿ ಕುಳಿತು ಆಟವಾಡುತ್ತಿರುತ್ತವೆ. ಮೇಲೆ ಸಿಂಗಾರ ಮಾಡುವುದಕ್ಕಿಂತ ಮೊದಲು ಒಳಬಟ್ಟೆಗಳ ಕಡೆ ಹೆಚ್ಚು ಗಮನ ಕೊಡಬೇಕು, ಸೋಂಕು ತಗುಲಿರುತ್ತದೆ. ಹೀಗೆ ನಮ್ಮ ಕೊರೆತ ಸಾಗಿದ್ದರೂ ಆ ಹುಡುಗಿಯನ್ನೂ ಒಳಗೆ ಕರೆದುಕೊಂಡು ಹೋಗಿ ಪರೀಕ್ಷಿಸಿ, ಯೋನಿಯಿಂದ ಸ್ರವಿಸುತ್ತಿದ್ದುದನ್ನು ಲ್ಯಾಬೊರೇಟರಿಗೆ ಸ್ಲೈಡ್ ಲೇಪಿಸಿ ಪರೀಕ್ಷೆಗಾಗಿ ಕಳುಹಿಸಿದಾಗ ಮಧ್ಯಾಹ್ನ ಆಕಗೆ ಆ ರಿಪೋರ್ಟ್ ಸಿಕ್ಕಿದೆ. ಅದನ್ನು ಹಿಡಿದು ನಮ್ಮ ಬಳಿ ಬಂದಳು. ರಿಪೋರ್ಟ್ ನೋಡಿದ ನಾವು. ಒಂದು ದಿಗ್ಭ್ರಾಂತರಾದೆವು! ಅನುಮಾನ ಪರಿಹಾರಕ್ಕೆಂದು ಮತ್ತೆ ಮತ್ತೆ ನೋಡಿದೆವು. ರಿಪೋರ್ಟ್‌‌ನ್ನು ಬದಲಾಯಿಸಿಕೊಟ್ಟಿಲ್ಲ ತಾನೆ? ಎಂದು ಆಕೆಯನ್ನು ಕೇಳುತ್ತಾ ಹತ್ತಾರು ಸಲ ಪರಿಶೀಲಿಸಿದೆವು. ಎಲ್ಲವೂ ಸರಿಯಾಗಿತ್ತು. ರಿಪೋರ್ಟಿನಲ್ಲಿ ರೋಗಾಣುಗಳ ಬದಲಾಗಿ ವೀರ್ಯಾಣುಗಳು ಇದ್ದದ್ದು ಕಂಡುಬಂದಿತು!

ನಾವು ಆಕೆಗೆ ಹೇಳಲೇಬೇಕಾಗಿತ್ತು. ಹೇಳಿದೆವು. ಆಕೆಗೆ ಪ್ರಜ್ಞೆತಪ್ಪಿ ಬೀಳುವುದೊಂದು ಬಾಕಿಯಿತ್ತು. ಸಾವರಿಸಿ ಕುಳಿತುಕೊಂಡಳು. ಅಳಲು ಆರಂಭಿಸಿದಳು. ನಂತರ ನಮಗೆ ತಿಳಿದ ವಿಷಯವೆಂದರೆ ಲೆಕ್ಕದಲ್ಲಿ ಸ್ವಲ್ಪ ವೀಕ್ ಇರೋದ್ರಿಂದ ಪಕ್ಕದ್ಮನೆ ಅಂಕಲ್ ಹತ್ರ ಲೆಕ್ಕ ಹೇಳಿಸಿಕೊಳ್ಳೋಕೆ ಹೋಗ್ತಿದ್ದೆ. ಅವರೇನೋ ಮಾಡೋರು. ಮನೆಯವರಿಗೆ ಹೇಳಿದ್ರೆ ಲೆಕ್ಕ ಹೇಳ್ಕೊಡಲ್ಲ. ಮೇಲಾಗಿ ಸಾಯಿಸಿಬಿಡ್ತೀನಿ ಎಂದು ಪಕ್ಕದ್ಮನೆ ಮಹಾಪುರುಷ ಹೆದರಿಸಿದ್ದನಂತೆ!

ಘಟನೆ

ಒಂದು ಸ್ವಯಂ ಸೇವಾ ಸಂಸ್ಥೆಯ ಗುಂಪಿನ ಜೊತೆ ನಾನೂ ಸ್ಕೂಲ್ ಹೆಲ್ತ್ ಚೆಕಪ್ ಅಂದರೆ ಶಾಲಾ ಬಾಲಕಿಯರ ಆರೋಗ್ಯ ತಪಾಸಣೆಗಾಗಿ ಹೋಗಿದ್ದೆ. ಪುಟ್ಟ ಪುಟ್ಟ ಬಾಲೆಯರು ಯೂನಿಫಾರಂ ಉಡುಪಿನಲ್ಲಿ ಅಂದವಾಗಿ ಮುಗ್ಧತನದಿಂದ ಸಾಲಾಗಿ ನಿಂತಿರುವುದನ್ನು ನೋಡಿ ಅವರುಗಳನ್ನು ಖಾಲಿಯಿದ್ದ ಕ್ಲಾಸ್ ರೂಂ ಒಂದರಲ್ಲಿ ಕೂಡಿಸಿ ಎಂದು ಹೇಳಿದೆವು. ಎಷ್ಟು ಹೊತ್ತೂಂತ ಆ ಮಕ್ಕಳು ನಿಂತಿರಲು ಸಾಧ್ಯ? ಸರಿ. ನಮ್ಮ ಕಾರ್ಯ ಮುಂದುವರೆಯಿತು. ಹದಿಮೂರರ ಹುಡುಗಿಯೊಬ್ಬಳು ತಾನೇ ಹೇಳಿದಳು.

“ನನ್ನ ಹೊಟ್ಟೇಲಿ ಗಡ್ಡೆ ಇದ್ಯಾಂತ ನೋಡಿ”

“ಗಡ್ಡೇನಾ? ಈ ವಯಸ್ಸಿನಲ್ಲಿ? ಇದ್ದರೂ ಇರಬಹುದು. ಯಾವಾಗಿನಿಂದ ನೀನು ಗಮನಿಸಿದೆ? ಪ್ರಶ್ನೆ.

ಮೊದ್ಲು ಇರಲಿಲ್ಲ ಈಗ ಕಾಣಿಸ್ತಾ ಇದೆ. ಸ್ವಲ್ಪ ಸಣ್ಣದಿತ್ತು. ಈಗ ದೊಡ್ಡದಾಗ್ತಾಯಿದೆ. ಹೊಟ್ಟೆಯೊಳಗೆ ಗುಳುಗುಳು ಅಂದ ಹಾಗಾಗುತ್ತೆ…. ಮುಗ್ಧವಾಗಿ ಆ ಹುಡುಗಿ ಹೇಳುತ್ತಿದ್ದಳು. ಆತಂಕ ಅವಳಲ್ಲಿ ಮೂಡಿತ್ತು.

ಪರೀಕ್ಷೆ ಮಾಡಿದ್ದಾಯಿತು. ಆಘಾತ ನನಗೂ, ಅವಳಿಗೂ ಕಾದಿತ್ತು. ತುಂಬಾ ಪ್ರಶ್ನೆಗಳನ್ನು ಕೇಳಿದೆ. ಮೃದುವಾಗಿ ಸೂಕ್ಷ್ಮವಾಗಿ ಅವಳಿಗೆ ನಾನು ಏನನ್ನು ಸಂದೇಹಿಸುತ್ತಿದ್ದೇನೆ ಎಂಬುದರ ಅರಿವಾಗದಂತಹ ಪ್ರಶ್ನೆ ಪರೀಕ್ಷೆ ಎರಡೂ ಮುಗಿಸಿದೆ.

ಆ ಹುಡುಗಿ ಹೇಳಿದ್ದು ಹೀಗೆ. ಅವರ ಮನೆಯ ಕೆಳಗೆ ವೈದ್ಯನೊಬ್ಬನಿಗೆ ಖಾಸಗಿಯಾಗಿ ಕ್ಲಿನಿಕ್ ಇಡಲು ಅವರು ಬಾಡಿಗೆ ಕೊಟ್ಟಿದ್ದರಂತೆ. ತಂದೆ ತಾಯಿ ಇಬ್ಬರೂ ಉದ್ಯೋಗಸ್ಥರು. ಮನೆ ಸೇರಿದರೆ ಸಾಕೆಂದು ಬರುತ್ತಿದ್ದರು. ಮಕ್ಕಳಿಗೆ ಒಂದಿಷ್ಟು ಊಟ, ತಿಂಡಿ ಹಾಕಿದರೆ ಸಾಕಾಗಿರುತ್ತೆಂದು ಕಾಣುತ್ತಿದೆ. ಉಳಿದದ್ದನ್ನೆಲ್ಲಾ ಗಮನಿಸುವುದಿರಲಿ ಊಹಿಸಲೂ ಅವರಿಗೆ ಸಾಧ್ಯವಿರಲಿಲ್ಲ. ಇದು ನಮ್ಮಂತಹ ಮಧ್ಯಮ ವರ್ಗದವರಿಗೆ ಬಳುವಳಿಯಾಗಿ ಬಂದ ದಡ್ಡತನ. ನಿರ್ಲಕ್ಷ್ಯ ಎಂದರೂ ತಪ್ಪಾಗಲಾರದು. ಹಾಗಂತ ಎಲ್ಲರೂ ಹೀಗೆ ಇರುವುದಿಲ್ಲ. ಆ ಹುಡುಗಿಯ ತಾಯಿಗೆ ಹೇಳಿ ಕಳುಹಿಸಿ, ವಿಷಯ ತಿಳಿಸಲಾಯಿತು. ಮಗಳನ್ನು ಮನ ಬಂದಂತೆ ಹೊಡೆದಳು, ತಾನೂ ಬಿಕ್ಕಿ ಅತ್ತಳು.

ನೀವು ಹೊಡಿಬೇಕಾಗಿರುವುದು ಆ ಡಾಕ್ಟರ್‌ಗೆ. ದಿನಾ ಸಂಜೆ ಸ್ಕೂಲಿನಿಂದ ಬರುತ್ತಿದ್ದ ಹುಡುಗೀನಾ ಒಳಗೆ ಕರೆದು ಫ್ರಿಜ್ನಿಂದ ಐಸ್‌ಕ್ರೀಂ ಕೊಟ್ಟು ಈ ರೀತಿ ಬಳಸಿಕೊಂಡಿದ್ದಾನೆ. ಈ ಮಗೂಗೇನು ತಿಳಿಯುತ್ತೆ ಹೇಳಿ, ಐಸ್‌ಕ್ರೀಂ ಆಸೆ ವಯಸ್ಸಾಗಿರೋ ವ್ಯಕ್ತಿ, ಅದೂ ಡಾಕ್ಟರ್ ಬೇರೆ ಕರೆದ್ರೆ ಹೋಗಿರ್ತಾಳೆ. ಮೊದ್ಲು ಹೋಗಿ ಅವರನ್ನು ವಿಚಾರಿಸಿಕೊಳ್ಳಿ. ಏನೂ ಅರಿಯದ ಈ ಬಾಲೆಯನ್ನಲ್ಲ ಎಂದು ಕಟುವಾಗಿ ಹೇಳಿ ಕಳುಹಿಸಿದೆವು.

ಇಂತಹ ಘಟನೆಗಳಿಗೆ ಕೋರ್ಟಿಗೆ ಹೋಗಿ ಸಾಕ್ಷಿ ಹೇಳಿದ ಒಂದೆರಡು ಘಟನೆಗಳ ವಿವರ ತಿಳಿಸುತ್ತಾ ಹೋದರೆ, ಆಗಲೇ ಹೇಳಿದೆನಲ್ಲಾ ಪುಟಗಟ್ಟಲೆ ಬರೀಬಹುದು ಅಂತ.

ಇಂತಹ ಘಟನೆಗಳಿಗೆ ಹೊಣೆ ಯಾರು? ಎಂದು ಕಾರಣ ಹೇಳಬಹುದು. ಆದರೆ ಇದುವರೆಗೂ ಪರಿಹಾರ ಕಾಣುತ್ತಿಲ್ಲ. ಅತ್ಯಾಚಾರಕ್ಕೆ ಬಲಿಯಾದ ಬಾಲಕಿಯ ಮನೆಯವರು ಕೋರ್ಟು, ಕಾನೂನು, ಪೊಲೀಸ್ ಎಂದರೆ ಬೆಚ್ಚಿ ಬೀಳುತ್ತಾರೆ. ಅತ್ಯಾಚಾರಕ್ಕಿಂತಲೂ ಅಸಹ್ಯಕರವಾಗಿ ವರ್ತಿಸುತ್ತಾ ಮಾತುಗಳಿಂದ ಅವರುಗಳು ಕೇಳುವ ಪ್ರಶ್ನೆಗಳಿಂದ ಮತ್ತೊಂದು ಬಾರಿ ಅತ್ಯಾಚಾರವಾಗುತ್ತದೆಯೇನೋ ಅನ್ನುವಷ್ಟು ನೋವಾಗುತ್ತದೆ. ದುಃಖವಾಗುತ್ತದೆ ಎಂಬುದು ಪೋಷಕರ ನೋವು, ಅಸಹನೆಯ ನುಡಿಗಳು. ಹೀಗಾಗಿ ಎಷ್ಟೋ ಕೇಸುಗಳು ಕೋರ್ಟಿಣ ತನಕವಿರಲಿ ಪೊಲೀಸ್ ಠಾಣೆ ತನಕವೂ ಹೋಗುವುದಿಲ್ಲ. ಪ್ರತಿ ದಿನಾ ಪತ್ರಿಕೆ ಓದುವಾಗ ಒಂದಲ್ಲ ಒಂದು ವರದಿಯಾಗಿರುತ್ತದೆ.

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ನಂತರ ಕೊಲೆ. ಆದರೆ ಇದನ್ನು ಓದಿದವರಿಗೆ ಸಾಮಾನ್ಯ ಸುದ್ದಿಯಾದಂತಾಗಿ ಓದಿದ ನಂತರ ಮರೆತುಬಿಡುತ್ತಾರೆ. ಹಾಗಂತ ಎಲ್ಲರೂ ದುಃಖಪಡಲಿ, ದಂಗೆ ಮಾಡಲೀಂತ ಅಲ್ಲ. ಅನುಕಂಪದಿಂದ ಚರ್ಚೆಯಾಗಬೇಕು. ಹೊಸ ಸಿನಿಮಾ ಬಂದ ನಂತರದಲ್ಲಿ ಚರ್ಚಿಸುವ ಹಾಗೆ ಈ ಬಾಲಪೀಡಕರ ಬಗ್ಗೆ ಬಲಿಯಾಗುವ ಮಕ್ಕಳ ಬಗ್ಗೆ ಗಂಭೀರವಾದ ಚರ್ಚೆಗಳಾಗಬೇಕು. ಇಂತಹ ಅತ್ಯಾಚಾರಕ್ಕೆ ಹುಡುಗಿಯರನ್ನು ಮಾತ್ರವಲ್ಲ, ಪುಟ್ಟ ಬಾಲಕರನ್ನು ಬಳಸುತ್ತಿದ್ದಾರೆಂದರೆ ನಿಮಗೆ ಆಶ್ಚರ್ಯವಾಗಬಹುದು. ಹೆಚ್ಚು ಪೀಡನೆಯಾಗುವುದು ಬಾಲಕರಿಗೆ.

ನಮ್ಮ ಜನರಲ್ಲಿ ಈಗಲೂ ಮೂಢನಂಬಿಕೆಗಳಿವೆ. ಬಾಲಕರು, ಬಾಲಕಿಯರೊಡನೆ ಲೈಂಗಿಕ ಸಂಪರ್ಕ ಹೊಂದಿದರೆ ತಮ್ಮಲ್ಲಿರುವ ಗುಪ್ತ ಲೈಂಗಿಕ ರೋಗಗಳು ವಾಸಿಯಾಗುತ್ತವೆ ಎಂಬುದು. ಇದಕ್ಕಾಗಿ ಪ್ರಾಣಿಗಳೊಂದಿಗೂ ಲೈಂಗಿಕ ಕ್ರಿಯೆ ನಡೆಸಿದ ಘಟನೆಗಳಿವೆ. ಇಂತಹ ವಿಕೃತಕಾಮಿಗಳಿಗೆ ರೋಗನಿವಾರಣೆಗಾಗಿ ಬಲಿಯಾಗುವ ಪ್ರಾಣಿಗಳು, ಕುರಿ, ಕತ್ತೆಗಳೆಂದರೆ ನಂಬಿಕೆ ಬರುವುದಿಲ್ಲ. ಅಸಹ್ಯ ನಾಚಿಕೆಯಾಗುತ್ತದೆ. ಈ ಮೂಢನಂಬಿಕೆಗಳು ಪ್ರಸ್ತುತವಾಗಿಯೂ ಇವೆ. ವೈಜ್ಞಾನಿಕವಾಗಿ ಮುಂದುವರೆದಿದ್ದೇನೆ ಎಂದು ಕೊಚ್ಚಿಕೊಳ್ಳುವ ಕಾಲದಲ್ಲಿಯೂ ಕೇಸುಗಳು ರಿಪೋರ್ಟ್ ಆಗುತ್ತಲೇ ಇವೆ!

ಮೂರನೆಯ ಕಾರಣವನ್ನು ಹೇಳಿದರೆ ಪೋಷಕರು ಸಿಟ್ಟಿನಿಂದ ತಮ್ಮ ಮೂರನೆಯ ಕಣ್ಣನ್ನು ತೆರೆದು ಸುಟ್ಟುಬಿಡುವ ಭಯ. ನಾನೂ ಕೂಡಾ ತಾಯಿ ಪೋಷಕಳೇ. ಉದ್ಯೋಗಸ್ಥೆ ಬೇರೆ. ನಾವು ಮಕ್ಕಳಿಗೆ ಕೇಳಿದ್ದನ್ನು ಕೊಡಿಸಿ, ತಿನ್ನಿಸಿ, ಅವುಗಳ ವಿಶ್ವಾಸ, ಪ್ರೀತಿ ಪಡೆದುಕೊಳ್ಳುತ್ತೇವೆ. ಆದರೆ ಅದೆಲ್ಲಕ್ಕಿಂತಲೂ ಮುಖ್ಯವಾಗಿ ತಾಯಿಯಾದವಳು ಮಗಳ ದೈಹಿಕ ಬೆಳವಣಿಗೆಯ ಜೊತೆ ಜೊತೆಯಾಗಿ ಬದಲಾವಣೆಯನ್ನು ದಿನಾ ಅಲ್ಲದಿದ್ದರೂ ತಿಂಗಳಿಗೊಮ್ಮೆಯಾದರೂ ಸ್ನಾನ ಮಾಡಿಸುವ ನೆಪದಲ್ಲಿ ಗಮನಿಸಬೇಕು. ಸ್ತ್ರೀ ಜನನಾಂಗಗಳ ಬಗ್ಗೆ ಸೂಚ್ಯವಾಗಿ ಸೂಕ್ಷ್ಮವಾಗಿ ತಿಳಿಸಿ ಅದರ ನೈರ್ಮಲ್ಯವನ್ನು ತಿಳಿಸಿ ಕಾಪಾಡಿಕೊಳ್ಳುವಂತೆ ಹೇಳಬೇಕು. ಇದೆಲ್ಲಾ ಆಗಲು ತಾಯಿ ಬೆಳೆಯುವ  ಮಗಳೊಂದಿಗೆ ಸ್ನೇಹಿತೆಯಂತೆ ವತಿಸಿದಾಗ ಮಾತ್ರ ಸಾಧ್ಯವಾಗುತ್ತೆ. ಲೈಂಗಿಕ ಕ್ರಿಯೆ ಗುರುವಿಲ್ಲದೆ ಬರುವ ವಿದ್ಯೆ. ಆದರೆ ಋತುಕ್ರಿಯೆ, ಅದರ ಒಳ್ಳೆಯ, ಕೆಟ್ಟ ಪರಿಣಾಮಗಳನ್ನು ಇಬ್ಬರೇ ಇದ್ದಾಗ ನಿಮ್ಮ ಜೊತೆ ಅಡಿಗೆಗೆ ಸಹಾಯ ಮಾಡುವ ಸಮಯದಲ್ಲಿ ಸಹಜವೆಂಬಂತೆ ಹೇಳಿ ತಿಳಿಸಬೇಕು. ಇದು ತಾಯಿಯ ಆದ್ಯ ಕರ್ತವ್ಯ. ಅದನ್ನು ಕಲಿಯಲು ಶಾಲೆಗೆ ಹೋಗಬೇಕಾಗಿಲ್ಲ. ಅಸಡ್ಡೆಯೂ ಒಳ್ಳೆಯದಲ್ಲ. ಅವಳ ನಡವಳಿಕೆಯಲ್ಲಿನ ವ್ಯತ್ಯಾಸವನ್ನು ಗಮನಿಸುವಷ್ಟು ತಾಯಿಯಲ್ಲಿ ತಾಳ್ಮೆ ಸಹನೆಯಿರಬೇಕು. ಅವಳು ನಿಮ್ಮ ಮಗಳು ತಾನೆ?

ಸ್ವಯಂ ಸೇವಾ ಸಂಸ್ಥೆಗಳೂ ಸಹ ಅಪ್ರಾಪ್ತ ಬಾಲಕಿಯಲ್ಲಿನ ಅತ್ಯಾಚಾರ, ಬಾಲ್ಯ ವೇಶ್ಯಾವಾಟಿಕೆಗಳ ಬಗ್ಗೆ ತೀವ್ರ ತೆರನಾದ ಕಾರ್ಯಗಳನ್ನು ಮಾಡಿದರೆ ಅಷ್ಟೇ ಸಹಾಯವಾಗುತ್ತದೆ. ಬರೀ ಸೆಮಿನಾರ್‌ಗಳು ಕಾರ್ಯಕ್ರಮಗಳಿಂದ ಪ್ರಯೋಜನವಿಲ್ಲ. ಬಾಲೆಯರನ್ನು ದುರುಪಯೋಗ ಮಾಡಿಕೊಳ್ಳುವಂತಹ ಒಬ್ಬ ವಿಕೃತಕಾಮಿ ಸಿಕ್ಕು ಸರಿಯಾದ ಶಿಕ್ಷೆ ಆದರೆ ಇತರರು ಭಯದಿಂದ ಸುಮ್ಮನಾಗಬಹುದೆಂಬ ಆಶಯ. ಈ ಕಾರ್ಯಗಳಲ್ಲಿ ಪೊಲೀಸ್ ನೆರವೂ ಅತ್ಯಗತ್ಯವಾಗಿರುತ್ತದೆ. ರಕ್ಷಕರೇ ಭಕ್ಷಕರಾಗಬಾರದು. ಅತ್ಯಾಚಾರ, ಕೊಲೆಗಳನ್ನು ಮಾಡಿದ ವಿಕೃತಕಾಮಿ ಆ ಉಮೇಶ್ ರೆಡ್ಡಿಗೆ ಶಿಕ್ಷೆ ವಿಧಿಸಿದ ಹಾಗೆ ಸದಾ ಕಾರ್ಯರೂಪಕ್ಕೆ ತರಲು ಯಾವ ತರಹ ಅಡ್ಡಿಗಳು?

ಮಕ್ಕಳಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳಿಯುವಂತೆ ಸೂಕ್ಷ್ಮವಾಗಿ ತಿಳಿಸಬೇಕು. ಸ್ವಯಂ ಸಂಸ್ಥೆಗಳಿರುವಷ್ಟು ಧೈರ್ಯ, ಸ್ವಾತಂತ್ರ‍್ಯ ಉಳಿದವರಿಗಿಲ್ಲ. ಅವರು ಪೋಷಕರನ್ನು ಕಾನೂನಿನ ನೆರವಿಗೆ ಹೋಗುವಂತೆ ಶಿಕ್ಷಣ ನಿಡಬೇಕು. ಇದು ಅಷ್ಟು ಸುಲಭದ ಕೆಲಸವಲ್ಲ ಎಂಬುದು ನಮಗೂ ಗೊತ್ತು. ಪೊಲೀಸ್ ಮತ್ತು ಕಾನೂನಿನ ನೆರವನ್ನು ಯಾವ ಕ್ಷಣದಲ್ಲಾದರೂ ಪಡೆಯಬಹುದು. ಈಗ ಮಕ್ಕಳ ಸಹಾಯವಾಣಿ ಆರಂಭವಾಗಿದೆ. ಯಾರೂ, ಯಾವ ಹೊತ್ತಿನಲ್ಲಾದರೂ ಫೋನ್ ಮೂಲಕ ಸಹಾಯ ಪಡೆಯಬಹುದು.

ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಲೈಂಗಿಕವಾಗಿ ಪೀಡನೆ ಮಾಡುವವರು ಹೆಚ್ಚಾಗಿ ಮಧ್ಯ ವಯಸ್ಸಿನ ಪುರುಷರೇ ಆಗಿರುವುದು ಕಂಡುಬಂದ ಅಂಶ. ಪೋಷಕರು, ಪಾಲಕರು, ಪೊಲೀಸರು, ಸ್ವಯಂ ಸೇವಾಸಂಸ್ಥೆಯವರು ಹಾಗೂ ಸಾರ್ವಜನಿಕರು ಸರಪಳಿಯಂತೆ ಕೈಜೋಡಿಸಿದರೆ ಅದರೊಳಗೆ ಮಕ್ಕಳು ಸುರಕ್ಷಿತವಾಗಿರುವರೇನೋ ಅನ್ನೋ ಆಶಯ.

* * *

ವೈದ್ಯಸಾಹಿತಿಯಾಗಿನನ್ನಅನುಭವ
ನನ್ನನ್ನು ಹೃದಯವಂತೆಯನ್ನಾಗಿ ಮಾಡಿದವು
ಡಾ|| ಹೆಚ್. ಗಿರಿಜಮ್ಮ ವೈದ್ಯೆಯಾಗುವುದು ನನ್ನ ತಾಯಿಯ ಆಸೆ ಮತ್ತು ನನ್ನ ಏಕೈಕ ಗುರಿಯಾಗಿತ್ತು, ಅದೂ ಬಡತನದಿಂದ ಬಂದಿದ್ದ ನನಗೆ ಅದರ ನೋವುಗಳ ಅರಿವಿತ್ತು. ಸೇವೆಯೇ ನನ್ನ ಗುರಿಯಾಗಿತ್ತು. ಹೊಟ್ಟೆಪಾಡು ಆಗಿತ್ತು. ಆದರೆ ಗ್ರಾಮೀಣ ಮಹಿಳೆಯರ ಆರೋಗ್ಯ ಮತ್ತು ಗ್ರಾಮಾಂತರ ಪ್ರದೇಶಗಳು ಆಸ್ಪತ್ರೆಗಳಲ್ಲಿ ಸೇವಾಮನೋಭಾವದಿಂದ ಕೆಲಸ ಮಾಡುವ ಗೀಳು ಅಂತಾನೇ ಅಂದುಕೊಳ್ಳಬಹುದು, ಅದು ಹೆಚ್ಚಾಗಿತ್ತು. ನನ್ನ ಅದೃಷ್ಟಕ್ಕೆ ಸರ್ಕಾರಿ ಕೆಲಸ ಸಿಕ್ಕು ಆ ಆಸೆಯೂ ಈಡೇರಿತು. ನನ್ನ ವೃತ್ತಿಯಲ್ಲಿ ಒಂದು ಅನುಕೂಲವಿದೆ. ಮಹಿಳೆಯರು, ಮಕ್ಕಳು, ಜನರು ಅನಾರೋಗ್ಯದಿಂದ ಬಂದಾಗ ಅವರೊಡನೆ ಬೆರೆತು ಮಾತನಾಡಿ, ಅವರ ನೋವು ನಲಿವುಗಳನ್ನು ನೇರವಾಗಿ ಹಂಚಿಕೊಳ್ಳುವುದಿದೆಯಲ್ಲ – ಅದು ಕೆಲವು ವ್ಯಕ್ತಿಗಳಲ್ಲಿ ಮಾತ್ರ ಸಾಧ್ಯ. ನಾನು ಅವರ ನೋವು ನಲಿವುಗಳನ್ನು ನನ್ನನೆಂಬಂತೆ ಸ್ಪಂದಿಸುತ್ತಿದ್ದೆ, ಕಾರನ ನನ್ನ ಭಾವುಕತೆ!

ಇದಕ್ಕೆ ಪೂರಕವಾಗಿಯೇ ಎಂಬಂತೆ ಸಾಹಿತ್ಯ ಸಂಗೀತ ನನ್ನ ಅಚ್ಚುಮೆಚ್ಚಿನ ಹವ್ಯಾಸಗಳಾಗಿದ್ದವು. ಬಾಲ್ಯದ ಸಂಗಾತಿಗಳಾಗಿಯೇ ಜೊತೆ ಜೊತೆಯಲ್ಲಿಯೇ ಬಂದಿದ್ದವು. ಈ ಹವ್ಯಾಸ ನನ್ನನ್ನು ಹರದಯವಂತೆಯಾಗುವಂತೆ ಸೂಕ್ಷ್ಮಗಳಿಗೆ ಸ್ಪಂದಿಸುವ, ಸಂವೇದನಾ ಶೀಲೆಯನ್ನಾಗಿ ಮಾಡಿದನೆಂದೇ ಹೇಳಬೇಕು. ಸಹೃದಯಗಳಿಗೆ ಮಾತ್ರ ಲಭಿಸುವಂತಹುದು ಈ ಸೃಜನಶೀಲತೆ. ಸಾಹಿತ್ಯವೆದೆಂಬುದು ಹೀಗೆ, ನನ್ನ ವೃತ್ತಿಯಲ್ಲಿನ ಅನುಭವಗಳು, ಆಶ್ಚರ್ಯಗಳು, ಆಘಾತಗಳು, ನನ್ನನ್ನೊಳಗಿದ್ದ ಸಾಹಿತಿಯನ್ನು ಪೋಷಿಸಿದವು. ಬರೆಯುವಂತಾದರೆ. ನನ್ನ ಗುರಿಗೆ, ಜೀವ ತುಂಬಿದ್ದೇ ಈ ನನ್ನ ಸಾಹಿತ್ಯ ಆದ್ದರಿಂದ, ಹವ್ಯಾಸವೆಂದರೆ ಹಗುರಾಗಿ ಹೇಳಿದಂತಾಯಿತೇನೋ? ನನ್ನ ವೈದ್ಯಕೀಯ ಸಾಹಿತ್ಯ ರಚನೆಗಳೆಂದೇ ಹೇಳಿದರೆ ತಪ್ಪಾಗಲಾರದು. ಸಾಹಿತ್ಯವೆಂಬುದು ಸಾಗರದಂತೆ, ನನಗೊಂದು ಬಿರುದು ಸಿಕ್ಕಿರಬಹುದಷ್ಟೆ. ಅನುಭವ ಅಪಾರ. ಇದರಿಂದ ನಾನು ಪಡೆದದ್ದೇ ಹೆಚ್ಚು. ವ್ಯಾಪ್ತಿ ಮತ್ತು ಪ್ರಾಪ್ತಿ ಎರಡೂ ದಕ್ಕಿದವೆಂದೇ ಹೇಳಬಹುದು.

ಸಾಹಿತ್ಯ, ಸೃಜನಶೀಲತೆ ನನ್ನ ವೃತ್ತಿಗೆ ಮೆರುಗು ಕೊಟ್ಟವು. ವೃತ್ತಿಯು ನನ್ನ ಹೃದಯವೆಂದರೆ, ಅದರ ಬಡಿತ ಸಾಹಿತ್ಯವಾಗಿದೆ. ಹೃದಯ ಬಡಿತವಿಲ್ಲದೆ ಹೃದಯವು ಹೇಗೆ ಉಳಿದೀತು? ನಾನ್ಹೇಗೆ ತಾನೆ ಬದುಕಲಿ ? ನಾನು ಈ ವಿಷಯದಲ್ಲಿ ಭಾಗ್ಯವಂತೆಯೆಂದೇ ಹೇಳಬೇಕು.

* * *