ನಾವು ನಮ್ಮ ಜೀವನದಲ್ಲಿ ಅನೇಕ ಗುರಿಗಳನ್ನು ಸಾಧಿಸುವುದಕ್ಕೆ ಬಹಳ ಹಂಬಲಿಸುತ್ತೇವೆ. ಆದರೆ ಎಲ್ಲರೂ ತಮ್ಮ ಗುರಿಗಳನ್ನು ತಲುಪುವುದರಲ್ಲಿ ಯಶಸ್ವಿಯಾಗುವುದಿಲ್ಲ. ಸಾಧಿಸಿ ಯಶಸ್ವೀ ವ್ಯಕ್ತಿಗಳೆಂದು ಪ್ರಸಿದ್ಧರಾದ ಜನರ ಬದುಕನ್ನು ಗಮನಿಸಿದರೆ ಒಂದು ಅಂಶ ಸ್ಪಷ್ಟವಾಗುತ್ತದೆ. ಅದು ಏನೆಂದರೆ ಯಶಸ್ವಿ ವ್ಯಕ್ತಿಗಳು ತಮ್ಮ ಸಾಮರ್ಥ್ಯವನ್ನು ಹಾಗೂ ಗುರಿ ಮುಟ್ಟುವುದರ ಬಗ್ಗೆ ತಳೆದಿದ್ದ ಸಕಾರಾತ್ಮಕ ಧೋರಣೆ. ಅನೇಕ ರೀತಿ ಗುರಿ ಮುಟ್ಟುವುದರಲ್ಲಿ ನಿಷ್ಪಲರಾದವರಲ್ಲಿ ಕಂಡುಬರುವ ಸಕಾರಾತ್ಮಕ ಧೋರಣೆ.

ಈ ವಾದಕ್ಕೆ ಬೆಂಬಲ ನೀಡುವ ಕೆಳಕಂಡ ಸಂಗತಿಯನ್ನು ಗಮನಿಸಿ. ಸೋಲು ಬಹಳ ಪ್ರಸಿದ್ಧವಾದ ಪಾದರಕ್ಷೆ ತಯಾರಿಕಾ ಸಂಸ್ಥೆ ಅವರ ವ್ಯಾಪಾರೀ ವಿಭಾಗದ ಅಧಿಕಾರಿಯನ್ನು ಆಫ್ರಿಕಾ ಖಂಡದ ಒಂದು ದೇಶಕ್ಕೆ ಕಳುಹಿಸಿದರಂತೆ. ಆ ಅಧಿಕಾರಿಯು ತನ್ನ ವರದಿಯಲ್ಲಿ ಸಂಸ್ಥೆಯು ಆ ದೇಶದಲ್ಲಿ ವ್ಯಾಪಾರ ಮಾಡಲು ಸಾಧ್ಯವೇ ಇಲ್ಲ. ಏಕೆಂದರೆ ಅಲ್ಲಿನ ಜನರು ಪಾದರಕ್ಷೆಯನ್ನು ಧರಿಸುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರಂತೆ. ಆದರೆ ಇನ್ನೊಂದು ಸಂಸ್ಥೆಯ ಅಧಿಕಾರಿ ಅದೇ ದೇಶಕ್ಕೆ ಭೇಟಿ ನೀಡಿ ಅಲ್ಲಿ ಪಾದರಕ್ಷೆಗಳಿಗೆ ಅತ್ಯಂತ ಬೇಡಿಕೆ ಬರುವಂತೆ ಮಾಡಬಹುದು, ಏಕೆಂದರೆ ಅಲ್ಲಿ ಯಾರೂ ಪಾದರಕ್ಷೆಗಳನ್ನು ಧರಿಸಿಯೇ ಇಲ್ಲ ಎಂದಂರಂತೆ. ಇದರಲ್ಲಿ ಯಶಸ್ವಿಯಾದರು ಯಾರು ಎಂಬುದನ್ನು ಹೇಳಬೇಕಾಗಿಲ್ಲ. ಅದಕ್ಕೆ ಅವರ ಸಕಾರಾತ್ಮಕ ಧೋರಣೆಯೇ ಕಾರಣ ಎಂಬುದು ಸ್ಪಷ್ಟವಾಗುತ್ತದೆ.

ನಾವು ಈ ರೀತಿಯ ಸಕಾರಾತ್ಮಕ ಧೋರಣೆ ಬೆಳೆಸಿಕೊಳ್ಳಬೇಕಾಗಿದೆ. ನಮ್ಮ ಬದುಕನ್ನು ನಮ್ಮದೇ ಆದ ದೃಷ್ಟಿಕೋನದಲ್ಲಿ ವೀಕ್ಷಿಸುತ್ತೇನೆ. ಈ ದೃಷ್ಟಿಕೋನವನ್ನು ನಮ್ಮ ಅನುಭವಗಳು, ಶಿಕ್ಷಣ, ಮನೆಯ ವಾತಾವರಣ, ಬೆಳೆಯುವಾಗ ಶಾಲೆಯ ಕಾಲೇಜಿನ ಹಾಗೂ ಸ್ನೇಹಿತರ ಪ್ರಭಾವ ಇತ್ಯಾದಿಗಳು ರೂಪಿಸುತ್ತವೆ. ಆದರೆ ನಮ್ಮ ಅನುಭವಗಳು ಸರ್ವಕಾಲಿಕ ಸತ್ಯವಾಗಿರುವುದಿಲ್ಲ. ಒಮ್ಮೆ ಸರಿಯೆನಿಸಿದ್ದು ಇನ್ನೊಮ್ಮೆ ಸರಿಯಿಲ್ಲವೆನಿಸುವುದು. ಗಮನಿಸಬೇಕಾದ ಇನ್ನೂ ಒಂದು ಅಂಶವೆಂದರೆ ಯಾವುದೇ ಒಂದು ಸಮಸ್ಯೆಗೂ ಅನೇಕ ಮುಖಗಳಿರುತ್ತದೆ. ನಾವು ಯಾವುದೇ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬೇಕಾದರೆ ಎಲ್ಲಾ ದೃಷ್ಟಿಕೋನಗಳಿಂದ ನೋಡುವುದು ಅವಶ್ಯಕ. ಇಲ್ಲದಿದ್ದರೆ ಪರಿಹಾರ ಸಂಪೂರ್ಣವಾಗಿರುವುದಿಲ್ಲ.

ಸಕಾರಾತ್ಮಕ ಧೋರಣೆ ಬೆಳೆಸಿ, ಉಳಿಸಿಕೊಳ್ಳಬೇಕಾದರೆ ನಮ್ಮ ನಿರೀಕ್ಷೆಗಳು ವಾಸ್ತವಿಕವಾಗಿರುವುದು ಅವಶ್ಯಕ. ನಮ್ಮ ಅನೇಕ ಹಂಬಲ, ಆಸೆ, ಆಕಾಂಕ್ಷೆಗಳು ವಿಪರೀತವಾಗಿದ್ದರೆ ನಮ್ಮ ಮಾನಸಿಕ ಒತ್ತಡ ಏರುತ್ತದೆ. ಈ ರೀತಿಯ ಸಂದರ್ಭಗಳು ಮೊದಲೇ ನಾವು ತಿಳಿದುಕೊಂಡಿದ್ದರೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಎದುರಿಸಿ ಗೆಲ್ಲಬಹುದು. ನಮ್ಮ ನಿರೀಕ್ಷೆಗಳನ್ನು ಇನ್ನು ಕೆಲವು ವೇಳೆ ವಾಸ್ತವಿಕವಾಗಿ ಯೋಚಿಸಿ ಬದಲಿಸಬಹುದು ಅಥವಾ ಕೈ ಬಿಡಬಹುದು. ನಾವು ಈ ರೀತಿಯ ಸಕಾರಾತ್ಮಕ ದೃಷ್ಟಿ ಬೆಳೆಸಿಕೊಳ್ಳಬೇಕಾದರೆ ನಮ್ಮ ಸ್ವ ಸಾಮರ್ಥ್ಯ ಹಣಕಾಸಿನ ವ್ಯವಸ್ಥೆ, ಜನರ ಬೆಂಬಲಗಳನ್ನು ಪರಿಗಣಿಸಿ ಜೀವನದ ನಿರೀಕ್ಷೆಗಳನ್ನು ರೂಪಿಸಿಕೊಳ್ಳಬೇಕು.

ನಮ್ಮ ಜೀವನದ ಗುರಿ ಅಥವಾ ಆಕಾಂಕ್ಷೆಗಳನ್ನು ರೂಪಿಸಿಕೊಳ್ಳಲು ಕೆಳಕಂಡ ಅಂಶಗಳನ್ನು ಗಮನಿಸುವುದು ಅವಶ್ಯಕ.

. ಸ್ಪ್ರೆಂಕ್ತ್ = ಅರ್ಹತೆಗಳು

ಗುರಿಯನ್ನು ಮುಟ್ಟಲು ನಮ್ಮಲ್ಲಿ ಇರುವ ಮೂಲಭೂತ ಅರ್ಹತೆಗಳು ಮಾನಸಿಕ ಶಕ್ತಿ ದೈಹಿಕ ಕ್ಷಮತೆ, ವಿದ್ಯಾರ್ಹತೆ ಹಾಗೂ ಇವುಗಳನ್ನು ವೃದ್ಧಿಸಿಕೊಳ್ಳುವ ಅವಕಾಶಗಳನ್ನು ಗಮನಿಸಬೇಕು.

. ವೀಕ್ನೆಸ್ = ನ್ಯೂನತೆಗಳು

ನಮ್ಮಲ್ಲಿ ಇರುವ ಲೋಪ ದೋಷಗಳು ಅರ್ಹತೆಗಳನ್ನು ಪಟ್ಟಿಮಾಡಿ ಅವುಗಳನ್ನು ಸರಿಪಡಿಸಿಕೊಳ್ಳಬೇಕು ಅಥವಾ ಕಡಿಮೆ ಮಾಡಿಕೊಳ್ಳಬೇಕು. ಅರ್ಹತೆಗಳು ಹೆಚ್ಚಾದಷ್ಟೂ ಹಾಗೂ ನ್ಯೂನತೆಗಳು ಕಡಿಮೆಯಾದಷ್ಟೂ ನಾವು ಗೆಲ್ಲುವ ಸಾಧ್ಯತೆ ಹೆಚ್ಚು.

. ಆಪರ್ಚ್ಯುನಿಟೀಸ್ = ಅವಕಾಶಗಳು

ನಮ್ಮ ಗುರಿ ಮುಟ್ಟಲು ಇರುವ ಅನೇಕ ಅವಕಾಶಗಳು ಅದು ಸಿಗುವ ಸ್ಥಳ, ಬೆಳೆಯುವ ಸಾಧ್ಯತೆ ಇತ್ಯಾದಿಗಳನ್ನು ವಿಶದವಾಗಿ ಅಭ್ಯಸಿಸಬೇಕು.

. ಥ್ರೆಟ್ಸ್ = ಬೆದರಿಕೆಗಳು

ನಮ್ಮ ಗುರಿ ಸಾಧನೆಯ ಮಾರ್ಗದಲ್ಲಿ ಬರಬಹುದಾದ ಅಡಚಣೆ ಕಷ್ಟಗಳು ಗೊತ್ತಿರುವ ಅಥವಾ ಗೊತ್ತಾಗದ ಸಮಸ್ಯೆಗಳು ಹಾಗೂ ಅವುಗಳನ್ನು ಪರಿಹರಿಸುವ ಉಪಾಯಗಳು ಯಾವುವು ಎಂಬುದನ್ನು ತಿಳಿದುಕೊಂಡರೆ ನಾವು ನಮ್ಮ ಗುರಿ ಸಾಧನೆಗೆ ಸಹಕಾರಿಯಾಗುತ್ತದೆ.

ಈ ರೀತಿ ನಮ್ಮ ಗುರಿ ಅಭಿಲಾಷೆಗಳನ್ನು ವೈಜ್ಞಾನಿಕವಾಗಿ ವಿಮರ್ಶಿಸುವ ಪದ್ಧತಿಯನ್ನು ಎಸ್‌ ಡಬ್ಲ್ಯೂ ಟಿ ಅನಾಲಿಸಿಸ್ ಎಂದು ಕರೆಯುತ್ತಾರೆ. ಇದರಿಂದ ನಮಗೆ ನಮ್ಮ ಗುರಿಗಳನ್ನು ತಲುಪುವುದರಲ್ಲಿ ಅತ್ಯಂತ ಪ್ರಮುಖವಾದ ಸಕಾರಾತ್ಮಕ ಧೋರಣೆ ಬೆಳೆಸಿಕೊಳ್ಳುವುದರಲ್ಲಿ ಸಹಕಾರಿಯಾಗುತ್ತದೆ.

ವೈದ್ಯಸಾಹಿತಿಯಾಗಿನನ್ನಅನುಭವ
ಸಾಹಿತ್ಯ ಸರಸ್ವತಿ ಕೆಲವರನ್ನು ಆರಿಸಿಕೊಳ್ಳುತ್ತಾನೆ
– ಡಾ| ಎಸ್. ದ್ವಾರಕಾನಾಥ್ನಿವೃತ್ತ ಉಪಮುಖ್ಯ ವೈದ್ಯಾಧಿಕಾರಿ
ಐಟಿಐ ಸಾರ್ವಜನಿಕ ಆಸ್ಪತ್ರೆ
ಬೆಂಗಳೂರು – ೧೬. ಮೊ: ೯೮೪೪೧೨೬೮೧೦ 

“ಸಾಹಿತ್ಯ ಸರಸ್ವತಿ ಎಲ್ಲರನ್ನು ಕರೆಯುತ್ತಾಳೆ. ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತಾಳೆ” ಎಂಬುದನ್ನು ನಾನು ಎಲ್ಲಿಯೋ ಕೇಳಿದ್ದೇನೆ. ಈ ಮಾತು ನನ್ನ ಪಾಲಿಗೆ ಸತ್ಯವೆನ್ನಿಸುತ್ತದೆ. ಸಾಹಿತ್ಯ ನನ್ನನ್ನು ಕೈಬೀಸಿ ಕರೆದಿದೆ. ಅದರ ಫಲವಾಗಿ ನಾನು ಅನೇಕ ವೈದ್ಯಕೀಯ ಪುಸ್ತಕಗಳು, ಲೇಖನಗಳು, ಕವನಗಳು ಹಾಗೂ ಕಥೆಗಳನ್ನು ಬರೆದಿದ್ದೇನೆ. ಆದರೆ ಸಾಹಿತ್ಯ ಸರಸ್ವತಿ ನನ್ನನ್ನು ಆರಿಸಿಕೊಳ್ಳುವಷ್ಟು ವಿದ್ಯೆಯಾಗಲಿ, ಬುದ್ಧಿಯಾಗಲಿ ಅಥವಾ ಪರಿಪಕ್ವತೆಯಾಗಲಿ ನನ್ನಲ್ಲಿ ಇಲ್ಲವೆಂಬುದನ್ನು ನಾನು ಅರಿತಿದ್ದೇನೆ.

ಈ ದೃಷ್ಟಿಯಿಂದ ನನ್ನ ಅನುಭವವನ್ನು ಕೆಲವು ಸಿಹಿ, ಹಲವು ಕಹಿ, ಕೆಲವು ನೋವು, ಹಲವು ನಲಿವುಗಳ ಸಂಮಿಶ್ರ ಭಾವನೆಗಳೆಂದು ಹೇಳಬಹುದು. ನಾನು ಪ್ರೌಢಶಾಲೆಯಲ್ಲಿ ಇರುವಾಗಲೇ ಪ್ರಕಟವಾದ ಒಂದು ಕವನ ತಂದ ಸಂತೋಷ ಇಂದಿಗೂ ಮಾಸಿಲ್ಲ. ಇದೇ ರೀತಿ ಅನೇಕ ಲೇಖನಗಳನ್ನು ಪತ್ರಿಕೆಯವರು, ನಿಯತಕಾಲಿಕಗಳು ಪ್ರಕಟಿಸಿದಾಗ ಉಂಟಾಗುವ ಆನಂದ ಕಡಿಮೆಯೇನಿಲ್ಲ. ನಾನು ಕೂಡ ಪುಸ್ತಕಗಳನ್ನು ಬರೆಯಬಹುದೆಂಬ ಆತ್ಮವಿಶ್ವಾಸವನ್ನು ತುಂಬಿ ಬೆಂಬಲಿಸಿದ ಹಿರಿಯ ಲೇಖಕರು, ಸ್ನೇಹಿತರು, ಹಿತೈಷಿಗಳು ಮುಂತಾದವರ ಪ್ರೋತ್ಸಾಹ ವೈದ್ಯಸಾಹಿತಿಯಾಗಿ ಬೆಳೆಯಲು ಹುರಿದುಂಬಿಸಿದೆ ಎಂಬುದು ಕೂಡಾ ನಿರ್ವಿವಾದ. ನನ್ನ ಪುಸ್ತಕಗಳನ್ನು ಓದಿ ಕರ್ನಾಟಕದ ಮೂಲೆ ಮೂಲೆಗಳಿಂದ ಬರೆಯುವ ಕಾಗದಗಳು, ದೂರವಾಣಿ ಕರೆಗಳು, ಸಂಪಾದಕರಿಗೆ ಬರೆವ ಪತ್ರಗಳು ನನ್ನ ನಲಿವನ್ನು ಹೆಚ್ಚಿಸಿ, ಹೊಸತನ್ನು ಇನ್ನೂ ಚೆನ್ನಾಗಿ ಬರೆಯಲು ಪ್ರೇರೇಪಿಸುತ್ತವೆ.

ಆದರೆ ಸಾಹಿತಿಗಳಿಗೆ ಅದರಲ್ಲೂ ವೈದ್ಯಸಾಹಿತಿಗಳಿಗೆ ಇಂದಿಗೂ ಸಿಕ್ಕುತ್ತಿರುವ ಮನ್ನಣೆ, ಗೌರವ ಹಾಗೂ ಪ್ರೋತ್ಸಾಹ ಬಹಳ ಕಡಿಮೆ ಎಂಬುದು ಕೂಡ ಖಚಿತ. ಹೊಸ ಲೇಖಕರನ್ನು ಗುರುತಿಸಿ, ಬೆಳೆಸಿ ಪೋಷಿಸುವ ಕಾರ್ಯ ತುರ್ತಾಗಿ ನಡೆಯಬೇಕು. ಪತ್ರಿಕೆಗಳು, ನಿಯತಕಾಲಿಕಗಳು ಲೇಖನಗಳನ್ನು ವಿಮರ್ಶಿಸಿ, ಸ್ವೀಕಾರ ಅಥವಾ ಪ್ರಕಟಿಸುವ ಬಗ್ಗೆ ಸಾಹಿತಿಗಳಿಗೆ ತಿಳಿಸುವ ಸಂಪ್ರದಾಯ ಇನ್ನೂ ಹೆಚ್ಚಾಗಿ ಪಾಲಿಸಬೇಕು. ಪ್ರಕಟವಾದ ಪ್ರತಿಗಳನ್ನು ಹಾಗೂ ಓದುಗರ ಅಭಿಪ್ರಾಯಗಳನ್ನು ಸಾಹಿತಿಗಳಿಗೆ ತಲುಪಿಸಬೇಕು. ಈಗ ಸಾಹಿತಿಗಳಿಗೆ ಸಿಕ್ಕುತ್ತಿರುವ ಗೌರವ ಸಂಭಾವನೆಯೇ ಬಹಳ ಕಡಿಮೆ. ಕೆಲವರು ಇದನ್ನು ಕೂಡ ಕೊಡದೆ ಹೋಗುತ್ತಾರೆ. ಸಾಹಿತ್ಯ ಒಂದು ಸೃಜನಾತ್ಮಕ ಕಾರ್ಯ. ಇದಕ್ಕೆ ಪೂರಕವಾದ ಪರಿಸರ, ಹಿರಿಯ -ಕಿರಿಯ ಲೇಖಕರ ಒಡನಾಟ, ಹೊಸ-ಹಳೆಯ ಸಾಹಿತ್ಯದ ಅರಿವು ದೊರೆಯುವಂತಾದರೆ ವೈದ್ಯಸಾಹಿತ್ಯ ಇನ್ನೂ ಪ್ರಬುದ್ಧವಾಗಿ ಬೆಳೆಯುವುದರಲ್ಲಿ ಸಂದೇಹವಿಲ್ಲ.

* * *